Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅವರ ಅಧಿಕೃತ ಮಾತುಕತೆ

ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಅವರ ಅಧಿಕೃತ ಮಾತುಕತೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 14 ಜೂನ್ 2026 ರಂದು ನೈಸ್ ನ ವಿಲ್ಲಾ ಕೆರಿಲೋಸ್ ನಲ್ಲಿ ಫ್ರಾನ್ಸ್ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವರ್ಷದ ಆರಂಭದಲ್ಲಿ ಭಾರತ-ಫ್ರಾನ್ಸ್ ಸಂಬಂಧಗಳನ್ನು ‘ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ  ಮಟ್ಟಕ್ಕೆ ಏರಿಸಿದ ನಂತರ ಉಭಯ ನಾಯಕರ ನಡುವೆ ನಡೆದ ಮೊದಲ ಸಭೆ ಇದಾಗಿದೆ.

ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ವಿವಿಧ ಅಂಶಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಎಲ್ಲಾ ರಂಗಗಳಲ್ಲಿ ದ್ವಿಪಕ್ಷೀಯ ರಕ್ಷಣಾ ಸಹಯೋಗದ ಅತ್ಯುತ್ತಮ ಬೆಳವಣಿಗೆ ಮತ್ತು ಆಳದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ರಕ್ಷಣಾ ವೇದಿಕೆಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ಸಹ ವಿನ್ಯಾಸ  ಸಹ ಅಭಿವೃದ್ಧಿಮತ್ತು ಸಹ ಉತ್ಪಾದನೆಗೆ  ಒತ್ತು ನೀಡುವ ಮೂಲಕ ಇದನ್ನು ಮತ್ತಷ್ಟು ತೀವ್ರಗೊಳಿಸಲು ಉಭಯ ನಾಯಕರು ಒಪ್ಪಿಕೊಂಡರು. ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಹಕಾರದ ಸುದೀರ್ಘ ಪರಂಪರೆಯನ್ನು ಉಭಯ ನಾಯಕರು ನೆನೆದರು ಮತ್ತು ಮಾನವಸಹಿತ ಬಾಹ್ಯಾಕಾಶ ಯಾನ ಹಾಗೂ ಬಾಹ್ಯಾಕಾಶ ಪರಿಸ್ಥಿತಿಯ ಜಾಗೃತಿ ಕುರಿತು ಸಹಯೋಗವನ್ನು ಮುಂದುವರಿಸುವ ಬಗ್ಗೆ ಚರ್ಚಿಸಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಸಹಯೋಗವನ್ನು ವಿಸ್ತರಿಸುವ ಮಾರ್ಗಗಳ ಬಗ್ಗೆಯೂ ಅವರು ಚರ್ಚಿಸಿದರು. ನಾಗರಿಕ ಪರಮಾಣು ಇಂಧನ ಕ್ಷೇತ್ರದಲ್ಲಿ, ಭಾರತದ ಶಾಂತಿ  ಕಾಯ್ದೆಯು ಸಣ್ಣ ಮತ್ತು ಸುಧಾರಿತ ಮಾಡ್ಯುಲರ್ ರಿಯಾಕ್ಟರ್ ಗಳು ಸೇರಿದಂತೆ ಹೊಸ ಸಹಯೋಗದ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಗಮನಿಸಿದರು.

‘ಹೊರೈಜನ್  2047 ರೋಡ್ ಮ್ಯಾಪ್’ ಅಡಿಯಲ್ಲಿನ ಪ್ರಗತಿಯನ್ನು ಪರಿಶೀಲಿಸಿದ ಉಭಯ ನಾಯಕರು, ಆರ್ಥಿಕ ಬೆಳವಣಿಗೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ಪ್ರತಿಭೆಗಳ ಸಂಚಾರ ಹಾಗೂ ಜನರ ನಡುವಿನ ಬಾಂಧವ್ಯ ಮತ್ತು ಸಾಂಸ್ಕೃತಿಕ ವಿನಿಮಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಮತ್ತು ವೈವಿಧ್ಯಗೊಳಿಸಲು ನಿರ್ದಿಷ್ಟ ವಿಚಾರಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ, ಅವರು ದ್ವಿಪಕ್ಷೀಯ ವ್ಯಾಪಾರದ ಸ್ಥಿರ ಬೆಳವಣಿಗೆಯನ್ನು ಗುರುತಿಸಿದರು ಮತ್ತು ಐದು ವರ್ಷಗಳಲ್ಲಿ ಇದನ್ನು ದ್ವಿಗುಣಗೊಳಿಸಲು ಉನ್ನತ ಮಟ್ಟದ ಕಾರ್ಯವಿಧಾನವನ್ನು  ಸ್ಥಾಪಿಸಲು ಒಪ್ಪಿಕೊಂಡರು. ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ವಿಸ್ತರಿಸಲು ವಿಶೇಷ  ಅವಕಾಶವನ್ನು ಒದಗಿಸುವ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವನ್ನು   ಶೀಘ್ರವಾಗಿ ಜಾರಿಗೆ ತರಲು ಅವರು ಕರೆ ನೀಡಿದರು. ಎಸ್ ಎಂಇ , ವಿಮಾನಯಾನ ಮತ್ತು ರೈಲ್ವೆ ವಲಯಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆಯೂ ನಾಯಕರು ಚರ್ಚಿಸಿದರು. ಕಾನ್ಪುರದಲ್ಲಿ ಏರೋನಾಟಿಕ್ಸ್ ನಲ್ಲಿ ಕೌಶಲ್ಯಕ್ಕಾಗಿ ಶೇಷ್ಠತಾ ಕೇಂದ್ರವನ್ನು  ಸ್ಥಾಪಿಸುವ ಒಪ್ಪಂದವನ್ನು ಅವರು ಸ್ವಾಗತಿಸಿದರು. ಆರ್ಥಿಕ ಭದ್ರತೆಯ ಮೇಲಿನ ಸಂವಾದದ ಸ್ಥಾಪನೆಯನ್ನು ಸ್ವಾಗತಿಸಿದ ಉಭಯ ನಾಯಕರು, ವಿಶೇಷವಾಗಿ ನಿರ್ಣಾಯಕ ಖನಿಜಗಳಲ್ಲಿ ಪೂರೈಕೆ ಸರಪಳಿಯ ಚೇತರಿಕೆಯನ್ನು ಬಲಪಡಿಸಲು ಒಪ್ಪಿಕೊಂಡರು.

ದ್ವಿಪಕ್ಷೀಯ ಸಂಬಂಧದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನದ ಪ್ರಮುಖ ಪಾತ್ರವನ್ನು ಗುರುತಿಸಿದ ಉಭಯ ದೇಶಗಳು, ಈ ಪಾಲುದಾರಿಕೆಗೆ ದೀರ್ಘಕಾಲೀನ ನಿರ್ದೇಶನವನ್ನು ನೀಡಲು “ನಾವೀನ್ಯತೆ ರೋಡ್ಮ್ಯಾಪ್ 2030” ಅನ್ನು ಅಂಗೀಕರಿಸಿದವು. ಉಭಯ ನಾಯಕರು ಕೃತಕ ಬುದ್ಧಿಮತ್ತೆಕುರಿತು ಸಹಕಾರವನ್ನು ವಿಸ್ತರಿಸುವ ಬಗ್ಗೆ ಚರ್ಚಿಸಿದರು ಮತ್ತು ಈ ಉದ್ದೇಶಕ್ಕಾಗಿ ಜಂಟಿ ಭಾರತ-ಫ್ರಾನ್ಸ್ ಎಐ ಕಾರ್ಯನಿರತ ಗುಂಪನ್ನು ರಚಿಸಲು ಒಪ್ಪಿಕೊಂಡರು. ನಾಯಕರು ನೈಸ್ ನಲ್ಲಿ ಜಂಟಿಯಾಗಿ ಉದ್ಘಾಟಿಸಿದ ‘ಭಾರತ್ ಇನ್ನೋವೇಟ್ಸ್’ ಮತ್ತು ಪ್ಯಾರಿಸ್ನಲ್ಲಿ ನಡೆಯಲಿರುವ ‘ವಿವಾಟೆಕ್’ನಲ್ಲಿ ಪ್ರಧಾನಮಂತ್ರಿಯವರ ಮುಂಬರುವ ಭಾಗವಹಿಸುವಿಕೆಯು ಡೀಪ್-ಟೆಕ್, ಸೆಮಿಕಂಡಕ್ಟರ್ಗಳು, ಅಗ್ರಿ-ಟೆಕ್, ಮೆಡ್-ಟೆಕ್, ನವೀಕರಿಸಬಹುದಾದ ಇಂಧನ, ರಕ್ಷಣೆ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಫ್ರಾನ್ಸ್ ನಲ್ಲಿ ಯುಪಿಐ ನ ನಿರಂತರ ವಿಸ್ತರಣೆಯನ್ನು ಹಾಗೂ ಉಭಯ ದೇಶಗಳ ನಾವೀನ್ಯತೆ ಪರಿಸರ ವ್ಯವಸ್ಥೆಗಳ ಸಂಸ್ಥೆಗಳ ನಡುವೆ 19 ಒಪ್ಪಂದಗಳಿಗೆ ಸಹಿ ಹಾಕಿರುವುದನ್ನು ಉಭಯ ನಾಯಕರು ಶ್ಲಾಘಿಸಿದರು.

ಜನರ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ಮಹತ್ವವನ್ನು ಉಭಯ ನಾಯಕರು ಒತ್ತಿಹೇಳಿದರು. ಈ ಸಂದರ್ಭದಲ್ಲಿ, ಫ್ರೆಂಚ್ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ನಾಗರಿಕರಿಗೆ ವೀಸಾ ಮುಕ್ತ ಸಾರಿಗೆಯನ್ನು   ತ್ವರಿತವಾಗಿ ಕಾರ್ಯಗತಗೊಳಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅಧ್ಯಕ್ಷ ಮ್ಯಾಕ್ರಾನ್ ಅವರಿಗೆ ಧನ್ಯವಾದ ಅರ್ಪಿಸಿದರು. ಉಭಯ ದೇಶಗಳ ನಡುವೆ ಪ್ರತಿಭೆಗಳು ಮತ್ತು ವಿದ್ಯಾರ್ಥಿಗಳ ಸಂಚಾರವನ್ನು  ಹೆಚ್ಚಿಸುವ ಮತ್ತು ಶೈಕ್ಷಣಿಕ ಅರ್ಹತೆಗಳ ಪರಸ್ಪರ ಮಾನ್ಯತೆಯನ್ನು ವಿಸ್ತರಿಸುವ ಮಾರ್ಗಗಳ ಬಗ್ಗೆ ಅವರು ಮತ್ತಷ್ಟು ಚರ್ಚಿಸಿದರು. ನೂತನ ಶಿಕ್ಷಣ ನೀತಿಯಡಿ ಭಾರತದಲ್ಲಿ ಕ್ಯಾಂಪಸ್ ಗಳನ್ನು ತೆರೆಯುವಂತೆ ಪ್ರಧಾನಮಂತ್ರಿಯವರು ಫ್ರೆಂಚ್ ವಿಶ್ವವಿದ್ಯಾಲಯಗಳಿಗೆ ಆಹ್ವಾನ ನೀಡಿದರು. ಲೋಥಲ್ ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣ ಸೇರಿದಂತೆ ವಸ್ತುಸಂಗ್ರಹಾಲಯಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳ ನಡುವೆ ಸಹಕಾರವನ್ನು ಹೆಚ್ಚಿಸಲು ಎರಡೂ ನಾಯಕರು ಒಪ್ಪಿಕೊಂಡರು.

ಪಶ್ಚಿಮ ಏಷ್ಯಾ ಮತ್ತು ಉಕ್ರೇನ್ ಪರಿಸ್ಥಿತಿ ಸೇರಿದಂತೆ ಜಾಗತಿಕ ಮಹತ್ವದ ವಿಷಯಗಳ ಕುರಿತು ಉಭಯ ನಾಯಕರು ತಮ್ಮ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಂಡರು. ಎವಿಯನ್ ನಲ್ಲಿ ಮುಂಬರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿಯವರು ಎದುರು ನೋಡುತ್ತಿರುವುದಾಗಿ ತಿಳಿಸಿದರು ಮತ್ತು ಶೃಂಗಸಭೆಗೆ ಮುಂಚಿತವಾಗಿ ಭಾರತವನ್ನು ಗಂಭೀರ ಚರ್ಚೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅಧ್ಯಕ್ಷ ಮ್ಯಾಕ್ರಾನ್ ಅವರಿಗೆ ಧನ್ಯವಾದ ಅರ್ಪಿಸಿದರು.

ಭಾರತ-ಫ್ರಾನ್ಸ್ ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯು ಉಭಯ ದೇಶಗಳ ಜನರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವಲ್ಲಿ ಮತ್ತು ಅಂತರರಾಷ್ಟ್ರೀಯ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸುವಲ್ಲಿ ಪ್ರಮುಖವಾಗಿದೆ ಎಂಬುದನ್ನು ಉಭಯ ನಾಯಕರು ಪುನರುಚ್ಚರಿಸಿದರು.

ಪ್ರಧಾನಮಂತ್ರಿ ಮತ್ತು ಅಧ್ಯಕ್ಷ ಮ್ಯಾಕ್ರಾನ್ ಅವರು ಭಾರತದ ಜೈಪುರದಲ್ಲಿ 10 ದಿನಗಳ ಕಲಾ ರೆಸಿಡೆನ್ಸಿಯ ಅವಧಿಯಲ್ಲಿ ಫ್ರೆಂಚ್ ಕಲಾವಿದರಾದ ಶ್ರೀ ಥಿಬಾಲ್ಟ್ ಡಿ ಲಾ ಲಾನ್ಸ್ ಮತ್ತು ಶ್ರೀ ಥಿಯೋಫಿಲ್ ಡಿ ಬಾಶರ್ ಅವರು ರಚಿಸಿದ ಕಲಾಕೃತಿಗಳನ್ನು ವೀಕ್ಷಿಸಿದರು. ಈ ಕಲಾವಿದರು ಭಾರತೀಯ ಪರಂಪರೆ ಮತ್ತು ಸೌಂದರ್ಯಶಾಸ್ತ್ರದಿಂದ ಸ್ಪೂರ್ತಿ ಪಡೆದಿದ್ದು, ಅವರ ಕಲಾಕೃತಿಗಳು ಭಾರತ ಮತ್ತು ಫ್ರಾನ್ಸ್ನ ಸಾಂಸ್ಕೃತಿಕ ಸಮ್ಮಿಲನವನ್ನು ಪ್ರತಿಬಿಂಬಿಸುತ್ತವೆ.

ಮಾತುಕತೆಯ ನಂತರ, ಪ್ರಧಾನಮಂತ್ರಿ ಮೋದಿ ಅವರ ಗೌರವಾರ್ಥವಾಗಿ ಅಧ್ಯಕ್ಷ ಮ್ಯಾಕ್ರಾನ್ ಅವರು ಔತಣಕೂಟವನ್ನು ಏರ್ಪಡಿಸಿದ್ದರು.

 

*****