ಪಿಎಂಇಂಡಿಯಾ
ಬಾಂಗ್ಲಾ ದೇಶದ ಪ್ರಜಾ ಗಣರಾಜ್ಯದ ಪ್ರಧಾನಮಂತ್ರಿ, ಭೂತಾನ್ ನ ಪ್ರಧಾನಮಂತ್ರಿ, ಭಾರತ ಗಣರಾಜ್ಯದ ಪ್ರಧಾನಮಂತ್ರಿ, ಮ್ಯಾನ್ಮಾರ್ ಗಣರಾಜ್ಯದ ಸ್ಟೇಟ್ ಕೌನ್ಸಿಲರ್, ನೇಪಾಳದ ಪ್ರಧಾನಮಂತ್ರಿ, ಶ್ರೀಲಂಕಾ ಡೆಮಾಕ್ರಾಟಿಕ್ ಸೋಷಲಿಸ್ಟ್ ಗಣರಾಜ್ಯದ ಅಧ್ಯಕ್ಷರು ಮತ್ತು ಥಾಯ್ ಲ್ಯಾಂಡ್ ಪ್ರಧಾನಮಂತ್ರಿಯವರ ವಿಶೇಷ ಪ್ರತಿನಿಧಿ ಸೇರಿದಂತೆ ನಾವುಗಳು 2016ರ ಅಕ್ಟೋಬರ್ 16ರಂದು ಬ್ರಿಕ್ಸ್ –ಬಿಮ್ ಸ್ಟೆಕ್ ನಾಯಕರ ಶೃಂಗಸಭೆಗಾಗಿ ಗೋವಾದಲ್ಲಿ ಭೇಟಿ ಆಗಿದ್ದೇವೆ.
ಜಾಗತಿಕ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ವಿಶ್ವಸಂಸ್ಥೆ ತನ್ನ ಪ್ರಥಮ ಮಾನವ ಅಭಿವೃದ್ಧಿ ಜೀವಿತಾವಧಿ ಸಾಧನೆ ಪ್ರಶಸ್ತಿ ಮೂಲಕ ಗುರುತಿಸಿದ ದೊರೆ ಭೂಮಿಬೋಲ್ ಅಡ್ಯುಲಾದೇಜ್ ಅವರ ಅಗಲಿಕೆಯಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ನಾವು ನಮ್ಮ ಹೃದಯಾಂತರಾಳದ ಸಂತಾಪವನ್ನು ದೊರೆಯ ಕುಟುಂಬದವರಿಗೆ, ಥಾಯ್ ಲ್ಯಾಂಡ್ ನ ಸರ್ಕಾರ ಮತ್ತು ಜನತೆಗೆ ಸಲ್ಲಿಸುತ್ತೇವೆ,
ನಾವು, ಬ್ರಿಕ್ಸ್ ಮತ್ತು ಬಿಮ್ ಸ್ಟೆಕ್ ನಾಯಕರ ನಡುವೆ ಪರಸ್ಪರ ಹಿತದ ವಿಚಾರಗಳ ಚರ್ಚೆಗೆ ಮತ್ತು ಜಾಗತಿಕ ಮತ್ತು ವಿಶ್ವ ಸಂಸ್ಥೆಯ 2030 ಸುಸ್ಥಿರ ಅಭಿವೃದ್ಧಿಯ ಕಾರ್ಯಕ್ರಮವೂ ಸೇರಿದಂತೆ ಪ್ರಾದೇಶಿಕ ವಿಚಾರಗಳ ಬಗ್ಗೆ ಅಭಿಪ್ರಾಯ ವಿನಿಮಯಕ್ಕೆ ಶೃಂಗ ಮಟ್ಟದ ಅವಕಾಶ ಕಲ್ಪಿಸಿರುವುದಕ್ಕೆ ನಮ್ಮ ಮೆಚ್ಚುಗೆ ವ್ಯಕ್ತಪಡಿಸಲು ಬಯಸುತ್ತೇವೆ. ಎರಡೂ ಗುಂಪುಗಳ ರಾಷ್ಟ್ರಗಳ ನಡುವೆ ಹೆಚ್ಚಿನ ವಿಶ್ವಾಸ ಮತ್ತು ತಿಳಿವಳಿಕೆಯನ್ನು ಈ ಜಂಟಿ ಶೃಂಗಸಭೆ ಮೂಡಿಸುತ್ತದೆ ಮತ್ತು ಇದು ಅವರ ಪರಸ್ಪರ ಲಾಭಕ್ಕೆ ಸಹಕಾರವನ್ನು ಉತ್ತೇಜಿಸುತ್ತದೆ ಎಂದು ನಾವು ನಂಬಿದ್ದೇವೆ.
1977ರ ಬ್ಯಾಂಕಾಕ್ ಘೋಷಣೆಯಲ್ಲಿ ಅಳವಡಿಸಲಾದ ನೀತಿಗಳನ್ನು ಸ್ಮರಿಸಿ, ನಾವು, ಸಾರ್ವಭೌಮ ಸಮಾನತೆ, ಪ್ರಾದೇಶಿಕ ಸಮಗ್ರತೆ ಮತ್ತು ರಾಜಕೀಯ ಸ್ವಾತಂತ್ರ್ಯ, ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರುವುದು, ಶಾಂತಿಯುತ ಸಹಬಾಳ್ವೆ ಮತ್ತು ಪರಸ್ಪರ ಲಾಭದ ತತ್ವಗಳ ಆಧಾರದಲ್ಲಿ ಬಿಮ್ ಸ್ಟೆಕ್ ನೊಂದಿಗಿನ ಸಹಕಾರಕ್ಕೆ ಮರು ಒತ್ತು ನೀಡುತ್ತೇವೆ.
1977ರ ಬ್ಯಾಂಕಾಕ್ ಘೋಷಣೆಯಲ್ಲಿ ಒತ್ತಿ ಹೇಳಲಾಗಿರುವಂತೆ ಬಿಮ್ಸ್ಟೆಕ್ ನ ಉದ್ದೇಶಗಳ ಸಾಕಾರಕ್ಕೆ ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಲು ನಾವು ಒಪ್ಪಿದ್ದೇವೆ ಮತ್ತು ಗುರುತಿಸಲಾದ ಕ್ಷೇತ್ರಗಳಲ್ಲಿ ಪರಸ್ಪರರಿಗೆ ಲಾಭದಾಯಕವಾಗುವಂಥ ಸಹಕಾರದ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬಿಮ್ ಸ್ಟೆಕ್ ನಲ್ಲಿ ಗಣನೀಯ ಸಾಮರ್ಥ್ಯ ಇದೆ ಎಂಬುದನ್ನು ನಾವು ಪುನರುಚ್ಚರಿಸಿದ್ದೇವೆ. ಬಿಮ್ಸ್ಟೆಕ್ ಅನ್ನು ಬಲಯುತ, ಹೆಚ್ಚು ಸಮರ್ಥ ಮತ್ತು ಫಲಿತಾಂಶ ಆಧಾರಿತಗೊಳಿಸಲು ನಾವು ಸಂಘಟಿತವಾಗಿ ಶ್ರಮಿಸಲು ಸಂಕಲ್ಪಿಸಿದ್ದೇವೆ.
2014ರ ಮಾರ್ಚ್ 4ರಂದು ನೈ ಪೈ ತ್ವಾದಲ್ಲಿ ಹೊರಡಿಸಲಾದ ಮೂರನೇ ಬಿಮ್ಸ್ಟೆಕ್ ಶೃಂಗದ ಘೋಷಣೆಯನ್ನು ನಾವು ಸ್ಮರಿಸಿದ್ದೇವೆ ಮತ್ತು ಪ್ರಾದೇಶಿಕ ಸಹಕಾರ ಮತ್ತು ಬಂಗಾಳಕೊಲ್ಲಿಯ ವಲಯದಲ್ಲಿ ಏಕತೆಯನ್ನು ಪ್ರೋತ್ಸಾಹ ನೀಡುತ್ತಿರುವ ಸಂಸ್ಥೆ ಬಿಮ್ಸ್ಟೆಕ್ ನ ಬದ್ಧತೆಯನ್ನು ಪುನರುಚ್ಚರಿಸಲು ಇಚ್ಛಿಸುತ್ತೇವೆ. ನಮ್ಮ ಭೌಗೋಳಿಕ ಗಡಿಗಳು, ಅಪಾರವಾದ ಸ್ವಾಭಾವಿಕ ಮತ್ತು ಮಾನವ ಸಂಪನ್ಮೂಲ, ಶ್ರೀಮಂತವಾದ ಐತಿಹಾಸಿಕ ಸಂಪರ್ಕಗಳು ಮತ್ತು ವಿನಿಮಯಿತ ಸಾಂಸ್ಕೃತಿಕ ಪರಂಪರೆಯು ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಪ್ರಗತಿಯನ್ನು ಉತ್ತೇಜಿಸಲು ಬಿಮ್ ಸ್ಟೆಕ್ ಗೆ ಒಂದು ಮಾದರಿ ವೇದಿಕೆಯನ್ನು ಕಲ್ಪಿಸಿದೆ ಎಂಬುದನ್ನು ನಾವು ಗುರುತಿಸಿದ್ದೇವೆ.
ಭಯೋತ್ಪಾದನೆಯು ನಮ್ಮ ವಲಯದ ಸ್ಥಿರತೆ ಮತ್ತು ಶಾಂತಿಗೆ ಏಕಮಾತ್ರ ಗಣನೀಯ ಭೀತಿಯಾಗಿ ಮುಂದುವರಿದಿದೆ ಎಂಬುದನ್ನೂ ನಾವು ಪರಿಗಣಿಸಿದ್ದೇವೆ, ನಾವು ಭಯೋತ್ಪಾದನೆಯ ಎಲ್ಲಾ ಸ್ವರೂಪಗಳ ಮತ್ತು ಅಭಿವ್ಯಕ್ತಿಗಳ ಒತ್ತಡಗಳನ್ನು ಎದುರಿಸಲು ಮತ್ತು ಯಾವುದೇ ಕಾರಣದ ಮೇಲೆ ಭಯೋತ್ಪಾದಕ ಕೃತ್ಯಗಳಿಗೆ ಯಾವುದೇ ರೀತಿಯ ಸಮರ್ಥನೆಯನ್ನು ಒಪ್ಪದಿರಲು ಬಲವಾದ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ.
ವಲಯದಲ್ಲಿ ಇತ್ತೀಚೆಗೆ ನಡೆದ ಹೇಯ ಭಯೋತ್ಪಾದಕ ದಾಳಿಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟ ಕೇವಲ ಭಯೋತ್ಪಾದಕರನ್ನು ಬಗ್ಗು ಬಡಿಯುವುದು, ಭಯೋತ್ಪಾದಕ ಸಂಘಟನೆಗಳು ಮತ್ತು ಜಾಲಗಳನ್ನು ನಿರ್ನಾಮ ಮಾಡುವುದಕ್ಕಷ್ಟೇ ಅಲ್ಲ, ಜೊತೆಗೆ ಭಯೋತ್ಪಾದನೆಗೆ ಪ್ರೋತ್ಸಾಹ, ಬೆಂಬಲ ಮತ್ತು ಹಣಕಾಸು ಪೂರೈಸುತ್ತಿರುವ ಹಾಗೂ ಭಯೋತ್ಪಾದಕರಿಗೆ ಮತ್ತು ಭಯೋತ್ಪಾದಕ ಗುಂಪುಗಳಿಗೆ ಆಶ್ರಯ ನೀಡಿರುವ ಮತ್ತು ಅವುಗಳ ಕೃತ್ಯವನ್ನು ಕೊಂಡಾಡುವ ರಾಷ್ಟ್ರಗಳನ್ನು ಗುರುತಿಸಿ, ಅವರನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಿ ಮತ್ತು ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದೂ ನಾವು ಭಾವಿಸುತ್ತೇವೆ. ಭಯೋತ್ಪಾದಕರನ್ನು ಹುತಾತ್ಮರಂತೆ ವೈಭವೀಕರಿಸುವುದು ಸರಿಯಲ್ಲ. ಭಯೋತ್ಪಾದನೆ ಎದುರಿಸಲು ಮತ್ತು ಅತಿಯಾದ ಹಿಂಸಾಚಾರ ಮತ್ತು ಮೂಲಭೂತವಾದದ ಹರಡುವಿಕೆಯನ್ನು ತಡೆಗಟ್ಟಲು ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬುದನ್ನು ನಾವು ಮನಗಂಡಿದ್ದೇವೆ. ನಮ್ಮ ಕಾನೂನು ಜಾರಿ ಪ್ರಾಧಿಕಾರಗಳು, ಬೇಹುಗಾರಿಕೆ ಮತ್ತು ಭದ್ರತಾ ಸಂಸ್ಥೆಗಳ ನಡುವೆ ಸಹಯೋಗ ಮತ್ತು ಸಹಕಾರ ಹೆಚ್ಚಳಕ್ಕೆ ಸಮಗ್ರ ಕ್ರಮ ಕೈಗೊಳ್ಳಲು ನಮ್ಮ ದೃಢನಿರ್ಧಾರವನ್ನು ವ್ಯಕ್ತಪಡಿಸಿದ್ದೇವೆ.
ನಾವು ಅಪರಾಧ ವಿಷಯಗಳಲ್ಲಿ, ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದನೆ, ಬಹುರಾಷ್ಟ್ರೀಯ ಸಂಘಟಿತ ಅಪರಾಧ ಮತ್ತು ನಿಷೇಧಿತ ಮಾದಕ ದ್ರವ್ಯ ಸಾಗಾಣಿಕೆ ತಡೆಯುವ ನಿಟ್ಟಿನಲ್ಲಿ ಪರಸ್ಪರ ಸಹಕಾರಕ್ಕಾಗಿ ಬಿಮ್ಸ್ಟೆಕ್ ಸಮಾವೇಶದ ಆರಂಭಿಕ ಅನುಮೋದನೆಯ ಮೇಲೆ ಬಿಮ್ ಸ್ಟೆಕ್ ನಿರ್ಣಯಗಳಿಗೆ ಅಂಕಿತ ಹಾಕುವುದನ್ನು ತ್ವರಿತಗೊಳಿಸಲು ಬದ್ಧರಾಗಿದ್ದೇವೆ.
ಹವಾಮಾನ ಬದಲಾವಣೆಯಿಂದ ನಮ್ಮ ಭೂಗ್ರಹಕ್ಕೆ ಹೆಚ್ಚುತ್ತಿರುವ ಭೀತಿಯನ್ನು ಮನಗಂಡವರಾಗಿ, ಅದರಲ್ಲೂ ಬಂಗಾಳಕೊಲ್ಲಿಯ ವಲಯದ ಜನತೆಯ ಜನ ಜೀವನಕ್ಕೆ ಒದಗಿರುವ ಭೀತಿಯ ಹಿನ್ನೆಲೆಯಲ್ಲಿ ನಾವು, ಪರಿಸರವನ್ನು ಸಂರಕ್ಷಿಸಲು ಮತ್ತು ಕಾಪಾಡಲು ಸಹಕಾರವನ್ನು ಬಲಪಡಿಸಲು ಸಂಕಲ್ಪಿಸಿದ್ದೇವೆ. ನಾವು ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹವಾಮಾನ ಬದಲಾವಣೆಯ ಕುರಿತಾದ ಪ್ಯಾರಿಸ್ ಒಪ್ಪಂದದ ಜಾರಿಗೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳ ಬಗ್ಗೆ ಒತ್ತಾಯಿಸಿದ್ದೇವೆ.
ನಾವು ಜಂಟಿ ಅಭ್ಯಾಸ, ಮುನ್ನೆಚ್ಚರಿಕೆ ವ್ಯವಸ್ಥೆ ಸೇರಿದಂತೆ ಮಾಹಿತಿಯ ವಿನಿಮಯ, ನಿಯಂತ್ರಣ ಕ್ರಮಗಳ ಅಳವಡಿಕೆ, ಪುನರ್ವಸತಿ ಮತ್ತು ಪರಿಹಾರ ಕಾರ್ಯದಲ್ಲಿ ಜಂಟಿ ಕ್ರಮ, ಮತ್ತು ಸಾಮರ್ಥ್ಯ ವರ್ಧನೆ ಸೇರಿದಂತೆ ವಿಕೋಪ ನಿರ್ವಹಣೆಯಲ್ಲಿ ಆಪ್ತ ಸಹಕಾರವನ್ನು ಪ್ರೋತ್ಸಾಹಿಸುತ್ತೇವೆ. ಈ ವಲಯದಲ್ಲಿ ಹಾಲಿ ಇರುವ ಸಾಮರ್ಥ್ಯದ ಮೇಲೆ ಇತರ ವಲಯಗಳ ಮತ್ತು ಅಂತಾರಾಷ್ಟ್ರೀಯ ಕಾಯಗಳೊಂದಿಗೆ ಪಾಲುದಾರಿಕೆ ಸ್ಥಾಪಿಸಲು ನಾವು ಒಪ್ಪಿದ್ದೇವೆ.
ವಿವಿಧ ಸ್ವರೂಪಗಳ ಮತ್ತು ಅಭಿವ್ಯಕ್ತಿಗಳ ಸಂಪರ್ಕ ಅಭಿವೃದ್ಧಿ ಪ್ರಾದೇಶಿಕ ಏಕತೆಯನ್ನು ಉತ್ತೇಜಿಸಲು ಪ್ರಮುಖ ಎಂಬುದನ್ನು ಅರ್ಥೈಸಿಕೊಂಡಿರುವ ನಾವು, ಬಿಮ್ಸ್ಟೆಕ್ ವಲಯದಲ್ಲಿ ಬಹು ಮಾದರಿಯ ಭೌತಿಕ ಸಂಪರ್ಕ (ವಾಯು, ರೈಲು, ರಸ್ತೆ ಮತ್ತು ಜಲ ಮಾರ್ಗ)ದಲ್ಲಿನ ಉಪಕ್ರಮ ಮತ್ತು ನಿರಂತರ ಪ್ರಯತ್ನಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದೇವೆ. ಬಿಮ್ಸ್ಟೆಕ್ ಸಾರಿಗೆ ಮೂಲಸೌಕರ್ಯ ಮತ್ತು ಸಾಗಣೆ ಅಧ್ಯಯನದ ಶಿಫಾರಸುಗಳ ಜಾರಿಯ ಪ್ರಗತಿಯ ವಿಚಾರದಲ್ಲಿ ನಾವು ತೃಪ್ತಿಯನ್ನು ವ್ಯಕ್ತಪಡಿಸಿದ್ದೇವೆ. ನಾವು ಬಿಮ್ಸ್ಟೆಕ್ ಮೋಟಾರು ವಾಹನ ಒಪ್ಪಂದದ ಸಾಧ್ಯತೆಗಳನ್ನು ಬಳಸಿಕೊಳ್ಳಲೂ ಒಪ್ಪಿದ್ದೇವೆ.
ನಾವು ಸುಸ್ಥಿರ ಕೃಷಿ ಮತ್ತು ಆಹಾರ ಭದ್ರತೆಗೆ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ ಮತ್ತು ವಲಯದಲ್ಲಿ ಕೃಷಿ ಉತ್ಪನ್ನದ ಹೆಚ್ಚುವರಿ ಇಳುವರಿಗೆ ಮತ್ತು ಹೆಚ್ಚಿನ ಉತ್ಪಾದನೆಯ ಪ್ರಯತ್ನಗಳತ್ತ ಸಹಕಾರವನ್ನು ತೀವ್ರಗೊಳಿಸುವ ಸಲುವಾಗಿ ಬೆಳೆ, ಜಾನುವಾರು ಮತ್ತು ತೋಟಗಾರಿಕೆ ಸೇರಿದಂತೆ ಕೃಷಿ ವಲಯದಲ್ಲಿ ಆಳವಾದ ಸಹಕಾರಕ್ಕೆ ಸಮ್ಮತಿ ಸೂಚಿಸಿದ್ದೇವೆ.
ಬಂಗಾಳಕೊಲ್ಲಿಯ ವಲಯ ವಿಶ್ವದ ಶೇಕಡ 30ರಷ್ಟು ಮೀನುಗಾರರಿಗೆ ತವರಾಗಿದೆ ಎಂಬುದನ್ನು ಅರಿತಿರುವ ನಾವು, ಆಹಾರ ಭದ್ರತೆ ಮತ್ತು ವಲಯದಲ್ಲಿನ ಜನರ ಜೀವನಮಟ್ಟ ಸುಧಾರಣೆಗೆ ಇದು ಗಣನೀಯ ಕೊಡುಗೆ ನೀಡಬಲ್ಲದಾಗಿದ್ದು, ವಲಯದಲ್ಲಿ ಮೀನುಗಾರಿಕೆಯ ಸುಸ್ಥಿರ ಅಭಿವೃದ್ಧಿಯ ಸಹಕಾರವನ್ನೂ ಮನಗಂಡಿದ್ದೇವೆ ಮತ್ತು ಈ ವಲಯದಲ್ಲಿ ಆಳವಾದ ಸಹಕಾರಕ್ಕೂ ಸಮ್ಮತಿಸಿದ್ದೇವೆ.
ನೀಲಿ ಆರ್ಥಿಕತೆಯಲ್ಲಿ ನಮ್ಮ ವಲಯ ಹೊಂದಿರುವ ಅಗಾಧವಾದ ಸಾಮರ್ಥ್ಯವನ್ನು ಮನಗಂಡು, ನಮ್ಮ ವಲಯದ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ನಾವು ಮತ್ಸ್ಯೋದ್ಯಮ (ಒಳನಾಡು ಮತ್ತು ಕರಾವಳಿ), ಜಲರಾಶಿಶಾಸ್ತ್ರ, ಸಮುದ್ರತಳ ಖನಿಜ ಪರಿಶೋಧನೆ, ಕರಾವಳಿ ಹಡಗು ಸಂಚಾರ, ಪರಿಸರ ಪ್ರವಾಸ ಮತ್ತು ಪುನರ್ನವೀಕರಿಸುವ ಸಾಗರ ಇಂಧನ ಸಹಕಾರ ಆಳಗೊಳಿಸಲು ಸಮ್ಮತಿಸಿದ್ದೇವೆ.
ಪರ್ವತ ಪ್ರದೇಶಗಳಿಂದ ಲಭ್ಯವಾಗುವ ಲಾಭಗಳು ಸಹ ವಲಯದ ಸುಸ್ಥಿರ ಅಭಿವೃದ್ಧಿಗೆ ಅಗತ್ಯ ಎಂಬುದನ್ನೂ ನಾವೂ ಗುರುತಿಸಿದ್ದೇವೆ. ಹೀಗಾಗಿ ನಾವು ಪರ್ವತಗಳ ಪರಿಸರ ವ್ಯವಸ್ಥೆ, ಜೀವ ವೈವಿಧ್ಯದ ಸಂರಕ್ಷಣೆಯ ಹೆಚ್ಚಿನ ಪ್ರಯತ್ನಕ್ಕೂ ಕರೆ ನೀಡಿದ್ದೇವೆ.
ಬಿಮ್ ಸ್ಟೆಕ್ ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಇಂಧನ ಸಹಕಾರವನ್ನು ನಾವು ಸ್ವಾಗತಿಸಿದ್ದೇವೆ. ಗ್ರಿಡ್ ಗಳ ಅಂತರ ಸಂಪರ್ಕಕ್ಕೆ ಸಂಬಂಧಿಸಿದಂತೆ ಬಿಮ್ ಸ್ಟೆಕ್ ತಿಳಿವಳಿಕೆ ಒಪ್ಪಂದಕ್ಕೆ ತ್ವರಿತವಾಗಿ ಅಂಕಿತ ಹಾಕಲು ನಾವು ನಿರ್ಧರಿಸಿದ್ದೇವೆ. ಬಿಮ್ಸ್ಟೆಕ್ ಇಂಧನ ಕೇಂದ್ರದ ಶೀಘ್ರ ಕಾರ್ಯಾಚರಣೆಯ ಸಂಬಂಧ ನಾವು ಕ್ರಮ ಕೈಗೊಳ್ಳುವಂತೆ ನಾವು ನಿರ್ದೇಶಿಸಿದ್ದೇವೆ. ವಲಯದಲ್ಲಿನ ಇಂಧನ ಮೂಲಗಳು ಅದರಲ್ಲೂ ಪುನರ್ನವೀಕರಿಸುವ ಮತ್ತು ಶುದ್ಧ ಇಂಧನ ಮೂಲಗಳಿಗೆ ಹೆಚ್ಚಿನ ಸಾಮರ್ಥ್ಯ ನೀಡುವ ಮೂಲಕ ನಾವು, ಅಂತರ ಸಂಪರ್ಕ ಮತ್ತು ಪ್ರಾದೇಶಿಕ ಇಂಧನ ವಾಣಿಜ್ಯ ಉತ್ತೇಜಿಸಲು ಸಮಗ್ರ ಇಂಧನ ಸಹಕಾರ ಯೋಜನೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನು ತ್ವರಿತಗೊಳಿಸಲು ಒಪ್ಪಿಗೆ ಸೂಚಿಸಿದ್ದೇವೆ.
ನಾವು ಬಿಮ್ಸ್ಟೆಕ್ ಮುಕ್ತ ವಾಣಿಜ್ಯ ಪ್ರದೇಶ ಮಾತುಕತೆಯನ್ನು ಶೀಘ್ರ ಪೂರ್ಣಗೊಳಿಸುವ ನಮ್ಮ ಬದ್ಧತೆಯನ್ನು ನವೀಕರಿಸಿದ್ದೇವೆ ಮತ್ತು ವಾಣಿಜ್ಯ ಮಾತುಕತೆ ಸಮಿತಿ (ಟಿ.ಎನ್.ಸಿ.) ಮತ್ತು ಕಾರ್ಯ ಗುಂಪುಗಳಿಗೆ ಒಪ್ಪಂದಗಳ ಆಖೈರುಗೊಳಿಸುವಿಕೆಯನ್ನು ತ್ವರಿತಗೊಳಿಸಲು ಹೇಳಿದ್ದೇವೆ. ಸೇವೆಗಳು ಮತ್ತು ಹೂಡಿಕೆಯ ಒಪ್ಪಂದಗಳ ಮಾತುಕತೆಯನ್ನು ತ್ವರಿತಗೊಳಿಸುವಂತೆ ಟಿ.ಎನ್.ಸಿ.ಗೆ ನಾವು ನಿರ್ದೇಶಿಸಿದ್ದೇವೆ. ನಾವು ಸುಗಮ ವಾಣಿಜ್ಯ ಹೆಚ್ಚಿಸಲು ಸಮಗ್ರ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ. ನಾವು ಪ್ರಾದೇಶಿಕ ಆರ್ಥಿಕತೆಗೆ ತಮ್ಮ ಏಕೀಕರಣಕ್ಕೆ ಅತ್ಯಲ್ಪ ಅಭಿವೃದ್ದಿ ಹೊಂದಿದ ದೇಶಗಳಿಗೆ ವಿಶೇಷ ಮತ್ತು ವಿಭಿನ್ನ ಪರಿಗಣನೆ ನೀಡಲು ಒಪ್ಪಿದ್ದೇವೆ.
ಅಭಿವೃದ್ಧಿಯ ಅಗತ್ಯವನ್ನು ಮನಗಂಡು, ಎಸ್.ಎಂ.ಇ.ಗಳಿಗೆ ಕ್ಷೇತ್ರದಾದ್ಯಂತ ಸುಸ್ಥಿರ ಅಭಿವೃದ್ಧಿ ಉತ್ತೇಜಿಸಲು ತಂತ್ರಜ್ಞಾನದ ಲಭ್ಯತೆ ಮತ್ತು ಪ್ರವೇಶಕ್ಕೆ ನಾವು, ಶ್ರೀಲಂಕಾದಲ್ಲಿ ಶೀಘ್ರವಾಗಿ ಬಿಮ್ ಸ್ಟೆಕ್ ತಂತ್ರಜ್ಞಾನ ವರ್ಗಾವಣೆ ಸೌಲಭ್ಯ ಕಲ್ಪಿಸಲು ತಿಳಿವಳಿಕೆ ಒಪ್ಪಂದವನ್ನು ಆಖೈರುಗೊಳಿಸಲಿದ್ದೇವೆ.
ನಾವು ಸಾರ್ವಜನಿಕ ಆರೋಗ್ಯ ಸಮಸ್ಯೆ ಎದುರಿಸಲು ನಮ್ಮ ಸಮಗ್ರ ಪ್ರಯತ್ನಗಳನ್ನು ಮುಂದುವರಿಸಲು ಸಮ್ಮತಿಸಿದ್ದೇವೆ. ನಾವು ಸಾಂಪ್ರದಾಯಿಕ ವೈದ್ಯ ಮತ್ತು ಅದರ ಕಾರ್ಯಪಡೆಯನ್ನು ವಿಸ್ತರಿಸಲು ಬಿಮ್ ಸ್ಟೆಕ್ ಜಾಲದ ರಾಷ್ಟ್ರೀಯ ಕೇಂದ್ರಗಳ ಸಹಯೋಗ ಮತ್ತು ವಲಯದ ಆಳವಾದ ಸಹಕಾರಕ್ಕೆ ನಿರ್ದೇಶಿಸಿದ್ದೇವೆ.
ಸದಸ್ಯ ರಾಷ್ಟ್ರಗಳೊಂದಿಗೆ ಜನರೊಂದಿಗಿನ ಸಂಪರ್ಕ ಉತ್ತೇಜಿಸಲು ನಾವು ಬದ್ಧರಾಗಿರುವುದನ್ನು ಪುನರುಚ್ಚರಿಸಿದ್ದೇವೆ ಮತ್ತು ವಲಯದಲ್ಲಿ ಆಳವಾದ ತಿಳಿವಳಿಕೆ ಮತ್ತು ವಿಶ್ವಾಸ ಮೂಡಿಸಲು ಸಂಕಲ್ಪಿಸಿದ್ದೇವೆ. ಬಿಮ್ ಸ್ಟೆಕ್ ಚಿಂತಕರ ಚಾವಡಿ ಜಾಲದಲ್ಲಿ ನಡೆದ ಎರಡು ಸಭೆಗಳು ಜನರೊಂದಿಗಿನ ಸಂಪರ್ಕ ಹೆಚ್ಚಿಸಲು ಬಿಎನ್.ಪಿ.ಟಿಟಿಗೆ ನಿಯಮಿತ ಸಮಾಲೋಚನೆ ಮತ್ತು ಸದಸ್ಯ ರಾಷ್ಟ್ರಗಳ ಬಾಧ್ಯಸ್ಥರೊಂದಿಗೆ ಕಾರ್ಯಕ್ರಮ ಆಸೋಜಿಸಲು ಉತ್ತೇಜನ ನೀಡಿದೆ ಎಂಬುದನ್ನು ನಾವು ಉಲ್ಲೇಖಿಸಿದ್ದೇವೆ. ನಾವು ನಮ್ಮ ಸಂಶೋಧನಾ ಮತ್ತು ಶಿಕ್ಷಣ ಸಂಸ್ಥೆಗಳೊಂದಿಗಿನ ಸಂಪರ್ಕವನ್ನು ವಿಸ್ತರಿಸಲೂ ಒಪ್ಪಿದ್ದೇವೆ.
ನಮ್ಮ ವಲಯದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ನಾಗರಿಕ ನಂಟನ್ನು ಪರಿಗಣಿಸಿ, ನಾವು ಪ್ರವಾಸೋದ್ಯಮ ಅಭಿವೃದ್ಧಿಯ ಸಾಮರ್ಥ್ಯವನ್ನು ಗುರುತಿಸಿದ್ದೇವೆ ಮತ್ತು ವಿಶಿಷ್ಟ ಪ್ರವಾಸೋದ್ಯಮ ವೃತ್ತಗಳು ಮತ್ತು ಪರಿಸರ ಪ್ರವಾಸೋದ್ಯಮ ಸೇರಿದಂತೆ ಅಂತರ ಬಿಮ್ ಸ್ಟೆಕ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಮಗ್ರ ಕ್ರಮ ಕೈಗೊಳ್ಳುವ ನಮ್ಮ ಆಸಕ್ತಿಯನ್ನು ಪುನರುಚ್ಚರಿಸಿದ್ದೇವೆ. ಅದರಲ್ಲೂ ವಿಶೇಷವಾಗಿ ವಲಯದ ಬೌದ್ಧ ಪ್ರವಾಸೋದ್ಯಮ ತಾಣಗಳ ಮತ್ತು ದೇವಾಲಯ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ನಾವು ಉತ್ತೇಜನ ನೀಡುತ್ತಿದ್ದೇವೆ.
ಬಿಮ್ ಸ್ಟೆಕ್ ಸಾಂಸ್ಕೃತಿಕ ಕೈಗಾರಿಕಾ ಆಯೋಗ ಮತ್ತು ಬಿಮ್ ಸ್ಟೆಕ್ ಸಾಂಸ್ಕೃತಿಕ ಕೈಗಾರಿಕಾ ವೀಕ್ಷಣಾಲಯವನ್ನು ಭೂತಾನ್ ನಲ್ಲಿ ಸ್ಥಾಪಿಸಲು ತ್ವರಿತ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ. ಇದು ಸಾಂಸ್ಕೃತಿಕ ಕೈಗಾರಿಕೆಯ ಮಾಹಿತಿಯ ಕಣಜವಾಗಿ ಕಾರ್ಯ ನಿರ್ವಹಿಸಲಿದೆ.
ನಾವು 2012ರ ಜನವರಿಯಲ್ಲಿ ನೇಪಾಳದಲ್ಲಿ ಬಡತನ ನಿರ್ಮೂಲನೆ ಕುರಿತಂತೆ ನಡೆದ ಬಿಮ್ ಸ್ಟೆಕ್ ಸಚಿವರುಗಳ ಮಟ್ಟದ ಸಭೆಯಲ್ಲಿ ಅಳವಡಿಸಿಕೊಂಡ ಮತ್ತು 2014ರ ಮಾರ್ಚ್ ನಲ್ಲಿ ಮ್ಯಾನ್ಮಾರ್ ನಲ್ಲಿ ನಡೆದ 3ನೇ ಬಿಮ್ ಸ್ಟೆಕ್ ಶೃಂಗದಲ್ಲಿ ಅನುಮೋದಿತವಾದ ಬಿಮ್ ಸ್ಟೆಕ್ ಬಡತನದ ಕ್ರಿಯಾ ಯೋಜನೆಯನ್ನು ತ್ವರಿತವಾಗಿ ಮತ್ತು ಸಮರ್ಥವಾಗಿ ಜಾರಿಗೊಳಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ.
2014ರ ಸೆಪ್ಟೆಂಬರ್ ನಿಂದ ಬಿಮ್ ಸ್ಟೆಕ್ ನ ಶಾಶ್ವತ ಸಚಿವಾಲಯವು ಢಾಕಾದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತೃಪ್ತಿಯಿಂದ ನಾವು ಹೇಳುತ್ತೇವೆ ಮತ್ತು ಈ ಸಚಿವಾಲಯದ ಕಾರ್ಯಾರಂಭಕ್ಕೆ ಕೊಡುಗೆ ನೀಡಿದ ಬಾಂಗ್ಲಾದೇಶ ಸರ್ಕಾರವನ್ನು ನಾವು ಶ್ಲಾಘಿಸುತ್ತೇವೆ.
2017 ಬಿಮ್ ಸ್ಟೆಕ್ ಸ್ಥಾಪನೆಯಾಗಿ 20ನೇ ವಾರ್ಷಿಕೋತ್ಸವದ ವರ್ಷ ಎಂಬುದನ್ನು ಮನಗಂಡು, 20ನೇ ವಾರ್ಷಿಕೋತ್ಸವದ ಅಂಗವಾಗಿ ಸರಣಿ ಚಟುವಟಿಕೆ ಮತ್ತು ಆಚರಣೆಯನ್ನು ಆಯೋಜಿಸಲು ನಾವು ಬಿಮ್ ಸ್ಟೆಕ್ ಸಚಿವಾಲಯಕ್ಕೆ ಸೂಚಿಸಿದ್ದೇವೆ ಮತ್ತು ನಮ್ಮ ಪ್ರಾಧಿಕಾರಗಳಿಗೂ ಅಂಥ ಚಟುವಟಿಕೆ ಕೈಗೊಳ್ಳಲು ನಿರ್ದೇಶಿಸಿದ್ದೇವೆ.
ಪರಿಣಾಮಕಾರಿ ಬಿಮ್ ಸ್ಟೆಕ್ ಅಡಿಯಲ್ಲಿ ಪ್ರಾದೇಶಿಕ ಸಹಕಾರ ಕಡ್ಡಾಯ ಎಂಬುದನ್ನು ಪುನರುಚ್ಚರಿಸಿದ್ದೇವೆ ಮತ್ತುನಾವು ನಿರ್ದಿಷ್ಟಪಡಿಸಿದ ಮಟ್ಟದಲ್ಲಿ ಸಕಾಲಿಕ ಮತ್ತು ಸಾಮಾನ್ಯ ರೀತಿಯಲ್ಲಿ ಎಲ್ಲಾ ಬಿಮ್ ಸ್ಟೆಕ್ಕಾರ್ಯವಿಧಾನಗಳ ಸಭೆಗಳನ್ನು ನಡೆಸಲು ಬದ್ಧರಾಗಿದ್ದೇವೆ.
ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥಾಯ್ ಲ್ಯಾಂಡ್ ದೇಶಗಳ ನಾಯಕರಾದ ನಾವು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಮ್ ಸ್ಟೆಕ್ ನಾಯಕರನ್ನು ಬಿಮ್ ಸ್ಟೆಕ್ ಔಟ್ ರೀಚ್ ಶೃಂಗಸಭೆಗೆ ಆಹ್ವಾನಿಸಲು ಕೈಗೊಂಡ ಮುತುವರ್ಜಿಗೆ ಮತ್ತು ಆತ್ಮೀಯ ಆತಿಥ್ಯಕ್ಕೆ ಮತ್ತು ಶೃಂಗಸಭೆಯ ವೇಳೆ ಮಾಡಲಾದ ಅದ್ಭುತ ಸಿದ್ಧತೆಗಳಿಗೆ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಲು ಇಚ್ಛಿಸುತ್ತೇವೆ.
2017ರಲ್ಲಿ ನಾವು 4ನೇ ಬಿಮ್ ಸ್ಟೆಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಎದಿರು ನೋಡುತ್ತೇವೆ.