ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಮತ್ತು ಗಯಾನಾ ನಡುವೆ ಏರ್ಪಟ್ಟಿರುವ ತಿಳುವಳಿಕಾ ಒಡಂಬಡಿಕೆ (ಎಂ.ಒ.ಯು.) ಕುರಿತಂತೆ ಪರಾಮರ್ಶೆ ನಡೆಸಿತು. ಈ ತಿಳುವಳಿಕಾ ಒಡಂಬಡಿಕೆಗೆ ಹೊಸದಿಲ್ಲಿಯಲ್ಲಿ 2018 ರ ಜನವರಿ 30 ರಂದು ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವರಾದ ಶ್ರೀ ಆರ್.ಕೆ.ಸಿಂಗ್ ಮತ್ತು ಗಯಾನಾದ ಎರಡನೇ ಉಪಾಧ್ಯಕ್ಷ ಮತ್ತು ಸಹಕಾರ ಕ್ಷೇತ್ರದ ವಿದೇಶೀ ವ್ಯವಹಾರ ಸಚಿವರಾದ ಗೌರವಾನ್ವಿತ ಕಾರ್ಲ್ ಬಿ.ಗ್ರೀನಿಡ್ಜ್ ಅವರು ಸಹಿ ಹಾಕಿದ್ದರು.
ಹೊಸ ಮತ್ತು ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಪರಸ್ಪರ ಲಾಭದಾಯಕವಾಗುವ ರೀತಿಯಲ್ಲಿ , ಸಮಾನತೆ ಮತ್ತು ಸಹಕಾರವನ್ನು ಆಧರಿಸಿ ಸಹಕಾರಿ ಸಾಂಸ್ಥಿಕ ಬಾಂಧವ್ಯಕ್ಕಾಗಿ ತಾಂತ್ರಿಕ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸುವ ಉದ್ದೇಶವನ್ನು ಈ ಒಡಂಬಡಿಕೆ ಒಳಗೊಂಡಿದೆ. ಈ ಒಡಂಬಡಿಕೆ ಪುನರ್ವಿಮರ್ಶೆ, ಮೇಲುಸ್ತುವಾರಿ , ಮತ್ತು ಪರಸ್ಪರ ಸಹಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ಜಂಟಿ ಕಾರ್ಯ ಸಮಿತಿಯನ್ನು ರಚಿಸುವ ಅಂಶವನ್ನು ಒಳಗೊಂಡಿದೆ. ಈ ತಿಳುವಳಿಕಾ ಒಡಂಬಡಿಕೆ ಮಾಹಿತಿಯ ಜಾಲ ಸ್ಥಾಪನೆ ಮತ್ತು ತಜ್ಞತೆಯ ವಿನಿಮಯದ ಉದ್ದೇಶವನ್ನು ಹೊಂದಿದೆ.
ತಿಳುವಳಿಕಾ ಒಡಂಬಡಿಕೆಯು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲಿದೆ.