Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಧ್ಯಪ್ರದೇಶ, ಭೂಪಾಲ್ ನಲ್ಲಿ ಮಾಜಿ ಸೈನಿಕರೊಂದಿಗೆ ನಡೆದ ಪ್ರಧಾನಮಂತ್ರಿಯವರ ಸಾರ್ವಜನಿಕ ಭಾಷಣ

ಮಧ್ಯಪ್ರದೇಶ, ಭೂಪಾಲ್ ನಲ್ಲಿ ಮಾಜಿ ಸೈನಿಕರೊಂದಿಗೆ ನಡೆದ ಪ್ರಧಾನಮಂತ್ರಿಯವರ ಸಾರ್ವಜನಿಕ ಭಾಷಣ

ಮಧ್ಯಪ್ರದೇಶ, ಭೂಪಾಲ್ ನಲ್ಲಿ ಮಾಜಿ ಸೈನಿಕರೊಂದಿಗೆ ನಡೆದ ಪ್ರಧಾನಮಂತ್ರಿಯವರ ಸಾರ್ವಜನಿಕ ಭಾಷಣ


ಹುತಾತ್ಮರು ಅಮರರಾಗಲಿ
ಹುತಾತ್ಮರು ಅಮರರಾಗಲಿ
ಹುತಾತ್ಮರು ಅಮರರಾಗಲಿ
ವಂದೆ ಮಾತರಂ
ವಂದೆ ಮಾತರಂ
ವಂದೇ ಮಾತರಂ
ಈ ಮಹತ್ವಪೂರ್ಣ ಐತಿಹಾಸಿಕದಿಂದು ನಿಮ್ಮಗಳ ಮಧ್ಯೆ ಹುತಾತ್ಮರಿಗೆ ಶ್ರದ್ಥಾಂಜಲಿ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವೇ ಸರಿ. ಕರ್ತವ್ಯನಿರತರಾಗಿದ್ದಾಗ ಮಡಿದ ವೀರ ಸೈನಿಕರಿಗೆ ಪುಷ್ಪಾಂಜಲಿ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನಮ್ಮ ದೇಶದಲ್ಲಿ ನಾವು ಸೈನ್ಯವನ್ನು ನೆನಪಿಸಿ ಕೊಳ್ಳುವಾಗ ನಮ್ಮ ಹೆಚ್ಚಿನ ಮಾತುಕತೆಯೆಲ್ಲ ಅವರ ಸಮವಸ್ತ್ರ, ಕೈಯಲ್ಲಿ ಹಿಡಿಯ ಬಹುದಾದ ಬಂದೂಕು, ಶತ್ರುವನ್ನು ಸದೆಬಡಿಯುವ ಸಂದರ್ಭದಲ್ಲಿ ಕಣ್ಣಲ್ಲಿ ಸೂಸುವ ಜ್ವಾಲೆಗೆ ಸೀಮಿತವಾಗಿರುತ್ತದೆ. ಕೆಲವೊಮ್ಮೆ ತಾವು ಸೈನಿಕರು ಮಾನವತೆಯ ಪ್ರತೀಕ ಎಂಬುದನ್ನು ಪರಿಗಣಿಸಬೇಕು. ಪ್ರಕೃತಿಯ ವಿಕೋಪ ಎಲ್ಲಿಯೇ ಆದರೂ ತಕ್ಷಣ ಸ್ಪಂದಿಸುವವರು ನಮ್ಮ ಯೋಧರೇ. ಬದರೀನಾಥ, ಕೇದರನಾಥದಲ್ಲಿ ಆದಂಥಹ ಪ್ರಕೃತಿ ವಿಕೋಪವನ್ನು ಎದುರಿಸುವಲ್ಲಿ ಇವರ ದೈರ್ಯ, ಸಾಹಸ ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ. ನಮ್ಮ ದೇಶದ ಜನ ತಮ್ಮ ತಮ್ಮ ಸ್ಥಾನಗಳಿಂದಲೇ ಇಂಥ ವೀರ ಸೈನಿಕರಿಗೆ ಗೌರವ ಸಲ್ಲಿಸುರುವ ಪ್ರಸಂಗಗಳು ನಡೆದಿವೆ. ಇವರು ಸಂಕಷ್ಟಕ್ಕೆ ಗುರಿಯಾದವರಿಗೆ ನೆರವಾಗುವಲ್ಲಿ ಹಿಂದೆ ಮುಂದೆ ನೋಡದೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಾರ್ಯ ನಿರ್ವಹಿಸಿರುತ್ತಾರೆ.
ಎರಡು ವರ್ಷಗಳ ಹಿಂದೆ ಶ್ರೀನಗರದಲ್ಲಿ ಭಯಂಕರವಾದ ಪ್ರವಾಹ ಕಾಣಿಸಿಕೊಂಡಿತು. ಶ್ರೀನಗರದ ಜನ ಇಂಥದೊಂದು ಬೀಕರ ಪ್ರವಾಹವನ್ನು ಕಂಡೇ ಇರಲ್ಲಿಲ್ಲ. ಯಾವುದೇ ಸರಕಾರಕ್ಕೂ ಇಂಥ ವಿಷಮ ಪರಿಸ್ಥಿತಿಯನ್ನು ಎದುರಿಸುವುದು ಕಷ್ಟ ಸಾಧ್ಯವೇ ಸರಿ. ಅಂತಹ ಒಂದು ಸಂದರ್ಭದಲ್ಲಿ ನಮ್ಮ ವೀರ ಯೋಧರು ಶ್ರೀನಗರದ ಕಣಿವೆಯಲ್ಲಿ ಪ್ರವಾಹ ಪೀಡಿತರ ಜೀವವನ್ನು ಬದುಕಿಸಲು ಪಟ್ಟ ಶ್ರಮ ಅತ್ಯಂತ ಪ್ರಶಂಸನೀಯವಾದ್ದದು. ಸಂಕಷ್ಟದಲ್ಲಿ ಸಿಲುಕಿದ ಜನರನ್ನು ರಕ್ಷಿಸಿ, ಅವರ ಸೇವೆಯನ್ನು ನಿಷ್ಕಲ್ಮಶವಾಗಿ ಮಾಡುತ್ತಿದ್ದರು. ಇವರ ಮಾನವತೆ ಇಲ್ಲಿ ಮನಮಿಡಿಯುವಂತಹುದು. ಇಂತಹ ಸಂದರ್ಭದಲ್ಲಿ ಅವರೆಂದೂ ಈ ಜನಗಳು ನಮ್ಮಗಳ ಕಣ್ಣುಗಳನ್ನು ಕಿತ್ತಿದ್ದರು, ತಲೆಯನ್ನು ಜಜ್ಜಿರುತ್ತಾರೆ, ಕಲ್ಲುಗಳಿಂದ ಹೊಡೆದಿರುತ್ತಾರೆ ಎಂಬುದನ್ನು ಪರಿಗಣಿಸಲ್ಲಿಲ್ಲ. ಮಾನವತೆಯನ್ನು ಮೆರೆದರು ನಮ್ಮ ಯೋಧರು. ಇವರೆಂದೂ ಈ ಹಿಂದೆ ಏನಾಯಿತು, ನಮಗೆ ಯಾರು ಏನು ಮಾಡಿದರು ಎಂಬುದನ್ನು ಪರಿಗಣಿಸದೆ ಅವರದೂ ಒಂದು ಜೀವ ಎಂಬುದನಷ್ಟೇ ಮನಸ್ಸಿನಲ್ಲಿಟ್ಟುಕೊಂಡು ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸಿರುತ್ತಾರೆ. ತಮ್ಮ ಜೀವವನ್ನು ಒತ್ತೆಯಿಟ್ಟು ಅವರನ್ನು ಬದುಕಿಸಿರುತ್ತಾರೆ.
ಇಂದು ವಿಶ್ವದ ಆನೇಕ ರಾಷ್ಟ್ರಗಳಲ್ಲಿ ಸಶಕ್ತವಾದ ಸೇನೆಯಿರುತ್ತದೆ. ಕೇಲವು ದೇಶದಳಲ್ಲಿಯಂತೂ ಬೃಹತ್ ಸೈನ್ಯಬಲವಿದೆ. ಅವರ ಸೈನ್ಯ ಶಕ್ತಿ ನಮ್ಮ ದೇಶಕ್ಕಿಂತ ನೂರು ಪಟ್ಟು ದೊಡ್ಡದಿದೆ. ಆದರೆ ವಿಶ್ವದ ಸೇನೆಗಳಲ್ಲಿ ನಿರ್ಧರಿಸಿರುವ ಭಿನ್ನ ಭಿನ್ನ ಮಾನದಂಡಗಳಿಗೆ ಹೋಲಿಸಿದಾಗ ಶಿಸ್ತಿನಲ್ಲಿ, ಅಚಾರ ವಿಚಾರಗಳಲ್ಲಿ, ಜನರೊಂದಿಗೆ ವ್ಯವಹರಿಸುವಲ್ಲಿ, ಅವರ ನಡೆ ನುಡಿಯಲ್ಲಿ ಭಾರತೀಯ ಸೇನೆ ಎಲ್ಲರಿಗಿಂತ ಭಿನ್ನವಾಗಿ ಆಗ್ರ ಪಂಕ್ತಿಯಲ್ಲಿ ನಿಂತಿರುವುದು ವಿಶ್ವಕ್ಕೇ ಗೋಚರವಾಗಿದೆ. ಸಂಪೂರ್ಣ ವಿಶ್ವದಲ್ಲಿ ಶಾಂತಿಯನ್ನು ಕಾಪಾಡಲು ಶಾಂತಿ ಸೇನಾ ಪಡೆಗಳನ್ನು ರಚಿಸಲಾಗಿದೆ. ಇದರಲ್ಲಿ ಎಲ್ಲ ದೇಶದ ಸೈನಿಕರು ಭಾಗವಹಿಸುತ್ತಾರೆ. ಕೆಲವರ ಕಾರ್ಯಾವಧಿ ಎರಡು ವರ್ಷವಾಗಿದ್ದಲ್ಲಿ ಇನ್ನು ಕೆಲವರದು ಮೂರು ವರ್ಷ ಇರುವುದುಂಟು. ಯಾವ ದೇಶಕ್ಕೆ ಆಗತ್ಯವಿದೆಯೊ ಅಂತಹ ದೇಶಕ್ಕೆ ಹೋಗುತ್ತಾರೆ. ಅಂತಹ ದೇಶಗಳಲ್ಲಿ ಶಾಂತಿ ಕಾಯ್ದು ಕೊಳ್ಳಲು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಶ್ರಮಿಸಲು ಸಿದ್ದರಾಗುತ್ತಾರೆ. ವಿಶ್ವದ ಶಾಂತಿ ಪಡೆಗಳಲ್ಲಿ ಇಷ್ಟು ವರ್ಷಗಳಲ್ಲಿ ಸತತವಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಸೇನಾಪಡೆ ಯಾವುದಾದರು ಇದ್ದಲ್ಲಿ ಅದು ಭಾರತೀಯ ಸೇನೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಇದಕ್ಕೆ ಕಾರಣ ನಮ್ಮ ಸಶಸ್ತ್ರ ಪಡೆಯಲ್ಲಿರುವ ಯೋಧರು ಕೇವಲ ಶಸ್ತ್ರಾಸ್ತ್ರಗಳಿಂದ ಮಾತ್ರವೆ ಅಲ್ಲ ನೈತಿಕಯಿಂದಲೂ ಕಾರ್ಯ ನಿರ್ವಹಿಸಿರುವುದು. ಇವರು ತಮ್ಮ ನಡೆ-ನುಡಿಯಿಂದ ವಿಶ್ವವನ್ನು ಜಯಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಇವರಿಗೆ ಶ್ರೇಯಸ್ಸು ಈ ಕಾರಣದಿಂದ ಬಂದಿದೆ.
ಇತ್ತೀಚಿಗೆ ಪಶ್ಚಿಮ ಏಷ್ಯಾದಲ್ಲಿ ನಿರಂತರವಾಗಿ ಬಾಂಬುಗಳ ಮರಣ ಹೋಮ ನಡೆಯುತ್ತಿದೆ. ಭಯೋತ್ಪಾದನೆ ತನ್ನ ಅತ್ಯಂತ ಕರಾಳ ರೂಪವನ್ನು ತೋರಿಸುತ್ತಿದೆ. ಯೆಮನ್ ರಾಷ್ಟ್ರದಲ್ಲಿ ಸಾವಿರಾರು ಭಾರತೀಯರು ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಅಲ್ಲಿನ ಜನ ಹಲವಾರು ವರ್ಷಗಳಿಂದ ಅಳಿವು-ಉಳಿವಿನ ಹೋರಾಟ ನಡೆಸುತ್ತಿದ್ದಾರೆ. ಭಾರತೀಯರು ಇಂತಹ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಭಾರತೀಯರನ್ನು ಪಾರು ಮಾಡಲು ನಾವು ನಮ್ಮ ಸೇನೆಯನ್ನು ಅಲ್ಲಿನ ವ್ಯವಸ್ಥೆಗೆ ನೆರವಾಗಲು ಕಳುಹಿಸಿರುತ್ತೇವೆ. ಇಲ್ಲಿ ಇವರ ಪರಾಕ್ರಮ ನೋಡಿರಿ. ಇವರು 5 ಸಾವಿರಕ್ಕೂ ಹೆಚ್ಚು ಭಾರತಿಯರನ್ನು ರಕ್ಷಿಸುವುದಷ್ಟೇ ಅಲ್ಲ, ಸುರಕ್ಷಿತವಾಗಿ ಕರೆದು ಕೊಂಡು ಬಂದಿರುತ್ತಾರೆ. ಅದೂ ಸಹ ಕೇವಲ ಭಾರತೀಯರನ್ನಷ್ಟೇ ಅಲ್ಲ ಇತರೆ ರಾಷ್ಟ್ರಗಳ ನಾಗರೀಕರನ್ನೂ ಸಹ, ಪಾಕಿಸ್ಥಾನದ ನಾಗರೀಕರನ್ನು ರಕ್ಷಿಸಿರುತ್ತಾರೆ. ಭಾರತೀಯ ಸೇನೆಯ ಇಂಥ ನಡೆ-ನುಡಿ ಕೆಲವೊಮ್ಮೆ ಗಮನ ಸೇಳೆಯುತ್ತದೆ. ಆದರೆ ಇಂಥಹ ಪ್ರಸಂಗಗಳನ್ನು ದೇಶದ ಜನರು ಮರೆಯುವುದೇ ಜಾಸ್ತಿ. ನಾವು ಕೇವಲ ಗಡಿ ರಕ್ಷಿಸುವ, ಗುಂಡಿನ ಮಳೆ ಕರೆಯುವ, ಬಾಂಬು, ಪಿಸ್ತೂಲು, ಶತ್ರುಗಳ ಮೇಲಿನ ಆಕ್ರಮಣವನ್ನಷ್ಟೇ ಕಾಣುತ್ತೇವೆ. ಅಂತಹವುಗಳನ್ನು ಮಾತ್ರವೆ ತುಲನೆ ಮಾಡಲು ಪರಿಗಣಿಸುತ್ತೇವೆ. ನಮ್ಮ ಭಾರತದ ಇತಿಹಾಸ ಕೇವಲ ಕೆಲವೇ ಮಂದಿಗಷ್ಟೆ ಗೊತ್ತಿರುವಂತಹುದು..ನಮ್ಮ ಸಾವಿರಾರು ವರ್ಷಗಳ ಇತಿಹಾಸದಲ್ಲಿ ನಮ್ಮ ಪೂರ್ವಿಕರು ಎಂದೂ ಒಂದು ಇಂಚು ತಮ್ಮದಲ್ಲದ ಜಾಗಕ್ಕಾಗಿ ಜಗಳವಾಡಿದವರಲ್ಲ. ಹೋರಾಡಿದವರಲ್ಲ, ಯುದ್ಥಮಾಡಿದವರಲ್ಲ. ಯಾವುದೇ ರಾಷ್ಟ್ರದ ನೆಲವನ್ನು ಆಕ್ರಮಿಸಿಕೊಳ್ಳುವ ಇಚ್ಛೆ ನಮಗಿಲ್ಲ. ಇದಕ್ಕಾಗಿ ಆಕ್ರಮಣ ಮಾಡಿಯೂ ಇಲ್ಲ. ಆದರೆ ನಾವು ನಂಬಿದ ತತ್ವ ಸಿದ್ಥಾಂತಗಳಿಗೆ, ಆದರ್ಶಗಳಿಗೆ ದಕ್ಕೆಯಾದಾಗ ಪ್ರಾಣ ಪಣಕ್ಕಿಟ್ಟು ಹೋರಾಡಲು ಭಾರತೀಯ ಸೇನೆ ಹಿಂದೆ ಬೀಳುವುದಿಲ್ಲ.
ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ಬಹುಶಃ ಕೆಲವರಿಗಷ್ಟೆ ತಿಳಿದಿರಬಹುದಷ್ಟೆ, ಪ್ರಥಮ ವಿಶ್ವಯುದ್ಧವಾಗಲಿ, ದ್ವಿತೀಯ ವಿಶ್ವಯುದ್ಧವಾಗಲಿ ನಾವು ಮಾಡಿದ್ದಲ್ಲ ಅಥವಾ ನಮಗಾಗಿ ಮಾಡಿದ್ದಲ್ಲ ಅಥವಾ ಈ ಯುದ್ಧದ ಪರಿಣಾಮದಿಂದ ನಮಗೇನು ಲಾಭವಾದ್ದದೂ ಇಲ್ಲ. ಇದರಿಂದ ನಮಗೇನೂ ಆಗಬೇಕಾಗಿರಲ್ಲಿಲ್ಲ ಆದಾಗ್ಯೂ ಈ ಎರಡು ವಿಶ್ವಯುಧ್ಧಗಳಿಂದ ಈ ನೆಲದ ಮಕ್ಕಳು, ನಮ್ಮ ದೇಶದ ವೀರ ಯೋಧರು, ನನ್ನ ಕೆಚ್ಚೆದೆಯ ಸೈನಿಕರು, ಒಂದೂವರೆ ಲಕ್ಷಕ್ಕೂ ಹೆಚ್ಚು ಯೋಧರು ತಮ್ಮ ಪ್ರಾಣ ತ್ಯಾಗ ಮಾಡಿದರು. ಇಡೀ ವಿಶ್ವ ಇದನ್ನು ಮರೆತಿದೆ. ದೌರ್ಭಾಗ್ಯವೆಂದರೆ ನಾವೂ ಮರೆತಿರುತ್ತೇವೆ. ನಮ್ಮ ಪೂರ್ವಜರು ಮಾಡಿದ ತ್ಯಾಗ ಬಲಿದಾನವನ್ನು ಈ ಜಗತ್ತಿಗೆ ಮತ್ತೆ ಮತ್ತೆ ನೆನಪಿಸುವ ಅಗತ್ಯವಿದೆ. ಇಲ್ಲಿ ಗಾಂಧಿಯಾಗಲೀ, ಬುದ್ಧನಾಗಲೀ ಸುಮ್ಮನೇ ಹುಟ್ಟಿದವರಲ್ಲ, ಈದೇಶದಲ್ಲೊಂದು ಮಹಾನ್ ಪರಂಪರೆಯಿದೆ. ಇಲ್ಲಿಯ ವೀರ ಯೋಧನೂ ಸಹ ಮಾನವತೆಗಾಗಿ ತನ್ನ ಪ್ರಾಣವನ್ನು ಅರ್ಪಣೆ ಮಾಡುತ್ತಾನೆ. ಗಾಂಧಿಯೂ ಮಾನವತೆಗಾಗಿ ಹೋರಾಡಿದರು. ಇದು ಈ ನೆಲದ ವಿಶೇಷ. ಈ ವಿಶೇಷತೆಯಿಂದಾಗಿಯೇ ನಾವು ನಮ್ಮ ಸೇನೆಯ ಬಗ್ಗೆ ಹೆಮ್ಮೆ ಪಡುವಂತಾಗಿದೆ. ನೌಕಾಪಡೆ ಯಾಗಲಿ, ಭೂಸೇನೆಯಾಗಲಿ ಅಥವಾ ವಾಯುಪಡೆಯಾಗಲಿ, ಸುರಕ್ಷಾ ಪಡೆಯಾಗಲಿ, ಗಡಿ ರಕ್ಷಣಾ ಪಡೆಯ ಸೈನಿಕನಿರಬಹುದು, ಕೇಂದ್ರ ಮೀಸಲು ಪೋಲಿಸ್ ಪಡೆಯಿರಬಹುದು, ತಟರಕ್ಷಕ ದಳದವರಿರಬಹುದು ಅಥವಾ ಲೆಕ್ಕವಿಲ್ಲದಷ್ಟು ವ್ಯವಸ್ಥೆಯಿರಬಹುದು ಇವರೆಲ್ಲ ತಮ್ಮ ಜೀವವನ್ನು ಒತ್ತೆಯಿಟ್ಟು ದೇಶ ಕಾಯುತ್ತಾರೆ, ಉದ್ದೇಶ್ಯ ದೇಶದ ನಾಗರೀಕರಾದ ನಾವು ನೆಮ್ಮದಿಯ ನಿದ್ದೆ ಮಾಡಲೆಂದು. ದೇಶದ ನಾಗರೀಕರು ಚಿಂತೆಯಿಲ್ಲದ ಸುಖ ನಿದ್ರೆಮಾಡಿದರೆ ಅವರು ಸುಖಿಸುತ್ತಾರೆ. ನಾವು ನೆಮ್ಮದಿಯ ನಿದ್ದೆ ಮಾಡಬೇಕೆಂಬುದು ಅವರ ಅಭಿಲಾಷೆ. ನಾವು ನಿದ್ರಿಸುವುದರಿಂದ ಅವರಿಗೆ ಯಾವುದೇ ಕೊರಗಿಲ್ಲ. ಆದರೆ ಎಚ್ಚರವಾಗಿರ ಬೇಕಾದ ಸಮಯದಲ್ಲಿ ನಾವು ನಿದ್ರಿಸಿದಲ್ಲಿ ಸೇನೆ ನಮ್ಮನ್ನು ಕ್ಷಮಿಸದು. ದುರಂತವೆಂದರೆ ಕೆಲವೊಮ್ಮೆ ಎಚ್ಚರವಿರ ಬೇಕಾದ ಸಮಯದಲ್ಲಿ ನಿದ್ರೆಯ ಮಂಪರಿಗೆ ಜಾರಿರುವುದುಂಟು. ಸಂಸ್ಕೃತದಲ್ಲಿ ಹೀಗುಂಟು-
ರಾಷ್ಟ್ರಯಾಮ ಜಾಗರಯಾಮ್ ವಯಮ್ / Eternal Vigilance is the Price of Liberty
ಸತತವಾಗಿ ಎಚ್ಚರದಿಂದಿರಿ, ಕೇವಲ ಸೈನಿಕರು ಮಾತ್ರವೆ ಎಚ್ಚರದಿಂದಿರಲಿ ಎಂದು ಅಪೇಕ್ಷಿಸುವುದು ಅವರಿಗೆ ಅನ್ಯಾಯ ಬಗೆದಂತೆ. ನಾವು ಸಹ ಎಚ್ಚರವಿರಬೇಕಾದ ಸಮಯದಲ್ಲಿ ಜಾಗೃತರಾಗಿರಲೇ ಬೇಕು. ಅಂಥ ಸಮಯದಲ್ಲಿ ನಿದ್ರಿಸುವ ಹಕ್ಕು ನಮಗಿಲ್ಲ. ನಮ್ಮ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿವೆ, ಬಂದೂಕಿನಿಂದ ದೂರದವರೆವಿಗೂ ಚಿಮ್ಮಬಲ್ಲ ಗುಂಡುಗಳಿವೆ, ಇವುಗಳಿಂದ ನಮ್ಮ ಸೈನ್ಯ ಯುಧ್ಧ ಗೆಲ್ಲಬಹುದು ಎಂಬುದಾದಲ್ಲಿ ಅದು ಕೇವಲ ನಮ್ಮ ಭ್ರಮೆ ಅಷ್ಟೆ. ಸೇನೆಯ ಬಳಿ ಇರುವ ಅತಿ ದೊಡ್ಢ ಅಸ್ತ್ರವೆಂದರೆ ಅದರ ಮನೋಬಲ. ಆತ್ಮ ಸ್ಥೈರ್ಯ. ಈ ಮನೋಬಲ, ಈ ಸ್ಥೈರ್ಯ ಶಸ್ತ್ರಾಸ್ತ್ರಗಳಿಂದ ಬರುವುದಿಲ್ಲ. ದೇಶದ 125 ಶತಕೋಟಿ ಜನ ಬೆಂಬಲ ಇವರ ಹಿಂದೆ ನಿಂತಿರುವುದರಿಂದ ಬಂದಿದೆ.
ನಮ್ಮ ದೇಶದ ಒಂದು ಹಳೆ ಘಟನೆ ನನಗೆ ನೆನಪಿದೆ, 62 ನೆ ಯುಧ್ಧದ ನಂತರ ದೀಪಾವಳಿ ಬಂದಿದ್ದ ಪ್ರಸಂಗವದು. ಜನ ವಿಳಾಸ ದೊರೆತ ಸೈನಿಕರಿಗೆ ಸಿಹಿಯನ್ನು ಪ್ಯಾಕೆಟ್ ಗಳಲ್ಲಿ ಕಳುಹಿಸುತಿದ್ದದು ರೂಢಿ. ಕೆಲವೊಮ್ಮೆ ಅವರಿಗೆ ಸಿಹಿ ತಲುಪುವಷ್ಟರಲ್ಲಿ ಕೆಟ್ಟು ಹೋಗುತ್ತಿದ್ದುದೇ ಹೆಚ್ಚು. ಆದರೆ ಇವುಗಳ ಹಿಂದಿನ ಪ್ರೀತಿ-ವಾತ್ಸಲ್ಯ, ಗೌರವ ಭಾವ ಮಹತ್ವ ಪಡೆಯುತ್ತಿತ್ತು. ಯಾವಾಗಲೋ ಕೇಳಿದ ನೆನಪು ಒಮ್ಮೆ ಬರೋಡ ಪಟ್ಟಣದಿಂದ ಒಂದು ಹುಡುಗಿ ಸೈನಿಕನಿಗೆ ಸಿಹಿಯನ್ನು ಕಳುಹಿಸಿದಳು. ಅದರ ಜೊತೆಯಲ್ಲಿ ತನ್ನ ವಿಳಾಸವನ್ನು ಬರೆದಿಟ್ಟಿದ್ದಳು. ಮುಂದೊಂದು ದಿನ ನನ್ನ ಅರಿವಿಗೆ ಬಂದ್ದದು ಆ ಸೈನಿಕ ಹೀಗೆ ಪಡೆದ ಸಿಹಿಯೊಂದಿಗೆ ಆಕೆಯನ್ನು ಜೀವನದುದ್ದಕ್ಕೂ ತನ್ನ ಸ್ವಂತ ಸಹೋದರಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದನಂತೆ. ಇದು ಸೇನೆಯ ಇನ್ನೊಂದು ಮುಖ. ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ನಮ್ಮ ಸೈನ್ಯ ಮಾತಾನಾಡುವುದಿಲ್ಲ ತನ್ನ ಪರಾಕ್ರಮವನ್ನು ತೋರಿಸುತ್ತದೆ. ಈ ಹಿಂದಿನಿಂದಲೂ ಹೇಳಿಕೊಂಡು ಬಂದಿರುವುದುಂಟು ಈ ಮೋದಿ ನಿದ್ರಿಸುವುದುಂಟು, ಏನನ್ನು ಮಾಡುವುದಿಲ್ಲವೆಂದು. ನಾನು ಸೇನೆಯ ತರಹ. ಹೆಚ್ಚು ಮಾತಾನಾಡುವುದಿಲ್ಲ..ತೋರಿಸುತ್ತೇನೆ. ನಮ್ಮ ರಕ್ಷಣಾ ಮಂತ್ರಿಗಳೂ ಅಷ್ಟೆ, ಹೆಚ್ಚು ಮಾತಾನಾಡುವುದಿಲ್ಲ.
ನನ್ನ ದೇಶವಾಸಿಗಳೆ ಯುಧ್ಧ ಸ್ಮಾರಕವನ್ನು ನಿರ್ಮಿಸಿರುವುದಕ್ಕೆ ನಾನು ಮಧ್ಯಪ್ರದೇಶದ ಸರ್ಕಾರವನ್ನು ವಿಶೇಷವಾಗಿ ಅಭಿನಂದಿಸುತ್ತೇನೆ. ಯುಧ್ಧ ಸ್ಮಾರಕಗಳು ಇರುತ್ತವೆ, ಹುತ್ಮಾತರ ಸ್ಮಾರಕಗಳು ಇರುತ್ತವೆ, ಆದರೆ ಶೌರ್ಯ ಸ್ಮಾರಕ ಇವೆಲ್ಲವನ್ನು ಒಳಗೊಂಡಿರುತ್ತದೆ. ಅವುಗಳೆಲ್ಲದಕ್ಕಿಂದ ಹೆಚ್ಚಿನದಾಗಿರುತ್ತದೆ. ಈ ಶೌರ್ಯ ಸ್ಮಾರಕ ನಮಗೆ ತೀರ್ಥ ಕ್ಷೇತ್ರವಿದ್ದಂತೆ. ನಮ್ಮ ಮುಂದಿನ ಪೀಳಿಗೆಗೆ ಇದೊಂದು ಪ್ರೇರಣೆ ನೀಡುವ ದೇವಾಲಯವಿದ್ದಂತೆ. ನೋಡದಿದ್ದರೇನಂತೆ ಆನುಭವಿಸ ಬಹುದಲ್ವಾ. ಸೇನೆ ಎಂದರೇನು? ಎಂಬುದನ್ನು ತಿಳಿದುಕೊಳ್ಳೋಣಾ. ಅವರ ಬದುಕು ಎಂಥಹುದು? ನರ ನರಗಳಲ್ಲಿಯೂ ಭಾರತೀಯತೆಯನ್ನು ತುಂಬಿಕೊಂಡಿರುವ ತರಬೇತಿಯಾದರು ಎಂತಾಹುದು. ಭಾರತ ಮಾತೆಯನ್ನೇ ತಮ್ಮ ಕುಟುಂಬವೆಂದು ತಿಳಿಯುವ ಮತ್ತು ತಮ್ಮವರನ್ನೆಲ್ಲ ಬಿಟ್ಟು ಹೋರಡುವ ಮನೋಭಾವ ಎಂಥಹುದು. ಬಂಧುಗಳೆ ಇದು ಸಾಮಾನ್ಯ ತ್ಯಾಗವಲ್ಲ. ಮಾತುಗಳಲ್ಲಿ ವರ್ಣಿಸುವಂತಹುದಲ್ಲ. ಇದು ವೀರರ ಕಥೆ. ಪ್ರತಿಯೊಂದು ಕ್ಷಣ, ಪ್ರತಿಯೊಂದು ಹೆಜ್ಚೆಯೂ ನಮಗೆ ಪ್ರೇರಣೆ ನೀಡುವ ಅದಮ್ಯ ಚೇತನ. ಅವರ ಜೀವನ ಮತ್ತು ಅವರ ಕಾರ್ಯ ಪ್ರತಿಯೊಬ್ಬ ಭಾರತೀಯನಿಗೂ ತನ್ನ ಜೀವನವನ್ನು ದೇಶಕ್ಕಾಗಿ ಮುಡಿಪಿಡಲು ಮತ್ತು ತನ್ನನ್ನು ತಾನು ಅರ್ಪಿಸಿ ಕೊಳ್ಳಲು, ದೇಶಕ್ಕಾಗಿ ಎನ್ನನ್ನಾದರು ಮಾಡಬೇಕೆಂಬ ಪ್ರೇರೇಪಣೆಯನ್ನು ನೀಡುತ್ತದೆ. ನಮ್ಮ ದೇಶದ ಯಾವೊಬ್ಬ ಕವಿಯಾಗಿರಲಿ, ಸಾಹಿತ್ಯಕಾರನಾಗಲಿ, ನಮ್ಮ ಸೈನಿಕರನ್ನು, ಯೋಧರನ್ನು, ವೀರಾಗ್ರಣಿಯನ್ನು ಕೊಂಡಾಡದ ಕವನವೆ ಇಲ್ಲ. ಎಲ್ಲರೂ ಮುಕ್ತ ಕಂಠದಿಂದ ಗೀತೆಯನ್ನು ಬರೆದು, ಹಾಡಿ ಹೋಗಳಿದ್ದಾರೆ. ನಾವು ಚಿಕ್ಕವರಾಗಿದ್ದಾಗ ಮಾಖನ್ ಲಾಲ್ ಚತುರ್ವೇದಿಯವರ ಕವಿತೆಯನ್ನು ಒದಿದ್ದೆವು. ಮಖನ್ ಲಾಲ್ ಅವರು ತಮ್ಮ ಕವಿತೆಯಲ್ಲಿ ಸೈನಿಕರನ್ನು ಹೀಗೆ ಕೊಂಡಾಡುತ್ತಾರೆ.
ಮುಝೆ ತೋಡ್ ಲೇನಾ ವನಮಾಲಿ, ಉಸ್ ಪಥ್ ಪರ್ ದೇನಾ ತುಮ್ ಫೆಂಕ್
ಮಾತೃಭೂಮಿ ಪರ್ ಶೀಶ್ ಚಢಾನೆ, ಜಿಸ್ ಪಥ್ ಜಾವೆ ವೀರ್ ಆನೇಕ್
( ಸಾರಾಂಶ:- ನನ್ನನ್ನು ಕಿತ್ತು ಯಾವದಾರಿಯಲ್ಲಿ ವೀರರು ಮಾತೃಭೂಮಿಗಾಗಿ ತಮ್ಮ ತಲೆದಂಡನೀಡಲಿಕ್ಕಾಗಿ ಹೋಗುವರೋ ಆ ದಾರಿಯಲ್ಲಿ ಎಸೆದುಬಿಡು ಎಂಬುದಾಗಿ ಹೂವು ತೋಟದ ಮಾಲಿಯಲ್ಲಿ ಬೇಡುತ್ತದೆ.)
ಸಹೋದರ ಸಹೋದರಿಯರೆ. ರಾಮಧಾರಿ ಸಿಂಹ್ ದಿನಕರ್ ರವರ ಒಂದು ಕವನ ಈ ಶೌರ್ಯ ಸ್ಮಾರಕದ ಉದ್ಘಾಟನೆಯ ಸಂದರ್ಭದಲ್ಲಿ ನೆನಪಿಗೆ ಬರುತ್ತೆ. ಅಲ್ಲಿ ಕವಿ ದಿನಕರ್ ರವರು ಹೀಗೆ ನುಡಿಯುತ್ತಾರೆ.
ಕಲಮ್ ಕಲಮ್ ಆಜ್ ಉನಕೀ ಜಯ ಬೋಲ್
ಕಲಮ್ ಆಜಾ ಉನಕೀ ಜಯ ಬೋಲ್
ಜಲಾ ಅಸ್ಥೀಯಾ ಬಾರೀ ಬಾರೀ, ಜಲಾ ಅಸ್ಥೀಯಾ ಬಾರೀ ಬಾರೀ
ಜೊ ಚಢ್ ಗಯೆ ಪುಣ್ಯ ವೇದಿ ಪರ್, ಜೊ ಚಢ್ ಗಯೆ ಪುಣ್ಯ ವೇದಿ ಪರ್
ಲಿಯೇ ಬಿನಾ ಗರ್ದನ್ ಕಾ ಮೋಲ್, ಲಿಯೇ ಬಿನಾ ಗರ್ದನ್ ಕಾ ಮೋಲ್
ವೊ ಚಢ್ ಗಯೇ ಪುಣ್ಯ ವೇದಿ ಪರ್…
(ಸಾರಾಂಶ:- ಎಲೆ ಲೇಖನಿ ಅವರಿಗೆ ಜೈಕಾರ ಹಾಕು, ಯಾರ ಅಸ್ಥಿಗಳು ಸರದಿಯಮೇಲೆ ಒಂದಾದಮೇಲೊಂದರಂತೆ ಭಸ್ಮಗೊಂಡವೋ,ತಮ್ಮ ತಲೆಯ ಬೆಲೆಯ ಪಡೆಯದೇ ವೀರ ಮರಣವನ್ನಪ್ಪಿದವರಿಗೆ ಜೈಕಾರ ಹಾಕು)
ಅಂಥ ಮಹಾಪುರುಷರನ್ನು, ಅಂಥ ವೀರಾಗ್ರಣಿಗಳ ನ್ನು ನಾವು ಕಂಡಿದ್ದೇವೆ. ನಮ್ಮ ದೇಶದ ಯೋಧರು ಹತ್ತಾರು ವರ್ಷಗಳಿಂದ ಒಂದು ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು ಆಗ್ರಹಿಸುತ್ತಿದ್ದಾರೆ. One Rank One Pension. ಈ ಬೇಡಿಕೆಯನ್ನು ಮುಂದಿಟ್ಟನಂತರ ಎಷ್ಟೋ ಸೈನಿಕರು ನಿವೃತ್ತಿಯನ್ನು ಪಡೆದರು. ನಮ್ಮ ಯೋಧರು ಈ ಬೇಡಿಕೆಗಾಗಿ ಆಗ್ರಹಿಸುತ್ತಲೇ ಬಂದಿದ್ದರು. ಆದರೆ ಅವರು ಶಿಸ್ತಿನಸಿಪಾಯಿಗಳು. ಅವರಿಗೆ ದೇಶದ ಹಿತ ಎಲ್ಲಕ್ಕಿಂತ ಮುಖ್ಯ, ತಮ್ಮ ಹಿತವನ್ನು ಬದಿಗಿಟ್ಟಿದ್ದರು. ಹೀಗಾಗಿ ಅವರೆಂದೂ ಯೂನಿಯನ್ ನ ರೀತಿಯಲ್ಲಿ ಹೋರಾಡಲಿಲ್ಲ. ತಮ್ಮದೆ ಆದ ರೀತಿಯಲ್ಲಿ ಆಗ್ರಹಿಸುತ್ತಾ ಬಂದಿದ್ದರು. ಈ ಹಿಂದಿನ ಸರ್ಕಾರಗಳೆಲ್ಲವೂ ದೊಡ್ಡ ದೊಡ್ಡ ಭರವಸೆಯನ್ನು ಇತ್ತಿದ್ದವೇ ಹೊರತು ಆಶ್ವಾಸನೆಯನ್ನು ಇಡೇರಿಸಲೇ ಇಲ್ಲ. ಕೆಲವೊಂದು ಸರ್ಕಾರ ತಮ್ಮ ಬಜೆಟ್ ನಲ್ಲಿ ಇನ್ನೂರು-ಮುನ್ನೂರು ಕೋಟಿಯಷ್ಟು ರೂಪಾಯಿಗಳನ್ನು ಮೀಸಲಿರಿಸಿದ್ದುಂಟು. ಈ ಸರ್ಕಾರ ಬಂದ ಮೇಲೆ ನಾವು ನಾವು One Rank One Pension ಅನ್ನು ಜಾರಿ ಮಾಡಿಯೇ ತೀರುತ್ತೇವೆ ಎಂದು ಮಾತು ನೀಡಿದ್ದೆವು. ಇಂದು ನಾನು ನಮ್ಮ ವೀರ ಯೋಧರ ಮುಂದೆ ನುಡಿದಂತೆ ನಡೆದಿದ್ದೇವೆ ಎಂದು ತಲೆಬಾಗಿ ಹೇಳುತ್ತೇನೆ. ಇತ್ತ ವಚನವನ್ನು ಪೂರೈಸಿದ ಸಂತೃಪ್ತಿ ನನಗಿದೆ. ನಾಲ್ಕು ಕಂತಿನಲ್ಲಿ ಅವರಿಗೆ ನೀಡ ಬೇಕಾದ ಮೊತ್ತವನ್ನು ಕೊಡಲು ನಿರ್ಧರಿಸಿದ್ದೇವೆ. ಕಾರಣ ಒಂದೇ ವರ್ಷದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಭಾರತ ಸರ್ಕಾರ ಒಮ್ಮೆಲೆ ಭರಿಸುವುದು ಕಷ್ಟ. ಹೀಗಾಗಿ ನಾಲ್ಕು ಕಂತುಗಳಲ್ಲಿ ಅವರಿಗೆ ಸಂದಾಯವಾಗಲಿದೆ. ಇದುವರೆವಿಗೂ ಐದುವರೆ ಸಾವಿರ ಕೋಟಿಯಷ್ಟು ಹಣ ವಿನಿಯೋಗ ಆಗಿದೆ. ಯೋಧರ ಕುಟುಂಬಗಳಿಗೆ, ಅವರ ಬ್ಯಾಂಕ್ ಖಾತೆಗಳಿಗೆ ಹಾಕಲಾಗಿದೆ. ನಿಮಗೆ ದೊರೆತ ಲಾಭ ಎಷ್ಟೆಂಬುದನ್ನು ಲೆಕ್ಕ ಹಾಕಿ. ಈ ಹಿಂದೆ OROP ಗೂ ಮುಂಚೆ ಹವಲ್ ದಾರನಿಗೆ 17 ವರ್ಷ ಸೇವೆಯ ನಂತರ ಸಿಗುತ್ತಿದ್ದುದು 4090 ರೂಪಾಯಿಗಳು. OROP ನಂತರ ಅವರಿಗೆ ಸರಿಸುಮಾರು 7600 ರೂಪಾಯಿಗಳು ದೊರೆಯಲಿದೆ. ಅಂದರೆ ಇದು ಶೇಕಡ 30 ರಷ್ಟು ಹೆಚ್ಚು ಲಾಭ.
ಸಹೋದರ ಸಹೋದರಿಯರೆ 7ನೇ ವೇತನ ಅಯೋಗದ ವರದಿ ಕೈ ಸೇರಿದೆ. ಪ್ರತಿಯೊಂದು ವೇತನ ಆಯೋಗದ ವರದಿಯಲ್ಲಿಯೂ ಹಲವಾರು ವಿಸಂಗತಿಗಳು ಇರುವುದುಂಟು. ಇದಕ್ಕೆಂದೇ ಒಂದು ವಿಸಂಗತಿ ನಿವಾರಣ ಸಮಿತಿಯನ್ನು ರಚಿಸುವುದುಂಟು. ಅದು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದುಂಟು. 7ನೇ ವೇತನ ಆಯೋಗದ ನಂತರ ಸರ್ಕಾರ ಈ ದಿಕ್ಕಿನಲ್ಲಿ ಸೇನೆಯ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದೆ. ಅವರು ಬರೆದ ಪತ್ರವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಬಹುಶಃ ಮುಂದಿನ ದಿನಗಳಲ್ಲಿ ಒಳ್ಳೆಯ ಪರಿಣಾಮ ಹೊರಬರಬಹುದು. ಇಲ್ಲೊಂದು ಮುಖ್ಯ ವಿಷಯವನ್ನು ನಿಮಗೆ ಹೇಳ ಬಯಸುತ್ತೇನೆ. 7ನೇ ವೇತನ ಆಯೋಗ ತನ್ನ ಶೀಫಾರಸಿನಲ್ಲಿ 6ನೇ ವೇತನ ಆಯೋಗದ ವರದಿಯಲ್ಲಿ ನಿಗಧಿಯಾಗಿದ್ ಸಂಬಳಕ್ಕೆ 7ನೇಯ ವೇತನ ಆಯೋಗದ ವರದಿಯಲ್ಲಿ 2.57 ಪಟ್ಟು ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಯಾಕೆಂದರೆ 7ನೇ ವೇತನ ಆಯೋಗ ಹೇಳಿರುವುದರಿಂದ ಸರ್ಕಾರ ಇದನ್ನು ಪಾಲಿಸಬಹುದಾಗಿದೆ. ಆದರೆ ನಾವು ಹಾಗೆ ಮಾಡಲ್ಲಿಲ್ಲ. ಒಂದು ವೇಳೆ 6ನೇಯ ವೇತನ ಆಯೋಗದ ಆಧಾರದ ಮೇಲೆ 7ನೇಯ ವೇತನ ಆಯೋಗದ ಶಿಫಾರಿಸನ್ನು ಪಾಲಿಸಿದಲ್ಲಿ ಅದು ನಿವೃತ್ತಿ ಹೊಂದಿದ ಯೋಧರಿಗೆ ಅಷ್ಟೊಂದು ಲಾಭವಾಗಿ ಪರಿಣಮಿಸುವುದಿಲ್ಲ. ಅದಕ್ಕೆಂದು ನಿರ್ಧಾರವನ್ನು ಬದಲಿಸಲು ನಿರ್ಣಯವನ್ನು ಕೈಗೊಂಡೆವು OROP ಅನ್ವಯದ ನಂತರ ಅವರ ಸಂಬಳವನ್ನು 7ನೇ ವೇತನ ಅಯೋಗದ ಶಿಫಾರಿಸಿನ ಆಧಾರದ ಮೇಲೆ ತಾಳೆ ಹಾಕಿ ಎರಡು ಪಟ್ಟು ಲಾಭವಾದರು ಚಿಂತಿಲ್ಲ ನಮ್ಮ ಸೈನಿಕರಿಗೆ ಅದು ದೊರೆಯಲೇ ಬೇಕಾದ ಅಗತ್ಯವಿದೆ ಎಂದು ಪರಿಗಣಿಸಿ ನಾವು ನಿರ್ಣಯ ಕೈಗೊಂಡಿರುತ್ತೇವೆ.
ಕಾರ್ಯಪ್ರಗತಿಯ ಸಮೀಕ್ಷೆಯ ಕಾರ್ಯಕ್ರಮವನ್ನು ಎಲ್ಲ ರಾಜ್ಯಗಳೊಂದಿಗೆ ಎಲ್ಲ ಇಲಾಖೆಗೆ ಸಂಭಂದಿಸಿದ ಸಮಸ್ಯೆಯ ಪರಿಹಾರಕ್ಕಾಗಿ ವಿಡಿಯೋ ಕಾಂಫರೆನ್ಸಿಂಗ್ ಮುಖಾಂತರನಡೆಸುವುದುಂಟು. ಇಂಥ ಒಂದು ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಸೈನಿಕರ ದೂರುಗಳಿಗೆ ಎನು ಪರಿಹಾರ ಹುಡುಕಿದ್ದೀರಿ ಎಂಬುದಾಗಿ ವಿಚಾರಿಸಿದೆ. ಅಶ್ಚರ್ಯವೆಂದರೆ ಬಂದ ಎಲ್ಲ ದೂರುಗಳನ್ನು ಹಾಗೆಯೇ ಬಾಕಿ ಉಳಿಸಿಟ್ಟಿದ್ದರು. ನಾವು ತಂತ್ರಜ್ಞಾನವನ್ನು ಬಳಸಿ ಅದಷ್ಟು ಜಾಗ್ರತೆಯಾಗಿ ಅವರ ಎಲ್ಲ ದೂರುಗಳನ್ನು ವಿಲೇವಾರಿಯಾಗುವಂತೆ ಮಾಡಿರುತ್ತೇವೆ. ದೂರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿರುತ್ತೇವೆ. ಇದಲ್ಲದೆ ಮತ್ತೊಂದು ಕೆಲಸವನ್ನು ನಾವು ಮಾಡಿರುತ್ತೇವೆ. ಇದು ಬಹುಶಃ ಸಿವಿಲ್ ಸೊಸೈಟಿಯ ಗಮನಕ್ಕೆ ಬಾರದಿರಬಹುದು. ಸಿವಿಲ್ ಸೊಸೈಟಿ ಬಹುಶಃ ಈ ರೀತಿ ಆಲೋಚಿರಲು ಬಹುದು ತಾರುಣ್ಯವಿದ್ದಾಗ ಅಂದು ಕೊಂಡದನ್ನು ಮಾಡಿಬಿಡು. ಅನಂತರ ವಯಸ್ಸು ಕಳೆದ ನಂತರ ಆಗುತ್ತೊ ಇಲ್ವೋ. 35 -40 ವರ್ಷ ಕಳೆದ ನಂತರ ಮಾಡಬೇಕಾದನ್ನ, ಅಂದುಕೊಂಡದ್ದನ್ನು ಮಾಡಿಯಾಗಿದೆ. ಇನ್ನೇನಿದ್ದರೂ ಆರಾಮವಾಗಿ ಕಾಲ ಕಳೆಯ ಬೇಕು ಎಂಬುದಾಗಿ. ಆದರೆ ಸೈನಿಕ ಜೀವನ ಹಾಗಲ್ಲ. ಅವರಲ್ಲಿ ಇದು ಉಲ್ಟಾ ಆಗುತ್ತೆ. ಯಾವ ವಯಸ್ಸನ್ನು ನಾವು ಮೋಜು ಮಸ್ತಿ ಅಂದು ಕೊಳ್ಳುತ್ತೇವೆಯೊ ಅದು ಅವರಿಗೆ ಏನನ್ನಾದರು ಸಾಧಿಸ ಬೇಕೆಂಬ ಛಲಕ್ಕೆ ಪ್ರೇರೇಪಿಸುತ್ತದೆ. ಅಂತಹ ಜೀವನವನ್ನು ಅವರು ದೇಶದ ಗಡಿಕಾಯುವಲ್ಲಿ ಕಳೆಯುತ್ತಾರೆ. ಸುಖ ಸುಪತ್ತಿನ ಎಲ್ಲ ಐಶಾ ರಾಮದ ಬದುಕನ್ನು ಅವರು ತಾಯಿ ಭಾರತಾಂಬೆಗೆ, ಈ ನೆಲಕ್ಕೆ ಅರ್ಪಿಸುತ್ತಾರೆ. 15-17 ವರ್ಷಗಳ ನಿರಂತರ ಸೇವೆಯ ನಂತರ ಮನೆಗೆ ವಾಪಸ್ಸು ಬಂದಾಗ ಅವರಿಗೆ 40-42-45 ವರ್ಷ ಪೂರೈಸಿರುತ್ತದೆ. ನಾವು ನಮ್ಮ ಜೀವನವನ್ನು ಆರಾಮವಾಗಿ ಕಳೆದೆವು ಎಂದು ಕೊಂಡಾಗ ಅವರು ತಮ್ಮ ಹೊಸ ಬದಕನ್ನು ಹೇಗೆ ಎಲ್ಲಿಂದ ಪ್ರಾರಂಭಿಸುವುದು ಎಂಬ ಚಿಂತೆಯಲ್ಲಿರುತ್ತಾರೆ. ಮುಂದೇನು ಎಂಬ ಅನಿಶ್ಚಿತತೆಯೊಂದಿಗೆ ಅವರ ಬದುಕು ಪ್ರಾರಂಭವಾಗುತ್ತದೆ.
ನಾವು ಪ್ರತಿ ವರ್ಷ ನಿವೃತ್ತರಾಗುವ ಯೋಧರಿಗೆ. 50,000ರ ಮಂದಿಗೆ ತಕ್ಷಣ ಕೆಲಸ ಹೊಂದಿಸುವ ವ್ಯವಸ್ಥೆ ಮಾಡಿರುತ್ತೇವೆ. ಇಂಥ ಒಂದು ಮಹತ್ತರವಾದ ಕಾರ್ಯವನ್ನು ಭಾರತ ಸರ್ಕಾರ ಮಾಡಿದೆ. ಸೇನೆಯಿಂದ ಹೊರ ಬರಬೇಕು, ನಿವೃತ್ತಿಯಾಗಬೇಕು ಎಂದು ಕೊಳ್ಳುವ, ಈ ಕೆಲಸ ಸಾಕಾಯಿತು ಎಂದು ಕೊಳ್ಳುವ, ಒಂದು ವಯಸ್ಸಿನ ನಂತರ ಇನ್ನು ಸಾಕು ಎನ್ನುವ ಸಂದರ್ಭದಲ್ಲಿ ಅವರನ್ನು ಮುಕ್ತ ಗೊಳಿಸುತ್ತೇವೆ. ಅಂತಹವರಿಗೆ ತಮ್ಮ ಸೇವೆಯ ಕೊನೆಯ ವರ್ಷದಲ್ಲಿ skill development ನ certificate courseನಲ್ಲಿ ತರಬೇತಿಯನ್ನು ನೀಡುತ್ತೇವೆ. ಭಾರತ ಸರ್ಕಾರದ Skill development Department(ಕೌಶಲ ವರ್ಧನೆ ವಿಭಾಗ) ಮತ್ತು ನಮ್ಮ ಸೇನೆಯ ಮೂರು ವಿಭಾಗ ಮಧ್ಯೆ ಒಡಂಬಡಿಕೆ ( MOU) ಎರ್ಪಟ್ಟಿದೆ. skill development ನಂತರ ಅವರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ. ಈಗ ಸೈನಿಕರು ಸೇನೆಯಲ್ಲಿದಾಗಲೇ ತರಬೇತಿ ಹೊಂದುತ್ತಾರೆ. ಅಲ್ಲಿಯೂ Communication expert ಇರುತ್ತಾರೆ. ಅಲ್ಲಿಯೂ technology expert ಇರುತ್ತಾರೆ. ಅಲ್ಲಿಯೂ expert driver ಇರುತ್ತಾರೆ. ಹಾಗೆ ಹೊರ ಬಂದಾಗ ಜನ ಕೇಳುವುದುಂಟು. ನಿನ್ನ ಬಳಿ ಪ್ರಮಾಣ ಪತ್ರ ಇದೆಯೇನಯ್ಯಾ ಹಾಗಿದ್ದಲ್ಲಿ ಸರಿ ನಡಿ. ಹಾಗಿಲ್ಲದೆ ಹೋದಲ್ಲಿ ಕೆಲಸವಿಲ್ಲ.
ಮೊದಲ ಬಾರಿಗೆ ಭಾರತ ಸರ್ಕಾರದಿಂದ ಸೈನಿಕರಲ್ಲಿ ಹುದುಗಿರುವ ಕುಶಲತೆಯನ್ನು ಒರೆ ಹಚ್ಚಿ ಅವರಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ಹೊರಗಿನ ಪ್ರಪಂಚಕ್ಕೆ ಬಂದಾಗ ಅವರಿಗೊಂದು ನೌಕರಿ ದೊರಕಲಿ ಎಂಬ ಉದ್ದೇಶ್ಯದಿಂದ ಇಂಥ ಒಂದು ಸಿದ್ಥತೆಯನ್ನು ಮಾಡಿ ಕೊಳ್ಳಲಾಗುತ್ತಿದೆ. ಅವರನ್ನು ಕೇವಲ ಚೌಕಿದಾರರನ್ನಷ್ಟೇ ಅಲ್ಲದೆ ಅವರನ್ನು Trainer ಆಗುವಂತೆ ರೂಪಿಸುತ್ತದೆ. Skill Developer ರರಂತೆ ರೂಪಿಸುತ್ತದೆ. ದೇಶದ ಯುವ ಪೀಳಿಗೆಗೆ ಕುಶಲತೆಯ ಕಾರ್ಯವನ್ನು ಕಲಿಸುವ ರೂವಾರಿಗಳನ್ನಾಗಿ ಮಾಡತ್ತದೆ. ಇದು ನಿಜಕ್ಕೂ ಸರ್ಕಾರದ ಒಂದು ಮಹತ್ತರ ನಿರ್ಧಾರ.
ಇದು ಬಹಳಷ್ಟು ಜನರಿಗೆ ಗೊತ್ತಿರಬೇಕು, ಸರ್ಕಾರದಲ್ಲಿ ರಕ್ಷಣಾ ಮಂತ್ರಿ ವಿವೇಚನೆಗೆ ಬಿಟ್ಟ ನಿಧಿಯೊಂದು ಇರುತ್ತದೆ. ಅದರಿಂದ ನಿವೃತ್ತ ಯೋಧರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದಾಗ, ಅವಶ್ಯಕತೆ ಬಿದ್ದಾಗ, ಮಕ್ಕಳ ಶಿಕ್ಷಣದ ಸಮಸ್ಯೆ ಬಂದಾಗ, ಮಗಳ ಮದುವೆ ವಿಷಯ ಎದುರಾದಾಗ, ಸಹಾಯ ಮಾಡಲಾಗುತ್ತದೆ. ಈ ಮೊದಲು ವರ್ಷಕ್ಕೆ ಸರಾಸರಿ 10 ರಿಂದ 12 ಸಾವಿರ ಸೈನಿಕ ಕುಟುಂಬಗಳಿಗೆ ನೆರವನ್ನು ನೀಡಲಾಗುತ್ತಿತ್ತು. ಈಗಿನ ರಕ್ಷಣಾ ಮಂತ್ರಿ ಎಷ್ಟು ಜನಾನುರಾಗಿಯೆಂದರೆ ಈಗ ಪ್ರತಿ ವರ್ಷ 50 ಸಾವಿರ ಹೆಚ್ಚು ಕುಟುಂಬಗಳಿಗೆ ಈ ಒಂದು ವ್ಯವಸ್ಥೆಯಡಿ ಸಹಾಯ ನೀಡಲಾಗುತ್ತಿದೆ. ಈ ಹಿಂದೆ ನಿವೃತ್ತರಾದ ಸೈನಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡಲಾಗುತ್ತಿತ್ತು. ಆದರೆ ಅದು ವರ್ಷ ಮುಗಿಯುತ್ತ ಬಂದರೂ ದೊರಕುತ್ತಿರಲ್ಲಿಲ್ಲ. ಈಗ ಅದನ್ನು ತಂತ್ರಜ್ಞಾನದೊಂದಿಗೆ ಜೋಡಿಸಲಾಗಿದೆ. ಈಗ ಮೊದಲನೆಯ ಪಾಠ್ಯಕ್ರಮದ ಸಾಲಿನಲ್ಲಿಯೆ ದೊರೆಯಲಿದೆ. ಅವರ ಒದು ಕುಂಠಿತವಾಗ ಬಾರದೆಂಬುದು ಇದರ ಆಶಯ.
ಈ ಮೊದಲು ವಿದ್ಯಾರ್ಥಿ ವೇತನ 4000 ರೂಪಾಯಿಗಳಾಗಿತ್ತು. ಈ ಸರ್ಕಾರ ಬಂದ ನಂತರ ಯೋಧರ ಮಕ್ಕಳಿಗೆ ಹೆಚ್ಚಿನ ಲಾಭ ದೊರೆಯಲೆಂಬ ಉದ್ದೇಶ್ಯದಿಂದ ರೂಪಾಯಿ 4000 ದಿಂದ 5,500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಸೇನೆಯಲ್ಲಿ ಹವಲ್ ದಾರ್ ವರೆಗಿನ ಸೈನಿಕರು ಶೇಕಡ 80 -90 ರಷ್ಟು ಸಂಖ್ಯೆಯಲ್ಲಿ ಇರುತ್ತಾರೆ. ಉಳಿದಂತೆ ಬಾಕಿ ಶ್ರೇಣಿಯವರು ಶೇಕಡ 10 ರಷ್ಟು ಮಂದಿ ಇರುತ್ತಾರೆ. ಹವಾಲ್ ದಾರ್ ವರೆಗಿನ ಹುದ್ದೆಯಲ್ಲಿ ನಿವೃತ್ತರಾದ ಸೈನಿಕರಿಗೆ ಅವರ ಮಗಳ ಮದುವೆ ಮಾಡ ಬೇಕಾದ ಪ್ರಸಂಗ ಬಂದಾಗ ಈ ಹಿಂದೆ 16,000 ರೂಪಾಯಿಗಳ ಧನ ಸಹಾಯ ನೀಡಲಾಗುತ್ತಿತ್ತು. ಆದರೀಗ ರಕ್ಷಣಾ ಮಂತ್ರಿಯವರ ಉದಾರತೆಯನ್ನು ನೋಡಿ,ಈಗ ಈ ಮೊತ್ತವನ್ನು 50,000 ರೂಪಾಯಿಗಳಿಗೆ ಹೆಚ್ಚಿಸಿರುತ್ತಾರೆ.
ನಮ್ಮ ಸೇನೆಯಲ್ಲಿ ಸೈನಿಕರು ಯುದ್ದದಲ್ಲಿ ಗಾಯಾಳುಗಳಾಗಿ ಅಂಗ ವಿಕಲರಾಗಿರುತ್ತಾರೆ. ದೇಹದ ಊನತೆಯಿಂದಾಗಿ ಕೆಲವೊಂದು ತೊಂದರೆಗಳನ್ನು ಎದುರಿಸುತ್ತಿರುತ್ತಾರೆ. ಅವರು ಶೇಕಡ ಎಷ್ಟು ವಿಕಲಾಂಗರಿರುತ್ತಾರೆಂಬ ಬಗ್ಗೆ ಪ್ರಮಾಣ ಪತ್ರವನ್ನು ಅಸ್ಪತ್ರೆಯಿಂದ ಪಡೆಯಬೇಕಾಗಿತ್ತು. ಇದು ಬಹಳ ತ್ರಾಸದಾಯಕವಾದ ಕೆಲಸ. ಕೆಲವರು ಶೇಕಡ 25, ಕೆಲವರು ಶೇಕಡ 30 ಅಂಗವಿಕಲರು ಎಂದು ಪ್ರಮಾಣಿಕರಿಸಲ್ಪಡುತ್ತಿದ್ದರು. ಕೆಲವೊಮ್ಮೆ ಶೇಕಡ 45, 50, 55 ರಷ್ಟು ವಿಕಲಾಂಗತೆಯನ್ನು ಹೊಂದಿದವರೂ ಉಂಟು. ಇದನ್ನು ಮಾನದಂಡವಾಗಿಟ್ಟು ಈ ಆಧಾರದ ಮೇಲೆ ಧನ ಸಹಾಯ ಮಾಡಲಾಗುತ್ತಿತ್ತು. ಇಂಥ ಒಂದು ಗೊಂದಲಕ್ಕೆ ನಮ್ಮ ಸೈನಿಕರು ಗುರಿಯಾಗುತ್ತಿದ್ದರು. ಕೆಲವು ಯೋಧರು ಈ ಬಗ್ಗೆ ನನ್ನ ಗಮನವನ್ನು ಸೆಳೆದಿದ್ದರು. ಈಗ ನಾವು ಅವುಗಳನ್ನು ಒಟ್ಟಾಗಿಸಿ Broad branding ನ ವ್ಯವಸ್ಥೆಯನ್ನು ಮಾಡಲಾಗಿದೆ. ಶೇಕಡ 50 ಕ್ಕೂ ಕಡಿಮೆ ವಿಕಲಾಂಗತೆ ಇರುವವರು, ಶೇಕಡ 50 ಮತ್ತು 75ರ ನಡುವೆ ವಿಕಲಾಂಗತೆ ಇರುವವರು, ಶೇಕಡ 75ಕ್ಕೂ ಮೇಲ್ಪಟ್ಟು ವಿಕಲಾಂಗತೆಯವರು ಎಂಬುದಾಗಿ ಮೂರು ಹಂತಗಳಾಗಿ ವರ್ಗೀಕರಿಸಲಾಗಿದೆ. ಈಗ ಈ ಗೊಂದಲಗಳಿಂದ ಪಾರಾಗಿ ನೆಮ್ಮದಿಯಾ ಗಿರಲು ಸಾಧ್ಯವಾಗಿದೆ.
ಇಷ್ಟೇ ಅಲ್ಲ ನಿವೃತ್ತ ಸೈನಿಕರಿಗೆ ಚಿಕಿತ್ಸಾ ಸೌಲಭ್ಯಕ್ಕಾಗಿ ನಾವು ಸರಿಸುಮಾರು 475 ಹೊಸ ಅಸ್ಪತ್ರೆಗಳನ್ನು ಚಿಕಿತ್ಸಾ ಸೇವೆಯ ಪಟ್ಟಿಗೆ ಸೇರಿಸಿರುತ್ತೇವೆ. ಅವುಗಳಲ್ಲಿ ಅವರಿಗೆ ಯಾವುದೇ ಚಿಕಿತ್ಸೆಯನ್ನು ಕಡಿಮೆ ಹಣಕ್ಕೆ ಕೊಡಲಾಗುತ್ತದೆ. ನಮ್ಮ ಮಧ್ಯಪ್ರದೇಶದಲ್ಲಿ ಸೈನಿಕರಿಗಾಗಿ ಇಂತಹ 64 ಆಸ್ಪತ್ರೆಗಳನ್ನು ಪಟ್ಟಿಗೆ ಸೇರಿಸಿರುತ್ತೇವೆ. ಒಂದಾದನಂತರ ಒಂದು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯ ಪ್ರವೃತ್ತರಾಗಿರುತ್ತೇವೆ. ನಮ್ಮ ಸರ್ಕಾರ ಸಂವೇದನಾಶೀಲ ಸರ್ಕಾರ, ಯೋಧರ ನೋವು ನಲಿವುಗಳಿಗೆ ಸ್ಪಂದಿಸುವ ಸರ್ಕಾರ. ಮೇಲಿನ ಯಾವುದೇ ಸಮಸ್ಯೆ ಎದುರಾದಾಗಲೂ ಸೈನಿಕರಿಗೆ ಆದ್ಯತೆಯನ್ನು ನೀಡಲಾಗುತ್ತದೆ ಮತ್ತು ದೇಶದೊಳಗೆ ಯೋಜನೆಗಳನ್ನು ರೂಪಿಸಲಾಗುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ರಾಷ್ಟ್ರವನ್ನು ಸ್ವಾವಲಂಬಿಯನ್ನಾಗಿಸುವುದು ಹೇಗೆ? ನಮ್ಮ ದೇಶದಲ್ಲಿಯೇ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವುದು ಹೇಗೆ ? ನಮ್ಮ ಯುವಕರಲ್ಲಿ ಸಾಮರ್ಥ್ಯವಿದೆ. ಕೌಶಲ್ಯ ವಿದೆ. ಕಳೆದ ಎರಡು ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಸತತವಾಗಿ ಪ್ರಯತ್ನಸಾಗಿದೆ ಮತ್ತು ಅಸ್ತ್ರ ಶಸ್ತ್ರಗಳ ತಯಾರಿಕೆಯಲ್ಲಿ ಭಾರತ ತನ್ನ ಅಗತ್ಯವನ್ನಷ್ಟೇ ಅಲ್ಲ ಇತರೆ ರಾಷ್ಟ್ರಗಳ ಆವಶ್ಯಕತೆಗಳನ್ನು ಕೂಡ ಪೂರೈಸುತ್ತದೆ ಎಂಬುದರಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ. ಈ ದೇಶಕ್ಕೆ ಅಂತಹ ಸಾಮರ್ಥ್ಯವಿದೆ. ನಾವು ಆ ನಿಟ್ಟಿನಲ್ಲಿಯೂ ಸಹ ಕಾರ್ಯತತ್ಪರರಾಗಿದ್ದೇವೆ.
ನನ್ನ ಪ್ರೀತಿಯ ಸಹೋದರ ಸಹೋದರಿಯರೆ ಮತ್ತೊಮ್ಮೆ ನನ್ನೆಲ್ಲ ಹುತಾತ್ಮರಿಗೂ ವಂದಿಸುತ್ತೇನೆ. ಇಂಥ ವೀರಾಗ್ರಣಿ ಸುಪುತ್ರರನ್ನು ಪಡೆದ ತಾಯಿಯಂದಿರಿಗೂ ನಮಸ್ಕರಿಸುತ್ತೇನೆ. ಗಂಡನನ್ನು ಕಳೆದುಕೊಂಡ ಸಹೋದರಿಯರನ್ನು, ಸಹೋದರನನ್ನು ಕಳೆದುಕೊಂಡ ಸಹೋದರಿಯರನ್ನು ನೆನೆಯುತ್ತೇನೆ. ಇದಾದನಂತರ ಭಾರತ ಮಾತೆಯ ಸೇವೆಗೆ ತಮ್ಮನ್ನು ಮುಡಿಪಾಗಿಸಿಕೊಂಡು ಬದುಕುತ್ತಿರುವ ಯೋಧರ ಕುಟುಂಬಗಳಿಗೂ ನಮಿಸುತ್ತೇನೆ.
ಸಹೋದರ ಸಹೋದರಿಯರೆ, ವಿಶ್ವದ ಹಲವು ರಾಷ್ಟ್ರಗಳಲ್ಲಿ ಒಂದು ಸಂಪ್ರದಾಯವಿದೆ. ಆ ಪರಂಪರೆ ನಮ್ಮ ದೇಶದಲ್ಲಿ ಬಂದಿಲ್ಲ. ಬಹುಶಃ ಬಂದಲ್ಲಿ ಅಚರಿಸಬಹುದೇನೊ. ನೀವೂ ನೊಡಿರಬಹುದು ವಿಮಾನ ನಿಲ್ದಾಣಗಳಲ್ಲಿ ತಾವು ಕುಳಿತಂಥ ಸಂದರ್ಭದಲ್ಲಿ ಸಾವಿರಾರು ಯಾತ್ರಿಗಳು ಕುಳಿತಿರುತ್ತಾರೆ ಮತ್ತು ಅಂಥಹ ವೇಳೆಯಲ್ಲಿ ಯಾರಾದರು 3-4 ಜನ ಯೋಧರು ಸಮವಸ್ತ್ರದಲ್ಲಿ ಒಮ್ಮೆಲೆ ಹಾದು ಹೋದರೆಂದರೆ ಕುಳಿತ ಅಷ್ಟು ಮಂದಿ ಅವರನ್ನು ಕಂಡಾಕ್ಷಣ ಎದ್ದು ನಿಂತು ಗೌರವ ತೋರುತ್ತಾರೆ. ಕರತಾಡನದ ಮೂಲಕ ಅವರನ್ನು ಅಭಿನಂದಿಸುತ್ತಾರೆ. ಅವರುಗಳು ತಮ್ಮ ಹಾದಿಯಲ್ಲಿ ಯಾವ ವಿಮಾನ ಹತ್ತಬೇಕೋ ಅಲ್ಲಿಗೆ ನಡೆದು ಹೋಗುತ್ತಾರೆ. ರೈಲ್ವೆ ನಿಲ್ದಾಣಗಳಲ್ಲಿಯೂ ಅಷ್ಟೆ ಅಲ್ಲಿನ ನಾಗರೀಕರು ಅವರನ್ನು ಕಂಡಾಕ್ಷಣ ಎದ್ದು ನಿಂತು ಗೌರವ ಸೂಚಿಸುತ್ತಾರೆ. ಹಾಡಿ ಹೊಗಳುತ್ತಾರೆ. ಈ ಒಂದು ಸತ್ಸಂಪ್ರದಾಯ ನಮ್ಮ ದೇಶದಲ್ಲೇಕೆ ಆಗಬಾರದು. ನಿಧಾನವಾಗಿಯಾದರೂ ಇಂಥ ಸಂಪ್ರದಾಯವನ್ನು ರೂಢಿಮಾಡಿಕೊಳ್ಳಬಹುದಲ್ಲವೆ. ಯುದ್ಥ ಸಮಯದಲ್ಲಿ ಮಾತ್ರವೆ ನೆನಪಿಸಿಕೊಳ್ಳವ ಪರಿಪಾಠ ಬೇಡ. ದಿನದ 24 ಘಂಟೆಯೂ ಅವರ ಬಗ್ಗೆ ಗೌರವಾದರಗಳು ನಮ್ಮಲ್ಲಿ ಮೂಡಬೇಕು. ಅವರ ಬಗ್ಗೆ ಭಕ್ತಿ ಭಾವ ಹೊರಸೂಸುವಂತಾಗಬೇಕು.
ತಾವು ಯಾವಾಗಲಾದರು ಈ ರೀತಿ ಯೋಧರನ್ನು ಹೋಗಿ ಬಂದು ಮಾಡುವುದನ್ನು ಕಂಡಲ್ಲಿ ಕರತಾಡನದ ಮೂಲಕ ಮತ್ತು ಎದ್ದು ನಿಂತು ಗೌರವಿಸುತ್ತಿರೇನು. ಮರೆಯುವುದಿಲ್ಲ ತಾನೇ. ನಾವು ಮಾಡುವ ಕ್ರಿಯೆ ತುಂಬ ಸಣ್ಣದಿರಬಹುದು ಆತರೆ ಸೈನಿಕರ ಜೀವನದಲ್ಲಿ ಅದು ಮಹತ್ತರ ಘಟನೆಯಾಗುತ್ತದೆ. ಶೌರ್ಯ ಸ್ಮಾರಕಗಳ ವ್ಯವಸ್ಥೆಯ ಮುಖಾಂತರ ಇಂತಹ ತರಬೇತಿಯನ್ನು ನಾಗರೀಕರು ಹೊಂದುತ್ತಾರೆ ಎಂಬ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ. ಇದು ಕೇವಲ ಯೋಧರನ್ನು ಗೌರವದಿಂದ ಕಾಣುವ ಪರಿಪಾಠ ಮಾತ್ರವಲ್ಲ ನಮ್ಮ ಮುಂದಿನ ಪೀಳಿಗೆಗೆ ಸಂಸ್ಕಾರ ಕಲಿಸುವ ತೆರೆದ ಶಾಲೆಯಿದು. ಆ ರೀತಿಯಲ್ಲಿ ಮುಕ್ತ ವಿಶ್ವವಿದ್ಯಾಲಯವಾಗಬೇಕು. ನಾನು ಮತ್ತೊಮ್ಮೆ ತಮ್ಮೆಲ್ಲರನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಮಧ್ಯಪ್ರದೇಶದ ಸರ್ಕಾರವನ್ನು ಅಭಿನಂದಿಸುತ್ತೇನೆ. ತಮ್ಮಲ್ಲಿ ಒಂದು ಅರಿಕೆ. ತಾವೆಲ್ಲರೂ ಕೈ ಮುಷ್ಟಿ ಬಿಗಿ ಹಿಡಿದು ಹುತಾತ್ಮರು ಅಮರರಾಗಲಿ ಎಂದು ಘೋಷಣೆ ಕೂಗಿರಿ.
ಹುತಾತ್ಮರು ಅಮರರಾಗಲಿ
ನಿಮ್ಮ ಧ್ವನಿ ದೂರ ದೂರದವರೆವಿಗೂ ಕೇಳ ಬೇಕು.
ಹುತಾತ್ಮರು ಅಮರರಾಗಲಿ
ಹುತಾತ್ಮರು ಅಮರರಾಗಲಿ
ತಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.