ಪಿಎಂಇಂಡಿಯಾ
ದೇಶದ ಮೂಲೆಮೂಲೆಯಿಂದ ಬಂದಿರುವ ಸೂಕ್ಷ್ಮ ಕೈಗಾರಿಕೆ ಮತ್ತು ಸಣ್ಣ ಉದ್ಯಮಗಳಿಗೆ ಸಂಬಂಧಿಸಿದ ಸೋದರ-ಸೋದರಿಯರೇ
ದೆಹಲಿ ಒಂದು ದೂರಸ್ಥ ನಗರವೆಂದು ಸಾಮಾನ್ಯವಾಗಿ ಹೇಳಲಾಗುತ್ತಿತ್ತು. ದೆಹಲಿ ಬಹಳ ದೂರವೆಂಬ ಭಾವನೆ ಇತ್ತು ಮತ್ತು ಅದು ಹಾಗೆಯೇ ಆಗುತ್ತಿತ್ತು. ಇಷ್ಟೊಂದು ದೊಡ್ಡ ವಿಶಾಲ ದೇಶ; ಆದರೆ ಚಿಕ್ಕ ಪುಟ್ಟ ಕೆಲಸಗಳೂ ದೆಹಲಿಯಲ್ಲೇ ಆಗುತ್ತಿದ್ದವು. ನಾವು ಆ ಪರಂಪರೆಯನ್ನು ಬದಲಿಸಿ ಬಿಟ್ಟೆವು. ದೆಹಲಿಯ ಹೊರತಾಗಿಯೂ, ದೆಹಲಿಯ ಹೊರಗಡೆ ಬಹುದೊಡ್ಡ ಹಿಂದೂಸ್ತಾನ ವಿದೆ, ಮತ್ತು ಇದನ್ನು ನಾವು ಸ್ವೀಕರಿಸಬೇಕಾಗಿದೆ; ಈ ಪ್ರಯತ್ನದಲ್ಲಿ ನಾವಿದ್ದೇವೆ. ಆದ್ದರಿಂದ ಈಗ ದೆಹಲಿ ದೂರಸ್ಥವಲ್ಲ, ಅದು ಸಮೀಪಸ್ಥ, ಅದು ಹತ್ತಿರವೇ ಇದೆ ಹಾಗೆ ಪ್ರತಿಯೊಬ್ಬನ ಅನುಭವಕ್ಕೆ ಬರುತ್ತದೆ. ಹಿಂದಿನ ದಿನಗಳಲ್ಲಿ ಭಾರತ ಸರಕಾರ ಎಷ್ಟೆಲ್ಲ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿತೋ, ಅವೆಲ್ಲವನ್ನು ಭಾರತದ ಬೇರೆಬೇರೆ ಕೇಂದ್ರಗಳಲ್ಲಿ ಜಾರಿಗೆ ತಂದಿತು. ಒಂದು ಸಲ ಕೊಲ್ಕೊತ್ತ, ಇನ್ನೊಂದು ಸಲ ರಾಂಚಿ, ಮತ್ತೊಂದು ಸಲ ರಾಯಪುರ, ಮಗದೊಮ್ಮೆ ಭುವನೇಶ್ವರ, ಅನಂತರ ಚೆನ್ನೈ, ಮತ್ತೆ ಅವಕಾಶ ಬಂದಾಗ ಸೋನೆಪತ್ , ಹರಿಯಾಣ. ಪ್ರತಿಯೊಂದು ರಾಜ್ಯಕ್ಕೆ ಅದರ ಮಹತ್ವ ಇರುತ್ತದೆ, ಅದರದೇ ಆದ ಶಕ್ತಿ ಇರುತ್ತದೆ; ಈ ದಿನ ಸಣ್ಣ ಕೈಗಾರಿಕಾ ಕ್ಷೇತ್ರದ ಒಂದು ಚಿಕ್ಕ ಭಾರತ ಲೂಧಿಯಾನದಲ್ಲಿ ನನ್ನ ಮುಂದಿದೆ ಎಂಬುದು ಬಹು ಸಂತೋಷದ ವಿಷಯ. ಹಿಂದೂಸ್ತಾನದ ಪ್ರತಿಯೊಂದು ಮೂಲೆಯಿಂದ ಸಣ್ಣಕೈಗಾರಿಕೆಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಇವತ್ತು ಇಲ್ಲಿ ಉಪಸ್ಥಿತರಿದ್ದಾರೆ. ಈ ಕ್ಷೇತ್ರದಲ್ಲಿ ಕೊಡುಗೆಗಳನ್ನು ನೀಡುತ್ತಿರುವ ಎಲ್ಲ ಕೈಗಾರಿಕೋದ್ಯಮಿಗಳಿಗೆ ಸನ್ಮಾನ ಮಾಡುವ ಅವಕಾಶ ನನಗೆ ಸಿಕ್ಕಿದೆ ಎಂಬುದು ನನ್ನ ಸೌಭಾಗ್ಯ. ಈ ದಿನ ಸನ್ಮಾನ ಪಡೆಯುತ್ತಿರುವವರ ಸಂಖ್ಯೆ ಸುಮಾರು 250. ಇದಕ್ಕೆ ಕಾರಣ ಹಿಂದಿನ ಹಲವು ವರ್ಷಗಳಿಂದ, ಹಳೆಯ ಸರಕಾರಗಳೂ ಕೂಡ, ನನಗೆ ಸ್ವಲ್ಪ ಕೆಲಸವನ್ನು ಉಳಿಸಿಟ್ಟಿದ್ದಾರೆ. ಈ ಇನ್ನೂರ ಐವತ್ತು ಜನರನ್ನು ವ್ಯಕ್ತಿಗತವಾಗಿ ಭೇಟಿಯಾಗಲು ಸಾಧ್ಯವಾಗುವುದಾದರೆ ನನಗೆ ಬಹಳ ಸಂತೋಷವಾಗುತ್ತಿತ್ತು. ಅವರಿಗೆ ಸನ್ಮಾನ ಮಾಡುವುದು, ಇದಕ್ಕಾಗಿ ಮಾತ್ರ ಒಂದು ಕ್ಷಣ ಭೇಟಿಯಾಗುವುದರಿಂದ ದೇಶಕ್ಕೆ ಪ್ರಯೋಜನಕ್ಕೆ ಬರುವ ಅವರ ಉತ್ಸಾಹದ ಲಾಭ ನನಗಾಗುವುದು ಸಾಧ್ಯವಿಲ್ಲ. ಆದರೆ ಸಮಯದ ಪರಿಮಿತಿಗಳಿರುತ್ತವೆ. ಇಲ್ಲಿ 250 ಜನರಿಗೆ ನಾನೇ ಸನ್ಮಾನ ಮಾಡುತ್ತಾ ಸಾಗುವುದನ್ನು ಮುಂದುವರೆಸಿದರೆ ಇಲ್ಲಿರುವ ಅರ್ಧ ಜನರು ಮಾತ್ರ ಇರುತ್ತಾರೆ. ಆದ್ದರಿಂದ ಕಾರ್ಯಕ್ರಮದ ಆಯೋಜಕರು ನನಗೆ ಸಲಹೆ ಮಾಡಿದರು: ಸಾಧ್ಯವಾದರೆ ಪ್ರತಿ ರಾಜ್ಯದಿಂದ ಒಬ್ಬೊಬ್ಬರಿಗೆ ನಿಮ್ಮ ಕೈಯಿಂದಲೇ ಸನ್ಮಾನವಾಗಲಿ; ಅನಂತರ ಮಂತ್ರಿ ಮಂಡಲದ ಸದಸ್ಯರಿಂದ ಪ್ರತಿಯೊಬ್ಬರಿಗೆ ಸನ್ಮಾನ ಮಾಡಬಹುದು. ಆದರೆ ನಿಮ್ಮೆಲ್ಲರಿಗೂ ನೀವು ಸಾಧಿಸಿದ ಸಫಲತೆಗಾಗಿ, ನೀವು ಯೋಚಿಸಿ ಕಂಡಿರುವ ಗುರಿಗಳ ಕನಸನ್ನು ನನಸಾಗಿಸಿಕೊಳ್ಳುವ ಪ್ರಯತ್ನಕ್ಕಾಗಿ ಅನೇಕಾನೇಕ ಶುಭಾಶಯಗಳನ್ನು ಕೋರುತ್ತೇನೆ ; ಬರೀ ಶೂಭಾಶಯಗಳನ್ನಲ್ಲ, ಭಾರತದ ಆರ್ಥಿಕ ಜೀವನದಲ್ಲಿ ಬದಲಾವಣೆಗಳನ್ನು ತರಲು ವಿಕೇಂದ್ರೀಕೃತ ಆರ್ಥಿಕತೆಗೆ ಶಕ್ತಿ ತುಂಬುವುದು, ಸೂಕ್ಷ್ಮ ಮತ್ತು ಸಣ್ಣ ಉದ್ಯೋಗಗಳಿಗೆ ಉತ್ತೇಜನ ನೀಡುವುದು, ವಿಶ್ವ ಮಾರುಕಟ್ಟೆಯನ್ನು ಲಕ್ಷ್ಯವಾಗಿಟ್ಟುಕೊಂಡು ಮುಂದುವರೆಯುವುದು, ಈ ರೀತಿಯ ಸ್ಪಷ್ಟ ರೂಪುರೇಷೆ ಗಳನ್ನಿಟ್ಟುಕೊಂಡು ಭಾರತ ಸರಕಾರ ಸಂಪೂರ್ಣವಾಗಿ ನಿಮ್ಮ ಬೆಂಬಲಕ್ಕಿದೆ; ಭುಜಕ್ಕೆ ಭುಜ ಕೊಟ್ಟು ನಿಮ್ಮೊಡನೆ ನಡೆಯಲು ತಯಾರಾಗಿದೆ.
ನನಗೆ ತಮ್ಮಲ್ಲಿ ವಿಶ್ವಾಸವಿದೆ. ಇಂದು ವಿಶ್ವದಲ್ಲಿ ಅತಿ ಶೀಘ್ರ ಗತಿಯಲ್ಲಿ ಪ್ರಗತಿಯಾಗುತ್ತಿರುವ ಅರ್ಥವ್ಯವಸ್ಥೆಗಳಲ್ಲಿ ಮತ್ತು ವಿಶ್ವದ ಅತಿ-ದೊಡ್ಡ ಅರ್ಥವ್ಯವಸ್ಥೆಗಳೆಂದು ಪರಿಗಣಿತವಾದುವುಗಳಲ್ಲಿ ಭಾರತವು ಎಲ್ಲಕ್ಕಿಂತ ಶೀಘ್ರ ಗತಿಯಲ್ಲಿ ಬೆಳೆಯುತ್ತಿರುವ ಅರ್ಥವ್ಯವಸ್ಥೆ; ಎರಡು ವರ್ಷಗಳ ಕಾಲ ಸುಸೂತ್ರ ಮಳೆಯಾಗದಿದ್ದರೂ ಇದು ಸಾಧ್ಯವಾಯಿತು. ನಮ್ಮ ರೈತ ಬಳಲಿದ್ದ, ಕೃಷಿ ಉತ್ಪಾದನೆಯಲ್ಲಿ ಇನ್ನಿಲ್ಲದ ಭಾರೀ ಇಳಿಕೆಯುಂಟಾಯಿತು, ಅದರ ಹೊರತಾಗಿಯೂ, ತಯಾರಿಕಾ ಕ್ಷೇತ್ರ, ಅದರಲ್ಲಿಯೂ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಕ್ಷೇತ್ರಗಳು ಜಾದೂ ಮಾಡಿ ತೋರಿಸಿದವು ಮತ್ತು ಭಾರತದ ಅಭಿವೃದ್ಧಿ ದರವನ್ನು ಕೆಳಗಿಳಿಯಲು ಬಿಡಲಿಲ್ಲ; ಅಷ್ಟೇ ಅಲ್ಲ ಅದನ್ನು ಹೆಚ್ಚಿಸಲು ಕೂಡ ಬಹು ದೊಡ್ಡ ಕೊಡುಗೆಯನ್ನುಕೊಟ್ಟರು; ಇದೆಲ್ಲದರ ಪರಿಣಾಮ ವಿಶ್ವ ಬ್ಯಾಂಕಾಗಲಿ, ಅಂತಾರಾಷ್ಟ್ರೀಯ ವಿತ್ತ ನಿಧಿಯಾಗಲಿ, ಕ್ರೆಡಿಟ್
ರೇಟಿಂಗ್ ಏಜೆನ್ಸಿಸ್ ಗಳಾಗಲಿ, ಇವೆಲ್ಲ ಒಂದೇ ಸ್ವರದಿಂದ, ತಯಾರಿಕಾ ಮತ್ತು ಸೇವಾ ಕ್ಷೇತ್ರಗಳಿಂದಾಗಿ ಭಾರತ ಪ್ರಗತಿಯ ಗತಿಯಲ್ಲಿದೆ ಎಂಬುದನ್ನು ಮತ್ತು ಇಡೀ ವಿಶ್ವದ ಆರ್ಥಿಕ ಸ್ಥಿತಿಯು 2008ರ ಸ್ಥಿತಿಗೆ ಬಂದು ಬಿಟ್ಟಿದ್ದರೂ ಭಾರತ ಸಾಧಿಸಿದ ಪ್ರಗತಿ ದರ ವಿಶ್ವ ಆರ್ಥಿಕತೆಗೂ ಶಕ್ತಿ ತುಂಬಿದೆ ಎಂಬುದನ್ನೂ ಗುರುತಿಸಿದವು.
ಇಂದು ನನಗಿಲ್ಲಿ ಇನ್ನೂ ಮೂರು ಬೇರೆಬೇರೆ ತರಹದ ಅವಕಾಶಗಳು ಲಭಿಸಿವೆ. ಮೊತ್ತ ಮೊದಲಿಗೆ ಪಂಜಾಬಿನ ಹಳ್ಳಿಯ ತಾಯಂದಿರು ಮತ್ತು ಸಹೋದರಿಯರು; ಸಾಂಕೇತಿಕವಾಗಿ ಐದುನೂರು ಜನ ತಾಯಂದಿರು ಮತ್ತು ಸಹೋದರಿಯರಿಗೆ ಚರಖಗಳನ್ನು ನೀಡುವ ಅವಕಾಶ ನನಗೆ ಸಿಕ್ಕಿದೆ; ಈ ದಿನಗಳಲ್ಲಿ ನಾವು ಖಾದಿ ಬಗ್ಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ, ನೂಲುವ ಕೆಲಸಕ್ಕೆ ದರ ಹೆಚ್ಚು ಮಾಡಿದ್ದೇವೆ; ಇವೆಲ್ಲದರ ಪರಿಣಾಮವಾಗಿ ಒಂದು ಚರಖ ಇಟ್ಟುಕೊಂಡಿರುವ ಕುಟುಂಬಕ್ಕೆ, ಆ ಮಾತೆಯರು ಮತ್ತು ಸೋದರಿಯರಿಗೆ – ನಾನು ಅಂತಹ ಮಾತೆಯರು ಮತ್ತು ಸೋದರಿಯರ ಬಳಿ ಮಾತನಾಡಿದ್ದೇನೆ, ಅವರಿಗೆ ಕೊನೆಯ ಪಕ್ಷ ದಿನಕ್ಕೆ ಸರಾಸರಿ 150 ರೂಪಾಯಿಗಳಷ್ಟು ಆದಾಯ ಹೆಚ್ಚಾಗಿದೆ. ಒಂದು ದೃಷ್ಟಿಯಿಂದ ಗೃಹ ಕೈಗಾರಿಕೆಗಳ ಮೂಲಕ ಮತ್ತು ಖಾದಿಯ ಮೂಲಕ, ಇವರುಗಳು ಸ್ವಾವಲಂಬಿಯಾಗಿ ಬದುಕುವಂತೆ ಮಾಡಲು, ಸ್ವೋದ್ಯೋಗಕ್ಕೆ ಪ್ರೋತ್ಸಾಹ ನೀಡಲು, ಒಂದು ಮಹತ್ವಪೂರ್ಣ ಹೆಜ್ಜೆಯನ್ನು ಇರಿಸಲಾಗಿದೆ. ಮತ್ತು ಇದು ಮಹಾತ್ಮಗಾಂಧಿಯವರ ಕನಸಾಗಿದ್ದು ಅದನ್ನು ನನಸಾಗಿಸಲು ಕೂಡ ಅವರು ಪ್ರತಿಪಾದಿಸಿದ ಅರ್ಥವ್ಯವಸ್ಥೆಯ ಈ ನೆಲೆಯನ್ನು ಬಲಪಡಿಸಲು, ಆ ಕ್ಷೇತ್ರದಲ್ಲಿಯೂ ಕೊಡುಗೆಗಳನ್ನು ಹೆಚ್ಚಿಸುವ ದಿಕ್ಕಿನಲ್ಲಿ ಖಾದಿಯ ಮೂಲಕ ಈ ಹೆಜ್ಜೆಯನ್ನು ಇರಿಸಲಾಗಿದೆ. ಅನಂತರ ನಾನು ಅವರುಗ ಳು ಅಲ್ಲಿ ಏರ್ಪಡಿಸಿದ್ದ ಪ್ರದರ್ಶನದಲ್ಲಿದ್ದ, ಮಳಿಗೆಗಳಿಗೆ ಹೋಗಿದ್ದೆ. ನೀವು ಅದನ್ನು ನೋಡಬೇಕೆಂದು ನಿಮ್ಮಲ್ಲಿಯೂ ನಾನು ಆಗ್ರಹಿಸುತ್ತೇನೆ. ಮೊದಲು ನಾವು ಏನು ಯೋಚಿಸುತ್ತಿದ್ದೆವೋ ಆ ಕಾಲಘಟ್ಟ ಮುಗಿದು ಹೋಗಿದೆ; ಖಾದಿಯ ಗುಣಮಟ್ಟವನ್ನೇ ನೋಡಿ, ಖಾದಿಯ ಪ್ಯಾಕಿಂಗನ್ನು ನೋಡಿ, ಖಾದಿ ಈಗ ಕಾರ್ಪೊರೇಟ್-ಪ್ರಪಂಚದೊಂದಿಗೆ ಸ್ಪರ್ಧಿಸುತ್ತಿದೆ. ಆ ರೀತಿಯಲ್ಲಿ ಇದು ತನ್ನನ್ನು ತಾನು ಪ್ರಸ್ತುತ ಪಡಿಸುವ ಉತ್ತಮ ಪ್ರಯತ್ನವಾಗಿದೆ. ಇನ್ನೊಂದು ಮಾತೆಂದರೆ ಸ್ವಾತಂತ್ರ್ಯಾಂದೋಲನ ಸಮಯದಲ್ಲಿ ಖಾದಿಗೆ ತನ್ನದೇ ಆದ ಮಹತ್ವ ಬಂದಿತ್ತು. ಆ ಕಾಲದ ಮಂತ್ರ ‘ಖಾದಿ ಫಾರ್ ನೇಶನ್ ’ ಆಗಿತ್ತು; ಈಗ ದೇಶ ಸ್ವತಂತ್ರವಾಗಿದೆ; ನಾವು ಆರ್ಥಿಕ ಕ್ರಾಂತಿಯ ಕಡೆಗೆ ಹೋಗಬೇಕಾಗಿದೆ; ಆದ್ದರಿಂದ ಇಂದಿನ ಮಂತ್ರ ‘ಖಾದಿ ಫಾರ್ ಫ್ಯಾಷನ್ ’ ಆಗಿದೆ. ಸ್ವಾತಂತ್ರ್ಯದ ಮೊದಲು; ‘ಖಾದಿ ಫಾರ್ ನೇಶನ್ ’ ಇದ್ದುದು. ಸ್ವಾತಂತ್ರ್ಯಾನಂತರ ‘ಖಾದಿ ಫಾರ್ ಫ್ಯಾಷನ್ ’ ಆಗಿದೆ. ನಾವು ಇದಕ್ಕೆ ಪ್ರೋತ್ಸಾಹ ನೀಡಿದರೆ ಅದೂ ಕೂಡ ಹಳ್ಳಿಯ, ಬಡವರ, ಸಾಮಾನ್ಯ ವ್ಯಕ್ತಿಗಳ ಆರ್ಥಿಕ ಜೀವನದಲ್ಲಿ ಬದಲಾವಣೆ ತರುವ ಶಕ್ತಿಯಾಗಬಲ್ಲುದು. ನೀವೆಲ್ಲ ಖಾದಿಧಾರಿಗಳೇ ಆಗಬೇಕೆಂದೇನೂ ಇಲ್ಲ. ತಲೆಯಿಂದ ಕಾಲಿನವರೆಗೆ ನೀವು ಧರಿಸುವುದೆಲ್ಲ ಖಾದಿ ಬಟ್ಟೆಯದಾಗಿರಲಿ ಎಂಬುದು ನನ್ನ ಆಗ್ರಹವಲ್ಲ. ಆದರೆ ನಿಮ್ಮ ಬೀರುವಿನಲ್ಲಿರುವ ಹಲವು ಉಡುಪುಗಳಲ್ಲಿ ಖಾದಿಯದೂ ಕೆಲವಿರಲಿ ಎಂಬುದೇ ನನ್ನ ಆಶಯ. ಹಿಂದೂಸ್ತಾನದ ಪ್ರತಿಯೊಂದು ಮನೆಯಲ್ಲಿ ಖಾದಿಯದು ಏನಾದರೂ ಇದೆಯೆಂದಾದರೆ ನಾವು ಆಗಾಗ ಸ್ವಲ್ಪವಲ್ಲ ಸ್ವಲ್ಪ ಖಾದಿ ಕೊಳ್ಳುತ್ತೇವೆಂದಾದರೆ ಬಡವರ ಮನೆಯಲ್ಲಿ ದೀಪಾವಳಿಯ ದೀಪಗಳು ಹತ್ತಿಕೊಳ್ಳುತ್ತವೆ. ಜೀವನದಲ್ಲಿ ಇದಕ್ಕಿಂತ ದೊಡ್ಡ ಸಂತೋಷವೇನಿದೆ?
ಈ ದಿನ ಆ ಎಲ್ಲ ಕುಟುಂಬಗಳ ಮಾತೆಯರು ಮತ್ತು ಸಹೋದರಿಯರ ಆಶೀರ್ವಾದ ಪಡೆಯುವ ಅವಕಾಶ ನನಗೆ ಸಿಕ್ಕಿದೆ. ಇವತ್ತು ಇನ್ನೊಂದು ಮಹತ್ವ ಪೂರ್ಣ ಕೆಲಸ ಈ ಪಂಜಾಬಿನ ನೆಲದಿಂದ ಆಗುತ್ತಿದೆ. ಈ ದಿನ ನಾನು ಪಂಜಾಬಿನ ನೆಲಕ್ಕೆ ಹೇಳ ಬಯಸುತ್ತೇನೆ ಅದಕ್ಕೂ ತನ್ನದೇ ಮಹತ್ವವೂ ಇದೆ. ಈ ಹೊತ್ತು ನಾವು ಗುರುಗೋವಿಂದ ಸಿಂಗ್ ಇವರ 350ನೆಯ ಜಯಂತಿ ಸಮಾರಂಭಗಳನ್ನು ಆಚರಿಸುತ್ತಿದ್ದೇವೆ; ಇವತ್ತು ನಾನು ಪಂಜಾಬಿನ ನೆಲದ ಮೇಲೆ ಕಾಲಿಡುತ್ತಿರುವಾಗ ಗುರುಗೋವಿಂದ ಸಿಂಗರ ಪುಣ್ಯ ಸ್ಮರಣೆ ಮಾಡುತ್ತಾ ನನಗೆ ಹೇಳಲಾಯಿತು ಮತ್ತು ನಾನದನ್ನು ಉಲ್ಲೇಖಿಸುತ್ತೇನೆ: ಗುರುಗೋವಿಂದ ಸಿಂಗ್ ಅವರು ಹೇಳಿದ್ದರು, – “मानस की जात सबई, एक पहचान वो’ “. ಮನುಷ್ಯ ಜಾತಿ ಎಲ್ಲ ಒಂದೇ; ಅದರಲ್ಲಿ ಮೇಲಿನವರು, ಕೆಳಗಿನವರು ಏನಿಲ್ಲ; ಕೆಲವರು ಸ್ಪೃಶ್ಯರು, ಕೆಲವರು ಅಸ್ಪೃಶ್ಯರು ಹೀಗೂ ಏನಿಲ್ಲ; ಗುರುಗೋವಿಂದ ಸಿಂಗರು ಆ ಕಾಲ ಘಟ್ಟದಲ್ಲಿ ಜಾತಿ-ಗೀತಿ, ಸ್ಪೃಶ್ಯಾಸ್ಪೃಶ್ಯತೆ ಇಂತಹವುಗಳ ವಿರುದ್ಧ ದನಿ ಎತ್ತಿದ್ದರು. ಆದರೆ ನಮಗೆಲ್ಲ ಗೊತ್ತಿದೆ ಈಗಲೂ ಸಮಾಜದಲ್ಲಿ ಇಂತಹ ವಿಕೃತಿಗಳೆಲ್ಲ ಉಳಿದಿವೆ; ನಮ್ಮ ದಲಿತ ಬಂಧುಗಳ ಜೊತೆ ಅಂತಹ ಘಟನೆಗಳು ಕೇಳಿ ಬಂದಾಗ ನಾವೆಲ್ಲ ತಲೆ ತಗ್ಗಿಸುವಂತಾಗುತ್ತದೆ. ಸ್ವಾತಂತ್ರ್ಯ ಬಂದು 70 ವರ್ಷಗಳಾಗಿವೆ, ನಾವು ಇನ್ನು ಕಾಯಲು ಸಾಧ್ಯವಿಲ್ಲ. ನಾವು ಸರಿಯಾದ ದಿಕ್ಕಿನ ಕಡೆಗೆ ಪ್ರವಾಹದ ಹರಿವನ್ನು ಮತ್ತಷ್ಟು ಹೆಚ್ಚಿಸ ಬೇಕಾಗಿದೆ. ನಮ್ಮ ಕಾರ್ಯದ ವ್ಯಾಪ್ತಿಯನ್ನು ಬದಲಿಸ ಬೇಕಾಗಿದೆ, ಅದನ್ನು ವಿಸ್ತರಿಸಬೇಕಾಗಿದೆ. ಆದಿವಾಸೀ ಸೋದರ-ಸೋದರಿಯರಾಗಿರಲಿ, ದಲಿತ ಸೋದರ-ಸೋದರಿಯರಾಗಿರಲಿ, ಅವರ ಆಕಾಂಕ್ಷೆಗಳು ಬೇರೆಯವರ ಆಕಾಂಕ್ಷೆಗಳಿಗಿಂತಲೂ ದೊಡ್ಡದಾಗಿ ಅವರ ಆಂತರ್ಯದಲ್ಲಿ ಇವೆ. ಅವರಿಗೆ ಸೂಕ್ತ ಅವಕಾಶಗಳು ಸಿಕ್ಕಲ್ಲಿ ಭಾರತದ ಭಾಗ್ಯ ಬದಲಾಯಿಸುವುದರಲ್ಲಿ ಅವರು ನಮಗಿಂತ ಹಿಂದೆ ಉಳಿಯುವವರಲ್ಲ; ಅವರು ಇನ್ನಷ್ಟು ಹೆಚ್ಚು ಕೊಡುಗೆಗಳನ್ನು ನೀಡಬಲ್ಲರು. ನಮ್ಮ ದೇಶದಲ್ಲಿ ನಮ್ಮ ಮಿಲಿಂದಜೀಯವರು ದಲಿತ ಸಮಾಜಕ್ಕೆ ಸೇರಿದವರು, ಅವರು ತಾವೇ ಉದ್ಯೋಗದಾತರು. ಅವರು ಇಡೀ ದೇಶದಲ್ಲಿ ಒಂದು ಸಂಘಟನೆಯನ್ನು ಕಟ್ಟಿ ನಿಲ್ಲಿಸಿದ್ದಾರೆ. ದಲಿತ ಉದ್ಯಮಿಗಳನ್ನೊಳಗೊಂಡ ದಲಿತ್ ಚೇಂಬರ್ ಆಫ್ ಕಾಮರ್ಸ್ ಎಂಬುದನ್ನು ಪ್ರಾಂಭಿಸಿದ್ದಾರೆ. ಅವರ ಸಮಾರಂಭದಲ್ಲಿ ಭಾಗವಹಿಸುವ ಒಂದು ಸದವಕಾಶ ನನಗೆ ಸಿಕ್ಕಿತು, ಹಿಂದೂಸ್ತಾನದಲ್ಲಿ ವಾರ್ಷಿಕ 500ಕೋಟಿ ರೂಪಾಯಿಗಳಿಗಿಂತ ಹೆಚ್ಚು ವ್ಯವಹಾರ ಮಾಡುವ 1000ಕ್ಕೂ ಹೆಚ್ಚು ಜನರಿರುವ ಸಭೆಗೆ ಹೋಗುವ ಅವಕಾಶ ಅದಾಗಿತ್ತು. ಅಲ್ಲಿ ನನಗೆ ಹಲವು ಜನ ದಲಿತ ಕುಟುಂಬಗಳ ಮಾತೆಯರು ಮತ್ತು ಸಹೋದರಿಯರಿದ್ದು ಅವರನ್ನು ನಾನು ಭೇಟಿಯಾಗಿರುವೆ. ಅವರಲ್ಲಿ ಹಲವರು ದಲಿತ ಕುಟುಂಬಗಳಿಂದ ಬಂದ ಮಹಿಳಾ ಉದ್ಯಮಿಗಳಾಗಿದ್ದರು. ಅವರು ಹೇಳಿದರು ತಾವು ಕೂಡ 300ಕ್ಕಿಂತ ಹೆಚ್ಚು ದಲಿತಮಹಿಳೆಯರು ಸೇರಿ ದಲಿತ ಮಹಿಳಾ ಉದ್ಯಮೀ ಸಂಘಟನೆಯೊಂದನ್ನು ಕಟ್ಟಿ ನಿಲ್ಲಿಸಿದ್ದಾಗಿ ಮತ್ತು ಇವರೆಲ್ಲ 100 ಕೋಟಿ ರೂಪಾಯಿಗಳಿಗೂ ಹೆಚ್ಚು ವ್ಯವಹಾರ ಮಾಡುತ್ತಿದ್ದಾರೆಂದು. ಅವರನ್ನು ನಾನು ಭೇಟಿಯಾದಾಗ ಇವರಿಗೆ ಶಕ್ತಿ ತುಂಬುವಂತಹದ್ದು ಆವಶ್ಯಕವೆಂದು ನನಗನಿಸಿತ್ತು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಈ ಉದ್ಯಮಿಗಳೇನಿದ್ದಾರೆ ಅವರಿಗೆ ಪ್ರೋತ್ಸಾಹ ನೀಡುವುದು ಅಗತ್ಯ. ಆದ್ದರಿಂದಲೇ ನಾವು ಹಿಂದಿನ ಬಜೆಟ್ಟಿನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಉದ್ಯಮಿಗಳ ಒಂದು ‘ಹಬ್’ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದೆವು; ಈ ದಿನ ಲೂಧಿಯಾನಾದ ಈ ನೆಲದಿಂದ ಇಡೀ ದೇಶಕ್ಕೆ ಅನ್ವಯವಾಗುವಂತೆ ಈ ಯೋಜನೆಯ ಶುಭಾರಂಭವನ್ನು ಮಾಡುತ್ತಿದ್ದೇವೆ. ಇದರಿಂದ ನನ್ನ ದಲಿತ ಸಹೋದರ-ಸಹೋದರಿಯರು, ನೌಕರಿ ಗಿಟ್ಟಿಸಲು ಸಾಲಿನಲ್ಲಿ ನಿಲ್ಲ ಬಯಸದ ಆದಿವಾಸಿ ಬಂಧು ಬಾಂಧವರು ಮತ್ತು ಇತರರಿಗೆ ನೌಕರಿ ಕೊಡಲು ಸಮರ್ಥರಾಗುವಂತಹ ಬದುಕು ಕಟ್ಟಿಕೊಳ್ಳ ಬಯಸುವವರು; ಯಾರಿಗೆ ಇಂತಹ ಆಶೆಯೋ, ಕನಸೋ ಅವರಿಗಾಗಿ ನಾನು ಒಂದಷ್ಟು ಕೆಲಸ ಮಾಡಲು ಇಷ್ಟ ಪಡುತ್ತೇನೆ.
‘ಸ್ಟಾರ್ಟ್ -ಅಪ್ ಇಂಡಿಯಾ , ಸ್ಟಾಂಡ್ -ಅಪ್ ಇಂಡಿಯಾ ’, ಈ ಕಾರ್ಯಕ್ರಮಗಳಲ್ಲಿ ತೊಡಗುವ ಒಬ್ಬ ಮಹಿಳೆಗೆ, ಒಬ್ಬ ಪರಿಶಿಷ್ಟ ಜಾತಿಯ ಉದ್ಯಮಿಗೆ ಮತ್ತು ಒಬ್ಬ ಪರಿಶಿಷ್ಟ ಪಂಗಡದವರಿಗೆ ತಲಾ ಒಂದು ಕೋಟಿ ರೂಪಾಯಿಗಳ ಮೊತ್ತದ ಸಾಲವನ್ನು ನೀಡಬೇಕೆಂದು ಬ್ಯಾಂಕುಗಳಿಗೆ ಹೇಳಿದ್ದೇವೆ; ಹಿಂದೂಸ್ತಾನದಲ್ಲಿರುವ ಒಂದೂ ಕಾಲು ಲಕ್ಷ ರಾಷ್ಟ್ರೀಕೃತ ಬ್ಯಾಂಕುಗಳ ಬ್ಯಾಂಕ್ ಶಾಖೆಗಳಿಗೆ, ಇದನ್ನು ತಿಳಿಸಲಾಗಿದೆ – ಇತರ ಸಹಕಾರೀ ಬ್ಯಾಂಕುಗಳು ಇತ್ಯಾದಿಗಳು ಬೇರೆಯೇ. ಹೀಗೆ ಅವರುಗಳು ಉದ್ಯಮಿಗಳಾಗಿ ಬೆಳೆಯುವುದಕ್ಕೆ ಸಹಾಯವಾಗುತ್ತದೆ. ನೋಡ ನೋಡುತ್ತಿದ್ದಂತೆಯೇ ಒಂದೂಕಾಲು ಲಕ್ಷ ಬ್ಯಾಂಕ್-ಶಾಖೆಗಳು ಮೂರೂಮುಕ್ಕಾಲು ಲಕ್ಷ ಇಂತಹ ಉದ್ಯಮಿಗಳನ್ನು ಹುಟ್ಟುಹಾಕಬಹುದು. ಎಷ್ಟು ದೊಡ್ಡ ಕ್ರಾಂತಿಕಾರೀ ಹೆಜ್ಜೆ ಇದಾಗಲು ಸಾಧ್ಯ! ನಮ್ಮ ದಲಿತ ಸಹೋದರ-ಸಹೋದರಿಯರು ತಯಾರಿಸುವ ವಸ್ತುಗಳನ್ನು ಭಾರತ ಸರಕಾರ ಕೊಂಡುಕೊಳ್ಳುತ್ತದೆ; ನಾವು ರಾಜ್ಯ ಸರಕಾರಗಳಿಗೂ ಹೇಳಿದ್ದೇವೆ . ಅವರೂ ಕೂಡ ದಲಿತ ಮತ್ತು ಆದಿವಾಸೀ ಉದ್ಯಮಿಗಳು ತಯಾರಿಸಿದ ವಸ್ತುಗಳನ್ನು ಶೇ.4ರಷ್ಟು ಅವರಲ್ಲಿಂದ ಕೊಳ್ಳಲು; ಇದರಿಂದ ಅವರಿಗೆ ಒಂದು ಸ್ವಾಭಾವಿಕ ಮಾರುಕಟ್ಟೆ ಲಭಿಸಿದಂತಾಗುತ್ತದೆ ಮತ್ತು ಅವರ ಆತ್ಮವಿಶ್ವಾಸ ಹಸಿರಾಗಿರುವಂತಾಗುತ್ತದೆ. ಸಮಾಜದ ಆ ವರ್ಗಗಳನ್ನು ರಾಷ್ಟ್ರದ ಆರ್ಥಿಕ ವ್ಯವಹಾರಗಳ ಕೇಂದ್ರಕ್ಕೆ ತರಲು, ಮತ್ತು ದೇಶವನ್ನು ಆರ್ಥಿಕವಾಗಿ ಹೊಸ ಎತ್ತರಕ್ಕೆ ತಲುಪುವಂತೆ ಮಾಡಲು ಇದು ಅಗತ್ಯ; ಈ ದಿಕ್ಕಿನಲ್ಲಿ ಪ್ರಯತ್ನಿಸುತ್ತಾ ಇವರಿಗೆ ಬೆಂಬಲವಾಗಿ ನಿಂತಿದ್ದೇವೆ.
ಈ ದಿನ ಇಲ್ಲಿ ಇನ್ನೊಂದು ಯೋಜನೆಯನ್ನೂ ಪ್ರಾರಂಭಿಸಲಾಗಿದೆ – ” ZED,” – ‘ಜೀರೋ ಎಫೆಕ್ಟ್ ಜೀರೋ ಡೆಫೆಕ್ಟ್ ’. ತಾವೆಲ್ಲ ಈಗ ನಿಚ್ಚಳವಾಗಿ ತಿಳಿದಿರುವಂತೆ ವಸ್ತು ಗಳನ್ನು ಕೊಳ್ಳುವ ಸಾಮಾನ್ಯ ವ್ಯಕ್ತಿ ಕೂಡ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧನಿಲ್ಲ. ಮೊದಲು ನಾವು ಭಾರತದ ಆಂತರಿಕ ಮಾರುಕಟ್ಟೆಯನ್ನಷ್ಟೇ ನೋಡುತ್ತಿದ್ದೆವು ಮತ್ತು ಈ ವಸ್ತುಗಳನ್ನು ಓದಿ ಬರೆದು ಹೊಸ ಜೀವನ ಶೈಲಿ ಅಳವಡಿಸಿಕೊಂಡ ಪಟ್ಟಣ ಪ್ರದೇಶದ ವ್ಯಕ್ತಿಗಳು ಕೊಂಡುಕೊಳ್ಳುವರೆಂದು ನಾವು ಯೋಚಿಸುತ್ತಿದ್ದೆವು; ಕೆಲವುಗಳ ಫಿನಿಶಿಂಗ್ ಸ್ವಲ್ಪ ಸರಿಯಾಗಿರುವಂತೆ ಕಾಣುತ್ತಿರಲಿಲ್ಲ. ಇವುಗಳನ್ನು ಎರಡು ಮತ್ತು ಮೂರನೇ ಹಂತದ ಪಟ್ಟಣ ಪ್ರದೇಶಗಳಲ್ಲಿ ಮಾರೋಣ; ಇನ್ನು ಮಾಮೂಲಿಯಾಗಿ ಕಾಣುವ ಇತರ ವಸ್ತುಗಳನ್ನು ಹಳ್ಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡೋಣ, ಅಲ್ಲಿ ಅವು ಮಾರಾಟವಾಗುವುವು – ಹೀಗೆ ನಾವು ಹೆಚ್ಚಾಗಿ ಭಾರತದ್ದೇ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಚಿಸುತ್ತಿದ್ದೆವು; ಮತ್ತೆ ಭಾರತವೂ ಇಷ್ಟು ದೊಡ್ಡ ದೇಶ, ಇಲ್ಲಿ ಯಾವುದೇ ಉತ್ಪನ್ನ ಮಾರಾಟವಾಗದೆ ಉಳಿದುಬಿಡುವುದಿಲ್ಲ; ಉಡುಪೊಂದನ್ನು ತಯಾರು ಮಾಡುತ್ತೀರೆನ್ನಿ, ಪ್ರಥಮ ಗುಣ ಮಟ್ಟದ್ದು ದೊಡ್ಡ ನಗರಗಳಿಗೆ ಹೋಗುತ್ತದೆ, ಸ್ವಲ್ಪ ಕಡಿಮೆ ಗುಣ ಮಟ್ಟದ್ದು, ಸರಿ, ಹಳ್ಳಿಗಳಿಗೆ ಹೋಗಿ ಅಲ್ಲಿಯ ಸಂತೆಯಲ್ಲಿಟ್ಟು ಮಾರೋಣ, ನಡೆದು ಹೋಗುತ್ತದೆ [ಇದು ನಮ್ಮ ಕಾರ್ಯಾಚರಣಾ ವಿಧಾನ]. ಆದರೆ ಈಗ ಹೀಗಲ್ಲ. ಯೋಚಿಸುವ ರೀತಿ ಬದಲಾಗುತ್ತಿದೆ. ಅದಕ್ಕಿಂತ ದೊಡ್ಡ ಮಾತೆಂದರೆ, ಹಿಂದೂಸ್ತಾನದ ಸಣ್ಣ ಕೈಗಾರಿಕೋದ್ಯಮಿ ಮತ್ತು ಹಿಂದೂಸ್ತಾನದ ಸೂಕ್ಷ್ಮ ಕೈಗಾರಿಕೋದ್ಯಮಿ ಭಾರತದ ಮಾರುಕಟ್ಟೆಯನ್ನಷ್ಟೇ ಮನಸ್ಸಿನಲ್ಲಿಟ್ಟುಕೊಂಡು ತನ್ನ ವ್ಯವಹಾರವನ್ನು ನಡೆಸುತ್ತಾನೆಯೇ. ದೇಶಕ್ಕೆ ಉತ್ತಮವಾಗಿ ಸೇವೆಯನ್ನು ಸಲ್ಲಿಸಬೇಕೆಂದರೆ ನಮ್ಮೆಲ್ಲರ ದೃಷ್ಟಿ ವಿಶ್ವ ಮಟ್ಟದ ಗುಣಮಟ್ಟವನ್ನು ಕಾಯ್ದುಕೊಳ್ಳುವುದರತ್ತ ಇರಬೇಕಾಗುತ್ತದೆ. ಅದನ್ನು ನಾವು ಅಳವಡಿಸಿಕೊಳ್ಳಬೇಕು. ವಿಶ್ವ ಮಾರುಕಟ್ಟೆಯಲ್ಲಿ ಕಾಲೂರಲು ನಮ್ಮ ಅಸ್ಮಿತೆಯನ್ನು ಸ್ಥಾಪಿಸುವ ಪ್ರಯತ್ನವನ್ನು ಮಾಡಬೇಕು.
ಎರಡನೆಯ ಮಹಾ ಯುದ್ಧದನಂತರ ಜಪಾನ್ ನಾಶವಾಗಿ ಹೋಗಿತ್ತು. ಜಪಾನ್ ಮತ್ತೆ ಎದ್ದು ನಿಲ್ಲುತ್ತದೆ ಎಂದು ಯಾರೂ ಕಲ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ ಅವರ ಸಣ್ಣ ಸಣ್ಣ ಕೈಗಾರಿಕೋದ್ಯಮಗಳು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ತಯಾರಿಕಾ ಕ್ಷೇತ್ರದಲ್ಲಿ ಬಲವಾದ ಹೆಜ್ಜೆಯನ್ನು ಇಟ್ಟರು. ನಮಗೆಲ್ಲ ಗೊತ್ತಿರುವಂತೆ, ಈಗ್ಗೆ ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಪೇಟೆಯಲ್ಲಿ ಯಾವುದಾದರೂ ವಸ್ತುವನ್ನು ಖರೀದಿಸಲು ಹೋದರೆ ಆಗ ಆ ವಸ್ತುವಿನ ಮೇಲೆ ಮೇಡ್ ಇನ್ ಜಪಾನ್ ಎಂದು ಬರೆದಿದ್ದರೆ, ಯಾವ ಕಂಪೆನಿಯದು ಎಂದು ನಾವೆಂದೂ ಕೇಳುತ್ತಿರಲಿಲ್ಲ, ಬೆಲೆ ಕೇಳುತ್ತಿದ್ದೆವು, ಖರೀದಿಸಿ ತೆಗೆದುಕೊಂಡು ಹೋಗಿ ಬಿಡುತ್ತಿದ್ದೆವು; ಏಕೆಂದರೆ ಗುಣಮಟ್ಟದಲ್ಲಿ ಯಾವುದೇ ಗಡಿಬಿಡಿ ಇರುವುದಿಲ್ಲವೆಂದು ನಮಗಷ್ಟು ಭರವಸೆ. ಅದೇ ತರಹ ಹಿಂದೂಸ್ತಾನದ ಅಸ್ಮಿತೆಯನ್ನು ಕೂಡ ನಾವು ಬೆಳೆಸಲಾರೆವೆ? ವಿಶ್ವದ ಯಾವುದೇ ಮಾರುಕಟ್ಟೆಯಲ್ಲಿ ಮೇಕ್ ಇನ್ ಇಂಡಿಯಾ ಎಂದು ನೋಡಿದ ಕೂಡಲೇ ಕಣ್ಣು ಮುಚ್ಚಿ ಇದು ಒಳ್ಳೆಯದೇ ಇರುತ್ತದೆ, ಚೆನ್ನಾಗಿ ಇರುತ್ತದೆ, ಬೆಲೆ ಅಗ್ಗವೇ ಆಗಿರಬಹುದು ಎಂದು ಕೊಳ್ಳಲು ಜನರು ತಯಾರಾಗಲಾರರೆ? ಇಂತಹ ಕನಸಿಟ್ಟುಕೊಂಡು ನಾವು ಮುಂದಡಿ ಇಡಬೇಕು, ಕನಸನ್ನು ನನಸಾಗಿಸಬೇಕು, ಜೀರೋ ಡೆಫೆಕ್ಟ್ ಅದರ ಪೂರ್ವ ಷರತ್ತಾಗಿದೆ . ಅದರಲ್ಲಿ ಅತಿ ಸಣ್ಣ ಕೊರತೆಯೂ ತುಂಬ ನಷ್ಟವನ್ನು ತಂದೊಡ್ಡ ಬಲ್ಲುದು. ಒಬ್ಬ ನಾವಿಕ ಒಂದು ದೋಣಿಯನ್ನು ತೆಗೆದುಕೊಂಡು ಹೋಗಬೇಕಾಗಿದೆಯೆನ್ನಿ, ಅವನು ನದಿಯಲ್ಲಿ ಅಥವ ಸಮುದ್ರದಲ್ಲಿ ಇದು ಯಾವ ರೀತಿ ಹೋಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ನೋಡುತ್ತಾನೆ; ಅತಿಸಣ್ಣ ಬಿರುಕಾದರೂ ಎಲ್ಲಿಯಾದರೂ ಇದೆಯೇ ಎಂಬುದನ್ನು ಸ್ವಲ್ಪವೂ ಬಿಡದೆ ನೋಡುತ್ತಾನೆ.
ಯಾರಾದರೂ ಅವನಿಗೆ ಇದು ಇಷ್ಟು ದೊಡ್ಡ ದೋಣಿ ಯಾವುದೋ ಒಂದು ಮೂಲೆಯಲ್ಲಿ ಎಲ್ಲಿಯೋ ಒಂದು ಸಣ್ಣ ರಂಧ್ರವಿದ್ದರೇನಂತೆ ನೀನು ಹೊರಡು ಎಂದು ಹೇಳಿದರೆ ಅವನು ಕೇಳುವುದಿಲ್ಲ; ಅವನು ದೋಣಿಯಲ್ಲಿ ಹೊರಡುವುದಿಲ್ಲ. ಆ ಸಣ್ಣ ಬಿರುಕು ಕೂಡ ತನಗೆ ಕೆಲಸ ಮುಗಿಸಿ ವಾಪಸಾಗಲು ಸಹಾಯ ಮಾಡುವುದಿಲ್ಲ, ಬದುಕು ಪೂರ್ಣವಾಗಲು ಅವಕಾಶ ನೀಡುವುದಿಲ್ಲ ಎಂಬುದು ಅವನಿಗೆ ಗೊತ್ತು. ತಯಾರಿಕಾ ಕಾರ್ಯದಲ್ಲಿ ನಿರತರಾದವರ ಮನಸ್ಸಿನಲ್ಲಿ ಸದಾ ಈ ಉದಾಹರಣೆ ಇರಬೇಕು. ಜೀರೋ ಡೆಫೆಕ್ಟ್ ಇರುವಂತೆ ತಯಾರಾದರೇನೇ ವಸ್ತುಗಳನ್ನು ಮಾರುಕಟ್ಟೆಗಳಲ್ಲಿ ದೂಡಿ ತಮ್ಮ ಶಕ್ತಿಯನ್ನು ಸ್ಥಾಪಿಸಲು ಸಾಧ್ಯ; ಆದ್ದರಿಂದ ಉತ್ತಮ ದರ್ಜೆ , ಗುಣ ಮಟ್ಟ ನಿಯಂತ್ರಣ ದ ಕಡೆಗೆ ತೀವ್ರ ಗಮನ ಕೊಡಬೇಕು ಮತ್ತು ಅದರಿಂದಲೇ ಬ್ರಾಂಡಿಂಗ್ ಉಂಟಾಗುತ್ತದೆ. ವಿಶ್ವ ಮಾರುಕಟ್ಟೆ ನಮ್ಮ ನಿರೀಕ್ಷೆಯಲ್ಲಿದೆ. ಕೆಲವರೆಂದುಕೊಳ್ಳುತ್ತಾರೆ: ಭಾಯೀ, ನಾವೋ ಸಣ್ಣ ಜನರು; ಸಣ್ಣ ಮಶೀನುಗಳನ್ನಿಟ್ಟುಕೊಂಡಿದ್ದೇನೆ; ಮೂರು ಜನ ಅಥವ ಐದು ಜನ ಮಾತ್ರ ಕೆಲಸದವರಿದ್ದಾರೆ; ಅಥವ ಹತ್ತೇ ಇದ್ದಾರೆ; ನಾವು ವಿಶ್ವ ಮಾರುಕಟ್ಟೆಯ ಲ್ಲಿ ಏನು ಮಾಡಬಲ್ಲೆವು? ಹೀಗೆ ಯೋಚಿಸಬೇಡಿ. ಇವತ್ತು ವಿಶ್ವದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ, ಉಪಗ್ರಹಗಳ ಲೋಕದಲ್ಲಿ, ಇತರ ರಾಷ್ಟ್ರಗಳು ಭಾರತದ ಗಟ್ಟಿತನವನ್ನು ಗೌರವಿಸುತ್ತಾರೆ. ನಾವು ‘ಮಾರ್ಸ್’ ಮಿಶನ್ ಹಾರಿ ಬಿಟ್ಟೆವು; ಮಂಗಲ ಯಾನದಲ್ಲಿ ನಾವು ಯಶಸ್ವಿಯಾದೆವು; ವಿಶ್ವದಲ್ಲಿ ಮೊದಲ ಪ್ರಯತ್ನದಲ್ಲೇ ಯಶಸ್ವೀ ಮಂಗಲಯಾನ ಕೈಗೊಂಡ ಪ್ರಥಮ ದೇಶವೇ ಭಾರತ. ನಮ್ಮ ನವತರುಣರ ಬುದ್ಧಿ, ಸಾಮರ್ಥ್ಯಗಳನ್ನು ನೋಡಿ. ಎಷ್ಟು ಖರ್ಚಿನಲ್ಲಿ ಆಯಿತು? ನೀವು ಲೂಧಿಯಾನಾದಲ್ಲಿ ಒಂದು ಜಾಗದಿಂದ ಇನ್ನೊಂದಕ್ಕೆ ಆಟೋರಿಕ್ಷಾದಲ್ಲಿ ಹೋಗುವುದಾದರೆ ಕಿಲೋಮೀಟರಿಗೆ 8ರಿಂದ 10 ರೂಪಾಯಿವರೆಗೆ ಆಗಬಹುದು; ನಾವು ಮಂಗಲಯಾನದ ತಯಾರಿ ಮಾಡಿದೆವು – ಒಂದು ಕಿ.ಮೀ.ಗೆ ಕೇವಲ 7 ರೂಪಾಯಿಗಳ ವೆಚ್ಚದಲ್ಲಿ. ಇಷ್ಟೇ ಅಲ್ಲ ಅಮೇರಿಕಾದಲ್ಲಿ ಹಾಲಿವುಡ್ ಸಿನೆಮಾ ಮಾಡಲು ಖರ್ಚಾಗುವ ಮೊತ್ತಕ್ಕಿಂತ, ಅದಕ್ಕಿಂತ ಕಡಿಮೆ ಖರ್ಚಿನಲ್ಲಿ , ಭಾಹ್ಯಾಕಾಶ ವಿಜ್ಞಾನಿಗಳು, ಸೈಂಟಿಸ್ಟರು, ತಂತ್ರಜ್ಞರು ಇವರೆಲ್ಲ ಸೇರಿ ಮಾರ್ಸ್ ಮಿಶನ್ನನ್ನು ಇಷ್ಟು ಕಡಿಮೆ ಖರ್ಚಿನಲ್ಲಿ ಪೂರ್ಣಗೊಳಿಸಿದರು. ಇಷ್ಟು ದೊಡ್ಡ ಯಶಸ್ಸು; ಆದರೆ ಅದರ ಇತಿಹಾಸವನ್ನು ನೋಡಿದರೆ ಆಶ್ಚರ್ಯಕರವಾಗಿ ಗಮನಕ್ಕೆ ಬರುತ್ತದೆ: ಇವತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ನಮ್ಮ ಹೆಸರು ಮೇಲಿದೆ; ಮೊದಲು ಇದನ್ನು ಕೆಲಸ ಮಾಡುತ್ತಿದ್ದ ವೈಖರಿಯನ್ನು ಬಾಹ್ಯಾಕಾಶ ಲೋಕದ ವ್ಯವಹಾರ ಎಂದು ಹೇಳಲಾಗುತ್ತಿತ್ತು; ಬೆಂಗಳೂರು ಮತ್ತು ಹಿಂದೂಸ್ತಾನದ ಬೇರೆಬೇರೆ ಪಟ್ಟಣಗಳಲ್ಲಿದ್ದ ಮೋಟಾರ್ ಗ್ಯಾರೇಜುಗಳ ಖಾಲಿ ಬಿದ್ದಿರುತ್ತಿದ್ದ ಜಾಗಗಳಲ್ಲಿ, ಅಲ್ಲಿ ಎರಡು ಮೂರು ಜನರು ಸೇರಿ ಈ ಆಕಾಶ ಕಾಯದ ಭಾಗಗಳನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದರು; ನೀವೇನಾದರೂ ಪ್ರಾರಂಭದ ದಿನಗಳ ಆ ಒಂದು ಫೋಟೋ ನೋಡಿದ್ದರೆ – ಇಬ್ಬರು ಸೈಕಲ್ ಮೇಲೆ ಸ್ಯಾಟಲೈಟಿನ ಒಂದು ಭಾಗವನ್ನು ಅದಕ್ಕೆ ಸೈಕಲ್ಲಿಗೆ ಕಟ್ಟಿಕೊಂಡು ಸೈಕಲ್ ತುಳಿದುಕೊಂಡು ಬರುತ್ತಿದ್ದರು, ಇದು ಅನಂತರ ಆಕಾಶದಲ್ಲಿ ಹಾರುವಂತಹದಾಗಿ ಇರುತ್ತಿತ್ತು. ಯಾರ ಕಲ್ಪನೆಗಾದರೂ ನಿಲುಕುತ್ತದೆಯೇ? ಸೈಕ್ಲಲಿನ ಮೇಲೆ ಸ್ಯಾಟೆಲೈಟಿನ ಭಾಗಳನ್ನು ಸಾಗಿಸುವ ಈ ದೇಶ ವಿಶ್ವದಲ್ಲಿ ಮುಂದೆ ತನ್ನ ಗಟ್ಟಿತನದಿಂದ ಗುರುತಿಸಲ್ಪಡುತ್ತದೆ ಎಂದು ಯಾರು ಅಂದುಕೊಂಡಿದ್ದರು. ಸಣ್ಣ ಕೈಗಾರೀಕೋದ್ಯಮಿಗಳಿಗೆ ಅವರ ಮನಸ್ಸಿನಲ್ಲಿ ಕನಸಿರಬೇಕು ಇವತ್ತು ನಮ್ಮ ಉತ್ಪನ್ನಗಳು ಸಣ್ಣದೆಂದೆನಿಸಬಹುದು ಮಾಮೂಲಿ ಎಂದೆನಿಸಬಹುದು ಆದರೆ ಇದರೊಳಗೆ ಉನ್ನತ ಮಟ್ಟಕ್ಕೆ ಏರುವ ಒಂದು ಇನ್ -ಬಿಲ್ಟ್ ಸಾಮರ್ಥ್ಯ ಹುದುಗಿಕೊಂಡಿದೆ; ಇದರ ಅರಿವಿನೊಂದಿಗೆ ನಾವು ಕೆಲಸ ಮಾಡುತ್ತಾ ಸಾಗಿದರೆ ನಾವು ಆ ಎತ್ತರವನ್ನು ದಾಟುವುದು ಸಾಧ್ಯವಾಗುತ್ತದೆ. ಆದ್ದರಿಂದಲೇ ಇಂತಹ ಕನಸುಗಳನ್ನು ಇಟ್ಟುಕೊಂಡು ಮುಂದುವರೆಯಬೇಕು.
ಕಾಲ ಬದಲಾಗಿ ಹೋಗಿದೆ. ಉತ್ಪನ್ನಕ್ಕೆ ಎಷ್ಟು ಮಹತ್ವವಿದೆಯೋ ಅದಕ್ಕಿಂತ ಹೆಚ್ಚು ಮಹತ್ವ ಪ್ಯಾಕಿಂಗಿನದಾಗಿದೆ ಎಂದು ಕೆಲವೊಮ್ಮೆ ಅನಿಸಿ ಬಿಡುತ್ತದೆ. ಕೆಲವು ಸಲ ನಮ್ಮ ಉತ್ಪನ್ನ ಅಮೂಲ್ಯವಾದುದಾಗಿರುತ್ತದೆ ಆದರೆ
ಪ್ಯಾ ಕೇಜಿಂಗಿನಲ್ಲಿ ಜಿಪುಣತನ ಮಾಡಿ ನಾವು ಸೋಲುತ್ತೇವೆ. ಪಂಡಿತ್ ನೆಹ್ರೂ ಅವರ ಸರಕಾರವಿದ್ದಾಗ
ಆಯುರ್ವೇದವನ್ನು ಪುನರುಜ್ಜೀವನ ಮಾಡಲಿಕ್ಕಾಗಿ ಒಂದು ಆಯೋಗವನ್ನು ರಚಿಸಲಾಗಿತ್ತು ಮತ್ತು ಆದರ ಕೆಲಸ ನಮ್ಮ ಪಾರಂಪರಿಕ ವೈದ್ಯ ಪದ್ಧತಿಯಾದ ಆಯುರ್ವೇದ ಲುಪ್ತವಾಗುತ್ತಾ ಹೋಗುತ್ತಿದೆ ಅದನ್ನು ಪುನರುಜ್ಜೀವಿತಗೊಳಿಸುವುದು ಹೇಗೆ, ಅದನ್ನು ಜನಪ್ರಿಯ ಗೊಳಿಸುವುದು ಹೇಗೆ, ಇದನ್ನೆಲ್ಲ ಪರಿಶೀಲಿಸಲು ಹಾಥಿ ಕಮಿಶನ್ ರಚಿಸಲಾಗಿತ್ತು. ಅಧ್ಯಕ್ಷರು ಜಯಸುಖಲಾಲ್ ಹಾಥಿ ಎಂಬುವರಿದ್ದರು. ಅವರು ತಮ್ಮ ವರದಿಯನ್ನು ಕೊಟ್ಟರು. ಆ ವರದಿ ಇಂದಿಗೂ ಅಭ್ಯಾಸ ಯೋಗ್ಯವಾಗಿದೆ. ಅದರ ಮೊದಲ ಪುಟದಲ್ಲಿಯೇ ಬಹಳ ಮಹತ್ವಪೂರ್ಣವಾದ ಮಾತಿದೆ: ಆಯುರ್ವೇದಕ್ಕೆ ಪ್ರೋತ್ಸಾಹ ನೀಡಬೇಕೆಂದಾದರೆ ಮೊತ್ತಮೊದಲು ಪ್ಯಾಕೇಜಿಂಗ್ ಬಗ್ಗೆ ಗಮನ ವಹಿಸಬೇಕು. ಆಯುರ್ವೇದ ವೈದ್ಯರುಗಳು ಕಾಗದದ ಪೊಟ್ಟಣ ಕಟ್ಟಿ ಔಷಧ ಕೊಡುವ ಪದ್ಧತಿ ಬಹಳ ದಿನ ನಡೆಯುವಂತಹುದಲ್ಲ. ಅವುಗಳ ಪ್ಯಾಕೇಜಿಂಗನ್ನು ಬದಲಿಸಬೇಕು. ಆಗ ಆಯುರ್ವೇದ ಔಷಧಗಳು ಮಾರಾಟವಾಗಲು ಶುರುವಾಗುತ್ತವೆ. ಇದು ಅವರ ಮೊದಲ ಶಿಫಾರಸ್ಸು . ನಾನು 60ರ ದಶಕದ ಮಾತು ಹೇಳುತ್ತಿದ್ದೇನೆ . ಇವತ್ತಂತೂ ತಾವೆಲ್ಲರೂ ನೋಡುತ್ತಿದ್ದೀರಿ ಪ್ಯಾಕೇಜಿಂಗಿನ ಮಹಾತ್ಮೆ ಎಷ್ಟು ದೊಡ್ಡದು ಎಂಬುದನ್ನು. ನಾವೂ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವುದರ ಜೊತೆಗೆ ಪ್ಯಾಕೇಜಿಂಗಿಗೂ ಮಹತ್ವ ನೀಡುವುದು ಅಗತ್ಯ ಮತ್ತೆ ಮೇಲಿನ ಬರಹಗಳು: ಯಾವ ದೇಶದಲ್ಲಿ ಜನರಿಗೆ ಇಂಗ್ಲಷ್ ಗೊತ್ತಿಲ್ಲವೋ ಅಲ್ಲಿಗೆ ಪ್ಯಾಕಿನ ಮೇಲೆ ಇಂಗ್ಲಿಷಿನಲ್ಲಿ ಬರೆದು ಕಳುಹಿಸಿದರೆ ಅದು ಅಲ್ಲಿ ಹೇಗೆ ತಾನೆ ಮಾರಾಟವಾಗುತ್ತದೆ. ನೀವು ಪ್ಯಾಕಿನ ಮೇಲಿನ ಬರೆವಣಿಗೆಯನ್ನು ಅವರ ಭಾಷೆಯಲ್ಲಿ ಮುದ್ರಿಸಿರಬೇಕು. ಆದ್ದರಿಂದಲೇ ಎಲ್ಲದರಲ್ಲೂ ಜೀರೋ ಡೆಫೆಕ್ಟ್ . ಈ ದಿನಗಳಲ್ಲಿ “ZED” ಯೋಜನೆಯಡಿ ದೊಡ್ಡ ಸ್ಪರ್ಧೆಯೊಂದರ ಕಲ್ಪನೆ ಇದೆ. ಕಂಚಿನಿಂದ ಹಿಡಿದು ಪ್ಲಾಟಿನಂ ವರೆಗೆ ಐದು ಬೇರೆಬೇರೆ ಪದರುಗಳ ಬಹುಮಾನಗಳನ್ನು ನೀಡಲಾಗುತ್ತದೆ ಮತ್ತು ಬಹು ಮೌಲ್ಯದ ಸುಂದರ ಬಹುಮಾನಗಳನ್ನು ನೀಡುತ್ತಾರೆ. ಯಾರೂ ಸೀದಾ ಪ್ಲಾಟಿನಂ ಗೆಲ್ಲಲು ಸಾಧ್ಯವಿಲ್ಲ. ಅವರು ಕೆಳಸ್ತರದಿಂದ ಐದನೆಯ ಪದರಿನವರೆಗೆ ಒಂದೊಂದೇ ಗೆಲ್ಲುತ್ತಾ ಹೋಗಬೇಕು ಮತ್ತು ಕೊನೆಯಲ್ಲಿ ಈ ವಿಶೇಷ ಗೌರವಕ್ಕೆ ಪಾತ್ರರಾಗುತ್ತಾರೆ. ಈ ಮಾನ್ಯತೆಯ ನಂತರ ವಿಶ್ವ ಮಾರುಕಟ್ಟೆಯಲ್ಲಿ ಅವರ ಒಂದು ಅಸ್ಮಿತೆ ಸ್ಥಾಪಿತವಾಗುತ್ತದೆ. ಇದು ನಮ್ಮ ಪ್ರಯತ್ನ. ಕೈಗಾರಿಕೋದ್ಯಮಿಗಳನ್ನು ‘ಜೀರೋ ಡೆಫೆಕ್ಟ್ ಜೀರೋ ಎಫೆಕ್ಟ್ ’ ಚಳವಳಿಯಲ್ಲಿ ಭಾಗವಹಿಸಲು ನಾನು ಆಹ್ವಾನಿಸುತ್ತೇನೆ. ಕನಿಷ್ಠ ಪಕ್ಷ 10 ಲಕ್ಷ ಉದ್ಯೋಗಗಳು ಈ ಸ್ಪರ್ಧೆಯಲ್ಲಿ ಮುಂದೆ ಬರಲಿ. 50 ಪ್ಯಾರಾಮೀಟರ್ ಗಳನ್ನು ತೀರ್ಮಾನಿಸಲಾಗಿದೆ. ಈ 50 ಪ್ಯಾರಾಮೀಟರ್ಗಳನ್ನು ಪೂರೈಸಲು ತಮ್ಮನ್ನು ತಾವು ಸಜ್ಜುಗೊಳಿಸಿರಿ. ಕೊರತೆಗಳೇನಾದರೂ ಇದ್ದರೆ ಸರಿಪಡಿಸಿಕೊಳ್ಳಿ. ನೋಡಿ ಆಮೇಲೆ, ನಿಮ್ಮ ಉತ್ಪನ್ನವು ವಿಶ್ವ ಮಾರುಕಟ್ಟೆಯಲ್ಲಿ ಸ್ಥಳ ಮಾಡಿಕೊಳ್ಳಲು ಶುರು ಮಾಡುತ್ತದೆ. ಮತ್ತು ಭಾರತ ಸರಕಾರದ ಈ ಪ್ರಯತ್ನ, ಇದು ನೀಡುವ ಪ್ರಮಾಣ ಪತ್ರ ವಿಶ್ವದಲ್ಲಿ ನಿಮಗೆ ಉಪಯೋಗಕ್ಕೆ ಬರುತ್ತದೆ. ಆ ದಿಕ್ಕಿನಲ್ಲಿ ಒಂದು ಮಹತ್ವ ಪೂರ್ಣ ಹೆಜ್ಜೆಯನ್ನು ನಾವಿಂದು ಇಲ್ಲಿ ಇಟ್ಟಿದ್ದೇವೆ.
ನಾನು ಜೀರೋ ಎಫೆಕ್ಟ್ ಎಂಬ ಮಾತನ್ನು ಹೇಳುತ್ತಿರುವಾಗ ವಿಶ್ವದ ದೇಶಗಳು ಅವರೂ ತಮ್ಮದೇ ಆದ ಸ್ಪರ್ಧಾ ತಂತ್ರಗಳನ್ನು ಹೆಣೆಯುತ್ತಿರುತ್ತಾರೆ. ನಿಮ್ಮ ವಸ್ತುಗಳು ವಿಶ್ವ ಮಾರುಕಟ್ಟೆಯನ್ನು ಪ್ರವೇಶಿಸಿದರೆ ಯಾವದೋ ಒಂದು ಏನ್ ಜಿ ಓ ಅದೇ ಏಕತಾನ ಧ್ವನಿ ಎತ್ತಿ ಹೇಳುತ್ತದೆ: ಹಿಂದೂಸ್ತಾನದಿಂದ ಉತ್ತಮ ವಸ್ತುಗಳೇನೋ ಬರುತ್ತವೆ ಆದರೆ ಅವು ಪರಿಸರಕ್ಕೆ ನಷ್ಟ ಉಂಟುನಾಡುವ ವಾತಾವರಣದಲ್ಲಿ ಉತ್ಪಾದಿಸಲ್ಪಟ್ಟಿವೆ; ನಾವು ಈ ವಸ್ತುಗಳನ್ನು ಬಹಿಷ್ಕರಿಸುವುದು ಒಳ್ಳೆಯದು. ಇಷ್ಟೇ ವಿಷಯವನ್ನು ದನಿ ಎತ್ತಿ ಹೇಳಿದರೆ ಆಯಿತು, ನಿಮ್ಮ ಉತ್ಪನ್ನಗಳು ಆ ದೇಶಕ್ಕೆ ಹೋಗುವುದು ನಿಂತು ಹೋಗುತ್ತದೆ. ಇಂತಹ ಸ್ಥಿತಿಯಲ್ಲಿ ಹೀಗೆಂದುಕೊಳ್ಳಿ: ಇನ್ನು ಐದು ಹತ್ತು ವರ್ಷಗಳಲ್ಲಿ ಕೆಲವು ಜನರು ಹುಟ್ಟಿಕೊಳ್ಳುತ್ತಾರೆ ಅವರು ಭಾರತದ ವಸ್ತುಗಳನ್ನು ತಮ್ಮ ದೇಶಕ್ಕೆ ಪ್ರವೇಶಿಸಲು ನಿಷೇಧ ಹೇರಲು ಪರಿಸರದ ಹೆಸರನ್ನು ಮತ್ತು ಸಂಬಂಧೀ ವಸ್ತುಗಳನ್ನು ಬಳಸಿಕೊಳ್ಳುತ್ತಾರೆ. ನಾವು ಈಗಿನಿಂದಲೇ ಪರಿಸರಕ್ಕೆ ಹಾನಿಯಾಗದಂತೆ ವಸ್ತುಗಳನ್ನು ಉತ್ಪಾದಿಸಲು ಸಿದ್ಧತೆ ಮಾಡಿಕೊಳ್ಳೋಣ; ತಯಾರಿಕೆ ಯಿಂದಾಗಿ ಪರಿಸರದ ಮೇಲೆ ಜೀರೋ ಎಫೆಕ್ಟ್ ಆಗಲಿ, ಜೀರೋ ನೆಗೆಟಿವ್ ಎಫೆಕ್ಟ್ ಆಗಲಿ. ಇದರ ಬಗ್ಗೆ ನಾವು ಒತ್ತು ನೀಡಬೇಕು, ಮತ್ತು ಚೇಳಿನ ಕೊಂಡಿ ಕಡಿತ ನೀಡಿದವರಿಗೆ ನಾವು ಹೇಳಬೇಕು: ವಿಶ್ವ ಮಾರುಕಟ್ಟೆಗೆ ನಾವು ತಂದಿರುವ ವಸ್ತುಗಳು ಮಾನವ ಜಾತಿಯ ಭಾಗ್ಯವನ್ನೂ ಸುರಕ್ಷಿತವಾಗಿ ಇಡುತ್ತವೆ, ಭವಿಷ್ಯವನ್ನೂ ಸುರಕ್ಷಿತವಾಗಿಸುತ್ತವೆ, ಅಲ್ಲದೆ ನಿಮ್ಮ ಆವಶ್ಯಕತೆಗಳನ್ನೂ ಉತ್ತಮೋತ್ತಮವಾಗಿ ಪೂರೈಸ ಬಲ್ಲವು ಎಂದು ಸಂಪೂರ್ಣ ವಿಶ್ವಾಸದಿಂದ ಹೇಳಬೇಕು. ಆದ್ದರಿಂದ ‘ಜೀರೋ ಎಫೆಕ್ಟ್ , ಜೀರೋ ಡೆಫೆಕ್ಟ್ ’ – ಈ ಮಂತ್ರವನ್ನು ನಾವು ಮತ್ತಷ್ಟು ಮುಂದುವರೆಸಲು, ವಿಸ್ತರಿಸಲು ಇಚ್ಛಿಸುತ್ತೇವೆ.
ಭಾರತ ಸರಕಾರ ಇನ್ನೊಂದು ಮಹತ್ವಪೂರ್ಣ ನಿರ್ಣಯವನ್ನು ಕೈಗೊಂಡಿದೆ ಮತ್ತು ನೀವು ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಈ ಮೊದಲು ಭಾರತ ಸರಕಾರ ಈ ತರಹದ ಸರ್ಟಿಫಿಕೇಟುಗಳನ್ನು ಕೊಡುತ್ತಿದ್ದಾಗ ಅಥವ ಪ್ರಶಸ್ತಿಗಳನ್ನು ನೀಡುತ್ತಿದ್ದಾಗ ನೀವು ಛೇಂಬರ್ ಆಫ್ ಕಾಮರ್ಸ್-ದಲ್ಲಿ ನೇತು ಹಾಕುತ್ತಿದ್ದಿರಿ. ಯಾರಾದರೂ ಬಂದರೆ ಅವರಿಗೆ ತೋರಿಸುತ್ತಿದ್ದಿರಿ. ಆದರೆ ಈಗ ಇದರ ಗೌರವವನ್ನು ಇನ್ನೂ ವ್ಯಾಪಕಗೊಳಿಸಲು ಉದ್ದೇಶಿಸಿದ್ದೇವೆ. ನಿಮಗೆ ಈ ಪ್ರಶಸ್ತಿ ಏನು ಸಿಕ್ಕಿದೆ ಇದರ ಲೋಗೋವನ್ನು ತಮ್ಮ ಫ್ಯಾಕ್ಟರಿಯ ಕಾರ್ಮಿಕರ ಸಮವಸ್ತ್ರದ ಮೇಲೆ ಪ್ರದರ್ಶಿಸಬಹುದು ಎಂದು ಭಾರತ ಸರಕಾರ ಕಾನೂನು ರೂಪದಿಂದ ನಿಮಗೆ ಅನುಮತಿ ನೀಡುತ್ತದೆ. ನೀವು ವೃತ್ತ ಪತ್ರಿಕೆಗಳಲ್ಲಿ ಜಾಹೀರಾತು ನೀಡುವಿರಾದರೆ ಈ ಲೋಗೋವನ್ನು ಬಳಸಬಹುದು. ಏಕೆಂದರೆ ಇದು ಈಗ ನಿಮ್ಮ ಒಡೆತನಕ್ಕೆ ಸೇರಿ ಹೋಗಿದೆ. ಆದ್ದರಿಂದ ಇದರ ಜೊತೆಗೆ ನೀವು ಗೌರವ ಪಡೆದುಕೊಳ್ಳುತ್ತೀರಿ. ಮೊದಲು ಎಷ್ಟೊಂದು ನಿಯಂತ್ರಣಗಳಿದ್ದವು ಎಂದರೆ ನಿಮಗೆ ಅದರ ಉಪಯೋಗವನ್ನು ಮಾಡಿಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ನಿಯಂತ್ರಣಗಳನ್ನೆಲ್ಲ ನಾವು ಸಡಿಲಗೊಳಿಸಲು ನಿರ್ಧರಿಸಿದ್ದೇವೆ. ಈ ಕ್ರಮದಿಂದ ನಿಮಗೆ ಇದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ತಮ್ಮೆದೆ [ಸಮವಸ್ತ್ರದ]ಯಲ್ಲಿ ಪ್ರಶಸ್ತಿ-ಲೋಗೋ ಧರಿಸಿರುವುದರಿಂದ ನಿಮ್ಮ ಕಾರ್ಮಿಕರು ಹೆಮ್ಮೆಯಿಂದ ಹೇಳಿಕೊಳ್ಳಬಹುದು ತಾನು ಇಂತಹ ಪ್ರಶಸ್ತಿ ವಿಜೇತ ಕಂಪೆನಿಯಲ್ಲಿ ಕೆಲಸ ಮಾಡುವವನು ಎಂದು. ದೇಶದ ಪ್ರಗತಿಗೆ ಇಷ್ಟು ದೊಡ್ಡದಾಗಿ ಕೊಡುಗೆಗಳನ್ನು ನೀಡುತ್ತಿರುವ ಕಂಪೆನಿಗೆ ಸೇರಿದವನೆಂದು. ಅದೂ ಕೂಡ ನಿಮಗೊಂದು ಹೆಮ್ಮೆಯ ಮತ್ತು ಗೌರವದ ಅನುಭವವನ್ನು ತಂದು ಕೊಡುತ್ತದೆ. ಈ ದಿಕ್ಕಿನಲ್ಲಿ ಕೂಡ ಕೆಲಸ ಮಾಡಲು ನಾವು ಯೋಚಿಸುತ್ತಿದ್ದೇವೆ. ನಿಮ್ಮ ಮುಂದೆ ನಾನು ಇಟ್ಟಿರುವ ವಿಷಯಗಳ ರೀತಿಯ ಇನ್ನೂ ಅನೇಕ ವಿಷಯಗಳಿವೆ, ಯೋಜನೆಗಳಿವೆ. ಇಂದು ಲೂಧಿಯಾನಾದ ಈ ನೆಲದಿಂದ ಹೊಸ ಯೋಜನೆಗಳಿಗೆ ಹೊಸ ವೇಗ ದೊರಕಿದೆ. ತಯಾರಿಕಾ ವಲಯಕ್ಕೆ ನಾನು ಮತ್ತೊಮ್ಮೆ ತುಂಬ ಮಹತ್ವವಿದೆಯೆಂಬುದನ್ನು ಸ್ಪಷ್ಟಪಡಿಸುತ್ತೇನೆ.
ಸ್ಟಾರ್ಟ್ -ಅಪ್ ಗಳ ಬಗ್ಗೆ ನಾವು ಒತ್ತು ನೀಡಿದ್ದೇವೆ. ಮುದ್ರಾ ಯೋಜನೆಯ ಮೂಲಕ ದೊಡ್ಡ ರೀತಿಯಲ್ಲಿ ಬ್ಯಾಂಕುಗಳಿಂದ ಸಣ್ಣಸಣ್ಣ ವ್ಯವಹಾರಸ್ಥರಿಗಾಗಿ ಹಣ ಕೊಡುವ ಕೆಲಸವನ್ನು ಮಾಡಿದ್ದೇವೆ. ಈ ಯೋಜನೆ ಪ್ರಾರಂಭವಾಗಿ ಇನ್ನೂ ಎರಡೂವರೆ ವರ್ಷಗಳಷ್ಟೇ ಆಗಿದೆಂಬುದನ್ನು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಎರಡೂ ವರೆ ವರ್ಷಗಳಲ್ಲಿ ಸುಮಾರು ಮೂರೂವರೆ-ಮೂರು ಮುಕ್ಕಾಲು ಲಕ್ಷ ವ್ಯವಹಾರಸ್ಥರಿಗೆ ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಯಾವುದೇ ಗ್ಯಾರೆಂಟಿ ಇಲ್ಲದೆ ಬ್ಯಾಂಕುಗಳು ನೀಡಿವೆ. ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಅವರಿಗಿದೆ. ವಿಶೇಷವೆಂದರೆ ಯಾವ ಮೂರುಮುಕ್ಕಾಲು ಲಕ್ಷ ಜನರಿಗೆ ಈ ಎರಡು ಲಕ್ಷ ಕೋಟಿ ರೂಪಾಯಿಗಳು ಸಿಕ್ಕಿವೆಯೋ ಅವರಲ್ಲಿ ಶೇ.70ರಷ್ಟು ಜನರು ಮಹಿಳೆಯರು, ದಲಿತರು ಮತ್ತು ಹಿಂದುಳಿದ ಜನಾಂಗದವರಿದ್ದಾರೆ ಇದು ಒಳ್ಳೆಯ ಲಕ್ಷಣ. ಅವರು ಏನಾದರೂ ಸ್ವಲ್ಪ ಕೆಲಸ ಮಾಡಬೇಕೆಂಬ ಮನಸ್ಸಿನವರಾಗಿದ್ದಾರೆ; ಮುದ್ರಾ ಯೋಜನೆಯ ಮೂಲಕ ಅವರಿಗೆ ಈ ಅವಕಾವನ್ನು ಕಲ್ಪಿಸಲಾಗಿದೆ.
ಇವತ್ತು ನೀವು ನೋಡಿರಬಹುದು ಉದ್ಯಮಿಗಳ ಜೊತೆಗೆ ಬ್ಯಾಂಕುಗಳನ್ನೂ ಸನ್ಮಾನಿಸಲಾಯಿತು ಎಂಬುದನ್ನು. ಬ್ಯಾಂಕುಗಳನ್ನೂ ಸ್ಪರ್ಧೆಯಲ್ಲಿ ತರಬೇಕಾಗಿದೆ: ಸೂಕ್ಷ್ಮ ಮತ್ತು ಸಣ್ಣ ಉದ್ಯೋಗದಾರರಿಗೆ ಯಾರು ಶೀಘ್ರವಾಗಿ ಸಾಲ ನೀಡುವರೆಂಬ ಬಗ್ಗೆ, ಯಾರು ಹೆಚ್ಚು ಮೊತ್ತ ನೀಡುವರೆಂಬ ಬಗ್ಗೆ, ಯಾರು ಹೆಚ್ಚು ಸಹಾಯ ಮಾಡುವರೆಂಬ ಬಗ್ಗೆ; ಹೀಗೆ ಬ್ಯಾಂಕುಗಳನ್ನೂ ಕೂಡ ನಾವು ಪ್ರೋತ್ಸಾಹಿಸ ಬಯಸುತ್ತೇವೆ. ಯಾಕೆಂದರೆ ಬ್ಯಾಂಕುಗಳ ನಡುವೆ ಕೂಡ ಈ ತರಹದ ಉದ್ಯಮಿಗಳಿಗೆ ಸಾಲ ನೀಡುವಲ್ಲಿ ನಾ ಮುಂದು ತಾ ಮುಂದು ಎನ್ನುವಂತಹ ಸ್ಪರ್ಧೆ ಏರ್ಪಡಬೇಕು. ಸಣ್ಣ ಉದ್ಯೋಗಿಗಳಿಗೆ ಆರ್ಥಿಕ ಸಂಕಷ್ಟಗಳು ಬರದಿರುವಂತಹ ಒಂದು ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ಹೀಗೆ ಅನೇಕ ಮುಖಗಳಿವೆ. ಈ ಎಲ್ಲವುಗಳನ್ನು ಜೋಡಿಸಿ ಭಾರತದಲ್ಲಿ ಸಣ್ಣ ಸಣ್ಣ ಉದ್ಯೋಗಗಳ ಒಂದು ದೊಡ್ಡ ಜಾಲ ನಿರ್ಮಾಣವಾಗಬೇಕು. ನಮ್ಮ ಹೊಸ ತಲೆಮಾರೇನಿದೆ ಅವರು ಸಾಹಸ ಮಾಡಲು ಇಚ್ಛಿಸುತ್ತಾರೆ, ಆವಿಷ್ಕಾರಗಳನ್ನು ಮಾಡಲು ಇಚ್ಛಿಸುತ್ತಾರೆ, ಮತ್ತೆ ಇದೂ ನಿಜ: ನನ್ನ ಅಜ್ಜನ ಕಾಲದ ಈ ಉತ್ಪನ್ನ ನನ್ನ ಅಜ್ಜನ ಕಾಲದಿಂದಲೂ ನಡೆಯುತ್ತಿದೆ, ಈಗಲೂ ನಡೆದು ಹೋಗುತ್ತದೆ ಎಂದೇನಾದರೂ ನೀವು ಭಾವಿಸಿದ್ದರೆ ಅದು ನಡೆಯುವಂತಹುದಲ್ಲ. ಸಣ್ಣ ಉದ್ಯಮವೇ ಆದರೂ ಹೊಸ ಅನ್ವೇಷಣೆಗಳನ್ನು ಮಾಡುತ್ತಲೇ ಇರಬೇಕಾಗುತ್ತದೆ. ಸ್ಟಾರ್ಟ್ -ಅಪ್ , ಆವಿಷ್ಕಾರಕ್ಕೆ ಬಲ ನೀಡುತ್ತದೆ; ಪ್ರತಿಭೆಗೆ ಅವಕಾಶ ನೀಡುತ್ತದೆ; ಸ್ಟಾರ್ಟ್ ಅಪ್ ಗಳನ್ನು ಸಣ್ಣ ಉದ್ಯಮವನ್ನಾಗಿ ಸ್ಕೇಲ್ -ಅಪ್ ಮಾಡುವಂತಹ ಅನೇಕ ಕಾರ್ಯಗಳು ನಡೆಯುತ್ತಿವೆ.
ಈ ದಿನಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯುತ್ತಿದೆಯಷ್ಟೆ. ಸ್ವಚ್ಛತೆಯ ಈ ಕಾರ್ಯದಲ್ಲಿಯೂ ಬಹುದೊಡ್ಡ ಆರ್ಥಿಕ ವ್ಯವಹಾರ ಸಂಭವವಿದೆ. ಸ್ವಚ್ಛತಾ ಕಾರ್ಯವನ್ನು ಆರ್ಥಿಕ ದೃಷ್ಟಿಯಿಂದ ನೋಡಿದರೆ ಕಸದಿಂದ ಸಿರಿಯನ್ನು ಸೃಷ್ಟಿಸುವ ಎಷ್ಟೋ ಸಂಭವಗಳಿವೆ. ನಾವು ಅಂತಹ ಉಪಕರಣಗಳನ್ನು ಸಿದ್ಧಪಡಿಸಬೇಕಾಗುತ್ತದೆ, ಅಂತಹ ಯಂತ್ರಗಳನ್ನು ತಯಾರಿಸಬೇಕಾಗುತ್ತದೆ. ಈಗ ನೀವು ಇಲ್ಲಿರುವ ಪ್ರದರ್ಶನದಲ್ಲಿ ನೋಡಿರುವಂತೆ, ಐದು ಲಕ್ಷ ರೂಪಾಯಿಗಳ ಒಂದು ಚಿಕ್ಕ ಯಂತ್ರವನ್ನು ಮಾಡಿಸಿದ್ದಾರೆ; ಐದು ಲಕ್ಷ ರೂಪಾಯಿಗಳಲ್ಲಿ ಅವರು ಹೂವು-ಹಣ್ಣುಗಳಿಂದ ಎಸೆನ್ಸ್ ತೆಗೆದು ಸುವಾಸನೆ ತರಹದ ವಸ್ತುಗಳನ್ನು ಮಾರುಕಟ್ಟೆಗೆ ತರಬಲ್ಲುದು. ಬಡವ್ಯಕ್ತಿಗಳೂ ಇದರ ಲಾಭ ಪಡೆಯಬಹುದು; ದೇವಸ್ಥಾನದವರೂ ಇದರ ಉಪಯೋಗವನ್ನು ಮಾಡಿಕೊಳ್ಳಬಹುದು. ದೇವಸ್ಥಾನದ ಹೊರಗೆ ಒಂದು ಯಂತ್ರವನ್ನು ಹಾಕಿದ್ದಾರೆನ್ನಿ; ದೇವರಿಗೆ ಎಷ್ಟೆಲ್ಲ ತರಹದ ಹೂವುಗಳನ್ನು ಏರಿಸುತ್ತಾರೆ ಅದರಿಂದ ಬಹಳ ಉತ್ತಮ ಗುಣಮಟ್ಟದ ಅತ್ತರನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿದೆ. ಇಂತಹ ಸಣ್ಣಸಣ್ಣ ಯಂತ್ರಗಳನ್ನು ಹೇಗೆ ತಯಾರಿಸುವುದು, ಸಹಜವಾಗಿ ದಿನನಿತ್ಯದ ಕೆಲಸದಲ್ಲಿ ಉಪಯೋಗಕ್ಕೆ ಬರುವಂತಹ ಯಂತ್ರಗಳನ್ನು ಸಿದ್ಧಪಡಿಸುವುದು ಹೇಗೆ, ಏನು ಬದಲಾವಣೆಗಳಾಗಬೇಕು – ಈ ರೀತಿಯ ಯೋಚನೆಗಳಿಂದ ಅನ್ವೇಷಣಾ ಕಾರ್ಯ ನಡೆದರೆ ಮತ್ತು ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸಿದರೆ, ನೋಡಿ, ನಾವು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ಕ್ಷೇತ್ರದಲ್ಲಿ ಬಹು ದೊಡ್ಡ ಕೊಡುಗೆಗಳನ್ನು ಕೊಡಲು ಸಾಧ್ಯವಾಗುತ್ತದೆ.
ನಾನು ಮತ್ತೊಮ್ಮೆ ಕಲ್ರಾಜ್-ಜೀ ಮತ್ತವರ ಇಡೀ ತಂಡಕ್ಕೆ ಅವರ ಎಲ್ಲ ಮಂತ್ರಿ ಸಹಯೋಗಿಗಳಗೆ ಅವರ ವಿಭಾಗದ ಎಲ್ಲ ಅಧಿಕಾರಿಗಳಿಗೆ ಹಾರ್ದಿಕವಾಗಿ ಬಹುವಾಗಿ ಅಭಿನಂದಿಸುತ್ತೇನೆ. ಗೃಹ ಕೈಗಾರಿಕೆಯಿಂದ ಹಿಡಿದು ಸಣ್ಣ ಕೈಗಾರಿಕೆಗಳವರೆಗೆ ಇರುವ ಈ ಸಂಪೂರ್ಣ ಹೋಲಿಸ್ಟಿಕ್ ನೆಟ್ವರ್ಕ್ ಗೆ ಆಗುತ್ತಿರುವ ಶಕ್ತಿ-ತುಂಬುವ ಕೆಲಸಕ್ಕಾಗಿ ವಿಭಾಗದ ಎಲ್ಲ ಅಧಿಕಾರಿಗಳು ಅಭಿನಂದನಾರ್ಹರು. ನಾನು ಬಾದಲ್ ಸಾಹೇಬರಿಗೂ ತುಂಬು ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ; ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಪಂಜಾಬ್ ಸರಕಾರ ತುಂಬ ಪರಿಶ್ರಮವಹಿಸಿದೆ; ಇದನ್ನು ಯಶಸ್ವಿಯಾಗುವಂತೆ ಮಾಡಿದವರು ಅವರೇ. ಅಲ್ಲದೆ ಬಾದಲ್ ಸಾಹೇಬರು ನನಗೆ ಭಟಿಂಡಾ ಕಾರ್ಯಕ್ರಮದ ನೆನಪು ಮಾಡಿದರು. ಹಾಗೆ ನೋಡಿದರೆ ನಾನು ಭಟಿಂಡಾಕ್ಕೇ ಮೊದಲು ಹೋಗಬೇಕಾಗಿತ್ತು. ಆದರೆ ಸಮಯದ ಅಭಾವದಿಂದಾಗಿ ನನಗೆ ಹೋಗಲು ಸಾದ್ಯವಾಗಲಿಲ್ಲ. ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳನ್ನು ಹಾಕಿ ಬಹುದೊಡ್ಡ ಏಮ್ಸ್-ಆಸ್ಪತ್ರೆಯನ್ನು ಭಟಿಂಡಾದಲ್ಲಿ ನಿರ್ಮಿಸುವ ಭಾರತ ಸರಕಾರದ ಯೋಜನೆ ಇದೆ. ಬಾದಲ್ ಸಾಹೇಬರೇ ತಾವು ನನಗಿಂತ ತುಂಬ ದೊಡ್ಡವರು; ತಮ್ಮ ಇಚ್ಛೆ ನನಗೆ ಆದೇಶವಾಗುತ್ತದೆ. ಭಟಿಂಡಾಕ್ಕೆ ಭೇಟಿ ನೀಡಲು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಾನು ಖಂಡಿತ ಪುನಃ ಬರುತ್ತೇನೆ ಮತ್ತು ಏಮ್ಸ್-ದ ಕಾರ್ಯಕ್ರಮವನ್ನು ಮುಂದುವರೆಸೋಣ ಎಂದು ನಾನು ಮಾತು ಕೊಡುತ್ತೇನೆ.
ನಾನು ಮತ್ತೊಮ್ಮೆ ತಮ್ಮೆಲ್ಲರಿಗೂ ಹೃದಯಾಂತರಾಳದಿಂದ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಪಂಜಾಬ್ ಸರಕಾರಕ್ಕೆ ನನ್ನ ಅಭಿವಂದನೆಗಳು, ವಿಶೇಷವಾಗಿ ಬಾದಲ್ ಸಾಹೇಬರಿಗೆ ಆಭಾರ ವ್ಯಕ್ತಪಡಿಸುತ್ತೇನೆ. ಎಲ್ಲರಿಗೂ ತುಂಬು ಹೃದಯದ ವಂದನೆಗಳು.
You would have seen the trend in this Government- important schemes are launched in various parts of India, not only in the capital: PM
— PMO India (@PMOIndia) October 18, 2016
Ludhiana is an important economic centre. It is natural to launch a scheme related to MSME here. I am seeing a mini-India in front of me: PM
— PMO India (@PMOIndia) October 18, 2016
For the economic progress of India, MSME sector is crucial. We have to target the global market: PM @narendramodi
— PMO India (@PMOIndia) October 18, 2016
Today, Charkhas were given to women. Khadi is a priority for us. A Charkha at home brings more income: PM @narendramodi in Ludhiana
— PMO India (@PMOIndia) October 18, 2016
Things are different today. See how well Khadi is marketed now. Earlier it was only 'Khadi for nation', now its also 'Khadi for fashion': PM
— PMO India (@PMOIndia) October 18, 2016
Try to use some or the other Khadi product: PM @narendramodi
— PMO India (@PMOIndia) October 18, 2016
A spirit of entrepreneurship among Dalits will benefit us. There are youngsters whose dreams are to create enterprises and jobs: PM
— PMO India (@PMOIndia) October 18, 2016
We have to bring the poor into the economic mainstream because India's progress is closely linked with this: PM @narendramodi
— PMO India (@PMOIndia) October 18, 2016
Can our MSME sector only keep looking at the market in India? No. Let us look at global market & match their quality control standards: PM
— PMO India (@PMOIndia) October 18, 2016
The world market is waiting for us. No need to think- our enterprise is small: PM @narendramodi
— PMO India (@PMOIndia) October 18, 2016
At the programme in Ludhiana, spoke on the key role of MSME sector in the transformation of Indian economy. https://t.co/um1Qybj8Ri pic.twitter.com/RSxzIDaRu7
— Narendra Modi (@narendramodi) October 18, 2016
Emphasised on the need to harness a spirit of entrepreneurship among Dalit youngsters so that they become job creators & innovators.
— Narendra Modi (@narendramodi) October 18, 2016
The Charkha, a powerful symbol of progress and empowerment of the poorest of the poor. pic.twitter.com/DZ1Sorcv2k
— Narendra Modi (@narendramodi) October 18, 2016
Khadi for nation, Khadi for fashion. pic.twitter.com/tQEZK6b1i5
— Narendra Modi (@narendramodi) October 18, 2016
We remember Guru Gobind Singh’s ideals and his emphasis on harmony & rising above divisions. pic.twitter.com/fDA3PM5Xk2
— Narendra Modi (@narendramodi) October 18, 2016
आज 3 हाइड्रो प्रोजेक्ट्स का लोकार्पण हुआ। ऊर्जा शक्ति हिमाचल प्रदेश के विकास को ज्यादा गति और शक्ति देगी। pic.twitter.com/0junltyJVd
— Narendra Modi (@narendramodi) October 18, 2016