Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರಪತಿ ಭವನದ ಮ್ಯೂಸಿಯಂನ ಎರಡನೇ ಹಂತದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಗಳ ಭಾಷಣ

ರಾಷ್ಟ್ರಪತಿ ಭವನದ ಮ್ಯೂಸಿಯಂನ  ಎರಡನೇ ಹಂತದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಗಳ ಭಾಷಣ


ಇಲ್ಲಿ ನೆರೆದಿರುವ ಎಲ್ಲ ಹಿರಿಯ ಮಹಾನುಭಾವರೇ, ರಾಷ್ಟ್ರಪತಿಗಳ ಕಾರ್ಯಾವಧಿಯ ನಾಲ್ಕು ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ನಾನು ರಾಷ್ಟ್ರಪತಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು, ಅಭಿನಂದನೆಗಳನ್ನು,ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ತಮ್ಮ ಈ ನಾಲ್ಕು ವರ್ಷದ ಕಾರ್ಯಾವಧಿಯಲ್ಲಿ ನಿಮ್ಮೊಡನೆ ಹೆಚ್ಚು ಸಮಯ ಪ್ರಧಾನಮಂತ್ರಿಯ ರೂಪದಲ್ಲಿ ಕೆಲಸ ಮಾಡುವ ಸೌಭಾಗ್ಯ ನನಗೆ ದೊರೆಯಿತು. ನಾನು ದೆಹಲಿಯ ಪ್ರಪಂಚಕ್ಕೆ ಹೊಸಬನಾಗಿದ್ದೆ. ಈ ಇಡೀ ವಾತಾವರಣವೇ ನನಗೆ ಹೊಸದಾಗಿತ್ತು. ಅಂತಹ ಸಮಯದಲ್ಲಿ ರಾಷ್ಟ್ರಪತಿಗಳು ಒಬ್ಬ ರಕ್ಷಕನಂತೆ ಒಬ್ಬ ಮಾರ್ಗದರ್ಶಿಯಂತೆ ಅನೇಕ ವಿಷಯಗಳಲ್ಲಿ ನನ್ನ ಕೈ ಹಿಡಿದು ನಡೆಸಿದ್ದಾರೆ. ಇಂತಹ ಸೌಭಾಗ್ಯ ಬಹಳ ಕಡಿಮೆ ಜನರಿಗೆ ದೊರೆಯುತ್ತದೆ, ಅಂತದ್ದು ನನಗೆ ದೊರೆತಿದೆ.

ಇಂದು ಇಲ್ಲಿ ಅನೇಕ ಗ್ರಂಥಗಳು ಲೋಕಾರ್ಪಿತಗೊಂಡವು. ನಾನು ಪುಸ್ತಕವೆಂದು ಹೇಳುತ್ತಿಲ್ಲ, ಗ್ರಂಥವೆಂದು ಹೇಳುತ್ತಿದ್ದೇನೆ. ನಾನು ಗ್ರಂಥವೆಂದು ಯಾಕೆ ಹೇಳುತ್ತಿದ್ದೇನೆಂದರೆ ಇದರಲ್ಲಿ ಅಂತರ್ನಿಹಿತವಾಗಿರುವ ವಿಷಯಗಳು ಕಲ್ಪನೆಯ ಪರಿಧಿಯಲ್ಲಿರದೆ ಐತಿಹಾಸಿಕ ದೃಷ್ಟಿಕೋಣದಿಂದ ಹೊರಹೊಮ್ಮಿದವಾಗಿವೆ. ಯಾವ ವಿಷಯಗಳು ಐತಿಹಾಸಿಕ ದೃಷ್ಟಿಕೋಣದಿಂದ ಹೊರ ಹೊಮ್ಮಿ ರುತ್ತವೆಯೋ ಅವು ಮುಂಬರುವ ಪೀಳಿಗೆಗಳಲ್ಲಿ ಬಲವಾದ ಛಾಪು ಮೂಡಿಸುತ್ತವೆ. ಇದರ ಅರ್ಥವೇನೆಂದರೆ ಈ ಪ್ರಕಟಣೆಗಳೇನಿವೆ ಇವು ಇತಿಹಾಸದ ಭಾಗವಾಗಲು ಹೊರಟಿವೆ. ಈ ಸಾಧನೆಗಾಗಿ ನಾನು ರಾಷ್ಟ್ರಪತಿಗಳಿಗೂ ಅವರ ಸಂಪೂರ್ಣ ತಂಡಕ್ಕೂ ನನ್ನ ಅನೇಕಾನೇಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಈಗತಾನೆ ಮ್ಯೂಸಿಯಂ ನೋಡುವ ಸೌಭಾಗ್ಯ ದೊರಕಿತು. ಶ್ರೀಮಾನ್ ಘೋಷ್ ರವರ ಉತ್ಸಾಹ ಎಷ್ಟಿತ್ತೆಂದರೆ ಒಂದುವೇಳೆ ಒಮಿತಾ ತಡೆಯದಿದ್ದರೆ ನಾವು ಮ್ಯೂಸಿಯಂ ನೋಡಿ ಇಲ್ಲಿಗೆ ರಾತ್ರಿ ಹನ್ನೊಂದು ಗಂಟೆಯವೇಳೆಗೆ ಬರುತ್ತಿದ್ದೆವೇನೋ. ನಿಮ್ಮಲ್ಲಿ ಯಾರಿಗಾದರೂ ಮ್ಯೂಸಿಯಂ ನೋಡಲು ಸಮಯ ಸಿಕ್ಕರೆ ದಿನಪೂರ್ತಿ ಬಿಡುವು ಮಾಡಿಕೊಂಡು ಬನ್ನಿ, ಎಷ್ಟೊಂದು ಸೂಕ್ಷ್ಮತೆಗಳಿವೆ.. ಎಷ್ಟೋ ವಿವಿಧತೆಗಳಿವೆ.ಹಾಗೂ ಇತಿಹಾಸವನ್ನು ಪುನರುಜ್ಜೀವಿತಗೊಳಿಸುವ ಒಂದು ಅದ್ಭುತ ಪ್ರಯಾಸವಿದು. ಇದೆಂತಹ ಮ್ಯೂಸಿಯಂ ಅಂದರೆ ಇಲ್ಲಿ ಇತಿಹಾಸ,ಕಲೆ,ಕಲ್ಪನಾ ಶಕ್ತಿ ಮತ್ತು ಟೆಕ್ನಾಲಜಿ ಈ ನಾಲ್ಕರ ಸಂಗಮವಾಗಿದೆ . ಹೀಗಾಗಿ ಯಾರು ಇದರೊಡನೆ ಸಂಪರ್ಕ ಹೊಂದುತ್ತಾನೋ ಅವನು ಈ ನಾಲ್ಕರ ಮಾಧ್ಯಮದಿಂದ ಇತಿಹಾಸವನ್ನೇ ಬದುಕಬಲ್ಲನು. ಅಂದರೆ ಇತಿಹಾಸವನ್ನು ತಿಳಿಯುವನು ಎಂದಲ್ಲ, ಕೆಲ ಕ್ಷಣಗಳಕಾಲ ಇತಿಹಾಸವನ್ನೇ ಬದುಕಬಲ್ಲನು. ನನ್ನ ಪ್ರಕಾರ ಇದರ ಅರ್ಥವೇನೆಂದರೆ ವೈಜ್ಞಾನಿಕ ರೀತಿಯಿಂದ, ಸಂಶೋಧನೆಯಿಂದ ಮತ್ತು ಕಲಾತ್ಮಕ ರೂಪದಿಂದ ಇದನ್ನು ಪ್ರಸ್ತುತಪಡಿಸಿದ್ದಾರೆ , ಅದಕ್ಕಾಗಿ ಶ್ರೀಮಾನ್ ಘೋಷ್ ರವರು ಹಾಗೂ ಅವರ ಸಂಪೂರ್ಣ ತಂಡಕ್ಕೆ ಅನೇಕಾನೇಕ ಧನ್ಯವಾದಗಳು. ಹಾಗೂ ಅವರಿಗೆಲ್ಲಾ ನನ್ನ ಅಭಿನಂದನೆಗಳು.
ರಾಷ್ಟ್ರಪತಿಗಳು ಭಾರತದ ಜೀವನಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಸಾರ್ವಜನಿಕ ಜೀವನದ ಅವಧಿ ಸುದೀರ್ಘವಾದದ್ದು. ಆದರೆ ನಾಲ್ಕು ವರ್ಷದ ಈ ಅಲ್ಪ ಅವಧಿಯಲ್ಲೂ ಅವರು ರಾಷ್ಟ್ರಪತಿ ಭವನಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಒಂದು ರೀತಿ ಇವರು ರಾಷ್ಟ್ರಪತಿ ಭವನ, ಜನಸಾಮಾನ್ಯ, ಇತಿಹಾಸ ಹಾಗೂ ಭಾರತದ ಸರ್ವೋಚ್ಚ ಹುದ್ದೆಯ ಸಂಗಮಕೇಂದ್ರ . ಇದನ್ನು ನಾವು ತಮ್ಮಲ್ಲಿ, ಮತ್ತು ತಮ್ಮ ಮಹಾನ್ ಕೊಡುಗೆಯನ್ನು ಈ ಪರಿಸರದಲ್ಲಿ ಕಾಣುತ್ತೇವೆ. ಎಲ್ಲಕ್ಕಿಂತ ಸಂತಸದ ಸಂಗತಿಯೆಂದರೆ ನನ್ನ ರಾಜಕೀಯ ಹಿನ್ನೆಲೆಯೇ ಬೇರೆ, ರಾಷ್ಟ್ರಪತಿಗಳ ರಾಜಕೀಯ ಹಿನ್ನೆಲೆಯೇ ಬೇರೆ, ಆದರೆ ಪ್ರಜಾಪ್ರಭುತ್ವದಲ್ಲಿ ವಿಭಿನ್ನವೈಚಾರಿಕ ಪ್ರಭಾವದ ಹಿನ್ನೆಲೆಯಲ್ಲಿ ಬೆಳೆದ ವ್ಯಕ್ತಿಗಳೂ ಯಾವ ರೀತಿ ಹೆಗಲಿಗೆ ಹೆಗಲನ್ನಿತ್ತು ಕೈ ಜೋಡಿಸಿ ಕೆಲಸ ಮಾಡಬಲ್ಲರೆನ್ನುವ ಭಾವನೆಯ ಅನುಭವ ರಾಷ್ಟ್ರಪತಿಗಳ ಸಾನ್ನಿಧ್ಯದಲ್ಲಿದ್ದು ಪ್ರತಿ ಕ್ಷಣವೂ ಆಗುತ್ತಿರುತ್ತದೆ.

ಭಾರತ ಸರ್ಕಾರದ ಅದೆಷ್ಟೋ ಯೋಜನೆಗಳಿವೆ. ಭಾರತ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ , ಅನುಷ್ಠಾನಗೊಳಿಸಿದ್ದನ್ನು ಅಭಿವ್ಯಕ್ತಪಡಿಸುವಲ್ಲಿ ಸ್ವಲ್ಪ ಜಿಜ್ಞಾಸೆ ಅನೇಕ ರಾಜ್ಯಗಳಿಗಿರಬಹುದು. ನಾನು ಇಂದು ಹೆಮ್ಮೆಯಿಂದ ಹೇಳಬಲ್ಲೆ. ಭಾರತ ಸರ್ಕಾರದ ಎಷ್ಟೋ ಯೋಜನೆಗಳು ಇಂದು ಈ ರಾಷ್ಟ್ರಪತಿ ಭವನದ ಅಂಗಳದಲ್ಲಿಯೇ……ಕಾರ್ಯರೂಪಕ್ಕೆ ಬಂದಿವೆ. ಇದು ಕೂಡ ಒಂದು ಸಣ್ಣ ಹಳ್ಳಿಯೇ. ಹತ್ತು ಸಾವಿರಕ್ಕೂ ಹೆಚ್ಚು ಜನ ಇಲ್ಲಿ ವಾಸಿಸುತ್ತಾರೆ. ಹಳ್ಳಿಯಂತೆಯೇ ಆ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನ ಇಲ್ಲೂ ಆಗಿದೆ. ಅದು ನವೀಕರಿಸಬಹುದಾದ ಶಕ್ತಿಯಿರಬಹುದು, ಜಲ ಸಂರಕ್ಷಣೆಯಾಗಿರಬಹುದು, ಪರಿಸರಕ್ಕೆ ಸಂಬಂಧಿಸಿದ ಉಪಕ್ರಮಗಳಿರಬಹುದು ಪ್ರತಿಯೊಂದನ್ನೂ ಇಲ್ಲಿಯೂ ಅನುಷ್ಠಾನಕ್ಕೆ ತರಲಾಗಿದೆ. ಡಿಜಿಟಲ್ ಇಂಡಿಯಾ ಅಲ್ಲಿಗಾದರೆ ಇಲ್ಲಿ ಡಿಜಿಟಲ್ ರಾಷ್ಟ್ರಪತಿ ಭವನ್. ಒಂದು ಬಗೆಯಲ್ಲಿ ಭಾರತದ ಎಲ್ಲ ಯೋಜನೆಗಳನ್ನೂ ಲಘು ರೂಪದಲ್ಲಿ ಇಲ್ಲಿ ಅನುಷ್ಠಾನಕ್ಕೆ ತರುವ ಸಂಪೂರ್ಣ ಪ್ರಯತ್ನವನ್ನು ರಾಷ್ಟ್ರಪತಿಗಳು ಮಾಡಿದ್ದಾರೆ. ಯಾವುದೋ ಬೇರೆ ವ್ಯಕ್ತಿಯ ಪಕ್ಷದ ಸರ್ಕಾರವಿದ್ದರೂ ಅದನ್ನು ಹೊರತುಪಡಿಸಿ ಆ ಸರ್ಕಾರದ ಕಾರ್ಯಕ್ರಮಗಳನ್ನು ರಾಷ್ಟ್ರಪತಿ ಭವನದ ಕಾರ್ಯಕ್ರಮಗಳನ್ನಾಗಿ ಮಾಡಲೇಬೇಕು. ಈ ಎತ್ತರಕ್ಕೆ ಮಾನನೀಯ ಪ್ರಣಬ್ ದಾ ಮಾತ್ರ ಏರಬಲ್ಲರು. ಇದಕ್ಕಾಗಿ ಅವರಿಗೆ ನನ್ನ ಹೃದಯಪೂರ್ವಕ ವಂದನೆಗಳು , ಅಭಿನಂದನೆಗಳು.

ಇತಿಹಾಸವು ಜೀವನಕ್ಕೆ ಗಿಡಮೂಲಿಕೆಗಳಿದ್ದಂತೆ ಉಪಯೋಗಕ್ಕೆ ಬರುತ್ತದೆ. ಯಾರು ಇತಿಹಾಸವನ್ನು ಮರೆತುಬಿಡುತ್ತಾರೋ ಅವರು ಜೀವನದ ರಸಕಸಗಳನ್ನು ಕಳೆದುಕೊಳ್ಳುತ್ತಾರೆ. ದೇವಸ್ಥಾನದಲ್ಲಿರುವ ಮೂರ್ತಿಗಳು ಕಲ್ಲಿನಿಂದಲೇ ರೂಪುಗೊಂಡಿರುತ್ತವೆ. ಅನೇಕಾನೇಕ ವರ್ಷಗಳು ಅನೇಕ ವ್ಯಕ್ತಿಗಳ ಭಕ್ತಿಯಿಂದ ಅವು ಭಗವಂತನ ರೂಪಧಾರಣೆ ಮಾಡುತ್ತವೆ. ಐತಿಹಾಸಿಕ ಸ್ಥಳಗಳ ಒಂದೊಂದು ಕಲ್ಲಿಗೂ ಅದರದ್ದೇ ಆದ ಇತಿಹಾಸವಿರುತ್ತದೆ. ಪ್ರತಿಯೊಂದು ಕಲ್ಲೂ ಕಿರುಚಿ-ಕಿರುಚಿ ಕಳೆದು ಹೋದ ನಿನ್ನೆಯ ಕತೆ ಹೇಳುತ್ತಾ ಮುಂಬರುವ ನಾಳೆಗೆ ಮಾರ್ಗದರ್ಶನ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಆ ಕಲ್ಲು ಹೇಳಿದ್ದನ್ನು ಕೇಳುವ ಸಾಮರ್ಥ್ಯ ಪಡೆದುಕೊಳ್ಳುವ ಅವಶ್ಯಕತೆಯಿದೆ. ಈ ಮ್ಯೂಸಿಯಂ ಮೂಲಕ ಕಲ್ಲಿಗೆ ಮಾತನ್ನಾಡುವ ಸಾಮರ್ಥ್ಯ ಕೊಟ್ಟಾಗಿದೆ. ಇನ್ನು ನಾವು ಕೇಳುವ ಸಾಮರ್ಥ್ಯ ಪಡೆದುಕೊಳ್ಳಬೇಕಷ್ಟೆ. ಹಾಗೂ ಮುಂಬರುವ ಹೊಸ ಪೀಳಿಗೆಗೆ ಏನಾದರೂ ಪಡೆಯಲಿಕ್ಕಾಗಿ ಒಂದು ಹೊಸ ನವೀನ ಸಾಮರ್ಥ್ಯವನ್ನು ಪಡದುಕೊಳ್ಳಲಿ. .
ನಾನು ಮತ್ತೊಮ್ಮೆ ಈ ಪ್ರಯತ್ನಕ್ಕಾಗಿ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮತ್ತೊಮ್ಮೆ ಈ ನಾಲ್ಕು ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಮುಂದಿನ ವರ್ಷ ನಮಗೆಲ್ಲಾ ಉತ್ತಮ ಮಾರ್ಗದರ್ಶನ ನೀಡಿರಿ ಎಂಬ ಆಸೆ ವ್ಯಕ್ತಪಡಿಸುತ್ತಾ ಅವರು ನೀಡಿದ ಪ್ರೇರಣೆಗೆ ಕೃತಜ್ಞತೆಗಳನ್ನು ಸೂಚಿಸುತ್ತಾ ತಮ್ಮೆಲ್ಲರಿಗೂ ಅನೇಕಾನೇಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.