Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಜಲಮಾರ್ಗಗಳ ಅಭಿವೃದ್ಧಿ ಮತ್ತು ಉಸ್ತುವಾರಿಗೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ನಿಧಿ ಕಾಯಿದೆ, 2000ಕ್ಕೆ ತಿದ್ದುಪಡಿ ಮೂಲಕ ಕೇಂದ್ರೀಯ ರಸ್ತೆ ನಿಧಿಯಲ್ಲಿ ಶೇ 2.5 ಪಾಲು ನೀಡಿಕೆಗೆ ಸಂಪುಟ ಸಮ್ಮತಿ.


ಕೇಂದ್ರ ರಸ್ತೆ ನಿಧಿ ಕಾಯಿದೆ 2000ಕ್ಕೆ ತಿದ್ದುಪಡಿ ಮಾಡಬೇಕೆಂಬ ನೌಕಾಯಾನ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯಗಳು ಜಂಟಿಯಾಗಿ ಸಲ್ಲಿಸಿದ್ದ ಪ್ರಸ್ತಾವನೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಂಪುಟವು ಸಮ್ಮತಿ ನೀಡಿದೆ. ರಾಷ್ಟ್ರೀಯ ಜಲಮಾರ್ಗಗಳ ಅಭಿವೃದ್ಧಿ ಮತ್ತು ಉಸ್ತುವಾರಿಗೆ ಕೇಂದ್ರ ರಸ್ತೆ ನಿಧಿ(ಸಿಆರ್ಎಫ್)ಯ ಶೇ 2.5ರಷ್ಟು ಹಣವನ್ನು ನಿಗದಿಗೊಳಿಸಬೇಕು ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ನೀಡುತ್ತಿರುವ ಪಾಲನ್ನು ಕಡಿಮೆಗೊಳಿಸಬೇಕು ಎಂದು ಪ್ರಸ್ತಾವನೆ ಕೋರಿತ್ತು. ಆರ್ಥಿಕವಾಗಿ ಲಾಭದಾಯಕವಾದ ರಾಷ್ಟ್ರೀಯ ಜಲಮಾರ್ಗಗಳ ಯೋಜನೆಗಳನ್ನು ಜಾರಿಗೊಳಿಸುವಾಗ ಪಿಪಿಪಿ ಮಾದರಿಯಲ್ಲಿ ಸಂಬಂಧಿಸಿದ ಸಕಲ ಘಟಕಗಳ ನಿರ್ಮಾಣ ಸಾಧ್ಯವೇ ಎಂದು ಶೋಧಿಸಬೇಕು, ಖಾಸಗಿ ಹೂಡಿಕೆ ಬರುವುದಿಲ್ಲ ಎಂದಾದಲ್ಲಿ ಮಾತ್ರ ಸರಕಾರದ ನಿಧಿಯನ್ನು ಬಳಸಿಕೊಳ್ಳಬೇಕು ಎಂದು ಸಂಪುಟ ನಿರ್ದೇಶಿಸಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯವು ಸಂಸತ್ತಿನ 2017ರ ಮುಂಗಾರು ಅಧಿವೇಶನದಲ್ಲಿ ಕೇಂದ್ರ ರಸ್ತೆ ನಿಧಿ(ತಿದ್ದುಪಡಿ)ಮಸೂದೆ, 2017ನ್ನು ಮಂಡಿಸಲಿದೆ.

ಪರಿಣಾಮ:

ಕೇಂದ್ರ ರಸ್ತೆ ನಿಧಿಯಲ್ಲಿ ಶೇ 2.5ರಷ್ಟನ್ನು ನೀಡುವುದರಿಂದ ರಾಷ್ಟ್ರೀಯ ಜಲಮಾರ್ಗಗಳ ಅಭಿವೃದ್ಧಿ ಮತ್ತು ಉಸ್ತುವಾರಿಗೆ ಪ್ರಸ್ತುತ ದರದಲ್ಲಿ ವಾರ್ಷಿಕ 2,000 ಕೋಟಿ ರೂ. ಲಭ್ಯವಾಗಲಿದೆ. ಭಾರತೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರ(ಐಡಬ್ಲ್ಯುಎಐ)ದ ಲೆಕ್ಕಾಚಾರದ ಪ್ರಕಾರ, ಈಗಾಗಲೇ ಗುರುತಿಸಿದ ಜಲಮಾರ್ಗದ ಯೋಜನೆಗಳ ಅಭಿವೃದ್ಧಿಗೆ 2022-23ರವರೆಗೆ 25,000 ಕೋಟಿ ರೂ. ಬೇಕಾಗಲಿದೆ. ಜಲಮಾರ್ಗ ವಿಕಾಸ ಯೋಜನೆಯಡಿ ಎನ್ಡಬ್ಲ್ಯು-1(ಗಂಗಾ ನದಿ)ರಲ್ಲಿ ಬಹು ರೂಪದ ತಾಣಗಳ ನಿರ್ಮಾಣ , ನೂತನ ಸಮುದ್ರಯಾನ ಸಾಧನ, ನದಿ ಮಾಹಿತಿ ವ್ಯವಸ್ಥೆ, ಸಂಚಾರಯೋಗ್ಯ ನಾಲೆಗಳ ಅಭಿವೃದ್ಧಿ ಇತ್ಯಾದಿ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಮುಂದಿನ 3 ವರ್ಷಗಳಲ್ಲಿ 24 ಜಲಮಾರ್ಗಗಳ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಐಡಬ್ಲ್ಯುಎಐ ಯೋಜನೆ ರೂಪಿಸಿದೆ.

ಒಳನಾಡು ಜಲಮಾರ್ಗ ಸಾಗಣೆ(ಐಡಬ್ಲ್ಯುಟಿ) ಕ್ಷೇತ್ರದಲ್ಲಿ ಮುಂದಿನ 5 ವರ್ಷದಲ್ಲಿ 1.8 ಲಕ್ಷ ಜನರಿಗೆ ಉದ್ಯೋಗ ಲಭ್ಯವಾಗಲಿದೆ ಎಂದು ಲೆಕ್ಕಿಸಲಾಗಿದೆ. ನಾಲೆಗಳು, ಟರ್ಮಿನಲ್ ಗಳ ಚಾಲನೆ ಮತ್ತು ನಿರ್ವಹಣೆ, ಸಮುದ್ರಯಾನದ ಸಾಧನೆ-ಸಲಕರಣೆ, ಹರಿಗೋಲುಗಳು, ತರಬೇತಿ ಇತ್ಯಾದಿಯಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 106 ರಾಷ್ಟ್ರೀಯ ಜಲಮಾರ್ಗಗಳ ಅಭಿವೃದ್ಧಿಯು ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಿದೆ.

ಹಿನ್ನೆಲೆ:

ಒಳನಾಡು ಜಲಮಾರ್ಗಗಳ ಸಾಗಣೆ ಕ್ಷೇತ್ರದ ಅಭಿವೃದ್ಧಿಯು ರಾಷ್ಟ್ರೀಯ ಆರ್ಥಿಕತೆಯ ಮುನ್ನಡೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸರಕಾರ ಭಾವಿಸಿದ್ದು, ಇದಕ್ಕೆ ಒತ್ತಾಸೆ ನೀಡಿದೆ. ಹಾಲಿ ಇರುವ 5 ರಾಷ್ಟ್ರೀಯ ಜಲಮಾರ್ಗಗಳು ಮತ್ತು 106 ನೂತನ ರಾಷ್ಟ್ರೀಯ ಜಲಮಾರ್ಗಗಳ ಅಭಿವೃದ್ಧಿ ಮತ್ತು ಮೇಲುಸ್ತುವಾರಿಗೆ ರಾಷ್ಟ್ರೀಯ ಜಲಮಾರ್ಗಗಳ ಕಾಯಿದೆ, 2016ನ್ನು ಸಂಸತ್ತು ಅಂಗೀಕರಿಸಿದ್ದು ಈಗಾಗಲೇ ಜಾರಿಗೊಳಿಸಲಾಗಿದೆ. ಸಚಿವ ಸಂಪುಟದ ನಿರ್ಧಾರದಿಂದ ಸಿಆರ್ಎಫ್ ಮೂಲಕ ರಾಷ್ಟ್ರೀಯ ಜಲಮಾರ್ಗಗಳಿಗೆ ಸಾಕಷ್ಟು ಹಾಗೂ ಸುಸ್ಥಿರ ಹಣಕಾಸು ಮೂಲ ಲಭ್ಯವಾಗಲಿದೆ. ವೆಚ್ಚ ಕ್ಷಮತೆಯ, ಸಾಗಣೆಯಲ್ಲಿ ಕ್ಷಮತೆ ಹಾಗೂ ಪರಿಸರಸ್ನೇಹಿಯಾದ ಒಳನಾಡು ಜಲ ಸಾರಿಗೆ ಕ್ಷೇತ್ರವನ್ನು ಉತ್ತೇಜಿಸುವ ಈ ಕ್ರಮದ ಮೂಲಕ ರಸ್ತೆ ಹಾಗೂ ರೈಲು ಮಾರ್ಗದ ತೀವ್ರ ಸಂಚಾರ ದಟ್ಟಣೆಯನ್ನು ನಿವಾರಿಸಬಹುದಲ್ಲದೆ, ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ಆರ್ಥಿಕ ಲಾಭವನ್ನು ಖಾತ್ರಿಗೊಳಿಸ ಬಹುದು. ಒಂದು ಅಂದಾಜಿನ ಪ್ರಕಾರ, 2000 ಡಿಡಬ್ಲ್ಯುಟಿ ಹಡಗೊಂದು 125 ಟ್ರಕ್ ಹಾಗೂ ಒಂದು ಸಂಪೂರ್ಣ ರೇಕ್(40 ರೈಲ್ವೆ ವ್ಯಾಗನ್)ನಷ್ಟು ಸರಕನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಇದರಿಂದ ರೈಲು ಮಾರ್ಗ ಮತ್ತು ರಸ್ತೆ ಮೇಲೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.