Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾರಣಾಸಿಯ ತುಳಸಿ ಮಾನಸ ದೇವಾಲಯದಲ್ಲಿ ರಾಮಾಯಣ ಕುರಿತ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ


ನಮ್ಮ ದೇಶ ಮತ್ತು ಪ್ರಪಂಚದಾದ್ಯಂತ ಅಂಚೆ ಚೀಟಿಗಳಿಗೆ ವಿಶೇಷ ಮಹತ್ವವಿದೆ. ಅಂಚೆ ಚೀಟಿಗ¼ïಳು ಚರಿತ್ರೆಯನ್ನು ತಮ್ಮೊಳಗೆ ಬೆಸೆದುಕೊಂಡಿವೆ. ಒಂದು ರೀತಿಯಲ್ಲಿ ಅಂಚೆ ಚೀಟಿಗಳು ರಾಯಭಾರಿಗಳಾಗಿಯೂ ಕಾರ್ಯ ನಿರ್ವಹಿಸುತ್ತಿವೆ. ವಿಶ್ವಾದ್ಯಂತ ತಲುಪುವ ನಮ್ಮ ಅಂಚೆ ಪತ್ರಗಳಲ್ಲಿ ನಮ್ಮ ಅಂಚೆ ಚೀಟಿಗಳಿರುತ್ತವೆ. ವಿಶ್ವದ ಅನೇಕರು ಈ ಅಂಚೆ ಚೀಟಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಈ ಅಂಚೆ ಚೀಟಿ ಸಂಗ್ರಹದಿಂದ ಆಯಾ ದೇಶಗಳಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಗಮನಿಸಬಹುದಾಗಿದೆ. ಇದು ಒಂದು ರೀತಿಯಲ್ಲಿ ಪರಿಚಯಾತ್ಮಕವಾಗಿದೆ. ಭಾರತೀಯ ಅಂಚೆ ಇಲಾಖೆ ಸದಾ ಈ ರೀತಿಯ ಕೊಡುಗೆಯನ್ನು ನೀಡುತ್ತಾ ಬಂದಿದೆ.

ಇಂದು ಪ್ರಭು ಶ್ರೀ ರಾಮಚಂದ್ರನ ಜೀವನ ಕುರಿತಾದ ಅಂಚೆ ಚೀಟಿಯ ಬಿಡುಗಡೆಯಾಗುತ್ತಿದೆ. ಇದನ್ನು ನಾನು ದಿಲ್ಲಿಯ ವಿಜ್ಞಾನ ಭವನದಲ್ಲಿ ಕುಳಿತು ಮಾಡಬಹುದಿತ್ತು. ಪ್ರಧಾನಮಂತ್ರಿಗಳ ಗೃಹಕಚೇರಿಯಲ್ಲಿ ಕುಳಿತು ಮಾಡಬಹುದಿತ್ತು. ನವರಾತ್ರಿಯ ಪವಿತ್ರ ದಿನಗಳು ನಡೆಯುತ್ತಿವೆ, ಶ್ರೀ ರಾಮಚಂದ್ರನ ಜೀವನದಲ್ಲಿ ನವರಾತ್ರಿ ಮತ್ತು ವಿಜಯದಶಮಿ ವಿಶೇಷ ಮಹತ್ವ ಪಡೆದಿದ್ದು ಇಲ್ಲಿ ತುಳಸಿದಾಸರ ಮಂದಿರಗಳು ಇಂದೂ ಜೀವಂತವಾಗಿವೆ. ರಾಮಾಯಣ ಕುರಿತಾದ ಅಂಚೆ ಚೀಟಿ ಬಿಡುಗಡೆಗೆ ಇದಕ್ಕಿಂತ ಪವಿತ್ರ ಸ್ಥಾನ ಮತ್ತೆಲ್ಲಿಯೂ ಇರಲು ಸಾಧ್ಯವಿಲ್ಲ ಎಂಬ ಚಿಂತನೆ ಮನದಲ್ಲಿ ಮೂಡಿತು. ನನಗೆ ಕಾಶಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು, ಹೀಗಾಗಿ ನಾನು ಅಂಚೆ ಇಲಾಖೆಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಂಡೆ. ಶ್ರೀ ರಾಮಚಂದ್ರನ ಕುರಿತಾದ ಅನೇಕ ಅಂಚೆ ಚೀಟಿಗಳು ಬಿಡುಗಡೆಯಾಗಿವೆ. ಆದರೆ ಪ್ರಥಮ ಬಾರಿಗೆ ಶ್ರೀ ರಾಮಚಂದ್ರನ ಜೀವನದ ಅನೇಕ ಹಂತಗಳನ್ನು ಬೇರೆ ಬೇರೆಯಾಗಿ ಅಂಚೆ ಚೀಟಿಯ ಮೂಲಕ ಪ್ರದರ್ಶಿಸಲಾಗುತ್ತಿದೆ. ಇದು ಒಂದು ಅಂಚೆ ಚೀಟಿ, ಆದರೆ ಇದರಲ್ಲಿ ಅನೇಕ ಅಂಚೆ ಚೀಟಿಗಳ ಸಂಗ್ರಹವಿದೆ. ಶ್ರೀ ರಾಮಚಂದ್ರನ ಜೀವನ ಕುರಿತಾದ ಈ ರೀತಿಯ ಅಂಚೆ ಚೀಟಿ ಈ ಮೊದಲು ಎಂದೂ ಪ್ರಕಟವಾಗಿರಲಿಲ್ಲ. ಇಂದು ಪ್ರಥಮ ಬಾರಿಗೆ ಬಿಡುಗಡೆಯಾಗುತ್ತಿದೆ. ಈ ಪವಿತ್ರ ಭೂಮಿಯಲ್ಲಿ ಇಂತಹ ಅಪೂರ್ವ ಕಾರ್ಯವನ್ನು ಮಾಡುವ ಸೌಭಾಗ್ಯ ನನಗೆ ಲಭಿಸಿರುವುದು ನನಗೆ ಸಂತಸವನ್ನುಂಟು ಮಾಡಿದೆ. ಪ್ರಭು ಶ್ರೀ ರಾಮಚಂದ್ರನ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ.

ನಾವು ಮಹಾತ್ಮಾಗಾಂಧಿಯವರನ್ನು ಉಲ್ಲೇಖಿಸುತ್ತಾ ಮಾತನಾಡಿದರೆ, ಗಾಂಧಿಯವರ ಜೀವನದಲ್ಲಿ ಬಾಲ್ಯದಿಂದಲೂ ಶ್ರೀರಾಮಚಂದ್ರನ ಪ್ರಭಾವ ಉಂಟಾಗಿತ್ತು. ಇಂತಹ ಮಹಾಪುರುಷ, ಮಹಾನ್ ಚೇತನದ ಜೀವನದ ಪ್ರತಿಯೊಂದು ಹಂತವೂ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಆದರ್ಶವಾಗಿದ್ದು, ಉತ್ತಮ ಬದುಕಿಗೆ ಪ್ರೇರಣೆ ನೀಡುತ್ತದೆ. ನಾನು ಪ್ರಭು ಶ್ರೀ ರಾಮಚಂದ್ರನ ಪಾದಗಳಿಗೆ ನಮಸ್ಕರಿಸುತ್ತಾ ಭಾರತ ಸರ್ಕಾರದ ಹೊರತಂದಿರುವ ಅಂಚೆ ಚೀಟಿಯನ್ನು ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ ಲೋಕಾರ್ಪಣೆ ಮಾಡುತ್ತಿದ್ದೇನೆ. ಇಲ್ಲಿಗೆ ಆಗಮಿಸಿರುವ ತಮಗೆಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

*****