Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಲಕ್ಷ್ಮಣರಾವ್ ಇನಾಂದಾರ್ ಇವರ ಜನ್ಮ ಶತಮಾನೋತ್ಸವ ನಿಮಿತ್ತ 21ನೆಯ ಸೆಪ್ಟೆಂಬರ್ 2017ರಂದು ಹಮ್ಮಿಕೊಂಡ ಸಹಕಾರ ಸಮ್ಮೇಳನದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಮೂಲ ಪಾಠ

ಶ್ರೀ ಲಕ್ಷ್ಮಣರಾವ್ ಇನಾಂದಾರ್ ಇವರ ಜನ್ಮ ಶತಮಾನೋತ್ಸವ ನಿಮಿತ್ತ 21ನೆಯ ಸೆಪ್ಟೆಂಬರ್ 2017ರಂದು ಹಮ್ಮಿಕೊಂಡ ಸಹಕಾರ ಸಮ್ಮೇಳನದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಮೂಲ ಪಾಠ

ಶ್ರೀ ಲಕ್ಷ್ಮಣರಾವ್ ಇನಾಂದಾರ್ ಇವರ ಜನ್ಮ ಶತಮಾನೋತ್ಸವ ನಿಮಿತ್ತ 21ನೆಯ ಸೆಪ್ಟೆಂಬರ್ 2017ರಂದು ಹಮ್ಮಿಕೊಂಡ ಸಹಕಾರ ಸಮ್ಮೇಳನದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಮೂಲ ಪಾಠ

ಶ್ರೀ ಲಕ್ಷ್ಮಣರಾವ್ ಇನಾಂದಾರ್ ಇವರ ಜನ್ಮ ಶತಮಾನೋತ್ಸವ ನಿಮಿತ್ತ 21ನೆಯ ಸೆಪ್ಟೆಂಬರ್ 2017ರಂದು ಹಮ್ಮಿಕೊಂಡ ಸಹಕಾರ ಸಮ್ಮೇಳನದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಮೂಲ ಪಾಠ


ದೇಶದ ಬೇರೆ ಬೇರೆ ಭಾಗಗಳಿಂದ ಬಂದ ಸಹಕಾರ ಚಳುವಳಿಯ ಜೊತೆ ಗುರುತಿಸಿಕೊಂಡಿರುವ ಎಲ್ಲ ಗಣ್ಯಮಾನ್ಯರೇ,
ಲಕ್ಷ್ಮಣರಾವ್ ಇನಾಂದಾರ್ ಇವರ ಜನ್ಮ ಶತಮಾನೋತ್ಸವವನ್ನು ಆಚರಿಸುವುದರ ಜೊತೆಗೆ, ಸಹಕಾರೀ ಚಳುವಳಿಗೆ ಇನ್ನಷ್ಟು ವೇಗ ತರುವುದು ಹೇಗೆ, ಚಳುವಳಿಗೆ ಹೊಸ ಶಕ್ತಿ ತುಂಬುವುದು ಹೇಗೆ ಮತ್ತು ಸಮಾಜವನ್ನು ಕುರಿತಂತೆ ಕಾಳಜಿಯಿಂದ ಎಲ್ಲರೂ ಸೇರಿ ಕುಳಿತು ದೈನಂದಿನ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಹುಡುಕಿ ಕೊಳ್ಳುವುದು ಹೇಗೆ, ಜೊತೆ ಸೇರಿ ಸಹಕರಿಸಿ ಸಹಕಾರ ತತ್ವದ ಮುಖಾಂತರ ಸಮಸ್ಯೆಗಳನ್ನು ಬಿಡಿಸುವುದು ಹೇಗೆ ಇಂತಹ ಸಮಸ್ಯೆಗಳನ್ನೆಲ್ಲ ಇವತ್ತು ದಿನವಿಡೀ ಕುಳಿತು ವ್ಯಾಪಕವಾಗಿ ಚರ್ಚಿಸುವವರಿದ್ದೀರಿ.

ನಮ್ಮ ದೇಶ ‘ಬಹರತ್ನಾ ವಸುಂಧರಾ’ಆಗಿದೆ. ಪ್ರತಿಯಂದು ಕಾಲಖಂಡದಲ್ಲಿ ಪ್ರತಿಯೊಂದು ಪ್ರದೇಶದಲ್ಲಿ ಸಮಾಜಕ್ಕಾಗಿ ಬದುಕುವವರ, ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡಿ ಹೋಗುವವರ ಸರಣಿ ಅಗಣಿತವಾಗಿದೆ.

ಸಮಾಜಕ್ಕೆ ಸಮರ್ಪಿತರಾದ ವ್ಯಕ್ತಿಗಳು ಕಾಣಸಿಗದಂತಹ ಕಾಲಘಟ್ಟ ಅಥವ ಪ್ರದೇಶ ಯಾವುದೂ ಇರಲಾರದು; ಇಂದಿಗೂ ಅಂತಹ ವ್ಯಕ್ತಿಗಳು ಎಲ್ಲ ಪ್ರದೇಶಗಳಲ್ಲಿ ಕಾರ್ಯನಿರತರಾಗಿದ್ದಾರೆ. ಕೆಲವರು ಟಿವಿಯಿಂದಾಗಿ, ಪತ್ರಿಕೆಗಳಿಂದಾಗಿ, ಪ್ರಚಾರ ಮಾಧ್ಯಮಗಳಿಂದಾಗಿ, ತಮ್ಮ ಜೀವಿತ ಕಾಲದಲ್ಲಿ ಮಾನ ಸನ್ಮಾನಗಳನ್ನು ಪಡೆದು ಜನರ ಮಧ್ಯೆ ಚರ್ಚೆಯಲ್ಲಿರುತ್ತಾರೆ. ಚರ್ಚೆಯಲ್ಲಿರುವುದರಿಂದಲೇ ಕೆಲವೊಮ್ಮೆ ದೊಡ್ಡ ಮನುಷ್ಯರಂತೆ ಕೂಡ ಕಾಣಿಸಿಕೊಳ್ಳುತ್ತಾರೆ. ಆದರೆ ಈ ದೇಶ ಅಂತಹದಿದೆ, ಇಲ್ಲಿ ಪತ್ರಿಕೆಗಳ ಮುಖ ಪುಟಗಳಲ್ಲಿ ಬಾರದ, ಟಿವಿ ಸುದ್ದಿಗಳಲ್ಲಿ ಮಿಂಚದ ಸಾಧಕರ ಒಂದು ಬಹುದೊಡ್ಡ ವರ್ಗವೇ ಇದೆ. ಇವರಿಗೆ ವಾಹ್ ವಾಹ್ ಎನ್ನುವವರು ಇರುವುದಿಲ್ಲ; ಮಾನ-ಪ್ರತಿಷ್ಠೆಗಳು, ಪ್ರಶಸ್ತಿಗಳು ಇಂತಹವು ಅವರಿಗೆ ದಕ್ಕುವುದಿಲ್ಲ. ಆದರೆ ಮೂಕ ಸಾಧಕರಂತೆ ಸಮರ್ಪಿತರಾಗಿ ಬದುಕು ಸಾಗಿಸುತ್ತಾ ‘ಒಂದು ದೀಪದಿಂದ ಇನ್ನೊಂದು, ಅದರಿಂದ ಮತ್ತೊಂದು, ಹೀಗೆ ಹೊತ್ತಿಕೊಳ್ಳುತ್ತವೆ ಸಾವಿರಾರು ದೀಪ’ ಎನ್ನುವಂತೆ ಹನಿಹನಿ ಎಣ್ಣೆಯುರಿಸಿ ಬೆಳಗುತ್ತಾ ಶರೀರದ ಕಣಕಣಗಳನ್ನು ಆದರ್ಶಗಳಿಗಾಗಿ, ಸಮಾಜದ ಮೌಲ್ಯಗಳಿಗಾಗಿ ಸಮರ್ಪಿಸಿ ಎಲೆಮರೆಯ ಕಾಯಿಯಂತೆ ಬದುಕುತ್ತಾರೆ.

ಇವತ್ತು ಕೆಲವು ಸಂದರ್ಬಗಳಲ್ಲಿ ಅನೇಕರಿಗೆ ನಾವು ಇವರ ಹೆಸರು ಕೇಳಿಯೇ ಇಲ್ಲವಲ್ಲ, ಜನ್ಮ ಶತಾಬ್ಧಿ ಆಚರಿಸುತ್ತಿದ್ದೀರಾ ಎಂಬಂತೆ ಪ್ರಶ್ನೆಗಳು ಹುಟ್ಟುತ್ತವೆ. ನೀವು ಇವರ ಹೆಸರನ್ನು ಕೇಳಿರಲಿಲ್ಲವೆಂಬುದನ್ನು ನಾನು ಒಪ್ಪುತ್ತೇನೆ. ಇದೇ ತೋರಿಸುವುದು ಅವರ ಮಹೋನ್ನತಿಯನ್ನು. ತಮ್ಮಷ್ಟಕ್ಕೆ ತಾವು ಮರೆಯಲ್ಲಿದ್ದುಕೊಂಡು ಎಲ್ಲರೂ ಕೈಜೋಡಿಸುವಂತೆ ನೋಡಿಕೊಳ್ಳುವುದು, ಸಹಕಾರೀ ತತ್ವದ ಯಶಸ್ವೀ ಅನುಷ್ಠಾನಕ್ಕೆ ಇದೇ ಮೊದಲ ಮಂತ್ರವೆಂಬುದು ನನ್ನ ನಂಬಿಕೆ – ತಮ್ಮನ್ನು ತಾವು ಎಷ್ಟು ಸಾಧ್ಯವೋ ಅಷ್ಟು ದೂರದಲ್ಲಿಟ್ಟುಕೊಳ್ಳುವುದು ಮತ್ತು ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಜೊತೆಗಾರರನ್ನು ಮುಂದೆ ಮಾಡುವುದು ಇವು ಸಹಾಕಾರ ತತ್ವದ ಬಹುದೊಡ್ಡ ಮಂತ್ರ.

ಅವರು ವ್ಯಕ್ತಿಗಳ ನಿರ್ಮಾಣಕ್ಕಾಗಿ ತಮ್ಮ ಬದುಕನ್ನು ಸವೆಸಿದರು; ರಾಷ್ಟ್ರ ನಿರ್ಮಾಣದ ಒಂದು ದಾರಿಯನ್ನು ಅವರು ಹುಡುಕಿದರು. ನನ್ನ ಜೀವನದ ಬಹುಭಾಗವನ್ನು ಅವರ ಜೊತೆ ಕಳೆಯುವ ಅವಕಾಶ ನನಗೆ ಒದಗಿತ್ತು ಎಂಬುದು ನನ್ನ ಸೌಭಾಗ್ಯ. ನನ್ನ ಯೌವನದಲ್ಲಿ ಅನೇಕ ವರ್ಷಗಳ ಕಾಲ ಅವರ ಮಾರ್ಗದರ್ಶನದಲ್ಲಿಯೇ ನಾನು ಕೆಲಸ ಮಾಡುತ್ತಲಿದ್ದೆ. ಮತ್ತೆ ನಾನು ಅವರ ಜೀವನದ ಬಗ್ಗೆ ಒಂದು ಪುಸ್ತಕ ಬರೆಯುತ್ತಿದ್ದಾಗ; 25-30 ವರ್ಷಗಳ ಹಿಂದಿನ ಮಾತು. ಅವರ ಜೀವನದ ಕ್ಷಣಕ್ಷಣಗಳನ್ನು ಸೂಕ್ಷ್ಮವಾಗಿ ನೋಡಿದಾಗ ನಾನೂ ಇವರ ಜೊತೆಯಲ್ಲಿ ಇದ್ದೆನಲ್ಲಾ, ಇಷ್ಟೊಂದು ವರ್ಷ ಇದ್ದೆನಲ್ಲಾ ಎಂದು ಆಶ್ಚರ್ಯವಾಗುತ್ತಿತ್ತು. ಆದರೆ ಅವರ ಜೀವನದ ಹಲವು ವಿಷಯಗಳು ಅವರು ಹೋದ ಮೇಲೆ ತಿಳಿಯ ಹತ್ತಿದವು. ಜೀವನವನ್ನು ಹೇಗೆ ಬದುಕ ಬೇಕು ಎಂಬುದು ಈ ತರಹದ ಒಂದು ಒಳ್ಳೆಯ ಉದಾಹರಣೆ. ವಿನೀತ ಬದುಕು, ತನ್ನನ್ನು ತಾನು ಎಲ್ಲಿಯೂ ಪ್ರಮುಖವಾಗಿ ಕಾಣಿಸಿಕೊಳ್ಳದಂತಿರುವುದು, ಜೊತೆಗಾರರು ಮುನ್ನಡೆಯಲಿ, ಜೊತೆಗಾರರ ಶಕ್ತಿವೃದ್ಧಿಯಾಗಲಿ, ವಿಚಾರಗಳಿಗೆ ಬಲ ಬರಲಿ, ಎಂಬೀ ರೀತಿಯಲ್ಲಿ ಒಂದು ಶ್ರೇಷ್ಠ ಪರಂಪರೆಯ ಒಂದು ಅಮೂಲ್ಯ ರತ್ನದಂತೆ ಅವರು ಕೆಲಸ ಮಾಡಿದರು.

ಶತಮಾನೋತ್ಸವ ವರ್ಷದ ಪ್ರಯುಕ್ತ ಹಲವು ಕಾರ್ಯಕ್ರಮಗಳಿರ ಬಹುದು. ಇವುಗಳಿಂದ ಸಹಾಕಾರ ಚಳುವಳಿಗೆ ಒಂದು ಹೊಸ ಶಕ್ತಿ ಬರುತ್ತದೆ. ಈ ದಿನ ವಕೀಲ ಸಾಹೇಬರ ಜನ್ಮ ಶತಮಾನೋತ್ಸವ ವರ್ಷ ನಿಮಿತ್ತ ಸಹಕಾರ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ನೆನಪಿಸುತ್ತಾ ಮುಂದುವರೆದು ತಾವು ದಿನವೆಲ್ಲ ಕುಳಿತು ಚರ್ಚೆ ಮಾಡಲಿದ್ದೀರಿ. ಸಹಕಾರಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶ್ವದಲ್ಲಿರುವ ಉತ್ತಮ ಪ್ರಯತ್ನ / ಕ್ರಮ ಯಾವುವು ಎಂಬ ಬಗ್ಗೆ ವಿಚಾರ ವಿನಿಮಯ ಮಾಡಲಿದ್ದೀರಿ.

ಕೇಷಿ ಕ್ಷೇತ್ರದಲ್ಲಿ ಸಹಕಾರದ ಮಾಧ್ಯಮದಿಂದ ಹೇಗೆ ಮುಂದುವರೆಯಬಹುದು, 2022ಕ್ಕೆ ನಮ್ಮ ರೈತರ ಆದಾಯವನ್ನು ಎರಡು ಪಟ್ಟಾಗುವಂತೆ ಹೇಗೆ ಮಾಡಬಹುದು, ಹೀಗಾಗಲು ಸಾಧ್ಯವಾಗುವಂತಹ ಯಾವ ಅಂಶಗಳನ್ನು ನಾವು ಅಳವಡಿಸೋಣ, ಯಾವ ತಪ್ಪು ಅಭ್ಯಾಸಗಳನ್ನು ನಾವು ತೊಲಗಿಸೋಣ ತನ್ಮೂಲಕ ನಮ್ಮ ಕೃಷಿ ಲೋಕವನ್ನು ಮತ್ತು ನಮ್ಮ ಗ್ರಾಮೀಣ ಬದುಕನ್ನು ಆಧುನಿಕ ಭಾರತದ ಸಂದರ್ಭಕ್ಕೆ ಅಣಿಗೊಳಿಸೋಣ ಈ ಎಲ್ಲ ವಿಷಯಗಳ ಬಗ್ಗೆ ಚರ್ಚೆಯಾಗಬೇಕಾಗಿದೆ. ನಾವು ಅಭಿವೃದ್ಧಿಯ ಈ ದಿಕ್ಕಿನಲ್ಲಿ ತಯಾರಿ ನಡೆಸಬೇಕು.

ಪಟ್ಟಣಗಳನ್ನು ನಾವು ಮುಂದುವರೆಯುವಂತೆ ಮಾಡೋಣ ಮತ್ತು ಹಳ್ಳಿಗಳನ್ನು ಹಿಂದೆಯೇ ಬಿಡೋಣ ಎಂಬುದಂತೂ ಸಾಧ್ಯವಿಲ್ಲ. ಒಂದು ಸಮನ್ವಯಿತ ಅಭಿವೃದ್ಧಿ ಅವಶ್ಯ; ಸಮಾನ ಅವಕಾಶಗಳಿರುವುದು ಆವಶ್ಯಕ. ಸಮುಚಿತ ಅಭಿವೃದ್ಧಿ ಮತ್ತು ಸಮಾನ ಅವಕಾಶ ಇವುಗಳ ಮೂಲ ಸಹಕಾರ ಮಂತ್ರ. ಕಾಲಾನುಗತವಾಗಿ ವ್ಯವಸ್ಥೆಗಳಲ್ಲಿ ದೋಷ ಉಂಟಾಗುವುದು ಸ್ವಾಭಾವಿಕ. ಕೆಲವು ವ್ಯವಸ್ಥೆಗಳು ಕಾಲಬಾಧಿತಗಳಾಗುತ್ತವೆ. ಸಹಕಾರ ಕ್ಷೇತ್ರದ ಜೊತೆ ಸೇರಿರುವ ಯಾರಾದರೂ ಆತ್ಮಾವಲೋಕನ ಮಾಡಿಕೊಳ್ಳುತ್ತಾ ಇರುವುದು ಅವಶ್ಯಕ; ಹಾಗಿದ್ದಾಗ ಬೆಳವಣಿಗೆಗಳಾಗುತ್ತವೆ. ಸಹಕಾರ ಕ್ಷೇತ್ರ ಎಂಬುದು ಒಂದು ಸ್ಥಾಪಿತ ರಚನೆ, ಸಂವಿಧಾನಬದ್ಧ ಕಾನೂನು ವ್ಯವಸ್ಥೆ, ನಿಯಮಗಳಿಗನುಸಾರವಾಗಿ ನಡೆಯುವ ಒಂದು ಸಂಸ್ಥೆ ಅಷ್ಟೆ, ಆ ಚೌಕಟ್ಟಿನಲ್ಲಿ ತಾನು ಹೋಗಿ ಕುಳಿತರೆ ತಾನೂ ಒಬ್ಬ ಸಹಕಾರಿಯಾಗಿ ಬಿಡುತ್ತೇನೆ ಎಂದು ಯಾರಾದರೂ ಭಾವಿಸಿದರೆ ಅದು ಬಹುದೊಡ್ಡ ತಪ್ಪಾಗುತ್ತದೆ.

ನಮ್ಮದು ಇಷ್ಟು ದೊಡ್ಡ ದೇಶ. ವ್ಯವಸ್ಥೆಳ ಅಗತ್ಯ ಬರುತ್ತದೆ, ನಿಯಮಗಳ ಅಗತ್ಯ ಉಂಟಾಗುತ್ತದೆ, ರಾಚನಿಕತೆಯ ಆವಶ್ಯಕತೆಯೂ ಇದೆ, ಮಾಡಬೇಕಾದವು – ಮಾಡಬಾರದವು ಇವುಗಳ ಪಟ್ಟಿಯೂ ಅಗತ್ಯ. ಆದರೆ ಸಹಕಾರ ತತ್ವ ಇಷ್ಟರಿಂದಲೇ ನಡೆಯುವುದಿಲ್ಲ; ಸಹಕಾರ ಎಂಬುದು ಅಂತಸ್ಫೂರ್ತ ನಡೆ. ಇದಕ್ಕೊಂದು ಸಂಸ್ಕಾರವಿರಬೇಕು, ಆದ್ದರಿಂದಲೇ बिना संस्कार नहीं सहकार (ಸಂಸ್ಕಾರವಿಲ್ಲದೆ ಸಹಕಾರವಿಲ್ಲ) ಎಂದು ಆಗಾಗ ಕೇಳುತ್ತೇವೆ.

ಈಚಿನ ದಿನಗಳಲ್ಲಿ ದೃಷ್ಟಿಗೆ ಬೀಳುವ ಕೆಲವು ಘಟನೆಗಳಿಂದ ಅನಿಸುತ್ತದೆ ಸಹಕಾರದ ರಾಚನಿಕತೆಯಲ್ಲಿ ಅಂತಸ್ಫೂರ್ತಿ ಎಲ್ಲೋ ಕಳೆದು ಹೋಗಿದೆ ಎಂದು. ಈ ಅಂತಸ್ಫೂರ್ತಿಯನ್ನು ಪುನರುಜ್ಜೀವಿಸುವಂತೆ ಮಾಡಲು, ಪುನಃ ಚೈತನ್ಯಯುತವಾಗುವಂತೆ ಮಾಡಲು ವಕೀಲ ಸಾಹೇಬರಿಗಿಂತ ದೊಡ್ಡ ಪ್ರೇರಣೆ ಇನ್ನೇನಿದೆ. ಸಹಕಾರದ ಅಂತಸ್ಫೂರ್ತಿಗೆ ನಾವು ಎಷ್ಟು ಹೆಚ್ಚು ಶಕ್ತಿಯನ್ನು ನೀಡುತ್ತೇವೆಯೋ ಅಷ್ಟು ಮಟ್ಟಿಗೆ ವ್ಯವಸ್ಥೆಗಳು ತಮ್ಮಷ್ಟಕ್ಕೆ ತಾವೇ ಸರಿಯಾಗುತ್ತಾ ಹೋಗುತ್ತವೆ.

ನಮ್ಮ ದೇಶದಲ್ಲಿ ಸಹಕಾರ ಕ್ಷೇತ್ರದ ಇಡೀ ಚಳುವಳಿಯ ಆಧಾರ ಗ್ರಾಮೀಣ ಪ್ರದೇಶಗಳಾಗಿವೆ. ಅದೇ ನಿಯಮಗಳಿಗನುಸಾರವಾಗಿ ಪಟ್ಟಣ ಪ್ರದೇಶಗಳಲ್ಲಿ ಸಹಕಾರ ಸಂಘಗಳು ತಲೆ ಎತ್ತಲಾರಂಭಿಸಿದಾಗ, ಅದರಲ್ಲೂ ಪಟ್ಟಣಗಳಲ್ಲಿ ಸಹಕಾರೀ ಬ್ಯಾಂಕಿಂಗ್ ಕ್ಷೇತ್ರದ ಸ್ಥಾಪನೆಯಾದಾಗ, ಸಹಕಾರಸಂಘಗಳ ಸ್ವರೂಪ ಮತ್ತು ಸ್ವಭಾವಗಳು ಬದಲಾಗಿ ಅವುಗಳ ಉದ್ದಗಲಗಳು ವಿಸ್ತರಿಸಲು ಪ್ರಾರಂಭವಾದುವು; ಈ ಸಂದರ್ಭದಲ್ಲಿ ಸಹಕಾರೀ ಕ್ಷೇತ್ರದಲ್ಲಿ ಸಂಶಯಗಳ ಮತ್ತು ದುಃಸಂಶಯಗಳ ವ್ಯಾಪ್ತಿ ಕೂಡ ವಿಸ್ತೃತವಾಗುತ್ತಾ ಸಾಗಿತು ಎಂಬುದು ಸುಳ್ಳೇನೂ ಅಲ್ಲ.

ಇಂದಿಗೂ ಗ್ರಾಮೀಣ ಜೀವನದ ಜೊತೆ ಬೆರೆತುಕೊಂಡಿರುವ ಸಹಕಾರ ಸಂಘ ಮತ್ತು ಚಳುವಳಿಗಳಲ್ಲಿ ಹಿಂದೆ ಇದ್ದ ಅದೇ ಪಾವಿತ್ರ್ಯದ ಅನುಭೂತಿ ಉಂಟಾಗುತ್ತದೆ. ರೈತನಿಗೆ ಕೂಡ ತನಗಿಲ್ಲೊಂದು ದಾರಿ ಇದೆ ಎನಿಸುತ್ತದೆ. ಸಹಕಾರ ಆಂದೋಲನಕ್ಕೆ ಸಮಯ ನೀಡುವ ಜನರಿಗೂ ಎನಿಸುತ್ತದೆ ‘ಹೌದು ನಾನು ಈ ಚಳುವಳಿಯ ಮುಖಾಂತರ ಬಡರೈತನಿಗಾಗಿ ಏನೋ ಸ್ವಲ್ಪ ಮಾಡುತ್ತಿದ್ದೇನೆ’ ಎಂದು. ಇವತ್ತು ನೀವು ಇಷ್ಟೆಲ್ಲ ಚರ್ಚೆ ಮಾಡುವವರು. ನನ್ನ ಮನಸ್ಸಿನಲ್ಲೊಂದು ಸಣ್ಣ ವಿಷಯವಿದೆ ಮತ್ತು ಅದನ್ನು ನಾನು ನಿಮ್ಮ ಮುಂದಿಡುತ್ತೇನೆ, ನೀವು ಅದರ ಬಗ್ಗೆಯೂ ಅಗತ್ಯವಾಗಿ ಚರ್ಚೆ ಮಾಡಿ.

ನಮ್ಮ ದೇಶದ ರೈತರಿಗೆ ಹಲವು ಸಮಸ್ಯೆಗಳಿವೆ. ರೈತರ ವ್ಯವಹಾರಗಳನ್ನು ನೋಡಿದರೆ ನಮಗೆ ಗೊತ್ತಾಗುತ್ತದೆ: ರೈತ ತಾನು ಖರೀದಿಸುವಾಗ ಚಿಲ್ಲರೆಯಾಗಿ ಖರೀದಿಸುತ್ತಾನೆ ಆದರೆ ಮಾರಾಟ ಮಾಡುವಾಗ ರಖಂ ನಲ್ಲಿ ಮಾರುತ್ತಾನೆ. ಇದನ್ನು ಉಲ್ಟಾ ಮಾಡಲು ಸಾಧ್ಯವೇ ನೋಡಿ: ರಖಂ ಆಗಿ ಖರೀದಿಸುವುದು ಮತ್ತು ಚಿಲ್ಲರೆಯಾಗಿ ಮಾರುವುದು? ಹೀಗೆ ಮಾಡಿದರೆ ರೈತನನ್ನು ಯಾರೂ ಲೂಟಿ ಮಾಡಲಾರರು. ಮಧ್ಯವರ್ತಿಗಳು ಕಮಿಶನ್ ಮುರಿದುಕೊಂಡು ತಿನ್ನಲು ಸಾಧ್ಯವಾಗದು. ಡೈರಿ ಉದ್ಯೋಗವನ್ನು ಅಧ್ಯಯನ ಮಾಡಿದವರು ಸಹಕಾರಿ ಎಂಬುದರ ಕಡೆಗೆ ಗಮನ ನೀಡಿ. ಅದರ ವೈಶಿಷ್ಟ್ಯವೆಂದರೆ ಅದರಲ್ಲಿ ರೈತ ಇಡಿಯಾಗಿ ಖರೀದಿಸುತ್ತಾನೆ ಮತ್ತು ಇಡಿಯಾಗಿ /ರಖಂ ಆಗಿ ಮಾರುತ್ತಾನೆ. ನೋಡಿ ಇದು ಇದರ ಸೂಕ್ಷ್ಮತೆ. ಇಡಿಯಾಗಿ ಖರೀದಿ, ಇಡಿಯಾಗಿ ಮಾರಾಟ ಇದೇ ಡೈರಿ ಉದ್ಯಮದ ಯಶಸ್ಸಿನ ಮೂಲ. ಮೊದಲು ಯಾರು ಹಾಲನ್ನು ಉತ್ಪಾದಿಸುತ್ತಿದ್ದರೋ ಅವರೇ ಹಾಲನ್ನು ಮಾರಾಟ ಮಾಡಲು ಮನೆಮನೆಗೆ ಹೋಗುತ್ತಿದ್ದರು. ಈಗ ಹತ್ತು ಲೀಟರನ್ನು ಒಟ್ಟು ಮಾಡಿಕೊಂಡು ನಡೆದುಬಿಡುತ್ತಾನೆ; ಹಾಲನ್ನು ಅಲ್ಲಿ ಕೊಟ್ಟು ಮನೆಗೆ ಬಂದುಬಿಡುತ್ತಾನೆ. ಅಂದರೆ ಇಡಿಯಾಗಿ ಮಾರುತ್ತಾನೆ. ಅವನು ಖರೀದಿಸುವುದಾದರೂ ಡೈರಿಯ ಮುಖಾಂತರ: ಅವನಿಗೆ ಬೇಕಾದ ಪಶು ಆಹಾರ, ಪಶುಗಳಿಗೆ ಔಷಧಿಗಳನ್ನೆಲ್ಲ ಖರೀದಿಸಿ ಮತ್ತೆ ಅದಕ್ಕೆ ಬೇಕಾದ ಪೋಷಣೆ ಮಾಡುತ್ತಾನೆ. ಈ ಎಲ್ಲ ವ್ಯವಸ್ಥೆಗಳು ಸಾಮೂಹಿಕ ರೂಪದಲ್ಲಿ ಇಡೀ ಹಳ್ಳಿಗೆ ದೊರಕುತ್ತದೆ.

ಅದರ ಒಂದು ಪರಿಣಾಮವೆಂದರೆ ಡೈರಿಯಿಂದ ರೈತನಿಗೆ ಸ್ವಲ್ಪವಲ್ಲಸ್ವಲ್ಪ ಬಲ ಸಿಗಲು ಪ್ರಾರಂಭವಾಯಿತು, ಅವನು ಕಷ್ಟಗಳಿಂದ ತಪ್ಪಿಸಿಕೊಳ್ಳುತ್ತಾ ಬಂದ, ಅವನಿಗೊಂದು ರೀತಿಯ ಹೆಚ್ಚುವರಿ ಆದಾಯದ ಮೂಲ ಸಿಕ್ಕಿದಂತಾಯಿತು. ಬೇರೆ ಎಲ್ಲ ಕ್ಷೇತ್ರಗಳಲ್ಲಿ ಅವನಿಗೆ ಕಷ್ಟಗಳಿವೆ. ಒಂದು ವೇಳೆ ಅವನು ಖಾಸಗಿಯಾಗಿ ದೊಡ್ಡಮಟ್ಟದಲ್ಲಿ ಹಾಲು ಮಾರುತ್ತಿದ್ದನೆನ್ನಿ, ಅವನಿಗೆ ಇಷ್ಟು ಲಾಭವಾಗುತ್ತಿರಲಿಲ್ಲ. ಅವನು ಸಹಕಾರ ಕ್ಷೇತ್ರದಲ್ಲಿ ಈ ಕೆಲಸ ಮಾಡಿದ. ಆದ್ದರಿಂದ ಅವನಿಗೆ ಇದು ಈ ರೀತಿ ಆದಾಯದ ಮೂಲವಾಗುವುದು ಸಾಧ್ಯವಾಯಿತು. ಈ ಕ್ಷೇತ್ರದಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬರುತ್ತಿರುವಂತೆ ನಾವು ಇತರೆಡೆಗಳಲ್ಲೂ ಸಹಕಾರ ಚಳುವಳಿಯನ್ನು ಪ್ರಾರಂಭಿಸಲು ಸಾಧ್ಯವಾದೀತೆ? ಮೊದಲು ಐದು ಸಂಘಗಳಿದ್ದವು, ಅವುಗಳನ್ನು ಜನರು ನಡೆಸುತ್ತಿದ್ದರು, ನಾನು ಆರನೆಯದನ್ನು ಪ್ರಾರಂಭಿಸುತ್ತೇನೆ; ಪ್ರಾರಂಬಿಸಿ ತೊರಿಸುತ್ತೇನೆ. ಸಹಕಾರದ ಒಂದು ಹೊಸ ಕ್ಷೇತ್ರ ರೂಪ ತಳೆದಿದೆ. ಹಿಂದಿನಿಂದ ನಡೆಯುತ್ತಿರುವ ಅವು ಐದು ನಡೆಯುತ್ತಿರಲಿ. ಇನ್ನೂ ಯಾರೂ ಕಾಲಿಡದ ಹತ್ತು ಕ್ಷೇತ್ರಗಳಿವೆ. ಅಂತಹ ಕ್ಷೇತ್ರಗಳಿಗೆ ಹೋಗಿ ಸಹಕಾರ ತತ್ವವನ್ನು ಬಳಸಿ ಅಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವನ್ನು ಮಾಡಬಲ್ಲೆನೆ? ಇಂದಿಗೂ ಸಹಕಾರ ತತ್ವದ ಹವೆ ಹಾಯದ ಲೆಕ್ಕವಿಲ್ಲದಷ್ಟು ಕ್ಷೇತ್ರಗಳಿವೆ. ಎಲ್ಲಿಗೆಲ್ಲ ಸಹಕಾರ ತಲುಪಿದೆಯೋ ಅಲ್ಲೆಲ್ಲ ಸ್ಪರ್ಧೆ ಸಾಕಷ್ಟಿದೆ. ಸಕ್ಕರೆಯ ಕ್ಷೇತ್ರದಲ್ಲಿ ಸ್ಪರ್ಧೆ ಬಹಳ ಇದೆ; ಹಾಲಿನ ಕ್ಷೇತ್ರದಲ್ಲೂ ಸ್ಪರ್ಧೆ ಸಾಕಷ್ಟಿದೆ. ಎಲ್ಲಿ ಸ್ವಲ್ಪವಲ್ಲ ಸ್ವಲ್ಪ ದುಡಿಮೆ ಇದೆಯೋ ಅಲ್ಲೆಲ್ಲ ಸ್ಪರ್ಧೆಯೂ ಸ್ವಾಭಾವಿಕವಾಗಿ ಇದೆ. ಆದರೆ ಒಂದು ತಲೆಮಾರಿಡೀ ಶ್ರಮವಹಿಸಿ ಜೈಸಬೇಕಾದ ಬೇಕಾದಷ್ಟು ಕ್ಷೇತ್ರಗಳಿವೆ; ಅಂತಹ ಕಡೆ ದುಡಿದಾಗ ಸಹಕಾರ ಕ್ಷೇತ್ರದ ಶಕ್ತಿ ಬೆಳೆಯುತ್ತದೆ.

ನಾವು ಹೊಸ ತಲೆಮಾರನ್ನು ಹೊಸ ಅಂತಃಸ್ಫೂರ್ತಿಯೊಂದಿಗೆ ಮತ್ತು ವಿಶೇಷವಾಗಿ ಗ್ರಾಮೀಣ ಕ್ಷೇತ್ರದಲ್ಲಿ ಆಮೂಲಾಗ್ರವಾಗಿ ಪರಿವರ್ತನೆ ತರಲು ಸಹಕಾರ ಚಳುವಳಿಯಲ್ಲಿ ಉತ್ಪ್ರೇರಿಸಬಹುದೆ? ನಮ್ಮ ದೇಶದ ಸ್ವಭಾವವು ಸಹಕಾರೀ ಆಂದೋಲನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದು ಬೇರೆ ಕಡೆಯಿಂದ ಎರವಲು ಪಡೆದ ವೈಚಾರಿಕ ವ್ಯವಸ್ಥೆಯಲ್ಲ. ಇದು ನಮ್ಮ ಮೂಲಭೂತ ಚಿಂತನೆ, ಸ್ವಭಾವ ಮತ್ತು ಸಂಸ್ಕಾರಗಳಿಗನುಸಾರವಾಗಿಯೇ ಇರುವ ಒಂದು ವ್ಯವಸ್ಥೆ. ಆದ್ದರಿಂದಲೇ ಇಲ್ಲಿ ಇದರ ಏಳಿಗೆ ಬಹಳ ಸ್ವಾಭಾವಿಕವಾದುದು. ಆದ್ದರಿಂದ ನಿಮಗೆ ಇದನ್ನು ಸೇರ್ಪಡೆ ಮಾಡುವ ಆವಶ್ಯಕತೆ ಇಲ್ಲ. ಬೇರೆ ಎಲ್ಲ ವ್ಯವಸ್ಥೆಗಳನ್ನು ನಾವು ಬೇರೆಡೆಯಿಂದ ತರುವೆವಾದಾದರೆ, ಅವು ಸಾಲ ಪಡೆಯುವ ವ್ಯವಸ್ಥೆಗಳಾದರೆ, ವಿದೇಶೀ ವಿಷಯಗಳಾದುದರಿಂದ ಒಂದು ರೀತಿಯ ಪ್ರತಿರೋಧವಿರುತ್ತದೆ. ಆದರೆ ಇದು ನಮ್ಮ ಸಹಜ ಮತ್ತು ಸ್ವಾಭಾವಿಕ ವ್ಯವಸ್ಥೆಯ ಭಾಗವಾಗಿದೆ, ನಾವು ಜೊತೆ ಸೇರಿಕೊಂಡು ಕೆಲಸ ಮಾಡಬಹುದಾದ ವ್ಯವಸ್ಥೆ.

ಈಗ ಯೂರಿಯಾದ ನೀಮ್-ಕೋಟಿಂಗ್ ಕೆಲಸ ನಡೆಯುತ್ತಿದೆ. ರೈತರಿಗೆ ಲಾಭವಾಗಿದೆ. ಆದ್ದರಿಂದಲೇ ‘ಯೂರಿಯ ಸಿಗುತ್ತಿಲ್ಲ ಹೋಹೋ ಬೇಗ ಕೊಡಿ’ ಎಂಬಂತಹ ಗಲಾಟೆ ನಿಂತು ಹೋಗಿದೆ. ಆದರೆ ಈ ನೀಮ್-ಕೋಟಿಂಗ್ ಮಾಡುವುದಕ್ಕಾಗಿ ಬೇವಿನ ಬೀಜಗಳನ್ನು ಒಟ್ಟು ಮಾಡುವುದು ಅವುಗಳಿಂದ ಎಣ್ಣೆ ತೆಗೆಯುವುದು, ಆ ಎಣ್ಣೆಯನ್ನು ಯೂರಿಯಾ ತಯಾರು ಮಾಡುವ ಫ್ಯಾಕ್ಟರಿಗಳಿಗೆ ತಲುಪಿಸುವುದು ಈ ಹೊಸ ಕೆಲಸಗಳೂ ಹುಟ್ಟಿವೆ; ದೊಡ್ಡದಾಗಿವೆ. ನಮ್ಮ ಹಳ್ಳಿಯ ಮಹಿಳೆಯರು ಒಂದು ಸಹಕಾರೀ ಸಂಘವನ್ನು ಕಟ್ಟಿಕೊಂಡು ಈ ನೀಮ್-ಕೋಟಿಂಗ್ ಕೆಲಸಕ್ಕಾಗಿ ಅಗತ್ಯವಿರುವ ಬೇವಿನ ಬೀಜಗಳನ್ನು ಕಾಡಿಗೆ ಹೋಗಿ ಎಲ್ಲಿ ಬೇವಿನ ಮರಗಳಿವೆಯೋ ಅಲ್ಲಿಂದ ಆರಿಸಿ ತಂದು ಒಟ್ಟು ಮಾಡಿದರೆ ಆಗ ನೋಡಿ, ಉದ್ಯಮಶೀಲತೆಯ ಹೊಸ ಕ್ಷೇತ್ರವೊಂದು ತೆರೆದುಕೊಳ್ಳುತ್ತದೆ; ಹೊಸ ಸಹಕಾರ ಕ್ಷೇತ್ರ ಪ್ರಾರಂಭವಾಗಬಹುದು.

ನಾನು ನನಗಿರುವ ಡೈರಿ ಮಿತ್ರರಿಗೆಲ್ಲ ಪದೇಪದೇ ಹೇಳುತ್ತಾ ಇರುತ್ತೇನೆ: ಅವರು ತಮ್ಮ ಮಿತ್ರರನ್ನೆಲ್ಲ ಪಶುಪಾಲನೆಯಲ್ಲಿ ತೊಡಗುವಂತೆ ಪ್ರೇರೇಪಿಸುತ್ತಾ ಇರಬೇಕೆಂದು. ನಾವು ಆಗ್ರಹ ಪೂರ್ವಕವಾಗಿ ಜೇನುಕೃಷಿಗೂ ಒತ್ತು ನೀಡಬೇಕು. ನಾವು ದೇಶದಲ್ಲಿ ಜೇನು ಕ್ರಾಂತಿಯನ್ನೂ ತರಬೇಕು; ದೇಶದಲ್ಲಿ ಸಿಹಿ ಕ್ರಂತಿ ಆಗಬೇಕು. ಸಹಕಾರ ಚಳುವಳಿಯ ಮುಖಾಂತರ ಮಧುಕ್ರಾಂತಿಯನ್ನು ತರಬಹುದಾಗಿದೆ. ರೈತ ಪಶುಪಾಲನೆ ಮಾಡಿ ಹಾಲನ್ನು ಉತ್ಪಾದಿಸುವಂತೆಯೇ, ಒಂದು ಐವತ್ತು ಜೇನು ನೊಣಗಳನ್ನು ಕೂಡಿಸಿ ಜೇನು ಸಾಕಣೆ ಪ್ರಾರಂಭಿಸಬಹುದು. ಹೀಗೆ ಇದರಿಂದ ವಾರ್ಷಿಕವಾಗಿ ಒಂದು ಒಂದೂವರೆ ಲಕ್ಷದಷ್ಟು ಹೆಚ್ಚುವರಿ ಆದಾಯವನ್ನು ಸುಲಭವಾಗಿ ಗಳಿಸಬಹುದು. ಹೇಗೆ ಡೈರಿಯಿಂದ ಹಾಲು ತೆಗೆದುಕೊಳ್ಳಲಾಗುವುದೋ ಹಾಗೆಯೇ ಜೊತೆಜೊತೆಗೇನೇ ಜೇನನ್ನೂ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಮಾಡಬಹುದು. ಡೈರಿಯಲ್ಲಿ ಹಾಲಿನ ಪ್ರಕ್ರಿಯೆಗಳು ಹೇಗೆ ಆಗುತ್ತವೆಯೋ ಹಾಗೆ ಜೇನಿನ ಪ್ರಕ್ರಿಯೆಗಳೂ ನಡೆಯುವಂತಾಗಬೇಕು; ಅದರ ಮಾರುಕಟ್ಟೆ ಕೂಡ ಏರ್ಪಡಬೇಕು. ರಾಸಾಯನಿಕ ಮೇಣವನ್ನು 100ರೂಪಾಯಿಗೆ ಮಾರುತ್ತಾರಾದರೆ ಜೇನು ಮೇಣದ ಬೆಲೆ 400ರಿಂದ 450 ರೂಪಾಯಿಗಳಷ್ಟಿದೆ. ಜೇನು ಮೇಣಕ್ಕೆ ಬೇಡಿಕೆ ಅಷ್ಟಿದೆ. ಅದಕ್ಕೆ ಭಾರತದಲ್ಲಿಯೇ ಬಹು ದೊಡ್ಡ ಮಾರುಕಟ್ಟೆ ಇದೆ. ಆದರೆ ನಮ್ಮ ರೈತ ಇಂದಿಗೂ ಅದನ್ನು ಅಸ್ಪೃಶ್ಯವೆಂಬಂತೆ ನೋಡುತ್ತಾನೆ. ಜೇನುಗಳಲ್ಲಿ ನೂರಾರು ವಿಧಗಳಿವೆ. ಜೇನಿನಿಂದ ಬೆಳೆಗಳಿಗೂ ತುಂಬ ಲಾಭವಾಗುತ್ತದೆ. ಇವತ್ತು ಯಾರು ತೋಟಗಾರಿಕೆ ಕೆಲಸ ಮಾಡುತ್ತಿದ್ದಾರೊ ಅವರಿಗಾಗಿ ಜೇನುನೊಣ ರಾಯಭಾರಿಯ ಕೆಲಸ ಮಾಡುತ್ತದೆ. ಒಂದು ಕೆಲಸ ಮಾಡುತ್ತದೆ. ಇದನ್ನೆಲ್ಲ ಹೇಳುವ ಅಭಿಪ್ರಾಯ ಏನೆಂದರೆ ನಾವು ಮುಂದುವರೆಯುವುದು ಹೇಗೆ ಎಂದು ಯೋಚಿಸಲು ಇಂತಹ ಹಲವು ಹೊಸ ಕ್ಷೇತ್ರಗಳಿವೆ. ನಮ್ಮ ಕರಾವಳಿ ತೀರವಿದೆ. ಕರಾವಳಿಯ ನಮ್ಮ ಸೋದರ-ಸೊದರೀ ಮೀನುಗಾರರು ವರ್ಷದಲ್ಲಿ ಒಂದಷ್ಟು ಕಾಲ ಕೆಲಸವಿಲ್ಲದೆ ಇರುತ್ತಾರೆ. ವಾರ್ಷಿಕ ಐದು ತಿಂಗಳು ಹೆಚ್ಚು ಕಡಿಮೆ ಅವರ ಕೆಲಸ ನಿಂತು ಹೋಗಿರುತ್ತದೆ. ಹವಾಮಾನದ ಕಾರಣ ಮಳೆಯಲ್ಲಿ ಸಮುದ್ರದ ಮೇಲೆ ಹೋಗುವುದು ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ಮೀನುಗಾರಿಕೆಗಾಗಿ ಹೋಗುವುದು ಸಾಧ್ಯವಾಗುವುದಿಲ್ಲ. ಆದರೆ ಸಮುದ್ರ ಕಳೆಯ ಬೇಸಾಯ ನಮ್ಮಲ್ಲಿ ಅಷ್ಟು ಜನಪ್ರಿಯವಾಗಿಲ್ಲ. ನಮ್ಮ ಕರಾವಳಿಯಲ್ಲಿ ನಮ್ಮ ಮೀನುಗಾರ ಸಹೋದರ-ಸಹೋದರಿಯರು ಸಹಕಾರ ಚಳುವಳಿಯ ಮುಖಾಂತರ ಸಮುದ್ರದ ಕಲ್ಲುಬಂಡೆಗಳ ತಟದಲ್ಲಿ ಬೇಸಾಯವನ್ನು ಪ್ರಾರಂಭಿಸಿದರೆ ಔಷಧ-ಕೈಗಾರಿಕೆಗೆ ಮೂಲದ್ರವ್ಯವಾಗಿ ಅನೇಕ ಪ್ರಯೋಗ ಶಾಲೆಗಳಲ್ಲಿ ಪ್ರಮಾಣಿತ ವಸ್ತುವಿನಂತೆ ಬಳಕೆಯಾಗಬಹುದು. ಔಷಧಿಗಳ ಕೈಗಾರಿಕೆಗೆ ಇದು ಒಳ್ಳೆಯ ಕಚ್ಚಾ ವಸ್ತು. ಆದರೆ ಇದಕ್ಕೆ ಮಾರುಕಟ್ಟೆ ಸಿಗಲಿಲ್ಲವೆನ್ನಿ; ಅದನ್ನು ಸಮುದ್ರದಲ್ಲಿಯೇ ಬಿಟ್ಟರೆ, 45 ದಿನಗಳು ಅದರ ಚಕ್ರೀಯ ಅವಧಿ. 45 ದಿನಗಳನಂತರ ಅದರ ಮತ್ತೊಂದು ಬೆಳೆ ಮತ್ತೆ ಸಿದ್ಧವಾಗಿಬಿಡುತ್ತದೆ. ಪ್ರತಿ 45 ದಿನಕ್ಕೊಂದು ಸಲ ಅದರ ಬೆಳೆ ಸಿಗುತ್ತದೆ. ಈ ಬೆಳೆಯನ್ನು ಅವಧಿಗನುಸಾರವಾಗಿ ಸಮುದ್ರದಲ್ಲೆಲ್ಲ ಚದುರಿಸಿದರೆ ಪ್ರತಿ ದಿನಕ್ಕೊಂದು ಬೆಳೆ ಬರುವಂತೆ ಆಗುತ್ತದೆ. ಏಚಿನೂ ಮಾಡಬೇಕಿಲ್ಲ, ಅದರ ರಸ ತೆಗೆದು ಹೊಲಗಳಲ್ಲಿ ರಸವನ್ನು ಸಿಂಪಡಿಸಿರಿ ಜಮೀನಿನ ರಕ್ಷಣೆಯನ್ನು ಮಾಡುವ ಬಹುದೊಡ್ಡ ಕಾರ್ಯವನ್ನು ರಸ ಮಾಡುತ್ತದೆ. ಹೆಚ್ಚೇನೂ ಕೆಲಸವಿಲ್ಲ, ಶ್ರಮವಿಲ್ಲ. ಸಹಕಾರ ಚಳುವಳಿಯ ಮುಖಾಂತರ ಸಮುದ್ರ ತೀರದ ನಮ್ಮ ಮೀನುಗಾರ ಸಹೋದರರು ಅವರ ಮಾಮೂಲೀ ಕೆಲಸ ಯಾವ ಐದು ತಿಂಗಳು ಇರುವುದಿಲ್ಲವೋ ಆಗ ಮಾತ್ರ ಈ ಕೆಲಸ ಮಾಡಬಹುದು; ಹಗಲು ರಾತ್ರಿ ಮನೆಯಲ್ಲೇ ಇರುವ ಅವರ ಮನೆಯವರಾದ ಮಹಿಳೆಯರಿಗೆ ಅವಕಾಶಗಳನ್ನು ತೆರೆಯಲು ಇದರಿಂದ ಸಾಧ್ಯವಾಗುತ್ತದೆ.

ನನ್ನ ಮಾತಿನ ಅಭಿಪ್ರಾಯವೆಂದರೆ ನಮ್ಮಲ್ಲಿ ಗ್ರಾಮೀಣ ಆರ್ಥಿಕತೆಯಲ್ಲಿ ಬದಲಾವಣೆ ತರಲು ಸಹಕಾರ ಚಳುವಳಿ ಅಗತ್ಯ; ಅದು ಸಣ್ಣಸಣ್ಣ ವಿಷಯಗಳ ಮುಖಾಂತರ ಬಹುದೊಡ್ಡ ಬದಲಾವಣೆಯನ್ನು ತರಬಲ್ಲುದು.

ನಾನು ತಮ್ಮಲ್ಲೆಲ್ಲ ಆಗ್ರಹಿಸುತ್ತೇನೆ: ವಕೀಲ ಸಾಹೇಬರು ಯಾವ ಮೂಲಭೂತ ತತ್ವಗಳನ್ನು ಸಹಕಾರ ಚಳುವಳಿಯೊಂದಿಗೆ ಜೋಡಿಸಿದರೋ, ಯಾವ ಸಂಸ್ಕಾರ ತತ್ವಗಳನ್ನು ಸಹಕಾರ ಚಳುವಳಿಯ ಜೊತೆ ಕೊಂಡೊಯ್ದರೋ, ಯಾವ ಸಾನುಕಂಪ ನೀತಿಯನ್ನು ಸಹಕಾರ ಚಳುವಳಿಯಲ್ಲಿ ಇರಬೇಕೆಂದು ಆಗ್ರಹಿಸಿದರೋ, ಆ ಮೂಲ ಭೂತ ತತ್ವಗಳು ಮತ್ತು ವಿಚಾರಗಳನ್ನಿಟ್ಟುಕೊಂಡು ಇಲ್ಲಿ ಬಂದಿರುವ ಸಹಕಾರ ಕ್ಷೇತ್ರದ ಬಂಧುಗಳು ಇದರ ಪ್ರಚಾರ-ಪ್ರಸಾರಗಳನ್ನು ಮಾಡಬೇಕು; ಜನರನ್ನು ಜೋಡಿಸಬೇಕು; ಮತ್ತು ಸಹಕಾರ ಚಳುವಳಿಯಲ್ಲಿ ಭಾಗವಹಿಸಿ ನಿಜವಾದ ಅರ್ಥದಲ್ಲಿ ಶ್ರೀ ಸಾಮಾನ್ಯರ ಬದುಕಿನ ಹಕ್ಕುಗಳನ್ನುರಕ್ಷಿಸುತ್ತಾ ಸಮಾನ ಪಾಲುದಾರಿಕೆಯಜೊತೆಗೆ ಅವರು ಮುಂದುವರೆಯುವಂತೆ ಮಾಡಲು ಸಹಾಯಮಾಡಬೇಕು.

ಈ ವಿಶ್ವಾಸದೊಂದಿಗೆ ವಕೀಲ ಸಾಹೇಬರ ಪುಣ್ಯ ಸ್ಮರಣೆಯನ್ನು ಮಾಡುತ್ತಾ, ತಮ್ಮೆಲ್ಲರಿಗೂ ಹೃತ್ಪೂರ್ವಕವಾಗಿ ಶುಭಾಶಯಗಳನ್ನು ಹೇಳುತ್ತೇನೆ. ಧನ್ಯವಾದಗಳು.