Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸೌಭಾಗ್ಯ ಯೋಜನೆಯ ಲೋಕಾರ್ಪಣಾ ಸಮಾರಂಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ಕನ್ನಡ ಅನುವಾದ.


ಪೆಟ್ರೋಲಿಯಂ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರೇ, ಇಂಧನ ಸಚಿವ ಆರ್.ಕೆ. ಸಿಂಗ್ ಅವರೇ, ಇಂಧನ ಕಾರ್ಯದರ್ಶಿ ಅಜಯ್ ಕೆ ಬಲ್ಲಾ ಅವರೇ, ಪೆಟ್ರೋಲಿಯಂ ಕಾರ್ಯದರ್ಶಿ ಶ್ರೀ ಕಪಿಲ್ ದೇವ್ ತ್ರಿಪಾಠಿ ಅವರೇ, ಓಎನ್ ಜಿ ಸಿ (ತೈಲ ಮತ್ತು ನೈಸರ್ಗಿಕ ಅನಿಲ ನಿಗಮ) ಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಡಿ. ಕೆ.ಸರಾಫ್ ಅವರೇ ಹಾಗೂ ಇಲ್ಲಿ ಭಾಗವಹಿಸಿರುವ ಎಲ್ಲ ಮಹನೀಯರೇ, ಹಾಗೂ ಬೇರೆ ಬೇರೆ ಸ್ಥಳಗಳಲ್ಲಿ ವಿಡಿಯೋ ಸಂವಾದದ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಓ ಎನ್ ಜಿ ಸಿ ಯ ಎಲ್ಲ ಸ್ನೇಹಿತರೇ,
ಇಂದು ಒಂದೇ ಬಾರಿಗೆ ಮೂರು ಪವಿತ್ರ ಕಾರ್ಯಗಳ ಸಂಗಮದ ಸಂಯೋಗವಾಗಿದೆ. ಇಂದು ನವರಾತ್ರಿಯ ಐದನೇ ದಿನ, ಇಂದು ಸ್ಕಂದ ಮಾತೆಯ ಪೂಜೆಯನ್ನು ಮಾಡಲಾಗುತ್ತದೆ. ಸ್ಕಂದಮಾತೆಯನ್ನು ಸೌರಮಂಡಲದ ಸುಪ್ತ ದೇವಿಯೆಂದು ಭಾವಿಸಲಾಗುತ್ತದೆ. ಸ್ಕಂದಮಾತೆಯ ಆಶೀರ್ವಾದದಿಂದ ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ ದೇಶದ ಮಹಿಳೆಯರ ರಕ್ಷಣೆ ಮತ್ತು ಅವರ ದೈನಂದಿನ ಜೀವನದೊಂದಿಗೆ ಹೊಂದಿಕೊಂಡಿರುವ ಒಂದು ಮಹತ್ವಪೂರ್ಣ ಯೋಜನೆಗೆ ಇಂದು ಆರಂಭ ದೊರಕಲಿದೆ.

ಇಂದು ಪೂಜ್ಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನ ಹಾಗೂ ಇಂದೇ ದೇಶಕ್ಕೆ ದೀನ್ ದಯಾಳ್ ಶಕ್ತಿ ಭವನ ಕೂಡಾ ಸಮರ್ಪಣೆಯಾಗುತ್ತಿದೆ. ಪರಿಸರಕ್ಕೆ ಅನುಕೂಲವಾದ, ಕಡಿಮೆ ಇಂಧನ ಉಪಯೋಗದ ಈ ಗ್ರಿಡ್ ಭವನವನ್ನು ಲೋಕಾರ್ಪಣೆ ಮಾಡಲು ನನಗೆ ಬಹಳ ಸಂತೋಷವಾಗುತ್ತಿದೆ. ವಿಶೇಷವಾಗಿ ಓ ಎನ್ ಜಿ ಸಿ ಯ ಸಾವಿರಾರು ಕಾರ್ಮಿಕರು ವಿಡಿಯೋ ಸಂಪರ್ಕದ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಭವನವನ್ನು ಕಾಣುತ್ತಿದ್ದಂತೆ ನನ್ನ ಮನದಲ್ಲಿ ಒಂದು ಆಲೋಚನೆ ಮೂಡಿ ಬಂತು, ನಾನು ಪ್ರಧಾನಮಂತ್ರಿ ಆಗದೇ ಇಲ್ಲಿರುತ್ತಿದ್ದರೆ ಎಷ್ಟು ಸೊಗಸಾಗಿರುತ್ತಿತ್ತು, ಏನು ಮಾಡುವುದು, ನನ್ನ ಅದೃಷ್ಟದಲ್ಲಿಲ್ಲದ ಅನೇಕ ವಿಚಾರಗಳಿವೆ. ಈ ಭವ್ಯ ಕಟ್ಟಡಕ್ಕಾಗಿ ನಾನು ತಮ್ಮೆಲ್ಲರಿಗೂ ಹಾರ್ದಿಕ ಅಭಿನಂದನೆ ಹಾಗೂ ಶುಭಾಷಯಗಳನ್ನು ಕೋರುತ್ತೇನೆ.

ಇಂದು ಇಲ್ಲಿ ಆಧ್ಯಾತ್ಮಿಕತೆ, ನಂಬಿಕೆ. ಆಧುನಿಕ ತಂತ್ರಜ್ಞಾನ ಈ ಮೂರು ಕ್ಷೇತ್ರಗಳು ಶಕ್ತಿಯೊಂದಿಗೆ ಝಗಮಗಿಸುತ್ತಿರುವುದನ್ನು ನಾವಿಲ್ಲಿ ಕಾಣಬಹುದಾಗಿದೆ.

ಸಹೋದರ, ಸಹೋದರಿಯರೆ, ಕಳೆದ ವರ್ಷ ಇದೇ ದಿನ ದೀನ್ ದಯಾಳ್ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ನಾವು ಬಡವರ ಕಲ್ಯಾಣ ವರ್ಷವೆಂದು ಪ್ರಾರಂಭಿಸಿದ್ದೆವು. ಪಂಡಿತ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮಶತಮಾನೋತ್ಸವ ವರ್ಷವನ್ನು ಬಡವರ ಕಲ್ಯಾಣ ವರ್ಷವೆಂದು ಆಚರಿಸಬೇಕೆಂದು ಸರ್ಕಾರ ನಿರ್ಧರಿಸಿತ್ತು. ಇಂದು ವರ್ಷದ ಲೆಕ್ಕದಲ್ಲಿ ಇದರ ಮುಕ್ತಾಯವಾಗುತ್ತಿದೆ ಆದರೆ, ಬಡವರ ಕಲ್ಯಾಣ ಈ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.

ಜನಧನ್ ಯೋಜನೆಯಿಂದ ಹಿಡಿದು ಸ್ವಚ್ಚ ಭಾರತ ಅಭಿಯಾನದ ತನಕ, ಉಜ್ವಲ ಯೋಜನೆಯಿಂದ ಮುದ್ರಾ ಯೋಜನೆಯವರೆಗೆ, ಸ್ಟಾರ್ಟ್ ಅಪ್ ನಿಂದ ಹಿಡಿದು ಸ್ಟಾಂಡ್ ಅಪ್ ಇಂಡಿಯಾ ತನಕ, ಉಜಾಲಾ ಯೋಜನೆಯಿಂದ ಉಡಾನ್ ಯೋಜನೆಯ ತನಕ ತಮಗೆ ಕೇವಲ ಬಡವರ ಕಲ್ಯಾಣ, ಬಡವರ ಉದ್ಧಾರವೇ ಕಂಡು ಬರುತ್ತದೆ.

30 ಕೋಟಿ ಬಡವರಿಗಾಗಿ ಬ್ಯಾಂಕ್ ಖಾತೆಯನ್ನು ತೆರೆಯುವ ಸರ್ಕಾರ ಬರಬಹುದೆಂದು ಯಾರು ತಾನೇ ಯೋಚಿಸಿದ್ದರು. ತಿಂಗಳಿಗೆ ಕೇವಲ ಒಂದು ರೂಪಾಯಿಯಂತೆ ಹಾಗೂ ಎರಡನೆಯಾಗಿ ಪ್ರತಿದಿನ 90 ಪೈಸೆ ಪ್ರೀಮಿಯಂನಂತೆ ದೇಶದ ಸುಮಾರು 15 ಕೋಟಿ ಬಡವರಿಗೆ ಜೀವ ವಿಮೆ ಮಾಡಿಸಬಲ್ಲ ಸರ್ಕಾರ ಬರಬಹುದೆಂದು ಯಾರು ತಾನೇ ಯೋಚಿಸಿದ್ದರು. ದೇಶದ 9 ಕೋಟಿ ಬ್ಯಾಂಕ್ ಖಾತೆದಾರರಿಗೆ ಯಾವುದೇ ಖಾತರಿ ಇಲ್ಲದೆ ಮೂರೂವರೆ ಲಕ್ಷ ಕೋಟಿ ರೂಪಾಯಿ ಬ್ಯಾಂಕ್ ಸಾಲ ನೀಡುವ ಸರ್ಕಾರ ಬರಬಹುದೆಂದು ಯಾರು ತಾನೇ ಅರಿತಿದ್ದರು. ಇದು ಚಿಕ್ಕ ಪುಟ್ಟ ವಿಷಯವಲ್ಲ.

ಮಹಿಳೆಯರಿಗೆ ಅಡುಗೆ ಮಾಡುವ ಸಂದರ್ಭದಲ್ಲಿ ಹೊಗೆಯಿಂದ ಮುಕ್ತಿ ನೀಡಬಲ್ಲ ಸರ್ಕಾರ ಬರಬಹುದೆಂದು ಯಾರು ತಾನೇ ಆಲೋಚಿಸಿದ್ದರು, ಹವಾಯಿ ಚಪ್ಪಲಿ ಮೆಟ್ಟಿಕೊಳ್ಳಬಲ್ಲ ವ್ಯಕ್ತಿ ಕೂಡಾ ವಿಮಾನದಲ್ಲಿ ಪ್ರಯಾಣ ಮಾಡಬಹುದಾದ ಕಾಲ ಬರುಬಹುದೆಂದು ಯಾರು ತಾನೇ ಯೋಚಿಸಿದ್ದರು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವವರಿಗೆ ಕಡಿಮೆ ವೆಚ್ಚದಲ್ಲಿ ಸ್ಟಂಟ್ ಅಳವಡಿಕೆ ಮಾಡಬಹುದಾದ ಕಾಲ ಬರಬಹುದೆಂದು ಯಾರು ತಾನೇ ಆಲೋಚಿಸಿದ್ದರು, ಮೊಣಕಾಲು ಶಸ್ತ್ರಚಿಕಿತ್ಸೆಯ ಹಣಕಾಸು ವೆಚ್ಚ ಕೂಡ ಕಡಿಮೆ ಮಾಡುವ ಸರ್ಕಾರ ಬರಬಹುದೆಂದು ಯಾರು ತಾನೇ ಅರಿತಿದ್ದರು, ಇವೆಲ್ಲವನ್ನು ಮಧ್ಯಮ ವರ್ಗದ ಬಳಿಗೆ ತಲುಪಿಸುವ ಕಾರ್ಯ ಯಶಸ್ವಿಯಾಗಿದೆ. ¨ï

ಬಡವನ ಕನಸು ನನ್ನ ಸರ್ಕಾರದ ಕನಸು. ಬಡವರ ಕಷ್ಟ ಮತ್ತು ಆತ ದಿನ ನಿತ್ಯ ಅನುಭವಿಸುತ್ತಿರುವ ತೊಂದರೆಗಳನ್ನು ಕಡಿಮೆ ಮಾಡುವುದು ನಮ್ಮ ಸರ್ಕಾರದ ಅತ್ಯಂತ ದೊಡ್ಡ ಜವಾಬ್ಧಾರಿಯಾಗಿದೆ. ಅದೇ ನಿಟ್ಟಿನಲ್ಲಿ ಇಂದು ದೇಶದ ಕೋಟ್ಯಾಂತರ ಕುಟುಂಬಗಳ ಮಹಿಳೆಯರಿಗೆ ಒಂದು ದೊಡ್ಡ, ಅತ್ಯಂತ ಮಹತ್ವಪೂರ್ಣ ಹಾಗೂ ಅತ್ಯಂತ ಅವಶ್ಯಕವಾಗಿದ್ದ ಯೋಜನೆಯ ಪ್ರಾರಂಭವಾಗಲಿದೆ. ಸಹೋದರ ಸಹೋದರಿಯರೆ ಈ ಯೋಜನೆಯ ಹೆಸರು “ಪ್ರಧಾನಮಂತ್ರಿ ಸಹಜ್ ಬಿಜಲಿ ಹರ್ ಘರ್ ಯೋಜನಾ (ಪ್ರತಿ ಮನೆಗೂ ವಿದ್ಯುತ್ ) ಅಂದರೆ “ಸೌಭಾಗ್ಯ”.

ಮಿತ್ರರೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ವಿದ್ಯುತ್ ಕಾಣದ ಸುಮಾರು 4 ಕೋಟಿ ಮನೆಗಳಿವೆ. ದೇಶದಲ್ಲಿ ಸುಮಾರು 25 ಕೋಟಿ ಕುಟುಂಬಗಳಿವೆ. ಅದರಲ್ಲಿ 4 ಕೋಟಿ ಅಂದರೆ ಸುಮಾರು ಶೇಕಡಾ 20 ರಷ್ಟು. ಈ ನಾಲ್ಕು ಕೋಟಿ ಮನೆಗಳಲ್ಲಿ ವಾಸಿಸುವ ಜನರ ಪರಿಸ್ಥಿತಿ ಹೇಗಿರಬಹುದೆಂದು ತಾವು ಯೋಚಿಸಿ. ಅವರಿನ್ನೂ 18 ನೇ ಶತಮಾನದಲ್ಲಿ ಜೀವಿಸುತ್ತಿದ್ದಾರೆ. ತಮ್ಮ ಜೀವನದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡರೆ ತಮ್ಮ ಪರಿಸ್ಥಿತಿ ಹೇಗಿರುತ್ತದೆಂದು ತಾವೊಮ್ಮೆ ಯೋಚಿಸಿ. ಮಿತ್ರರೇ, ವಿದ್ಯುತ್ ಆವಿಷ್ಕಾರವಾಗಿ ನೂರಾರು ವರ್ಷಗಳು ಕಳೆದಿವೆ. ಮಹಾನ್ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್ ನ ಕಂಡು ಹಿಡಿದವರು. ಅವರು ತಮ್ಮ ಆವಿಷ್ಕಾರವನ್ನು ಜಗತ್ತಿಗೆ ಪರಿಚಯಿಸುತ್ತಾ “ ನಾವು ವಿದ್ಯುತ್ ಅನ್ನು ಎಷ್ಟು ಅಗ್ಗವನ್ನಾಗಿಸುತ್ತೇವೆ ಎಂದರೆ ಕೇವಲ ಶ್ರೀಮಂತರು ಮಾತ್ರ ಮೊಂಬತ್ತಿಯನ್ನು ಉರಿಸುವಂತಾಗಬೇಕು” (ವಿ ವಿಲ್ ಮೇಕ್ ಎಲೆಕ್ಟ್ರಿಸಿಟಿ ಸೋ ಚೀಪ್ ದಟ್ ಓನ್ಲಿ ದಿ ರಿಚ್ ವಿಲ್ ಬರ್ನ್ ಕ್ಯಾಂಡಲ್ಸ್).

ದೇಶದ ಸರಿ ಸುಮಾರು ನಾಲ್ಕು ಕೋಟಿ ಪರಿವಾರಗಳಿಗೆ ಬಲ್ಬ್ ಇರಲಿ ವಿದ್ಯುತ್ ಸಂಪರ್ಕ ಕೂಡಾ ದೊರೆತಿಲ್ಲದಿರುವುದು ಅತ್ಯಂತ ದು:ಖಕರ ಸಂಗತಿ. ಆ ಮನೆಗಳಲ್ಲಿ ಇಂದೂ ಕೂಡಾ ಮೊಂಬತ್ತಿ ಉರಿಯುತ್ತಿದೆ. ಚಿಮಣಿ ದೀಪ ಉರಿಯುತ್ತಿದೆ. ಆ ಕೋಟ್ಯಾಂತರ ಮನೆಗಳಲ್ಲಿ ಇಂದೂ ಕೂಡಾ ರಾತ್ರಿಯ ಸಮಯದಲ್ಲಿ ಮಕ್ಕಳಿಗೆ ಓದು ಬರಹ ಮಾಡಲು ತೊಂದರೆಯಾಗುತ್ತಿದೆ. ವಿದ್ಯಾಭ್ಯಾಸ ಮಾಡಿದರೂ ಆ ಚಿಮಣಿ ಎಣ್ಣೆಯ ಬೆಳಕಿನಲ್ಲಿ ಮಾಡುತ್ತಾರೆ. ನಾನು ಚಿಕ್ಕವನಾಗಿದ್ದಾಗ, ನಾನೂ ಕೂಡಾ ಹೀಗೆಯೇ ಓದುತ್ತಿದ್ದೆ. ಆಗ ನಮ್ಮ ಮನೆಯ ಹಿರಿಯರು ಚಿಮಣಿ ದೀಪದ ಬೆಳಕಿನಲ್ಲಿ ಓದಬೇಡ ಎಂದು ಹೇಳುತ್ತಿದ್ದರು. ನಿನ್ನ ಕಣ್ಣುಗಳು ಹಾಳಾಗುತ್ತವೆ. ಉಸಿರು ಕೂಡಾ ಕಟ್ಟಿದಂತಾಗುತ್ತದೆ. ಮತ್ತೇನು ಮಾಡುವುದೆಂದು ನಾನು ಕೇಳಿದಾಗ ಹರಳೆಣ್ಣೆಯನ್ನು ಉಪಯೋಗಿಸಿ ಹಚ್ಚಿದ ದೀಪದಲ್ಲಿ ಓದುವಂತೆ ಸಲಹೆ ನೀಡುತ್ತಿದ್ದರು. ನಾವು ಹರಳೆಣ್ಣೆಯ ದೀಪದ ಬೆಳಕಿನೊಂದಿಗೆ ನಮ್ಮ ಜೀವನದಲ್ಲಿ ಬೆಳಕನ್ನು ಕಂಡು ಬೆಳೆದವರು. ಇದನ್ನು ಗಮನಿಸಿದಾಗ ನಮ್ಮ ಮನದಲ್ಲಿ ಆ ನಾಲ್ಕು ಕೋಟಿ ಕುಟುಂಬದ ಪರಿಸ್ಥಿತಿ ಏನಾಗಿರಬಹುದೆಂಬ ಅರಿವಾಗುತ್ತದೆ. ಸೌಕರ್ಯಗಳ ಮಾತಿರಲಿ, ಮಹಿಳೆಯರಿಗೆ ಕತ್ತಲಲ್ಲಿ ಅಡುಗೆ ಮಾಡಬೇಕಾದ ಪರಿಸ್ಥಿತಿ ಇತ್ತು. ಆದುದರಿಂದ ಹೆಚ್ಚಿನ ಮಹಿಳೆಯರಿಗೆ ಕತ್ತಲಾಗುವ ಮೊದಲು ಅಡುಗೆ ಕಾರ್ಯ ಮಾಡಿ ಮುಗಿಸಬೇಕಾದ ಒತ್ತಡವಿತ್ತು.

ಮನೆಗಳಲ್ಲಿ ಬೆಳಕಿಲ್ಲ, ವಿದ್ಯುತ್ ಸಂಪರ್ಕವಿಲ್ಲ, ಇದರ ನೇರ ಪರಿಣಾಮ ರಸ್ತೆಯ ವಿದ್ಯುತ್ ಬೆಳಕಿನ ಮೇಲೂ ಉಂಟಾಗುತ್ತಿದೆ. ಕತ್ತಲಿನಲ್ಲಿ ಮನೆಯಿಂದ ಹೊರ ಬರುವುದು ಕಠಿಣವಾಗುತ್ತದೆ. ವಿಶೇಷವಾಗಿ ಮಹಿಳೆಯರು ಮನೆಯಲ್ಲಿ ಬಂಧಿಗಳಾಗಿ ಜೀವನ ಸಾಗಿಸಬೇಕಾಗುತ್ತದೆ.
ವಿದ್ಯುತ್ ಸಂಪರ್ಕ ಹೊಂದಿದ ಪ್ರತಿಯೊಂದು ವ್ಯಕ್ತಿಗೂ ವಿದ್ಯುತ್ ಇಲ್ಲದ ಕುಟುಂಬದ ಜೀವನ ಪರಿಸ್ಥಿತಿ ಹೇಗಿರಬಹುದು ಎಂದು ಅರಿಯುವುದು ಅತ್ಯಂತ ಅವಶ್ಯಕವಾಗಿದೆ. ವಿದ್ಯುತ್ ಇಲ್ಲದ ಈ ಮನೆಗಳಲ್ಲಿ ವಿದ್ಯುತ್ ಸಂಪರ್ಕ ದೊರಕಿದಾಗ ಅವರ ಅದೃಷ್ಟ ಬೆಳಗುತ್ತದೆ, ಅಂದೇ ಅವರಿಗೆ ಸೌಭಾಗ್ಯ ದೊರಕುತ್ತದೆ.

ಈ ಸೌಭಾಗ್ಯ ಯೋಜನೆಯಡಿ ಸರ್ಕಾರ ದೇಶದ ಪ್ರತಿಯೊಂದು ಮನೆಗೆ, ಅದು ಗ್ರಾಮೀಣ ಪ್ರದೇಶವಾಗಿರಲಿ ಅಥವಾ ನಗರ ಪ್ರದೇಶವಾಗಿರಲಿ ಅಥವಾ ಗುಡಿಸಲು ಪ್ರದೇಶವಾಗಿರಲಿ, ದೂರ ದೂರದ ಪ್ರದೇಶಗಳ ಅಂತಹ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಕಲ್ಪವನ್ನಿಟ್ಟುಕೊಂಡು ನಾವು ಮುಂದುವರೆಯುತ್ತೇವೆ. ವಿದ್ಯುತ್ ಸಂಪರ್ಕ ನೀಡಲು ಯಾವುದೇ ಬಡ ವ್ಯಕ್ತಿಯಿಂದ ನಾವು ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ಸರ್ಕಾರ ಬಡವರ ಮನೆಗಳಿಗೆ ತೆರಳಿ ವಿದ್ಯುತ್ ಸಂಪರ್ಕ ನೀಡುತ್ತದೆ. ವಿದ್ಯುತ್ ಸಂಪರ್ಕಕ್ಕಾಗಿ ಬಡವರು ಸರ್ಕಾರದ ಕಚೇರಿಗಳಿಗೆ ಅಲೆದಾಡಬೇಕಾಗಿತ್ತು. ಅಂತಹ ಬಡ ಕುಟುಂಬಗಳ ಮನೆಗಳಿಗೆ ಸರ್ಕಾರ ಸ್ವಯಂ ತೆರಳಿ ಒಂದು ರೂಪಾಯಿ ಕೂಡಾ ವೆಚ್ಚವಿಲ್ಲದೆ ವಿದ್ಯುತ್ ಸಂಪರ್ಕ ನೀಡುತ್ತಿದೆ.
ದೇಶದ ಪ್ರತಿಯೊಂದು ಮನೆಗೆ ವಿದ್ಯುತ್ ಸಂಪರ್ಕ ನೀಡಲು ಸುಮಾರು 16 ಸಾವಿರ ಕೋಟಿ ರೂಪಾಯಿಗಳ ವೆಚ್ಚ ತಗುಲಲಿದೆ. ಈ 16 ಸಾವಿರ ಕೋಟಿ ರೂಪಾಯಿಗಳು ಬೆಳಕನ್ನು ಕಾಣದ ಕುಟುಂಬಗಳ ಬಾಳು ಬೆಳಗಲು ವಿನಿಯೋಗವಾಗುತ್ತದೆ. ಈ ಭಾರವನ್ನು ನಾವು ಯಾರ ಮೇಲೂ ಹೊರಿಸಲು ಬಯಸುವುದಿಲ್ಲ. ಈ ಸರ್ಕಾರ ದೇಶದ ಬಡವನಿಗೆ ಈ ಸೌಭಾಗ್ಯವನ್ನು ನೀಡಲು ನಿಶ್ಚಯಿಸಿದೆ. ಬಡವರಿಗೆ ಸೌಭಾಗ್ಯ ನೀಡುವ ಈ ಸಂಕಲ್ಪವನ್ನು ನಾವು ಮಾಡಿಯೇ ತೀರುತ್ತೇವೆ. ಯಾಕೆಂದರೆ ಸಂಕಲ್ಪ ಮಾಡಿದರೆ ಅದನ್ನು ಸಿದ್ಧ ಮಾಡಿಯೇ ತೀರಬೇಕೆಂಬುದು ನನ್ನ ಆದರ್ಶ.
ಸ್ನೇಹಿತರೆ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು “ ಆರ್ಥಿಕ ಯೋಜನೆ ಮತ್ತು ಆರ್ಥಿಕ ಪ್ರಗತಿಯ ಫಲಿತಾಂಶವನ್ನು ಸಮಾಜದ ಉನ್ನತ ಮಟ್ಟದ ವ್ಯಕ್ತಿಗಳಿಗಿಂತ ಸಮಾಜದ ಕೆಳವರ್ಗದ ವ್ಯಕ್ತಿಯಿಂದ ಮಾತ್ರ ಪಡೆಯಲು ಸಾಧ್ಯ” ಎಂದು ನುಡಿದಿದ್ದರು. ಅಂದರ ಸರ್ಕಾರದ ಯೋಜನೆಗಳ ವಿಶ್ಲೇಷಣೆ ಮತ್ತು ಅದರ ಪರೀಕ್ಷೆ, ಬಡವರಿಗೆ ಇದರಿಂದ ಎಷ್ಟು ಲಾಭ ಉಂಟಾಗಬಹುದು ಎಂಬ ಆಧಾರದ ಮೇಲೆ ಆಗಬೇಕಾಗಿದೆ. ಇಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಜಯಂತಿಯ ಸಂದರ್ಭದಲ್ಲಿ ದೇಶದ ಕೋಟ್ಯಾಂತರ ಬಡ ಪರಿವಾರಗಳ ಕನಸನ್ನು ನನಸು ಮಾಡುವ ಒಂದು ದೊಡ್ಡ ಯೋಜನೆಯ ಪ್ರಾರಂಭವಾಗುತ್ತಿರುವುದು ನನಗೆ ಸಂತಸವನ್ನುಂಟು ಮಾಡಿದೆ. ªÀÄ

ಸ್ವಾತಂತ್ರ ಬಂದು ಇಷ್ಟು ವರ್ಷಗಳ ನಂತರವೂ ಮನೆಗಳಲ್ಲಿ ವಿದ್ಯುತ್ ಸೌಲಭ್ಯ ಇಲ್ಲದ ಕಾರಣ ಮಕ್ಕಳು ಮತ್ತು ಮಹಿಳೆಯರು ಅನುಭವಿಸುತ್ತಿರುವ ತೊಂದರೆಯನ್ನು ಗಮನಿಸಿದ ಸರ್ಕಾರ ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ದೃಢ ಸಂಕಲ್ಪವನ್ನು ಮಾಡಿತ್ತು. ನಾನು ಕೆಂಪು ಕೋಟೆಯಿಂದ ಒಂದು ಸಾವಿರ ದಿನಗಳಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸುನೆಂಬ ಭರವಸೆಯನ್ನು ನೀಡಿದ್ದೆ.

ಈ ರೀತಿಯ 18 ಸಾವಿರ ಹಳ್ಳಿಗಳ ಪೈಕಿ ಇಂದು ಕೇವಲ ಮೂರು ಸಾವಿರ ಹಳ್ಳಿಗಳಿಗಷ್ಟೆ ವಿದ್ಯುತ್ ಸಂಪರ್ಕ ನೀಡುವ ಕಾರ್ಯ ಬಾಕಿ ಇದೆ. ನಿಗದಿತ ಸಮಯದೊಳಗೆ ಉಳಿದ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.

ಸಹೋದರ ಸಹೋದರಿಯರೇ, ನಾನು ಪ್ರಧಾನಮಂತ್ರಿಯಾದ ನಂತರ ಮೊದಲ ಬಾರಿಗೆ ಇಂಧನ ವಿಭಾಗದ ಸಭೆಯಲ್ಲಿ ಸಂಬಂಧಪಟ್ಟ ವಿಭಾಗದ ಕಾರ್ಯಗಳ ಮಾಹಿತಿಯನ್ನು ಕೇಳಿದಾಗ ಈ ಕಾರ್ಯಕ್ಕೆ ಏಳು ವರ್ಷಗಳು ಬೇಕಾಗಬಹುದೆಂಬ ಮಾಹಿತಿ ನೀಡಿದ್ದು ನನಗೆ ನೆನಪಿದೆ. ಸ್ವಲ್ಪ ಕಡಿಮೆ ಸಮಯದಲ್ಲಿ ಈ ಕಾರ್ಯ ಮಾಡಲಾಗುವುದಿಲ್ಲವೇ ಎಂದು ಕೇಳಿದಾಗ ಅವರ ಮನಸ್ಸಿನಲ್ಲಿ ಆಗುವುದಿಲ್ಲವೆಂಬ ಭಾವನೆ ಮೂಡಿದ್ದಿರಬಹುದು. ನಾನು ಕೆಂಪು ಕೋಟೆಯಿಂದ ಒಂದು ಸಾವಿರ ದಿನಗಳಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸುವೆನೆಂದು ನುಡಿದೆ. ಈ ಕಾರ್ಯ ಆಗಲೇಬೇಕೆಂದು ಕರೆ ನೀಡಿದರೆ ನಮ್ಮ ಅಧಿಕಾರಿಗಳು ಅದನ್ನು ಪೂರ್ಣಗೊಳಿಸಬಲ್ಲರು. ಈ ಕಾರ್ಯವನ್ನು ಅವರು ಪೂರ್ಣಗೊಳಿಸಿರುವುದನ್ನು ನಾನಿಂದು ಕಾಣುತ್ತಿದ್ದೇನೆ.
ಸಹೋದರ ಸಹೋದರಿಯರೆ, ನವ ಭಾರತದಲ್ಲಿ ಪ್ರತಿಯೊಂದು ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ದೊರಕುವುದು ಮಾತ್ರವಲ್ಲದೇ, ನವ ಭಾರತದ ಪ್ರತಿಯೊಂದು ಮನೆಗಳಿಗೂ ವಿದ್ಯುತ್ ಸಂಪರ್ಕ ದೊರೆಯಲಿದೆ. ಸೌಭಾಗ್ಯ ಯೋಜನೆಯ ಪ್ರಾರಂಭ ಸರ್ಕಾರದ ಇಚ್ಚಾಶಕ್ತಿ ಹಾಗೂ ದೇಶದ ವಿದ್ಯುತ್ ಕ್ರಾಂತಿಯ ಬಗೆಗೆ ಸರ್ಕಾರ ತೆಗೆದುಕೊಳ್ಳಲಾಗುತ್ತಿರುವ ಧೃಡ ನಿರ್ಧಾರಗಳಿಗೆ ಸಾಕ್ಷಿಯಾಗಿದೆ ಮತ್ತು ಪ್ರತೀಕವಾಗಿದೆ. ವಿದ್ಯುತ್ ಸಮಸ್ಯೆಯನ್ನು ದೂರ ಮಾಡದೆ, ವ್ಯವಸ್ಥೆಗಳನ್ನು ಸುಧಾರಿಸದೇ, ಹಳೆಯ ಪದ್ಧತಿಗಳನ್ನು ಆಧುನೀಕರಿಸದೇ ಈ ರೀತಿಯ ಯೋಜನೆಗಳನ್ನು ಪ್ರಾರಂಭ ಮಾಡಲು ಸಾಧ್ಯವಿಲ್ಲ. ಹಳೆಯ ಪದ್ಧತಿಗಳಿಂದ ಕೆಲಸವಾಗುವುದಿಲ್ಲ. ಹಳೆಯ ಪರಂಪರೆಗಳಿಂದ ಇದು ಸಾಧ್ಯವಿಲ್ಲ. ಒಂದು ಸಂಪೂರ್ಣ ಪರಿವರ್ತನೆಯನ್ನು ಮಾಡಿ ಹೊಸ ಗುರಿಯನ್ನಿಟ್ಟುಕೊಂಡು ಮುನ್ನಡೆಯಬೇಕಿದೆ. ಹೊಸ ಹಾದಿ, ಹೊಸ ವೇಗವನ್ನು ಪಡೆದುಕೊಳ್ಳಬೇಕಿದೆ. ಈ ಯೋಜನೆ ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಕೈಗೊಂಡಿರುವ ಸಾಧನೆಯ ಪ್ರತೀಕವಾಗಿದೆ.

ಒಂದು ಕಾಲದಲ್ಲಿ ಟಿ.ವಿ. ಚಾನಲ್ ಗಳಲ್ಲಿ ದೊಡ್ಡ ದೊಡ್ಡ ಬ್ರೇಕಿಂಗ್ ನ್ಯೂಸ್ ಬರುತ್ತಿದ್ದುದನ್ನು ತಾವು ಗಮನಿಸಿರುತ್ತೀರಿ. ದೇಶದ ಜನ ಆ ದಿನಗಳನ್ನು ಮರೆತಿರುವುದಿಲ್ಲ. ಆ ದಿನಗಳಲ್ಲಿ, ಕಲ್ಲಿದ್ದಲು ಗಣಿಗಳಲ್ಲಿ ಕೇವಲ ಒಂದು ದಿನಗಳಿಗಾಗುವಷ್ಟು ಕಲ್ಲಿದ್ದಲು ಶೇಖರಣೆ ಇದೆ, ಎರಡು ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ಶೇಖರಣೆ ಇದೆ ಎಂಬ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು. ವಿದ್ಯುತ್ ಕೊರತೆಯ ಆ ದಿನಗಳು, ವಿದ್ಯುತ್ ಗ್ರಿಡ್ ಗಳು ವಿಫಲವಾಗುತ್ತಿದ್ದವು, ರಾಜ್ಯಕ್ಕೆ ರಾಜ್ಯವೇ ಕತ್ತಲಲ್ಲಿ ಮುಳುಗಿರುತ್ತಿತ್ತು. ಇದನ್ನು ನಾನು ಹಲವು ದಶಕಗಳ ಹಿಂದಿನ ಮಾತು ಎಂದು ಹೇಳುತ್ತಿಲ್ಲ. ಕಳೆದ ದಶಕದ ಮಾತನ್ನು ಹೇಳುತ್ತಿದ್ದೇನೆ, ಕಳೆದ ಸರ್ಕಾರದ ಅವಧಿಯಲ್ಲಿ ಇವೆಲ್ಲವೂ ನಡೆದಿತ್ತು.

ತಾವು ಈ ತರಹದ ಬ್ರೇಕಿಂಗ್ ನ್ಯೂಸ್ ನೋಡಿ ಎಷ್ಟು ದಿನಗಳಾಗಿರಬಹುದು, ನೆನಪು ಮಾಡಿಕೊಳ್ಳಿ. ಕಲ್ಲಿದ್ದಲು ಶೇಖರಣೆ ಇಲ್ಲ, ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಇಲ್ಲ ಎಂಬುದನ್ನು ತಾವು ಇಂದು ಬ್ರೇಕಿಂಗ್ ನ್ಯೂಸ್ ನಲ್ಲಿ ನೋಡುತ್ತಿಲ್ಲ. ಮಿತ್ರರೇ, ಇಂದು ದೇಶದಲ್ಲಿ ವಿದ್ಯುತ್ ಸಂಕಟ ನಿವಾರಣೆಯಾಗಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದು ಯಾವುದೇ ದೊಡ್ಡ ತಂತ್ರಗಾರಿಕೆಯಲ್ಲ, ಹೊಸ ವಿಧಾನದಿಂದ, ಹೊಸ ನೀತಿಗಳಿಂದ, ಬಹು ಆಯಾಮದ ಯೋಜನೆಗಳನ್ನು ಕೈಗೊಂಡ ಕಾರಣದಿಂದಾಗಿದೆ.

ದೇಶದ ವಿದ್ಯುತ್ ವ್ಯವಸ್ಥೆಯನ್ನು ಸುಧಾರಿಸಲು ನಾಲ್ಕು ಬೇರೆ ಬೇರೆ ಹಂತಗಳಲ್ಲಿ ಕಾರ್ಯ ನಿರ್ವಹಿಸಲಾಯಿತು – ಉತ್ಪಾದನೆ, ಪ್ರಸರಣ, ವಿತರಣೆ ಮತ್ತು ಸಂಪರ್ಕ. ಉತ್ಪಾದನೆಯಾಗದಿದ್ದರೆ, ಪ್ರಸರಣ ಮತ್ತು ವಿತರಣೆ ಸಶಕ್ತವಾಗುವುದಿಲ್ಲ, ಹೀಗಾದಾಗ ಸಂಪರ್ಕದ ಬಗ್ಗೆ ಎಷ್ಟೇ ಮಾತನಾಡಿದರೂ, ಮನೆ ಮನೆಗೆ ವಿದ್ಯುತ್ ತಲುಪಿಸಲು ಸಾಧ್ಯವಾಗುವುದಿಲ್ಲ.

ಆದುದರಿಂದ ಸರ್ಕಾರ ರಚನೆಯಾದ ನಂತರ ಉತ್ಪಾದನೆಯನ್ನು ಹೆಚ್ಚು ಮಾಡುವ ಬಗ್ಗೆ ಒತ್ತು ನೀಡಲಾಯಿತು. ನೀರಿನಿಂದ ಉತ್ಪಾದನೆಯಾಗುವ ಜಲವಿದ್ಯುತ್, ಕಲ್ಲಿದ್ದಲಿನಿಂದ ಉತ್ಪಾದನೆ ಮಾಡಲಾಗುವ ವಿದ್ಯುತ್ ಮತ್ತು ಅಣು ವಿದ್ಯುತ್, ಇವೆಲ್ಲದರಿಂದ ವಿದ್ಯುತ್ ಉತ್ಪಾದನೆ ಮಾಡುವ ಬಗ್ಗೆ ಎಲ್ಲ ದಿಕ್ಕುಗಳಿಂದಲೂ ಕಾರ್ಯ ಪ್ರಾರಂಭಿಸಲಾಯಿತು.

ಮಿತ್ರರೇ, 2015 ರಲ್ಲಿ ನಾವು ಕಲ್ಲಿದ್ದಲು ಗಣಿಗಳಿಗಾಗಿ ಹೊಸ ಕಾನೂನು ರಚನೆ ಮಾಡಿದ್ದೇವೆ, ಇದರ ಮೂಲಕ ಮೊದಲ ಬಾರಿಗೆ ಕಲ್ಲಿದ್ದಲು ಗಣಿಗಳ ಹಿಮ್ಮುಖ ಇ-ಹರಾಜು ಮಾಡಲಾಗಿದೆ. 2009 ರಿಂದ 2014 ರ ಅವಧಿಯಲ್ಲಿ ಕಲ್ಲಿದ್ದಲಿನ ಉತ್ಪಾದನೆ ಕೇವಲ 34 ಮಿಲಿಯನ್ ಟನ್ ಹೆಚ್ಚಾಗಿತ್ತು. ಆದರೆ ಕಳೆದ ಮೂರು ವರ್ಷಗಳಲ್ಲಿ ನಾವು 93 ಮಿಲಿಯನ್ ಟನ್ ಹೆಚ್ಚು ಉತ್ಪಾದನೆ ಮಾಡಿ ಪ್ರತಿ ವರ್ಷ 659 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಮಾಡುತ್ತಿದ್ದೇವೆ. ಈ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕ ವಲಯದ ಕೈಗೆತ್ತಿಕೊಳ್ಳುವಿಕೆಯ ಕಾರಣ ಕಲ್ಲಿದ್ದಲು ಉತ್ಪಾದನೆಯಲ್ಲಿ ವೃದ್ಧಿಯಾಗಿದೆ ಎಂದು ತಿಳಿಸಲು ನನಗೆ ಹರ್ಷವಾಗುತ್ತಿದೆ. ಕಳೆದ ಸರ್ಕಾರದ ಐದು ವರ್ಷಗಳ ಕಾಲಾವಧಿಗಿಂತ ಒಂದೂವರೆ ಪಟ್ಟು ಹೆಚ್ಚಾಗಿದೆ. ಇವರಿಗೆ ಗಣಿ ಬೇಕಾಗಿಲ್ಲ, ಕಲ್ಲಿದ್ದಲು ಬೇಕಾಗಿದೆ. ಈ ಕಾರಣಕ್ಕಾಗಿ ಸರ್ಕಾರ ನಾಲ್ಕು ತಿಂಗಳ ಹಿಂದೆ “ಶಕ್ತಿ” ಹೆಸರಿನ ಒಂದು ಹೊಸ ಕಲ್ಲಿದ್ದಲು ಹಂಚಿಕೆ ನೀತಿಯನ್ನು ಪ್ರಾರಂಭಿಸಿದೆ. ಇದರ ಮೂಲಕ ವಿದ್ಯುತ್ ಉತ್ಪಾದನೆ ಮಾಡುವ ಉಷ್ಣ ಸ್ಥಾವರಗಳಿಗೆ ಕಲ್ಲಿದ್ದಲನ್ನು ಪಾರದರ್ಶಕವಾಗಿ ಹರಾಜಿನ ಮೂಲಕ ಹಂಚಿಕೆ ಮಾಡಲಾಗುತ್ತದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಸರ್ಕಾರವು ಕಲ್ಲಿದ್ದಲು ಸಂಪರ್ಕದ ಪುನರ್ ಹಂಚಿಕೆಗಾಗಿ ಪಾರದರ್ಶಕ ಹರಾಜು ನೀತಿಯನ್ನು ಜಾರಿಗೆ ತಂದಿದೆ.

ಮಿತ್ರರೇ, ಯಾವ ಕಲ್ಲಿದ್ದಲು ಹರಾಜಿನಿಂದ ಕೋಟ್ಯಾಂತರ ರೂಪಾಯಿಯ ಭ್ರಷ್ಟಾಚಾರವಾಗಿತ್ತೋ, ಅದೇ ಕಲ್ಲಿದ್ದಲಿನ ಹರಾಜನ್ನು ಒಂದು ಪಾರದರ್ಶಕ ಮತ್ತು ಆಧುನಿಕ ವ್ಯವಸ್ಥೆಯಡಿ ಈ ಸರ್ಕಾರ ದೇಶಕ್ಕೆ ನೀಡಿದೆ. ಇದು ಈ ಸರ್ಕಾರದ ನೀತಿ ಮತ್ತು ನಿಯತ್ತಿನ ಪರಿಚಯವಾಗಿದೆ. ಸರ್ಕಾರ ವಿದ್ಯುತ್ ಕ್ಷೇತ್ರದಲ್ಲಿ ಸುಲಭ, ಅಗ್ಗ, ಸ್ವಚ್ಚ, ಯೋಜಿತ ರೀತಿಯಲ್ಲಿ, ಸುನಿಶ್ಚಿತವಾಗಿ ಮತ್ತು ಸುರಕ್ಷಿತ ವಿದ್ಯುತ್ ದೊರಕುವಂತೆ ಮಾಡಲು 6 ಮೂಲಭೂತ ಸಿದ್ಧಾಂತಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಸರ್ಕಾರದ ಪ್ರಯತ್ನಗಳಿಂದ ಪ್ರಥಮ ಬಾರಿಗೆ ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ 60 ಸಾವಿರ ಮೆಗಾವ್ಯಾಟ್ ನಷ್ಟು ಉತ್ಪಾದನೆ ಹೆಚ್ಚಾಗಿದೆ, ಇದು ಗುರಿಗಿಂತ ಶೇಕಡಾ 12 ರಷ್ಟು ಹೆಚ್ಚಾಗಿದೆ. ಸ್ನೇಹಿತರೇ, ಭಾರತದ ಇಂಧನ ಸುರಕ್ಷತೆಯನ್ನು ಖಚಿತಪಡಿಸುವ ಸಮಯದಲ್ಲಿ ಶುದ್ಧ ಇಂಧನಕ್ಕೆ ಆದ್ಯತೆ ನೀಡಿ ಈ ಕೆಲಸ ಮಾಡಲಾಗುವುದೆಂದು ಸಂಕಲ್ಪ ಮಾಡಲಾಗಿತ್ತು. ಇದಕ್ಕಾಗಿಯೇ ಸರ್ಕಾರ 2022 ರೊಳಗೆ 175 ಮೆಗಾವ್ಯಾಟ್ ಶುದ್ಧ ಇಂಧನ ಉತ್ಪಾದನೆಯ ಗುರಿಯನ್ನು ಇಟ್ಟುಕೊಂಡಿತ್ತು. ಅಂದರೆ ಈ ರೀತಿಯ ವಿದ್ಯುತ್ ಅನ್ನು ಸೌರಶಕ್ತಿ, ಪವನಶಕ್ತಿ ಮತ್ತು ಜಲಶಕ್ತಿಯಿಂದ ಉತ್ಪಾದಿಸಲಾಗುವುದು. ಈ ಗುರಿಯನ್ನಿಟ್ಟುಕೊಂಡು ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚುಕಡಿಮೆ ಎರಡು ಪಟ್ಟು ಹೆಚ್ಚು ಮಾಡಲಾಗಿದೆ. ಇದರಲ್ಲಿ 27 ಸಾವಿರ ಮೆಗಾವ್ಯಾಟ್ ಸಾಮರ್ಥ್ಯವನ್ನು ಅಧಿಕ ಮಾಡಲಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸ್ಪರ್ಧೆಯನ್ನು ಹೆಚ್ಚು ಮಾಡಿ, ದೇಶದ ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ವಿದ್ಯುತ್ ಸೌಲಭ್ಯ ದೊರಕುವುದನ್ನು ಖಚಿತ ಪಡಿಸಿಕೊಂಡಿದೆ. ನವೀಕರಿಸಬಹುದಾದ ಇಂಧನದ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಸತತ ನಿಗಾ ವಹಿಸಲಾಗುತ್ತಿದೆ. ಈ ಕಾರಣದಿಂದಾಗಿಯೇ 2016 – 17 ರಲ್ಲಿ ನಮಗೆ ಸೌರ ವಿದ್ಯುತ್ ಪ್ರತಿ ಯೂನಿಟ್ ಗೆ 2 ರೂಪಾಯಿ 44 ಪೈಸೆ ಮತ್ತು ಪವನ ವಿದ್ಯುತ್ ಯೂನಿಟ್ ಗೆ 3 ರೂಪಾಯಿ 42 ಪೈಸೆಗಳ ಕನಿಷ್ಟ ದರದಲ್ಲಿ ದೊರಕುತ್ತಿದೆ. ನಾನು ಗುಜರಾತ್ ನಲ್ಲಿದ್ದಾಗ ಸೌರಶಕ್ತಿಗೆ ಭಾರತ ಸರ್ಕಾರ 19 ರೂಪಾಯಿ ನೀಡಲು ಸಿದ್ಧವಾಗಿದ್ದು ನನಗಿನ್ನೂ ನೆನಪಿದೆ. ಆಗ ನಾವು 13 ರೂಪಾಯಿಯ ನೀತಿಯನ್ನು ಮಾಡಿದೆವು. ಹಿಂದೂಸ್ತಾನದಲ್ಲಿ ಸೌರ ವಿದ್ಯುತ್ ಬಗ್ಗೆ ನೀತಿ ರಚನೆ ಮಾಡಿದ ಪ್ರಥಮ ರಾಜ್ಯವೆಂಬ ಹೆಗ್ಗಳಿಕೆಗೆ ಗುಜರಾತ್ ಪಾತ್ರವಾಗಿದೆ. ಅಂದು ನಮ್ಮ ಜನರು ಗಾಬರಿಗೊಂಡಿದ್ದರು. ಭಾರತ ಸರ್ಕಾರದಿಂದ 19 ರೂಪಾಯಿ ದೊರಕಬೇಕಾದರೆ, ನಿಮ್ಮ 13 ರೂಪಾಯಿಗಳಿಗೆ ಯಾರು ತಾನೇ ಮುಂದೆ ಬರುತ್ತಾರೆ. ಆಗ ನಾನು ಹೆಚ್ಚು ನೀಡುವುದಿಲ್ಲ, ನಾನು ಇದೇ ದರಕ್ಕೆ ಬದ್ಧನಾಗಿದ್ದೇನೆ ಎಂದೆ, ಉಷ್ಣ ವಿದ್ಯುತ್ ಮತ್ತು ಸೌರ ವಿದ್ಯುತ್ ದರಗಳು ಒಂದೇ ಆಗುವ ದಿನಗಳು ದೂರವಿಲ್ಲ ಎಂದು ನಾನು ಅಂದಿನ ಭಾಷಣದಲ್ಲಿ ಹೇಳಿದ್ದೆ. ನಾನು ತಲೆಬಾಗಲಿಲ್ಲ, ತಮಾಷೆಯ ಮಾತೆಂದರೆ ಜನತೆ 19 ರೂಪಾಯಿಯ ಯೋಜನೆ ಕಡೆ ಹೋಗದೆ, 13 ರೂಪಾಯಿ ಯೋಜನೆ ಕಡೆ ಬಂದರು. ಏಕೆಂದರೆ ಪರಿಸರ ವ್ಯವಸ್ಥೆಯನ್ನು ನಾನು ನಿಭಾಯಿಸಿದ್ದೆ ಮತ್ತು ಅಂದಿನ ದಿನಗಳ ಅತ್ಯಂತ ದೊಡ್ಡ ಸೌರ ಪಾರ್ಕ್ ಅಲ್ಲಿ ನಿರ್ಮಾಣವಾಗಿತ್ತು. ಇಂದು ದೇಶ ಸೌರ ಯೋಜನೆಯಲ್ಲಿ ಯೂನಿಟ್ ಗೆ ಎರಡೂವರೆ ರೂಪಾಯಿಗಳಿಗೆ ಬಂದು ತಲುಪಿದೆ.
ಮಿತ್ರರೇ, ಸರ್ಕಾರ ವಿದ್ಯುತ್ ಪ್ರಸರಣ ಕ್ಷೇತ್ರದಲ್ಲಿ ಬಂಡವಾಳವನ್ನು ಹೆಚ್ಚು ಮಾಡಿದೆ. ಈ ಕಾರಣದಿಂದ ದೇಶದಲ್ಲಿ ಪ್ರಸರಣ ಜಾಲ ಅತ್ಯಂತ ವೇಗದಲ್ಲಿ ವೃದ್ಧಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿಗೂ ಅಧಿಕ ಯೋಜನೆಗಳ ಕೆಲಸ ಮಾಡಲಾಗಿದೆ. ಇದು ಕಳೆದ ಸರ್ಕಾರದ ಅಂತಿಮ ಮೂರು ವರ್ಷಗಳಿಗೆ ಹೋಲಿಸಿದರೆ ಶೇಕಡಾ 83ರಷ್ಟು ಅಧಿಕವಾಗಿದೆ. ಈ ಒಂದೊಂದು ವಿಷಯಗಳೂ ಕೆಲಸ ಹೇಗೆ ಆಗುತ್ತದೆ ಎಂಬುದನ್ನು ತಮಗೆ ತಿಳಿಸುತ್ತದೆ. ಈ ಸರ್ಕಾರದಲ್ಲಿ ಗುರಿಗಿಂತ ಶೇಕಡಾ 12 ರಷ್ಟು ಅಧಿಕ ಪ್ರಸರಣ ಜಾಲವನ್ನು ಅಳವಡಿಸಲಾಗಿದೆ.
ಇದಕ್ಕೆ ಕಾರಣ ದೇಶಕ್ಕೆ ಸುರಕ್ಷಿತ ಮತ್ತು ಸಮತೋಲಿತ ಗ್ರಿಡ್ ದೊರಕಿರುವುದಷ್ಟೇ ಕಾರಣವಲ್ಲ, ಬದಲಿಗೆ ನಾವು ಅತ್ಯಂತ ವೇಗವಾಗಿ ಒಂದು ದೇಶ, ಒಂದು ಗ್ರಿಡ್, ಒಂದು ಬೆಲೆ ಎಂಬ ಗುರಿಯತ್ತ ಮುನ್ನಡೆಯುತ್ತಿದ್ದೇವೆ.

ಮಿತ್ರರೇ, ಅನೇಕ ವರ್ಷಗಳ ಕಾಲ ವಿದ್ಯುತ್ ವಲಯವನ್ನು ನಿರ್ಲಕ್ಷಿಸಿದ್ದರ ಪರಿಣಾಮ ವಿದ್ಯುತ್ ವಿತರಣೆ ಈ ಕ್ಷೇತ್ರದ ದೊಡ್ಡ ದುರ್ಬಲತೆಯಾಗಿತ್ತು. ಈ ಕಾರಣದಿಂದಾಗಿ, ದೇಶದಲ್ಲಿ ಉತ್ಪಾದನೆಯಾಗುತ್ತಿದ್ದ ವಿದ್ಯುತ್, ಜನಸಾಮಾನ್ಯರಿಗೆ ದೊರಕುತ್ತಿರಲಿಲ್ಲ. ವಿದ್ಯುತ್ ವಿತರಣಾ ಕಂಪನಿಗಳು ಪ್ರತಿ ಹೆಚ್ಚುವರಿ ಯೂನಿಟ್ ವಿದ್ಯುತ್ ಗೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದವು.

ಈ ದುರ್ಬಲ ಸಂಪರ್ಕವನ್ನು ತೊಡೆದು ಹಾಕಲು, ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು 2015 ರಲ್ಲಿ ಸರ್ಕಾರವು ಉಜ್ವಲ ಡಿಸ್ಕಾಂ ಅಶ್ಯೂರೆನ್ಸ್ ಯೋಜನೆ ಅಂದರೆ “ಉದಯ್” ಯೋಜನೆಯನ್ನು ಪ್ರಾರಂಭ ಮಾಡಿತು. ಉದಯ್ ಯೋಜನೆಯ ಉದ್ದೇಶ ವಿದ್ಯುತ್ ಹಂಚಿಕೆಯ ಕೆಲಸದಲ್ಲಿ ತೊಡಗಿರುವ ಕಂಪನಿಗಳಲ್ಲಿ ಉತ್ತಮ ಕಾರ್ಯಾಚರಣೆ ಮತ್ತು ಹಣಕಾಸು ನಿರ್ವಹಣೆಯ ರಚನೆ ಮಾಡುವುದಾಗಿತ್ತು. ಕಂಪನಿಗಳಲ್ಲಿ ಸ್ಥಿರತೆ ಬಂದರೆ, ಅದು ವೃತ್ತಿಪರವಾಗಿ ಬಲಿಷ್ಠವಾಗುವುದು, ಆಗ ಹಂಚಿಕೆಯ ಕಡೆಗೆ ಅದರ ಗಮನ ಹರಿಯುವುದು.

ಇಂದು ಸತತ ಮೂರು ವರ್ಷಗಳ ಪ್ರಯತ್ನದ ಕಾರಣದಿಂದಾಗಿ ವಿದ್ಯುತ್ ವಿತರಣಾ ಕಂಪನಿಗಳು ಚೇತರಿಕೆಯನ್ನು ಕಂಡಿವೆ.ಇದರ ಪರಿಣಾಮವಾಗಿ ವಿತರಣಾ ಕಂಪನಿಗಳು ಅಗಸ್ಟ್ 2017 ರ ತನಕ ಬಡ್ಡಿ ರೂಪವಾಗಿ ನೀಡಬೇಕಾಗಿದ್ದ ಸರಿಸುಮಾರು 23,500 ಕೋಟಿ ರೂಪಾಯಿಗಳನ್ನು ಉಳಿಸಿವೆ. ಈ ಮೂಲಕ ಯಾವ ರೀತಿಯ ಪರಿಸ್ಥಿತಿ ಸೃಷ್ಟಿಯಾಗಿದೆ ಎಂಬುದನ್ನು ತಾವು ನೋಡಬಹುದಾಗಿದೆ.

ಉದಯ್ ಯೋಜನೆ ಪ್ರಾರಂಭವಾದ ಒಂದು ವರ್ಷದಲ್ಲಿ, ಅಂದರೆ 2016 ಕ್ಕೆ ಹೋಲಿಸಿದಲ್ಲಿ ವಿತರಣಾ ಕಂಪನಿಗಳ ವಾರ್ಷಿಕ ನಷ್ಟ 2017 ರಲ್ಲಿ ಸುಮಾರು ಶೇಕಡಾ 42ರಷ್ಟು ಕಡಿಮೆಯಾಗಿದೆ. ಉದಯ್ ಯೋಜನೆಯ ಅಭಿವೃದ್ಧಿಗೆ ಸ್ಪರ್ಧಾತ್ಮಕ, ಸಹಕಾರಿ ಸಂಘಟಿತ ವ್ಯವಸ್ಥೆಯನ್ನು ಉತ್ತಮ ಉದಾಹರಣೆಯ ರೂಪದಲ್ಲಿ ತಾವು ಕಾಣಬಹುದು. ಮಿತ್ರರೇ, ಸರ್ಕಾರ ನಗರ ಮತ್ತು ಹಳ್ಳಿಗಳಲ್ಲಿ ವಿದ್ಯುತ್ ಹಂಚಿಕಾ ವ್ಯವಸ್ಥೆಯನ್ನು ಬಲಪಡಿಸಲು ಎರಡು ದೊಡ್ಡ ಯೋಜನೆಗಳ ಬಗ್ಗೆ ಕೆಲಸ ಮಾಡುತ್ತಿದೆ.

ಹಳ್ಳಿಗಳಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಚಾಲ್ತಿಯಲ್ಲಿದೆ ಮತ್ತು ನಗರಗಳಲ್ಲಿ ಇಂಟಿಗ್ರೇಟೆಡ್ ಪವರ್ ಡೆವಲಪ್ ಮೆಂಟ್ ಸ್ಕೀಮ್ (ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ ) ಅಂದರೆ ಐ ಪಿ ಡಿ ಎಸ್. ಈ ಎರಡು ಯೋಜನೆಗಳನ್ನು ಒಳಗೊಂಡ 69 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳ ಕಾರ್ಯ ವೇಗವಾಗಿ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರಗಳಿಗೆ ವಿದ್ಯುತ್ ವಿತರಣಾ ಯೋಜನೆಗಳ ಅಡಿಯಲ್ಲಿ ಸುಮಾರು 22 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಒದಗಿಸಿದೆ.ಈ ಹಣ ಕಳೆದ ಸರ್ಕಾರದ ಕೊನೆಯ ಮೂರು ವರ್ಷಗಳಲ್ಲಿ ಒದಗಿಸಲಾದ ಹಣಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.
ಸಹೋದರ ಸಹೋದರಿಯರೇ, ದೇಶಾದ್ಯಂತ ವಿದ್ಯುತ್ ವಿತರಣಾ ವಲಯದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರ, ನೀತಿಗಳ ನೇರ ಪರಿಣಾಮ ಸುಲಭ ವ್ಯಾಪಾರದ ಮೇಲೆಯೂ ಬೀರಿದೆ. ವಿದ್ಯುತ್ ವಲಯದಲ್ಲಿ ಸುಲಭ ವ್ಯಾಪಾರದ ವಿಚಾರದಲ್ಲಿ ದೇಶವು 2015 ರಲ್ಲಿ 99ನೇ ಸ್ಥಾನದಲ್ಲಿತ್ತು. ಇಂದು ಅದು 26ನೇ ಸ್ಥಾನದಲ್ಲಿದೆ. ಎಲ್ಲಿಯ 99 ಮತ್ತು ಎಲ್ಲಿಯ 26 ನೇ ಸ್ಥಾನ, ತಾವೇ ಕಲ್ಪನೆ ಮಾಡಿಕೊಳ್ಳಿ. ಇಂತಹ ಪ್ರಗತಿ ಈ ವಲಯವನ್ನು ಸುಧಾರಿಸಲು ತೊಡಗಿಕೊಂಡ ಜನರಿಗೆ ಒಂದು ಗೌರವಪೂರ್ಣ ಘಳಿಗೆಯಾಗಿದೆ.

ವಿದ್ಯುತ್ ವಲಯದಲ್ಲಿನ ಭಾರತದ ಕಾರ್ಯವನ್ನು ಒಂದು ಅಂತಾರಾಷ್ಟ್ರೀಯ ಸಂಸ್ಥೆಯು ಗುರುತಿಸಿದೆ. ಅಮೇರಿಕಾದ ಅಂತರಿಕ್ಷ ಸಂಸ್ಥೆ ನಾಸಾ ಕಳೆವ ವರ್ಷ ಒಂದು ರಾತ್ರಿ ಅಂತರಿಕ್ಷದಿಂದ ಭಾರತದ ಒಂದು ಚಿತ್ರವನ್ನು ಸೆರೆ ಹಿಡಿದಿದೆ. ಈ ಚಿತ್ರದಲ್ಲಿ ಭಾರತ ಹೊಳೆಯುತ್ತಿತ್ತು. ತಾವೂ ಕೂಡಾ ಈ ಚಿತ್ರವನ್ನು ನೋಡಬಹುದಾಗಿದೆ. ಇಂತಹುದೇ ಒಂದು ಚಿತ್ರ 2012 ರಲ್ಲಿ ಕೂಡಾ ಸೆರೆ ಹಿಡಿಯಲಾಗಿತ್ತು, ಅದರಲ್ಲಿ ಸಂಪೂರ್ಣ ಕತ್ತಲಾವರಿಸಿತ್ತು. 2014 – 2015 ರಲ್ಲಿ ತೆಗೆಯಲಾದ ಮತ್ತೊಂದು ಚಿತ್ರದಲ್ಲೂ ವಿದ್ಯುತ್ ವಲಯದ ಪರಿಸ್ಥಿತಿಯನ್ನು ಅರಿಯಬಹುದಾಗಿದೆ. 2016 ರ ಚಿತ್ರದಲ್ಲೂ ಕೂಡಾ. ಮಿತ್ರರೇ, ಈ ಸರ್ಕಾರ ವಿದ್ಯುತ್ ವಲಯವನ್ನು ಬಲಪಡಿಸುವುದರ ಜತೆ ಜತೆಗೆ ವಿದ್ಯುತ್ ಬೇಡಿಕೆಯನ್ನು ಕಡಿಮೆ ಮಾಡುವ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವತ್ತ ತನ್ನ ಗಮನವನ್ನು ಹರಿಸುತ್ತಿದೆ.

ಎಲ್ ಇ ಡಿ ಬಲ್ಬ್ 2014 ರಲ್ಲಿ ಮಾರುಕಟ್ಟೆಗೆ ಬಂತು. ಸರ್ಕಾರದ ಪ್ರಯತ್ನದ ಫಲವಾಗಿ ಫೆಬ್ರವರಿ 2014 ರಲ್ಲಿ 310 ರೂಪಾಯಿಗಳಾದ್ದ ಒಂದು ಎಲ್ ಇ ಡಿ ಬಲ್ಬ್ ಬೆಲೆ ಇಂದು ಸೆಪ್ಟೆಂಬರ್ 2017 ರಲ್ಲಿ 40 ರೂಪಾಯಿಗಳಾಗಿದೆ. ಉಜಾಲಾ ಯೋಜನೆಯಡಿ ಇಲ್ಲಿಯವರೆಗೆ ದೇಶಾದ್ಯಂತ 26 ಕೋಟಿಗೂ ಹೆಚ್ಚು ಎಲ್ ಇ ಡಿ ಬಲ್ಬ್ ಗಳನ್ನು ವಿತರಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರ ವಿದ್ಯುತ್ ಬಿಲ್ ವಾರ್ಷಿಕ 13 ಸಾವಿರ 700 ಕೋಟಿ ರೂಪಾಯಿಗೂ ಅಧಿಕ ಉಳಿತಾಯವಾಗಿದೆ. 13 ಸಾವಿರದ 700 ಕೋಟಿ ರೂಪಾಯಿಯ ಉಳಿತಾಯವೆಂದರೆ ಎಷ್ಟು ಮೆಗಾವ್ಯಾಟ್ ವಿದ್ಯುತ್ ಉಳಿತಾಯವಾಗಿದೆ ಎಂದು ತಾವು ಅಂದಾಜು ಮಾಡಬಹುದು. ಅದನ್ನು ಅಳವಡಿಸಲು ಎಷ್ಟು ಹಣ ವೆಚ್ಚವಾಗಬಹುದಿತ್ತೋ ಅದು ಕೂಡಾ ಉಳಿತಾಯವಾಗಿದೆ. ದೇಶದ ಆರ್ಥಿಕತೆಯನ್ನು ಯಾವ ರೀತಿ ಮುನ್ನಡೆಸಬಹುದು ಎಂಬುದರ ಉದಾಹರಣೆ ತಮ್ಮ ಮುಂದಿದೆ. ಖಾಸಗಿ ವಲಯ ಕೂಡಾ 41 ಕೋಟಿಗೂ ಅಧಿಕ ಎಲ್ ಇ ಡಿ ಬಲ್ಬ್ ಗಳ ವಿತರಣೆ ಮಾಡಿದೆ. ಇದರ ಹೊರತಾಗಿ ಸರಕಾರದಿಂದ ವಿದ್ಯುತ್ ಉಳಿತಾಯ ಮಾಡಬಹುದಾದ 13 ಲಕ್ಷ ಫ್ಯಾನ್ ಮತ್ತು 33 ಲಕ್ಷಕ್ಕೂ ಅಧಿಕ ಟ್ಯೂಬ್ ಲೈಟ್ ಗಳನ್ನು ವಿತರಣೆ ಮಾಡಲಾಗಿದೆ. ವಿಶ್ವದ ಅತ್ಯಂತ ದೊಡ್ಡ ಕಾರ್ಯಕ್ರಮದ ಅನ್ವಯ ಇಲ್ಲಿಯ ತನಕ 33 ಲಕ್ಷ 60 ಸಾವಿರ ಕೋಟಿ ಎಲ್ ಇ ಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ.

ಮಿತ್ರರೇ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಈ ಸರ್ಕಾರದ ಹೆಚ್ಚಿನ ಆದ್ಯತೆಯಾಗಿದೆ. ದೇಶದ ಸಾಮಾನ್ಯ ನಾಗರಿಕ, ದೇಶದ ಬಡವ, “ದೇಶದ ಪ್ರತಿ ಗ್ರಾಹಕ ನಮಗೆ ಪ್ರಥಮ ಆದ್ಯತೆ”. ಪ್ರತಿ ಹಂತದಲ್ಲೂ ಅವರಿಂದ ಸಲಹೆಗಳನ್ನು ಸ್ವೀಕರಿಸುವುದು, ಅವರಿಗೆ ಕೆಲಸಗಳ ಬಗ್ಗೆ ಮಾಹಿತಿ ನೀಡುವುದು, ಇವೆರಡರ ಬಗ್ಗೆ ಸರ್ಕಾರ ಅತ್ಯಂತ ಗಂಭೀರವಾಗಿದೆ. ಮೊಬೈಲ್ ಆಪ್, ವೆಬ್ ಪೋರ್ಟಲ್, ಡ್ಯಾಷ್ ಬೋರ್ಡ್ ಗಳ ಮೂಲಕ ಯೋಜನೆಗಳ ಪ್ರಗತಿಯನ್ನು ಜನರ ಬಳಿಗೆ ತಲುಪಿಸಲಾಗುತ್ತಿದೆ. ಜನರಿಂದ ಸಲಹೆಗಳನ್ನು ಕೂಡಾ ಪಡೆದುಕೊಳ್ಳಲಾಗುತ್ತಿದೆ.

ಮಿತ್ರರೇ, ನಮ್ಮ ಆರ್ಥಿಕ ವ್ಯವಸ್ಥೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಮುಂಬರುವ ವರ್ಷಗಳಲ್ಲಿ ನಮ್ಮ ವಿದ್ಯುತ್ ಬೇಡಿಕೆ ಮತ್ತಷ್ಟು ಹೆಚ್ಚಲಿರುವುದು ಸಾಮಾನ್ಯವಾಗಿದೆ. ಈ ಕಾರಣದಿಂದಾಗಿ ನಾವು ಸಮತೋಲಿತವಾಗಿ ಮುನ್ನಡೆಯಬೇಕಾಗಿದೆ. ದೇಶದ ವಿದ್ಯುತ್ ಅವಶ್ಯಕತೆಗಳನ್ನು ಪೂರ್ಣಗೊಳಿಸಲು ಹೈಡ್ರೋಕಾರ್ಬನ್ ಗಳು ಪ್ರಮುಖ ಪಾತ್ರ ವಹಿಸಲಿವೆ. ಇಂದು ದೇಶದ ವಿದ್ಯುತ್ ಬೇಡಿಕೆಗಳನ್ನು ಕಲ್ಲಿದ್ದಲು ಪೂರ್ಣಗೊಳಿಸುತ್ತಿದೆ. ಮುಂಬರುವ ದಿನಗಳಲ್ಲಿ ಇದನ್ನು ಅನಿಲ ಮತ್ತು ನವೀಕರಿಸಬಹುದಾದ ಇಂಧನಗಳ ಮೂಲಕ ಸಮತೋಲನ ಮಾಡಬೇಕಾಗಿದೆ. ಕಾರ್ಬನ್ ಸಂಬಂಧಿತ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ನಮ್ಮ ಸಾಂಸ್ಕೃತಿಕ ಪರಂಪರೆಯ ಒಂದು ಭಾಗವಾಗಿದೆ. ವಿಶ್ವಕ್ಕೆ ನಾವು ಸಿ ಒ ಪಿ 21 ರಲ್ಲಿ ಸಾರ್ವಜನಿಕªÁ ಬದ್ಧತೆಯನ್ನು ತೋರಿ ನಾವು ಈ ಆಂದೋಲನದಲ್ಲಿ ಪಾಲ್ಗೊಂಡಿದ್ದೇವೆ.

ನ್ಯೂ ಇಂಡಿಯಾದಲ್ಲಿ ನಮಗೆ ನ್ಯಾಯಯುತ, ದಕ್ಷ ಮತ್ತು ಸಮರ್ಥನೀಯ ಇಂಧನ ರೂಪುರೇಷೆಯ ಸಿದ್ಧಾಂತದ ಆಧಾರದ ಮೇಲೆ ಮುನ್ನಡೆಯುವ ಆವಶ್ಯಕತೆ ಇದೆ. ದೇಶೀಯ ಪೂರೈಕೆಯನ್ನು ಎಷ್ಟು ಹೆಚ್ಚು ಮಾಡುತ್ತೇವೆ ಹಾಗೂ ಆಮದಿನ ಮೇಲೆ ನಾವು ಎಷ್ಟು ಕಡಿಮೆ ಅವಲಂಬಿಸಿದ್ದೇವೆ ಎಂಬುದರ ಮೇಲೆ ನಿರ್ಧಾರವಾಗಲಿದೆ.

2022 ರೊಳಗೆ ನಾವು ತೈಲ ಆಮದಿನಲ್ಲಿ ಶೇಕಡಾ 10 ರಷ್ಟು ಕಡಿಮೆ ಮಾಡಿದರೆ ಇದು ಕೇವಲ ಉದ್ಯಮಗಳಿಗೆ ಅಷ್ಟೇ ಅಲ್ಲದೇ ದೇಶದ ಅರ್ಥವ್ಯವಸ್ಥೆಗೂ ಕೂಡಾ ಬಲ ನೀಡಲಿದೆ. ಕಳೆದ ಹತ್ತು ವರ್ಷಗಳಲ್ಲಿ ಕಚ್ಚಾ ಆಮದಿನ ಮೇಲೆ ನಾವು ಸುಮಾರು ಒಂದು ಟ್ರಿಲಿಯನ್ ಡಾಲರ್ ವೆಚ್ಚ ಮಾಡಿದ್ದೇವೆ. ಇದು ನಮ್ಮ ಸಾಮಾನ್ಯ ಮುಂಗಡ ಪತ್ರಕ್ಕಿಂತ ಹೆಚ್ಚು ಕಡಿಮೆ ಮೂರರಷ್ಟು ಅಧಿಕವಾಗಿದೆ. ತೈಲ ಆಮದಿನಲ್ಲಿ ಕಡಿತ ಮಾಡಿ ಅದರಲ್ಲಿ ಉಳಿದ ಹಣದಲ್ಲಿ ದೇಶದ ಗ್ರಾಮೀಣ ಪ್ರದೇಶಗಳ ನಮ್ಮ ಮಧ್ಯಮ ವರ್ಗದ ಕುಟುಂಬಗಳ ಅಭಿವೃದ್ಧಿ ಯೋಜನೆಗಳಿಗೆ ವೆಚ್ಚ ಮಾಡಿದರೆ ಎಷ್ಟು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಾಗಬಹುದು ಎಂಬುದನ್ನು ತಾವು ಅಂದಾಜು ಮಾಡಬಹುದಾಗಿದೆ.

ಮಿತ್ರರೇ, ಕಳೆದ ಮೂರು ವರ್ಷಗಳಲ್ಲಿ ತೈಲ ಮತ್ತು ಅನಿಲ ವಲಯದಲ್ಲಿ ಸುಧಾರಣೆಯ ಮೂಲಕ ಗ್ರಾಹಕ ಕೇಂದ್ರಿತ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಮೂಲಕ ಎಲ್ ಪಿ ಜಿ ಸಹಾಯಧನವನ್ನು ನೇರ ಲಾಭ ವರ್ಗಾವಣೆಯ ಯೋಜನೆಯ ಜತೆಗೆ ಜೋಡಿಸುವುದು, ಪೈಪ್ಡ್ ನೈಸರ್ಗಿಕ ಅನಿಲ ಸಂಪರ್ಕ ಮತ್ತು ನಗರ ಅನಿಲ ಸಂಪರ್ಕದ ಜಾಲವನ್ನು ವಿಸ್ತರಿಸುವುದು ಮತ್ತು ಎಲ್ ಪಿ ಜಿ ಯ ವ್ಯಾಪ್ತಿಯನ್ನು ವಿಸ್ತರಿಸುವುದು.

ಇದರ ಹೊರತಾಗಿ ನೀತಿನಿರ್ಧಾರದ ವಿಷಯದಲ್ಲಿ ಕೂಡಾ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದ್ರವ ಇಂಧನಗಳ ಬೆಲೆಯನ್ನು ನಿಯಂತ್ರಣ ಮುಕ್ತವನ್ನಾಗಿಸುವುದು, ಅನಿಲ ಬೆಲೆಯ ಬಗ್ಗೆ ಹೊಸ ನೀತಿಯನ್ನು ಸಿದ್ಧಪಡಿಸುವುದು, ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದಕ್ಕೆ ಹೊಸ ಉಪಾಯಗಳನ್ನು ಕಂಡುಹಿಡಿಯುವುದು, ಹೆಲ್ಪ್ ಅಂದರೆ ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಪರವಾನಗಿ ನೀತಿಯನ್ನು ರಚಿಸುವುದು, ಡಿ ಎಸ್ ಎಫ್ ಅಂದರೆ ಕಂಡುಹಿಡಿಯಲಾದ ಸಣ್ಣ ಕ್ಷೇತ್ರದ ಹರಾಜಿಗಾಗಿ ನೂತನ ನೀತಿಯ ರಚನೆ, ರಸಗೊಬ್ಬರ ವಲಯದಲ್ಲಿ ಅನಿಲ ಸಂಗ್ರಹಣೆ ಮಾಡುವುದು.
ಸಹೋದರ ಸಹೋದರಿಯರೇ, ಸರ್ಕಾರ ಪರಿಸರ ರಕ್ಷಣೆಯ ಕುರಿತು ಸಂಪೂರ್ಣ ಗಂಭೀರವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಪೆಟ್ರೋಲ್ ನಲ್ಲಿ ಇಥೆನಾಲ್ ಮಿಶ್ರಣ, ಜೈವಿಕ ಇಂಧನ ಸಂಬಂಧಿತ ಯೋಜನೆಗಳು, ಎಲ್ ಎನ್ ಜಿ ಟರ್ಮಿನಲ್ ಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೂಡಾ ಪ್ರಾರಂಭ ಮಾಡಲಾಗಿದೆ.

ಭವಿಷ್ಯದಲ್ಲಿ ದೇಶದ ಇಂಧನ ಆವಶ್ಯಕತೆಗಳನ್ನು ಪೂರ್ಣಗೊಳಿಸುವುದಕ್ಕಾಗಿ ತೈಲ ಉತ್ಪಾದಿಸುವ ದೊಡ್ಡ ದೇಶಗಳ ಜತೆಗಿನ ಸಂಬಂಧಗಳನ್ನು ಗಟ್ಟಿಗೊಳಿಸಲಾಗುತ್ತಿದೆ. ಇದೇ ನಿಟ್ಟಿನಲ್ಲಿ ಭಾರತ – ರಷ್ಯಾ ಇಂಧನ ಸೇತುವೆಯ ರಚನೆ ಮಾಡಲಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯು ಭವಿಷ್ಯದ ಹಿತದೃಷ್ಟಿಯಿಂದ ವಿದೇಶಗಳೊಂದಿಗೆ ಇಂತಹ ಅನೇಕ ಒಪ್ಪಂದಗಳನ್ನು ಮಾಡಿಕೊಂಡಿದೆ.

ಸರ್ಕಾರದ ಕಾರ್ಯ ವೈಖರಿಯ ಬದಲಾವಣೆಯಿಂದ ಇಂದು ಸಂಪೂರ್ಣ ಇಂಧನ ವಲಯ ಬಲಿಷ್ಟಗೊಳ್ಳುತ್ತಿದೆ. ಇಂಧನ ವಲಯ ಬಲಿಷ್ಟಗೊಳ್ಳುವುದರಿಂದ ದೇಶಕ್ಕೆ ಕೂಡಾ ಒಂದು ಹೊಸ ಕಾರ್ಯ ಸಂಸ್ಕೃತಿ ದೊರೆಯಲಿದೆ. ದೇಶದ ದೂರ ದೂರದ ಪ್ರದೇಶಗಳ ಜನರ ಜೀವನದಲ್ಲಿ ಹೊಸ ಬೆಳಕು ಮೂಡಲಿದೆ, ಅನಿಲ ದೊರೆಯಲಿದೆ, ಹೀಗಾದಾಗ ಅವರ ಬದುಕಿನ ಶೈಲಿ, ಕಾರ್ಯ ನಿರ್ವಹಿಸುವ ವಿಧಾನ ಬದಲಾಗಲಿದೆ. “ಉಜ್ವಲಾ ಯೋಜನೆ” ಯ ರೀತಿ “ಸೌಭಾಗ್ಯ ಯೋಜನೆ” ಕೂಡಾ ಮಹಿಳೆಯ ಜೀವನದಲ್ಲಿ ಸುರಕ್ಷೆ ಮತ್ತು ಆರೋಗ್ಯದ ವಿಷಯದಲ್ಲಿ ನೂತನ ಭಾಗ್ಯದ ಉದಯವಾಗಲಿದೆ ಎಂಬ ವಿಶ್ವಾಸ ನನಗಿದೆ. ಇದರಿಂದ ನಮ್ಮ ಸಮಾಜದ ಒಂದು ದೊಡ್ಡ ಅಸಮತೋಲನ ದೂರವಾಗಲಿದೆ.
ಬಡವರ ಜೀವನದ ಬದಲಾವಣೆಗಾಗಿ, ಅವರ ಜೀವನದ ಕತ್ತಲೆಯನ್ನು ದೂರ ಮಾಡುವುದಕ್ಕಾಗಿ, ನವ ಭಾರತಕ್ಕಾಗಿ ತೆಗೆದುಕೊಂಡ ಈ ನಿರ್ಧಾರಕ್ಕಾಗಿ ನಾನು ಮತ್ತೊಮ್ಮೆ ತಮಗೆಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ.

ಇದೀಗ ತಾನೆ ಶ್ರೀ ಧರ್ಮೇಂದ್ರ ಜೀ ಅವರು ಒ ಎನ್ ಜಿ ಸಿ ಯು (ತೈಲ ಮತ್ತು ನೈಸರ್ಗಿಕ ಅನಿಲ ನಿಗಮ) ಸ್ಟಾರ್ಟ್ ಅಪ್ ಗಾಗಿ 100 ಕೋಟಿ ರೂಪಾಯಿಯ ಯೋಜನೆ ಸಿದ್ಧಪಡಿಸಿದೆ ಎಂದು ತಮ್ಮ ಭಾಷಣದಲ್ಲಿ ಹೇಳುತ್ತಿದ್ದರು. ನಾನು ಒಂದು ಸವಾಲಿನ ಕೆಲಸವನ್ನು ತಮ್ಮಿಂದ ಮಾಡಿಸಬಯಸುತ್ತೇನೆ ಮತ್ತು ತಾವು ಅದನ್ನು ಮಾಡುತ್ತೀರೆಂಬ ವಿಶ್ವಾಸ ನನಗಿದೆ. ವಿದ್ಯುಚ್ಚಾಲಿತ ಕಾರು, ಈಗಾಗಲೇ ವಿಶ್ವ ಅದರಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಇದು ಇಂಧನಕ್ಕೆ ಸಂಬಂಧಿಸಿದ ವಿಷಯವಾಗಿದ್ದು ಇದು ವಿದ್ಯುಚ್ಚಾಲಿತ ಕಾರಿನ ಕಡೆ ಕೊಂಡೊಯ್ಯುತ್ತಿದೆ. ವಿದ್ಯುಚ್ಚಾಲಿತ ಕಾರಿನಿಂದ ಕಡಿಮೆಯಾಗಬಹುದಾದ ತೊಂದರೆಗಳು ಮತ್ತು ಅದರಿಂದಾಗಬಹುದಾದ ಲಾಭಗಳ ಬಗ್ಗೆ ನನಗೆ ಅರಿವಿದೆ. ಆದರೆ ಒಂದು ಕ್ಷೇತ್ರ ಒಂದು ದೊಡ್ಡ ಕ್ರಾಂತಿಯನ್ನು ತರಬಹುದಾಗಿದೆ.

ಒ ಎನ್ ಜಿ ಸಿ ಈ ಕಾರ್ಯದಲ್ಲಿ ತೊಡಗಿಕೊಂಡು ದೇಶದ ಯುವಜನತೆಯನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಆಹ್ವಾನಿಸಬೇಕೆಂದು ನಾನು ಬಯಸುತ್ತೇನೆ. ನೂತನ ಆವಿಷ್ಕಾರಕ್ಕಾಗಿ ಕರೆ ನೀಡಿ, ಆವಿಷ್ಕಾರದ ಸ್ಪರ್ಧೆಯನ್ನು ಒ ಎನ್ ಜಿ ಸಿ ಸಂಘಟಿಸಲಿ. ವಿದ್ಯುತ್ ಒಲೆಯಿಂದ ಎಲ್ಲ ಪ್ರಕಾರದ ಅಡುಗೆಯನ್ನು ಮಾಡಬಹುದಾಗಿದೆ. ಪಕೋಡಾ ಮಾಡಬಹುದು, ಚಪಾತಿಯನ್ನು ಕೂಡಾ ಮಾಡಬಹುದು, ಸಿಹಿಯನ್ನು ಕೂಡಾ ಮಾಡಬಹುದು. ಇಂತಹ ಗ್ರಾಹಕ ಸ್ನೇಹಿ ಉಪಕರಣಗಳನ್ನು ನಿರ್ಮಿಸುವುದಾದರೆ ಜನತೆ ತಮ್ಮ ಮನೆಗಳಲ್ಲಿ ಸೌರ ವಿದ್ಯುತ್ ನಿಂದ ಒಲೆ ಉರಿಸುವುದಾದರೆ, ಅನಿಲ ಸಿಲೆಂಡರ್, ಎಲ್ ಪಿ ಜಿ, ಉಜ್ವಲಾ ಯಾವುದರ ಅವಶ್ಯಕತೆಯೂ ಬರುವುದಿಲ್ಲ. ವಿದ್ಯುಚ್ಚಾಲಿತ ಕಾರು ನಿರ್ಮಾಣದ ನಂತರ ಉಂಟಾಗುವ ಹೊರೆ ಅಥವಾ ಉಳಿತಾಯಕ್ಕೆ ಹೋಲಿಸಿಕೊಂಡು ಪ್ರತಿಯೊಂದು ಮನೆಯಲ್ಲಿ ಸುಲಭವಾಗಿ ವಿದ್ಯುಚ್ಚಾಲಿತ ಒಲೆಯನ್ನು ಅಳವಡಿಸಿಕೊಳ್ಳಬಹುದಾಗಿದೆ.

ನಮ್ಮ ದೇಶದ ಯುವ ಜನತೆಯನ್ನು ಸ್ಟಾರ್ಟ್ ಅಪ್ ಗೆ ಆಹ್ವಾನಿಸಿ, ಒಂದು ದೊಡ್ಡ ಸ್ಪರ್ಧೆಯನ್ನು ಆಯೋಜಿಸಿ.. ಈ ಕಾರ್ಯಕ್ಕಾಗಿ ಒ ಎನ್ ಜಿ ಸಿ ಗೆ ನೂರು ಕೋಟಿ ರೂಪಾಯಿ ಸಾಕಾಗಬಹುದೆಂದು ನಾನು ಅಂದಾಜಿಸುತ್ತೇನೆ. ಈ ಕಾರ್ಯಕ್ಕೆ ಶೇಕಡಾ 10 ರಷ್ಟು ವೆಚ್ಚ ಕಡಿಮೆ ಮಾಡಬೇಕೆಂದರೆ, ಒಂದು ವರ್ಷದಲ್ಲಿ ಆಗುತ್ತದೆ. ಯಾಕೆಂದರೆ ಇಂಧನ ಬಳಕೆಗೆ ಒಂದು ದೊಡ್ಡ ಪರ್ಯಾಯ ದೊರಕುತ್ತದೆ ಮತ್ತು ಇಂದು ವಿದ್ಯುಚ್ಚಾಲಿತ ಕಾರಿನ ಬಗ್ಗೆ ಎಷ್ಟು ಸಂಶೋಧನೆಗಳು ಆಗುತ್ತಿವೆಯೋ ಇದನ್ನು ಗಮನಿಸಿದರೆ ವಿದ್ಯುತ್ ಉಪಕರಣಗಳ ಮೇಲಿನ ಬುಕಿಂಗ್ ಪ್ರಾರಂಭವಾಗಿ ಭಾರತದಂತಹ ದೇಶಕ್ಕೆ ಇದು ಹೆಚ್ಚು ಅನುಕೂಲವೆಂದು ಸಾಬೀತಾಗುತ್ತದೆ. ಆದುದರಿಂದ ನಾನು ಇಂದು 25ನೇ ಸೆಪ್ಟೆಂಬರ್ 2017 ರಂದು ಸಂಜೆ 7.30ರ ಸಮಯಕ್ಕೆ ಒಂದು ಸವಾಲನ್ನು ತಮ್ಮ ಮುಂದಿಡುತ್ತಿದ್ದೇನೆ, ತಾವು ಬರೆದಿಟ್ಟುಕೊಳ್ಳಿ. ಸಮಯ ಸಂಜೆ 7.45 ಆಗುತ್ತಿದೆ. ತಾವು ಒಂದು ಯೋಜನೆ ಸಿದ್ಧಪಡಿಸಿಕೊಂಡು ನನ್ನ ಬಳಿಗೆ ಬನ್ನಿ, ಇದರ ಬಗ್ಗೆ ಏನನ್ನಾದರೂ ಮಾಡಿ ತೋರಿಸಿ. ಇಲ್ಲಿ ಸೇರಿ, ನನ್ನ ಮಾತುಗಳನ್ನು ಆಲಿಸುತ್ತಿರುವ ಎನ್ ಜಿ ಸಿ ಯ ಸಾವಿರಾರು ಸೈನಿಕರಿಗೆ ನಾನು ತಮ್ಮೆಲ್ಲ ಬುದ್ಧಿಮತ್ತೆಯನ್ನು ಉಪಯೋಗಿಸಿ ನೂತನ ಆವಿಷ್ಕಾರಕ್ಕಾಗಿ ದೇಶದ ಯುವಜನತೆಗೆ ಕರೆ ನೀಡಿ ಎಂದು ಆಹ್ವಾನ ನೀಡುತ್ತೇನೆ. ನಾವು ಇಂತಹ ಸರಳ ವಿಷಯಗಳನ್ನು ಗ್ರಾಹಕ ಸ್ನೇಹಿ ವಸ್ತುಗಳನ್ನು ಹೇಗೆ ನಿರ್ಮಿಸಬೇಕು ಮತ್ತು ಹೇಗೆ ನೂತನ ಕ್ರಾಂತಿಯನ್ನು ಆರಂಭ ಮಾಡಬೇಕು ಎಂಬುದರ ಬಗ್ಗೆ ಚಿಂತಿಸಿ. ಮಿತ್ರರೇ, ತಮಗೆಲ್ಲರಿಗೂ ಧನ್ಯವಾದಗಳು ಮತ್ತು ಇಂತಹ ಉತ್ತಮವಾದ ಕಟ್ಟಡದಲ್ಲಿ ತಾವು ಉತ್ತಮವಾದ ಕಾರ್ಯ ಮಾಡುತ್ತೀರೆಂಬ ನಂಬಿಕೆಯೊಂದಿಗೆ ತಮಗೆಲ್ಲರಿಗೂ ಶುಭಕಾಮನೆಗಳು.