Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ಪಿಕ್ ಮ್ಯಾಕೆಯ 5ನೇ ಅಂತಾರಾಷ್ಟ್ರೀಯ ಸಮಾವೇಶದ ಸಂದರ್ಭದಲ್ಲಿ ವಿಡಿಯೋ ಸಂವಾದದ ಮೂಲಕ ನವದೆಹಲಿಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಪಠ್ಯದ ಕನ್ನಡ ಅನುವಾದ

ಸ್ಪಿಕ್ ಮ್ಯಾಕೆಯ 5ನೇ ಅಂತಾರಾಷ್ಟ್ರೀಯ ಸಮಾವೇಶದ ಸಂದರ್ಭದಲ್ಲಿ ವಿಡಿಯೋ ಸಂವಾದದ ಮೂಲಕ ನವದೆಹಲಿಯಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಪಠ್ಯದ ಕನ್ನಡ ಅನುವಾದ


ತ್ರಿಪುರಾದ ರಾಜ್ಯಪಾಲರಾದ ಶ್ರೀ. ತಥಾಗತ್ ರಾಯ್ ಅವರೇ, ಹರಿಯಾಣದ ರಾಜ್ಯಪಾಲ ಪ್ರೊ. ಕ್ಯಾಪ್ಟನ್ ಸಿಂಗ್ ಸೋಲಂಕಿ ಅವರೇ, ನನ್ನ ಸಂಪುಟ ಸಹೋದ್ಯೋಗಿ ಶ್ರೀ. ಸುರೇಶ್ ಪ್ರಭು ಅವರೇ, ಸ್ಪಿಕ್ ಮ್ಯಾಕೆಯ ಸಲಹಾ ಮಂಡಳಿಯ ಅಧ್ಯಕ್ಷರಾದ ಡಾ. ಕರಣ್ ಸಿಂಗ್ ಅವರೇ, ಅಧ್ಯಕ್ಷ ಶ್ರೀ. ಅರುಣ್ ಸಹಾಯ್ ಅವರೇ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಇತರ ಗಣ್ಯರೇ ಮತ್ತು ನನ್ನ ಯುವ ಸ್ನೇಹಿತರೇ! 

 

ಸ್ಪಿಕ್ ಮ್ಯಾಕೆ ಸ್ಥಾಪನೆಯಾದ 40ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ5ನೇ ಅಂತಾರಾಷ್ಟ್ರೀಯ ಸಮಾವೇಶದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಅಭಿನಂದನೆಗಳು. ಭಾರತೀಯ ಪರಂಪರೆಯನ್ನು ಶಾಸ್ತ್ರೀಯ ಸಂಗೀತ, ಕಲೆ, ಸಾಹಿತ್ಯ, ಜನಪದ ಸಂಸ್ಕೃತಿಯ ಮೂಲಕ ಪೋಷಿಸುವಲ್ಲಿ ಈ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ. ಈ ಸಂಸ್ಥೆಯಿಂದ ಲಕ್ಷಾಂತರ ಯುವಜನರು ಸ್ಫೂರ್ತಿಪಡೆದು ದೇಶದ ಸಂಸ್ಕೃತಿಯ ಬಗ್ಗೆ ಅರಿವು ಹೊಂದಿದ್ದಾರೆ. 

 

ಈ ಕಾರ್ಯಕ್ರಮ ನಿಯೋಜನೆಗಾಗಿ ನಾನು ಪ್ರೊ. ಕಿರಣ್ ಸೇಠ್ ಅವರನ್ನು ಅಭಿನಂದಿಸುತ್ತೇನೆ. ಪ್ರೊ. ಕಿರಣ್ ಸೇಠ್ ಅವರು, ಕಳೆದ 40 ವರ್ಷಗಳಿಂದ ಕೌಶಲ್ಯದಿಂದ ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಅವರು ಎಂತಹ ಅನ್ವೇಷಕರಾಗಿದ್ದಾರೆಂದರೆ,ಅವರ ಹಲವು ವರ್ಷಗಳ ಸತತ ಪ್ರಯತ್ನವು ಯುವಕರಲ್ಲಿ ಭಾರತೀಯ ಸಂಗೀತ ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸಿದೆ.

 

ಸ್ನೇಹಿತರೆ, ನೈಜ ಸಾಧಕರು,  ತಮ್ಮ ಆಲೋಚನೆ ಮತ್ತು ತಮ್ಮ ವಿಚಾರಗಳಿಂದ ಮೇಲಿರುತ್ತಾರೆ. ಅವರಿಗೆ ಸಿದ್ಧಿ ಪ್ರಸಿದ್ಧಿಯ ಆಕಾಂಕ್ಷೆ ಇರುವುದಿಲ್ಲ. ನಾನು ಒಂದು ಪ್ರಸಂಗ ಓದಿದ್ದೇನೆ. ಒಮ್ಮೆ ಮಾಜಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಒಬ್ಬ ಸಂಗೀತಗಾರನಿಗೆ ಕೇಳುತ್ತಾರೆ, ನಿಮಗೆ ಸರ್ಕಾರದಿಂದ ಯಾವ ರೀತಿಯ ಸಹಾಯ ಬೇಕು. ಆ ಸಂಗೀತಗಾರರು ಒಂದು ರಾಗದ ಹೆಸರು ಹೇಳಿ, ಹೇಳುತ್ತಾರೆ, ಹಲವು ಕಲಾವಿದರು ಈ ರಾಗವನ್ನು ಸರಿಯಾಗಿ ಹಾಡುತ್ತಿಲ್ಲ, ಹಾಳುಮಾಡುತ್ತಿದ್ದಾರೆ. ಇದನ್ನು ಸರ್ಕಾರ ತಡೆಯಲು ಸಾಧ್ಯವೇ? ಈ ಉತ್ತರ ಕೇಳಿ ರಾಜೇಂದ್ರ ಪ್ರಸಾದ್ ತಲೆ ತಗ್ಗಿಸಿ ನಕ್ಕು ಸುಮ್ಮನಾದರು. 

 

ಸಂಗೀತ ಕ್ಷೇತ್ರದಲ್ಲಿ ಶಾಸನವಿಲ್ಲ. ಅಲ್ಲಿ ಶಿಸ್ತಿನ ಅನುಶಾಸನವನ್ನಷ್ಟೇ ಪಾಲಿಸಲಾಗುತ್ತದೆ. ಕಳೆದ 40 ವರ್ಷಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿನ ನಗರ ಮತ್ತು ಗ್ರಾಮಗಳ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳನ್ನು, ಅವರೊಂದಿಗೆ ಅತ್ಯಲ್ಪ ಶುಲ್ಕದಲ್ಲಿ ಕೆಲಸ ಮಾಡಲು  ಕಲಾವಿದರನ್ನು ಕರೆತರುವಲ್ಲಿ ಈ ಕಾರ್ಯಕ್ರಮದಲ್ಲಿ ಸೇರಿಸಲು, ಸಂಪನ್ಮೂಲ ಕ್ರೋಡೀಕರಿಸಲು ಏಕ ಮನಸ್ಸಿನ ಗಮನ ಮತ್ತು ಶಿಸ್ತಿನೊಂದಿಗೆ ನಿಮ್ಮ ಸಮಾಜ ಮಾಡಿರುವ ಕಾರ್ಯ ನಿಜಕ್ಕೂ ಪ್ರಶಂಸಾರ್ಹ ಮತ್ತು ವಿಶಿಷ್ಠವಾದ್ದು. 

 

ಈ ಸಂಘಟನೆಯು ತನ್ನ ಬೆಂಬಲಿಗರ ಮೂಲಕ ಒಂದು ಕುಟುಂಬವನ್ನೇ ಸೃಷ್ಟಿಸಿದೆ. ಈ ಬೆಂಬಲಿಗರು ಭಾರತೀಯ ಸಂಸ್ಕೃತಿಯ ಬಗ್ಗೆ ವಿಶ್ವಾದ್ಯಂತ ಅರಿವು ಮೂಡಿಸಲು ತಮ್ಮ ಬೌಗೋಳಿಕ ಎಲ್ಲೆಯನ್ನೂ ಮೀರಿ ದಾಟಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.  

 

ಇಂದು, ಈ ಅಂತಾರಾಷ್ಟ್ರೀಯ ಸಮಾವೇಶದ ಸಂದರ್ಭದಲ್ಲಿ, ನಾನು ನಿಮ್ಮನ್ನೂ ಮತ್ತು ಕಳೆದ 40 ವರ್ಷದಿಂದ ಬೆಂಬಲ ನೀಡುತ್ತಿರುವ ಕಲಾವಿದರನ್ನೂ ಅಭಿನಂದಿಸುತ್ತೇನೆ. ದೀರ್ಘ ಕಾಲದಿಂದ ಈ ಸಾಂಸ್ಕೃತಿಕ ಚಳವಳಿಗೆ ಬೆಂಬಲ ನೀಡುತ್ತಾ ಬಂದಿರುವ ವ್ಯಕ್ತಿಗಳು ಮತ್ತು ಸಂಘಟನೆಗಳನ್ನೂ ನಾನು ಅಭಿನಂದಿಸುತ್ತೇನೆ. 
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ನಮ್ಮ ದೇಶದ ಮತ್ತು ವಿದೇಶದ ವಿದ್ಯಾರ್ಥಿಗಳು ಭಾಗ್ಯಶಾಲಿಗಳು, ಅವರಿಗೆ ಭಾರತದ ಶ್ರೇಷ್ಠ ಕಲಾವಿದರ ಹಲವು ಗೋಷ್ಠಿಗಳನ್ನು ಆಲಿಸುವ ಅವಕಾಶ ದೊರೆತಿದೆ. ಈ ಸಂಗೀತ ಕಾರ್ಯಕ್ರಮಗಳಲ್ಲಿ ನಿಮಗೆ ದೇಶದ ಸಾಂಸ್ಕೃತಿಕ ವೈವಿಧ್ಯತೆ, ಇದರ ಭವ್ಯತೆ, ಅದರ ಸುಂದರತೆ, ಶಿಸ್ತು, ಅನುಶಾಸನ, ಕರುಣೆ ಎಲ್ಲವೂ ಕಾಣಲಿವೆ ಎಂದು ನಾನು ಭಾವಿಸುತ್ತೇನೆ. ಇವೆಲ್ಲವೂ ನಮ್ಮ ತಾಯ್ನಾಡಿನ ಶ್ರೇಷ್ಠ ರಾಷ್ಟ್ರದ ಸಂಕೇತವಾಗಿವೆ.

 

ಸ್ನೇಹಿತರೆ, ನಮ್ಮ ದೇಶದ ಮಣ್ಣಿನಿಂದ ಹುಟ್ಟಿದ ಸಂಗೀತ, ಕೇವಲ ಆನಂದವನ್ನಷ್ಟೇ ನೀಡುವುದಿಲ್ಲ, ಬದಲಾಗಿ, ಅದು ಮನಸ್ಸು ಮತ್ತು ಹೃದಯವನ್ನು ಮುಟ್ಟುತ್ತದೆ. ಭಾರತೀಯ ಸಂಗೀತ ಮನುಷ್ಯನ ಇಡೀ ಪ್ರಕ್ರಿಯೆಯ ಮೇಲೆ, ಮನಸ್ಸು ಮತ್ತು ಮನೋ ಸ್ಥಿತಿಯ  ಮೇಲೆ ಪ್ರಭಾವ ಬೀರುತ್ತದೆ.

 

ನಾವು ಯಾವುದೇ ಶೈಲಿಯ ಶಾಸ್ತ್ರೀಯ ಸಂಗೀತ ಕೇಳಿದಾಗ, ನಾವು ಅದನ್ನು ಅರ್ಥ ವಾಗದೇ ಇರಬಹುದು, ಆದರೆ, ಅದನ್ನು ನೀವು ಸೂಕ್ಷ್ಮವಾಗಿ ಆಲಿಸಿದರೆ, ನಮಗೆ ಅಸೀಮ ಶಾಂತಿಯ ಅನುಭವವಾಗುತ್ತದೆ. ಸಂಗೀತ ನಮ್ಮ ದೈನಂದಿನ ಬದುಕಿನ ಭಾಗವಾಗಿದೆ. ವಿಶ್ವಕ್ಕೆ ಸಂಗೀತ ಒಂದು ಕಲೆಯಾಗಿದೆ, ಅದು ಹಲವು ಜನರ ಜೀವನಾಧಾರವಾಗಿದೆ, ಆದರೆ ಭಾರತೀಯರ ಜೀವನದಲ್ಲಿ ಸಂಗೀತ ಒಂದು ಆರಾಧನೆ – ಜೀವನ ಕ್ರಮವಾಗಿದೆ.

 

‘ಗಾಂಭೀರ್ಯ, ಪವಾಡ ಮತ್ತು ಅತೀಂದ್ರಿಯತೆ’ ಭಾರತೀಯ ಸಂಗೀತದ ಲಕ್ಷಣಗಳಾಗಿವೆ. ಹಿಮಾಲಯದ ಎತ್ತರ, ಗಂಗೆಯ ಆಳ, ಅಜಂತಾ –ಎಲ್ಲೋರಾದ ಸೌಂದರ್ಯ, ಬ್ರಹ್ಮಪುತ್ರದ ವಿಸ್ತಾರ, ಸಮುದ್ರದ ಅಲೆಗಳ ವಿನ್ಯಾಸ ಮತ್ತು ಭಾರತೀಯ ಸಮಾಜದ ಅಂತರ್ಗತ ಆಧ್ಯಾತ್ಮಿಕ ಜೀವನ – ಇದೆಲ್ಲರ ಸಮಾಗಮವೇ ಸಂಗೀತವಾಗಿದೆ. ಹೀಗಾಗಿಯೇ ಜನರು ತಮ್ಮ ಇಡೀ ಜೀವನವನ್ನು ಸಂಗೀತದ ಶಕ್ತಿಯನ್ನು ವಿವರಿಸಲು ಮತ್ತು ಅರ್ಥಮಾಡಿಕೊಳ್ಳಲು ವಿನಿಯೋಗಿಸುತ್ತಾರೆ.

 

ಭಾರತೀಯ ಸಂಗೀತ, ಅದು ಜಾನಪದ ಆಗರಲಿ, ಶಾಸ್ತ್ರೀಯ ಸಂಗೀತ ಆಗಿರಲಿ ಅಥವಾ ಚಲನಚಿತ್ರ ಸಂಗೀತವೇ ಆಗಿರಲಿ, ಅದು ಸದಾ ಸಮಾಜ ಮತ್ತು ದೇಶವನ್ನು ಬೆಸೆದಿದೆ. ಜಾತಿ, ಧರ್ಮದ ಸಾಮಾಜಿಕ ಕಟ್ಟಳೆಗಳನ್ನು ಕಿತ್ತು ಒಂದಾಗಿ ಬಾಳುವ ಸಂದೇಶವನ್ನು ಸಂಗೀತ ನೀಡಿದೆ. ಉತ್ತರದ ಹಿಂದೂಸ್ತಾನಿ ಸಂಗೀತ, ದಕ್ಷಿಣದ ಕರ್ನಾಟಕ ಸಂಗೀತ, ಬಂಗಾಳದ ರಬೀಂದ್ರ ಸಂಗೀತ್, ಅಸ್ಸಾಂನ ಜ್ಯೋತಿ ಸಂಗೀತ ಮತ್ತು ಜಮ್ಮು ಮತ್ತು ಕಾಶ್ಮೀರದ ಸೂಫಿ ಸಂಗೀತಗಳು ನಮ್ಮ ಗಂಗಾ – ಯಮುನಾ ನಾಗರೀಕತೆಯ ಕಾಲದ ನೆಲೆ ಹೊಂದಿವೆ.  

 

ಸಂಗೀತ, ನೃತ್ಯ ಕಲಿಯಲು ಯಾರಾದರೂ ವಿದೇಶದಿಂದ ಭಾರತಕ್ಕೆ ಬಂದರೆ, ಅವರು ಪಾದಗಳು, ಕೈಗಳು, ತಲೆ ಮತ್ತು ದೇಹದ ಹಾವಭಾವದ ಆಧಾರದ ಮೇಲೆ ಅನೇಕ ನೃತ್ಯ ಶೈಲಿಗಳಿವೆ ಮತ್ತು ಈ ನೃತ್ಯ ಶೈಲಿಗಳು ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ವಿಕಸನಗೊಂಡಿವೆ ಎಂದು ತಿಳಿದು  ಆಶ್ಚರ್ಯಚಕಿತರಾಗುತ್ತಾರೆ.
ನಮ್ಮ ಜಾನಪದ ಸಂಗೀತದ ಮತ್ತೊಂದು ವೈಶಿಷ್ಟ್ಯತೆ ಎಂದರೆ, ಅವು ನಮ್ಮ ಗುಡ್ಡಗಾಡು ಜನರಿಂದ ಯುಗಗಳಿಂದ ಹೊರಹೊಮ್ಮಿದವುಗಳಾಗಿವೆ. ಅಂದಿನ ಸಮಯದ ಸಾಮಾಜಿಕ ಕಟ್ಟುಪಾಡು ದಾಟಿ, ತಮ್ಮದೇ ಶೈಲಿಯನ್ನು ಕಥನದ ದಾಟಿಯನ್ನು ಅವು ಅಭಿವೃದ್ಧಿಪಡಿಸಿಕೊಂಡಿವೆ, ಜಾನಪದ ಗಾಯಕರು ಮತ್ತು ನೃತ್ಯಗಾರರು ತಮ್ಮದೇ ಆದ ಸ್ವಂತ ಸೈಲಿಯನ್ನು ಅಭಿವೃದ್ಧಿಪಡಿಸಿಕೊಂಡು, ಸ್ಥಳೀಯ ಜನರ ಭಾಷೆಯನ್ನು ಬಳಸಿಕೊಂಡು ಬೆಳೆದಿದ್ದಾರೆ. ಈ ಶೈಲಿಗೆ ಯಾವುದೇ ಕಠಿಣ ತರಬೇತಿ ಅಗತ್ಯವಿಲ್ಲ, ಇದರಲ್ಲಿ ಎಲ್ಲ ಜನರೂ ಪಾಲ್ಗೊಳ್ಳಬಹುದು ಎಂದರು. 

 

ನಮ್ಮ ಸಂಸ್ಕೃತಿಯ ಈ ಸೂಕ್ಷ್ಮತೆಗಳು ಮತ್ತು ವಿಸ್ತಾರಗಳನ್ನು ನಿಮ್ಮಲ್ಲಿ ಬಹಳ ಜನ ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದೀರಿ. ಆದರೆ, ನಮ್ಮ ಇಂದಿನ ಯುವ ಪೀಳಿಗೆಗೆ ಇದರ ಅರಿವು ಇಲ್ಲ. ಈ ನಿರಾಸಕ್ತಿಯಿಂದ, ಹಲವು ಸಂಗೀತ ವಾದ್ಯಗಳು ಮತ್ತು ಶೈಲಿಗಳು ಅಳಿವಿನ ಅಂಚಿನಲ್ಲಿವೆ. ಹಲವು ಮಕ್ಕಳು ವಿವಿಧ ರೀತಿಯ ಗಿಟಾರುಗಳ ಬಗ್ಗೆ ತಿಳಿದಿರಬಹುದು, ಆದರೆ ಸರೋದ್ ಮತ್ತು ಸರಂಗಿ ನಡುವಿನ ವ್ಯತ್ಯಾಸವನ್ನು ಅವರು ತಿಳಿದಿರುವುದಿಲ್ಲ. ಇಂಥ ಸ್ಥಿತಿ ಖಂಡಿತಾ ಅಪೇಕ್ಷಣೀಯವಲ್ಲ.
ಭಾರತೀಯ ಸಂಗೀತ, ನಮ್ಮ ದೇಶದ ಅಮೂಲ್ಯ ಪರಂಪರೆಯಾಗಿದೆ, ಇದು ನಮ್ಮೆಲ್ಲರಿಗೂ ವರವಾಗಿದೆ. ಈ ಪರಂಪರೆ ತನ್ನದೇ ಆದ ಶಕ್ತಿ ಮತ್ತು ಚೈತನ್ಯ ಹೊಂದಿದೆ. ನಮ್ಮ ಗ್ರಂಥಗಳಲ್ಲಿ ಹೇಳಿರುವಂತೆ ‘ರಾಷ್ಟ್ರಾಯಂ ಜಾಗ್ರಾಯಂ ವಯಮ್’ ಅಂದರೆ, ‘ಶಾಶ್ವತ ಜಾಗೃತಿ ಸ್ವಾತಂತ್ರ್ಯದ ಮೌಲ್ಯ’. ನಾವು ಈ ಅಮೂಲ್ಯ ಪರಂಪರೆಗಾಗಿ ಸದಾ ಕಾರ್ಯೋನ್ಮುಖರಾಗಬೇಕು.

 

ನಾವು ನಮ್ಮ ಪರಂಪರೆಯ ಬಗ್ಗೆ ನಿರ್ಲಕ್ಷ್ಯ ತೋರಬಾರದು. ನಮ್ಮ ಸಂಸ್ಕೃತಿ, ಕಲೆ, ಸಂಗೀತ, ಸಾಹಿತ್ಯ, ನಮ್ಮ ವಿವಿಧ ಭಾಷೆ, ನಮ್ಮ ಪ್ರಕೃತಿ – ಎಲ್ಲವೂ ನಮ್ಮ ಭವ್ಯ ಪರಂಪರೆಯ ಭಾಗವಾಗಿವೆ. ಯಾವುದೇ ರಾಷ್ಟ್ರ ಈ ಅಮೂಲ್ಯ ಪರಂಪರೆಯನ್ನು ಮರೆತು ಮುಂದೆ ಸಾಗಲು ಸಾಧ್ಯವಿಲ್ಲ. ಈ ಅಮೂಲ್ಯ ಪರಂಪರೆ ಉಳಿಸುವ ಅದನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. 

 

ಸ್ನೇಹಿತರೆ, ಇಂದು, ವಿಶ್ವ ಪರಿಸರ ದಿನ . ನಮ್ಮ ಸಂಗೀತ, ನಮ್ಮ ಕಲೆ ನಮ್ಮ ಪ್ರಕೃತಿಯನ್ನು ಉಳಿಸುವ ನಿರಂತರ ಸಂದೇಶ ನೀಡುತ್ತಾ ಬಂದಿವೆ.
ಇಂದು, ಹವಾಮಾನ ಬದಲಾವಣೆ ಜಗತ್ತಿನ ಜ್ವಲಂತ ಸಮಸ್ಯೆಯಾಗಿದೆ. ನಾವು ನಮ್ಮ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗಾಗಿ ಕಾಪಾಡಬೇಕು. ಕಳೆದ ಮೂರು ವರ್ಷಗಳಲ್ಲಿ ಪರಿಸರ ಸಂರಕ್ಷಿಸಲು ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆ ಜಗತ್ತಿನಾದ್ಯಂತ ಚರ್ಚಿಸಲಾಗುತ್ತಿದೆ. ಇಡೀ ವಿಶ್ವ ಭಾರತದತ್ತ ನೋಡುತ್ತಿದೆ. ಹೀಗಾಗಿ ನಮ್ಮ ದೇಶದ ಯುವಜನರಿಗೆ ಅವರ ಪರಂಪರೆ ಉಳಿಸಲು ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಸುವುದು ಅಗತ್ಯವಾಗಿದೆ. 

 

ನೀವು ವರ್ಷದಲ್ಲಿ 7ರಿಂದ 8 ಸಾವಿರ ಕಾರ್ಯಕ್ರಮಗಳನ್ನು ಆಯೋಜಿಸುತ್ತೀರಿ, ಮತ್ತು ಹಳ್ಳಿ ಪಟ್ಟಣಗಳಲ್ಲಿ ಲಕ್ಷಾಂತರ ಜನರೊಂದಿಗೆ ಅದರಲ್ಲೂ ಯುವಕರೊಂದಿಗೆ ನೇರವಾಗಿ ಸಂವಾದ ನಡೆಸುತ್ತೀರಿ. ನೀವು ನಿಮ್ಮ ಕಾರ್ಯಕ್ರಮಗಳಲ್ಲಿ ಪರಿಸರ ಜಾಗೃತಿಗೆ ಆದ್ಯತೆ ನೀಡಿದರೆ, ಇದು ಮನುಕುಲಕ್ಕೆ ನೀವು ಮಾಡುವ ದೊಡ್ಡ ಸೇವೆ ಆಗುತ್ತದೆ. 

 

ಸರ್ಕಾರದ ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮವನ್ನು ಬಲಪಡಿಸಲು ನೀವೆಲ್ಲರೂ ಮಹತ್ವದ ಪಾತ್ರ ನಿರ್ವಹಿಸಬಹುದು. ನಮ್ಮ ದೇಶದ ಸಾಂಸ್ಕೃತಿಕ ವೈವಿದ್ಯತೆಯನ್ನು ಬಲಪಡಿಸಲು ಭಾರತದ ವಿವಿಧ ಸಂಪ್ರದಾಯ, ಭಾಷೆ ಮತ್ತು ಆಹಾರ ಪದ್ಧತಿ, ಜೀವನ ಪದ್ಧತಿಯ ಪರಿಚಯ ಮಾಡಿಸುವ ಪ್ರಯತ್ನ ಇದಾಗಿದೆ. 
ಇದರಡಿ, ಎರಡು ಬೇರೆ ಬೇರೆ ರಾಜ್ಯಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜೋಡಿಸಲಾಗುತ್ತಿದೆ. ಇವುಗಳ ಜೋಡಣೆಯ ಬಳಿಕ, ಒಂದು ರಾಜ್ಯದ ಜನತೆಗೆ ಮತ್ತೊಂದು ರಾಜ್ಯದ ಸಂಪ್ರದಾಯದ ಪರಿಚಯವಾಗುತ್ತದೆ. ರಸಪ್ರಶ್ನೆ ಕಾರ್ಯಕ್ರಮ, ನೃತ್ಯ ಸ್ಪರ್ಧೆ, ಆಹಾರ ಸ್ಪರ್ಧೆ ಇತ್ಯಾದಿಗಳನ್ನು ಮತ್ತೊಂದು ರಾಜ್ಯದ ಭಾಷೆಯ ಆಧಾರದಲ್ಲಿ ಆಯೋಜಿಸಲಾಗುತ್ತದೆ. 

 

ಇಂಥ ಸಂಘಟನೆಗಳು ಈ ಅಭಿಯಾನವನ್ನು ಮುಂದೆ ತೆಗೆದುಕೊಂಡು ಹೋಗಲು ನೆರವಾಗುತ್ತವೆ. ನೀವು ಬೇರೆ ರಾಜ್ಯದ ಶಾಲೆಗಳಿಗೆ ಭೇಟಿ ನೀಡಿದಾಗ, ನೀವು ಇಂಥಹುದೇ ಶಾಲೆಗಳ ಜೋಡಿ ಮಾಡಬಹುದು ಮತ್ತು ಅವರಿಗೆ ಅವರವರ ನಡುವೆ ಸಾಂಸ್ಕೃತಿಕ ವಿನಿಮಯದ ಸಂವಾದಕ್ಕೆ ಅವಕಾಶ ಕೊಡಬಹುದು. 
ಕಳೆದ 40 ವರ್ಷಗಳಲ್ಲಿ, ನೀವು ಯುವ ಶಕ್ತಿಗೆ ಹೊಸ ದಿಕ್ಕು ತೋರಿಸುವ ಪ್ರಯತ್ನ ಮಾಡಿದ್ದೀರಿ. ಈಗ ನಮ್ಮ ದೇಶ ವಿಶ್ವದ ಯುವಜನರ ರಾಷ್ಟ್ರವಾಗಿದೆ ಮತ್ತು ಇದರಲ್ಲಿ ಯುವ ಉತ್ಸಾಹಭರಿತವಾಗಿದೆ. ಇಂಥ ಸಂಸ್ಥೆಗಳು ಈ ಚೈತನ್ಯವನ್ನು ರಾಷ್ಟ್ರ ನಿರ್ಮಾಣಕ್ಕೆ ಸರಿಯಾದ ವಾಹಿನಿಗೆ ತರಬಹುದಾಗಿದೆ. ರಾಷ್ಟ್ರ ನಿರ್ಮಾಣದ ಕಡೆಗೆ ಅದರ ಯುವ ಶಕ್ತಿ ಮುಂದುವರೆದಾಗ, ಆ  ದೇಶವು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಿರುವುದು  ಇತಿಹಾಸದಲ್ಲಿ ಸಾಕ್ಷಿಯಾಗಿದೆ.

 

ಸ್ನೇಹಿತರೆ, 2022ರಲ್ಲಿ ನಮ್ಮ ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತದೆ. ಆ ಹೊತ್ತಿಗೆ, ನಾವು ನಮ್ಮ ದೇಶವನ್ನು ಅದರ ದೌರ್ಬಲ್ಯದಿಂದ ಹೊರಗೆಳೆದು, ನವ ಭಾರತ ಮಾಡುವತ್ತ ತೆಗೆದುಕೊಂಡು ಹೋಗಬೇಕು. ನವ ಭಾರತದ ಈ ಸಂಕಲ್ಪವು ದೇಶದ ಪ್ರತಿ ವ್ಯಕ್ತಿ, ಪ್ರತಿ ಕುಟುಂಬ, ಪ್ರತಿ ಮನೆ, ಪ್ರತಿ ಸಂಸ್ಥೆ, ಪ್ರತಿ ಸಂಘಟನೆ, ಪ್ರತಿಯೊಂದು ನಗರ ಮತ್ತು ಪ್ರತಿಯೊಂದು ಹಳ್ಳಿಯಲ್ಲೂ ಕಾಣಬೇಕು. ಈ ಸಂಕಲ್ಪದ ಸಾಕಾರಕ್ಕೆ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕು. 
2022ನ್ನು ಗಮನದಲ್ಲಿಟ್ಟುಕೊಂಡು ನೀವೇ ಕೆಲವು ಗುರಿಗಳನ್ನು ಹಾಕಿಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ. 

 

ಸ್ನೇಹಿತರೆ, ಪರಂಪರೆಯ ಮತ್ತು ಇಂದಿನ ಬಗ್ಗೆ ಚರ್ಚೆಗಳು ನಡೆದಾಗ ನಮ್ಮ ಸಂಸ್ಕೃತಿ ಜೀವಂತವಾಗಿರುತ್ತದೆ. ಸಿಕ್ ಮ್ಯಾಕೆ ಈ ಅಮೂಲ್ಯ ಕಾರ್ಯವನ್ನು ಮಾಡುತ್ತಿದೆ. ನಿಮ್ಮ ಪ್ರತಿಯೊಬ್ಬ ಪ್ರತಿನಿಧಿಗಳೂ ದೇಶದ  ಸಂಸ್ಕೃತಿ ಮತ್ತು ನಾಗರಿಕತೆಯ ಧ್ವಜವಾಹಕರಾಗಿದ್ದಾರೆ. ಈ ಧ್ವಜ ಹೀಗೆಯೇ ಹಾರುತ್ತಿರಲಿ ಮತ್ತು ನೀವು ಹೊಸ ಚೈತನ್ಯದೊಂದಿಗೆ ಸಾಗಿ. ಈ ಶುಭ ಕಾಮನೆಗಳೊಂದಿಗೆ ನಾನು ನನ್ನ ಭಾಷಣ ಮುಗಿಸುತ್ತೇನೆ. ಈ ಕಾರ್ಯಕ್ರಮಕ್ಕಾಗಿ ಎಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು. ಧನ್ಯವಾದಗಳು.!!! 

***

AKT/SS/RSB/AK   164410