Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

112 ಅಡಿ ಎತ್ತರದ ‘ಆದಿಯೋಗಿ-ಶಿವ’ನ ಮೂರ್ತಿಯ ಅನಾವರಣ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ಪಠ್ಯ

112 ಅಡಿ ಎತ್ತರದ ‘ಆದಿಯೋಗಿ-ಶಿವ’ನ ಮೂರ್ತಿಯ ಅನಾವರಣ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ಪಠ್ಯ

112 ಅಡಿ ಎತ್ತರದ ‘ಆದಿಯೋಗಿ-ಶಿವ’ನ ಮೂರ್ತಿಯ ಅನಾವರಣ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ಪಠ್ಯ


ಎಲ್ಲರಿಗೂ ನನ್ನ ಪ್ರೀತಿಯ ಶುಭಾಶಯಗಳು
 
ಈ ಗೌರವಾನ್ವಿತ ಸಭೆಯಲ್ಲಿ, ಅದರಲ್ಲೂ ಮಹಾಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಹಾಜರಾಗಿರುವುದು ನನಗೆ ಗೌರವದ ವಿಷಯವಾಗಿದೆ.
 
ಹಲವಾರು ಹಬ್ಬಗಳಿವೆ. ಆದರೆ, ಮಹಾ ಎಂಬ ಪೂರ್ವ ಪದ ಹೊಂದಿರುವ ಹಬ್ಬ ಇದೊಂದೇ.
ಹಲವಾರು ದೇವರಿದ್ದಾರೆ. ಆದರೆ, ಮಹಾದೇವನೊಬ್ಬನೇ.
 
ಅನೇಕ ಮಂತ್ರಗಳಿವೆ. ಆದರೆ ದೇವ ಶಿವನೊಂದಿಗೆ ಗುರುತಿಸಲಾಗುವ ಮಂತ್ರಕ್ಕೆ ಮಹಾ ಮೃತ್ಯುಂಜಯ ಮಂತ್ರ ಎನ್ನಲಾಗುತ್ತದೆ.
 
ದೇವ ಶಿವನ ವೈಭವ ಇಂತಹದ್ದಾಗಿದೆ.
ಅನ್ಯಾಯ ಮತ್ತು ಅಂಧಕಾರವನ್ನು ಜಯಿಸುವ ಉದ್ದೇಶದೊಂದಿಗೆ ದೈವತ್ವದ ಮಿಲನವು ಮಹಾ-ಶಿವರಾತ್ರಿಯ ಸಂಕೇತವಾಗಿದೆ.
 
ಇದು ಧೈರ್ಯವಂತರಾಗಿರಲು ಮತ್ತು ಒಳ್ಳೆಯದರ ಪರವಾಗಿ ಹೋರಾಡಲು ನಮಗೆ ಸ್ಫೂರ್ತಿ ನೀಡುತ್ತದೆ.
ಜೊತೆಗೆ ಚಳಿಯಿಂದ ಜೀವಂತ ವಸಂತಕಾಲ ಮತ್ತು ಪ್ರಕಾಶತೆಯ ಕಡೆಗೆ ಋತುಗಳ ವರ್ಗಾವಣೆಯನ್ನು ಈ ಹಬ್ಬ ಸೂಚಿಸುತ್ತದೆ.
 
ಮಹಾ ಶಿವರಾತ್ರಿ ಹಬ್ಬದ ಆಚರಣೆಗಳು ರಾತ್ರಿ ಪೂರ್ತಿ ನಡೆಯುತ್ತವೆ. ಇದು ನಮ್ಮ ಪರಿಸರಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ನಮ್ಮ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು ಮತ್ತು ಪ್ರಕೃತಿಯನ್ನು ಸಂರಕ್ಷಿಸಬೇಕು ಎಂಬುದರ ಜಾಗೃತಿಯ ಚೇತನವನ್ನು ಸೂಚಿಸುತ್ತದೆ.
 
ನನ್ನ ಸ್ವಂತ ರಾಜ್ಯವಾದ ಗುಜರಾತ್ ಸೋಮನಾಥನ ಸ್ಥಳವಾಗಿದೆ. ಜನರ ಕರೆ ಮತ್ತು ಸೇವೆಗಾಗಿ ಹಂಬಲ ನನ್ನನ್ನು ವಿಶ್ವನಾಥನ ಸ್ಥಳವಾದ ಕಾಶಿಗೆ ಒಯ್ದಿತ್ತು. 
 
ಸೋಮನಾಥದಿಂದ ವಿಶ್ವನಾಥ, ಕೇದಾರನಾಥದಿಂದ ರಾಮೇಶ್ವರಂ ಮತ್ತು ಕಾಶಿಯಿಂದ ನಾವು ಈಗ ಒಂದಾಗಿ ಸೇರಿರುವ ಕೊಯಂಮತ್ತೂರಿನವರೆಗೆ ದೇವ ಶಿವ ಎಲ್ಲೆಡೆಗಳಲ್ಲಿದ್ದಾನೆ.
 
ದೇಶದ ಉದ್ದಗಲಕ್ಕೂ ಇರುವ ಕೋಟ್ಯಂತರ ಭಾರತೀಯರಂತೆ ನಾನೂ ಕೂಡ ಮಹಾಶಿವರಾತ್ರಿಯ ಆಚರಣೆಯ ಭಾಗವಾಗಿರಲು ಬಹಳ ಹರ್ಷವನ್ನು ಅನುಭವಿಸುತ್ತೇನೆ.
 
ನಾವು ಕೇವಲ ಸಾಗರದಲ್ಲಿನ ಬಿಂದುಗಳು.
 
ಶತಮಾನಗಳಿಂದ ಲೆಕ್ಕವಿಲ್ಲದಷ್ಟು ಭಕ್ತರು ಪ್ರತಿ ಅವಧಿ ಮತ್ತು ಸಮಯದಲ್ಲಿ ಜೀವಿಸಿದ್ದರು.
ಅವರು ಬೇರೆ ಬೇರೆ ಸ್ಥಳಗಳಿಂದ ಬಂದವರಾಗಿದ್ದರು.
 
ಅವರ ಭಾಷೆ ಬೇರೆಯಾಗಿರಬಹುದು. ಆದರೆ, ದೈವತ್ವಕ್ಕಾಗಿ ಅವರ ಹಂಬಲ ಯಾವಾಗಲೂ ಒಂದೇ ರೀತಿಯದ್ದಾಗಿತ್ತು.
ಪ್ರತಿ ಮಾನವ ಹೃದಯದ ಮೂಲದಲ್ಲಿ ಈ ಹಂಬಲ ಮಿಡಿಯುತ್ತದೆ ಅಲ್ಲದೆ, ಅವರ ಕವನ, ಅವರ ಸಂಗೀತ, ಅವರ 
ಪ್ರೀತಿ  ಈ ಭೂಮಿಯನ್ನು ನೆನಸಿದೆ.
 
112 ಅಡಿ ಎತ್ತರದ ಆದಿಯೋಗಿಯ ಮುಖ ಮತ್ತು ಯೋಗೇಶ್ವರ್ ಲಿಂಗದ ಮುಂದೆ ನಿಂತುಕೊಂಡಾಗ ಇಲ್ಲಿರುವ ನಾವೆಲ್ಲರೂ ಬೃಹತ್ ಪ್ರಮಾಣದ ಶಕ್ತಿಯೊಂದು ನಮ್ಮನ್ನು ಆವರಿಸಿಕೊಂಡ ಅನುಭವವನ್ನು ಹೊಂದುತ್ತಿದ್ದೇವೆ.
ಮುಂಬರುವ ಸಮಯದಲ್ಲಿ ನಾವು ಸೇರಿರುವ ಈ ಸ್ಥಳ ಎಲ್ಲರಿಗೂ ಸ್ಫೂರ್ತಿಯ ಮೂಲವಾಗಲಿದೆ. ತಮ್ಮಲ್ಲಿ ತಾವು ಮುಳುಗಿ ಸತ್ಯವನ್ನು ಆವಿಷ್ಕರಿಸುವುದಕ್ಕಾಗಿ ಒಂದು ಸ್ಥಳವಾಗಲಿದೆ. 
 
ಯೇ ಸ್ಥಾನ್ ಸಬ್ಕೊ ಶಿವ್ಮಯ್ ಹೋನೆ ಕೆ ಲಿಯೆ ಪ್ರೇರಿತ್ ಕರ್ತಾ ರಹೇಗಾ – ಈ ಸ್ಥಳ ಎಲ್ಲರಿಗೂ ಶಿವಮಯವಾಗಿರಲು ಪ್ರೇರಣೆ ನೀಡುತ್ತಿರುತ್ತದೆ. 
 
ಇಂದು, ಯೋಗ ಬಹುದೂರ ಪ್ರಯಾಣ ನಡೆಸಿದೆ.
 
ಯೋಗದ ಹಲವಾರು ನಿರೂಪಣೆಗಳು, ವಿಧಗಳು, ಶಾಲೆಗಳಿವೆ ಮತ್ತು ಯೋಗಾಭ್ಯಾಸದ ಹಲವಾರು ಮಾರ್ಗಗಳು ಹೊರಹೊಮ್ಮಿವೆ. 
 
ಇದು ಯೋಗದ ಸೌಂದರ್ಯವಾಗಿದೆ-ಇದು ಪುರಾತನ, ಆದರೂ ಆಧುನಿಕ, ಇದು ಸ್ಥಿರ ಆದರೂ ವಿಕಾಸಗೊಳ್ಳುತ್ತಿರುತ್ತದೆ. 
ಯೋಗದ ಮೂಲ ತತ್ವ ಬದಲಾವಣೆಯಾಗಿಲ್ಲ. 
 
ಮತ್ತು ಈ ಮೂಲತತ್ವವನ್ನು ಸಂರಕ್ಷಿಸುವುದು ಅತ್ಯಂತ ಮುಖ್ಯವಾಗಿರುವುದರಿಂದ ಈ ಮಾತನ್ನು ನಾನು ಹೇಳುತ್ತಿದ್ದೇನೆ. 
 
ಇಲ್ಲವಾದರೆ, ಯೋಗದ ಮೂಲತತ್ವ ಮತ್ತು ಆತ್ಮವನ್ನು ಪುನರಾವಿಷ್ಕರಿಸಲು ನಾವು ನೂತನ ಯೋಗವೊಂದನ್ನು ಆವಿಷ್ಕರಿಸಬೇಕಾಗಬಹುದು.
 
ಯೋಗ ವೇಗೋತ್ಕರ್ಷದ ಪ್ರತಿನಿಧಿಯಾಗಿದೆಯಲ್ಲದೆ, ಜೀವದಿಂದ ಶಿವನೆಡೆಗೆ ಪರಿವರ್ತನೆಗೆ ದಾರಿಯಾಗಿದೆ.
ಹಮರೇ ಯಹಾಂ ಕಹಾ ಗಯಾ ಹೇ-ಯತ್ರ ಜೀವಃ ತತ್ರ ಶಿವಃ 
 
ಜೀವ್ ಸೇ ಶಿವ್ ಕೀ ಯಾತ್ರಾ, ಯಹೀ ತೋ ಯೋಗ್ ಹೇ (ನಮ್ಮಲ್ಲಿ ಹೇಳಲಾಗಿದೆ-ಎಲ್ಲಿ ಜೀವವೋ ಅಲ್ಲಿ ಶಿವನು, ಜೀವದಿಂದ ಶಿವನೆಡೆಗೆ ಯಾತ್ರೆಯೇ ಯೋಗ)
 
ಯೋಗಾಭ್ಯಾಸ ಮಾಡುವುದರೊಂದಿಗೆ ಏಕತೆಯ ಚೇತನ ಸೃಷ್ಟಿಯಾಗುತ್ತದೆ-ಮನಸ್ಸು, ದೇಹ ಮತ್ತು ಬುದ್ಧಿಯ ಏಕತೆ.
ನಿಮ್ಮ ಕುಟುಂಬದೊಂದಿಗೆ, ನಾವು ವಾಸಿಸುವ ಸಮಾಜ, ಜೊತೆಗಿರುವ ಮಾನವರು, ಜೊತೆಗೆ ನಾವು ಈ ಸುಂದರ ಭೂಮಿಯನ್ನು ಹಂಚಿಕೊಂಡಿರುವಂತಹ ಎಲ್ಲಾ ಹಕ್ಕಿಗಳು, ಪ್ರಾಣಿಗಳು ಮತ್ತು ಮರಗಳೊಂದಿಗೆ ಏಕತೆ ಉಂಟಾಗುತ್ತದೆ………. ಇದೇ ಯೋಗ.
 
ನಾನು ಎಂಬುದರಿಂದ ನಾವು ಎಂಬುದರ ಕಡೆಗಿನ ಪ್ರಯಾಣವೇ ಯೋಗ.
 
ವ್ಯಕ್ತಿ ಸೇ ಸಮಸ್ತಿ ತಕ್ ಹೇ ಯಾತ್ರಾ ಹೈ, ಮೈ ಸೇ ಹಮ್ ತಕ್ ಕಿ ಯಹ್ ಅನುಭೂತಿ, ಅಹಂ ಸೇ ವೈಯಮ್ ತಕ್ ಕಾ ಯಹ್ ಭಾವ್-ವಿಸ್ತಾರ್, ಯಹೀ ತೊ ಯೋಗ್ ಹೈ (ವ್ಯಕ್ತಿಯಿಂದ ಸಮಷ್ಠಿಯ ಕಡೆಗೆ ಈ ಪ್ರಯಾಣವಾಗಿದೆ. ನಾನು ಎಂಬುದರಿಂದ ನಾವು ಎನ್ನುವುದರ ಕಡೆಗಿನ ಅನುಭೂತಿ, ನಾನು ಎಂಬುದರಿಂದ ನಾವು ಎಂಬುದರ ಕಡೆಗೆ ಈ ಭಾವ ವಿಸ್ತಾರ; ಇದೇ ಯೋಗವಾಗಿದೆ.)
 
ಭಾರತ ಸಾಟಿಯಿಲ್ಲದ ವೈವಿಧ್ಯತೆಯ ಭೂ ಪ್ರದೇಶವಾಗಿದೆ. ಭಾರತದ ವೈವಿಧ್ಯತೆಯನ್ನು ಕಾಣಬಹುದು, ಅನುಭವಿಸಬಹುದು ಸ್ಪರ್ಶಿಸಬಹುದು ಮತ್ತು ರುಚಿ ನೋಡಬಹುದಾಗಿದೆ.
 
ವೈವಿಧ್ಯತೆ ಭಾರತದ ಅತ್ಯಂತ ಅದ್ಭುತ ಶಕ್ತಿಯಾಗಿದೆ ಮತ್ತು ಇದು ಭಾರತವನ್ನು ಒಂದುಗೂಡಿಸಿದೆ.
ದೇವ ಶಿವನ ಬಗ್ಗೆ ಚಿಂತಿಸಿದರೆ ಬೃಹತ್ ಹಿಮಾಲಯದಲ್ಲಿನ ಕೈಲಾಸ ಪರ್ವತದಲ್ಲಿ ಅವನ ಭವ್ಯವಾದ ಉಪಸ್ಥಿತಿ ಮನಸ್ಸಿನಲ್ಲಿ ಮೂಡುತ್ತದೆ. ಪಾರ್ವತಿಯ ಬಗ್ಗೆ ಯೋಚಿಸಿದಲ್ಲಿ ವಿಸ್ತಾರವಾದ ಸಾಗರಗಳಿಂದ ಆವೃತವಾದ ಸುಂದರ ಕನ್ಯಾಕುಮಾರಿಯ ನೆನಪಾಗುತ್ತದೆ. ಶಿವ ಮತ್ತು ಪಾರ್ವತಿಯ ಸಂಗಮವೇ ಹಿಮಾಲಯ ಮತ್ತು ಸಾಗರಗಳ ಸಂಗಮವಾಗಿದೆ.
 
ಶಿವ ಮತ್ತು ಪಾರ್ವತಿ………….. ಇದೇ ಸ್ವತಃ ಏಕತೆಯ ಸಂದೇಶವಾಗಿದೆ.
ಈ ಏಕತೆಯ ಸಂದೇಶ ಮುಂದಕ್ಕೆ ಯಾವ ರೀತಿಯಲ್ಲಿ ಸ್ಪಷ್ಟವಾಗುತ್ತದೆ ಎಂಬುದನ್ನು ಇಲ್ಲಿ ನೋಡಿ :
 
ದೇವ ಶಿವನ ಕುತ್ತಿಗೆಯ ಸುತ್ತಲೂ ಹಾವು ಇದೆ. ದೇವ ಗಣೇಶನ ವಾಹನ ಇಲಿಯಾಗಿದೆ. ನಮಗೆಲ್ಲರಿಗೂ ಹಾವು ಮತ್ತು ಇಲಿ ನಡುವಿನ ಹಗೆಯ ಸಂಬಂಧ ತಿಳಿದಿದೆ. ಆದರೂ, ಇವು ಇಲ್ಲಿ ಒಂದಾಗಿ ಬಾಳುತ್ತಿವೆ.
 
ಇದೇ ರೀತಿ, ಕಾರ್ತಿಕೇಯನ ವಾಹನ ನವಿಲು. ನವಿಲುಗಳು ಮತ್ತು ಹಾವುಗಳ ನಡುವೆ ಭಾರಿ ವೈರತ್ವ ಇದೆ ಎನ್ನಲಾಗುತ್ತಿದೆ. ಇಷ್ಟಾದರೂ, ಇಲ್ಲಿ ಅವು ಒಟ್ಟಾಗಿ ಬದುಕುತ್ತಿವೆ.
 
ದೇವ ಶಿವನ ಕುಟುಂಬ ವೈವಿಧ್ಯತೆಯಿಂದ ಕೂಡಿದ್ದರೂ ಸೌಹಾರ್ದತೆ ಮತ್ತು ಏಕತೆಯ ಚೇತನ ನಿಜಕ್ಕೂ ರೋಮಾಂಚಕ.
 
ವೈವಿಧ್ಯತೆ ನಮಗೆ ಸಂಘರ್ಷಕ್ಕೆ ಒಂದು ಕಾರಣವಲ್ಲ. ಹೃದಯಪೂರ್ವಕವಾಗಿ ನಾವು ಅದನ್ನು ಸ್ವೀಕರಿಸಿ ಆಲಂಗಿಸುತ್ತೇವೆ. 
 
ನಮ್ಮ ಸಂಸ್ಕೃತಿಯ ವಿಶೇಷವೇ ಹೀಗಿದೆ. ದೇವರು ಅಥವ ದೇವತೆ ಇದ್ದ ಕಡೆಯಲ್ಲಿ ಒಂದು ಪ್ರಾಣಿ ಅಥವಾ ಒಂದು ಪಕ್ಷಿ ಅಥವಾ ಒಂದು ಮರ ಅವನು ಅಥವಾ ಅವಳೊಂದಿಗೆ ಸಹಯೋಗ ಹೊಂದಿರುತ್ತದೆ.
 
ದೇವರು ಅಥವಾ ದೇವತೆಯನ್ನು ಪೂಜಿಸುವ ಉತ್ಸಾಹದಲ್ಲಿಯೇ ಆಯಾ ಪ್ರಾಣಿ, ಪಕ್ಷಿ ಅಥವಾ ಮರವನ್ನು ಕೂಡ ಪೂಜಿಸಲಾಗುತ್ತದೆ. ಪ್ರಕೃತಿಗೆ ಗೌರವ ಸೂಚಿಸುವ ಮನೋಭಾವವನ್ನು ಅಳವಡಿಸಿಕೊಳ್ಳಲು ಇದಕ್ಕಿಂತಲೂ ಉತ್ತಮ ಮಾರ್ಗ ಮತ್ತೊಂದಿಲ್ಲ. ಪ್ರಕೃತಿ ದೇವರಿಗೆ ಸಮನಾಗಿದೆ. ಇದನ್ನು ನಮ್ಮ ಪೂರ್ವಜರು ದೃಢವಾಗಿ ಸ್ಥಾಪಿಸಿದ್ದು ಇದು ಅವರ ದೂರದರ್ಶಿತ್ವವನ್ನು ಪ್ರದರ್ಶಿಸುತ್ತದೆ. 
 
ನಮ್ಮ ಗ್ರಂಥಗಳು ಹೇಳುತ್ತವೆ : ಏಕಂ ಸತ್ ವಿಪ್ರಾ ಬಹುಧಾ ವದಂತಿ 
ಸತ್ಯ ಒಂದೇ, ಮುನಿಗಳು ಅದನ್ನು ಬೇರೆ ಬೇರೆ ಹೆಸರಲ್ಲಿ ಕರೆಯುತ್ತಾರೆ.
 
ಈ ಸದ್ಗುಣಗಳೊಂದಿಗೆ ನಾವು ನಮ್ಮ ಬಾಲ್ಯದಿಂದ ಬದುಕುತ್ತಾ ಬಂದಿದ್ದೇವೆ. ಮತ್ತು ಇದರಿಂದಾಗಿಯೇ ಸಹಾನುಭೂತಿ, ದಯೆ, ಸೋದರಭಾವ ಮತ್ತು ಸೌಹಾರ್ದತೆ ಸ್ವಾಭಾವಿಕವಾಗಿ ನಮ್ಮ ಭಾಗವಾಗಿವೆ. 
 
ನಮ್ಮ ಪೂರ್ವಜರು ಇದೇ ಮೌಲ್ಯಗಳಿಗಾಗಿ ಜೀವಿಸಿದ್ದು ಮತ್ತು ಮೃತಪಟ್ಟಿದ್ದನ್ನು ನಾವು ನೋಡಿದ್ದೇವೆ.
ಭಾರತೀಯ ನಾಗರಿಕತೆಯನ್ನು ಶತಮಾನಗಳವರೆಗೆ ಜೀವಂತವಾಗಿರಿಸಿರುವ ಸದ್ಗುಣಗಳು ಇವೇ ಆಗಿವೆ. 
ಎಲ್ಲ ನಿಟ್ಟಿನಿಂದ ನೂತನ ಚಿಂತನೆಗಳು ಮತ್ತು ಯೋಚನೆಗಳಿಗೆ ನಮ್ಮ ಮನಸ್ಸು ಯಾವಾಗಲೂ ತೆರೆದುಕೊಂಡಿರಬೇಕು. ದುರಾದೃಷ್ಟವಶಾತ್ ತಮ್ಮ ಸ್ವಂತ ಅಜ್ಞಾನವನ್ನು ಮುಚ್ಚಿಟ್ಟುಕೊಳ್ಳುವುದಕ್ಕಾಗಿ ಕೆಲವರು ಕಠಿಣ ದೃಷ್ಠಿಕೋನ ಹೊಂದಿದ್ದು ನೂತನ ಚಿಂತನೆಗಳು ಮತ್ತು ಅನುಭವಗಳನ್ನು ಸ್ವಾಗತಿಸುವುದಕ್ಕೆ ಯಾವುದೇ ಅವಕಾಶವನ್ನು ನಾಶಗೊಳಿಸುತ್ತಾರೆ. 
 
ಪುರಾತನ ಎಂಬ ಒಂದೇ ಕಾರಣಕ್ಕೆ ಚಿಂತನೆಯೊಂದನ್ನು ತಿರಸ್ಕರಿಸುವುದು ಹಾನಿಕಾರಕವಾಗಬಹುದಾಗಿದೆ. ಅದನ್ನು ವಿಶ್ಲೇಷಿಸಿ, ಅರಿತುಕೊಂಡು ಮತ್ತು ನೂತನ ಪೀಳಿಗೆಯವರಿಗೆ ಅರ್ಥವಾಗುವ ರೀತಿಯಲ್ಲಿ ಅದನ್ನು ತಲುಪಿಸಲು ಪ್ರಯತ್ನಿಸುವುದು ಅವಶ್ಯಕ.
 
ಮಹಿಳೆಯರ ಸಬಲೀಕರಣವಿಲ್ಲದೆ ಮಾನವತೆಯ ಪ್ರಗತಿ ಅಪೂರ್ಣವಾಗಿರುತ್ತದೆ. ವಿಷಯ ಇಂದು ಮಹಿಳೆಯರ ಅಭಿವೃದ್ಧಿಯಾಗಿ ಉಳಿದಿಲ್ಲ. ಬದಲಿಗೆ ಮಹಿಳೆಯರ ನೇತೃತ್ವದ ಅಭಿವೃದ್ಧಿಯಾಗಿದೆ ಅಥವಾ ಅಭಿವೃದ್ಧಿಗೆ ಮಹಿಳೆಯರು ಕಾರಣಕರ್ತೃಗಳಾಗಬೇಕಾಗಿದೆ.
 
ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರ ಕೇಂದ್ರಸ್ಥಾನದಲ್ಲಿದೆ ಎಂಬ ವಾಸ್ತವವು ನನಗೆ ಹೆಮ್ಮೆ ತರುತ್ತದೆ.
ನಮ್ಮ ಸಂಸ್ಕೃತಿಯಲ್ಲಿ ಪೂಜಿತರಾದ ಅನೇಕ ದೇವತೆಗಳಿದ್ದಾರೆ. 
 
ಭಾರತವು ಹಲವಾರು ಮಹಿಳಾ ಸಂತರ ಮನೆಯಾಗಿದೆ. ದೇಶದ ಉತ್ತರ, ದಕ್ಷಿಣ, ಪೂರ್ವ ಅಥವಾ ಪಶ್ಚಿಮ ಭಾಗಗಳಲ್ಲಿ ಇವರು ಸಾಮಾಜಿಕ ಸುಧಾರಣೆಯ ಚಳವಳಿಗಳ ನೇತೃತ್ವ ವಹಿಸಿದ್ದರು.
 
ಏಕರೂಪಗಳನ್ನು ಅವರು ನಾಶಪಡಿಸಿದರಲ್ಲದೆ, ಹಲವಾರು ಅಡೆತಡೆಗಳನ್ನು ಮುರಿದು ತಮ್ಮದೇ ಆದ ರೀತಿಯಲ್ಲಿ ನೂತನ   ಪ್ರವೃತ್ತಿ  ಮತ್ತು ಒಲವುಗಳನ್ನು ಹುಟ್ಟುಹಾಕಿದವರಾದರು. 
 
ನಾರಿಯನ್ನು ಕುರಿತು ಭಾರತದಲ್ಲಿ ಏನು ಹೇಳುತ್ತಾರೆ ಎನ್ನುವುದು ನಿಮಗೆ ಆಸಕ್ತಿಕರವಾಗಿರಬಹುದು –  
ನಾರಿ ತೂ ನಾರಾಯಣಿ, ನಾರಿ ತೂ ನಾರಾಯಣಿ   
ಮಹಿಳೆ ದೈವತ್ವದ ಪ್ರತಿರೂಪ
 
ಆದರೆ ಪುರುಷರಿಗಾಗಿ ನಾವು ಹೀಗೆ ಹೇಳುತ್ತೇವೆ. – ಪುರುಷನೊಬ್ಬ ಒಳ್ಳೆಯ ಕಾರ್ಯಗಳನ್ನು ಕೈಗೊಂಡರೆ, ದೈವತ್ವ ಸಂಪಾದಿಸುತ್ತಾನೆ.  
 
ವ್ಯತ್ಯಾಸ ನಿಮಗೆ ಕಾಣುತ್ತದೆಯೇ – ಮಹಿಳೆಯ ದೈವತ್ವ ಷರತ್ತು ರಹಿತವಾಗಿದೆ. 
 
ಆದರೆ ಪುರುಷರಿಗೆ ಇದು ಷರತ್ತುಬದ್ಧವಾಗಿದೆ. ಒಳ್ಳೆಯ ಕೆಲಸಗಳ ನಂತರವೇ ಆತ ದೈವತ್ವ ಗಳಿಸಬಹುದಾಗಿದೆ. 
ಆದ್ದರಿಂದಲೇ ಬಹುಶಃ ಇಡೀ ಜಗತ್ತಿಗೆ ತಾಯಿಯಾಗುವ ಪ್ರತಿಜ್ಞೆಯನ್ನು ಕೈಗೊಳ್ಳಲು ಸದ್ಗುರು ಅವರು ಒತ್ತಾಯಿಸುತ್ತಾರೆ. ಎಲ್ಲರನ್ನು ಷರತ್ತಿಲ್ಲದೇ ತನ್ನವರಾಗಿಸಿಕೊಳ್ಳುವಳು ಎಂದರೆ ಅವಳು ತಾಯಿ. 
 
21ನೇ ಶತಮಾನದಲ್ಲಿನ ಬದಲಾಗುತ್ತಿರುವ ಜೀವನಶೈಲಿಗಳು ತಮ್ಮದೇ ಆದ ಸವಾಲುಗಳನ್ನು ತಂದೊಡ್ಡಿವೆ. 
ಜೀವನಶೈಲಿ ಸಂಬಂಧಿತ ಅಸ್ವಸ್ಥತೆಗಳು, ಒತ್ತಡ ಸಂಬಂಧಿತ ರೋಗಗಳು ಹೆಚ್ಚುಹೆಚ್ಚಾಗಿ ಸಾಮಾನ್ಯವಾಗುತ್ತಿವೆ.  
ಸೋಂಕು ರೋಗಗಳನ್ನು ನಿಯಂತ್ರಿಸಬಹುದು ಆದರೆ ಸೋಂಕುಯೇತರ ರೋಗಗಳ ಬಗ್ಗೆ ಏನು ಹೇಳುವುದು?
ತಮ್ಮಲ್ಲಿ ತಾವು ಶಾಂತಿ ಕಂಡುಕೊಳ್ಳದ ಕಾರಣ ಮಾದಕ ವ್ಯಸನ ಮತ್ತು ಮದ್ಯಕ್ಕೆ ಚಟಕ್ಕೆ ಜನರು ಬಲಿಯಾಗುತ್ತಿರುವ ಬಗ್ಗೆ ಓದಿದಾಗ ನನಗೆ ಬಹಳ ಬೇಸರ ಮೂಡುತ್ತದೆ. ಪದಗಳಲ್ಲಿ ವರ್ಣಿಸಲಾದಂತಹ ಬೇಸರ ಇದಾಗಿದೆ.
 
ಇಂದು ಸಂಪೂರ್ಣ ಜಗತ್ತಿಗೆ ಶಾಂತಿ ಬೇಕಾಗಿದೆ. ಯುದ್ಧ ಮತ್ತು ಸಂಘರ್ಷಗಳಿಂದ  ಮಾತ್ರ ಶಾಂತಿಯಲ್ಲದೇ, ಮನಃಶ್ಯಾಂತಿ ಬೇಕಾಗಿದೆ. 
ಒತ್ತಡದ ಹೊರೆ ದೊಡ್ಡ ಸಂಖ್ಯೆಯಲ್ಲಿ ಜೀವಗಳ ಬಲಿ ಪಡೆಯುತ್ತದೆ. ಒತ್ತಡವನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿ ಅಸ್ತ್ರಗಳಲ್ಲಿ ಒಂದೆಂದರೆ ಅದು ಯೋಗ ಆಗಿದೆ.  
 
ದೀರ್ಘಕಾಲದ ಅಸ್ವಸ್ಥತೆಯ ಸ್ಥಿತಿಗಳು ಮತ್ತು ಒತ್ತಡದ ವಿರುದ್ಧ ಹೋರಾಡಲು ಯೋಗಾಭ್ಯಾಸ ಸಹಾಯ ಮಾಡುತ್ತದೆ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ದೇಹವು ಮನಸ್ಸಿನ ದೇವಾಲಯವಾಗಿದ್ದರೆ, ಯೋಗ ಒಂದು ಸುಂದರ ದೇಗುಲ ಸೃಷ್ಟಿಸುತ್ತದೆ. 
 
ಯೋಗ ಆರೋಗ್ಯದ ಭರವಸೆಗೆ ರಹದಾರಿ ಎಂದು ಅದಕ್ಕಾಗಿಯೇ ನಾನು ಕರೆಯುತ್ತೇನೆ. ಅಸ್ವಸ್ಥತೆಗಳನ್ನು ಗುಣಪಡಿಸುವದಕ್ಕಿಂತಲೂ ಹೆಚ್ಚಾಗಿ, ಇದು ಸೌಖ್ಯತೆಗೆ ಮಾರ್ಗವಾಗಿದೆ. 
 
ಯೋಗ ಎಂದರೆ ರೋಗ ಮುಕ್ತಿ (ರೋಗಗಳಿಂದ ಸ್ವಾತಂತ್ರ್ಯ) ಜೊತೆಗೆ ಭೋಗ ಮುಕ್ತಿ (ಲೌಕಿಕ ದುರಾಸೆಯನ್ನು ಬಿಡುವುದು) ಕುರಿತದ್ದಾಗಿದೆ. 
 
ಚಿಂತನೆ, ಕಾರ್ಯ, ಜ್ಞಾನ ಮತ್ತು ಭಕ್ತಿಗಳಲ್ಲಿ ಒಬ್ಬ ವ್ಯಕ್ತಿಯನ್ನು ಯೋಗ ಹೆಚ್ಚು ಉತ್ತಮರನ್ನಾಗಿಸುತ್ತದೆ. 
 
ಕೇವಲ ದೇಹವನ್ನು ದೃಢವಾಗಿಸುವ ಕೆಲವು ವ್ಯಾಯಾಮಗಳ ಗುಂಪಾಗಿ ಯೋಗವನ್ನು ನೋಡುವುದು  ನ್ಯಾಯವಲ್ಲ.
ಅನೇಕ ರೀತಿಗಳಲ್ಲಿ ತಮ್ಮ ದೇಹಗಳನ್ನು ತಿರುಚುವ ಮತ್ತು ತಿರುಗಿಸುವ ಜನರನ್ನು ನೀವು ನೋಡಿರಬಹುದು. ಆದರೆ ಅವರೆಲ್ಲ ಯೋಗಿಗಳಲ್ಲ. 
 
ಯೋಗ ಎಂದರೆ ಅದು ದೈಹಿಕ ವ್ಯಾಯಾಮಗಳನ್ನು ಮೀರಿದ್ದಾಗಿದೆ.
 
ಯೋಗ ಮೂಲಕ  ನೀವು ನೂತನ ಯುಗವನ್ನು ಅಂದರೆ –   ಸಹಬಾಳ್ವೆ ಮತ್ತು ಸೌಹಾರ್ದಗಳ ಯುಗ
ವನ್ನು ಸೃಷ್ಟಿಸುವಿರಿ. 
 
ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗದಿನದ ಚಿಂತನೆಯನ್ನು ಭಾರತ ಮಂಡಿಸಿದಾಗ, ಅದನ್ನು ತೆರೆದ ಕೈಗಳಿಂದ ಸ್ವೀಕರಿಸಲಾಗಿತ್ತು.  
 
2015 ಮತ್ತು 2016ರ ಜೂನ್ 21ರಂದು ಎರಡೂ ಯೋಗ ದಿನಗಳನ್ನು ಜಗತ್ತು ಅದ್ಭುತ ಉತ್ಸಾಹದೊಂದಿಗೆ ಆಚರಿಸಿತ್ತು. 
ಕೊರಿಯಾ ಅಥವಾ ಕೆನಡಾ, ಸ್ವೀಡನ್ ಅಥವಾ ದಕ್ಷಿಣ ಆಫ್ರಿಕಾ ಆಗಿರಲಿ ಜಗತ್ತಿನ ಪ್ರತಿ ಭಾಗದಲ್ಲಿ ಸೂರ್ಯ ಕಿರಣಗಳನ್ನು ಯೋಗಿಗಳು, ಯೋಗಾಭ್ಯಾಸದಲ್ಲಿ ತೊಡಗುವುದರೊಂದಿಗೆ ಸ್ವಾಗತಿಸುತ್ತಾರೆ. 
 
ಅಂತಾರಾಷ್ಟ್ರೀಯ ಯೋಗದಿನದಂದು ಇಷ್ಟೊಂದು ದೇಶಗಳು ಒಂದಾಗಿ ಸೇರಿರುವುದು ಯೋಗದ ನೈಜ ಮೂಲತತ್ವ – ಸಹಬಾಳ್ವೆಯನ್ನು ಪ್ರದರ್ಶಿಸುತ್ತದೆ. 
 
ಯೋಗಕ್ಕೆ ಹೊಸ ಯುಗವನ್ನು ತರುವ ಸಾಮರ್ಥ್ಯವಿದೆ. ಈ ಯುಗ, ಶಾಂತಿ, ಸಹಾನುಭೂತಿ, ಸೋದರತ್ವ ಮತ್ತು ಮಾನವಕುಲದ ಸಂಪೂರ್ಣ ಪ್ರಗತಿಯ ಯುಗವಾಗಿರುತ್ತದೆ. 
 
ಸದ್ಗುರು ಕುರಿತು ಗಮನಾರ್ಹ ವಿಷಯವೆಂದರೆ ಅವರು ಸಾಮಾನ್ಯ ಜನರನ್ನು ಯೋಗಿಗಳಾಗಿಸಿದ್ದಾರೆ. 
ಈ ಜನರು ತಮ್ಮ ಕುಟುಂಬ ಮತ್ತು ಕೆಲಸಗಳೊಂದಿಗೆ ವಾಸಿಸುತ್ತಾರಲ್ಲದೇ ತಮ್ಮೊಳಗೆ ತಾವೇ ಉತ್ತುಂಗಗಳಲ್ಲಿ ಬದುಕುತ್ತಿರುತ್ತಾರೆ. -ಜೊತೆಗೆ ಇವರು ದಿನಾಲು ತೀವ್ರ ಮತ್ತು ಅದ್ಭುತ ಅನುಭವಗಳನ್ನು ಹೊಂದುತ್ತಿರುತ್ತಾರೆ.
ಒಬ್ಬರು ಎಲ್ಲೇ ಇರಲಿ, ಯಾವುದೇ ಪರಿಸ್ಥಿತಿಯಲ್ಲಿರಲಿ, ಅವರು ಯೋಗಿಯಾಗಬಹುದು. 
 
ಇಲ್ಲಿ ಎಷ್ಟೊಂದು ಹೊಳಪಿನ ಮತ್ತು ಸಂತಸಪೂರ್ಣ ಮುಖಗಳನ್ನು  ನಾನು ನೋಡುತ್ತಿದ್ದೇನೆ. 
ಅತ್ಯಂತ ಸಣ್ಣ ವಿವರಗಳಿಗೆ ಗಮನ ನೀಡುತ್ತ ಅಲ್ಲದೇ  ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ಕೆಲಸ ಮಾಡುತ್ತಿರುವ ಜನರನ್ನು ನಾನು ನೋಡುತ್ತಿದ್ದೇನೆ. ಹೆಚ್ಚು ಅದ್ಭುತ ಉದ್ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಉತ್ಸಾಹಪೂರ್ಣರಾಗಿ ಎಲ್ಲ ಶಕ್ತಿಯೊಂದಿಗೆ ಶ್ರಮಿಸುತ್ತಿರುವ ಜನರನ್ನು ನಾನು ನೋಡುತ್ತಿದ್ದೇನೆ. ಯೋಗಾಭ್ಯಾಸವನ್ನು ಕೈಗೆತ್ತಿಕೊಳ್ಳಲು ಅನೇಕ ಪೀಳಿಗೆಗಳಿಗೆ ಆದಿಯೋಗಿ ಸ್ಫೂರ್ತಿ ನೀಡಲಿದ್ದಾನೆ, ಇದನ್ನು ನಮಗೆ ತಂದುಕೊಟ್ಟಿದ್ದಕ್ಕಾಗಿ ಸದ್ಗುರುವಿಗೆ ಕೃತಜ್ಞತೆಗಳು. 
 
ವಂದನೆಗಳು ನಿಮಗೆ, ಬಹಳ ವಂದನೆಗಳು ನಿಮಗೆ ಪ್ರಣಾಮಗಳು
ನಮಸ್ಕಾರ
****
AKT/NT