Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

15 ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು (ಐಐಐಟಿಗಳು) ರಾಷ್ಟ್ರೀಯ ಮಹತ್ವದ ಸಂಸ್ಥೆಗಳೆಂದು ಘೋಷಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ಕೆಳಗಿನವುಗಳಿಗೆ ಅನುಮೋದನೆ ನೀಡಿದೆ.

i. ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಐಐಐಟಿ ಪಿಪಿಪಿ) ವಿಧೇಯಕ 2017;

ii. ಸಾರ್ವಜನಿಕ ಖಾಸಗಿ ಪಾಲುದಾರಿಕೆಯ 15 ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಶಾಸನಾತ್ಮಕ ಸ್ಥಾನಮಾನ ಮಂಜೂರು ಮಾಡಲು ಮತ್ತು ಅವುಗಳನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆಗಳೆಂದು ಘೋಷಿಸಲು;

iii. ಈ ಸಂಸ್ಥೆಗಳು ನಡೆಸುವ ಶೈಕ್ಷಣಿಕ ಕೋರ್ಸ್ ಗಳಲ್ಲಿ ತನ್ನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಅವಕಾಶ.

ಉದ್ದೇಶಿತ ಐಐಐಟಿ ಪಿಪಿಪಿ ಮಸೂದೆ 2017ರಿಂದ ಯಾವುದೇ ರೀತಿಯ ಆರ್ಥಿಕ ಪರಿಣಾಮ ಇರುವುದಿಲ್ಲ.

ಈ ಮಸೂದೆಯು ಹಾಲಿ ಇರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳನ್ನು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಪದವಿ ಪ್ರದಾನ ಮಾಡುವ ಅಧಿಕಾರದೊಂದಿಗೆ ರಾಷ್ಟ್ರೀಯ ಮಹತ್ವದ ಸಂಸ್ಥೆಗಳೆಂದು ಘೋಷಿಸುತ್ತದೆ. ಇದು ಅವುಗಳಿಗೆ ಇತರೆ ವಿಶ್ವವಿದ್ಯಾಲಯ ಅಥವಾ ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ನೀಡುವಂತೆಯೇ ಬ್ಯಾಚ್ಯುಲರ್ ಆಫ್ ಟೆಕ್ನಾಲಜಿ (ಬಿ.ಟೆಕ್) ಅಥವಾ ಮಾಸ್ಟರ್ ಆಫ್ ಟೆಕ್ನಾಲಜಿ (ಎಂ.ಟೆಕ್) ಅಥವಾ ಪಿಎಚ್.ಡಿ.ಗಳ ಹೆಸರು ಬಳಸಿಕೊಂಡು ಪದವಿ ಪ್ರದಾನ ಮಾಡಲು ಅವಕಾಶ ನೀಡುತ್ತದೆ. ಮಾಹಿತಿ ತಂತ್ರಜ್ಞಾನದಲ್ಲಿ, ಎಂಜಿನಿಯರಿಂಗ್ ಪದವಿ ಅಥವಾ ಪಿಎಚ್ ಡಿ ನೀಡಿಕೆಯು ವಿದ್ಯಾರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಭವಿಷ್ಯ ಹೆಚ್ಚಿಸುತ್ತದೆ ಜೊತೆಗೆ ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಲವಾದ ಸಂಶೋಧನಾ ಮೂಲವನ್ನು ಅಭಿವೃದ್ಧಿಪಡಿಸಲು ಅಗತ್ಯವಾದಷ್ಟು ವಿದ್ಯಾರ್ಥಿಗಳನ್ನು ಆಕರ್ಷಿಸಲು ಅವಕಾಶ ನೀಡುತ್ತದೆ.

ಉದ್ಯಮದಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಆರ್ಥಿಕತೆ ಹಾಗೂ ಒಟ್ಟಾರೆಯಾಗಿ ತಾಂತ್ರಿಕ ಮಾನವಶಕ್ತಿಯನ್ನು ಸಂಸ್ಥೆಗಳ ಸಿಬ್ಬಂದಿಯಿಂದ ತರಬೇತಾದ ಪ್ರತಿಭಾನ್ವಿತರಿಂದ ತುಂಬಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪ್ರತಿಯೊಂದು ಸಂಸ್ಥೆಯೂ ಜಾತಿ, ಮತ, ಧರ್ಮ, ಅಂಗವೈಕಲ್ಯ ಮತ್ತು ಸ್ಥಳ, ಜನಾಂಗೀಯತೆ, ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆ ಎಂಬ ಯಾವ ತಾರತಮ್ಯ ಇಲ್ಲದೆ ಎಲ್ಲರಿಗೂ ಮುಕ್ತವಾಗಿರುತ್ತದೆ – ಈ ಕೆಳಗಿನ15 ಸಂಸ್ಥೆಗಳಲ್ಲಿ ಶೈಕ್ಷಣಿಕ ಅವಧಿ ಆರಂಭಗೊಂಡಿದೆ:-

ಆಂಧ್ರಪ್ರದೇಶ (ಚಿತ್ತೂರು), ಅಸ್ಸಾಂ (ಗುವಾಹಟಿ), ಗುಜರಾತ್ (ವಡೋದರ), ಹರಿಯಾಣ (ಸೋನಿಪಟ್), ಹಿಮಾಚಲ ಪ್ರದೇಶ (ಉನಾ), ಜಾರ್ಖಂಡ್ (ರಾಂಚಿ), ಕರ್ನಾಟಕ (ಧಾರವಾಡ), ಕೇರಳ (ಕೊಟ್ಟಾಯಂ), ಮಹಾರಾಷ್ಟ್ರ (ನಾಗಪುರ ಮತ್ತು ಪುಣೆ), ಮಣಿಪುರ (ಸೇನಾಪತಿ), ರಾಜಾಸ್ಥಾನ (ಕೋಟ), ತಮಿಳುನಾಡು (ತಿರುಚಿರಾಪಳ್ಳಿ), ಉತ್ತರ ಪ್ರದೇಶ (ಲಖನೌ), ಕಲ್ಯಾಣಿ (ಪಶ್ಚಿಮ ಬಂಗಾಳ).

ಹಿನ್ನೆಲೆ

ಖಾಸಗಿ ಮತ್ತು ಸಾರ್ವಜನಿಕ ಪಾಲುದಾರಿಕೆಯಲ್ಲಿ 20 ಹೊಸ ಐಐಐಟಿಗಳನ್ನು ಸ್ಥಾಪಿಸುವ ಯೋಜನೆ (ಐಐಐಟಿ ಪಿಪಿಪಿ)ಗೆ 2010ರ ಡಿಸೆಂಬರ್ 7ರಂದು ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆಯು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲು ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಸಂಸ್ಥೆ ಸ್ಥಾಪಿಸಲು ಅವಕಾಶ ನೀಡಿರಲಿಲ್ಲ. ಇನ್ನೂ ತಮ್ಮ ಪ್ರಥಮ ಪದವಿ ಪಡೆಯದ (under-graduate) ಮೊದಲ ಬ್ಯಾಚ್ ವಿದ್ಯಾರ್ಥಿಗಳು 2013-14ರ ಸಾಲಿನಲ್ಲಿ ಪ್ರವೇಶ ಪಡೆದಿದ್ದು, ಅವರು 2017ರಲ್ಲಿ ಉತ್ತೀರ್ಣರಾಗಿ ಹೊರ ಬರಲಿದ್ದಾರೆ. 15 ಐಐಐಟಿ ಗಳಲ್ಲಿ ಶೈಕ್ಷಣಿಕ ಅವಧಿ ಆರಂಭವಾಗಿದೆ.

*****