Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

20ನೇ ಜನವರಿ 2017 ರಂದು ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ / ಕೇಂದ್ರಾಡಳಿತ ಪ್ರದೇಶಗಳ ಮಂತ್ರಿಗಳು ಹಾಗೂ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳನ್ನು ಉದ್ದೇಶಿಸಿ (ವಿಡಿಯೋ ಕಾನ್ಫರೆನ್ಸ್ ಮೂಲಕ) ಪ್ರಧಾನ ಮಂತ್ರಿ ಅವರು ಮಾಡಿದ ಉದ್ಘಾಟನಾ ಭಾಷಣದ ಅವತರಣಿಕೆ.

20ನೇ ಜನವರಿ 2017 ರಂದು ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ   ಕೇಂದ್ರ ಮತ್ತು ರಾಜ್ಯ ಸರ್ಕಾರ / ಕೇಂದ್ರಾಡಳಿತ ಪ್ರದೇಶಗಳ ಮಂತ್ರಿಗಳು ಹಾಗೂ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳನ್ನು ಉದ್ದೇಶಿಸಿ (ವಿಡಿಯೋ ಕಾನ್ಫರೆನ್ಸ್ ಮೂಲಕ)  ಪ್ರಧಾನ ಮಂತ್ರಿ  ಅವರು  ಮಾಡಿದ ಉದ್ಘಾಟನಾ ಭಾಷಣದ ಅವತರಣಿಕೆ.


ಬಹುಶಃ ನಿಮ್ಮಲ್ಲಿ ಬಹಳಷ್ಟು ಜನ ಕಚ್ಛ್‌ ಪ್ರದೇಶಕ್ಕೆ ಮೊದಲಬಾರಿಗೆ ಬಂದಿರಬಹುದು, ಕಚ್ಛ್‌ಗೆ ಬಂದಿದ್ದರೂ ಕೂಡ ಇಷ್ಟು ದೂರದ ಪಾಕಿಸ್ತಾನದ ಗಡಿಯಲ್ಲಿರುವ ಮರುಭೂಮಿಗೆ ಯಾರು ಬರುತ್ತಾರೆ? ಆದರೆ ನಿಮಗಿಂದು ಅಲ್ಲಿಗೂ ಹೋಗುವ ಅವಕಾಶ ಒದಗಿಬಂತು. ಹಿಮಾಲಯದ ಪರ್ವತಶ್ರೇಣಿಗಳಿಂದ ಬಂದಂತಹ ಜನರಿಗೆ ಮರುಭೂಮಿಯ ಅನುಭವವೇ ಬೇರೆಯದಾಗಿರುತ್ತದೆ. ಈಶಾನ್ಯ ಭಾಗದ ಹಸಿರು ಪ್ರಕೃತಿಯ ನಡುವೆ ಜೀವನ ನೆಡೆಸಿದ ಜನರಿಗೆ ಮರುಭೂಮಿಯ ಅನುಭವ ಬೇರೆಯದೇ ಆಗಿರುತ್ತದೆ. ಅಲ್ಲದೇ ನಿಮ್ಮ ಚಿಂತನ ಶಿಬಿರದ ಮೇಲೆ ಈ ಪರಿಸರವೂ ಕೂಡ ಸಕಾರಾತ್ಮಕ ಪ್ರಭಾವ ಬೀರುವುದೆಂಬ ವಿಶ್ವಾಸ ನನಗಿದೆ.

ಸರ್ಕಾರದಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿ ಕುಳಿತುಕೊಂಡು ನಮ್ಮ ಕೆಲಸ ಕಾರ್ಯಗಳನ್ನು ಮತ್ತು ಅವುಗಳ ರಚನೆಯನ್ನು ತಿಳಿದುಕೊಳ್ಳಬೇಕೆಂಬುದು ಅತ್ಯಾವಶ್ಯಕವಾಗಿರುತ್ತದೆ. ಜಗತ್ತು ಯಾವ ರೀತಿ ಬದಲಾಗುತ್ತಿದೆ, ಬದಲಾಗುತ್ತಿರುವ ಜಗತ್ತಿನಲ್ಲಿ ನಾವೆಲ್ಲಿ ನಿಂತಿದ್ದೇವೆ, ನಮ್ಮ ಮುಂದಿನ ಗುರಿ ಯಾವುದು, ನಾವು ಎಲ್ಲಿಯವರೆಗೆ ಹೋಗಬಹುದು? ಇಂತಹ ವಿಷಯಗಳನ್ನು ನಿರಂತರವಾಗಿ ನಾವು ಮೌಲ್ಯಮಾಪನ ಮಾಡುತ್ತಿರಬೇಕು. ನಮ್ಮ ದೌರ್ಭಾಗ್ಯವೆಂದರೆ ಸರ್ಕಾರಗಳಿಗೆ ಬಾವಿಗಳಲ್ಲಿ ಕಾರ್ಯ ನಿರ್ವಹಿಸುವ ಸ್ವಭಾವವಿದೆ. ಕೆಲವೊಮ್ಮ ಇಲಾಖೆಯ ಒಳಗೆಯೇ ಬಾವಿಗಳಿರುತ್ತವೆ. ಒಂದು ಟೇಬಲ್‌ನಲ್ಲಿ ಆಗುತ್ತಿರುವ ಕೆಲಸದ ಮಾಹಿತಿ ಇನ್ನೊಂದು ಟೇಬಲ್ಲಿಗೆ ಸಿಗಬಾರದೆಂಬ ಸ್ವಾರ್ಥ ಚಿಂತನೆ ಇರುತ್ತದೆ.

ಒಂದು ಇಲಾಖೆಯೊಂದಿಗೆ ಇನ್ನೊಂದು ಇಲಾಖೆಯ ಹೊಂದಾಣಿಕೆ ಇರುವುದಿಲ್ಲ. ಹೀಗಿರುವಾಗ ಒಂದು ಇಲಾಖೆಯು ಒಂದು ಕಾರ್ಯಕ್ರಮದ ಬಗ್ಗೆ ಯೋಚಿಸಿದರೆ ಇನ್ನೊಂದು ಇಲಾಖೆಯು ಅದರ ವಿರುದ್ಧ ಯೋಚಿಸುತ್ತದೆ. ಇನ್ನೂ ಪರಮಾಶ್ಚರ್ಯದ ಸಂಗತಿ ಎಂದರೆ ಸರ್ಕಾರದ ಎರಡು ಇಲಾಖೆಗಳು ನ್ಯಾಯಾಲಯಕ್ಕೆ ಹೋಗಿ ವಿರೋಧಿಗಳಾಗಿ ನಿಂತುಕೊಂಡು ಹಣ ಕೊಟ್ಟು ತಮ್ಮ ತಮ್ಮಲ್ಲಿಯೇ ಜಗಳವಾಡುತ್ತವೆ. ನಮ್ಮಲ್ಲಿರುವ ಇಂತಹ ವ್ಯವಸ್ಥೆ ಆರೋಗ್ಯಕರವಾದುದಲ್ಲ. ಇದರಲ್ಲಿ ಬದಲಾವಣೆ ಆಗಲೇ ಬೇಕು. ಪ್ರಸ್ತುತ ಈ ಸ್ಥಿತಿಯ ಬದಲಾವಣೆಗೆ ನಾವೆಲ್ಲರೂ ಒಟ್ಟಿಗೆ ಕುಳಿತು ವಿಶಾಲ ದೃಷ್ಟಿಯನ್ನಿಟ್ಟುಕೊಂಡು ಈ ವ್ಯಾಪ್ತಿಯೊಳಗೆ ನಮ್ಮ ಪಾತ್ರವೇನು, ನಮ್ಮ ವಿಭಾಗದ ಪಾತ್ರವೇನು, ನಾವು ಯಾವ ರೀತಿಯ ಫಲಿತಾಂಶಗಳನ್ನು ಕೊಡಬಹುದೆಂದು ಯೋಚಿಸಿದರೆ ಒಳ್ಳೆಯದು. ಇನ್ನು ಕೆಲವೊಂದು ಇಲಾಖೆಗಳು ವಿಶೇಷವಾಗಿರುತ್ತವೆ, ಅಂತಹ ಇಲಾಖೆಗಳು ಬೇರೆಯಾಗಿದ್ದರೂ ಕೂಡ ಸಮಾನ ಮನಸ್ಸಿನವಾಗಿರುತ್ತವೆ. ಒಂದರ ಜೊತೆ ಇನ್ನೊಂದಕ್ಕೆ ಯಾವುದಾದರೂ ಸಂಬಂಧ ಇದ್ದೇ ಇರುತ್ತದೆ.

ಇಲ್ಲಿ ಪ್ರಮುಖವಾಗಿ ನಾಲ್ಕು ಇಲಾಖೆಗಳು ಒಟ್ಟಿಗೆ ಸೇರಿವೆ. ಒಂದು ದೃಷ್ಟಿಯಲ್ಲಿ ಈ ಇಲಾಖೆಗಳ ಒಂದರ ಜೊತೆಗೆ ಇನ್ನೊಂದರ ಸಂಬಂಧ ಇದ್ದೇ ಇರುತ್ತದೆ, ಹೀಗಿರುವಾಗ ನಾವೆಲ್ಲರೂ ಒಟ್ಟಿಗೆ ಕುಳಿತುಕೊಂಡು ನಮ್ಮೆಲ್ಲರ ಅನುಭವಗಳನ್ನು ಹಂಚಿಕೊಳ್ಳೋಣ. ತಜ್ಞರ ಮಾತುಗಳನ್ನು ಕೇಳೋಣ. ನಮ್ಮ ಕಷ್ಟಗಳ ನಿವಾರಣೆಗಾಗಿ ನಾವು ಯಾವ ಯಾವ ದಾರಿಗಳನ್ನು ಕಂಡುಕೊಂಡಿದ್ದೇವೆ, ಯಾವ ಪ್ರಯೋಗಗಳನ್ನು ಮಾಡಿದ್ದೇವೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡಬೇಕು. ನಿಮ್ಮ ಈ ಮೂರು ದಿನಗಳ ವಾಸ್ತವ್ಯದ ಸಮಯದಲ್ಲಿ ಔಪಚಾರಿಕ ಗೋಷ್ಠಿಗಳು ನೆಡೆಯುತ್ತವೆ, ಅವುಗಳೊಂದಿಗೆ ಉಳಿದ ಸಮಯದಲ್ಲಿ ನೀವು ಒಬ್ಬರಿಗೊಬ್ಬರು ಭೇಟಿಯಾದಾಗ ಮುಕ್ತವಾಗಿ ಚರ್ಚೆ ಮಾಡುತ್ತ, ಊಟ ಮಾಡುವ ಸಮಯದಲ್ಲಿ, ಓಡಾಡುವಾಗ ಮತ್ತು ಅನೇಕರಿಗೆ ಮೊದಲಬಾರಿಗೆ ಟೆಂಟ್‌‌ನಲ್ಲಿ ಇರುವ ಅನುಭವ ಆಗಿರಬಹುದು. ಈಗ ನಿಮಗೆ ಬಹಳ ಸೆಖೆ ಯಾಗುತ್ತಿರಬಹುದು, ಸಂಜೆಯಾಗುತ್ತಿದ್ದಂತೆ ಚಳಿಯೂ ಹೆಚ್ಚಾಗಬಹುದು …. ಈ ಕಷ್ಟಗಳ ನಡುವೆ ಜೀವಿಸುವುದರಲ್ಲಿಯೂ ಒಂದು ಸಂತೋಷವಿದೆ. ಅಧಿಕೃತ ಗೋಷ್ಠಿಗಳನ್ನು ಹೊರತುಪಡಿಸಿ ತಮ್ಮ ತಮ್ಮ ರಾಜ್ಯಗಳ ಅನುಭವಗಳನ್ನು ನಿಮ್ಮ ಸಂಗಡಿಗರೊಂದಿಗೆ ಹಂಚಿಕೊಳ್ಳಿ, ಅನ್ಯ ರಾಜ್ಯಗಳಿಂದಲೂ ಮಾಹಿತಿಗಳನ್ನು ಕೇಳಿಕೊಳ್ಳಿ. ಈ ಪ್ರಕಾರದ ವಿಚಾರ ವಿನಿಮಯ ಬಹು ದೊಡ್ಡ ಸಂಪತ್ತಾಗಿರುತ್ತದೆ, ಭವಿಷ್ಯದಲ್ಲಿ ನಿಮ್ಮ ಈ ವಿಚಾರ ವಿನಿಮಯಗಳು ನಮ್ಮ ಅಭಿವೃದ್ಧಿ ಪಥದ ನೀತಿಗಳನ್ನು ರೂಪಿಸುವಲ್ಲಿ ನೆರವಾಗುತ್ತವೆ.

ನಾವು ಕೆಲವೊಂದು ಕಾರ್ಯಗಳನ್ನು ಇಲಾಖೆ, ಕೇಂದ್ರ, ರಾಜ್ಯಗಳ ಹೊರತಾಗಿ ಮಾಡಬೇಕಾಗುತ್ತದೆ. ಇಂದು ಇಲ್ಲಿ ನಾಲ್ಕು ವಿಭಾಗಗಳ ಅಧಿಕಾರಿಗಳು ಒಟ್ಟಿಗೇ ಸೇರಿದ್ದಾರೆ. ಇವರೆಲ್ಲರ ಕಾರ್ಯದ ಸ್ವಭಾವ ಒಂದೇ ಆಗಿದೆ. ಏಕೆಂದರೆ ಇವರು ತಮ್ಮ ಕಾರ್ಯಸ್ವಭಾವಕ್ಕನುಗುಣವಾಗಿ ಕಾಶ್ಮೀರದಲ್ಲಿ ಇರುವ ಜನರಿಗಾಗಿ ನಿರ್ಣಯ ತೆಗೆದುಕೊಳ್ಳುವಾಗ ಅಥವಾ ಕನ್ಯಾಕುಮಾರಿಯಲ್ಲಿ ಇರುವ ಜನರಿಗಾಗಿ ನಿರ್ಣಯ ತೆಗೆದುಕೊಳ್ಳುವಾಗ ಒಂದೇ ನೀತಿ ಯನ್ನು ಅನುಸರಿಸುತ್ತಾರೆ ಮತ್ತು ಈ ನಿರ್ಣಯಗಳಲ್ಲಿರುವ ಮೂಲ ಉದ್ದೇಶ ಒಂದೇ ಇರುತ್ತದೆ. ಸಂಪನ್ಮೂಲಗಳು ಹೆಚ್ಚು ಕಡಿಮೆ ಇರುವ ಸಾಧ್ಯತೆಗಳಿವೆ. ಹಿಂದುಸ್ತಾನದ ಯಾವ ಸರ್ಕಾರ ಕ್ರೀಡಾಕ್ಷೇತ್ರದಲ್ಲಿ ನಮ್ಮ ಯುವಕರು ಮುಂದೆ ಬರಬೇಕು ಎಂದು ಬಯಸುವುದಿಲ್ಲ. ಇದರರ್ಥ- ಹಿಂದುಸ್ತಾನದ ಎಲ್ಲ ಸರ್ಕಾರಗಳೂ ಬಯಸುತ್ತವೆ. ಹಾಗಾದರೆ ಎಲ್ಲ ರಾಜ್ಯ ಸರ್ಕಾರಗಳು ಬಯಸಿದರೆ, ಎಲ್ಲ ರಾಜ್ಯಗಳೂ ಸೇರಿ ತಮ್ಮಲ್ಲಿರುವ ಜನಸಂಖ್ಯೆಯ ಲಾಭಾಂಶದ ಕುರಿತು ಯೋಚಿಸಬಹುದಲ್ಲವೇ.

ಇಂದು ನಾವು ವಿಶ್ವಕ್ಕೆ ನಮ್ಮಲ್ಲಿರುವ ಜನಸಂಖ್ಯೆಯಲ್ಲಿ 800 ಮಿಲಿಯನ್ ಜನರು 35 ವರ್ಷಗಳಿಗಿಂತ ಕಡಿಮೆಯವರೆಂದು ಧೈರ್ಯವಾಗಿ ಹೇಳುತ್ತೇವೆ. ನಮ್ಮಲ್ಲಿ 65 ಪ್ರತಿಶತ ಜನರು 35 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು. ದೇಶದಲ್ಲಿ ಇಷ್ಟು ಯುವ ಸಂಪತ್ತನ್ನಿಟ್ಟುಕೊಂಡು ದೇಶ ಹಾಗೂ ಪ್ರಪಂಚಕ್ಕೆ ನಾವೇನು ದೇಣಿಗೆ ಕೊಡಬಹುದೆಂದು ಯೋಚಿಸಬಹುದಲ್ಲವೇ, ಕೇಂದ್ರವಾಗಲಿ ಅಥವಾ ರಾಜ್ಯವಾಗಲಿ ಇದು ಎಲ್ಲ ಸರ್ಕಾರಗಳ ಜವಾಬ್ದಾರಿ ಆಗುವುದಿಲ್ಲವೇ. ನಮ್ಮ ಯುವಶಕ್ತಿಗಳನ್ನು ಹೇಗೆ ಮುನ್ನೆಡೆಸಬೇಕು, ನಮ್ಮ ಸರ್ಕಾರಗಳು ದೇಶ ಮತ್ತು ಪ್ರಪಂಚಕ್ಕೆ ನಮ್ಮ ಯುವಶಕ್ತಿಯ ಸರ್ವಾಧಿಕ ಉಪಯೋಗ ದೊರೆಯುವಂತೆ ಹೇಗೆ ತಮ್ಮ ನೀತಿಗಳನ್ನು ರೂಪಿಸುವುದರ ಕುರಿತು ಮಾರ್ಗಸೂಚಿಯನ್ನು ತಯಾರು ಮಾಡಬೇಕು. ನಾವು ಕಳೆದ ಶತಮಾನದಲ್ಲಿಯೇ ಇಂತಹ ವಿಚಾರಗಳ ಕುರಿತು ಗಂಭೀರವಾಗಿ ಯೋಚಿಸಬೇಕಿತ್ತು. ನಾವು ಇಂದಿನಿಂದಲೇ ಪ್ರಾರಂಭಿಸಿದರೆ ಇಂತಹ ವಿಷಯಗಳು ನಮ್ಮನ್ನು ಒಳ್ಳೆಯ ಫಲಿತಾಂಶಗಳೆಡೆಗೆ ತೆಗೆದುಕೊಂಡು ಹೋಗುತ್ತವೆ. ನಮ್ಮ ಮಾನವ ಸಂಪನ್ಮೂಲದ ಅಭಿವೃದ್ಧಿ ಹೇಗಾಗುವುದು, ಜಗತ್ತಿನೆದುರು ನಮ್ಮ ಯುವ ಶಕ್ತಿಯ ಪರಿಚಯ ಹೇಗಿರಬೇಕು. ನಮ್ಮ ಯುವ ಶಕ್ತಿಗೆ ಯಾವ ತರಬೇತಿಯನ್ನು ಕೊಡಬೇಕು, ಅದಕ್ಕೆ ಯಾವ ರೂಪವನ್ನು ಕೊಟ್ಟು ಮುನ್ನೆಡೆಸಬೇಕು, ಅಂತರ್‌ರಾಷ್ಟ್ರೀಯ ಕ್ರೀಡಾಕೂಟಗಳು ನೆಡೆದು ಬಹುಮಾನಗಳು ದೊರೆತಾಗ ಸಂತೋಷವಾಗುತ್ತದೆ. ಸಿಗದಿದ್ದಾಗ ಮುಂದಿನ ಬಾರಿಗೆ ಇದರ ಕುರಿತು ಯೋಚಿಸಲೇ ಬೇಕೆನಿಸುತ್ತದೆ.

ನಾವೆಲ್ಲರೂ ವಿದ್ಯಾರ್ಥಿಗಳಾಗಿದ್ದಾಗಲೇ ನೋಡಿದ್ದೇವೆ. ಈ ವರ್ಷದ ಪರೀಕ್ಷೆ ಹತ್ತಿರ ಬಂದಾಗ ಮುಂದಿನ ವರ್ಷ ಸ್ಕೂಲು-ಕಾಲೇಜು ಪ್ರಾರಂಭವಾದ ಕೂಡಲೇ ಅಭ್ಯಾಸ ಪ್ರಾರಂಭಿಸಬೇಕೆಂದು ಯೋಚಿಸುವುದು ನಮ್ಮೆಲ್ಲರ ಸ್ವಭಾವವಾಗಿದೆ. ನಿಧಾನವಾಗಿ ಮೊದಲ ಸೆಮಿಸ್ಟರ್‌ ಮುಗಿದು ಹೋಗುತ್ತದೆ. ರಜಾ ದಿನಗಳಲ್ಲಿ ಪುನಃ ಈ ಬಾರಿಗಾದರೂ ಏನಾದರೂ ಆಗಲಿ ರಜೆ ಮುಗಿದು ಸ್ಕೂಲು ತೆರೆದ ಕೂಡಲೇ ನಾನು ಓದಲು ಪ್ರಾರಂಭಿಸುತ್ತೇನೆಂದು ನಿರ್ಣಯ ತೆಗೆದುಕೊಳ್ಳುತ್ತೇವೆ. ಪುನಃ ನಿಧಾನವಾಗಿ ಪರೀಕ್ಷೆಗಳು ಹತ್ತಿರ ಬಂದಂತೆ ಇಲ್ಲ ಇಲ್ಲ ನಾನು ಇನ್ನು ಮೇಲೆ ತಡರಾತ್ರಿಯವರೆಗೆ ಓದುತ್ತೇನೆಂದು ಯೋಚಿಸುತ್ತೇವೆ. ರಾತ್ರಿ ನಿದ್ದೆ ಬಂದಾಗ ಬೆಳಿಗ್ಗೆ ಬೇಗ ಎದ್ದು ಓದಿದರಾಯಿತೆಂದು ಯೋಚಿಸುತ್ತೇವೆ. ನಮ್ಮ ತಾಯಿಗೂ ನನ್ನನ್ನು ಸ್ವಲ್ಪ ಬೇಗ ಏಳಿಸು, ನಾನು ಓದಬೇಕೆಂದು ಹೇಳುತ್ತೇವೆ. ನಾವೇ ನಾವಾಗಿ ನಮ್ಮ ವೇಳಾಪಟ್ಟಿಯನ್ನು ಬದಲಿಸುತ್ತಾ ಮತ್ತು ಅದಕ್ಕೆ ಹೊಂದಿಕೊಳ್ಳುತ್ತ ಮುಂದುವರೆಯುತ್ತೇವೆ. ದಾರಿಗಳನ್ನು ಹುಡುಕುತ್ತಿರುತ್ತೇವೆ. ಕ್ರೀಡೆ ಮತ್ತು ಸ್ಪರ್ಧೆಗಳಿಗೂ ನಾವು ಒಂದು ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸುವ ಅವಶ್ಯಕತೆಯಿಲ್ಲವೇ, ನಮ್ಮ ಕ್ರೀಡಾಳುಗಳಿಗೆ ನಿರಂತರವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತಿರಬೇಕು. ಅವು ತಾಲ್ಲೂಕು ಮಟ್ಟದಲ್ಲಾಗಿರಬಹುದು, ಜಿಲ್ಲಾಮಟ್ಟದಲ್ಲಾಗಿರಬಹುದು, ಸ್ಕೂಲು-ಕಾಲೇಜುಗಳ ನಡುವೆ ಇರಬಹುದು, ಎಲ್ಲಿಯವರೆಗೆ ನಿರಂತರವಾಗಿ ಸ್ಪರ್ಧೆಗಳು ನೆಡೆಯುವುದಿಲ್ಲವೋ ಅಲ್ಲಿಯವರೆಗೆ ಕ್ರೀಡಾಳುಗಳು ತಯಾರಾಗುವುದಿಲ್ಲ. ನಾವು ಕೇವಲ ಮೂಲ ಸೌಕರ್ಯಗಳನ್ನು ರೂಪಿಸುವುದರಿಂದ ಅನೇಕ ಕುಟುಂಬಗಳು ಎಚ್ಚರವಾಗುತ್ತವೆ ಒಂದಿಬ್ಬರು ಕ್ರೀಡಾಪಟುಗಳು ಕ್ರೀಡೆಯನ್ನೇ ತಮ್ಮ ವೃತ್ತಿಯನ್ನಾಗಿ ಸ್ವೀಕರಿಸುತ್ತಾರೆ ಮತ್ತು ಅದನ್ನೇ ನೆಚ್ಚಿಕೊಂಡು ಮುಂದುವರೆಯುತ್ತಾರೆ. ಆದರೂ ದೇಶದಲ್ಲಿ ವಾತಾವರಣವನ್ನು ರೂಪಿಸದೇ ಒಳ್ಳೆಯ ಕ್ರೀಡಾಪಟುಗಳು ಸಿಗುವುದು ಸಾಧ್ಯವಿಲ್ಲ. ಕ್ರಿಕೇಟ್ ಕ್ರೀಡೆಯಲ್ಲಿ ಈ ವಾತಾವರಣ ಸ್ವಲ್ಪಮಟ್ಟಿಗಿದೆ. ಗಲ್ಲಿ ಗಲ್ಲಿಗಳಲ್ಲಿ ಎಲ್ಲೆಡೆ ಕ್ರಿಕೇಟ್ ಆಡುತ್ತಿರುತ್ತಾರೆ. ಸಣ್ಣಪುಟ್ಟ ಕ್ರಿಕೇಟ್ ಕೂಟಗಳು ನೆಡೆಯುತ್ತಿರುತ್ತವೆ. ಅದರಲ್ಲಿ ಕ್ರಿಕೇಟ್ ಆಟಗಾರರು ಹೊರಹೊಮ್ಮುತ್ತಾರೆ. ಮತ್ತು ಇದಕ್ಕೆಂದೇ ಒಂದು ಬಹುದೊಡ್ಡ ತಾಂತ್ರಿಕ ವ್ಯವಸ್ಥೆ ಪ್ರಾರಂಭವಾಯಿತು. ಆದರೆ ನಮ್ಮ ದೇಶದಲ್ಲಿ ಕ್ರಿಕೇಟ್‌ನ್ನು ಹೊರತುಪಡಿಸಿಯೂ ಅನೇಕ ಕುಶಲತೆಗಳಿವೆ. ಸಮರ್ಥ ಜನರಿದ್ದಾರೆ, ದೈಹಿಕ ಸಾಮರ್ಥ್ಯದೊಂದಿಗೆ ಅಂತರ್ರಾಷ್ಟ್ರೀಯ ಕ್ರೀಡಾ ಜಗತ್ತಿನಲ್ಲಿ ಪ್ರತಿಭೆಗೆ ಅಷ್ಟೇ ಮಹತ್ತ್ವವಿದೆ. ಇಂತಹ ನೀತಿ ಮತ್ತು ನಿಯಮಾವಳಿಗಳ ನಡುವೆ ತಮ್ಮನ್ನು ತಾವು ರೂಪಿಸಿಕೊಳ್ಳಬೇಕಾಗುತ್ತದೆ. ನಾವು ಯಾವಪ್ರಮಾಣದಲ್ಲಿ ಈ ವಿಚಾರಗಳನ್ನು ಯೋಚಿಸಿ ನಿರ್ಣಯಗಳನ್ನು ಕೈಗೊಳ್ಳುತ್ತೇವೆಯೋ, ಯೋಜನೆಗಳನ್ನು ಮಾಡುತ್ತೇವೆಯೋ ಅಷ್ಟೇ ಪ್ರಮಾಣದಲ್ಲಿ ಫಲಿತಾಂಶಗಳು ದೊರೆಯತೊಡಗುತ್ತವೆ.

ಕ್ರೀಡೆಗಾಗಿ ಜಗತ್ತಿನಲ್ಲಿ ಸರ್ಕಾರಿ ಕಾರ್ಯಕ್ರಮಗಳು ಬಹಳ ಕಡಿಮೆ ಇವೆ. ಕ್ರೀಡೆಗಳು ಸಾಮಾನ್ಯ ಜನರೊಂದಿಗೆ ಇವೆ, ಕಾರ್ಪೊರೇಟ್ ಹೌಸ್‌ಗಳೊಂದಿಗೆ ಸೇರಿಕೊಂಡಿರುತ್ತವೆ. ಒಂದೊಂದು ಕ್ರೀಡೆಯೊಂದಿಗೆ ಒಂದೊಂದು ರಾಜ್ಯವು ತನ್ನನ್ನು ಗುರುತಿಸಿಕೊಂಡು ಅದರ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ನಾವೆಂದಾದರೂ ನಮ್ಮ ರಾಜ್ಯದೊಳಗೆ ಮ್ಯಾಪಿಂಗ್‌ ಅಥವಾ ಪರಿಶೀಲನೆ ಮಾಡಿಸಿದ್ದೇವೆಯೇ, ಪುಟ್‌ಬಾಲ್‌ ಆಡುತ್ತಿರಬಹುದು. ಒಂದೆರೆಡು ಜಿಲ್ಲೆಗಳಲ್ಲಿ ಚನ್ನಾಗಿ ವಾಲಿಬಾಲ್‌ ಆಡುತ್ತಿರಬಹುದು. ಒಂದೆರೆಡು ಜಿಲ್ಲೆಗಳಲ್ಲಿ ಚನ್ನಾಗಿ ಬಿಲ್ಲುವಿದ್ಯೆ ಪ್ರವೀಣರಿರಬಹುದು. ಜಿಲ್ಲಾಮಟ್ಟದಲ್ಲಿ ನಮ್ಮ ಸಂಭಾವ್ಯತೆಗಳ ಮ್ಯಾಪಿಂಗ್‌- ಪರಿಶೀಲನೆ ಮಾಡಬೇಕಾಗಿದೆ, ನಮ್ಮಲ್ಲಿ ಎಲ್ಲಿ ಯಾವ ರೀತಿಯ ಮೂಲ ಸೌಲಭ್ಯಗಳಿವೆ, ಯಾವ ಕ್ರೀಡೆಗೆ ನಮ್ಮಲ್ಲಿ ಒಳ್ಳೆಯ ತರಬೇತುದಾರರಿದ್ದಾರೆ ಮತ್ತು ಆ ಕ್ಷೇತ್ರದಲ್ಲಿ ನಮ್ಮ ಯುವಕರು ಹೇಗೆ ತರಬೇತಿ ಪಡೆಯಬೇಕೆನ್ನುವುದರ ಕುರಿತು ಒತ್ತು ನೀಡಿದರೆ, ನಾವು ಹಿಂದುಸ್ತಾನದ ಎಲ್ಲೆಡೆಗಳಿಂದ ಎಲ್ಲಾ ರೀತಿಯ ಕ್ರೀಡೆಗಳನ್ನು ಆಡುತ್ತಿದ್ದರೆ, ನಾವು ಎಲ್ಲಿಯೂ ಏನನ್ನೂ ಬೆಳಕಿಗೆ ತರದಿದ್ದರೆ ಈ ಕ್ಷೇತ್ರದಲ್ಲಿ ಪ್ರಗತಿ ಸಾಧ್ಯವಿಲ್ಲ. ಇಂದು ಈ ಕ್ಷೇತ್ರದಲ್ಲಿ ಸಂಪೂರ್ಣ ಬದಲಾವಣೆ ಮಾಡುವ ಅತ್ಯಾವಶ್ಯಕತೆಯಿದೆ.

ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ನಮ್ಮ ಯುವಶಕ್ತಿಯ ಉಪಯೋಗ ಹೇಗಾಗುತ್ತದೆ? ಈ ದಿಕ್ಕಿನಲ್ಲಿ ನಾವು ಎಂದಾದರೂ ಯೋಚಿಸಿದ್ದೇವೆಯೇ? ಒಳ್ಳೆಯ ಚರ್ಚೆ, ಒಳ್ಳೆಯ ನಾಯಕತ್ವದ ಗುಣ, ಗ್ರಾಮದ ಸಮಸ್ಯೆಗಳನ್ನು ತಿಳಿಯುವ ಪ್ರಯತ್ನದಲ್ಲಿ ನಮ್ಮ ಯುವ ಶಕ್ತಿಯ ಉಪಯೋಗ ಹೇಗಾಗುತ್ತಿದೆ. ಇಂದು ದೇಶದಲ್ಲಿ ಡಿಜಿಟಲ್ ಮೂಮೆಂಟ್‌ ನೆಡೆಯುತ್ತಿದೆ. ಯುವ ಸಮಾಜವು ಬಹಳ ವೇಗವಾಗಿ ಈ ವಿಷಯಗಳನ್ನು ಬೇಗ ತಿಳಿಯುವ ಸ್ವಭಾವವನ್ನು ಹೊಂದಿದೆ. ನಮ್ಮ ಯುವಕರ ಬಳಿ ಇರುವ ಎಲ್ಲ ವ್ಯವಸ್ಥೆಗಳು, ಸಂಘಟನೆಗಳು, ಸರ್ಕಾರಿ ವ್ಯವಸ್ಥೆಗಳನ್ನು ಇಂತಹ ಕೆಲಸಗಳಲ್ಲಿ ತೊಡಗಿಸಲು ಸಾಧ್ಯವಿಲ್ಲವೇ. ಸ್ವಚ್ಛ ಭಾರತದ ಅಭಿಯಾನವನ್ನು ನೀವು ನೋಡಿರಬಹುದು. ಅನೇಕ ರಾಜ್ಯಗಳ ಅನೇಕ ನಗರಗಳಲ್ಲಿ ಯುವ ಸಂಘಟನೆಗಳು ತಮ್ಮ ನೇತೃತ್ವದಲ್ಲಿಯೇ ಸ್ವಚ್ಛ ಭಾರತ ಅಭಿಯಾನಕ್ಕೆ ಶಕ್ತಿಯನ್ನು ತುಂಬಿವೆ, ಪ್ರಸಿದ್ಧಿಯನ್ನು ತಂದುಕೊಟ್ಟಿವೆ. ಇದರಿಂದಾಗಿ ಅವರ ಸೃಜನಶಿಲತೆಗೆ ಮಾರ್ಗ ತೋರಿಸುವ ಸಜ್ಜುಗೊಳಿಸುವ ಒಂದು ಒಳ್ಳೆಯ ಅವಕಾಶ ದೊರೆತಿದೆ.

ಕೆಲವು ದಿನಗಳ ಹಿಂದೆ ಜನರೊಂದಿಗೆ ಸ್ಥಳೀಯ ಯುವ ಕಲಾಕಾರರೆಲ್ಲ ಒಟ್ಟಿಗೆ ಸೇರಿ ಅನೇಕ ರೈಲು ನಿಲ್ದಾಣಗಳಲ್ಲಿ ಚಿತ್ರ ಬರೆದು ಸುಂದರಗೊಳಿಸಿದ್ದರು. ಜನರು ಹಳೆಯ ಕಾಲದ ರೈಲು ನಿಲ್ದಾಣದೊಂದಿಗೆ ಸೇರಿಕೊಂಡಿದ್ದಾರೆ. ರೈಲು ವಿಭಾಗವಂತೂ ಏನನ್ನೂ ಖರ್ಚು ಮಾಡಲಿಲ್ಲ. ತಮ್ಮ ಬಣ್ಣಗಳನ್ನು ತೆಗೆದುಕೊಂಡು ಬಂದು ತಮ್ಮ ಪ್ರತಿಭೆಯಿಂದ ತಮ್ಮೂರಿನ ರೈಲುನಿಲ್ದಾಣಕ್ಕೆ ಒಂದು ವಿಶೇಷ ಗುರುತನ್ನು ಕೊಟ್ಟರು. ಇಲ್ಲಿಗೆ ಬರುವ ಪ್ರಯಾಣಿಕರು ಪೂರ್ಣ ರೈಲು ನಿಲ್ದಾಣವನ್ನು ನೋಡಿಕೊಂಡು ಹೋಗುತ್ತಾರೆ. ನಮ್ಮ ಯುವಶಕ್ತಿಯನ್ನು ಸೃಜನಾತ್ಮಕ ಕೆಲಸಗಳಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು, ಅವರ ಸಾಮರ್ಥ್ಯದ ಉಪಯೋಗವನ್ನು ಹೇಗೆ ಪಡೆಯಬೇಕೆಂಬ ದಿಕ್ಕಿನಲ್ಲಿ ನಿರಂತರವಾಗಿ ನಾವು ಯೋಚಿಸುತ್ತಿರಬೇಕು, ಅದಕ್ಕಾಗಿ ಹೊಸ-ಹೊಸ ಯೋಜನೆಗಳನ್ನು ರೂಪಿಸುತ್ತಿರಬೇಕು.

ನಮ್ಮಲ್ಲಿ ” NSS, ಣ್ಚ್ಚ್” ನಂತಹ ಸಂಘಟನೆಗಳಿವೆ. ಹೀಗಿರುವಾಗ ನಮ್ಮ ದೇಶದ ಯುವಕರು ಸಾಹಸೀ ಕೆಲಸಗಳಲ್ಲಿ ಯಾಕೆ ಹಿಂದೆ ಉಳಿಯಬೇಕು. ಅವರ ಮನಸ್ಸಿನಲ್ಲಿ ಸಾಹಸಪೂರ್ಣ ಜೀವನದ ಆಕಾಂಕ್ಷೆ ಏಕಿರಬಾರದು. ಅವರು ತಮ್ಮ ಅಲ್ಪ ಸಮಯವನ್ನು, ರಜಾದಿನಗಳ ಸಮಯವನ್ನು ಅಲ್ಲೇಕೆ ಕಳೆಯಬಾರದು. ನಮ್ಮ ದೇಶದಲ್ಲಿ ಕೆಲವೊಮ್ಮೆ ನಾವು ಗಮನಿಸವುದೇನೆಂದರೆ – ವೈಟ್ ಕಲರ್ ಜಾಬ್ ಮಾತ್ರ ಒಳ್ಳೆಯ ಕೆಲಸ ಉಳಿದವುಗಳೆಲ್ಲ ಉಪಯೋಗವಿಲ್ಲದವು ಎಂಬ ವಿಚಾರಧಾರೆಯಿದೆ. ವಿಶ್ವದೆಲ್ಲೆಡೆ ನಮ್ಮ ಯುವಕರು ಹೋದಾಗ ವಾರಾಂತ್ಯದ ಶನಿವಾರ ಭಾನುವಾರಗಳಲ್ಲಿ ಹೋಟೆಲಿನಲ್ಲಿ ಕೆಲಸ ಮಾಡಿದರೆ ಅವರಿಗೆ ಸಂಕೋಚವಾಗುವುದಿಲ್ಲ, ಏಕೆಂದರೆ ಅಲ್ಲಿ ಅವರು ಅದೇ ಸಂಸ್ಕೃತಿಯನ್ನು ನೋಡುತ್ತಾರೆ. ಭಾರತದ ಯುವಕರ ಮನಸ್ಸಿನಲ್ಲಿಯೂ ಕೂಡ ಕೆಲಸದ ಕುರಿತು ಗೌರವವಿರಬೇಕು. ಕೈಯಿಂದ ಮಾಡುವಂತಹ ಕೆಲಸ ಯಾವುದೇ ಕೆಟ್ಟ ಕೆಲಸವಾಗಿರುವುದಿಲ್ಲ. ನಮಗೆ ಬೇಕಾದ ನೀರನ್ನು ನಾವು ಕೈಯಲ್ಲಿ ತೆಗೆದುಕೊಂಡು ಕುಡಿದರೆ ಅದು ಕೆಟ್ಟದ್ದೇನೂ ಅಲ್ಲ. ನಾವು ಹೇಗೆ ಈ ಸಂಸ್ಕಾರ ಮತ್ತು ಪರಂಪರೆಗಳನ್ನು ಅಭಿವೃದ್ಧಿ ಪಡೆಸಬೇಕು. ಹೀಗೆ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಣ್ಣಪುಟ್ಟ ಸಂಘಟನೆಗಳು ಬದಲಾವಣೆಗಳನ್ನು ತರಲು ಸಾಧ್ಯವೆ, ಈ ದಿಕ್ಕಿನಲ್ಲಿ ಪ್ರಯತ್ನ ಪಡುವ ಅವಶ್ಯಕತೆಯಿದೆ. ನಮ್ಮ ಸಾಂಸ್ಕೃತಿಕ ಪರಂಪರೆ ಅತ್ಯಮೂಲ್ಯವಾದುದು. ವಿಶ್ವದ ಮೇಲೆ ಪ್ರಭಾವ ಬೀರಬಲ್ಲ ಸಾಂಸ್ಕೃತಿಕ ಪರಂಪರೆ ನಮ್ಮಲ್ಲಿದೆ. ಆದರೆ ಯಾವ ರೀತಿ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದೆದುರು ಪ್ರಸ್ತುತ ಪಡಿಸಬೇಕಿತ್ತೋ ಅದು ಸಾಧ್ಯವಾಗಿಲ್ಲ, ಏಕೆಂದರೆ ನಾವು ನಮ್ಮೊಳಗಿನ ವಿಶ್ವಾಸವನ್ನು ಕಳೆದುಕೊಂಡಿದ್ದೇವೆ. ತಮ್ಮ ಪೂರ್ವಜರ ಬಗ್ಗೆ, ತಮ್ಮ ಪೂರ್ವ ಪರಂಪರೆಗಳ ಬಗ್ಗೆ, ತಮ್ಮ ಸಂಸ್ಕೃತಿಯ ಕುರಿತು, ತಮ್ಮ ತಲೆಮಾರುಗಳ ಬಗ್ಗೆ ಹೆಮ್ಮೆ ಪಡದ ಯಾವ ದೇಶವಿರುತ್ತದೆ. ನಮ್ಮ ಪರಂಪರೆಯ ಕುರಿತು ನಮಗೇ ಗೌರವ-ಹೆಮ್ಮೆ ಇಲ್ಲದಿದ್ದರೆ ಜಗತ್ತಿಗೆ ನಾವೇನು ತೋರಿಸಬಲ್ಲೆವು. ನಮ್ಮಲ್ಲಿರುವಂತಹ ವಸ್ತು ವಿಷಯಗಳ ಕುರಿತು ಹೆಮ್ಮೆಯ ಭಾವನೆಯಿರಬೇಕು, ಅದು ಶಿಕ್ಷಣದ ಒಂದು ಭಾಗವಾಗಿರಬೇಕು, ಅದು ನಮ್ಮ ಯುವಕರ ಪ್ರವೃತ್ತಿಯ ಒಂದು ಭಾಗವಾಗಿರಬೇಕು ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದೆದುರು ಒಂದು ಅತ್ಯಮೂಲ್ಯ ಪರಂಪರೆಯ ರೂಪದಲ್ಲಿ ಪ್ರಸ್ತುತಪಡಿಸುವ ನಿರಂತರ ಪ್ರಯತ್ನಗಳಾಗುತ್ತಿರಬೇಕು. ಕೇವಲ ಕೆಲವು ಕಲಾಮಂಡಳಿಗಳಿವೆ, ಅವುಗಳ ಕಾರ್ಯಗಳಿವೆ ಎಂದು ತಿಳಿದು ಮುಂದುವರೆದರೆ ಅದರಿಂದ ಉಪಯೋಗವಾಗುವುದಿಲ್ಲ. ಇವು ಸಮಾಜದ ಭಾಗಗಳಾಗಬೇಕು. ಅವುಗಳನ್ನು ಸಮಾಜದ ಒಂದು ಭಾಗವನ್ನಾಗಿ ಮಾಡಿ ಮುನ್ನೆಡೆದರೆ ಅವಶ್ಯವಾಗಿ ಒಂದು ವಿಶೇಷ ಫಲಿತಾಂಶವು ಸಿಗುವುದು. ನಮ್ಮ ಪ್ರಯತ್ನಗಳನ್ನು ಈ ದಿಕ್ಕಿನಲ್ಲಿ ಮುಂದುವರೆಸಬೇಕಿದೆ.

ಜಗತ್ತಿನ ಅನೇಕ ದೇಶಗಳು ಪ್ರವಾಸಿಗರು ಹೊರಗಿನಿಂದ ಬರಲಿ, ಇಲ್ಲಿ ಉಳಿದುಕೊಳ್ಳಲಿ, ಟೆಕ್ನಾಲಜಿಯನ್ನು ಉಪಯೋಗಿಸಲಿ ಎಂಬ ಉದ್ದೇಶವನ್ನಿಟ್ಟುಕೊಂಡು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದಾಗ ಕೃತಕ ಮನರಂಜನೆಗಾಗಿ ಹಾಗೂ ಮನರಂಜನೆಯ ಸೌಲಭ್ಯಗಳಿಗಾಗಿ ಅನೇಕ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬೇಕಾಯಿತು.

ನಮ್ಮಲ್ಲಿ ಸಾವಿರಾರು ವರ್ಷಗಳ ಪೂರ್ವದ ಅಮೂಲ್ಯ ವಸ್ತುಗಳಿವೆ ಮತ್ತು ಜಗತ್ತಿನ ಬಹುದೊಡ್ಡ ಒಂದು ವರ್ಗ ಇದರ ಬಗ್ಗೆ ಆಸಕ್ತಿಯನ್ನು ಹೊಂದಿದೆ. ಆದರೆ ನಾವು ಇವುಗಳ ಕುರಿತು ಗಮನ ಹರಿಸಿಲ್ಲ. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಕುರಿತು ಬಹಳ ಹೆಮ್ಮೆ-ಗೌರವಗಳೊಂದಿಗೆ ವಿಶ್ವದ ಜನತೆಗೆ ಹೇಳಿದಾಗ ಮಾತ್ರ ಅದು ಸಾಧ್ಯವಾಗುತ್ತದೆ.

ನಾವು ಎಷ್ಟು ಗೌರವದಿಂದ ತಾಜಮಹಲ್‌ ಕುರಿತು ಚರ್ಚೆ ಮಾಡುತ್ತೇವೆಯೋ ಅಷ್ಟೇ ಗೌರವದಿಂದ ಅನೇಕ ಪ್ರಕಾರದ, ನಮ್ಮ ಸಂಗೀತವನ್ನೇ ತೆಗೆದುಕೊಳ್ಳಿ, ನಮ್ಮ ವಾದ್ಯಗಳನ್ನೇ ತೆಗೆದುಕೊಳ್ಳಿ, ನಮ್ಮ ವಾದ್ಯಗಳ ಪರಂಪರೆಯನ್ನೇ ತೆಗೆದುಕೊಳ್ಳಿ , ನಮ್ಮ ಸಂಗೀತದ ರಾಗ-ವಿರಾಗಗಳನ್ನೇ ತೆಗೆದುಕೊಳ್ಳಿ ,ಜಗತ್ತಿಗೆ ಇದೊಂದು ದಿಗ್ಭ್ರಮೆಗೊಳಿಸುವ ಸಂಗತಿಯಾಗಿದೆ. ಅಂದರೆ ನಮ್ಮಲ್ಲಿ ಎಷ್ಟು ಪರಂಪರೆಗಳಿವೆ, ಭಾರತದಲ್ಲಿ ಎಷ್ಟು ತಿಂಡಿ-ತಿನಸುಗಳಿವೆ ಎಂದು ನಾವು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ನಾವು ಹಿಂದುಸ್ತಾನದಲ್ಲಿ ಹುಟ್ಟಿದವರು ಪ್ರತಿದಿನ ಹೊಸ ರಾಜ್ಯದ ಹೊಸ ಆಹಾರ ಶೈಲಿಯ ಆಹಾರವನ್ನು ತಿನ್ನಲು ಪ್ರಾರಂಭಿಸಿದರೆ ಬಹುಶಃ ನಮ್ಮ ಒಂದು ಜನ್ಮ ಸಾಕಾಗುವುದಿಲ್ಲ. ಇಷ್ಟು ವಿವಿಧತೆಗಳಿವೆ. ಸಂಪೂರ್ಣ ಜಗತ್ತಿಗೆ ಈ ವಿವಿಧತೆಗಳನ್ನು ನಾವು ಪರಿಚಯಿಸಿದ್ದೇವೆ. ನಮ್ಮ ದೇಶದ ಒಂದು ಮೂಲೆಯಲ್ಲಿ ಪಿಜ್ಜಾ ಹಟ್‌ ಇದ್ದರೆ 2000 ಕಿ.ಮಿ. ದೂರದ ಇನ್ನೊಂದು ಮೂಲೆಯಲ್ಲಿ ಅದೇ ರೀತಿಯ ಪಿಜ್ಜಾ ಹಟ್‌ ಇರುತ್ತದೆ ಎಂದೇನಿಲ್ಲ. ಒಂದು ಮೂಲೆಯಲ್ಲಿ ಯಾವ ವಿಧಾನದಲ್ಲಿ ಪಿಜ್ಜಾ ಮಾಡುತ್ತಾರೋ ಅದೇ ವಿಧಾನದಲ್ಲಿ ಇಲ್ಲಿಯೂ ಪಿಜ್ಜಾ ತಯಾರಾಗುತ್ತದೆ. ಯಾವ ಪದಾರ್ಥಗಳು ಅಲ್ಲಿರುತ್ತವೋ ಅವೇ ಪದಾರ್ಥಗಳು ಇಲ್ಲಿರುತ್ತವೆ.

ಭಾರತದ ದಕ್ಷಿಣದಲ್ಲಿ ಈಗ ಅಕ್ಕಿ ಕಾಣೆಯಾಗಿ ಗೋಧಿಯ ಆಹಾರ ಪದ್ಧತಿ ನಡೆಯುತ್ತಿದೆ . ವಿಶ್ವದೆದುರು ಇದೇ ವಿವಿಧತೆಗಳನ್ನು ಪ್ರಬಲವಾಗಿ ನಾವಿಡಬಹುದು. ಆದರೆ ನಮ್ಮಲ್ಲಿರುವ ಈ ವಿಶೇಷತೆ ವಿಷಯಗಳ ಕುರಿತು ನಾವು ಗಮನವನ್ನು ಹರಿಸಿಯೇ ಇಲ್ಲ. ಪ್ರತಿ ರಾಜ್ಯಕ್ಕೆ ತನ್ನದೇ ಆದ ಒಂದು ಪರಿಚಯ ಇರಬಾರದೇ. ನಾವು ಎಲ್ಲಿಯವರೆಗೆ ನಮ್ಮ ರಾಜ್ಯದ ವಿಶೇಷತೆಯ ಪರಿಚಯ ಮಾಡಿಸುವುದಿಲ್ಲವೋ ಅಲ್ಲಿಯವರೆಗೆ ನಾವು ವಿಶ್ವದೆಲ್ಲೆಡೆ ಗುರುತಿಲ್ಲದಂತೆಯೇ ಇರುತ್ತೇವೆ. ನಮ್ಮ ರಾಜ್ಯದೊಳಗೆಯೂ ಕೆಲವು ಪ್ರದೇಶಗಳು ತನ್ನದೇ ಆದ ವಿಶೇಷ ಪರಿಚಯವನ್ನು ನೀಡುತ್ತಿರುತ್ತವೆ. ನೀವು ಹಿಮಾಚಲ ಪ್ರದೇಶದ ಹೋಗಿ ಸೋಲನ್‌ ಪ್ರದೇಶಕ್ಕೆ ಹೋದರೆ ಅಲ್ಲಿ ಇದನ್ನು ಅಣಬೆ ನಗರ ಎಂದು ಜನಪ್ರಿಯಗೊಳಿಸಿರುವ ಬೋರ್ಡ್‌ಗಳು ಕಂಡುಬರುತ್ತವೆ. ಒಂದುವೇಳೆ ನೀವು ಸೂರತ್‌ ನಗರದೆಡೆಗೆ ಹೋದರೆ ಅಲ್ಲಿನ ಜನರು ಅದನ್ನು ರೇಷ್ಮೆ ನಗರ ಎಂದು ಜನಪ್ರಿಯಗೊಳಿಸಿದ್ದಾರೆ. ನಾವು ನಮ್ಮ ಇಂತಹ ಪರಂಪರೆಗಳಿರುವ ಪ್ರದೇಶಗಳನ್ನು, ನಗರಗಳನ್ನು ಬಹು ಜಾಗರೂಕರಾಗಿ ವಿಶೇಷವಾಗಿ ಬ್ರಾಂಡಿಂಗ್‌ ಮಾಡುವುದಿಲ್ಲ. ನಾವು ಈ ದಿಕ್ಕಿನಲ್ಲಿ ಜಾಗೃತರಾಗಿ ಪ್ರಯತ್ನ ಮಾಡುತ್ತಿಲ್ಲ. ನೀವು ಒಟ್ಟಿಗೆ ಕುಳಿತು ಚರ್ಚಿಸಿದರೆ ಇದರಲ್ಲಿ ಅನೇಕ ವಿಷಯಗಳು ಬೆಳಕಿಗೆ ಬರುತ್ತವೆ.

ಪ್ರವಾಸೋದ್ಯಮವು ಇಂದು ವಿಶ್ವದಲ್ಲಿ ಬಹಳ ವೇಗವಾಗಿ ಮುಂದುವರೆಯುತ್ತಿರುವ ವ್ಯಾವಹಾರಿಕ ಕ್ಷೇತ್ರವಾಗಿದೆ. ಬಹಳ ವೇಗವಾಗಿ ಅದರ ಪ್ರಗತಿಯಾಗುತ್ತಿದೆ. ವಿಶ್ವದಲ್ಲಿ ಮಾಧ್ಯಮ ವರ್ಗ , ಮೇಲ ಮಾಧ್ಯಮ ವರ್ಗ ಗಳ ಪ್ರಮಾಣವು ಹೆಚ್ಚುತ್ತಿದೆ. ಈ ಜನರು ತಮ್ಮ ಹಣವನ್ನು ಹೊರಗೆ ಹೋಗಿ ಖರ್ಚು ಮಾಡಲು ತಯಾರಾಗಿದ್ದಾರೆ.

ಭಾರತದಂತಹ ದೇಶವು ವಿಶ್ವದ ಪ್ರವಾಸೋದ್ಯಮದಲ್ಲಿ ತನ್ನನ್ನು ಗುರಿಯಾಗಿಸಿಕೊಂಡು ವಿಶ್ವ ಪ್ರವಾಸಿಸ್ಥಳಗಳ ರೂಪದಲ್ಲಿ ಯೋಚಿಸಬಹುದೇ. ವಿಶ್ವಕ್ಕೆ ಏನು ಬೇಕು, ನಮ್ಮ ದೇಶದ ಯಾವ ಪ್ರದೇಶದಲ್ಲಿ ಏನಿದೆ, ನಾವೆಂದಾದರೂ 50 ದೇಶಗಳ ಪ್ರವಾಸಿಗರ ಮನಃಶಾಸ್ತ್ರವನ್ನು ವಿಶ್ಲೇಷಣೆ ಮಾಡಿದ್ದೇವೆಯೇ? ಅವರಲ್ಲಿ ಯುರೋಪಿನ ಪ್ರವಾಸಿಗರು ಯಾವ ಯಾವ ಪ್ರದೇಶಗಳನ್ನು ನೋಡಲು ಬಯಸುತ್ತಾರೆ, ಇಂತಿಂಥಹ ಪ್ರದೇಶಗಳು ಅವರಿಗಿಷ್ಟವಾಗುತ್ತವೆ. ಹಿಂದುಸ್ತಾನದ ಇಂತಹ ಮೂಲೆಯಲ್ಲಿರುವ ಇಂತಹ ಪ್ರದೇಶಗಳಿಗೆ ಯುರೋಪಿನ ಪ್ರವಾಸಿಗರನ್ನು ನಾವು ಆಕರ್ಷಿಸಬೇಕೆಂಬ ವಿಚಾರಗಳನ್ನು ಮಾಡಿಕೊಳ್ಳಬೇಕು. ನಾವು ನಮ್ಮ ಹಿಂದುಸ್ತಾನದಲ್ಲಿಯೂ ನಮ್ಮ ಸಂಭಾವ್ಯತೆಯನ್ನು ಹೇಳಿಲ್ಲ, ಅದರ ನಕ್ಷೆ ಮಾರ್ಗಸೂಚಿಯನ್ನು ರೂಪಿಸಿಲ್ಲ, ವಿಶ್ವದ ಪ್ರವಾಸಿಗರಿಗೆ ಏನು ಇಷ್ಟವಾಗುತ್ತೆಂಬುದನ್ನು ನಾವು ನೋಡಿಲ್ಲ.

ವಿಶ್ವದ ಪ್ರತಿಯೊಂದು ವರ್ಗದ ಪ್ರತಿಯೊಬ್ಬರಿಗೂ ಒಂದೊಂದು ಆಯ್ಕೆ ಇರುತ್ತದೆ, ಎಲ್ಲಿಯವರೆಗೆ ಅವರಿಗೆ ಆ ವಸ್ತುಗಳು ಸಿಗುವುದಿಲ್ಲವೋ ಅಲ್ಲಿಯವರೆಗೆ ಅವರು ಪ್ರವಾಸ ಮಾಡುತ್ತಿರುತ್ತಾರೆ. ಪಕ್ಷಿ ವೀಕ್ಷಕರು , ಬಹುಶಃ ವಿಶ್ವದಲ್ಲಿ ಅತ್ಯಂತ ಹೆಚ್ಚು ಖರ್ಚು ಮಾಡುವವರು ಯಾರಾದರೂ ಇದ್ದರೇ ಅವರು ಈ ಪಕ್ಷಿ ವೀಕ್ಷಕರು. ಅವರು ಎಲ್ಲಿಗೆ ಹೋಗುವರೋ ಅಲ್ಲಿ ತಿಂಗಳುಗಟ್ಟಲೇ ಕ್ಯಾಮರಾ ಹಿಡಿದುಕೊಂಡು ತಿರುಗುತ್ತಿರುತ್ತಾರೆ ಮತ್ತು ಒಂದೊಂದು ಪಕ್ಷಿಯ ಹಿಂದೆ ಬಿದ್ದಿರುತ್ತಾರೆ. ಒಂದೊಂದು ಗುಬ್ಬಿಯ ಹಿಂದೆ ಬಿದ್ದಿರುತ್ತಾರೆ. ಅವರು ಬಹಳ ಹಣ ಖರ್ಚು ಮಾಡುತ್ತಾರೆ. ನಮ್ಮಲ್ಲಿ ಇದರ ಬಗ್ಗೆ ಎಲ್ಲಾದರೂ ನಕ್ಷೆ ಮಾರ್ಗಸೂಚಿ ಇದೆಯೇ ?

ಇಂತಹ ಪಕ್ಷಿಗಳನ್ನು ನೋಡಲು ಈ ರಾಜ್ಯಕ್ಕೆ ಹೋಗಿ, ಈ ಪ್ರದೇಶಕ್ಕೆ ಹೋಗಿ, ಈ ಕಾಲದಲ್ಲಿ ಹೋಗಿ. ವಿಶ್ವದ ಪಕ್ಷಿ ವೀಕ್ಷಕರ ಕ್ಲಬ್‌ಗಳಿಗೆ ಹಿಂದುಸ್ತಾನದ ಈ ಮೂಲೆಯಲ್ಲಿ ಪಕ್ಷಿ ವೀಕ್ಷಕರು ಗಳಿಗೆ ಇಂತಹ ಪ್ರದೇಶಗಳಿವೆ ಎಂಬ ಮಾಹಿತಿ ಏನಾದರೂ ಇದಿಯೇ. ನಾವೇನಾದರೂ ಇವೆರಡನ್ನೂ ಲಿಂಕ್ ಮಾಡಿದ್ದೇವೆಯೇ? ಭಾರತದಲ್ಲಿ ನಾಲ್ಕುನೂರು ಪ್ರದೇಶಗಳು ಈ ವೀಕ್ಷಣೆಗೆ ತುಂಬಾ ಒಳ್ಳೆಯ ನಿರ್ದಿಷ್ಟ ಸ್ಥಳಗಳಾಗಲು ಯೋಗ್ಯವೆಂದು ತಿಳಿದುಬಂದಿದೆ. ಇವರಿಗೆ ಒಳ್ಳೆಯ ಮೂಲ ಸೌಲಭ್ಯಗಳೇನಾದರೂ ಬೇಕೇನು? ಅವರಿಗೆ ಯಾವ ಪ್ರಕಾರದ ಸೌಲಭ್ಯಗಳು ಬೇಕು? ನಾವು ಇಂತಹ ಗುರಿಯೊಂದಿಗಿನ ಅಭಿವೃದ್ಧಿಯ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆಯೆ? ನಾವು ಗುರಿಯೊಂದಿಗಿನ ಅಭಿವೃದ್ಧಿಯ ದಿಕ್ಕಿನಲ್ಲಿ ಕಾರ್ಯನಿರ್ವಹಿಸಿದರೆ ಬಹಳ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭವನ್ನು ಹೊರತೆಗೆಯಬಹುದು, ಇಂತಹ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಬಹುದು.

ನೀವು ನೋಡಿರಬಹುದು, ಇಂತಹ ಮರುಭೂಮಿಯಲ್ಲಿಯೂ ಸಹ ಎಷ್ಟು ದೊಡ್ಡದಾದ ಪ್ರವಾಸಿ ಸ್ಥಳವನ್ನು ನಿರ್ಮಿಸಬಹುದೆಂದು ನೀವೀಗ ಅರಿತಿರಬಹುದು. ಈಗ ಇಲ್ಲಿಗೆ ಬಂದವರು ಬಹುಶಃ ನೋಡಿರದೇ ಇರಬಹುದು, ಆದರೆ ಯಾರು ನಿನ್ನೆ ಬಂದಿದ್ದರೋ ಅಥವಾ ಬೆಳಿಗ್ಗೆ ಬಂದಿರುವರೋ ಅವರು ನೋಡಿರಬಹುದು. ಈ ಕಾರ್ಯಾಗಾರವನ್ನು ಕಚ್ಛ್‌ನ ಮರುಭೂಮಿಯಲ್ಲಟ್ಟಿರುವುದಕ್ಕೆ ಇದೂ ಕೂಡ ಒಂದು ಕಾರಣ. ಒಂದು ವೇಳೆ ನಾವು ಪ್ರಯತ್ನಪಟ್ಟಲ್ಲಿ ಜನರಿಗೆ ನಮ್ಮ ವಸ್ತುಗಳನ್ನು ತಲುಪಿಸಬಹುದೆಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆಯಾಗಿದೆ. ತಮ್ಮ ಅಕ್ಕ-ಪಕ್ಕ ಇಷ್ಟು ದೊಡ್ಡ ಬಿಳಿ ಮರುಭೂಮಿ ಇದೆ ಎಂದು ಇಲ್ಲಿರುವ ಕಚ್ಛ್‌ನ ಜನರಿಗೇ ಗೊತ್ತೇ ಇರಲಿಲ್ಲ. ಕಚ್ಛ್‌‌ನ ರಣೋತ್ಸವವು ಪ್ರಾರಂಭವಾದಾಗ ತನ್ನಿಂದ ತಾನೆ ಬಹುದೊಡ್ಡ ಪ್ರಮಾಣದಲ್ಲಿ ಅಂದಾಜು ಪ್ರತಿ ಜಿಲ್ಲೆಗೆ 25000 ಕೋಟಿ ರೂಪಾಯಿಗಳವರೆಗೆ ಇಲ್ಲಿ ವ್ಯಾಪಾರ ವಹಿವಾಟು ಆಗುತ್ತದೆ. ಕರಕುಶಲ ವಸ್ತುಗಳ ವ್ಯಾಪಾರವಾಗುತ್ತದೆ. ಒಂದೇ ವ್ಯವಸ್ಥೆಯನ್ನು ಮಾಡುವುದರಿಂದ ವಿಶ್ವದ ಯಾತ್ರಾರ್ಥಿ ಗಳನ್ನು ಹೇಗೆ ಆಕರ್ಷಿಸಬಹುದೆಂದು ನೀವೇ ನೋಡಿ. ನೀವೇ ಇಂದು ಇದೆಲ್ಲವನ್ನೂ ನೋಡುತ್ತಿದ್ದೀರಿ.

ನಮ್ಮ ಪ್ರವಾಸಿ ಸ್ಥಳಗಳಲ್ಲಿ ದಿಕ್ಸೂಚಿಗಳು , ಬೋರ್ಡ್‌ಗಳು ಯಾವ ಭಾಷೆಯಲ್ಲಿರಬೇಕೆಂಬ ಸರಿಯಾದ ಮಾಹಿತಿ ವ್ಯವಸ್ಥೆ ಇಲ್ಲ. ಒಂದುವೇಳೆ ಗೋವಾ ಪ್ರದೇಶಕ್ಕೆ ರಷ್ಯನ್ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದರೆ, ಗೋವಾ ರಾಜ್ಯದ ಜನರು ರಷ್ಯನ್ ಭಾಷೆಯನ್ನು ಕಲಿಯಲು ಬಯಸುತ್ತಾರೆ, ಗೋವಾ ರಾಜ್ಯದ ಸಣ್ಣ- ಸಣ್ಣ ವ್ಯಾಪಾರಿಗಳು ಹರಕು-ಮುರುಕು ರಷ್ಯನ್‌ ಭಾಷೆಯಲ್ಲಿ ಮಾತನಾಡುವುದನ್ನು ನೀವು ನೋಡಿರಬಹುದು. ಏಕೆಂದರೆ, ಇಲ್ಲಿಗೆ ಬರುವ ಪ್ರಯಾಣಿಕರಲ್ಲಿ ಹೆಚ್ಚು ಜನ ರಷ್ಯಾದಿಂದ ಬಂದವರಾಗಿದ್ದರು. ಆಗ ಅವರಿಗೆ ರಷ್ಯನ್ ಭಾಷೆ ಕಲಿಯುವುದು ಆವಶ್ಯಕವೆನಿಸಿತು. ಆದರೆ ನಾವು ಇದನ್ನು ಪ್ರಯತ್ನಿಸುತ್ತೇವೆಯೇ? ಕುಲು -ಮನಾಲಿಗೆ ಯುರೋಪಿಯನ್‌ ಪ್ರಯಾಣಿಕರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರೆ, ಅಲ್ಲಿ ಯುರೋಪಿನ ಯಾವುದಾದರೂ ಭಾಷೆಯ ದಿಕ್ಸೂಚಿಗಳು ಇವೆಯೇ? ಇದರ ಬಗ್ಗೆ ನಾವು ಎಚ್ಚರಿಕೆಯನ್ನು ವಹಿಸಿಲ್ಲ. ಇದರ ಪರಿಣಾಮವೆಂದರೆ ನಮಗೆ ಯಾತ್ರಿಕಸ್ನೇಹಿ ಅನುಕೂಲಕರ ವಾತಾವರಣವನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಅದರಿಂದಾಗಿ ನಮಗೆ ಸಿಗಬೇಕಾದ ಲಾಭ ಸಿಗುತ್ತಿಲ್ಲ.

ನೀವಿಂದು ಕಚ್ಛ್‌ನಲ್ಲಿ ಕುಳಿತಿದ್ದೀರ, ಕಚ್ಛ್‌ನಿಂದ ಎರಡನೂರು, ಎರಡನೂರಾ ಐವತ್ತು ಕಿ.ಮಿ. ದೂರದಲ್ಲಿ ಧೌಲಾವಿರಾ ಸ್ಥಳವಿದೆ. ಧೌಲಾವಿರಾ ಐದು ಸಾವಿರ ವರ್ಷಗಳ ಹಿಂದಿನ ನಗರದ ರಚನೆಯಾಗಿದೆ, ಇದು ಮೆಹಂಜೋದಾರೊ ಕಾಲದ್ದಾಗಿದೆ. ನೀವು ಅಲ್ಲಿಗೆ ಹೋಗುವ ಕಾರ್ಯಕ್ರಮವೇನಾದರೂ ಮಾಡಿಕೊಂಡಿದ್ದರೆ, ಐದು ಸಾವಿರ ವರ್ಷಗಳಿಗಿಂತ ಮೊದಲೇ ಆ ನಗರದಲ್ಲಿ ದಿಕ್ಸೂಚಿಗಳಿರುವುದನ್ನು ನೀವು ನೋಡಬಹುದು. ಈ ಕಡೆಗೆ ಹೋದರೆ ಇಂತಹ ಸ್ಥಳಗಳು ಸಿಗುತ್ತವೆ, 500 ಮೀಟರ್‌ಗಳ ನಂತರ ಇಂತಹ ಸ್ಥಳಗಳಿವೆ, ಎಡಭಾಗಕ್ಕೆ ತಿರುಗಿದರೆ ಇಂತಹ ಸ್ಥಳ, ಹೀಗೆ ಅನೇಕ ದಿಕ್ಸೂಚಿಗಳು ಅಲ್ಲಿವೆ. ಐದು ಸಾವಿರ ವರ್ಷಗಳ ಹಿಂದಿನ ಆ ಕಾಲದಲ್ಲಿಯೇ ಧೌಲಾವಿರಾ ನಗರದಲ್ಲಿ ಹೊರಗಿನ ಯಾತ್ರಿಕರ ಓಡಾಟವಿರುವುದು ಕಂಡುಬರುತ್ತದೆ. ಹಾಗಾಗಿಯೇ ಅವರಿಗೆ ದಿಕ್ಸೂಚಿಗಳ ಅವಶ್ಯಕತೆ ಇದ್ದಿರಬೇಕು. ಧೌಲಾವಿರಾವನ್ನು ವಿಶ್ವದ ಮೊದಲ ದಿಕ್ಸೂಚಿ ವ್ಯವಸ್ಥೆಗೆ ಉದಾಹರಣೆಯಾಗಿ ನೋಡಲಾಗುತ್ತದೆ. ನಮ್ಮ ಪ್ರವಾಸಿ ಸ್ಥಳಗಳ ದಿಕ್ಸೂಚಿಗಳಿಗೆ ಸಂಬಂಧಿಸಿದಂತೆ ಕೆಲವೊಂದು ಸಾಮಾನ್ಯ ವ್ಯವಸ್ಥೆಗಳನ್ನು ಮಾಡಬಹುದಲ್ಲವೇ? ಹೀಗೆಂದು ನಾವೆಂದಾದರೂ ಯೋಚಿಸಿದ್ದೇವೆಯೇ? ಇದರ ಬಗ್ಗೆ ಇಲ್ಲಿ ಬರೆದಿದೆ, ಇದರ ಅರ್ಥ ಇದು ಮತ್ತು ನನಗೆ ಇಂತಹದು ಇಲ್ಲಿ ದೊರೆಯುತ್ತದೆ ಎಂದು ಹೊರಗಿನಿಂದ ಬರುವವರಿಗೆ ಅನಿಸಬೇಕು. ವೈಜ್ಞಾನಿಕವಾಗಿ ನಮ್ಮ ಪ್ರವಾಸೋದ್ಯಮವನ್ನು ಅಭಿವೃದ್ಧಪಡಿಸಲು ನಾನೊಂದು ಸಣ್ಣ ಉದಾಹರಣೆ ಕೊಟ್ಟೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ನಮ್ಮ ಮಾತೃಭಾಷೆಯಲ್ಲಿಯೇ ದಿಕ್ಸೂಚಿ‌ಗಳನ್ನುಮತ್ತು ಅಲ್ಲಗೆ ಸಂಬಂಧಿಸಿದ ಎಲ್ಲಾ ಸಾಹಿತ್ಯವನ್ನು ನಮ್ಮ ಭಾಷೆಯಲ್ಲಿಯೇ ಬರೆಸಿದರೆ, ನಮ್ಮ ಪ್ರವಾಸಿ ಸ್ಥಳಗಳಿಗೆ ಬರುವ ಹೆಚ್ಚು ಪ್ರಯಾಣಿಕರು ಇಂಗ್ಲೀಷ್‌ ಮಾತನಾಡುವವರಾದರೆ, ನಾವು ಅಷ್ಟು ಖರ್ಚು ಮಾಡಿದ ಮೇಲೆಯೂ ನಮ್ಮ ಪ್ರವಾಸಿ ಸ್ಥಳಗಳಿಗೆ ಯಾವುದೇ ಮಾರುಕಟ್ಟೆ- ಪ್ರಚಾರ ದೊರೆಯುವುದಿಲ್ಲ.

ನಮ್ಮ ಪ್ರವಾಸಿ ಸ್ಥಳಗಳಿಗೆ ಗಳಿಗಾಗಿ ವೆಬ್ಸೈಟ್ ಗಳನ್ನು ಅಭಿವೃದ್ಧಿ ಪಡಿಸಲು ಬಯಸುತ್ತೇವೆ. ಆದರೆ ನಮ್ಮ ಹೆಚ್ಚಿನ ವೆಬ್ಸೈಟ್ ಗಳು ನಮ್ಮದೇ ಭಾಷೆಯಲ್ಲಿರುತ್ತವೆ. ನಾವು ವಿಶ್ವದ ಮಾರುಕಟ್ಟೆಯಲ್ಲಿ ಬೆಳಗಬೇಕೆಂದರೆ ಅವರ ಭಾಷೆಯಲ್ಲಿ ನಾವು ವೆಬ್ಸೈಟ್ ನ್ನು ರೂಪಿಸಬೇಕಲ್ಲವೇ? ಇದೇನೂ ವಿಶೇಷ ಖರ್ಚಿನ ವಿಷಯವಲ್ಲವೆಂದು ನಾನು ತಿಳಿದಿದ್ದೇನೆ. ನೀವೆಲ್ಲರೂ ಸೇರಿ ಪ್ರವಾಸೋದ್ಯಮಕ್ಕೆ ಪ್ರಾಮುಖ್ಯತೆ ನೀಡಲೇಬೇಕು ಎಂದು ತೀರ್ಮಾನಿಸಿದಲ್ಲಿ ಅದು ನೆಡೆದೇ ತೀರುವುದು. ಕೆಲವೊಮ್ಮೆ ಪ್ರವಾಸೋದ್ಯಮದಲ್ಲಿ ಜನರೇಕೆ ಬರುತ್ತಿಲ್ಲವೆಂಬ ಚಿಂತೆ ಕಾಡಬಹುದು. ಆಗ ಮೂಲ ಸೌಲಭ್ಯಗಳಿಲ್ಲ, ಅದಕ್ಕಾಗಿ ಜನರು ಬರುತ್ತಿಲ್ಲವೆಂದು ನೀವು ಹೇಳುತ್ತೀರ. ಮೂಲ ಸೌಲಭ್ಯಗಳು ಯಾಕಿಲ್ಲ, ಜನರು ಏಕೆ ಬರುವುದಿಲ್ಲ ಎಂಬುದು ಒಂದು ಇಬ್ಬಗೆ ದ್ವಂದ್ವದ ವಿಚಾರವಾಗಿದೆ. ನೀವೇ ಧೈರ್ಯವಹಿಸಿ ಈ ದ್ವಂದ್ವದಿಂದ ಹೊರಬರಬೇಕು.

ಅಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಅಧಿಕಾರಿಗಳು ಕುಳಿತಿದ್ದಾರೆ. ರಾಜ್ಯ ಸರ್ಕಾರಗಳು ಇಂತಹ ವಿಷಯಗಳನ್ನು ನಿರ್ಣಯಿಸಬಲ್ಲವೆ? ವರ್ಷಕ್ಕೊಮ್ಮೆ ಈ ತರಗತಿಯ ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗುತ್ತಾರೆಂದು ಆಯಾ ರಾಜ್ಯ ಸರ್ಕಾರಗಳು ನಿರ್ಣಯಿಸಿದರೆ, ಅವರು ತಮ್ಮ ಹಳ್ಳಿಯ ಬೇರೆ-ಬೇರೆ ಸ್ಥಾನಗಳಿಗೆ ಹೋಗುತ್ತಾರೆ. ಈ ವಯಸ್ಸಿನ ಮಕ್ಕಳು ತಾಲ್ಲೂಕು ಮಟ್ಟದಲ್ಲಿ, ಈ ತರಗತಿಯ ಮಕ್ಕಳು ಜಿಲ್ಲಾಮಟ್ಟದಲ್ಲಿ, ಈ ತರಗತಿಗೆ ಬಂದಾಗ ರಾಜ್ಯ ಮಟ್ಟದಲ್ಲಿ ಪ್ರವಾಸಕ್ಕೆ ಹೋಗುತ್ತಾರೆಂದು ಆಯಾ ರಾಜ್ಯಗಳು ನಿರ್ಣಯಿಸದರೆ, ನಿಧಾನವಾಗಿ ಅವರಿಗೆ ಹಳ್ಳಿಯಲ್ಲೇನಿದೆ, ತಾಲ್ಲೂಕಿನಲ್ಲೇನಿದೆ, ಜಿಲ್ಲೆಯಲ್ಲೇನಿದೆಯಂದು ತಿಳಿದುಬರುತ್ತದೆ. ಅವರು 10 ನೇ ತರಗತಿಗೆ ಬರುವುದರೊಳಗೆ ಅವರಿಗೆ ಎಲ್ಲವೂ ತಿಳಿಯುತ್ತದೆ. ಆದರೆ ನಾವು ಹೀಗೆ ಮಾಡುವುದಿಲ್ಲ. ನಮ್ಮಲ್ಲಿ ಐದನೇ ತರಗತಿಯ ವಿದ್ಯಾರ್ಥಿಗಳಿದ್ದು, ಆ ಶಿಕ್ಷಕ ಉದಯಪುರವನ್ನು ನೋಡಿಲ್ಲವಾದರೆ, ಅವರೆಲ್ಲರನ್ನು ಉದಯಪುರಕ್ಕೆ ಕರೆದುಕೊಂಡು ಹೋಗುತ್ತಾನೆ. ತನ್ನ ಹಳ್ಳಿಯನ್ನೇ ಅವನು ಸರಿಯಾಗಿ ನೋಡಿರುವುದಿಲ್ಲ.

ನಮ್ಮ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ ಮತ್ತು ಪ್ರವಾಸೋದ್ಯಮ ಮಂತ್ರಾಲಯಗಳ ಇಲಾಖೆಗಳ ನಡುವೆ ಹೊಂದಾಣಿಕೆ ಇರಬೇಕು. ನಮ್ಮ ರಾಜ್ಯದಲ್ಲಿ 10 ಪ್ರದೇಶಗಳನ್ನು ಪ್ರವಾಸಿ ಸ್ಥಾನಗಳೆಂದು ಗುರುತಿಸಿಕೊಂಡು ಅಭಿವೃದ್ಧಿಪಡಿಸಬೇಕಿದೆ. ಎಲ್ಲರೂ ಒಟ್ಟಿಗೆ ಸೇರಿ ನಿರ್ಣಯಿಸಿ. ಆ ಹತ್ತು ಸ್ಥಾನಗಳಲ್ಲಿ ಯಾವ ಹೋಟೆಲ್ಲೂ ಇಲ್ಲ, ರೆಸ್ಟೋರೆಂಟ್‌ಗಳೂ ಇಲ್ಲ, ಊಟ-ನೀರಿನ ವ್ಯವಸ್ಥೆ ಇಲ್ಲ, ಆದರೆ ಅದು ಆಕರ್ಷಣೀಯ ಸ್ಥಳವೆಂದು ನಿಮಗೆ ಗೊತ್ತಿದೆಯೇ. ನಿಮ್ಮ ರಾಜ್ಯದಲ್ಲಿರುವ ಸಂಪನ್ಮೂಲಗಳನ್ನು ಕ್ರೂಢೀಕರಿಸುವ ಕುರಿತು ನೀವು ಯೋಚಿಸಿದ್ದೀರಾ? ನಮ್ಮ ಎಲ್ಲ ವಿಶ್ವವಿದ್ಯಾಲಯಗಳು ಐದು ವರ್ಷಗಳವರೆಗೆ ಪ್ರವಾಸಿಗರ ರೂಪದಲ್ಲಿ ಎಲ್ಲಿಗಾದರೂ ಹೋಗಬೇಕಿದ್ದರೆ, ಮೊದಲು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಿದ ನಮ್ಮ ಈ ಹತ್ತು ಪ್ರವಾಸಿ ತಾಣಗಳಿಗೆ ಭೇಟಿ ಕೊಡಲೇಬೇಕು ಮತ್ತು ಕಡಿಮೆ ಎಂದರೆ ಎರಡು ರಾತ್ರಿಗಳ ವಾಸ್ತವ್ಯವನ್ನು ಅಲ್ಲಿ ಹೂಡಲೇಬೇಕು. ಒಂದು ರೀತಿಯಲ್ಲಿ ಇದು ಪ್ರವಾಸಿಗರಿಗೆ ಖರ್ಚಾಗಿದ್ದರೆ, ಇನ್ನೊಂದು ರೀತಿಯಲ್ಲಿ ಅದು ಹೂಡಿಕೆ ಆಗಿರುತ್ತದೆ. ಪ್ರತಿದಿನ ಹಳ್ಳಿಗೆ ಕಾಲೇಜು ವಿದ್ಯಾರ್ಥಿಗಳ ಹತ್ತು ಬಸ್ಸುಗಳು ಬಂದರೆ, ಹಳ್ಳಿಯ ಜನರಿಗೂ ಸಹ ಪ್ರವಾಸಿಗರು ಬರುತ್ತಿದ್ದಾರೆ ಎನಿಸುತ್ತದೆ; ಕಡ್ಲೇಕಾಯಿ, ಚುರುಮುರಿ ಅಂಗಡಿಗಳನ್ನೇ ತೆರೆಯಲಿ, ಪಕೋಡಾ ಮಾರುವ ಅಂಗಡಿಗಳನ್ನು ತೆರೆಯಲಿ, ನೀರು ಬೇಕಾದರೆ ನೀರನ್ನೇ ಕೊಡಲಿ. ಹೀಗೆಯೇ ನಿಧಾನವಾಗಿ ಅಭಿವೃದ್ಧಿಯಾಗುತ್ತದೆ. ಆದರೆ ನಮ್ಮ ಪ್ರವಾಸಿ ಸ್ಥಳವನ್ನು ಅಭಿವೃದ್ಧಿ ಮಾಡಲು ಮೊದಲು ಪ್ರವಾಸಿಗರನ್ನು ಕಳುಹಿಸಬೇಕು. ಪ್ರಾಯಶಃ ನಾವು ಹಿಂದುಸ್ತಾನದ ಪ್ರತಿಯೊಂದು ರಾಜ್ಯವು ಐದು ಸ್ಥಳಗಳನ್ನು ಪ್ರವಾಸಿಸ್ಥಾನಗಳನ್ನಾಗಿ ಮಾಡುವ ನಿರ್ಣಯವನ್ನು ತೆಗೆದುಕೊಳ್ಳಬೇಕು. ಐದು ಸ್ಥಾನಗಳನ್ನು ವಿಶ್ವಮಟ್ಟಕ್ಕೆ ಏರಿಸುವ ಮನಸ್ಸನ್ನು ಇಟ್ಟುಕೊಳ್ಳಬೇಕು. ಮೊದಲ ಎರಡು ಮೂರು ವರ್ಷಗಳಲ್ಲಿ ಜನರು ಬರಲಿ ಬಿಡಲಿ, ನಮ್ಮ ರಾಜ್ಯದ ವಿದ್ಯಾರ್ಥಿಗಳು ಅಲ್ಲಿಗೆ ಹೋಗಲು ಪ್ರಾರಂಭಿಸಬೇಕು. ಅಲ್ಲಿ ತನ್ನಿಂದ ತಾನೆ ಬದಲಾವಣೆ ಆಗಲು ಪ್ರಾರಂಭಿಸುತ್ತದೆ, ಪ್ರವಾಸಿಗರು ಬರಲು ಶುರು ಮಾಡುತ್ತಾರೆ.

ಈ ಕಚ್ಛ್ ಮರುಭೂಮಿಯಲ್ಲಿಯೂ ಜನರು ವಾಸಿಸುತ್ತಿದ್ದಾರೆ. ಪ್ರಾರಂಭದಲ್ಲಿ ಇಲ್ಲಿಗೆ ಗುಜರಾತಿನ ಜನರೇ ಬಂದಿದ್ದರು; ಅನಂತರ ಹೆಚ್ಚು ಹೆಚ್ಚೆಂದರೆ ಮುಂಬಯಿಯ ಜನರು ಬರಲು ಪ್ರಾರಂಭಿಸಿದರು. ಆದರೆ ಕಳೆದ ಒಂದು ವರ್ಷದಿಂದ ಆನ್‌ಲೈನ್‌ ಬುಕ್ಕಿಂಗ್‌ ಪ್ರಾರಂಭವಾಯಿತು. ಮೊದಲು ನಾವು ಇಂತಹ ಪ್ರಯತ್ನಗಳನ್ನು ಮಾಡಬೇಕು. ಆಗ ಮಾತ್ರ ಪ್ರವಾಸಿಸ್ಥಳಕ್ಕೆ ಅವಶ್ಯವಾದ ಮೂಲಸೌಕರ್ಯಗಳು ದೊರಕುತ್ತವೆ. ಆಗ ಮಾನವ ಸಂಪನ್ಮೂಲದ ಚಿಂತನೆ ನೆಡೆಸಬೇಕು. ನಮ್ಮಲ್ಲಿ ಪ್ರವಾಸಿಸ್ಥಳಗಳಿವೆ, ಅವು ಧಾರ್ಮಿಕ ಕ್ಷೇತ್ರಗಳಾಗಿವೆ ಅಲ್ಲಿ ಯಾತ್ರಿಕರು ಹೋಗುತ್ತಾರೆ, ನಮ್ಮ ದೌರ್ಭಾಗ್ಯವೆಂದರೆ ಅಲ್ಲಿನ ನಮ್ಮ ಗೈಡ್‌ಗಳಿಗೆ ಸ್ಕಿಲ್‌‌ ಡೆವಲಪ್‌ಮೆಂಟ್‌, ಮಾನವ ಸಂಪನ್ಮೂಲ ನಿರ್ವಹಣೆಯ ಯಾವುದೇ ಶೈಕ್ಷಣಿಕ ಕೋರ್ಸ್‌‌ಗಳಿಲ್ಲ. ಗೈಡ್‌ಗಳ ರೂಪದಲ್ಲಿ ಆ ನಗರದ ಯುವಕರು ಯಾಕೆ ಪರಿಣಿತರಾಗಬಾರದು, ಅವರಿಗೆ ವಿಶೇಷ ತರಬೇತಿಯನ್ನು ಯಾಕೆ ಕೊಡಬಾರದು? ಅವರಲ್ಲಿ ಸ್ಪರ್ಧೆ ಏಕಾಗಬಾರದು? ಅವರಿಗೆ ವಿಶೇಷ ವಸ್ತ್ರವಿನ್ಯಾಸ ಏಕಿರಬಾರದು? ನಾವು ಎಲ್ಲಿಯವರೆಗೆ ವೃತ್ತಿಪರತೆಯನ್ನು ಅಳವಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾವು ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ.

ಎರಡು ರೀತಿಯ ಪ್ರವಾಸೋದ್ಯಮಗಳ ಅಭಿವೃದ್ಧಿಯಲ್ಲಿ ಭಾರತವು ತನ್ನ ಗಮನವನ್ನು ಹರಿಸಬೇಕು; ಒಂದು ಪರಂಪರಾಗತ ಪ್ರವಾಸಿಗರು; ಎಂದಾದರೊಮ್ಮೆ ತನ್ನ ಮಾತಾ-ಪಿತೃಗಳಿಗೆ ಗಂಗಾಸ್ನಾನ ಮಾಡಿಸಬೇಕೆಂದು ಪ್ರತಿಯೊಬ್ಬ ಮಗನ ಇಚ್ಛೆಯಾಗಿರುತ್ತದೆ; ತನ್ನ ತಂದೆ-ತಾಯಿಗೆ ಯಾವಾಗಲಾದರೂ ಒಮ್ಮೆ ಚಾರ್‌ಧಾಮ್‌ಗಳ ಯಾತ್ರೆ ಮಾಡಿಸಬೇಕೆಂದಿರುತ್ತದೆ; ಪ್ರತಿಯೊಬ್ಬ ಮಗನಿಗೂ ತನ್ನ ತಂದೆ- ತಾಯಿಗೆ ಶಿವನ ದೇವಾಲಯಕ್ಕೆ ಕರೆದುಕೊಂಡು ಹೋಗಬೇಕು, ಗಣೇಶನ ದೇವಸ್ಥಾನಕ್ಕೆ ಕರೆದುಕೊಂಡು ಹೋಗಬೇಕು ಎನ್ನುವಂತಹದು ಸ್ವಾಭಾವಿಕವಾದುದು. ಪರಂಪರೆಯಿಂದ ಬಂದ ಕಾರಣ ಈ ಕ್ಷೇತ್ರಗಳಿಗೆ ಅವರು ಹೋಗಿಯೇ ಹೋಗುತ್ತಾರೆ, ವ್ಯವಸ್ಥೆಗಳಿದ್ದರೂ ಇದ್ದರೂ ಹೋಗುತ್ತಾರೆ, ತೊಂದರೆಗಳಿದ್ದರೂ ಹೋಗುತ್ತಾರೆ.

ಈ ನೂರಿಪ್ಪತ್ತೈದು ಕೋಟಿ ಜನರ ಅವರದೇ ಅದ ಇಂತಹದೊಂದು ದೊಡ್ಡ ಮಾರುಕಟ್ಟೆ ಇದೆ. ನಾವೆಂದಾದರೂ ಅದರ ಕುರಿತು ಯೋಚಿಸಿದ್ದೇವೆಯೇ? ಮತ್ತು ನಮ್ಮ ನೂರಿಪ್ಪತ್ತೈದು ಕೋಟಿ ದೇಶವಾಸಿಗಳು ಸಹಜವಾಗಿ ಯಾತ್ರೆಗೆ ಹೋಗಲು ಬಯಸುತ್ತಿರುವಾಗ, ನಾವು ವೈಜ್ಞಾನಿಕವಾಗಿ ಯೋಚಿಸಿ ಅಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಿದರೆ ಅವು ವಿಶ್ವದ ಪ್ರವಾಸಿಗರಿಗೂ ಕೂಡ ಆಕರ್ಷಣೆಯ ಕೇಂದ್ರಗಳಾಗುತ್ತವೆ.

ಇನ್ನೊಂದು ರೀತಿಯ ಪ್ರವಾಸಿಗರೆಂದರೆ, ವಿದೇಶಗಳಿಂದ ನಮ್ಮ ದೇಶಕ್ಕೆ ಬಂದು ಇಲ್ಲಿನ ವಿಶೇಷ ಸ್ಥಳಗಳನ್ನು ವಸ್ತುಗಳನ್ನು ನೋಡಲು ಬಯಸುತ್ತಾರೆ. ಅವರಿಗೆ ಬೀಚ್‌ ಟೂರಿಸಂನ ಬಗ್ಗೆ ಆಸಕ್ತಿ ಇರಬಹುದು, ಸಾಹಸ ಪ್ರವಾಸೋದ್ಯಮದ ಬಗ್ಗೆ ಆಸಕ್ತಿ ಇರಬಹುದು, ಕ್ರೀಡಾ ಟೂರಿಸಂ ಕುರಿತು ಆಸಕ್ತಿ ಇರಬಹುದು, ಅವರಿಗೆ ಹಿಮಾಲಯದ ಹಿಮಾಚ್ಛಾದಿತ ಸ್ಥಳಗಳಿಗೆ ಹೋಗುವ ಆಸಕ್ತಿ ಇರಬಹುದು, ಅವರಿಗೆ ತಾಜ್‌ಮಹಲ್‌ ಅಥವಾ ಕುತುಬ್‌ ಮೀನಾರ್‌ಗಳನ್ನು ನೋಡುವ ಬಯಕೆಯಿರಬಹುದು, ಇಂತಹ ಪ್ರವಾಸಿಗರು ಬೇರೊಂದು ವರ್ಗಕ್ಕೆ ಸೇರಿದವರಾಗಿರುತ್ತಾರೆ. ನಾವು ನಮ್ಮ ಪ್ರವಾಸಿಗರಿಗೆ ಅಗತ್ಯವಾಗಿ ಒದಗಿಸಬೇಕಾದ ವ್ಯವಸ್ಥೆಗಳ ಕುರಿತು ಯೋಚಿಸದೇ ಇದ್ದರೆ, ನಾವು ಪ್ರವಾಸೋದ್ಯಮಕ್ಕೆ ಒತ್ತು ಕೊಡಲು ಸಾಧ್ಯವಾಗುವುದಿಲ್ಲ.
ನೀವೆಲ್ಲರೂ ಅಲ್ಲಿ ಕುಳಿತಿದ್ದೀರ. ಬಹುಶಃ ಅಲ್ಲೊಂದು ಕಾರ್ಯಕ್ರಮದ ಕುರಿತು ಚರ್ಚೆಯಾಗುತ್ತದೆ, ಅದೇ “ಏಕ ಭಾರತ, ಶ್ರೇಷ್ಠ ಭಾರತ”. ಮಾನವ ಸಂಪನ್ಮೂಲ ಸಚಿವಾಲಯದ ಅಧಿಕಾರಿಗಳೂ ಸಹ ಅಲ್ಲಿ ಕುಳಿತಿದ್ದಾರೆ. ಏಕ ಭಾರತ, ಶ್ರೇಷ್ಠ ಭಾರತ, ನಮಗೆ ಭಾರತದಂತಹ ದೇಶವನ್ನು ಮುನ್ನೆಡೆಸಲು ಬಹಳ ಶ್ರಮ ಪಡುವ ಅವಶ್ಯಕತೆಯಿದೆ.

ಏನಾಯಿತೆಂದರೆ, ನಾವು ನೋಡಿ ಸ್ವಾಮಿ ಇದಾದರೂ ಆಗಬಹುದು, ಇಲ್ಲವೇ ಅದಾದರೂ ಆಗಬಹುದು ಎಂದು ಜನರಿಗೆ ಹೇಳಿದೆವು. ಆದರೆ ಇಷ್ಟು ದೊಡ್ಡ ದೇಶದಲ್ಲಿ ಇದಾದರೂ ಆಗಬಹುದು ಇಲ್ಲವೇ ಅದಾದರೂ ಆಗಬಹುದು ಇಂತಹ ಧೋರಣೆ ಸರಿಯಲ್ಲ. ನಮ್ಮ ದೇಶದಲ್ಲಿ ಯಾರಾದರೂ ಫ್ರೆಂಚ್ ಭಾಷೆಯನ್ನು ತಿಳಿದಿದ್ದರೆ, ನಾವು ಎದೆಯುಬ್ಬಿಸಿ ನೋಡಿ ನಮ್ಮ ಮನೆಯ ಪಕ್ಕದ ಹುಡುಗ ಫ್ರೆಂಚ್ ಭಾಷೆಯನ್ನು ಮಾತನಾಡುತ್ತಾನೆ; ನಮ್ಮ ಹುಡುಗರಲ್ಲಿ ಯಾರಾದರೂ ಸ್ಪ್ಯಾನಿಷ್ ಭಾಷೆಯನ್ನು ತಿಳಿದಿದ್ದರೆ, ನಾವು ನೋಡಿ ನಮ್ಮ ಹುಡುಗ ಸ್ಪ್ಯಾನಿಷ್ ಭಾಷೆಯನ್ನು ಕಲಿತಿದ್ದಾನೆ ಎಂದು ಹೇಳುತ್ತೇವೆ. ಆದರೆ ನಾವು ದೇಶದೊಳಗೆ ಈ ವಾತಾವರಣವನ್ನು ರೂಪಿಸುವುದಿಲ್ಲ. ಹರಿಯಾಣಾದ ಹುಡುಗ ತೆಲುಗು ಭಾಷೆಯನ್ನು ಕಲಿತು ಮಾತನಾಡಬೇಕು; ಗುಜರಾತಿನ ಹುಡುಗ ಮಲಯಾಳಮ್‌ ಭಾಷೆಯನ್ನು ಕಲಿಯಲು ಮನಸ್ಸು ಮಾಡಬೇಕು, ಮತ್ತು ಅವನು ಮಲಯಾಳಮ್‌ ಭಾಷೆಯನ್ನು ಕಲಿತರೆ, ಅವನಿಗೆ ಅದರ ಬಗ್ಗೆ ಗೌರವದ ಅನುಭವ ಆಗಬೇಕು.

ನಾವು ನಮ್ಮ ದೇಶದೊಳಗಿನ ಪರಂಪರೆಗಳ ಬಗ್ಗೆ ಗೌರವವನ್ನು ಸೂಚಿಸುತ್ತಿಲ್ಲ. ಯಾವ ದೇಶಗಳಲ್ಲಿ 100ಕ್ಕೂ ಹೆಚ್ಚು ಭಾಷೆಗಳಿವೆಯೋ, 1700 ಕ್ಕೂ ಹೆಚ್ಚು ಉಪಭಾಷೆಗಳಿವೆಯೋ, ಆ ದೇಶ ಎಷ್ಟು ಶ್ರೀಮಂತವಾದುದು! ನಾವೆಂದಾದರೂ ಈ ಪರಂಪರೆಯೊಂದಿಗೆ ಯುವ ಪೀಳಿಗೆಯನ್ನು ಜೋಡಿಸುವ ಯೋಚನೆಯನ್ನು ಮಾಡಿದ್ದೇವೆಯೇ? ನಾವು ಯಾವಾಗಲೂ ಜಗತ್ತಿನ ದೇಶಗಳಲ್ಲಿ ಇಂತಹುದಿದೆ ಎಂಬ ನೆನಪನ್ನಿಟ್ಟುಕೊಳ್ಳುತ್ತೇವೆ, ಆದರೆ ನಮ್ಮದೇ ದೇಶದಲ್ಲಿ ಅಥವಾ ನಮ್ಮದೇ ರಾಜ್ಯದ ಯಾವ ಮೂಲೆಯಲ್ಲಿ ಏನೇನಿದೆ ಎಂಬುದರ ಜ್ಞಾನ ನಮಗಿಲ್ಲ. ಭಾರತವು ಬಹಳ ವಿಶಾಲವಾದ ದೇಶ, ನಮ್ಮ ಮುಂದಿನ ಪೀಳಿಗೆಗೆ ಚೆನ್ನಾಗಿ ಭಾರತದ ಪರಿಚಯವನ್ನು ಮಾಡಿಸಬೇಕು, ಸರಿಯಾಗಿ ಅವರನ್ನು ದೇಶದೊಂದಿಗೆ ಜೋಡಿಸಬೇಕು ಮತ್ತು ಸರ್ದಾರ್ ಪಟೇಲರ ಜಯಂತಿಯ ದಿನದಂದು “ಏಕ ಭಾರತ, ಶ್ರೇಷ್ಠ ಭಾರತ” ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಎರಡು ರಾಜ್ಯಗಳು ತಮ್ಮ ಸಂಬಂಧಗಳನ್ನು ಒಂದರೊಡನೆ ಇನ್ನೊಂದು ಹೇಗೆ ಅಭಿವೃದ್ಧಿಪಡಿಸಬೇಕು ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ಎರಡೂ ರಾಜ್ಯಗಳು ಪ್ರಾರಂಭದಲ್ಲಿ ಒಂದರ ಜೊತೆಗೆ ಇನ್ನೊಂದು ಎಂ ಓ ಯು ಮಾಡಿಕೊಳ್ಳುತ್ತವೆ, ನಾವು ವಿಶ್ವದ ಅನೇಕ ದೇಶ ರಾಜ್ಯಗಳೊಂದಿಗೆ ಹೀಗೆ ಮಾಡಿಕೊಳ್ಳುತ್ತೇವೆ, ವಿಶ್ವದ ನಗರಗಳೊಂದಿಗೆ ಕೂಡ ಮಾಡಿಕೊಳ್ಳುತ್ತೇವೆ. ಆದರೆ, ನಮ್ಮ ದೇಶದೊಳಗೆ ಇದನ್ನು ಮಾಡುವುದಿಲ್ಲ. ಹರಿಯಾಣಾವು ತೆಲಂಗಾಣಾ ರಾಜ್ಯದೊಂದಿಗೆ ಮಾಡಿಕೊಂಡರೆ, ಹರಿಯಾಣಾದ ಯುವಕರು ಪ್ರವಾಸಿಗರ ರೂಪದಲ್ಲಿ ವರ್ಷಪೂರ್ತೀ ತೆಲಂಗಾಣಾ ರಾಜ್ಯಕ್ಕೆ ಏಕೆ ಹೋಗಬಾರದು? ತೆಲಂಗಾಣಾದ ಯುವಕರು ಪ್ರವಾಸಿಗರ ರೂಪದಲ್ಲಿ ವರ್ಷಪೂರ್ತೀ ಹರಿಯಾಣಾ ರಾಜ್ಯಕ್ಕೆ ಏಕೆ ಹೋಗಬಾರದು? ಹರಿಯಾಣಾದ ಪಾರಂಪರಿಕ ಆಟೋಟಗಳು, ತೆಲಂಗಾಣಾದ ಪಾರಂಪರಿಕ ಆಟೋಟಗಳು; ಇವೆರಡರ ಆಟೋಟಗಳ ಕಾರ್ಯಕ್ರಮಗಳನ್ನು ಹರಿಯಾಣಾ ಮತ್ತು ತೆಲಂಗಾಣಾಗಳಲ್ಲಿ ಪರಸ್ಪರ ಏಕೆ ಆಯೋಜಿಸಬಾರದು? ಹರಿಯಾಣಾದಲ್ಲಿ ತೆಲಗು ಚಲನಚಿತ್ರಗಳ ಫಿಲ್ಮ್ ಫೆಸ್ಟಿವಲ್‌ ಏಕೆ ಆಯೋಜಿಸಬಾರದು? ತೆಲಂಗಾಣಾದಲ್ಲಿ ಹರಿಯಾಣಾದ ಫಿಲ್ಮ್ ಫೆಸ್ಟಿವಲ್‌ ಏಕೆ ಆಗಬಾರದು? ಹರಿಯಾಣಾ ರಾಜ್ಯದಲ್ಲಿ ತೆಲಗು ಭಾಷೆಯ ನಾಟ್ಯ ಮಹೋತ್ಸವವನ್ನು ಏಕೆ ಆಯೋಜಿಸಬಾರದು? ತೆಲಂಗಾಣಾ ರಾಜ್ಯದಲ್ಲಿ ಹರಿಯಾಣದ ನಾಟ್ಯ ಮಹೋತ್ಸವವನ್ನು ಏಕೆ ಆಯೋಜಿಸಬಾರದು? ಹರಿಯಾಣಾ ರಾಜ್ಯದ ಮಕ್ಕಳು ಒಂದೇ ವರ್ಷದಲ್ಲಿ 100 ತೆಲುಗು ವಾಕ್ಯಗಳನ್ನು ಕಲಿಯಬಹುದು, ಮಾತುಕತೆಗಾಗಿ 100 ವಾಕ್ಯಗಳು. ತೆಲಂಗಾಣಾದ ಮಕ್ಕಳಿಗೆ ಹರಿಯಾಣವಿ ಭಾಷೆಯ 100, ಹಿಂದಿ ಭಾಷೆಯ ವಾಕ್ಯಗಳನ್ನೂ ಕಲಿಸಬಹುದು.

ನೀವೇ ನೋಡಿ, ನೋಡದೆಯೇ ಪ್ರಯತ್ನ ಪಡದೆಯೇ ಪ್ರತಿ ರಾಜ್ಯದಲ್ಲಿ ತನ್ನ ಹತ್ತು ಅಥವಾ ಎಂಟನೇ ಪದಗಳಲ್ಲಿ ಬೇರೆ ರಾಜ್ಯದ ಭಾಷೆಯ ಪದವನ್ನು ಬಳಸುತ್ತೇವೆ. ಯಾರಾದರೂ ಬಂದಾಗ ಅವನು ತಮಿಳುನಾಡಿನವ ರೆಂದು ಅನಿಸಿದರೆ, “ಬನ್ನಿ, ಬನ್ನಿ ಸ್ವಾಮಿ ವಣಕ್ಕುಂ” ಎಂದು ಹೇಳಿ ನಮ್ಮ ಮಾತನ್ನು ಪ್ರಾರಂಭಿಸುತ್ತೇವೆ. ಇದರಿಂದ ಮಾತುಕತೆ ಕೂಡಲೇ ಪ್ರಾರಂಭವಾಗುತ್ತದೆ. ಆದ್ದರಿಂದ “ಏಕ ಭಾರತ, ಶ್ರೇಷ್ಠ ಭಾರತ” ಕಾರ್ಯಕ್ರಮಗಳಿಗೆ ರಾಜ್ಯಗಳು ಮುಂದೆ ಬರಬೇಕೆಂದು ಆಗ್ರಹಿಸುತ್ತೇನೆ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಆಗಿರಲಿ, ಯುವ ಸೇವಾ ಮತ್ತು ಸಾಂಸ್ಕೃತಿಕ ಬೃಹುತಿ/ಇಲಾಖೆಯಾಗಿರಲಿ, ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಇರಲಿ, ಯಾವುದೇ ಇಲಾಖೆಗಳಿರಲಿ ವೇಗವರ್ಧಕ ಕಾರ್ಯಕರ್ತನ ರೂಪದಲ್ಲಿ ಬಹುದೊಡ್ಡ ಕೆಲಸಗಳನ್ನು ಮಾಡಬಹುದು.

ನೀವು, ಒಂದು ರಸಪ್ರಶ್ನಾ ಸ್ಪರ್ಧೆ ಇದೆ ಎಂದು ತಿಳಿಯಿರಿ, ಇತ್ತೀಚಿನ ದಿನಗಳಲ್ಲಿ ನಮ್ಮ ವಿದೇಶ ವಿಭಾಗವು ವಿಶ್ವದೆಲ್ಲೆಡೆ ಹರಡಿರುವ ನಮ್ಮ ಭಾರತೀಯ ಸಮುದಾಯಕ್ಕಾಗಿ ಒಂದು ರಸಪ್ರಶ್ನಾ ಸ್ಪರ್ಧೆಯನ್ನು ಪ್ರಾರಂಭಿಸಿದೆ. ವಿದೇಶದಲ್ಲಿರುವ ಎರಡನೇ – ಮೂರನೇಯ ಪೀಳಿಗೆಯ ಭಾರತೀಯ ಜನರಿಗೆ ನಮ್ಮ ಪೂರ್ವಜರು ಭಾರತದವರೆಂದು ತಿಳಿದಿದೆ, ಆದರೆ ಭಾರತದ ಬಗ್ಗೆ ಅವರಿಗೇನೂ ಗೊತ್ತಿಲ್ಲ. ಹಾಗಾಗಿ ಒಂದು ಆನ್‌ಲೈನ್‌ ಪ್ರಶ್ನೋತ್ತರ ಸ್ಪರ್ಧೆಯನ್ನು ಪ್ರಾರಂಭಿಸಲಾಗಿದೆ. ಕಳೆದ ಐದು ವರ್ಷಗಳಿಂದ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ಮೂಲದ ಭಾರತದಲ್ಲಿ ಜನಿಸದ, ಹಿಂದುಸ್ತಾನವನ್ನೆಂದೂ ನೋಡದ ಐದು ಸಾವಿರ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರು, ಹಿಂದುಸ್ತಾನದ ಕುರಿತು ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸಿದರು ಮತ್ತು ಕಳೆದ ಅಕ್ಟೋಬರ್‌ 2 ರಂದು ಅವರನ್ನು ಸನ್ಮಾನಿಸುವ ಬಹಳ ಸುಂದರವಾದ ಕಾರ್ಯಕ್ರಮವು ನೆರವೇರಿತು.

ನಮ್ಮ ದೇಶದಲ್ಲಿ ಬೇರೆ-ಬೇರೆ ರಾಜ್ಯಗಳ ನಡುವೆ ಆನ್‌ಲೈನ್‌ ಚರ್ಚಾಸ್ಪರ್ಧೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲವೇ? ಒಂದು ವೇಳೆ ಗುಜರಾತ್‌ ರಾಜ್ಯವು ಛತ್ತೀಸ್‌ಗಢ್‌ ರಾಜ್ಯದೊಂದಿಗೆ “ಏಕ ಭಾರತ, ಶ್ರೇಷ್ಠ ಭಾರತ” ದ ಎಂ ಓ ಯು ಮಾಡಿಕೊಂಡಿದ್ದರೆ, ರಸಪ್ರಶ್ನಾ ಸ್ಪರ್ಧೆಯಲ್ಲಿ ಛತ್ತೀಸ್‌ಗಢ್‌ ರಾಜ್ಯದ ಮಕ್ಕಳು ಗುಜರಾತ್‌ ರಾಜ್ಯಕ್ಕೆ ಸಂಬಂಧಿಸಿದ ಐದು ಸಾವಿರ ಪ್ರಶ್ನೆಗಳಿಗೆ ಉತ್ತರ ನೀಡಬೇಕು, ಗುಜರಾತಿನ ಮಕ್ಕಳು ಛತ್ತೀಸ್‌ಗಢ್‌ ರಾಜ್ಯಕ್ಕೆ ಸಂಬಂಧಿಸಿದ ಐದು ಸಾವಿರ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಎಷ್ಟು ಜಿಲ್ಲೆಗಳಿವೆ, ಎಷ್ಟು ಜಾತಿಗಳಿವೆ, ಎಷ್ಟು ಆಡು ಭಾಷೆಗಳಿವೆ, ಎಷ್ಟು ಊಟೋಪಚಾರಗಳಿವೆ, ಎಷ್ಟು ಉಡುಗೆ-ತೊಡುಗೆಗಳಿವೆ, ಯಾವ ವಸ್ತುಗಳು ಎಲ್ಲಿ ಸಿಗುತ್ತವೆ. ಸರಳವಾಗಿ ಎಷ್ಟು ದೊಡ್ಡ ಪ್ರಮಾಣದಲ್ಲಿ ಸಕಲರ ಏಕೀಕರಣವಾಗುತ್ತದೆ ನೀವೇ ನೋಡಿ. ಒಂದು ವೇಳೆ ಆ ಹುಡುಗ ನಿಧಾನವಾಗಿ ಹತ್ತು ರಾಜ್ಯಗಳ ಕ್ವಿಝ್ ಕಾಂಪಿಟೇಶನ್‌ನಲ್ಲಿ ಭಾಗವಹಿಸಿದರೆ ಅವನಲ್ಲಿ ಭಾರತಕ್ಕೆ ಸಂಬಂಧಿಸಿದ ಎಷ್ಟು ಮಾಹಿತಿಗಳು ಇರುತ್ತವೆ.

ನಾನು ಎಲ್ಲಾ ರಾಜ್ಯಗಳು ತಮ್ಮ ಸ್ಪರ್ಧೆಯ ಪ್ರಶ್ನೋತ್ತರಗಳ ಬ್ಯಾಂಕ್‌ಗಳನ್ನು ರೂಪಿಸಬೇಕೆಂದು ಬಯಸುತ್ತೇನೆ; ಎರಡು ಸಾವಿರ, ಐದು ಸಾವಿರ, ಏಳು ಸಾವಿರ ಪ್ರಶ್ನೆಗಳು ಮತ್ತು ಉತ್ತರಗಳು, ಸಾಧ್ಯವಾದರೆ ಅವುಗಳಿಗೆ ಸಂಬಂಧಿಸಿದ ಚಿತ್ರಗಳು; ಆನ್‌ಲೈನ್‌ನಲ್ಲಿ ಒಂದು ವೇದಿಕೆಯನ್ನು ಸೃಷ್ಟಿಸಿ ಹಾಗೆಯೇ ರಾಜ್ಯಗಳ ನಡುವೆ ಎಂ ಓ ಯು ಗಳಾಗಲಿ, ಆ ರಾಜ್ಯದ ಮಕ್ಕಳುಗಳ ನಡುವೆ ಭಾಷಣ ಸ್ಪರ್ಧೆಗಳಾಗಲಿ.

ನಾವು ಕೆಲ ದಿನಗಳ ಮೊದಲು ಆಗಸ್ಟ್‌ 15 ಮತ್ತು ಜನವರಿ 26 ಕ್ಕೆ ರಾಜ್ಯಮಟ್ಟದಲ್ಲಿ ಪೊಲೀಸ್ ತಂಡಗಳಿಗೆ ಪೆರೇಡ್ ಗಾಗಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗಿ ಎಂದು ಹೇಳಿದ್ದೇವೆ. ಆ ರಾಜ್ಯದ ಪರೇಡ್ ಇನ್ನೊಂದು ರಾಜ್ಯದ ಪೊಲೀಸ್ ತಂಡ ಪರೇಡ್ ಮಾಡಬೇಕು . ಇಂತಹ ವಿಷಯಗಳು ನಮ್ಮನ್ನು ಹತ್ತಿರ ತರುತ್ತವೆ. ಇಂತಹ ಸಹಜ ಸರಳಗೊಳಿಸುವ ಕಾರ್ಯಗಳಾಗಿವೆ ಮತ್ತು ಇವುಗಳು ಕುರಿತು ನಾವು ಒತ್ತು ನೀಡುತ್ತಿದ್ದೇವೆ. “ಏಕ ಭಾರತ, ಶ್ರೇಷ್ಠ ಭಾರತ” ಕಾರ್ಯಕ್ರಮವನ್ನು ಸಫಲಗೊಳಿಸುವ ದಿಕ್ಕಿನಲ್ಲಿ ನಾವೆಲ್ಲರೂ ಪ್ರಯತ್ನ ಪಡಬೇಕು, ಭಾರತವು ಇಷ್ಟು ವಿವಿಧತೆಗಳಿಂದ ಕೂಡಿದ ದೇಶವಾಗಿದೆ; ನಾವು ನಮ್ಮ ದೇಶದೊಳಗೆಯೇ ನಮ್ಮನ್ನು ಸಮ್ಮಿಲಿತಗೊಳಿಸಿಕೊಳ್ಳಲು ಹೊಣೆಯನ್ನು ಹೊತ್ತುಕೊಂಡರೆ, ಅದು ಜನುಮ ಪೂರ್ಣಗೊಳಿಸಿದರೂ ಸಾಕಾಗದಷ್ಟು ವಿಶಾಲ ದೇಶವಿದೆ; ಇಷ್ಟು ವಿವಿಧತೆಗಳಿಂದ ಕೂಡಿದ ದೇಶವಾಗಿದೆ; ಪ್ರತಿ ಹೊಸ ವಿಷಯಗಳನ್ನು ತಿಳಿಯುತ್ತ ಹೋದಂತೆ ಸಂತೋಷವು ಹೆಚ್ಚುವುದು.

“ಏಕ ಭಾರತ, ಶ್ರೇಷ್ಠ ಭಾರತ” ದಲ್ಲಿ ಹರಿಯಾಣಾವು ತೆಲಂಗಾಣ ರಾಜ್ಯದೊಂದಿಗಿರುವಾಗ ನಾನು ಒಂದು ಕೆಲಸವನ್ನು ಮಾಡಲು ಹೇಳಿದ್ದೇನೆ. ಹರಿಯಾಣಾದ ಶಾಲೆಗಳಲ್ಲಿ ತೆಲುಗು ಭಾಷೆಯ ಐದು ಗೀತೆಗಳನ್ನು ಬಾಯಿಪಾಠ ಮಾಡಿಸಬಹುದೇ? ಐದು ಗೀತೆಗಳನ್ನು ಹಾಡಿಸಲು ಸಾಧ್ಯವೇ? ತೆಲಂಗಾಣಾದ ಜನರಿಗೆ ಹರಿಯಾಣಾದ ಐದು ಹಾಡುಗಳು ಬರುತ್ತವೆಯೇ? ಮತ್ತಿದು ಸಂತೋಷದ ವಿಷಯ, ಅವರಿಗೂ ಆನಂದವಾಗುವುದು, ಇದಕ್ಕಾಗಿ ಹೆಚ್ಚಿನ ಕಷ್ಟ ಪಡಬೇಕಾಗಿಲ್ಲ. ಇದರಿಂದ ಸಹಜವಾಗಿ ನಮ್ಮ ದೇಶದ ವಿವಿಧತೆಗಳನ್ನು ಅರಿತುಕೊಳ್ಳಬಹುದಾಗಿದೆ ಮತ್ತು ಇವೆಲ್ಲವೂ ಪ್ರವಾಸೋದ್ಯಮಕ್ಕೂ ಕೂಡ ಹೆಚ್ಚು ಬಲವನ್ನು ಕೊಡುತ್ತವೆ.

ನಮ್ಮ ಯುವಶಕ್ತಿಗೆ ಚೈತನ್ಯವನ್ನು ತುಂಬುವ ಕೆಲಸವಿದೆ. ಭಾರತವನ್ನು ಜೊತೆಯಾಗಿಡುವ ಭಾರತವನ್ನು ಹೊಸ ಎತ್ತರಗಳಿಗೆ ತೆಗೆದುಕೊಂಡು ಹೋಗುವ ಅವಕಾಶವಿದೆ. ಒಂದು ವಿಷಯ ಸಣ್ಣದೇ ಇರಬಹುದು, ಆದರೆ ಇದು ಎಷ್ಟು ದೊಡ್ಡ ಬದಲಾವಣೆಗಳನ್ನು ತರುತ್ತವೆಂಬುದನ್ನು ನಾವಿಲ್ಲಿ ನೋಡಬಹುದು. ನೀವಿಲ್ಲಿ ಮೂರು ದಿನಗಳವರೆಗೆ ವಿಚಾರ-ಮನನ ಮಾಡುವವರಿದ್ದೀರ, ನೀವೆಲ್ಲರೂ ಇಷ್ಟು ದೂರದಿಂದ ಬಂದಿದ್ದೀರ, ಅದರಲ್ಲೂ ಮುಖ್ಯವಾಗಿ ಮಂತ್ರಿ ಮಂಡಲ ದಿಂದ ಬಂದಂತಹ ಅಧಿಕಾರಿಗಳು ಅವಶ್ಯವಾಗಿ ಒಟ್ಟಿಗೆ ಕುಳಿತುಕೊಂಡು ತಮ್ಮ ಅನುಭವಗಳ ಲಾಭವನ್ನು, ನಿಮ್ಮ ದೂರದೃಷ್ಟಿಯನ್ನು ಎಲ್ಲ ರಾಜ್ಯಗಳಿಗೆ ಕೊಡುತ್ತೀರೆಂದು ನಾನು ಆಶಿಸುತ್ತೇನೆ. ಈ ಮರುಭೂಮಿಯೊಂದಿಗೆ ನನಗೆ ಅವಿನಾಭಾವ ಸಂಬಂಧವಿದೆ, ನಾನು ನಿಮಗೊಂದು ಸಲಹೆ ಕೊಡುತ್ತೇನೆ. ಸಂಜೆ ನೀವು ಮರುಭೂಮಿಗೆ ಹೋದಾಗ, ಮರುಭೂಮಿಯಲ್ಲಿ ಭದ್ರತೆಯವರು ಎಷ್ಟು ದೂರ ಬಿಡುತ್ತಾರೋ ಅಷ್ಟು ದೂರ ಒಳಗೆ ಹೋಗಿ. ಆದರೆ ಸಾಧ್ಯವಾದರೆ ನಿಮ್ಮ ಜೊತೆಗಾರರನ್ನು ಬಿಟ್ಟು 25, 50 ಹೆಜ್ಜೆಗಳಷ್ಟು ದೂರ ಹೋಗಿ ಹತ್ತು ನಿಮಿಷಗಳವರೆಗೆ ಒಬ್ಬಂಟಿಯಾಗಿ ನಿಂತುಕೊಳ್ಳಿ, ಆ ವಿರಾಟ ರೂಪವನ್ನು ನೋಡಿ, ಆ ನೀಲಿ ಆಕಾಶವನ್ನು ಗಮನಿಸಿ, ಆ ಬಿಳಿ ಮರಳಿನ ಹೊದಿಕೆಯನ್ನು ಗಮನಿಸಿ ; ಬಹುಶಃ ನಿಮ್ಮ ಜೀವನದಲ್ಲಿ ಇಂತಹ ಅನುಭವ ಬಹಳ ಅಪರೂಪ ಮತ್ತು ಗೆಳೆಯರೊಂದಿಗೆಯೇ ಹರಟೆ ಹೊಡೆಯುತ್ತಿದ್ದರೆ ಇಂತಹ ಅನುಭವ ಆಗುವುದಿಲ್ಲ. 15, 20 ನಿಮಿಷಗಳವರೆಗೆ ಎಲ್ಲರೂ 20,25 ಹೆಜ್ಜೆಗಳು ಮುಂದೆ ಸ್ವಯಂ ಒಬ್ಬಂಟಿಯಾಗಿ ಹೋಗಿ ನಿಂತುಕೊಳ್ಳಿ. ನಿಜವಾಗಿಯೂ ನಿಮಗೊಂದು ಹೊಸ ಅನುಭವವಾಗುತ್ತದೆ, ಮತ್ತು ಆ ಅನುಭವವನ್ನು ನೀವೆಲ್ಲರೂ ಖಂಡಿತವಾಗಿ ಎಲ್ಲರೊಂದಿಗೆ ಹಂಚಿಕೊಳ್ಳುತ್ತೀರ. ಹತ್ತು ವರ್ಷಗಳ ಮೊದಲು ಈ ಮರುಭೂಮಿಯಲ್ಲಿ ಇಲ್ಲಿಗೆ ಬರಲು ನಾಲ್ಕು-ನಾಲ್ಕು ಘಂಟೆಗಳಾಗುತ್ತಿದ್ದವು. ಇಂದು ನೀವು ಬಹುಶಃ 50 ರಿಂದ 60 ನಿಮಿಷಗಳಲ್ಲಿ ಇಲ್ಲಿಗೆ ತಲುಪಿರಬಹುದು.

ಭೂಕಂಪದ ಅನಂತರ ಎಷ್ಟು ಪರಿವರ್ತನೆ ಆಗಿದೆಯೆಂದು ನೀವು ನೋಡಿದ್ದೀರಿ. ನೀವು ಕುಳಿತಿರುವ ಸ್ಥಳ ಹಿಂದುಸ್ತಾನದ ಕೊನೆಯ ಹಳ್ಳಿ. ಇದರ ಅನಂತರ ಯಾವುದೇ ಜನಸಂಖ್ಯೆ ಇಲ್ಲ. ಈ ಕೊನೆಯ ಹಳ್ಳಿಯ ಕೊನೆಯ ಸ್ಥಳದಲ್ಲಿ ನೀವು ಭಾರತದ ಭವಿಷ್ಯದ ಕುರಿತು ಚಿಂತಿಸುತ್ತಿದ್ದೀರಿ. ಭಾರತದ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಚಿಂತನೆ ನೆಡೆಸುತ್ತಿದ್ದೀರಿ. ಭಾರತ ಯುವ ಶಕ್ತಿಗೆ ಪ್ರೇರಣೆ ನೀಡಲು ಯಾವುದಾದರೂ ಸಂಕಲ್ಪವನ್ನು ಮಾಡಿಕೊಂಡೇ ಇಲ್ಲಿಂದ ಹೊರಡುವಿರಿ.

ನಿಮ್ಮ ಈ ಮಂಥನ ಮುಂದಿನ ದಿನಗಳ ನೀತಿಯನ್ನು ನಿರ್ಧರಿಸುವಲ್ಲಿ ಬಹುದೊಡ್ಡ ಸಕಾರಾತ್ಮಕ ಪಾತ್ರವನ್ನು ನಿರ್ವಹಿಸುವುದು. ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಅನೇಕ ಶುಭಾಶಯಗಳನ್ನು ತಿಳಿಸುತ್ತೇನೆ. ಎರಡು-ಮೂರು ದಿನಗಳ ನಿಮ್ಮ ಈ ಚರ್ಚೆಯ ಪ್ರತಿಯೊಂದು ವಿಷಯವನ್ನು ಬಹಳ ಸೂಕ್ಷ್ಮವಾಗಿ ಗಮನಿಸಲಿದ್ದೇನೆ, ಏಕೆಂದರೆ ಇದು ನನಗೂ ಆಸಕ್ತಿಯ ಕ್ಷೇತ್ರವಾಗಿದೆ.

ಈ ಕ್ಷೇತ್ರದಲ್ಲಿ ಬಹಳ ಸಂಭಾವ್ಯತೆಗಳಿವೆ, ನಾವು ಇದನ್ನು ಮುಂದುವರಿಸಬೇಕು. ನೀವಿಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದೀರಿ, ನಾನು ಅದರ ಪೂರ್ಣ ಲಾಭವನ್ನು ತೆಗೆದುಕೊಳ್ಳಬೇಕೆಂದಿದ್ದೇನೆ, ನನಗೆ ಹೆಚ್ಚು ಹೆಚ್ಚು ಲಾಭ ಸಿಗುವಂತಹ ಕಾರ್ಯವನ್ನು ನೀವು ಅವಶ್ಯವಾಗಿ ಮಾಡಿರಿ. ದೇಶಕ್ಕೆ ಲಾಭ ತರುವಂತಹ ಕೆಲಸವನ್ನಂತೂ ನೀವು ಮಾಡುತ್ತಿದ್ದೀರ, ನಿಮ್ಮ ಈ ಅನುಭವದ ಮೂಲಕ ನನ್ನ ಜ್ಞಾನವರ್ಧನೆಯೂ ಆಗುತ್ತದೆ. ಹಾಗಾಗಿ ನಾನು ಇದನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ.

ಈಗ ನಿಮ್ಮ ಈ ಮೂರು ದಿನಗಳ ವಿಚಾರ-ವಿಮರ್ಶೆಯ ಮಂಥನದಿಂದ ಹೊರಸೂಸುವ ಅಮೃತವನ್ನು ಪಡೆಯಲು ನಾನು ಕಾಯುತ್ತಿರುತ್ತೇನೆ. ನಿಮಗೆಲ್ಲರಿಗೂ ನನ್ನ ಅನೇಕ ಶುಭಾಶಯಗಳು. ನಾನು ವಿಜಯ ರೂಪಾಣಿ ಮತ್ತು ಅವರ ತಂಡದವರಿಗೂ ಶುಭಾಶಯಗಳನ್ನು ಹೇಳುತ್ತೇನೆ. ಏಕೆಂದರೆ ಅವರು ಇದಕ್ಕಾಗಿ ಪ್ರವಾಸೋದ್ಯಮದ ಜನಸಂದಣೆಯ ಈ ಸಮಯದಲ್ಲಿ ಇಂತಹ ಸಮ್ಮೇಳನಕ್ಕೆ ಟೆಂಟ್‌ ಮುಂತಾದವುಗಳನ್ನು ಹೊಂದಿಸುವುದು ಆರ್ಥಿಕವಾಗಿ ಸ್ವಲ್ಪ ಕಷ್ಟಕರ ವಿಚಾರವಾಗಿದ್ದರೂ ಈ ವ್ಯವಸ್ಥೆಗಳನ್ನೆಲ್ಲ ಮಾಡಿದ್ದಾರೆ. ಆದರೆ ಇದರಿಂದಾಗಿಯೇ ದೇಶದೆಲ್ಲೆಡೆಗಳಿಂದ ಆಗಮಿಸಿದ ಎಲ್ಲರೂ ನಿಮ್ಮ ರಣೋತ್ಸವದ ಪ್ರಚಾರ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಕಡೆಯಿಂದಲೇ 50-50 ಜನರು ಹೆಚ್ಚಿಗೆ ಬರಲು ಪ್ರಾರಂಭಿಸಿದರೆ ಇದು ನಿಮಗೆ ಬಂಡವಾಳ ಹೂಡಿಕೆ ಆದಂತಾಗುತ್ತದೆ. ಗುಜರಾತ್‌ ಸರ್ಕಾರಕ್ಕೂ ಸಹ ನಾನು ಶುಭಾಶಯ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಧನ್ಯವಾದಗಳು.

******