Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2016 ಡಿಸೆಂಬರ್ 24 ರಂದು ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

2016 ಡಿಸೆಂಬರ್ 24 ರಂದು ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

2016 ಡಿಸೆಂಬರ್ 24 ರಂದು ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ


ಸಭೆಯಲ್ಲಿ ವಿರಾಜಮಾನರಾಗಿರುವ ಎಲ್ಲ ಗಣ್ಯರೇ ಹಾಗೂ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೇ

2014ರಲ್ಲಿ ಭಾರತೀಯ ಜನತಾ ಪಕ್ಷವು ಚುನಾವಣೆಯ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಹೊರಿಸಿದಾಗ ನಾನು ರಾಯಗಢದ ಕೋಟೆಗೆ ಬಂದಿದ್ದೆ. ಛತ್ರಪತಿಯ ಸಮಾಧಿಯ ಮುಂದೆ ಕುಳಿತು ಈ ವೀರ, ಪರಾಕ್ರಮಿ ಪುರುಷ, ಆಡಳಿತದಲ್ಲಿ ಸುಶಾಸನ ಹಾಗೂ ಪ್ರಶಾಸನದ ಮೂಲಕ ಹಿಂದೂಸ್ಥಾನದ ಚರಿತ್ರೆಯಲ್ಲಿ ಹೊಸ ಅಧ್ಯಾಯವೊಂದನ್ನು ತನ್ನ ಅರ್ಹತೆ ಹಾಗೂ ಸಾಮರ್ಥ್ಯದಿಂದ ಸಂಕಟಗಳ ನಡುವೆ, ಸಂಘರ್ಷಮಯ ಜೀವನನಡೆಸುತ್ತಾ ಬರೆದಿದ್ದರು. ಪ್ರಾಯಶಃ ವಿಶ್ವದ ಇತಿಹಾಸದಲ್ಲಿ ಕೂಡ ಎಡೆಬಿಡದ ಸಂಘರ್ಷಗಳ ನಡುವೆಯೂ ಒಳ್ಳೆಯ ಆಡಳಿತದ ಪರಂಪರೆಯನ್ನು ಬಲಪಡಿಸುತ್ತಾ ಮುಂದುವರೆಸುತ್ತಾ ಬಂದ ಇಂತಹ ಒಂದು ವ್ಯಕ್ತಿತ್ವ ಕಾಣಸಿಗುವುದು ಅಸಂಭವ.ಎಂದೆಲ್ಲಾ ಅನ್ನಿಸಿತ್ತು. ಇಂದು ಅದೇ ಸ್ಥಾನಕ್ಕೆ ಬಂದು ನಾನು ಇಂದು ಎಷ್ಟು ಆನಂದತುಲಿತನಾಗಿದ್ದೇನೆಂದು ನೀವು ಕಲ್ಪಿಸಿಕೊಳ್ಳ ಬಲ್ಲಿರಿ. ಇತಿಹಾಸಕಾರರ,ಚಿತ್ರಕಾರರ ದೃಷ್ಟಿಯಿಂದ ನಾವು ಛತ್ರಪತಿ ಶಿವಾಜಿ ಮಹಾರಾಜರನ್ನು ನೋಡಿದರೆ ಕುದುರೆ, ಕುದುರೆಯ ಮೇಲೆ ಶಿವಾಜಿ ಮಹಾರಾಜರು, ಕೈಯಲ್ಲಿ ಕತ್ತಿ ಇವೆಲ್ಲವುಗಳ ಕಾರಣದಿಂದಾಗಿ ನಮ್ಮ ಮನಸ್ಸಿನಲ್ಲಿ ಒಂದು ಮೂರ್ತಿ ಮೂಡಿಬರುತ್ತದೆ. ಛತ್ರಪತಿ ಶಿವಾಜಿ ಮಹಾರಾಜರದು ಬಹುಮುಖೀ ವ್ಯಕ್ತಿತ್ವ. ಒಂದುವೇಳೆ ನಾವು ಭಗವಂತನಾದ ಶ್ರೀ ರಾಮಚಂದ್ರನನ್ನು ರಾವಣ ಸಂಹಾರದಿಂದ,ಶ್ರೀ ಕೃಷ್ಣನನ್ನು ಕಂಸಾಸುರ ವಧೆಯಿಂದ , ಮಹಾತ್ಮ ಗಾಂಧೀಜಿಯವರನ್ನು ಆಂಗ್ಲರನ್ನು ಭಾರತದಿದ ಓಡಿಸಿದರು ಎಂದಷ್ಟೇ ಅರ್ಥೈಸಿದ್ದೇ ಆದರೆ ನಾವು ಈ ಮಹಾಪುರುಷರ ಪೂರ್ಣ ರೂಪ, ಸ್ವರೂಪಗಳನ್ನು ತಿಳಿಯುವಲ್ಲಿ ಅಸಮರ್ಥರೆಂದರ್ಥ. ಪ್ರಭು ರಾಮಚಂದ್ರರ ರಾವಣ ಸಂಹಾರ ಅವರ ಜೀವನದ ಅನೇಕ ಉದ್ದೇಶ್ಯಗಳಲ್ಲಿ ಒಂದು,ಇದಲ್ಲದೆ ಇನ್ನೂ ಎಷ್ಟೋ ಆಯಾಮ ಉದ್ದೇಶ್ಯಗಳಿದ್ದವು, ಈಗಲೂ ಭಾರತೀಯ ಜೀವನ ಶೈಲಿಯನ್ನು ಪ್ರೇರೇಪಿಸಬಲ್ಲ , ಪ್ರಭಾವಿಸಿರುವ ಎಷ್ಟೋ ಅಂಶಗಳು ಇವರಿಂದ ನಮಗೆ ದೊರೆತಿವೆ.ಶ್ರೀ ಕೃಷ್ಣನ ಜೀವನದಲ್ಲಿ ಕೇವಲ ಕಂಸಾಸುರನೊಬ್ಬನೇ ಒಂದು ಘಟನೆಯಲ್ಲ , ಯುದ್ದಭೂಮಿಯಲ್ಲಿ ಗೀತೋಪದೇಶದ ಕಲ್ಪನೆ ಸಾಧ್ಯವೇ? ನಮ್ಮ ದೇಶದ ಮಣ್ಣೇ ಅಂತದ್ದು ಈ ಮಣ್ಣಿನಲ್ಲಿ ಎಂಥೆಂಥ ಮಹಾನುಭಾವರು ಜನಿಸಿದ್ದಾರೆಂದರೆ ಅವರು ಯುದ್ದಭೂಮಿಯಲ್ಲಿ ಕೊಟ್ಟ ಗೀತೋಪದೇಶ ಸಹಸ್ರಾರು ವರ್ಷಗಳು ಕಳೆದರೂ ಪ್ರೇರಣೆನೀಡಬಲ್ಲ ಚಿಂತನಧಾರೆಯನ್ನು ಪ್ರವಹಿಸುತ್ತಿರಬಲ್ಲದು.ಮಹಾತ್ಮಗಾಂಧಿಯವರು ಸ್ವಾತಂತ್ರಕ್ಕಾಗಿ ಹೋರಾಡಿದರು. ಇಂಗ್ಲೀಷರನ್ನು ಭಾರತದಿಂದ ಹೊರಗೋಡಿಸಲು ಶ್ರಮಿಸುತ್ತಲೇ ಇದ್ದರು. ಆದರೆ ಜೊತೆ-ಜೊತೆಯಲ್ಲೇ ಸಮಾಜದಲ್ಲಿರುವ ಕೆಟ್ಟತನಗಳೊಡನೆಯೂ ಹೋರಾಡಿದರು.ಪ್ರತಿಯೊಬ್ಬನಲ್ಲೂ ಚೈತನ್ಯ ತುಂಬಲು ಯತ್ನಿಸಿದರು.ಸ್ವಾಭಿಮಾನವನ್ನು ಜಾಗೃತಗೊಳಿಸಲು ಪ್ರಯತ್ನಿಸಿದರು. ನಾವು ಎಂದಿಗೂ ಇದನ್ನೆಲ್ಲಾ ಕಡಿಮೆ ಎಂದು ಬಾವಿಸಲೇಬಾರದು. ಇದೇ ರೀತಿ ಶಿವಾಜಿ ಮಹಾರಾಜರನ್ನು ಕುದುರೆ, ಕತ್ತಿ , ಯುದ್ದ ಇವಿಷ್ಟಕ್ಕೇ ಸೀಮಿತಗೊಳಿಸಬಾರದು. ಅವರು ಪರಾಕ್ರಮಿಗಳಾಗಿದ್ದರು, ವೀರರಾಗಿದ್ದರು. ನಮಗೆಲ್ಲಾ ಪ್ರೇರಣದಾಯಕರಾಗಿದ್ದರು. ಇದರೊಡನೆಯೇ ಕಲ್ಪಿಸಿಕೊಳ್ಳಿ ಹೇಗೆ ರಾಮನು ಚಿಕ್ಕ-ಚಿಕ್ಕ ವಾನರ ಸೈನ್ಯ ಕಟ್ಟಿ ಯುದ್ದಮಾಡಿ ಗೆಲುವನ್ನು ಪಡೆದನೋ ಅದರಲ್ಲಿ ಎಂತಹ ಸಂಘಟನಾ ಕೌಶಲ್ಯ ಕಂಡುಬರುತ್ತದೆ. ಛತ್ರಪತಿ ಶಿವಾಜಿ ಮಹಾರಾಜರೂ ಕೂಡ ಚಿಕ್ಕ-ಚಿಕ್ಕ ಕಿಸಾ, ಮಾವಾಡೆಗಳನ್ನು ಜೊತೆಮಾಡಿಕೊಂಡು ಅವರಿಗೆ ತರಬೇತಿ ಕೊಟ್ಟು ಯುದ್ದಕ್ಕೆ ಆವರನ್ನು ತಯಾರು ಮಾಡಿದರು. ಎಂತಹ ಸಂಘಟನಾ ಶಾಸ್ತ್ರ ನಿಪುಣತೆ ಹಾಗೂ ಕೌಶಲ್ಯವನ್ನು ಛತ್ರಪತಿ ಶಿವಾಜಿ ಮಹಾರಾಜರೂ ತೋರಿಸಿಕೊಟ್ಟಿದ್ದಾರೆ ನೋಡಿ

ಇಂದಿಗೂ ಹಿಂದೂಸ್ಥಾನದ ಎಂಜೀನಿಯರ್ ವಿದ್ಯಾರ್ಥಿ ಒಂದುವೇಳೆ ಜಲ ನಿರ್ವಹಣೆ ಎಂದರೇನು ? ಜಲ ಸಂಪನ್ಮೂಲ ಏನು?. ನೀರನ್ನು ಬರ ಪ್ರದೇಶಕ್ಕೆ ತಲುಪಿಲುವುದು ಹೇಗೆ. ಇಂಥವಕ್ಕೆಲ್ಲಾ ಉತ್ತಮ ಜ್ಞಾನ ಸಿಗಬೇಕಾದರೆ ಛತ್ರಪತಿ ಶಿವಾಜಿ ಮಹಾರಾಜರು ನೀರಿಗಾಗಿ ಸಂಪೂರ್ಣ ವ್ಯವಸ್ಥೆಯೊಂದನ್ನು ಮಾಡಿದ್ದರಲ್ಲಾ ಅದರಲ್ಲಿ ಇವರಿಗೆ ಪ್ರೇರಣೆ ದೊರೆಯುತ್ತದೆ. ನೋಡಿ. ಮುದ್ರಾನೀತಿಯ ಬಗ್ಗೆ ಛತ್ರಪತಿ ಶಿವಾಜಿ ಮಹಾರಾಜರ ಮುಂದೆ ಒಂದು ಪ್ರಸ್ತಾಪ ಬಂತು, ಅದೇನೆಂದರೆ ನಾಣ್ಯಗಳನ್ನು ವಿದೇಶೀ ಮಂದಿ ತಯಾರುಮಾಡಿಕೊಡಲು ಮುಂದೆ ಬಂದರು. ಆದರೆ ಛತ್ರಪತಿ ಶಿವಾಜಿ ಮಹಾರಾಜರಿಗೆ ದೂರದೃಷ್ಠಿಯಿತ್ತು. ಮುದ್ರಾ/ನಾಣ್ಯದ ಮೇಲೆ ಬೇರೆಯವರ ಅಧಿಕಾರ ಬಂದಮೇಲೆ ಆಡಳಿತ ಕೈ ಬಿಟ್ಟು ಹೋಗುವುದಕ್ಕೆ ಹೆಚ್ಚು ಸಮಯ ಹಿಡಿಯೊಲ್ಲ. ಆದ್ದರಿಂದ ಅವರೇ ಸ್ವತ: ನಾಣ್ಯಗಳನ್ನು ತಯಾರುಮಾಡುವ ವ್ಯವಸ್ಥೆ ಮಾಡಿದರು. ಎಂದಿಗೂ ವಿದೇಶೀ ವ್ಯವಸ್ಥೆಯನ್ನು ಸ್ವೀಕರಿಸಲಿಲ್ಲ.

ಇಂದು ವಿಶ್ವದಲ್ಲೆಲ್ಲಾ ಜಲ ಸುರಕ್ಷೆ ಬಹಳ ದೊಡ್ಡ ವಿಚಾರವಾಗಿ ಬಿಟ್ಟಿದೆ. ಇಡೀ ಪ್ರಪಂಚವೇ ಸಮುದ್ರದ ಸುರಕ್ಷೆಯನ್ನು ಕುರಿತು ಜಾಗೃತವಾಗಿದೆ . ಪ್ರತಿಯೊಬ್ಬರಿಗೂ ತಮ್ಮ ನೌಕಾಅಧಿಕಾರಿಗಳ ಸುರಕ್ಷೆ ಮತ್ತು ತಮ್ಮ ವ್ಯಾಪಾರ ಸಂಭಂಧಗಳಿಗೆ ವಿಶ್ವದಲ್ಲೆಲ್ಲಾ ಸುರಕ್ಷೆ ದೊರೆಯಲಿ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಆದರೆ ಅನೇಕ ವರ್ಷಗಳ ಹಿಂದೆಯೇ ಒಬ್ಬ ವೀರ ವ್ಯಕ್ತಿ ಜನಿಸಿದ್ದರು ಅವರು ನೌಕಾಪಡೆಯನ್ನು ಸ್ಥಾಪಿಸಿದ್ದರು.ಹಾಗೂ ಸಮುದ್ರೀಯ ಸಾಮರ್ಥ್ಯವನ್ನು ಗುರುತಿಸಿದ್ದರು. ನಾವು ಸಿಂದೂ ಕಣಿವೆಯ ನಾಗರಿಕತೆಯ ಕಾಲದಲ್ಲಿ ಎಷ್ಟು ಕೋಟೆಕೊತ್ತಲಗಳನ್ನು ಕಾಣುತ್ತೇವೋ ಅವುಗಳಲ್ಲೆಲ್ಲಾ ನೌಕಾಪಡೆಯ ಅಗತ್ಯಕ್ಕೆ ಒತ್ತು ನೀಡಲಾಗಿದೆ. ಪ್ರಪಂಚದಲ್ಲಿ ಎಲ್ಲೆಲ್ಲಿ ಪುರಾತನ ಜೀವನ ವ್ಯವಸ್ಥೆಗಳಿವೆಯೋ ಅಲ್ಲೆಲ್ಲಾ ಪ್ರವಾಸೋಧ್ಯಮ ಆಕರ್ಷಿಸುವುದಕ್ಕಾಗಿ ಮಾದರಿ ವಸ್ತುಗಳನ್ನು ಬಹಳ ಆಕರ್ಷಣೀಯವಾಗಿರುವಂತೆ ಮಾಡಿರಲಾಗಿರುತ್ತವೆ. ಇಂದಿಗೂ ವಿಶ್ವದೆಲ್ಲೆಡೆ ಹಿಂದೂಸ್ಥಾನದ ಪ್ರವಾಸೋಧ್ಯಮ ಚರ್ಚೆಗೆ ಬಂದಾಗ ತಾಜ್ ಮಹಲ್ ಹೆಸರನ್ನು ಕೇಳಿದಾಕ್ಷಣ ಅಲ್ಲಿಗೆ ಹೋಗಬೇಕೆಂದು ಕೇಳಿದವರಿಗೆ ಅನ್ನಿಸುತ್ತದೆ. ಪ್ರತಿಯೊಂದು ಯುಗದಲ್ಲೂ ಇಂತಹ ಮಾದರಿ ಕಲಾತ್ಮಕ ವಸ್ತುಗಳು ನಿರ್ಮಾಣಗೊಂಡವು. ಶತಶತಮಾನಗಳವರೆವಿಗೂ ಅವು ಆಯಾ ದೇಶದ ಹೆಗ್ಗುರುತುಗಳಾದವು. ವಿಶ್ವದ ಅನೇಕ ದೇಶಗಳಲ್ಲಿ ಕೋಟೆಕೊತ್ತಲಗಳ ಪ್ರವಾಸೋಧ್ಯಮ ಗಾಗಿಯೇ ಪ್ರತ್ಯೇಕ ವ್ಯವಸ್ಥೆಗಳಿವೆ. ಭಾರತದ ಬಳಿ ಕೂಡ ನಮ್ಮ ರಾಜಮಹಾರಾಜರ ಕಾಲದಲ್ಲಿ ಕಟ್ಟಿದ ಅನೇಕ ಕೋಟೆಗಳು ದೇಶದ ಮೂಲೆಮೂಲೆಯಲ್ಲೂ ಇವೆ. ಇವುಗಳಿಗೆಲ್ಲಾ ಅವುಗಳದ್ದೇ ಆದ ವಿಶಿಷ್ಟ ರಚನೆಗಳಿವೆ. ರಕ್ಷಣೆಯ ವಿಜ್ಞಾನಗಳಿವೆ. ತಮ್ಮದೇ ಆದ ವಾಸ್ತು ವಿನ್ಯಾಸವಿದೆ. ಆ ಕಾಲದಲ್ಲಿ ಯಾವ ರೀತಿಯ ಸಾಧನಗಳನ್ನು ಉಪಯೋಗಿಸಲಾಗುತ್ತಿತ್ತು. ಅವುಗಳಲ್ಲಿ ಸಾಕಷ್ಟು ವಿಶೇಷತೆಗಳಿವೆ.ಆದರೆ ದುರ್ಭಾಗ್ಯವಶದಿಂದ ನಾವು ತಾಜ್ ಮಹಲಿನಿಂದಾಚೆಗೆ ಬರಲೇ ಇಲ್ಲ. ಈ ದೇಶದ ಪ್ರತಿ ಮೂಲೆಯಲ್ಲೂ ಪ್ರಪಂಚದ ಮುಂದೆ ಪ್ರಸ್ತುತಪಡಿಸಬಹುದಾದ ಪ್ರವಾಸಕ್ಕೆ ಅನುಕೂಲವಾದ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಒಂದುವೇಳೆ ಭಾರತವನ್ನು ಪ್ರಪಂಚದ ಮುಂದೆ ಸರಿಯಾಗಿ ಹಾಗೂ ಸಮರ್ಪಕವಾಗಿ ಪ್ರಸ್ತುತಪಡಿಸಿದಲ್ಲಿ ಭಾರತಕ್ಕೆ ಪ್ರವಾಸೋಧ್ಯಮ ನ್ನು ಆಕರ್ಷಿಸುವ ಸಂಪೂರ್ಣ ಸಾಮರ್ಥ್ಯವಿದೆ.ಇಂದು ಪ್ರಪಂಚದಲ್ಲಿ ಎಲ್ಲಕ್ಕಿಂತ ಮುಂಚೂಣಿಯಲ್ಲಿರುವ ಕ್ಷೇತ್ರ ಪ್ರವಾಸೋಧ್ಯಮ . ಬಹುಕೋಟಿ ಮೌಲ್ಯದ ವ್ಯಾಪಾರ ಪ್ರವಾಸೋಧ್ಯಮ ನಲ್ಲಿದೆ. ಪುರಾತನ ಪರಂಪರೆಗಳೊಡನೆ ಜೀವಿಸುವ ದೇಶವಾದ ಭಾರತಕ್ಕೆ ವಿಶ್ವವನ್ನು ಆಕರ್ಷಿಸಬಲ್ಲ ಸಾಮರ್ಥ್ಯವಿದೆ. ಛತ್ರಪತಿ ಶಿವಾಜಿ ಮಹಾರಾಜರು ಕಟ್ಟಿಸಿದ ಕೋಟೆಯನ್ನು ನಾವು ಸರಿಯಾಗಿ ಸಂರಕ್ಷಣೆ ಮಾಡಿದಲ್ಲಿ, ವಿಶ್ವದ ಮುಂದೆ ಇದನ್ನು ಪರಿಚಯಿಸ ಬಲ್ಲೆವು.ಹಿಂದೂಸ್ಥಾನದ ಯೂನಿವರ್ಸಿಟಿಗಳಿಗೂ ಸಾಹಸ ಪ್ರವಾಸೋಧ್ಯಮ ಮಾಡಬೇಕೆಂದರೆ ಈ ಕೋಟೆಗೆ ಬನ್ನಿ, ಈ ಕೋಟೆಯಲ್ಲಿ ಕುದುರೆಯ ಮೇಲೆ ಹತ್ತಿ ಹೋಗಿರಿ, ಕುದುರೆಯ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎಂದು ಹೇಳೋಣ. ನಾನು ಭಾರತ ಸರ್ಕಾರದ ಪುರಾತತ್ವ ಇಲಾಖೆ ಗೆ ಛತ್ರಪತಿ ಶಿವಾಜಿ ಮಹಾರಾಜರ ಕೋಟೆಯಿಂದ ಆರಂಭಿಸಿ ದೇಶದಲ್ಲಿ ಕೋಟೆಗಳ ಪ್ರವಾಸೋಧ್ಯಮ ನ ಒಂದು ವಾತಾವರಣ ಸೃಷ್ಟಿಸೋಣವೆಂದು ಹೇಳುತ್ತೇನೆ. ಅದರ ಸಂರಕ್ಷಣೆಯನ್ನು ಸಾಮಾನ್ಯ ಜನರನ್ನು ಆಕರ್ಷಿಸುವ ಮಟ್ಟದಲ್ಲಿ ಮಾಡಬೇಕು. ಸಹೋದರ ಸಹೋದರಿಯರೇ, ನಾನು ಇಂದು ಇಷ್ಟು ಆನಂದತುಲಿತನಾಗಿರುಲು ಕಾರಣವೇನೆಂದರೆ, ಇಂದು ಯಾವ ಶಿವ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತಿದೆಯೋ ಅದರ ಜಲಪೂಜೆ,ಹಾಗೂ ಭೂಮಿಪೂಜೆಯ ಭಾಗ್ಯ ನನಗೆ ದೊರೆತಿದೆಯೆಂದು..ಇದಕ್ಕಾಗಿ ನಾನು ಮಹಾರಾಷ್ಟ್ರ ಸರ್ಕಾರ ಹಾಗೂ ಮಹಾರಾಷ್ಟ್ರದ ಜನತೆಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಇಂತಹ ಅವಕಾಶ ಜೀವನದಲ್ಲಿ ಧನ್ಯಭಾವವನ್ನು ಮೂಡಿಸುತ್ತದೆ. ಯಾವ ನಿರ್ಧಾರವನ್ನು ಮಹಾರಾಷ್ಟ್ರ ಮಾಡಿದೆಯೋ, ಫಡ್ನವೀಸ್ ಸರ್ಕಾರ ಮಾಡಿದೆಯೋ ಆ ಸಂಕಲ್ಪ ಪೂರ್ಣಗೊಳ್ಳುತ್ತದೆಂಬ ವಿಶ್ವಾಸ ನನಗಿದೆ. ಈ ನಿರ್ಮಾಣಕಾರ್ಯ ಸಮಾಪ್ತಿಯಾದಾಗ ವಿಶ್ವದಲ್ಲಿ ಎಲ್ಲಕ್ಕಿಂತ ಎತ್ತರದ ಮಾದರಿ ಕಟ್ಟಡ ನಮ್ಮಲ್ಲಿದೆಯೆಂದು ಸಂಪೂರ್ಣ ದೇಶವೇ ಹೆಮ್ಮೆಪಡಲಿದೆ. ಜನಸಾಮಾನ್ಯರ ಸುಖಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂತಹ ಛತ್ರಪತಿ ಶಿವಾಜಿ ಮಹಾರಾಜರಂತಹ ಮಹಾಪುರುಷರಿಗೆ ನಮಿಸುವ ಅವಕಾಶ ಇಂದು ನನಗೆ ದೊರೆತಿದೆ.

ಸಹೋದರ ಸಹೋದರಿಯರೇ,ನಮ್ಮ ದೇಶದಲ್ಲಿ ರಾಜಕೀಯ ಚೆನ್ನಾಗಿಯೇ ಆಗಿದೆ. ವಿವಿಧತೆಗಳಿಂದ ತುಂಬಿದ ಅನೇಕ ಮಾರ್ಗಗಳನ್ನು ಅನುಸರಿಸಲಾಗಿದೆ. ಆದರೆ 70 ವರ್ಷಗಳ ಅನುಭವದ ಅನಂತರವಾದರೂ ಸ್ವಾತಂತ್ರ್ಯದ ಅನಂತರವಾದರೂ ಒಂದಾದರೂ ವಿಕಾಸಮಾರ್ಗವನ್ನು ಅನುಸರಿಸಿದ್ದರೆ ಭಾರತದಲ್ಲಿ ಎಷ್ಟು ಸಮಸ್ಯೆಗಳು ಆಳವಾಗಿ ಬೇರುಬಿಟ್ಟುಕುಳಿತಿವೆಯೋ ಅವು ಅಷ್ಟರಮಟ್ಟಿಗೆ ಬೇರುಬಿಡಲು ಸಾಧ್ಯವಿರುತ್ತಿರಲಿಲ್ಲ ಎಂಬ ಸತ್ಯವನ್ನು ನಾವೆಲ್ಲರೂ ಸ್ವೀಕರಿಸಲೇಬೇಕು.

ವಿಕಾಸವೊಂದೇ ಸಮಸ್ಯೆಗೆ ಪರಿಹಾರ. ದೇಶದ ಯುವಕರಿಗೆ ಕೆಲಸವನ್ನು ಒದಗಿಸಿಕೊಡುವುದೇ ವಿಕಾಸ. ಮಧ್ಯಮವರ್ಗದವರು ತಮ್ಮ ಆಸೆಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಕೈಗೆಟಕಿಸಿಕೊಳ್ಳಲು ಹಾರುತ್ತಾ ಜಿಗಿಯುತ್ತಾ ಮುಂದುವರೆಯಬೇಕಾಗುತ್ತದೆ, ವಿಕಾಸವು ಅವರಿಗೆ ಅವಕಾಶಗಳನ್ನು ಕಲ್ಪಿಸಿ ದಾರಿ ಮಾಡಿಕೊಡುತ್ತದೆ.ಗೌರವದಿಂದ ಬದುಕುವ ಮಾರ್ಗ ವಿಕಾಸದಿಂದ ದೊರೆಯುತ್ತದೆ.ಹೀಗಾಗಿ ಎಂದಿನಿಂದ ನಮಗೆ ತಾವೆಲ್ಲರೂ ಜವಾಬ್ದಾರಿಯನ್ನು ಕೊಟ್ಟಿದ್ದೀರೋ ನಾವು ವಿಕಾಸವನ್ನೇ ಕೇಂದ್ರಬಿಂದುವಾಗಿರಿಸಿಕೊಂಡಿದ್ದೇವೆ ಸಹೋದರ ಸಹೋದರಿಯರೇ. ಯಾವಾಗ ನಾವು ವಿಕಾಸವನ್ನೇ ಕೇಂದ್ರ ವಾಗಿಟ್ಟುಕೊಂಡಿದ್ದೇವೆಯೋ ಆಗ ವಿಕಾಸವೆಂದರೆ ಏಳ್ಗೆ ಆಗಿರುವಂತದ್ದು ಎಂಬುದು ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿದೆ.ವಿಕಾಸವೆಂದರೆ ಬಡವರ ಜೀವನದಲ್ಲಿ ಬದಲಾವಣೆಯ ಅವಕಾಶನೀಡತಕ್ಕಂತದ್ದು. ತಮ್ಮ ಆಸೆ ಆಕಾಂಕ್ಷೆಗಳನ್ನ ಪೂರ್ಣಗೊಳಿಸುವ ಶಕ್ತಿ, ಸಾಮರ್ಥ್ಯನೀಡುವುದು, ಸಬಲೀಕರಣ ನೀಡುವುದು ವಿಕಾಸ. ಆದ್ದರಿಂದಲೇ ನಮ್ಮ ಎಲ್ಲ ಯೋಜನೆಗಳ ಕೇಂದ್ರಬಿಂದು ಬಡವರಿಗಾಗಿ ಕಲ್ಯಾಣಕಾರಿ ಕೆಲಸಮಾಡುವುದು. ನಮ್ಮ ಸರ್ಕಾರ ರಚನೆಯಾದಾಗ ನಮ್ಮ ಮುಂದೆ ಒಂದು ರಿಪೋರ್ಟ್ ಬಂದಿತ್ತು. ಚಿಕ್ಕ-ಚಿಕ್ಕ ಕಾರ್ಖಾನೆಗಳಿಂದ ಕೆಲಸದಿಂದ ನಿವೃತ್ತರಾಗುತ್ತಿದ್ದವರಿಗೆ, ಸರ್ಕಾರದ ವತಿಯಿಂದ ನಿವೃತ್ತಿವೇತನ ದೊರೆಯುತ್ತಿತ್ತು ಆ ನಿವೃತ್ತಿವೇತನ ಎಷ್ಚೆಂದು ತಿಳಿದಾಗ ನಾನು ದಿಗ್ಭ್ರಾಂತನಾದೆ. ಕೆಲವರಿಗೆ 7 ರೂಪಾಯಿ ಪೆಂಶನ್,ಕೆಲವರಿಗೆ 51 ರೂಪಾಯಿ, ಕೆಲವರಿಗೆ 80 ರೂಪಾಯಿ, ನೂರೈವತ್ತು ರೂಪಾಯಿಯ ಅಕ್ಕಪಕ್ಕಗಲ್ಲಿ ಕೂಡ ಒಬ್ಬರೂ ಕೂಡ ಇರಲಿಲ್ಲ. ಪೆಂಶನ್ ದೊರೆಯುವ ವ್ಯಕ್ತಿ ಕೂಡ 7 ರೂಪಾಯಿಗಾಗಿ, 80 ವರ್ಷದ ವ್ಯಕ್ತಿ ಆಟೋರಿಕ್ಷ ಮಾಡಿಕೊಂಡು ಪೋಸ್ಟ್ ಆಫೀಸಿಗೆ ಯಾಕೆ ಹೋಗುತ್ತಾನೆ ಹೇಳಿ. ನಾವು ಅಧಿಕಾರಕ್ಕೆ ಬಂದ ತಕ್ಷಣ ನಿವೃತ್ತನಾದ ವ್ಯಕ್ತಿಗೆ ಎಷ್ಟು ಕಡಿಮೆ ಪೆಂಶನ್ ದೊರೆಯುತ್ತಿದೆ, ಸರ್ಕಾರಿ ಖಜಾನೆಯ ಮೇಲೆ ಹೊರೆ ಬಿದ್ದರೆ ಬೀಳಲಿ. ಆದರೆ ಯಾರಿಗೂ 1000 ರೂಪಾಯಿಗಳಿಗಿಂತ ಕಡಿಮೆ ಪೆಂಶನ್ ಇರಲೇಕೂಡದು ಎಂಬ ನಿರ್ಧಾರ ತೆಗೆದುಕೊಂಡೆವು. ಸಹೋದರ ಸಹೋದರಿಯರೇ ಈಗ 35ಲಕ್ಷಕ್ಕೂ ಹೆಚ್ಚು ಜನರು ಇದರ ಲಾಭ ಪಡೆಯುತ್ತಿದ್ದಾರೆ. ಇದೇನು ಕಡಿಮೆಯಲ್ಲ. ಇದರಿಂದ ಸಾವಿರಾರು ಕೋಟಿ ರೂಪಾಯಿಗಳ ಹೊರೆಯು ಸರ್ಕಾರಿ ಖಜಾನೆಯ ಮೇಲೆ ಬಿತ್ತು. ಆದರೂ ಸರ್ಕಾರವು ಈ ವರಿಷ್ಠನಾಗರಿಕರು ಒಂದು ಗೌರವಾನ್ವಿತ ಒಳ್ಳೆಯ ಜೀವನ ಜೀವಿಸಲೆಂದು ಸರ್ಕಾರವು ಒಂದು ಮುಖ್ಯ ನಿರ್ಧಾರವನ್ನು ತೆಗೆದುಕೊಂಡಿತು.ಔಷಧಿಗಳ ಬೆಲೆ ಹೆಚ್ಚಿದೆ. ನಾವು ಮೂಲ ಸಾಮಾನ್ಯ ಔಷಧ ಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಬಡವರಿಗೆ ಅಗ್ಗದ ಬೆಲೆಯಲ್ಲಿ ಔಷಧಿ ದೊರೆಯುವಂತಾಗಬೇಕೆಂದು ಅಗ್ಗವಾಗಿ, ಸರಿಯಾದ, ಚೆನ್ನಾದ ಔಷಧಿ ಸಮಯಕ್ಕೆ ಸರಿಯಾಗಿ ಸಿಗಲೆಂದು ದೇಶದೆಲ್ಲೆಡೆ ಜನ ಔಷಧಾಲಯವನ್ನು ತೆರೆಯುವ ಸಂಕಲ್ಪ ಮಾಡಿದೆವು. . ಇದರಿಂದ ಬಡವರನ್ನು ಔಷಧಿಯ ಹೆಸರಲ್ಲಿ ಯಾರೂ ಶೋಷಿಸದಿರಲೆಂದು ವ್ಯವಸ್ಥೆಮಾಡಿದೆವು. ಬಡ ತಾಯಿ ಸೌದೆ ಒಲೆಯಲ್ಲಿ ಅಡಿಗೆಮಾಡುತ್ತಿದ್ದಳು. ಆ ಬಡ ತಾಯಿಯ ದೇಹದೊಳಕ್ಕೆ ಒಂದುದಿನಕ್ಕೆ ನಾಲ್ಕು ಸಿಗರೇಟು ಸೇದಿದಷ್ಟು ಹೊಗೆ ಸೇರುತ್ತಿತ್ತು. ಬಡ ತಾಯಿಗೆ ಇದರಿಂದ ಕಾಯಿಲೆಯಲ್ಲದೆ ಇನ್ನೇನು ತಾನೆ ಬರಲು ಸಾಧ್ಯ. ಬಡ ತಾಯಿಯ ಮಗುವಿಗೆ ರೋಗ ಬರದಿರಲು ಸಾಧ್ಯವೇ. ನಮ್ಮ ಸರ್ಕಾರವು ಬಡತನದ ರೇಖೆಯ ಕೆಳಗಿರುವ ಇಂತಹ ಗುಡಿಸಲು,ಜೋಪಡಿಗಳಲ್ಲಿ ವಾಸಿಸುವ ಕುಟುಂಬಗಳನ್ನು ಈ ಸೌದೆ ಒಲೆಯಿಂದ ಮುಕ್ತರನ್ನಾಗಿ ಮಾಡಬೇಕೆಂದು ನಿರ್ಧರಿಸಿತು. ನಾವು ಕೋಟಿ ಕೋಟಿ ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಸಂಪರ್ಕ ಕೊಡಬೇಕೆಂದು ಸಂಕಲ್ಪಮಾಡಿದ್ದೇವೆ. ಕೋಟಿಗಟ್ಟಲೆ ಜನರಿಗೆ ಈಗಾಗಲೇ ಕೊಟ್ಟಿದ್ದೇವೆ. ಮುಂಬರುವ ಮೂರು ವರ್ಷಗಳಲ್ಲಿ ಬಡತನದ ರೇಖೆಯ ಕೆಳಗಿರುವ ಐದು ಕೋಟಿ ಕುಟುಂಬಗಳಿಗೆ ಈ ಯೋಜನೆಯನ್ನು ತಲುಪಿಸುವ ಕೆಲಸವನ್ನು ನಾವು ಕೈಗೆತ್ತಿಕೊಂಡಿದ್ದೇವೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದವು.18 ಸಾವಿರ ಹಳ್ಳಿಗಳು ಅನಿವಾರ್ಯವಾಗಿ 18ನೇ ಶತಮಾನದಲ್ಲೇ ಜೀವಿಸುತ್ತಿದ್ದವು. ವಿಧ್ಯುತ್ ಕಂಭಕೂಡ ನಿಲ್ಲಿಸಿರಲಿಲ್ಲ. ಇಲ್ಲಿಗೆ ತಂತಿ ತಲುಪಿರಲಿಲ್ಲ ಜನ ವಿಧ್ಯುತ್ ನೋಡೇ ಇರಲಿಲ್ಲ.ಈ ದೇಶದ ಚರಿತ್ರೆಯು 70 ವರ್ಷಗಳನ್ನು ಹಾಳುಮಾಡಿದವರನ್ನು ಕ್ಷಮಿಸುವುದೇ. ಅವರು ಸ್ವತಂತ್ರ್ಯ ಭಾರತದ 18 ಸಾವಿರ ಹಳ್ಳಿಗಳನ್ನು ಅನಿವಾರ್ಯವಾಗಿ 18ನೇ ಶತಮಾನದಲ್ಲೇ ಜೀವಿಸುವಂತೆ ಮಾಡಿಬಿಟ್ಟಿದ್ದರು. ಕತ್ತಲಿನಲ್ಲೇ ಜೀವಿತ ಕಳೆಯುವಂತೆ ಮಾಡಿದ್ದರು.ನಾವು ಸಾವಿರ ದಿನಗಳಲ್ಲಿ 18ಸಾವಿರ ಹಳ್ಳಿಗಳಿಗೆ ವಿಧ್ಯುತ್ ತಲುಪಿಸುವ ಸಂಕಲ್ಪ ಮಾಡಿದ್ದೇವೆ. ಅರ್ಧಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಕೆಲಸ ಪೂರ್ಣಗೊಂಡಿದೆ.ಇತರೆ ಹಳ್ಳಿಗಳಲ್ಲಿ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ.ಇದನ್ನು 1000 ದಿನಗಳ ಗಡುವಿನೊಳಗೆ ಪೂರ್ತಿ ಮಾಡಿಯೇ ತೀರುತ್ತೇವೆ.

ಸಹೋದರ ಸಹೋದರಿಯರೇ, ದೇಶ ಬದಲಾಗದು ಎಂದು ಹೇಳುವರಾರು. 125ಕೋಟಿ ದೇಶವಾಸಿಗಳ ಬಲದ ಭರವಸೆಯ ಆಧಾರದ ಮೇಲೆ ನಾನು ವಿಶ್ವಾಸದಿದ ಹೇಳುತ್ತೇವೆ ದೇಶ ಬದಲಾಗುತ್ತದೆ. ಸ್ನೇಹಿತರೇ ದೇಶ ಖಂಡಿತಾ ಬದಲಾಗುತ್ತದೆ ಬೇಕಾದರೆ ಬರೆದಿಟ್ಟುಕೊಳ್ಳಿ. ಬದಲಾಗುತ್ತದೆ ಹಾಗೂ ಮುಂದುವರೆಯುತ್ತದೆ ಕೂಡ . ವಿಶ್ವದ ಮುಂದೆ ತಲೆಯೆತ್ತಿ ನಿಲ್ಲುತ್ತದೆ ಈ ದೇಶ ಇದನ್ನು ನನ್ನ ಮೂರು ವರ್ಷದ ಅನುಭವದಿಂದ ನಾನು ಹೇಳಬಲ್ಲೆ. ಇದರ ಕಲ್ಪನೆಯನ್ನು ಇಲ್ಲೇ ಮಾಡಿಕೊಳ್ಳಿ ಇಂದು ಇದೇ ಸಭಾಮಂಟಪದಲ್ಲಿ ಯಾವ್ಯಾವ ಯೋಜನೆಗಳ ಆರಂಭದ ಉದ್ಘಾಟನೆಯಾಯಿತೋ ಆ ಯೋಜನೆಗಳ ಅಂದಾಜು ವೆಚ್ಚದ ಮೊತ್ತ ಎಷ್ಚಿರಬಹುದೆಂದು ನಿಮಗೆ ಗೊತ್ತೆ . ಇದೇ ಸಭಾಮಂಟಪದಲ್ಲಿ ನನ್ನ ಕೈಯಲ್ಲಿ ಯಾವ್ಯಾವ ಬಟನ್ನ ಒತ್ತಿಸಿದರೋ ಅವುಗಳ ಮೊತ್ತ ಆರು ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು. ಆರು ಲಕ್ಷ ಕೋಟಿ ರೂಪಾಯಿಗಳ ಯೋಜನೆ. ಮುಂಬಯಿ ಒಂದರಲ್ಲೇ ಒಂದೇ ಕಾರ್ಯಕ್ರಮದಲ್ಲಿ ಆರು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಿಕಾಸಕಾರ್ಯಗಳ ಶುಭಾರಂಭವಾಗುತ್ತಿದೆಯೆಂದರೆ, ಇದು ಮುಂಬಯಿಯ ಇತಿಹಾಸದಲ್ಲಿ ಬಹಳ ದೊಡ್ಡ ಘಟನೆಯಿರಬಹುದು. ಇದನ್ನು ನಾವು ಸಾಕಾರಗೊಳಿಸಿ ತೋರಿಸುತ್ತೇವೆ

ಸಹೋದರ ಸಹೋದರಿಯರೇ,ಇಂದು ನಾನು ಮುಂಬಯಿಯ ನೆಲಕ್ಕೆ ಬಂದಿದ್ದೇನೆ. ಮಹಾರಾಷ್ಟ್ರದ ಜನತೆಗೆ ಶಿರಬಾಗಿ ನಮಿಸುತ್ತೇನೆ ಹಾಗೂ ಶುಭಾಷಯಗಳನ್ನು ಅರ್ಪಿಸ ಬಯಸುತ್ತೇನೆ. ನಮ್ಮ ದೇಶದಲ್ಲಿ ಒಳ್ಳೆಯದನ್ನು ಹೇಳಲಿ ಅಧವಾ ಕೆಟ್ಟದ್ದನ್ನು ಹೇಳಲಿ ಒಂದು ಮನೋಭಾವವಿರುತ್ತದೆ. ನೀವು ಒಳ್ಳೆಯದನ್ನು ಮಾಡಿದ್ದೀರೆಂಬುದಕ್ಕೆ ಸಾಕ್ಷಿ ಯಾವುದು , ಒಂದುವೇಳೆ ಚುನಾವಣೆಯಲ್ಲಿ ಗೆದ್ದರೆ ನೀವು ಒಳ್ಳೆಯದನ್ನುಮಾಡಿದ್ದೀರೆಂಬುದಕ್ಕೆ ಸಾಕ್ಷಿಯಾಗುತ್ತೆ. ಒಂದುವೇಳೆ ಚುನಾವಣೆಯಲ್ಲಿ ಸೋತರೆ ನಿಮ್ಮ ನಿರ್ಣಯ ತಪ್ಪು ಎಂಬುದಕ್ಕೆ ಸಾಕ್ಷಿಯಾಗುತ್ತೆ. ಎಂದಿನಿಂದ ನಮ್ಮ ಸರ್ಕಾರ ರಚನೆಯಾಯಿತೋ ಅಂದಿನಿಂದಲೇ ನಾವು ಭ್ರಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ದ ಹೋರಾಟ ನಡೆಸುತ್ತಿದ್ದೇವೆ. ಇದಕ್ಕಾಗಿ ಒಂದಾದಮೇಲೊಂದು ಹಜ್ಜೆ ಇಟ್ಟಿದ್ದೇವೆ. ಆದರೆ ಎಂಟನೇ ನವೆಂಬರ್ ರಾತ್ರಿ ಎಂಟು ಗಂಟೆಗೆ ನಾವು ಬಹಳ ದೊಡ್ಡ ಯುದ್ದವನ್ನೇ ಘೋಷಿಸಿದೆವು. ಕೋಟಾನೋಟಿನ ,ಕಪ್ಪುಹಣದ ವಿರುದ್ದ ನಾವು ರಣಕಹಳೆ ಊದಿದೆವು. ಸಹೋದರ ಸಹೋದರಿಯರೇ. 125ಕೋಟಿ ದೇಶವಾಸಿಗಳು ಇದರಿಂದ ಬಹಳ ಕಷ್ಟವನ್ನು ಅವುಭವಿಸಿದರೂ ಕೂಡ ನನ್ನ ಜೊತೆ ಬಿಡಲಿಲ್ಲ. ಅವರನ್ನು ದಿಕ್ಕುತಪ್ಪಿಸುವ ಪ್ರಯತ್ನ ನಡೆಯಿತು, ಅವರನ್ನು ಹೆದರಿಸುವ ಪ್ರಯತ್ನ ನಡೆಯಿತು, ವಂದಂತಿಗಳನ್ನು ಹಬ್ಬಿಸಿ ಭ್ರಮೆಗೊಳಿಸಲು ಯತ್ನಿಸಿದರು. ಆದರೆ ಯಾರನ್ನು ನಾವು ನಿರಕ್ಷರಕುಕ್ಷಿಯೆನ್ನುವೆವೋ , ಓದುಬರಹ ಬಾರದವರೆನ್ನುವೆವೋ ಅವರ ಸಾಮಾನ್ಯ ಜ್ಞಾನ ಇವರ ಗೊಡ್ಡು ವದಂತಿಗಳಿಗೆ ಬಗ್ಗದೇ ದೇಶದ ಒಳಿತಿನ ಜೊತೆಗೂಡಿದವು. ನಂತರ ಯಾವಾಗ ಈ ಹಿಂದಿನ ಚುನಾವಣೆಯಲ್ಲಿ ಮಹಾರಾಷ್ಟ್ರದ ಜನತೆ ಈ ತೀರ್ಮಾನದ ಮೇಲೆ ಮುದ್ರೆ ಒತ್ತಿತೋ ಆಗ ಸಂಪೂರ್ಣ ಹಿಂದೂಸ್ಥಾನಕ್ಕೆ ಸತ್ಯ ಯಾರ ಕಡೆಗಿದೆ ಹಾಗೂ ದೇಶ ಯಾವ ದಿಕ್ಕಿನಲ್ಲಿ ಚಲಿಸ ಬಯಸುತ್ತದೆಂಬ ಸಂದೇಶe ತಲುಪಿತು.

ಸಹೋದರ ಸಹೋದರಿಯರೇ, ನಾನು ಗೋವಾದಲ್ಲೇ ಹೇಳಿದ್ದಂತೆ ಈ ಯುದ್ದ ಸುಲಭದ್ದಲ್ಲ. 70-70 ವರ್ಷ ಬೆಣ್ಣೆತಿಂದ ಇಂಥ ಬಲಶಾಲಿ ಮಂದಿ ಸುಮ್ಮನಿರುವರೇ, ಏನು ಬೇಕಾದರೂ ಮಾಡಿ.ಎಲ್ಲ ಉಪಾಯಗಳನ್ನೂ ಮಾಡಿ .ತಮ್ಮ ಸಂಪೂರ್ಣ ತಾಕತ್ತನ್ನು ಬಳಸಿ ಇದು ಸಫಲವಾಗದಿರಲೆಂದು ಪ್ರಯತ್ನಪಡುವರು.ಇವರೆಲ್ಲರೂ ತಂತಮ್ಮ ಶಕ್ತಿ ಸಾಮರ್ಥ್ಯಗಳ ಬಳಕೆಯಲ್ಲಿ ಯಾವುದೇ ಕೊರತೆಯನ್ನೂ ಮಾಡಲಿಲ್ಲ. ಅವರಿಂದ ಏನೇನು ಆಗ್ತಿತ್ತೋ ಆ ಎಲ್ಲ ಪ್ರಯತ್ನಗಳನ್ನೂ ಮಾಡಿದರು.ಆದರೆ 125ಕೋಟಿ ದೇಶವಾಸಿಗಳ ಸಂಕಲ್ಪದ ಎದುರು ಈ 70 ವರ್ಷ ಬೆಣ್ಣೆತಿಂದ ಇಂಥ ಮಂದಿಗೆ ನಿಲ್ಲಲೂ ಆಗದು, ಗೆಲ್ಲಲೂ ಆಗದು. ಇನ್ನು ದೇಶ, ಧೇಶವೆಂದೂ ಸೋಲಲಾರದು ಮಿತ್ರರೇ, 125ಕೋಟಿ ದೇಶವಾಸಿಗಳ ಧೇಶವೆಂದೂ ಸೋಲಲಾರದು. ಇಂತಹ ಹಿಡಿಯಷ್ಚು ಮಂದಿ ದೇಶವನ್ನು ಎಂದೂ ಬಗ್ಗಿಸಲಾರರು. ಕೆಲವರೆಂದುಕೊಂಡರು ಬ್ಯಾಂಕಿನವರನ್ನು ಅನುಸರಿಸಿಕೊಂಡರೆ ಕಪ್ಪಾಗಿರುವುದೆಲ್ಲಾ ಬಿಳಿಯಾಗಿಬಿಡುತ್ತದೆಂದು. ಈ ಕಪ್ಪು ಬಿಳುಪಿನ ಆಟದಲ್ಲಿ ಇವರ ಅಂತ್ಯ ನಿರ್ಧಾರವಾಗಿತ್ತು ಇವರು ತಮ್ಮೊಡನೆ ಬ್ಯಾಂಕಿನವರನ್ನೂ ಮುಗಿಸಿಬಿಟ್ಟರು.ಎಂಥೆಂಥ ಜನ ಇವರ ಬಲೆಗೆ ಬಿದ್ದರು ನೋಡಿ. ಒಂದಾದ ಮೇಲೊಂದರಂತೆ ಇದರ ಎಳೆ ಬಿಚ್ಚಿಕೊಳ್ಳುತ್ತಿದೆ. ಬ್ಯಾಂಕಿಗೆ ಜಮಾ ಆದರೆ ಸಾಕು ಕೆಲಸ ಮುಗಿಯುತ್ತೆ ಎಂದು ಅವರೆಣಿಸಿದ್ದರು. ಆದರೆ ಬ್ಯಾಂಕಿಗೆ ಜಮೆಯಾದ ನಂತರವೇ ನಿಜವಾಗಿ ಕೆಲಸ ಆರಂಭಗೊಂಡಿದೆ. ನಾನು ದೇಶವಾಸಿಗಳಲ್ಲಿ, ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ.ನಾನು ನಿಮಗೆ 50 ದಿನಗಳವರೆಗೆ ತೊಂದರೆ ಆಗುತ್ತೆ ಎಂದು ಹೇಳಿದ್ದೆ. ದೇಶವಾಸಿಗಳು ತಮ್ಮ ದೇಶದ ಭವಿಷ್ಯಕ್ಕಾಗಿ ಈ ತೊಂದರೆಗಳನ್ನು ಸಹಿಸಿದ್ದಾರೆ. ಮುಂದೆಯೂ ಎಷ್ಟು ದಿನಗಳು ಬಾಕಿ ಉಳಿದಿವೆಯೋ ಅಷ್ಟು ದಿನ ಈ ತೊಂದರೆಗಳನ್ನು ದೇಶಕ್ಕಾಗಿ ಸಹಿಸಲೂ ತಯಾರಾಗಿದ್ದಾರೆ ಎನ್ನುವುದು ನನ್ನ ವಿಶ್ವಾಸ.. ಸೋದರ ಸೋದರಿಯರೇ 50 ದಿನಗಳನಂತರ ಪ್ರಾಮಾಣಿಕ ಜನರ ತೊಂದರೆಗಳು ಕಡಿಮೆಯಾಗಲು , ಅಪ್ರಾಮಾಣಿಕರ ತೊಂದರೆಗಳು ಹೆಚ್ಚಾಗಲಿವೆ. ಈಗಲೂ ನಾನು ಅಪ್ರಾಮಾಣಿಕರಿಗೆ ಹೇಳ ಬಯಸುತ್ತೇನೆ ಎಚ್ಚೆತ್ತುಕೊಳ್ಳಿ. ಸರಿದಾರಿಗೆ ಹಿಂದಿರುಗಿ. ದೇಶದ ಕಾನೂನನ್ನು ಸ್ವೀಕರಿಸಿ, ನಿಯಮಗಳನ್ನು ಅನುಸರಿಸಿ, ದೇಶದ ಇತರ ನಾಗರಿಕರಂತೆ ನೀವೂ ಸುಖಶಾಂತಿಯ ಜೀವನ ಜೀವಿಸಬನ್ನಿ. ಈ ಸರಕಾರ ನಿಮ್ಮನ್ನು ಗಲ್ಲಿಗೇರಿಸಬೇಕೆಂದೇನೂ ಪಣತೊಟ್ಟಿಲ್ಲ. ಆದರೆ ಬಡವರ ಹಕ್ಕನ್ನು ನೀವು ತೀರಿಸಲೇಬೇಕು.ನೀವು ತಪ್ಪಿಸಿಕೊಳ್ಳುವುದೂಂತೂ ಸಾಧ್ಯವಿಲ್ಲ. ಮೊದಲಿನಂತೆ ಯಾವುದೋ ಮಾರ್ಗದಿಂದ ತಪ್ಪಿಸಿಕೊಂಡು ಹೋಗುತ್ತೇನೆ ಎಂದು ನೀವಂದುಕೊಂಡಿದ್ದರೆ ನೀವು ತಪ್ಪಾಗಿ ಯೋಚಿಸುತ್ತಿದ್ದೀರಿ.ಸರ್ಕಾರ ಬದಲಾಗಿದೆ. ಮೂರು ವರ್ಷದ ಹಿಂದೆಯೇ ಹಿಂದೂಸ್ಥಾನದ ಜನತೆ ಸಂಪೂರ್ಣ ಬಹುಮತವಿರುವ ಒಂದು ಸರ್ಕಾರವನ್ನು ಚುನಾಯಿಸಿದೆಎಂಬುದರ ಅರಿವು ನಿಮಗಿರಬೇಕು. ಹಿಂದೂಸ್ಥಾನದ ಜನತೆ ಭ್ರಷ್ಟಾಚಾರ ಹಾಗೂ ಕಪ್ಪು ಹಣವನ್ನು ಕೊನೆಗಾಣಿಸಿರೆಂದೇ ಸರ್ಕಾರ ರಚನೆ ಮಾಡಿದೆ ಹಾಗೂ ಆ ಕೆಲಸವನ್ನು ಈ ಸರ್ಕಾರ ಮಾಡಿಯೇ ತೀರುತ್ತೆ. ಆ ಅಪ್ರಾಮಾಣಿಕತೆಯ ನಾಶದ ಕ್ಷಣಗಣನೆ ಆರಂಭಗೊಂಡಿದೆ.ದೇಶದ ಒಳಿತಿಗಾಗಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನವಿದು.ದೇಶದ ಒಳಿತಿಗಾಗಿ ಸರಳ ಹಾಗೂ ಪರಿಶುಭ್ರ ಸಾರ್ವಜನಿಕ ಜೀವನವಿರಬೇಕು.ವಿಶ್ವಾಸದ ವಾತಾವರಣವಿರಬೇಕು.ದೇಶದ ಪ್ರತಿ ನಿರ್ಣಯಗಳಿಗೂ ಬೆಲೆ ಇರಬೇಕು. ಸೋದರ ಸೋದರಿಯರೇ ಹೀಗೆ ಪಾಪಮಾಡುವ ಅಭ್ಯಾಸ ಮುಷ್ಟಿಯಷ್ಟ್ಟು ಮಂದಿಗೆ ಮಾತ್ರ ಇರುತ್ತೆ ಆದರೆ ಈ ಕಾರಣದಿಂದ ಕೋಟಿ-ಕೋಟಿ ಜನರುಇವನ್ನೆಲ್ಲಾ ಸಹಿಸಬೇಕಾಗುತ್ತದೆ. ಸೋದರ ಸೋದರಿಯರೇ ಅವರಿಗೆ ಮೋದೀಜೀಯವರ ಭಯವಿಲ್ಲದಿದ್ದರೆ, ಅಪ್ರಾಮಾಣಿಕರಿಗಂತೂ ಅಂತಹ ಭಯವೇ ಇಲ್ಲ,125ಕೋಟಿ ದೇಶವಾಸಿಗಳ ಮನಸ್ಥಿತಿ ಬದಲಾಗಿದೆ. ಇವರುಗಳು ಭ್ರಷ್ಟಾಚಾರ ಅಂಗೀಕರಿಸಲೂ ತಯಾರಿಲ್ಲ, ಅಪ್ರಮಾಣಿಕತೆ ಸಹಿಸಲು ತಯಾರಿಲ್ಲ ಕಪ್ಪು ಹಣದ ವಿರುದ್ದದ ಹೋರಾಟದಲ್ಲಿ ಅವರೆಲ್ಲ ಸೇನಾಪತಿಗಳಾಗಿ ಹೊರಟಿದ್ದಾರೆ.ಹೀಗಾಗಿ ಸೋದರ ಸೋದರಿಯರೇ ಯುದ್ದವನ್ನುಗೆಲ್ಲುವುದರಲ್ಲಿ ನೀವುಗಳು ನನ್ನ ಜೊತೆಯಲ್ಲಿದ್ದೀರಿ ಹಾಗೂ ಸಹಕಾರ ನೀಡಿದ್ದೀರಿ. ಆದ್ದರಿಂದ ಸೋದರ ಸೋದರಿಯರೇ ನಾನು ಇಂದು ಮುಂಬಯಿಯ ನೆಲದಿಂದ ಮಹಾರಾಷ್ಟ್ರದ ಭೂಮಿಯಿಂದ ಎಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಶಿವಸ್ಮರಕದ ಶುಭಾರಂಭವಾಗುತ್ತಿದೆಯೋ ಆ ಸ್ಥಳದಲ್ಲಿ ಹಾಗೂ ಆ ಕ್ಷಣದಲ್ಲಿ ದೇಶವಾಸಿಗಳಿಗೆ ಎಲ್ಲಿಯವರೆಗೆ ನಾವು ಈ ಯುದ್ದದಲ್ಲಿ ಗೆಲ್ಲುವುದಿಲ್ಲವೋ ಅಲ್ಲಿಯವರೆವಿಗೂ ಈ ಯುದ್ದದಿಂದ ಹಿಂದೆ ಸರಿಯುವುದಿಲ್ಲ ಎಂಬ ಭರವಸೆ ನೀಡಬಯಸುತ್ತೇನೆ.

ನಾನು ಮತ್ತೊಮ್ಮೆ ವಿಕಾಸದ ಕೆಲಸಗಳಲ್ಲಿ ಸಹಭಾಗಿತ್ವ ಹೊಂದಿದ್ದಕ್ಕೆ ಮಹಾರಾಷ್ಟ್ರದ ಸರ್ಕಾರಕ್ಕೆ, ಫಡ್ನವೀಸ್ ನೇತೃತ್ವದಲ್ಲಿ ಒಂದು ದೂರದೃಷ್ಟ ಸರ್ಕಾರ ಮಹಾರಾಷ್ಟ್ರಕ್ಕೆ ದೊರೆತಿದೆ ವಿಕಾಸಕ್ಕೆ ಸಮರ್ಪಿಸಿಕೊಂಡ ಸರ್ಕಾರ ದೊರೆತದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ರೈತರಿಗಾಗಿ ನೀರಿನ ಚರ್ಚೆಗಳಿರಬಹುದು, ನಗರಗಳಲ್ಲಿನ ಮೂಲಸೌಕರ್ಯ ವಿಷಯವಿರಬಹುದು, ಯುವಕರಿಗಾಗಿ ಕೌಶಲ್ಯ ಅಭಿವೃದ್ಧಿಯ ಮಾತಾಗಿರಬಹುದು, ಶಿಕ್ಷಣದ ಕ್ಷೇತ್ರವಾಗಿರಬಹುದು ಪ್ರತಿಯೊಂದರಲ್ಲೂ ಮಹಾರಾಷ್ಟ್ರವು ಹೊಸ ಆಯಾಮಗಳನ್ನು ದಾಟುತ್ತಾ ಮುಂದುವರೆದಿದೆ. ನಾನು ಫಡ್ನವೀಸ್ ರವರಿಗೆ, ಅವರ ಸಂಪೂರ್ಣ ಟೀಮಿಗೆ, ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನನ್ನ ಜೊತೆ ಎಲ್ಲರೂ ಹೇಳಿರಿ ಛತ್ರಪತಿ ಶಿವಾಜಿ ಮಹಾರಾಜ ಕೀ, ಛತ್ರಪತಿ ಶಿವಾಜಿ ಮಹಾರಾಜ ಕೀ, ಛತ್ರಪತಿ ಶಿವಾಜಿ ಮಹಾರಾಜ ಕೀ, ಛತ್ರಪತಿ ಶಿವಾಜಿ ಮಹಾರಾಜ ಕೀ, ಛತ್ರಪತಿ ಶಿವಾಜಿ ಮಹಾರಾಜ ಕೀ, ಅನೇಕಾನೇಕ ಧನ್ಯವಾದಗಳು.

***