ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಶ್ರೀ ಆರ್. ಎನ್. ರವಿ ಜೀ, ಇಲ್ಲಿನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಸುವೇಂದು ಅಧಿಕಾರಿ ಜೀ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಶ್ರೀ ಸುಕಾಂತ ಮಜುಂದಾರ್ ಜೀ, ರಾಜ್ಯ ಸರ್ಕಾರದ ಸಚಿವ ಶ್ರೀ ಜಗನ್ನಾಥ ಚಟ್ಟೋಪಾಧ್ಯಾಯ ಜೀ, ಐಐಟಿ ಖರಗ್ಪುರದ ಗೌರವಾನ್ವಿತ ಶ್ರೀ ಟಿ. ವಿ. ನರೇಂದ್ರನ್ ಜೀ, ಶ್ರೀ ಸುಮನ್ ಚಕ್ರವರ್ತಿ ಜೀ, ವಿದ್ಯಾರ್ಥಿಗಳೇ, ಹಳೆಯ ವಿದ್ಯಾರ್ಥಿಗಳೇ (ಅಲುಮ್ನಿ), ಇತರ ಗಣ್ಯರೇ, ಹಾಗೂ ಉಪಸ್ಥಿತರಿರುವ ಎಲ್ಲರಿಗೂ ನಮಸ್ಕಾರ.
ಮೊದಲನೆಯದಾಗಿ, ನಾನು ತಡವಾಗಿ ಬಂದಿದ್ದಕ್ಕಾಗಿ ನಿಮ್ಮ ಕ್ಷಮೆ ಕೋರುತ್ತೇನೆ. ಹವಾಮಾನ ವೈಪರೀತ್ಯದಿಂದಾಗಿ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ; ನಂತರ ರಸ್ತೆ ಮಾರ್ಗವಾಗಿ ಪ್ರಯಾಣಿಸಿದೆವು, ಆದರೂ ತಡವಾಯಿತು. ನನಗಾಗಿ ನೀವು ಕಾಯಬೇಕಾಯಿತು; ಇದರಿಂದ ನಿಮಗಾದ ಅನಾನುಕೂಲಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ.
ಸ್ನೇಹಿತರೇ,
ಐಐಟಿ ಖರಗ್ಪುರದ ಈ ಪ್ಲಾಟಿನಂ ಜುಬಿಲಿ ಸಂಭ್ರಮದಲ್ಲಿ, ಭಾರತದ ಭೂತಕಾಲ, ವರ್ತಮಾನ ಮತ್ತು ಭವಿಷ್ಯತ್ತು ಒಂದಕ್ಕೊಂದು ಬೆಸೆದುಕೊಂಡಿರುವುದನ್ನು ನಾನು ಕಾಣುತ್ತಿದ್ದೇನೆ. ಇಲ್ಲಿ ಅತ್ಯಂತ ಪ್ರತಿಭಾವಂತ ಮತ್ತು ಉನ್ನತ ಆಕಾಂಕ್ಷೆಗಳನ್ನು ಹೊಂದಿರುವ ಪೀಳಿಗೆಯೊಂದು ನೆರೆದಿದೆ. ಈ ಸಂಸ್ಥೆಯ 75 ವರ್ಷಗಳ ಪಯಣವನ್ನು ಸಂಭ್ರಮಿಸಲು ಮತ್ತು ಅದರ ಪರಂಪರೆಯನ್ನು ಗೌರವಿಸಲು ನಾವೆಲ್ಲರೂ ಇಂದು ಇಲ್ಲಿ ಸೇರಿದ್ದೇವೆ. ಸ್ಥಾಪನೆಯಾದಾಗಿನಿಂದ ಕಳೆದ 75 ವರ್ಷಗಳಲ್ಲಿ, ಐಐಟಿ ಖರಗ್ಪುರ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಈ 75 ವರ್ಷಗಳಲ್ಲಿ, ಭಾರತವು ಎತ್ತಿನ ಗಾಡಿಗಳಿಂದ ಬುಲೆಟ್ ರೈಲುಗಳವರೆಗೆ, ಅಂಚೆ ಪತ್ರಗಳಿಂದ ಹಿಡಿದು ಸಾಮಾಜಿಕ ಜಾಲತಾಣದ ಸಂದೇಶಗಳವರೆಗೆ ಆಗಿರುವ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಇಂತಹ ಪ್ರತಿಯೊಂದು ಪರಿವರ್ತನೆಯ ಹಂತದಲ್ಲೂ, ದೇಶದ ಮೊದಲ ಐಐಟಿ ಆಗಿ, ಐಐಟಿ ಖರಗ್ಪುರ ಪ್ರಮುಖ ಪಾತ್ರ ವಹಿಸಿದೆ. ಈ ಸಂದರ್ಭದಲ್ಲಿ, ಐಐಟಿ ಖರಗ್ಪುರದ ಎಲ್ಲಾ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಇತರ ಸಿಬ್ಬಂದಿ ವರ್ಗ ಮತ್ತು ಹಳೆಯ ವಿದ್ಯಾರ್ಥಿಗಳಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಐಐಟಿ ಖರಗ್ಪುರದ ಜೀವನದ ಕೆಲವು ನೆನಪುಗಳು ಸದಾ ಕಾಲ ನಿಮ್ಮೊಂದಿಗೆ ಉಳಿದುಬಿಡುತ್ತವೆ. ದಶಕಗಳು ಕಳೆದರೂ, ಇಲ್ಲಿನ ಹಳೆಯ ವಿದ್ಯಾರ್ಥಿಗಳು ‘ಚೆಡಿಸ್’ (Chedis) ನಲ್ಲಿ ಚಹಾ ಕುಡಿಯುತ್ತಾ ನಡೆಸಿದ ಚರ್ಚೆಗಳನ್ನು ಇಂದಿಗೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿರಬಹುದು ಎಂದು ನನಗೆ ಖಾತ್ರಿಯಿದೆ. ಇತರ ಶಿಕ್ಷಣ ಸಂಸ್ಥೆಗಳಲ್ಲಿ ‘ಹಾಸ್ಟೆಲ್’ಗಳಿದ್ದರೆ, ಇಲ್ಲಿ ‘ಹಾಲ್’ (Hall) ಗಳಿವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ‘ಹಾಲ್’ ಬಗ್ಗೆ ಎಷ್ಟು ಹೆಮ್ಮೆ ಪಡುತ್ತಾರೆ ಎಂಬುದು ನನಗೆ ತಿಳಿದಿದೆ. ಇಲ್ಲಿಗೆ ಬರುವ ಮೊದಲು, ನನಗೆ ದೀಪಾವಳಿಯ ಛಾಯಾಚಿತ್ರಗಳನ್ನು ತೋರಿಸಲಾಗಿತ್ತು; ನೀವೆಲ್ಲರೂ ಈಗಷ್ಟೇ ದೀಪಾವಳಿಯನ್ನು ಆಚರಿಸಿದ್ದೀರಿ. ಐಐಟಿ ಖರಗ್ಪುರದಲ್ಲಿ ದೀಪಾವಳಿಯು ತನ್ನದೇ ಆದ ವಿಶೇಷ ಉತ್ಸಾಹವನ್ನು ಹೊಂದಿರುತ್ತದೆ ಎಂದು ನನಗೆ ತಿಳಿಸಲಾಗಿದೆ. ಇಲ್ಲಿನ ದೀಪಾಲಂಕಾರವು ತನ್ನದೇ ಆದ ವಿಶಿಷ್ಟ ಆಕರ್ಷಣೆಯನ್ನು ಹೊಂದಿದೆ ಮತ್ತು ವಿವಿಧ ಹಾಲ್ಗಳ (ವಿದ್ಯಾರ್ಥಿ ನಿಲಯಗಳ) ನಡುವಿನ ಸ್ಪರ್ಧೆಯು ಇದನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ಈ ವರ್ಷ ಯಾವ ಹಾಲ್ ಗೆದ್ದಿದೆ? ಅವರು ಎಷ್ಟು ಹೆಮ್ಮೆಯಿಂದ ಅದನ್ನು ಹೇಳುತ್ತಿದ್ದಾರೆ ನೋಡಿ! ವಿಜೇತರಿಗೆ ಅಭಿನಂದನೆಗಳು. ವಿಜೇತರೇ ಚಪ್ಪಾಳೆ ತಟ್ಟದಿದ್ದರೆ, ಇನ್ನಾರು ತಟ್ಟುತ್ತಾರೆ?
ಸ್ನೇಹಿತರೇ,
ಬಂಗಾಳದ ಈ ನೆಲವು ವಿಚಾರಗಳಿಗೆ ಶಕ್ತಿ ಸಿಕ್ಕ ಸ್ಥಳ, ರಾಷ್ಟ್ರೀಯ ಚಳವಳಿಗಳು ಹುಟ್ಟಿಕೊಂಡ ಸ್ಥಳ. ಮತ್ತು ಈ ಸಂಸ್ಥೆಯು ಒಂದು ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಇರಿಸಲಾಗಿದ್ದ ಶಿಬಿರವಿದ್ದ ಜಾಗದಲ್ಲಿ ನೆಲೆಗೊಂಡಿದೆ. ಇಲ್ಲಿ ಬಂಧಿತರಾಗಿದ್ದ ಆ ಸ್ವಾತಂತ್ರ್ಯ ಹೋರಾಟಗಾರರು ದಿನವಿಡೀ ಏನು ಚರ್ಚಿಸಿರಬಹುದು ಎಂದು ಒಮ್ಮೆ ಊಹಿಸಿ ನೋಡಿ. ಅವರ ಮನಸ್ಸಿನಲ್ಲಿ ಯಾವ ಆಲೋಚನೆಗಳು ಸುಳಿದಾಡಿರಬಹುದು? ಆ ಕಾಲದ ಅವರ ಜೀವನ, ಅವರ ಚಿಂತನೆಗಳು ಮತ್ತು ಅವರ ಚಟುವಟಿಕೆಗಳು ಇಂದಿಗೂ ಇಲ್ಲಿನ ವಾತಾವರಣದಲ್ಲಿ ಒಂದು ಮಂತ್ರದಂತೆ ಪ್ರತಿಧ್ವನಿಸುತ್ತಾ, ನಿಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಿರಬಹುದು. ದಶಕಗಳ ಹಿಂದೆ, ಈ ಬಂಧನ ಶಿಬಿರಗಳು ಸ್ವಯಂ ಆಡಳಿತವನ್ನು ಬಯಸಿದ ಮತ್ತು ಭಾರತವು ಉನ್ನತ ಶಿಖರಗಳನ್ನು ತಲುಪಬೇಕೆಂದು ಆಶಿಸಿದ ಭಾರತೀಯರ ಅಚಲ ಮನೋಸ್ಥೈರ್ಯ ಮತ್ತು ಧೈರ್ಯಕ್ಕೆ ಸಾಕ್ಷಿಯಾಗಿದ್ದವು. ಇಂದು, ಅದೇ ನೆಲದಲ್ಲಿ, ನಮ್ಮ ಐಐಟಿ ಒಂದು ಹೊಸ ಮತ್ತು ಚೈತನ್ಯಶೀಲ ಸಂಸ್ಥೆಯಾಗಿ ರೂಪಾಂತರಗೊಂಡಿದೆ. ಇಲ್ಲಿಂದ ಹೊರಹೊಮ್ಮುತ್ತಿರುವ ಯುವಜನರ ಆವಿಷ್ಕಾರಗಳು ಮತ್ತು ವಿಚಾರಗಳು ‘ಆತ್ಮನಿರ್ಭರ ಭಾರತ’ದ ಶಕ್ತಿಯಾಗುತ್ತಿವೆ. ಒಂದು ಕಾಲದಲ್ಲಿ ಸ್ವಯಂ ಆಡಳಿತವನ್ನು ಆಕಾಂಕ್ಷಿಸಿದ್ದ ಈ ನೆಲ, ಇಂದು ಸ್ವಾವಲಂಬನೆಯ ಸಂಕಲ್ಪವನ್ನು ಪ್ರತಿಬಿಂಬಿಸುತ್ತಿದೆ. ಅಂದು ಸ್ವಾತಂತ್ರ್ಯದ ಕನಸಿತ್ತು; ಇಂದು ಭವಿಷ್ಯವನ್ನು ರೂಪಿಸುವ ಅವಕಾಶವಿದೆ. ಆಕಾಂಕ್ಷೆಯಿಂದ ಸ್ವಾವಲಂಬನೆಯೆಡೆಗಿನ ಈ ಪಯಣವೇ ‘ವಿಕಸಿತ ಭಾರತ’ವನ್ನು ನಿರ್ಮಿಸುವ ಹಿಂದಿರುವ ನಿಜವಾದ ಶಕ್ತಿಯಾಗಿದೆ.
ಸ್ನೇಹಿತರೇ,
ಐಐಟಿ ಖರಗ್ಪುರ ತನ್ನ ಪಯಣವನ್ನು ಪ್ರಾರಂಭಿಸಿದಾಗ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಕೆಲವೇ ಕಾಲವಾಗಿತ್ತು. ಆಗ ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ಕೂಡ ನಡೆದಿರಲಿಲ್ಲ. ಆ ಸಮಯದಲ್ಲಿ, ಭಾರತಕ್ಕೆ ತನ್ನ ಕೈಗಾರಿಕೆಗಳು ಮತ್ತು ಮೂಲಸೌಕರ್ಯಗಳಿಗಾಗಿ ಎಂಜಿನಿಯರ್ಗಳ ಅಗತ್ಯವಿತ್ತು. ದೇಶದ ವೈಜ್ಞಾನಿಕ ಸಾಮರ್ಥ್ಯಗಳು ವಿಸ್ತರಿಸಿದಂತೆ, ಇಲ್ಲಿನ ಪದವೀಧರರು ನಮ್ಮ ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ಕಾರ್ಯಕ್ರಮಗಳಿಗೆ ಕೊಡುಗೆ ನೀಡಿದರು. ನಂತರ ಮಾಹಿತಿ ತಂತ್ರಜ್ಞಾನದ ಯುಗ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಹೊಸ ಅವಕಾಶಗಳು ಬಂದವು. ಈ ಸಂಸ್ಥೆಯಿಂದ ಹೊರಬಂದ ಯುವಜನರು ಭಾರತದ ಸಾಫ್ಟ್ವೇರ್ ಉದ್ಯಮವನ್ನು ಬಲಪಡಿಸಿದರು ಮತ್ತು ಪ್ರಮುಖ ಜಾಗತಿಕ ಕಂಪನಿಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರತಿ ಯುಗದಲ್ಲೂ, ಈ ಸಂಸ್ಥೆಯು ಮುಂಚೂಣಿಯಲ್ಲಿ ನಿಂತು ರಾಷ್ಟ್ರ ನಿರ್ಮಾಣದಲ್ಲಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದೆ. ಇಂದು, ನಾವು ‘ಅಭಿವೃದ್ಧಿ ಹೊಂದಿದ ಭಾರತ’ದ ಗುರಿಯತ್ತ ಸಾಗುತ್ತಿರುವಾಗ, ಐಐಟಿ ಖರಗ್ಪುರವು ಕಳೆದ 75 ವರ್ಷಗಳಲ್ಲಿ ಗಳಿಸಿರುವ ಅನುಭವವು ದೇಶದ ಅಭಿವೃದ್ಧಿ ಮತ್ತು ನಾವೀನ್ಯತೆಯ ವಲಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇಂದಿನ ‘ಆಕಾಂಕ್ಷಿ ಭಾರತ’ದ ಕನಸುಗಳನ್ನು ನನಸಾಗಿಸಲು ನೀವು ಯಾವುದೇ ಪ್ರಯತ್ನವನ್ನೂ ಬಾಕಿ ಉಳಿಸುವುದಿಲ್ಲ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೇ,
ನಮ್ಮ ನಿಜವಾದ ಸಾಮರ್ಥ್ಯವು, ನಾವು ಸವಾಲುಗಳನ್ನು ಎಷ್ಟು ಧೈರ್ಯದಿಂದ ಎದುರಿಸುತ್ತೇವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಜನರು ಆಗಾಗ್ಗೆ ನನ್ನನ್ನು ಸವಾಲುಗಳ ಬಗ್ಗೆ ಕೇಳುತ್ತಾರೆ. ಸವಾಲುಗಳನ್ನು ಎದುರಿಸದೇ ಸುಮ್ಮನೆ ಕುಳಿತುಕೊಳ್ಳುವುದು ನನ್ನ ಸ್ವಭಾವವೇ ಅಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ.
ಸ್ನೇಹಿತರೇ,
ಪ್ರಶ್ನೆ ಏನೆಂದರೆ, ನಾವು ಸವಾಲುಗಳನ್ನು ಎದುರಿಸುತ್ತೇವೆಯೇ ಅಥವಾ ಬೇಗನೆ ತೃಪ್ತಿಪಟ್ಟುಕೊಂಡು ಸುಮ್ಮನೆ ಕುಳಿತುಬಿಡುತ್ತೇವೆಯೇ? ಕೆಲವೊಮ್ಮೆ ಜನರು ತಮ್ಮ ಆಲೋಚನೆಗಳಿಗೆ ತಾವೇ ಮಿತಿಗಳನ್ನು ಹಾಕಿಕೊಳ್ಳುತ್ತಾರೆ. ಅವರು ತಮ್ಮ ಸುತ್ತಲೂ ಗಡಿಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಇದನ್ನೇ ‘ಸೀಮಿತಗೊಳಿಸುವ ನಂಬಿಕೆಗಳು’ ಎಂದು ಕರೆಯಲಾಗುತ್ತದೆ. ಹಾಗಾದರೆ, ಈ ‘ಸೀಮಿತಗೊಳಿಸುವ ನಂಬಿಕೆಗಳು’ ಎಂದರೇನು?
ನಿಮ್ಮ ಕನಸುಗಳನ್ನು ಸೀಮಿತಗೊಳಿಸುತ್ತಿದ್ದೀರಿ. ಇಂತಹ ಮಿತಿ ಹೇರುವ ನಂಬಿಕೆಗಳು ನಿಮ್ಮ ಪ್ರತಿಭೆಯನ್ನು ಕುಂಠಿತಗೊಳಿಸುತ್ತಿವೆ. ಇವು ನಿಮ್ಮ ದೇಶದ ಸಾಮರ್ಥ್ಯಗಳನ್ನೂ ಸೀಮಿತಗೊಳಿಸುತ್ತಿವೆ. ಯಾವುದು ಸಾಧ್ಯ ಮತ್ತು ಯಾವುದು ಅಸಾಧ್ಯ ಎಂಬುದನ್ನು ನಾವೇ ನಿರ್ಧರಿಸುತ್ತೇವೆ. ಬಹುತೇಕ ಜನರು, “ಇಲ್ಲ, ಇದು ಸಾಧ್ಯವಿಲ್ಲ” ಎಂದು ಹೇಳುವುದರೊಂದಿಗೆ ಪ್ರಾರಂಭಿಸುತ್ತಾರೆ. ಇಂತಹ ಜಡ ಆಲೋಚನೆಗಳೊಂದಿಗೆ ಬದುಕುವವರು ನಿಜವಾದ ಅರ್ಥದಲ್ಲಿ ಜೀವನವನ್ನು ನಡೆಸಲು ಸಾಧ್ಯವಿಲ್ಲ,
ಸ್ನೇಹಿತರೇ!
ನಮ್ಮ ಆಲೋಚನೆಯ ಮಿತಿಗಳನ್ನೇ ನಮ್ಮ ಪ್ರಪಂಚದ ಮಿತಿಗಳೆಂದು ನಾವು ಪರಿಗಣಿಸಲು ಪ್ರಾರಂಭಿಸುತ್ತೇವೆ.
ಸ್ನೇಹಿತರೇ,
ರಾಷ್ಟ್ರಗಳು ಕೂಡ ತಮ್ಮ ಆಲೋಚನೆಯ ಮಿತಿಗಳನ್ನು ಮುರಿದಾಗ ಮಾತ್ರ ತಮ್ಮ ಸಾಮರ್ಥ್ಯಗಳನ್ನು ಗುರುತಿಸಿಕೊಳ್ಳಬಲ್ಲವು. ಇತ್ತೀಚಿನ ವರ್ಷಗಳಲ್ಲಿ ಭಾರತವು ಇದನ್ನೇ ಸಾಬೀತುಪಡಿಸಿದೆ. ಭಾರತವು ಆತ್ಮವಿಶ್ವಾಸದಿಂದ ಘೋಷಿಸಿತು: ಮಿತಿಗಳನ್ನು ಮುರಿಯಿರಿ. ಸಾಧ್ಯತೆಗಳನ್ನು ಅನಾವರಣಗೊಳಿಸಿ. ನಾನಿದಕ್ಕೆ ಕೆಲವು ಉದಾಹರಣೆಗಳನ್ನು ನೀಡುತ್ತೇನೆ. ಯೋಚಿಸಿ ನೋಡಿ; ಸುಮಾರು ಇಪ್ಪತ್ತು ವರ್ಷಗಳ ಹಿಂದಿನವರೆಗೂ, ನಮ್ಮ ದೇಶದಲ್ಲಿ ಬಡತನವೊಂದು ಶಾಶ್ವತ ಸಮಸ್ಯೆಯೆಂದು ಪರಿಗಣಿಸಲ್ಪಟ್ಟಿತ್ತು. ಐದು ದಶಕಗಳ ಹಿಂದೆ, ಕೆಂಪು ಕೋಟೆಯಿಂದ ಬಡತನ ನಿರ್ಮೂಲನೆಯ ಘೋಷಣೆಗಳನ್ನು ಕೂಗಲಾಗಿತ್ತು. ಆದರೆ, ಆ ನಂತರ ನೀತಿ ಮಟ್ಟದಲ್ಲಿ ಏನಾದರೂ ಕ್ರಮ ಕೈಗೊಳ್ಳಬೇಕಾದಾಗ, ಇಡೀ ವ್ಯವಸ್ಥೆಯು ಕೇವಲ ಕಡತಗಳನ್ನು ಸಿದ್ಧಪಡಿಸಿ, ಅವುಗಳ ಮೇಲೆ ಕುಳಿತುಕೊಳ್ಳುತ್ತಿತ್ತು (ಯಾವುದೇ ಕ್ರಮ ಕೈಗೊಳ್ಳದೆ ಹಾಗೆಯೇ ಉಳಿಸಿಕೊಳ್ಳುತ್ತಿತ್ತು).
ಸ್ನೇಹಿತರೇ,
ಹೀಗಾಗಲು ಕಾರಣವೇನೆಂದರೆ, ಬಡತನವನ್ನು ಎಂದಿಗೂ ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಎಲ್ಲರೂ ನಂಬಿದ್ದರು. “ಜನಸಂಖ್ಯೆ ತುಂಬಾ ದೊಡ್ಡದಿದೆ, ಪರಿಸ್ಥಿತಿ ಯಾವಾಗಲೂ ಹೀಗೆಯೇ ಇರುತ್ತದೆ” ಎಂದು ಭಾವಿಸಿದ್ದರು. ಬಡತನ ನಿರ್ಮೂಲನೆಗೆ ಸರಿಯಾದ ನೀತಿಗಳನ್ನು ಜಾರಿಗೆ ತರುವ ಧೈರ್ಯವನ್ನೂ ಯಾರೂ ತೋರಿಸಲಿಲ್ಲ.
ಸ್ನೇಹಿತರೇ,
ನಾವು ಅಧಿಕಾರಕ್ಕೆ ಬಂದಾಗಲೂ ಪರಿಸ್ಥಿತಿ ಇದೇ ರೀತಿ ಇತ್ತು. ನಾನು ಕೆಂಪು ಕೋಟೆಯಿಂದ, ಬಡವರಿಗಾಗಿ ಶೌಚಾಲಯಗಳನ್ನು ನಿರ್ಮಿಸುವುದಾಗಿ ಹೇಳಿದೆ. ಸಂಸತ್ತಿನಲ್ಲಿದ್ದವರು ಇದನ್ನು ನೋಡಿ ಅಪಹಾಸ್ಯ ಮಾಡಿದರು. “ಇಂಥ ಪ್ರಧಾನಿ ಯಾರು? ಕೆಂಪು ಕೋಟೆಯಿಂದ ನಿಂತು ಶೌಚಾಲಯ ನಿರ್ಮಿಸುವ ಬಗ್ಗೆ ಮಾತನಾಡುತ್ತಿದ್ದಾರೆ!” ಎಂದು ಅವರು ಹೇಳಿದರು. ಬಡ ಕುಟುಂಬಕ್ಕೆ, ಬಡ ತಾಯಂದಿರು ಮತ್ತು ಸಹೋದರಿಯರಿಗೆ ಶೌಚಾಲಯ ಎಷ್ಟು ಮುಖ್ಯ ಎಂಬುದನ್ನು ಅಂತಹ ಜನರು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇಂತಹ ಆಲೋಚನಾ ಧೋರಣೆಯಿಂದಾಗಿ, ಇಡೀ ದೇಶವು ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಕಳೆದ 12 ವರ್ಷಗಳಲ್ಲಿ, ನಾವು ಈ ಮನಸ್ಥಿತಿಯನ್ನು ಬದಲಾಯಿಸಿದ್ದೇವೆ. ನಾವು ಬಡವರನ್ನು ಸಬಲೀಕರಣಗೊಳಿಸಿದ್ದೇವೆ. ‘ಶಕ್ತಿಯಿಂದ ಸಬಲೀಕರಣ ಶಕ್ತಿ’ ಎಂಬುದು ನನ್ನ ಜೀವನದ ಮಾರ್ಗದರ್ಶಿ ತತ್ವವಾಗಿದೆ. ನಾವು ಅವರಿಗೆ ಶಕ್ತಿ ತುಂಬಿದೆವು. ಅವರ ಜೀವನವನ್ನು ಸುಲಭಗೊಳಿಸಲು ಯೋಜನೆಗಳನ್ನು ಜಾರಿಗೆ ತಂದೆವು. ಇಂದು ದೇಶವು ಅದರ ಫಲಿತಾಂಶಗಳನ್ನು ಕಾಣುತ್ತಿದ್ದೇವೆ. ನೀವು ಇತ್ತೀಚಿನ ವಿಶ್ವ ಬ್ಯಾಂಕ್ ವರದಿಯ ಬಗ್ಗೆ ಓದಿರಬಹುದು ಅಥವಾ ಕೇಳಿರಬಹುದು. ಕೇವಲ 12-13 ವರ್ಷಗಳಲ್ಲಿ ಭಾರತದಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸ್ನೇಹಿತರೇ,
ಇದು ಸಣ್ಣ ಬದಲಾವಣೆಯಲ್ಲ. ಇದು ‘ಮಿತಿಗಳನ್ನು ಮುರಿಯಿರಿ’ ಎಂದು ಹೇಳುವ ಮನಸ್ಥಿತಿಯ ಫಲಿತಾಂಶವಾಗಿದೆ.
ಸ್ನೇಹಿತರೇ,
ನಾನು ನಿಮಗೆ ಮತ್ತೊಂದು ಉದಾಹರಣೆಯನ್ನು ನೀಡುತ್ತೇನೆ. ನಾನು ಸೆಮಿಕಂಡಕ್ಟರ್ ಮಿಷನ್ (ಅರೆವಾಹಕ ಅಭಿಯಾನ) ಅನ್ನು ಪ್ರಾರಂಭಿಸಿದಾಗ, ಅನೇಕ ಪ್ರಶ್ನೆಗಳು ಎದ್ದವು. “ಈಗ ನಮಗೆ ಈ ಮಿಷನ್ ಏಕೆ ಬೇಕು? ಇತರ ದೇಶಗಳು ಈಗಾಗಲೇ ಸೆಮಿಕಂಡಕ್ಟರ್ಗಳನ್ನು ತಯಾರಿಸುತ್ತಿವೆ. ಕಳೆದ 50 ವರ್ಷಗಳಿಂದ ಪ್ರಪಂಚದಾದ್ಯಂತ ಸೆಮಿಕಂಡಕ್ಟರ್ಗಳನ್ನು ತಯಾರಿಸಲಾಗುತ್ತಿದೆ. ಈಗ ಸೆಮಿಕಂಡಕ್ಟರ್ಗಳನ್ನು ತಯಾರಿಸುವುದರಿಂದ ನಮಗೆ ಏನು ಸಿಗುತ್ತದೆ?” – ಇದು ಚಿಂತನೆಯಲ್ಲಿನ ಮಿತಿಯಾಗಿದೆ.
ಸ್ನೇಹಿತರೇ,
ಐವತ್ತು ವರ್ಷಗಳ ಹಿಂದೆ ಒಂದು ಕಂಪನಿಯು ಸೆಮಿಕಂಡಕ್ಟರ್ಗಳನ್ನು ತಯಾರಿಸಲು ಭಾರತಕ್ಕೆ ಬಂದಿತ್ತು ಎಂಬುದು ನಿಮಗೆ ಆಶ್ಚರ್ಯವನ್ನುಂಟುಮಾಡಬಹುದು. ಆದರೆ, ಅವರಿಗೆ ಸ್ಪಷ್ಟವಾಗಿ ‘ಕೆಂಪು ನಿಶಾನೆ’ (ತಡೆ) ತೋರಿಸಿ ವಾಪಸ್ ಕಳುಹಿಸಲಾಯಿತು. ಇದಕ್ಕಾಗಿ ಯಾರೂ ಚಪ್ಪಾಳೆ ತಟ್ಟುವುದಿಲ್ಲ ಎಂಬುದು ನನಗೆ ಗೊತ್ತು. ಅದು ಆ ‘ಕೆಂಪು ನಿಶಾನೆ’ ತೋರಿಸುವವರ ಕೆಲಸವಾಗಿತ್ತು. ನಾನು ಸೆಮಿಕಂಡಕ್ಟರ್ ಮಿಷನ್ ಬಗ್ಗೆ ಮಾತನಾಡಿದಾಗ, “ಈಗಾಗಲೇ ತುಂಬಾ ತಡವಾಗಿದೆ” ಎಂದು ಜನರು ಮತ್ತೆ ಹೇಳಿದರು.
ಸ್ನೇಹಿತರೇ,
ಆದರೆ ನಾನು ದೃಢನಿಶ್ಚಯದಿಂದ ಇದ್ದೆ. ನಾನು, “ತಡವಾಗಿದ್ದರೂ, ಭಾರತವು ಸುಮ್ಮನೆ ಕೈಕಟ್ಟಿ ಕೂರಬೇಕೇ?” ಎಂದು ಕೇಳಿದೆ. ನಾವು ಕೆಲಸ ಪ್ರಾರಂಭಿಸಿದೆವು. ಯೋಜನೆಗಳನ್ನು ರೂಪಿಸಲು ನಾನು ಸ್ವತಃ ಅಧಿಕಾರಿಗಳೊಂದಿಗೆ ಕೆಲಸ ಮಾಡಿದೆ. ಮತ್ತು ಇಂದು, ಕೇವಲ ನಾಲ್ಕು ವರ್ಷಗಳಲ್ಲಿ, ದೇಶದಲ್ಲಿ ಅನೇಕ ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಲಾಗಿದೆ. ಭಾರತವು ಚಿಪ್ಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ. ನಿಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು (ಅಲುಮ್ನಿ) ಅನೇಕರು ಈ ಘಟಕಗಳನ್ನು ನಡೆಸುತ್ತಿದ್ದಾರೆ ಮತ್ತು ಮುನ್ನಡೆಸುತ್ತಿದ್ದಾರೆ. ಅವರು ನಾಯಕತ್ವವನ್ನು ವಹಿಸಿಕೊಂಡು ಕಾರ್ಯಗತಗೊಳಿಸುತ್ತಿದ್ದಾರೆ. ನನ್ನ ಮಾತನ್ನು ನಂಬಿ, ನಿಮಗಾಗಿ ಎಲ್ಲೆಡೆ ಅವಕಾಶಗಳಿವೆ. ಚಿಪ್ಗಳಿಂದ ಹಿಡಿದು ಹಡಗುಗಳವರೆಗೆ ಎಲ್ಲವನ್ನೂ ಇಲ್ಲಿಯೇ ತಯಾರಿಸಲಾಗುತ್ತದೆ ಮತ್ತು ಇದನ್ನು ನಿಮ್ಮಂತಹ ಯುವಜನರೇ ಮಾಡಲಿದ್ದಾರೆ. ಆದರೆ ಯೋಚಿಸಿ ನೋಡಿ, “ಇತರರು ಈಗಾಗಲೇ ಇದನ್ನು ಮಾಡುತ್ತಿದ್ದಾರೆ, ನಾವೇಕೆ ಪ್ರಯತ್ನಿಸಬೇಕು?” ಎಂಬ ಆಲೋಚನೆಯನ್ನು ನಾವು ಒಪ್ಪಿಕೊಂಡಿದ್ದರೆ, ಇವೆಲ್ಲವೂ ಸಾಧ್ಯವಾಗುತ್ತಿರಲಿಲ್ಲ.
ಸ್ನೇಹಿತರೇ,
ನಾನು ಮತ್ತೊಂದು ಪ್ರಬಲ ಉದಾಹರಣೆಯನ್ನು ನೀಡುತ್ತೇನೆ – ಬಾಹ್ಯಾಕಾಶ ವಲಯ. ಹಿಂದೆ, ಇಸ್ರೋದಲ್ಲಿ ನಮಗೆ ಸೀಮಿತ ವೇದಿಕೆ ಇತ್ತು, ಅಲ್ಲಿ ಪ್ರವೇಶವೇ ಅತ್ಯಂತ ಕಠಿಣವಾಗಿತ್ತು. ಯಾವುದೇ ಉಡಾವಣೆ ಅಥವಾ ಹೊಸ ಮಿಷನ್ ಒಂದು ಬಿಗಿಯಾದ ವ್ಯವಸ್ಥೆಯ ಮೂಲಕವೇ ಸಾಗಬೇಕಿತ್ತು. ಇಸ್ರೋದ ಹೊರಗಿನ ಯುವಜನರಿಗೆ ಅವಕಾಶಗಳೇ ಸಿಗುತ್ತಿರಲಿಲ್ಲ. ನಮ್ಮ ಯುವ ನಾವೀನ್ಯಕಾರರಿಗೆ ಈ ವಲಯದಲ್ಲಿ ಅವಕಾಶ ಸಿಗಲೇಬೇಕು ಎಂದು ನಾನು ಸಚಿವಾಲಯಕ್ಕೆ ಹೇಳಿದೆ. ನಾವು ಭಾರತದ ಬಾಹ್ಯಾಕಾಶ ವಲಯವನ್ನು ನಮ್ಮ ಯುವಜನರಿಗಾಗಿ ಮುಕ್ತಗೊಳಿಸಿದೆವು. ಮತ್ತು ಇಂದು ನೋಡಿ, ಏನಾಗಿದೆ ಎಂದು! ಐಐಟಿ ಖರಗ್ಪುರದ ಹಳೆಯ ವಿದ್ಯಾರ್ಥಿಯಾದ ಪವನ್, ‘ಸ್ಕೈರೂಟ್ ಏರೋಸ್ಪೇಸ್’ ಮೂಲಕ, ಭಾರತದ ಮೊದಲ ಖಾಸಗಿ ರಾಕೆಟ್ ಅನ್ನು ಉಡಾವಣೆ ಮಾಡಿದ ಕೀರ್ತಿಯನ್ನು ಭಾರತಕ್ಕೆ ತಂದುಕೊಟ್ಟರು. ಇಂದು ಇಂತಹ ಅನೇಕ ಬಾಹ್ಯಾಕಾಶ ಸ್ಟಾರ್ಟ್ಅಪ್ಗಳು ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಹೊಸ ವೇಗದಲ್ಲಿ ಮುನ್ನಡೆಸುತ್ತಿವೆ. ಒಂದು ಕಾಲದಲ್ಲಿ ಇವೆಲ್ಲವೂ ಅಸಾಧ್ಯವೆಂದು ತೋರುತ್ತಿದ್ದವು. ಆದರೆ ಇಂದು ಅವು ಸಾಧ್ಯವಾಗಿವೆ; ಇಂದು ಅವು ವಾಸ್ತವವಾಗಿವೆ. ಅಸಾಧ್ಯವಾದುದನ್ನು ಸಾಧ್ಯವಾಗಿಸುವಲ್ಲಿ ನಿಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು (ಅಲುಮ್ನಿ) ಪ್ರಮುಖ ಕೊಡುಗೆ ನೀಡಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ.
ಸ್ನೇಹಿತರೇ,
ದೇಶವು ನಿಮ್ಮೆಲ್ಲರಿಂದಲೂ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಮುಂದಿನ ಎರಡು ದಶಕಗಳು ನಿಮ್ಮ ಜೀವನದ ಅತ್ಯಂತ ಫಲಪ್ರದ ವರ್ಷಗಳಾಗಿರಲಿವೆ. 2047ರ ವೇಳೆಗೆ, ನಿಮ್ಮಲ್ಲಿ ಅನೇಕರು ನಾಯಕತ್ವದ ಸ್ಥಾನಗಳಲ್ಲಿರುತ್ತೀರಿ. ಈ ವರ್ಷಗಳು ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ವರ್ಷಗಳೂ ಆಗಲಿವೆ. ಆದ್ದರಿಂದ, ನಿಮ್ಮ ಪ್ರತಿಯೊಂದು ಯಶಸ್ಸೂ ರಾಷ್ಟ್ರಕ್ಕೆ ಮಹತ್ವದ್ದಾಗಿರುತ್ತದೆ. ದೇಶದ ಮುಂದಿರುವ ಯಾವ ಸವಾಲನ್ನು ಪರಿಹರಿಸಲು ನೀವು ಸಹಾಯ ಮಾಡಲು ಬಯಸುತ್ತೀರಿ ಎಂದು ನೀವೇ ನಿಮ್ಮನ್ನು ಕೇಳಿಕೊಳ್ಳಬೇಕು. ಸ್ನೇಹಿತರೇ, ನನ್ನ ಈ ಮಂತ್ರವನ್ನು ನೆನಪಿಡಿ: ‘ರಾಷ್ಟ್ರವೇ ಮೊದಲು’. ನೀವು ಈ ಮನಸ್ಥಿತಿಯೊಂದಿಗೆ ಮುನ್ನಡೆದಾಗ, ಅದು ಖಂಡಿತವಾಗಿಯೂ ನಿಮಗಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ದೇಶಕ್ಕೂ ಅಪಾರ ಪ್ರಯೋಜನಗಳನ್ನು ತರುತ್ತದೆ.
ಸ್ನೇಹಿತರೇ,
ಕಳೆದ 75 ವರ್ಷಗಳಲ್ಲಿ ನೀವು ಅತ್ಯುತ್ತಮ ಕೆಲಸ ಮಾಡಿದ್ದೀರಿ. ಈಗ ನೀವು ಒಂದು ದೃಢ ನಿರ್ಧಾರದೊಂದಿಗೆ ಮುನ್ನಡೆಯಬೇಕು; ಐಐಟಿ ಖರಗ್ಪುರ ತನ್ನ 100ನೇ ವರ್ಷವನ್ನು ಆಚರಿಸುವ ಹೊತ್ತಿಗೆ, ಅದು ‘ಅಭಿವೃದ್ಧಿ ಹೊಂದಿದ ಭಾರತ’ದಲ್ಲಿ ನಡೆಯಬೇಕು. 1925–27ರ ಅವಧಿಯಲ್ಲಿ, ಇದೇ ನೆಲದಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯವನ್ನು ಸಾಧಿಸುವ ಪ್ರತಿಜ್ಞೆ ಮಾಡಿದ್ದರು ಮತ್ತು ಇಪ್ಪತ್ತು ವರ್ಷಗಳ ಒಳಗಾಗಿಯೇ ಅವರು ಅದನ್ನು ಸಾಧಿಸಿದರು. ಇಂದು, ಇದೇ ಸ್ಥಳದಿಂದ ನಾವೂ ಒಂದು ಪ್ರತಿಜ್ಞೆ ಮಾಡೋಣ, ಮುಂದಿನ ಇಪ್ಪತ್ತು ವರ್ಷಗಳಲ್ಲಿ ನಾವು ‘ಅಭಿವೃದ್ಧಿ ಹೊಂದಿದ ಭಾರತ’ವನ್ನು ನಿರ್ಮಿಸುತ್ತೇವೆ. ನಾವು ಇದನ್ನು ಸಾಧಿಸುತ್ತೇವೆ. ಇದಕ್ಕಾಗಿ ನಾವು ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು, ದಣಿವರಿಯದೆ ಶ್ರಮಿಸುತ್ತೇವೆ. ಇಂದು ನಾನು ಬಂಗಾಳದ ನೆಲದಲ್ಲಿರುವುದರಿಂದ, ಸ್ವಾಮಿ ವಿವೇಕಾನಂದರ ಮಾತುಗಳೊಂದಿಗೆ ನನ್ನ ಮಾತನ್ನು ಮುಕ್ತಾಯಗೊಳಿಸುತ್ತೇನೆ: “ಎದ್ದೇಳಿ, ಜಾಗೃತರಾಗಿರಿ ಮತ್ತು ಗುರಿ ತಲುಪುವವರೆಗೂ ನಿಲ್ಲದಿರಿ.” ಮತ್ತೊಮ್ಮೆ, ಈ ವಿಶೇಷ ಸಂದರ್ಭದಲ್ಲಿ, ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು.
ತುಂಬಾ ಧನ್ಯವಾದಗಳು.
ನಮಸ್ಕಾರ.
ಹಕ್ಕುಸ್ವಾಮ್ಯ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿ ಭಾಷೆಯಲ್ಲಿ ಮಾಡಲಾಗಿತ್ತು.
*****
There are no limits to what young minds can achieve. Speaking at the Platinum Jubilee celebrations of IIT Kharagpur. @IITKgp https://t.co/VkB3UO2Rkn
— Narendra Modi (@narendramodi) November 21, 2026
आज जब हम विकसित भारत के लक्ष्य के साथ आगे बढ़ रहे हैं तो IIT खड़गपुर का 75 वर्षों का अनुभव देश के विकास में, देश के innovation profile में बहुत बड़ी भूमिका निभाने वाला है: PM @narendramodi at Platinum Jubilee celebrations of @IITKgp
— PMO India (@PMOIndia) November 21, 2026
राष्ट्र भी अपनी क्षमताओं को तभी पहचानते हैं जब वे अपनी सोच की सीमाओं को तोड़ते हैं। पिछले कुछ वर्षों में भारत ने यही करके दिखाया है। भारत ने डंके की चोट पर कहा... Break the Limits. Unlock the Possibilities: PM @narendramodi
— PMO India (@PMOIndia) November 21, 2026
Nation First... जब आप इस mindset से आगे बढ़ेंगे तो निश्चित ही, ये आपके लिए भी नए अवसर लेकर आएगा और देश को भी बहुत लाभ होगा: PM @narendramodi at @IITKgp Platinum Jubilee celebrations
— PMO India (@PMOIndia) November 21, 2026