ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 11 ರಂದು ತಮಿಳುನಾಡಿನ ಚೆನ್ನೈಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11:30 ರ ಸುಮಾರಿಗೆ, ಅವರು ಪೋರೂರ್ ಬೈಪಾಸ್ ನಿಲ್ದಾಣದಿಂದ ಪೂನಮಲ್ಲಿ ಬೈಪಾಸ್ ನಿಲ್ದಾಣದವರೆಗೆ ಮತ್ತು ಅಲ್ಲಿಂದ ಹಿಂದಕ್ಕೆ ಚೆನ್ನೈ ಮೆಟ್ರೋದಲ್ಲಿ ಸಂಚರಿಸಲಿದ್ದಾರೆ. ಮಧ್ಯಾಹ್ನ 12:15ರ ಸುಮಾರಿಗೆ, ಅವರು ಚೆನ್ನೈನ ಜಲಕಂಡೇಶ್ವರರ್ ದೇವಸ್ಥಾನದಲ್ಲಿ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ತದನಂತರ, ಅವರು ಐಐಟಿ ಮದ್ರಾಸ್ನಲ್ಲಿರುವ ಬ್ರೈನ್ ಸೆಂಟರ್ ಅನ್ನು ವೀಕ್ಷಿಸಲಿದ್ದಾರೆ.
ಮಧ್ಯಾಹ್ನ 1:30 ರ ಸುಮಾರಿಗೆ, ಪ್ರಧಾನಮಂತ್ರಿಯವರು 13,000 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಯ ಸುಮಾರಿಗೆ, ಅವರು ಚೆನ್ನೈನ ಜೈಗೋಪಾಲ್ ಗರೋಡಿಯಾ ಹಿಂದೂ ವಿದ್ಯಾಲಯ ಮೆಟ್ರಿಕ್ಯುಲೇಶನ್ ಹೈಯರ್ ಸೆಕೆಂಡರಿ ಶಾಲೆಯ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಸಭಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪ್ರಧಾನಮಂತ್ರಿಯವರು ಸುಮಾರು 4,900 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚೆನ್ನೈ ಮೆಟ್ರೋ ರೈಲು ಯೋಜನೆಯ 2ನೇ ಹಂತದ ಪೂನಮಲ್ಲಿ-ವಡಪಳನಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ಕಾರಿಡಾರ್ 3.7-ಕಿಮೀ ಉದ್ದದ ವಿಶಿಷ್ಟ ಡಬಲ್ ಡೆಕ್ಕರ್ ರಚನೆಯನ್ನು ಹೊಂದಿದೆ. ಇದು ಚಾಲಕ ರಹಿತ ಕಾರ್ಯಾಚರಣೆಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ಸುಧಾರಿತ ಸಿಗ್ನಲಿಂಗ್ ವ್ಯವಸ್ಥೆಗಳನ್ನು ಸಹ ಹೊಂದಿದೆ. ಇದು ಪ್ರಯಾಣಿಕರ ದೈನಂದಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಚೆನ್ನೈನ ವೇಗವಾಗಿ ಬೆಳೆಯುತ್ತಿರುವ ಪಶ್ಚಿಮ ಉಪನಗರಗಳು ಮತ್ತು ನಗರ ಕೇಂದ್ರದ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪ್ರಧಾನಮಂತ್ರಿಯವರು ಸುಮಾರು 3,700 ಕೋಟಿ ರೂ.ಮೌಲ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳು ರಸ್ತೆ ಸಂಪರ್ಕವನ್ನು ಬಲಪಡಿಸುತ್ತವೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತವೆ, ಟ್ರಾಫಿಕ್ ದಟ್ಟಣೆಯನ್ನು ನಿವಾರಿಸುತ್ತವೆ ಮತ್ತು ರಾಜ್ಯದಲ್ಲಿ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತವೆ.
ಪ್ರಧಾನಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ-744 ರ 36-ಕಿಮೀ ಉದ್ದದ ಚತುಷ್ಪಥ ವಡುಗಪಟ್ಟಿ-ತೆರ್ಕುವೆಂಗನಲ್ಲೂರು ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಯು ಈ ಪ್ರದೇಶದ ಪ್ರಮುಖ ಯಾತ್ರಾ, ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ, ಜನರು ಮತ್ತು ಸರಕುಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತದೆ. ಅವರು ʻಎನ್ಹೆಚ್-744ಎʼನ 30-ಕಿಮೀ ಉದ್ದದ ಚತುಷ್ಪಥ ಮಧುರೈ ರಿಂಗ್ ರೋಡ್ ವಿಭಾಗವನ್ನು ಸಹ ಉದ್ಘಾಟಿಸಲಿದ್ದಾರೆ. ಈ ಯೋಜನೆಯು ಮಧುರೈನ ಸುತ್ತಮುತ್ತಲಿನ ಸಂಚಾರ ಚಲನೆಯನ್ನು ಸುಧಾರಿಸುತ್ತದೆ ಮತ್ತು ನಗರದೊಳಗಿನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ʻಎನ್ಹೆಚ್-83ʼರ ನಾಗಪಟ್ಟಿಣಂ-ತಂಜಾವೂರು ವಿಭಾಗದಲ್ಲಿ ಚತುಷ್ಪಥ ತಿರುವರೂರು ಬೈಪಾಸ್ಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯು ತಿರುವರೂರಿನಲ್ಲಿ ರಸ್ತೆ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ಪಟ್ಟಣದ ಸುತ್ತಲೂ ಪರ್ಯಾಯ ಮಾರ್ಗವನ್ನು ಒದಗಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತದೆ.
ಪ್ರಧಾನಮಂತ್ರಿಯವರು 750 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅವರು ಕಾರೈಕಾಲ್-ಪೆರಲಂ ರೈಲು ಮಾರ್ಗವನ್ನು ಸಮರ್ಪಿಸಲಿದ್ದು, ಈ ಪ್ರದೇಶದಲ್ಲಿ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದ್ದಾರೆ. ಅವರು ಕೊಯಮತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ರೈಲ್ವೆ ಮೇಲ್ಸೇತುವೆಗಳನ್ನು ಸಹ ಸಮರ್ಪಿಸಲಿದ್ದಾರೆ. ಇವು ಜನನಿಬಿಡ ಲೆವೆಲ್ ಕ್ರಾಸಿಂಗ್ಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲಿವೆ, ಕಾಯುವ ಸಮಯವನ್ನು ತಗ್ಗಿಸಲಿವೆ ಮತ್ತು ಪ್ರಯಾಣಿಕರಿಗೆ ರಸ್ತೆ ಸುರಕ್ಷತೆಯನ್ನು ಸುಧಾರಿಸಲಿವೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಮರು-ಅಭಿವೃದ್ಧಿಗೊಳಿಸಲಾದ ಪಳನಿ, ವೆಲ್ಲೂರು ಕಂಟೋನ್ಮೆಂಟ್, ಅಂಬಾಸಮುದ್ರಂ, ಪರಮಕ್ಕುಡಿ ಮತ್ತು ನಾಮಕ್ಕಲ್ನಲ್ಲಿರುವ ಐದು ‘ಅಮೃತ್ ನಿಲ್ದಾಣ’ಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ.
ಸಾಗರ ಮೂಲಸೌಕರ್ಯವನ್ನು ಬಲಪಡಿಸಲು, ಸರಕು-ನಿರ್ವಹಣಾ ಸಾಮರ್ಥ್ಯವನ್ನು ವಿಸ್ತರಿಸಲು ಮತ್ತು ಸರಕು-ಸಾಗಣೆ ದಕ್ಷತೆಯನ್ನು ಸುಧಾರಿಸಲು ತಮಿಳುನಾಡಿನಲ್ಲಿ ಹಲವಾರು ಬಂದರು ಸಂಬಂಧಿತ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿಯವರು ಚೆನ್ನೈ ಬಂದರಿನಲ್ಲಿ ನಾಲ್ಕು ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ: ಪೇವ್ಡ್ ಸ್ಟೋರೇಜ್ ಯಾರ್ಡ್, ನಾಲ್ಕು ʻಎಕ್ಸಿಮ್ʼ ಗೋದಾಮುಗಳು, ನವೀಕರಿಸಿದ ಕ್ರೂಸ್ ಟರ್ಮಿನಲ್ ಮತ್ತು ನಾವಿಕರ ಕ್ಲಬ್ ಇವುಗಳಲ್ಲಿ ಸೇರಿವೆ. ಈ ಯೋಜನೆಗಳು ಸರಕುಗಳ ಸಂಗ್ರಹಣೆ ಮತ್ತು ನಿರ್ವಹಣೆಯನ್ನು ಸುಧಾರಿಸುತ್ತವೆ, ಗೋದಾಮಿನ ಸಾಮರ್ಥ್ಯವನ್ನು ವಿಸ್ತರಿಸುತ್ತವೆ, ಹೆಚ್ಚು ಕ್ರೂಸ್ ಪ್ರಯಾಣಿಕರು ಏಕಕಾಲದಲ್ಲಿ ಹತ್ತಲು ಮತ್ತು ಇಳಿಯಲು ಅನುವು ಮಾಡಿಕೊಡುವಂತೆ ಪ್ರಯಾಣಿಕರ ಸೌಲಭ್ಯಗಳನ್ನು ಆಧುನೀಕರಿಸುತ್ತವೆ. ಜೊತೆಗೆ, ಭೇಟಿ ನೀಡುವ ನಾವಿಕರು ಮತ್ತು ಕಡಲ ಸಿಬ್ಬಂದಿಗೆ ಆಧುನಿಕ ಕಲ್ಯಾಣ, ಮನರಂಜನಾ ಮತ್ತು ಬೆಂಬಲ ಸೌಲಭ್ಯಗಳನ್ನು ಒದಗಿಸುತ್ತವೆ. ಪ್ರಧಾನಮಂತ್ರಿಯವರು ವಿ.ಒ. ಚಿದಂಬರನಾರ್ ಬಂದರಿನಲ್ಲಿ ಎಂಟು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಯೋಜನೆಗಳು ಸರಕು ಮತ್ತು ಕಂಟೇನರ್ ಸಾಮರ್ಥ್ಯವನ್ನು ವಿಸ್ತರಿಸುತ್ತವೆ, ಶುದ್ಧ ಕಡಲ ಇಂಧನಕ್ಕೆ ಪರಿವರ್ತನೆಗೊಳ್ಳಲು ಮೂಲಸೌಕರ್ಯವನ್ನು ನಿರ್ಮಿಸುತ್ತವೆ ಮತ್ತು ಬಂದರು ಪರಿಸರ ವ್ಯವಸ್ಥೆಯೊಳಗೆ ಸರಕು ಸಾಗಣೆ ಮತ್ತು ಸರಕು-ಸಾಗಣೆ ದಕ್ಷತೆಯನ್ನು ಸುಧಾರಿಸುತ್ತವೆ. ಪ್ರಧಾನಮಂತ್ರಿಯವರು ʻಕಾಮರಾಜರ್ʼ ಬಂದರಿನಲ್ಲಿ ಕೋಲ್ ಬರ್ತ್-3 ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಜೊತೆಗೆ, ಕಂಟೇನರ್ ಟರ್ಮಿನಲ್ ಹಂತ-I, ಹಂತ-II ರ ಬಂಡವಾಳ ಹೂಳೆತ್ತುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ (ಸಿಪಿಸಿಎಲ್) ಅಸ್ತಿತ್ವದಲ್ಲಿರುವ ಮನಾಲಿ ರಿಫೈನರಿಯಲ್ಲಿ ಗ್ರೂಪ್ II/III ಲೂಬ್ ಆಯಿಲ್ ಬೇಸ್ ಸ್ಟಾಕ್ಸ್ (ಎಲ್ಒಬಿಎಸ್) ಯೋಜನೆಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು ಒಟ್ಟು 1,620 ಕೋಟಿ ರೂ. ವೆಚ್ಚದಲ್ಲಿ ಮತ್ತು ವರ್ಷಕ್ಕೆ 270 ಸಾವಿರ ಮೆಟ್ರಿಕ್ ಟನ್ (ಟಿಎಂಟಿಪಿಎ) ಸಾಮರ್ಥ್ಯವನ್ನು ಹೊಂದಿರುವ ಈ ಯೋಜನೆಯು, ಭಾರತದಲ್ಲಿ ವಿಶ್ವ ದರ್ಜೆಯ, ಪ್ರೀಮಿಯಂ ಗುಣಮಟ್ಟದ ಲೂಬ್ರಿಕಂಟ್ಗಳ ಉತ್ಪಾದನೆಗಾಗಿ ಗ್ರೂಪ್ II/III ಲೂಬ್ ಆಯಿಲ್ ಬೇಸ್ ಸ್ಟಾಕ್ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.
ಪ್ರಧಾನಮಂತ್ರಿಯವರು ಐಐಟಿ ಮದ್ರಾಸ್ನಲ್ಲಿರುವ ʻಸುಧಾ ಗೋಪಾಲಕೃಷ್ಣನ್ ಬ್ರೈನ್ ಸೆಂಟರ್ʼ ಅನ್ನು (ಎಸ್ಜಿಬಿಸಿ) ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಭ್ರೂಣದ ಹಂತದಿಂದ ವೃದ್ಧಾಪ್ಯದವರೆಗಿನ ಮಾನವನ ಜೀವಿತಾವಧಿಯಾದ್ಯಂತ, 100 ಕ್ಕೂ ಹೆಚ್ಚು ಮಾನವ ಮಿದುಳುಗಳನ್ನು ಸೆಲ್ಯುಲಾರ್ ರೆಸಲ್ಯೂಶನ್ನಲ್ಲಿ ತ್ರಿ-ಆಯಾಮದ ಅಟ್ಲಾಸ್ಗಳಾಗಿ ಮ್ಯಾಪ್ ಮಾಡುವ ಅದರ ಪ್ರವರ್ತಕ ಜಾಗತಿಕ ವೈಜ್ಞಾನಿಕ ಕಾರ್ಯಾಚರಣೆಯನ್ನು ಸಹ ಅವರು ಪ್ರಾರಂಭಿಸಲಿದ್ದಾರೆ. ಪ್ರಧಾನಮಂತ್ರಿಯವರು ʻಸಿ-ಸ್ಟ್ರೋಕ್ʼ ಎಂಬ ವಿಶಿಷ್ಟವಾದ ʻಮಾನವ ಇಸ್ಕೆಮಿಕ್ ಸ್ಟ್ರೋಕ್ ಅಟ್ಲಾಸ್ʼ ಅನ್ನು ಬಿಡುಗಡೆ ಮಾಡಲಿದ್ದಾರೆ. ಪಾರ್ಶ್ವವಾಯು ಪೀಡಿತ ಮಿದುಳಿನ 1,000 ಕ್ಕೂ ಹೆಚ್ಚು ಟಿಪ್ಪಣಿಗಳಿರುವ ಸೂಕ್ಷ್ಮದರ್ಶಕೀಯ ವಿಭಾಗಗಳನ್ನು ಒಳಗೊಂಡಿರುವ ಈ ಅಟ್ಲಾಸ್, ಪ್ರಪಂಚದಾದ್ಯಂತದ ಸಂಶೋಧಕರಿಗೆ ನವೀನ ಚಿಕಿತ್ಸಕ ಗುರಿಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
ಚೆನ್ನೈನ ಜೈಗೋಪಾಲ್ ಗರೋಡಿಯಾ ಹಿಂದೂ ವಿದ್ಯಾಲಯ ಮೆಟ್ರಿಕ್ಯುಲೇಶನ್ ಹೈಯರ್ ಸೆಕೆಂಡರಿ ಶಾಲೆಯ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ. ಸುವರ್ಣ ಮಹೋತ್ಸವವು ಶಿಕ್ಷಣ ಕ್ಷೇತ್ರಕ್ಕೆ ಸಂಸ್ಥೆಯು ನೀಡಿದ ಐದು ದಶಕಗಳ ಕೊಡುಗೆಯನ್ನು ಮತ್ತು ಶೈಕ್ಷಣಿಕ ಉತ್ಕೃಷ್ಟತೆ, ಶಿಸ್ತು, ಸಾಂಸ್ಕೃತಿಕ ಮೌಲ್ಯಗಳು ಹಾಗೂ ಸಮಗ್ರ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ತಲೆಮಾರುಗಳನ್ನು ಪೋಷಿಸುವಲ್ಲಿ ಅದರ ಪಾತ್ರವನ್ನು ಗುರುತಿಸುತ್ತದೆ. “ಸಾ ವಿದ್ಯಾ ಯಾ ವಿಮುಕ್ತಯೇ” ಎಂಬ ಧ್ಯೇಯವಾಕ್ಯದ ಮಾರ್ಗದರ್ಶನದಲ್ಲಿ, ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ವ್ಯಕ್ತಿಗಳನ್ನು ರೂಪಿಸಲು ಶಾಲೆಯು ಶ್ರಮಿಸುತ್ತಿದೆ. ವರ್ಷಗಳು ಉರುಳಿದಂತೆ, ಬದಲಾಗುತ್ತಿರುವ ಶೈಕ್ಷಣಿಕ ಅಗತ್ಯಗಳಿಗೆ ಅನುಗುಣವಾಗಿ ವಿಕಸನಗೊಂಡಿರುವ ಈ ಸಂಸ್ಥೆಯು, ಚಾರಿತ್ರ್ಯ ನಿರ್ಮಾಣ, ಜ್ಞಾನ ಮತ್ತು ಜವಾಬ್ದಾರಿಯುತ ಪೌರತ್ವದ ಬಗ್ಗೆ ಬಲವಾದ ಒತ್ತು ನೀಡುವುದನ್ನು ಮುಂದುವರೆಸಿದೆ.
*****