ಪಿಎಂಇಂಡಿಯಾ
ಲೋಕಸಭೆಯ ಗೌರವಾನ್ವಿತ ಸ್ಪೀಕರ್ ಶ್ರೀ ಓಂ ಬಿರ್ಲಾ ಜೀ, ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್ ಜೀ, ಅಂತರ-ಸಂಸದೀಯ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಟುಲಿಯಾ ಆಕ್ಸನ್, ಕಾಮನ್ವೆಲ್ತ್ ಸಂಸದೀಯ ಸಂಘದ ಅಧ್ಯಕ್ಷರಾದ ಶ್ರೀ ಕ್ರಿಸ್ಟೋಫರ್ ಕಲಿಲಾ, ಕಾಮನ್ವೆಲ್ತ್ ದೇಶಗಳ ಸ್ಪೀಕರ್‌ಗಳು ಮತ್ತು ಸಭಾಧ್ಯಕ್ಷರು, ಹಾಗು ಪ್ರತಿನಿಧಿಗಳೇ, ಮಹಿಳೆಯರೇ ಮತ್ತು ಮಹನೀಯರೇ!
ಸ್ನೇಹಿತರೇ,
ಸಂಸದೀಯ ಪ್ರಜಾಪ್ರಭುತ್ವದಲ್ಲಿ, ಸ್ಪೀಕರ್ ಆಗಿ ನೀವು ಕಾರ್ಯನಿರ್ವಹಿಸುವಿರಿ. ಕುತೂಹಲಕಾರಿಯಾದ ಸಂಗತಿ ಎಂದರೆ, ಸ್ಪೀಕರ್‌ಗೆ ಹೆಚ್ಚು ಮಾತನಾಡಲು ಅವಕಾಶವಿರುವುದಿಲ್ಲ. ಅವರ ಕೆಲಸವೆಂದರೆ ಇತರರು ಮಾತನಾಡುವುದನ್ನು ಕೇಳುವುದು ಮತ್ತು ಎಲ್ಲರಿಗೂ ಅವಕಾಶ ಸಿಗುವಂತೆ ನೋಡಿಕೊಳ್ಳುವುದು. ಸ್ಪೀಕರ್ ಬಗ್ಗೆ ಒಂದು ಸಾಮಾನ್ಯ ವಿಷಯವೆಂದರೆ ಅವರ ತಾಳ್ಮೆ. ಅವರು ಗದ್ದಲದ ಮತ್ತು ಅತಿಯಾದ ಉತ್ಸಾಹಭರಿತ ಸದಸ್ಯರನ್ನು ಸಹ ನಗುವಿನೊಂದಿಗೆ ನಿಭಾಯಿಸುತ್ತಾರೆ.
ಸ್ನೇಹಿತರೇ,
ಈ ವಿಶೇಷ ಸಂದರ್ಭದಲ್ಲಿ, ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಂದು ನಮ್ಮೊಂದಿಗೆ ನೀವು ಇರುವುದು ನಮಗೆ ಗೌರವ ತರುವ ಸಂಗತಿಯಾಗಿದೆ.
ಸ್ನೇಹಿತರೇ,
ನೀವು ಕುಳಿತಿರುವ ಸ್ಥಳವು ಭಾರತದ ಪ್ರಜಾಪ್ರಭುತ್ವದ ಪ್ರಯಾಣದಲ್ಲಿ ಅಪಾರ ಮಹತ್ವದ್ದಾಗಿದೆ. ವಸಾಹತುಶಾಹಿ ಆಳ್ವಿಕೆಯ ಅಂತಿಮ ವರ್ಷಗಳಲ್ಲಿ, ಭಾರತದ ಸ್ವಾತಂತ್ರ್ಯ ಖಚಿತವಾಗಿದ್ದಾಗ, ಭಾರತದ ಸಂವಿಧಾನದ ಕರಡನ್ನು ರಚಿಸಲು ಸಂವಿಧಾನ ಸಭೆಯು ಇದೇ ಕೇಂದ್ರ ಸಭಾಂಗಣದಲ್ಲಿ ಸಭೆ ಸೇರಿತು. ಸ್ವಾತಂತ್ರ್ಯದ ನಂತರ 75 ವರ್ಷಗಳ ಕಾಲ, ಈ ಕಟ್ಟಡವು ಭಾರತದ ಸಂಸತ್ತಾಗಿ ಕಾರ್ಯನಿರ್ವಹಿಸಿತು ಮತ್ತು ಈ ಸಭಾಂಗಣದಲ್ಲಿ, ಭಾರತದ ಭವಿಷ್ಯವನ್ನು ರೂಪಿಸುವ ಲೆಕ್ಕವಿಲ್ಲದಷ್ಟು ಚರ್ಚೆಗಳು ಮತ್ತು ನಿರ್ಧಾರಗಳು ನಡೆದವು. ಈಗ, ಪ್ರಜಾಪ್ರಭುತ್ವಕ್ಕೆ ಮೀಸಲಾಗಿರುವ ಈ ಸ್ಥಳವನ್ನು ಸಂವಿಧಾನ ಭವನ ಎಂದು ಹೆಸರಿಸಲಾಗಿದೆ. ಇತ್ತೀಚೆಗೆ, ಭಾರತವು ತನ್ನ ಸಂವಿಧಾನದ ಅನುಷ್ಠಾನದ 75 ವರ್ಷಗಳನ್ನು ಆಚರಿಸಿತು. ಈ ಸಂವಿಧಾನ ಭವನದಲ್ಲಿ ನಿಮ್ಮ ಉಪಸ್ಥಿತಿಯು ಭಾರತೀಯ ಪ್ರಜಾಪ್ರಭುತ್ವಕ್ಕೆ ಬಹಳ ವಿಶೇಷ ಮಹತ್ವದ್ದಾಗಿದೆ.
ಸ್ನೇಹಿತರೇ,
ಭಾರತದಲ್ಲಿ ಕಾಮನ್‌ವೆಲ್ತ್ ಸ್ಪೀಕರ್‌ಗಳು ಮತ್ತು ಅಧ್ಯಕ್ಷಾಧಿಕಾರಿಗಳ ಸಮ್ಮೇಳನ ನಡೆಯುತ್ತಿರುವ ನಾಲ್ಕನೇ ಸಂದರ್ಭ ಇದು. ಈ ಸಮ್ಮೇಳನದ ವಿಷಯ “ಸಂಸದೀಯ ಪ್ರಜಾಪ್ರಭುತ್ವದ ಪರಿಣಾಮಕಾರಿ ವಿತರಣೆ.” ಭಾರತ ಸ್ವತಂತ್ರವಾದಾಗ, ಅಂತಹ ವೈವಿಧ್ಯತೆಯಲ್ಲಿ ಪ್ರಜಾಪ್ರಭುತ್ವ ಉಳಿಯಬಹುದೇ ಎಂಬ ಬಗ್ಗೆ ಸಂದೇಹಗಳು ವ್ಯಕ್ತವಾಗಿದ್ದವು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಆದರೆ ಭಾರತ ಈ ವೈವಿಧ್ಯತೆಯನ್ನು ತನ್ನ ಪ್ರಜಾಪ್ರಭುತ್ವದ ಶಕ್ತಿಯನ್ನಾಗಿ ಪರಿವರ್ತಿಸಿತು. ಮತ್ತೊಂದು ಪ್ರಮುಖ ಸಂದೇಹವೆಂದರೆ ಪ್ರಜಾಪ್ರಭುತ್ವ ಹೇಗಾದರೂ ಉಳಿದುಕೊಂಡರೂ, ಭಾರತ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ ಎಂಬುದಾಗಿತ್ತು. ಆದರೆ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಸ್ಥಿರತೆ, ವೇಗ ಮತ್ತು ಪ್ರಮಾಣವನ್ನು ಒದಗಿಸುತ್ತವೆ ಎಂದು ಭಾರತ ಸಾಬೀತುಪಡಿಸಿದೆ.
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಇಂದು, ಭಾರತದ ಯುಪಿಐ ವಿಶ್ವದಲ್ಲೇ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಭಾರತವು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ರಾಷ್ಟ್ರವಾಗಿದೆ. ಭಾರತವು ಎರಡನೇ ಅತಿದೊಡ್ಡ ಉಕ್ಕಿನ ಉತ್ಪಾದಕ ರಾಷ್ಟ್ರವಾಗಿದೆ. ಭಾರತವು ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಭಾರತವು ಮೂರನೇ ಅತಿದೊಡ್ಡ ವಾಯುಯಾನ ಮಾರುಕಟ್ಟೆಯಾಗಿದೆ. ಭಾರತವು ನಾಲ್ಕನೇ ಅತಿದೊಡ್ಡ ರೈಲು ಜಾಲವನ್ನು ಹೊಂದಿದೆ. ಭಾರತವು ಮೂರನೇ ಅತಿದೊಡ್ಡ ಮೆಟ್ರೋ ರೈಲು ಜಾಲವನ್ನು ಹೊಂದಿದೆ. ಭಾರತವು ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದೆ. ಭಾರತವು ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿದೆ.
ಸ್ನೇಹಿತರೇ,
ಭಾರತದಲ್ಲಿ, ಪ್ರಜಾಪ್ರಭುತ್ವ ಎಂದರೆ ಕೊನೆಯ ಹಂತದವರೆಗೆ ತಲುಪಿಸುವುದು. ಸಾರ್ವಜನಿಕ ಕಲ್ಯಾಣದ ಮನೋಭಾವದೊಂದಿಗೆ, ನಾವು ಪ್ರತಿಯೊಬ್ಬ ವ್ಯಕ್ತಿಗೂ ತಾರತಮ್ಯರಹಿತವಾಗಿ ಕೆಲಸ ಮಾಡುತ್ತೇವೆ. ಮತ್ತು ಈ ಸಾರ್ವಜನಿಕ ಕಲ್ಯಾಣದ ಮನೋಭಾವದಿಂದಾಗಿ, ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ 250 ಮಿಲಿಯನ್ ಜನರು ಬಡತನದಿಂದ ಹೊರಬಂದಿದ್ದಾರೆ. ಭಾರತದಲ್ಲಿ, ಪ್ರಜಾಪ್ರಭುತ್ವವು ಸವಲತ್ತುಗಳನ್ನು ತಲುಪಿಸುತ್ತದೆ.
ಸ್ನೇಹಿತರೇ,
ಭಾರತದಲ್ಲಿ ಪ್ರಜಾಪ್ರಭುತ್ವವು ತಲುಪಿಸುತ್ತದೆ ಏಕೆಂದರೆ, ನಮಗೆ, ದೇಶದ ಜನರು ಸರ್ವೋಚ್ಚರು. ನಾವು ಅವರ ಆಕಾಂಕ್ಷೆಗಳು ಮತ್ತು ನಮ್ಮ ನಾಗರಿಕರ ಕನಸುಗಳಿಗೆ ಆದ್ಯತೆ ನೀಡಿದ್ದೇವೆ. ಯಾವುದೇ ಅಡೆತಡೆಗಳು ಅವರ ದಾರಿಯಲ್ಲಿ ಬರದಂತೆ ನೋಡಿಕೊಳ್ಳಲು, ನಾವು ಪ್ರಕ್ರಿಯೆಗಳಿಂದ ತಂತ್ರಜ್ಞಾನದವರೆಗೆ ಎಲ್ಲವನ್ನೂ ಪ್ರಜಾಪ್ರಭುತ್ವಗೊಳಿಸಿದ್ದೇವೆ. ಈ ಪ್ರಜಾಪ್ರಭುತ್ವದ ಮನೋಭಾವವು ನಮ್ಮ ರಕ್ತನಾಳಗಳಲ್ಲಿ, ನಮ್ಮ ಮನಸ್ಸಿನಲ್ಲಿ ಮತ್ತು ನಮ್ಮ ಸಂಸ್ಕೃತಿಯಲ್ಲಿ ಹರಿಯುತ್ತದೆ.
ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ: ಕೆಲವು ವರ್ಷಗಳ ಹಿಂದೆ, ಇಡೀ ಜಗತ್ತು ಕೋವಿಡ್-19 ಜಾಗತಿಕ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿದ್ದಾಗ, ಭಾರತವೂ ಅಪಾರ ಸವಾಲುಗಳನ್ನು ಎದುರಿಸಿತು. ಆದರೂ, ಆ ತೊಂದರೆಗಳ ನಡುವೆ, ಭಾರತವು 150 ಕ್ಕೂ ಹೆಚ್ಚು ದೇಶಗಳಿಗೆ ಔಷಧಿಗಳು ಮತ್ತು ಲಸಿಕೆಗಳನ್ನು ಪೂರೈಸಿತು. ಜನರ ಕಲ್ಯಾಣ, ಅವರ ಯೋಗಕ್ಷೇಮ ಮತ್ತು ಅವರ ಪ್ರಯೋಜನ – ಇದು ನಮ್ಮ ಸಂಪ್ರದಾಯ.
ಸ್ನೇಹಿತರೇ,
ನಿಮ್ಮಲ್ಲಿ ಹಲವರಿಗೆ ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಸಂಗತಿ ತಿಳಿದಿದೆ. ನಿಜಕ್ಕೂ, ನಮ್ಮ ಪ್ರಜಾಪ್ರಭುತ್ವದ ಪ್ರಮಾಣ ಅಸಾಧಾರಣವಾಗಿದೆ. 2024 ರಲ್ಲಿ ನಡೆದ ಭಾರತದ ಸಾರ್ವತ್ರಿಕ ಚುನಾವಣೆಗಳನ್ನು ಪರಿಗಣಿಸಿ. ಅವು ಮಾನವ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವದ ಕವಾಯತು ಆಗಿದ್ದವು. ಸುಮಾರು ಒಂಭೈನೂರ ಎಂಬತ್ತು ಮಿಲಿಯನ್ ನಾಗರಿಕರು ಮತ ಚಲಾಯಿಸಲು ನೋಂದಾಯಿಸಲ್ಪಟ್ಟಿದ್ದರು. ಈ ಸಂಖ್ಯೆ ಕೆಲವು ಖಂಡಗಳ ಜನಸಂಖ್ಯೆಗಿಂತ ದೊಡ್ಡದಾಗಿದೆ. ಎಂಟು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಮತ್ತು ಏಳು ನೂರಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಇದ್ದವು. ಚುನಾವಣೆಗಳಲ್ಲಿ ಮಹಿಳಾ ಮತದಾರರ ಭಾಗವಹಿಸುವಿಕೆಯು ದಾಖಲೆಯ ಪ್ರಮಾಣದ್ದಾಗಿತ್ತು.
ಇಂದು, ಭಾರತೀಯ ಮಹಿಳೆಯರು ಭಾಗವಹಿಸುತ್ತಿರುವುದು ಮಾತ್ರವಲ್ಲದೆ, ಮುನ್ನಡೆಸುತ್ತಿದ್ದಾರೆ. ಭಾರತದ ರಾಷ್ಟ್ರಪತಿ, ನಮ್ಮ ಪ್ರಥಮ ಪ್ರಜೆ, ಒಬ್ಬ ಮಹಿಳೆ. ನಾವು ಈಗ ಇರುವ ದಿಲ್ಲಿಯ ಮುಖ್ಯಮಂತ್ರಿ ಒಬ್ಬ ಮಹಿಳೆ. ಗ್ರಾಮೀಣ ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳಲ್ಲಿ, ಭಾರತದಲ್ಲಿ ಸುಮಾರು 1.5 ಮಿಲಿಯನ್ ಚುನಾಯಿತ ಮಹಿಳಾ ಪ್ರತಿನಿಧಿಗಳಿದ್ದಾರೆ. ಅವರು ತಳಮಟ್ಟದ ನಾಯಕರಲ್ಲಿ ಸುಮಾರು 50 ಪ್ರತಿಶತವನ್ನು ಪ್ರತಿನಿಧಿಸುತ್ತಾರೆ, ಇದು ಜಾಗತಿಕವಾಗಿ ಸಾಟಿಯಿಲ್ಲದ ವಸ್ತುಸ್ಥಿತಿ. ಭಾರತೀಯ ಪ್ರಜಾಪ್ರಭುತ್ವವು ವೈವಿಧ್ಯತೆಯಲ್ಲಿ ಶ್ರೀಮಂತವಾಗಿದೆ. ನೂರಾರು ಭಾಷೆಗಳನ್ನು ಮಾತನಾಡಲಾಗುತ್ತದೆ. ವಿವಿಧ ಭಾಷೆಗಳಲ್ಲಿ ಒಂಬತ್ತು ನೂರಕ್ಕೂ ಹೆಚ್ಚು ಟಿ.ವಿ. ಚಾನೆಲ್‌ಗಳಿವೆ. ಸಾವಿರಾರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಪ್ರಕಟವಾಗುತ್ತವೆ. ಈ ಪ್ರಮಾಣದಲ್ಲಿ ವೈವಿಧ್ಯತೆ ಇಂದು ಕೆಲವು ಸಮಾಜಗಳಲ್ಲಷ್ಟೇ ಕಂಡು ಬರುತ್ತದೆ ಮತ್ತು ಅವು ಅದನ್ನು ನಿರ್ವಹಿಸುತ್ತಿವೆ. ನಮ್ಮ ಪ್ರಜಾಪ್ರಭುತ್ವವು ಬಲವಾದ ಅಡಿಪಾಯವನ್ನು ಹೊಂದಿರುವುದರಿಂದ ಭಾರತವು ಅಂತಹ ವೈವಿಧ್ಯತೆಯನ್ನು ಸಂಭ್ರಮಿಸುತ್ತಿದೆ. ನಮ್ಮ ಪ್ರಜಾಪ್ರಭುತ್ವವು ಆಳವಾದ ಬೇರುಗಳಿಂದ ಬೆಂಬಲಿತವಾದ ದೊಡ್ಡ ಮರದಂತಿದೆ. ನಮಗೆ ಚರ್ಚೆ, ಸಂವಾದ ಮತ್ತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ದೀರ್ಘ ಸಂಪ್ರದಾಯವಿದೆ. ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯಲಾಗುತ್ತದೆ. ನಮ್ಮ ಪವಿತ್ರ ಗ್ರಂಥಗಳಾದ ವೇದಗಳು ಐದು ಸಾವಿರ ವರ್ಷಗಳಿಗೂ ಹಳೆಯವು. ಸಮಸ್ಯೆಗಳನ್ನು ಚರ್ಚಿಸಲು ಜನರು ಸೇರುವ ಸಭೆಗಳನ್ನು ಅವು ಉಲ್ಲೇಖಿಸುತ್ತವೆ. ಚರ್ಚೆ ಮತ್ತು ಒಪ್ಪಂದದ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ನಮ್ಮದು ಭಗವಾನ್ ಬುದ್ಧನ ನಾಡು. ಬೌದ್ಧ ಸಂಘವು ಮುಕ್ತ ಮತ್ತು ರಚನಾತ್ಮಕ ಚರ್ಚೆಗಳನ್ನು ನಡೆಸುತ್ತಿತ್ತು. ನಿರ್ಧಾರಗಳನ್ನು ಒಮ್ಮತ ಅಥವಾ ಮತದಾನದ ಮೂಲಕ ತೆಗೆದುಕೊಳ್ಳಲಾಗುತ್ತಿತ್ತು.
ಇದಲ್ಲದೆ, ಭಾರತದ ರಾಜ್ಯವಾದ ತಮಿಳುನಾಡಿನಲ್ಲಿ 10 ನೇ ಶತಮಾನದ ಶಾಸನವಿದೆ. ಇದು ಪ್ರಜಾಪ್ರಭುತ್ವ ಮೌಲ್ಯಗಳೊಂದಿಗೆ ಕೆಲಸ ಮಾಡಿದ ಗ್ರಾಮ ಸಭೆಯನ್ನು ವಿವರಿಸುತ್ತದೆ. ಅಲ್ಲಿ ಹೊಣೆಗಾರಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಗೆ ಸ್ಪಷ್ಟ ನಿಯಮಗಳಿದ್ದವು. ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳು ಕಾಲಾನುಕ್ರಮದಲ್ಲಿ ಪರೀಕ್ಷೆಗೆ ಒಳಪಟ್ಟಿವೆ. ವೈವಿಧ್ಯತೆಯಿಂದ ಬೆಂಬಲಿತವಾಗಿವೆ ಮತ್ತು ಪೀಳಿಗೆಯಿಂದ ಪೀಳಿಗೆಗೆ ಬಲಗೊಂಡಿವೆ.
ಸ್ನೇಹಿತರೇ,
ಕಾಮನ್‌ವೆಲ್ತ್‌ನ ಒಟ್ಟು ಜನಸಂಖ್ಯೆಯ ಸುಮಾರು 50 ಪ್ರತಿಶತ ಭಾರತದಲ್ಲಿ ವಾಸಿಸುತ್ತಿದ್ದಾರೆ. ಎಲ್ಲಾ ರಾಷ್ಟ್ರಗಳ ಅಭಿವೃದ್ಧಿಗೆ ಸಾಧ್ಯವಾದಷ್ಟು ಕೊಡುಗೆ ನೀಡುವುದು ನಮ್ಮ ಪ್ರಯತ್ನವಾಗಿದೆ. ಕಾಮನ್‌ವೆಲ್ತ್‌ನ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ – ಆರೋಗ್ಯ, ಹವಾಮಾನ ಬದಲಾವಣೆ, ಆರ್ಥಿಕ ಬೆಳವಣಿಗೆ ಮತ್ತು ನಾವೀನ್ಯತೆ -ಇವುಗಳಲ್ಲಿ ನಾವು ನಮ್ಮ ಬದ್ಧತೆಗಳನ್ನು ಸಂಪೂರ್ಣ ಜವಾಬ್ದಾರಿಯೊಂದಿಗೆ ಪೂರೈಸುತ್ತಿದ್ದೇವೆ. ಭಾರತವು ನಿಮ್ಮೆಲ್ಲರಿಂದ ಕಲಿಯಲು ನಿರಂತರವಾಗಿ ಶ್ರಮಿಸುತ್ತದೆ ಮತ್ತು ಭಾರತದ ಅನುಭವಗಳು ಇತರ ಕಾಮನ್‌ವೆಲ್ತ್ ಪಾಲುದಾರರಿಗೆ ಪ್ರಯೋಜನವನ್ನು ನೀಡುವಂತಾಗಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ.
ಸ್ನೇಹಿತರೇ,
ಇಂದು, ಜಗತ್ತು ಅಭೂತಪೂರ್ವ ಬದಲಾವಣೆಯ ಯುಗದ ಮೂಲಕ ಹಾದುಹೋಗುತ್ತಿರುವಾಗ, ಜಾಗತಿಕ ದಕ್ಷಿಣಕ್ಕೆ ಹೊಸ ಮಾರ್ಗಗಳನ್ನು ಸೃಷ್ಟಿಸುವ ಸಮಯ ಬಂದಿದೆ. ಭಾರತವು ಪ್ರತಿಯೊಂದು ಜಾಗತಿಕ ವೇದಿಕೆಯಲ್ಲಿ ಜಾಗತಿಕ ದಕ್ಷಿಣದ ಕಳವಳಗಳನ್ನು ಬಲವಾಗಿ ಎತ್ತುತ್ತಿದೆ. ಜಿ 20 ಅಧ್ಯಕ್ಷತೆಯಲ್ಲಿ, ಭಾರತವು ಜಾಗತಿಕ ದಕ್ಷಿಣದ ಕಳವಳಗಳನ್ನು ಜಾಗತಿಕ ಕಾರ್ಯಸೂಚಿಯ ಕೇಂದ್ರದಲ್ಲಿ ಇರಿಸಿತು. ನಾವು ಯಾವುದೇ ಆವಿಷ್ಕಾರಗಳನ್ನು ಮಾಡಿದರೂ, ಅವು ಇಡೀ ಜಾಗತಿಕ ದಕ್ಷಿಣ ಮತ್ತು ಕಾಮನ್‌ವೆಲ್ತ್ ದೇಶಗಳಿಗೆ ಪ್ರಯೋಜನವನ್ನು ನೀಡಬೇಕು ಎಂಬುದು ಭಾರತದ ನಿರಂತರ ಪ್ರಯತ್ನವಾಗಿದೆ. ಜಾಗತಿಕ ದಕ್ಷಿಣದಲ್ಲಿರುವ ನಮ್ಮ ಪಾಲುದಾರ ರಾಷ್ಟ್ರಗಳು ಭಾರತದಲ್ಲಿರುವಂತೆಯೇ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವಂತೆ ನಾವು ಮುಕ್ತ ಮೂಲ ತಂತ್ರಜ್ಞಾನ ವೇದಿಕೆಗಳನ್ನು ಸಹ ನಿರ್ಮಿಸುತ್ತಿದ್ದೇವೆ.
ಸ್ನೇಹಿತರೇ,
ಈ ಸಮ್ಮೇಳನದ ಪ್ರಮುಖ ಗುರಿಗಳಲ್ಲಿ ಒಂದು, ಸಂಸದೀಯ ಪ್ರಜಾಪ್ರಭುತ್ವದ ಜ್ಞಾನ ಮತ್ತು ತಿಳುವಳಿಕೆಯನ್ನು ನಾವು ವಿವಿಧ ರೀತಿಯಲ್ಲಿ ಹೇಗೆ ಉತ್ತೇಜಿಸಬಹುದು ಎಂಬುದನ್ನು ಅನ್ವೇಷಿಸುವುದು. ಇದರಲ್ಲಿ, ಸ್ಪೀಕರ್‌ಗಳು ಮತ್ತು ಸಭಾಧ್ಯಕ್ಷರ ಪಾತ್ರ ಬಹಳ ಮುಖ್ಯವಾಗಿದೆ. ಈ ಕೆಲಸವು ಜನರನ್ನು ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯೊಂದಿಗೆ ಹೆಚ್ಚು ನಿಕಟವಾಗಿ ಸಂಪರ್ಕಿಸುತ್ತದೆ. ಭಾರತೀಯ ಸಂಸತ್ತು ಈಗಾಗಲೇ ಅಂತಹ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದೆ. ಅಧ್ಯಯನ ಪ್ರವಾಸಗಳು, ಅವಶ್ಯಕತೆಗೆ ಅನುಗುಣವಾಗಿ ಮಾಡಿದ ತರಬೇತಿ ಕಾರ್ಯಕ್ರಮಗಳು ಮತ್ತು ಇಂಟರ್ನ್‌ಶಿಪ್‌ಗಳ ಮೂಲಕ, ನಾಗರಿಕರು ಸಂಸತ್ತನ್ನು ಹೆಚ್ಚು ನಿಕಟವಾಗಿ ಅರ್ಥಮಾಡಿಕೊಳ್ಳುವ ಅವಕಾಶವನ್ನು ಪಡೆದಿದ್ದಾರೆ. ನಮ್ಮ ಸಂಸತ್ತಿನಲ್ಲಿ, ಚರ್ಚೆಗಳು ಮತ್ತು ಸದನದ ಕಲಾಪಗಳನ್ನು ನೈಜ ಸಮಯದಲ್ಲಿ ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಲು ನಾವು ಕೃತಕ ಬುದ್ಧಿಮತ್ತೆಯನ್ನು (AI) ಬಳಸಲು ಪ್ರಾರಂಭಿಸಿದ್ದೇವೆ. ಎ.ಐ. ಸಹಾಯದಿಂದ ಸಂಸತ್ತಿಗೆ ಸಂಬಂಧಿಸಿದ ಸಂಪನ್ಮೂಲಗಳನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲಾಗುತ್ತಿದೆ. ಇದು ನಮ್ಮ ಯುವ ಪೀಳಿಗೆಗೆ ಸಂಸತ್ತನ್ನು ಅರ್ಥಮಾಡಿಕೊಳ್ಳಲು ಉತ್ತಮ ಅವಕಾಶಗಳನ್ನು ನೀಡುತ್ತಿದೆ.
ಸ್ನೇಹಿತರೇ,
ಇಲ್ಲಿಯವರೆಗೆ, ನಿಮ್ಮ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವ 20 ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳಿಗೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿದೆ. ಹಲವಾರು ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡುವ ಸೌಭಾಗ್ಯವೂ ನನಗೆ ಸಿಕ್ಕಿದೆ. ನಾನು ಎಲ್ಲಿಗೆ ಹೋಗಲಿ, ಅಲ್ಲಿಂದ ನಾನು ಬಹಳಷ್ಟು ಕಲಿತಿದ್ದೇನೆ. ನಾನು ತಕ್ಷಣ ನಮ್ಮ ಲೋಕಸಭಾ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರೊಂದಿಗೆ ಪ್ರತಿಯೊಂದು ಉತ್ತಮ ಅಭ್ಯಾಸಗಳನ್ನು ಹಂಚಿಕೊಂಡಿದ್ದೇನೆ. ಈ ಸಮ್ಮೇಳನವು ಕಲಿಕೆ ಮತ್ತು ಹಂಚಿಕೆಯ ಈ ಪ್ರಕ್ರಿಯೆಯನ್ನು ಮತ್ತಷ್ಟು ಉತ್ಕೃಷ್ಟಗೊಳಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಈ ಆಶಯದೊಂದಿಗೆ, ನಾನು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ.
ಧನ್ಯವಾದಗಳು!
*****
Addressing the Conference of Speakers and Presiding Officers of the Commonwealth.
— Narendra Modi (@narendramodi) January 15, 2026
https://t.co/T3feMVdS62
India has turned diversity into the strength of its democracy. pic.twitter.com/3UCl7dFIa0
— PMO India (@PMOIndia) January 15, 2026
India has shown that democratic institutions and democratic processes give democracy with stability, speed and scale. pic.twitter.com/zt4YR9SnpT
— PMO India (@PMOIndia) January 15, 2026
In India, democracy means last mile delivery. pic.twitter.com/LHuy5SXCh4
— PMO India (@PMOIndia) January 15, 2026
Our democracy is like a large tree supported by deep roots.
— PMO India (@PMOIndia) January 15, 2026
We have a long tradition of debate, dialogue and collective decision-making. pic.twitter.com/5dQ2CCUT4B
India is strongly raising the concerns of the Global South on every global platform.
— PMO India (@PMOIndia) January 15, 2026
During its G20 Presidency as well, India placed the priorities of the Global South at the centre of the global agenda. pic.twitter.com/pmIQdcnjdd