ಪಿಎಂಇಂಡಿಯಾ
ರಾಷ್ಟ್ರೀಯ ನವೋದ್ಯಮ (ಸ್ಟಾರ್ಟ್‌ಅಪ್) ದಿನದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಭಾರತ ಮಂಟಪದಲ್ಲಿ ಸ್ಟಾರ್ಟ್‌ಅಪ್ ಇಂಡಿಯಾ ಉಪಕ್ರಮದ ಒಂದು ದಶಕದ ಸಂಭ್ರಮವನ್ನು ಗುರುತಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು ಪ್ರತಿಯೊಬ್ಬರೂ ಒಂದು ವಿಶೇಷ ಸಂದರ್ಭವಾದ ರಾಷ್ಟ್ರೀಯ ನವೋದ್ಯಮ ದಿನದ ಆಚರಣೆಯಲ್ಲಿ ಮತ್ತು ನವ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಭಾರತದ ಭವಿಷ್ಯವಾಗಿರುವ ನವೋದ್ಯಮ ಸಂಸ್ಥಾಪಕರು ಮತ್ತು ನಾವೀನ್ಯಕಾರರ ಸಮ್ಮುಖದಲ್ಲಿ ಸೇರಿದ್ದೇವೆ ಎಂದು ಹೇಳಿದರು. ಕೃಷಿ, ಫಿನ್‌ಟೆಕ್, ಮೊಬಿಲಿಟಿ, ಆರೋಗ್ಯ ಮತ್ತು ಸುಸ್ಥಿರತೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕೆಲವು ಸಹಭಾಗಿಗಳೊಂದಿಗೆ ಸ್ವಲ್ಪ ಸಮಯದ ಹಿಂದೆ ಸಂವಾದ ನಡೆಸಿದ್ದನ್ನು ಅವರು ಒತ್ತಿ ಹೇಳಿದರು ಮತ್ತು ಅವರ ಆಲೋಚನೆಗಳು ತಮಗೆ ಪ್ರಭಾವ ಬೀರಿದರೂ, ಅವರ ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆಗಳು ತಮಗೆ ಇನ್ನಷ್ಟು ಹೆಚ್ಚಿನ ಪ್ರಭಾವ ಬೀರಿದವು ಎಂದು ತಿಳಿಸಿದರು. ಸ್ಟಾರ್ಟ್‌ಅಪ್ ಇಂಡಿಯಾ 10 ವರ್ಷಗಳ ಹಿಂದೆ ಪ್ರಾರಂಭವಾದುದನ್ನು ಸ್ಮರಿಸಿದ ಶ್ರೀ ಮೋದಿಯವರು, ಈ ಉಪಕ್ರಮದ ಬೆಳವಣಿಗೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ಯುವಜನರನ್ನು ಭೇಟಿ ಮಾಡಿದ್ದಕ್ಕೆ ಸಂತೋಷಪಟ್ಟರು. ಭಾರತದ ಯುವಜನರು ನೈಜ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸುತ್ತಿರುವುದು ಅತ್ಯಂತ ಪ್ರಮುಖ ಅಂಶ ಎಂದು ಒತ್ತಿಹೇಳಿದ ಶ್ರೀ ಮೋದಿಯವರು, ಹೊಸ ಕನಸುಗಳನ್ನು ಕಾಣುವ ಧೈರ್ಯ ತೋರಿದ ಯುವ ನಾವೀನ್ಯಕಾರರನ್ನು ಶ್ಲಾಘಿಸಿದರು.
ಇಂದು ಸ್ಟಾರ್ಟ್‌ಅಪ್ ಇಂಡಿಯಾದ ಹತ್ತು ವರ್ಷಗಳ ಮೈಲಿಗಲ್ಲನ್ನು ಗುರುತಿಸುತ್ತದೆ ಮತ್ತು ಈ ಪ್ರಯಾಣವು ಕೇವಲ ಸರ್ಕಾರದ ಯೋಜನೆಯ ಯಶಸ್ಸಿನ ಕಥೆಯಲ್ಲ, ಬದಲಾಗಿ ಲಕ್ಷಾಂತರ ಕನಸುಗಳ ಪ್ರಯಾಣ ಮತ್ತು ಅಸಂಖ್ಯಾತ ಕಲ್ಪನೆಗಳ ಸಾಕ್ಷಾತ್ಕಾರವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿಹೇಳಿದರು. ಹತ್ತು ವರ್ಷಗಳ ಹಿಂದೆ ವೈಯಕ್ತಿಕ ಪ್ರಯತ್ನಗಳು ಮತ್ತು ನಾವೀನ್ಯತೆಗಳಿಗೆ ಅವಕಾಶ ಬಹಳ ಕಡಿಮೆ ಇತ್ತು, ಆದರೆ ಆ ಸಂದರ್ಭಗಳಿಗೆ ಸವಾಲು ಹಾಕಲಾಯಿತು ಮತ್ತು ಸ್ಟಾರ್ಟ್‌ಅಪ್ ಇಂಡಿಯಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು, ಇದು ಯುವಜನರಿಗೆ ಮುಕ್ತ ಆಕಾಶವನ್ನು ನೀಡಿತು ಮತ್ತು ಇಂದು ಅದರ ಫಲಿತಾಂಶಗಳು ರಾಷ್ಟ್ರದ ಮುಂದಿವೆ ಎಂದು ಅವರು ನೆನಪಿಸಿಕೊಂಡರು. “ಕೇವಲ 10 ವರ್ಷಗಳಲ್ಲಿ, ಸ್ಟಾರ್ಟ್‌ಅಪ್ ಇಂಡಿಯಾ ಮಿಷನ್ ಒಂದು ಕ್ರಾಂತಿಯಾಗಿ ಮಾರ್ಪಟ್ಟಿದೆ. ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಾಗಿದೆ” ಎಂದು ಶ್ರೀ ಮೋದಿ ಹೇಳಿದರು. ಹತ್ತು ವರ್ಷಗಳ ಹಿಂದೆ ದೇಶದಲ್ಲಿ 500ಕ್ಕಿಂತ ಕಡಿಮೆ ನವೋದ್ಯಮಗಳಿದ್ದವು, ಇಂದು ಆ ಸಂಖ್ಯೆ 2 ಲಕ್ಷಕ್ಕೂ ಹೆಚ್ಚು ಏರಿಕೆಯಾಗಿದೆ ಎಂದು ಅವರು ಹೇಳಿದರು. 2014ರಲ್ಲಿ ಭಾರತದಲ್ಲಿ ಕೇವಲ ನಾಲ್ಕು ಯುನಿಕಾರ್ನ್ ಗಳಿದ್ದವು, ಇಂದು ಸುಮಾರು 125 ಸಕ್ರಿಯ ಯುನಿಕಾರ್ನ್ ಗಳಿವೆ ಮತ್ತು ವಿಶ್ವವು ಈ ಯಶಸ್ಸಿನ ಕಥೆಯನ್ನು ವಿಸ್ಮಯದಿಂದ ನೋಡುತ್ತಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಭಾರತದ ನವೋದ್ಯಮ ಪ್ರಯಾಣದ ಬಗ್ಗೆ ಚರ್ಚೆಯಾದಾಗ, ಸಭಾಂಗಣದಲ್ಲಿ ಉಪಸ್ಥಿತರಿರುವ ಅನೇಕ ಯುವಕರು ತಾವೇ ಉಜ್ವಲವಾದ ಕೇಸ್ ಸ್ಟಡಿಗಳಾಗುತ್ತಾರೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು. ಸ್ಟಾರ್ಟ್‌ಅಪ್ ಇಂಡಿಯಾ ವೇಗವಾಗಿ ಮುಂದುವರಿಯುತ್ತಿದ್ದು, ಇಂದಿನ ನವೋದ್ಯಮಗಳು ಯುನಿಕಾರ್ನ್ ಗಳಾಗುತ್ತಿವೆ, ಐಪಿಒಗಳನ್ನು ಪ್ರಾರಂಭಿಸುತ್ತಿವೆ ಮತ್ತು ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು. 2025 ರ ವರ್ಷವೊಂದರಲ್ಲೇ ಸುಮಾರು 44,000 ಹೊಸ ನವೋದ್ಯಮಗಳು ನೋಂದಣಿಯಾಗಿವೆ, ಇದು ಸ್ಟಾರ್ಟ್‌ಅಪ್ ಇಂಡಿಯಾ ಪ್ರಾರಂಭವಾದಾಗಿನಿಂದ ಯಾವುದೇ ಒಂದು ವರ್ಷದಲ್ಲಿ ಕಂಡುಬಂದ ಅತಿದೊಡ್ಡ ಏರಿಕೆಯಾಗಿದೆ ಮತ್ತು ಈ ಅಂಕಿಅಂಶಗಳು ಭಾರತದ ನವೋದ್ಯಮಗಳು ಉದ್ಯೋಗ, ನಾವೀನ್ಯತೆ ಮತ್ತು ಬೆಳವಣಿಗೆಯನ್ನು ಹೇಗೆ ಚಾಲನೆ ಮಾಡುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಸ್ಟಾರ್ಟ್‌ಅಪ್ ಇಂಡಿಯಾ ದೇಶದಲ್ಲಿ ಹೊಸ ಸಂಸ್ಕೃತಿಯನ್ನು ಹುಟ್ಟುಹಾಕಿದೆ ಎಂದು ಸಂತೋಷ ವ್ಯಕ್ತಪಡಿಸಿದ ಶ್ರೀ ಮೋದಿಯವರು, ಈ ಹಿಂದೆ ಹೊಸ ಉದ್ಯಮಗಳು ಹೆಚ್ಚಾಗಿ ದೊಡ್ಡ ಕೈಗಾರಿಕಾ ಕುಟುಂಬಗಳ ಮಕ್ಕಳಿಂದಲೇ ಆರಂಭವಾಗುತ್ತಿದ್ದವು, ಏಕೆಂದರೆ ಅವರಿಗೆ ಮಾತ್ರ ಧನಸಹಾಯ ಮತ್ತು ಬೆಂಬಲ ಸುಲಭವಾಗಿ ಸಿಗುತ್ತಿತ್ತು, ಆದರೆ ಹೆಚ್ಚಿನ ಮಧ್ಯಮ ವರ್ಗದ ಮತ್ತು ಬಡ ಮಕ್ಕಳು ಕೇವಲ ಉದ್ಯೋಗದ ಕನಸು ಕಾಣುತ್ತಿದ್ದರು ಎಂದು ಹೇಳಿದರು. ಸ್ಟಾರ್ಟ್‌ಅಪ್ ಇಂಡಿಯಾ ಕಾರ್ಯಕ್ರಮವು ಈ ಮನಸ್ಥಿತಿಯನ್ನು ಬದಲಿಸಿದೆ ಮತ್ತು ಈಗ 2 ಮತ್ತು 3ನೇ ಶ್ರೇಣಿಯ ನಗರಗಳ, ಗ್ರಾಮಗಳ ಯುವಕರು ಕೂಡ ತಮ್ಮದೇ ಆದ ನವೋದ್ಯಮಗಳನ್ನು ಪ್ರಾರಂಭಿಸುತ್ತಿದ್ದಾರೆ, ತಳಮಟ್ಟದ ಅತ್ಯಂತ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು. ಸಮಾಜ ಮತ್ತು ರಾಷ್ಟ್ರಕ್ಕಾಗಿ ಏನನ್ನಾದರೂ ಮಾಡುವ ಈ ಮನೋಭಾವವು ಅವರಿಗೆ ಅಪಾರ ಮೌಲ್ಯಯುತವಾದುದು ಎಂದರು.
ಈ ರೂಪಾಂತರದಲ್ಲಿ ದೇಶದ ಹೆಣ್ಣುಮಕ್ಕಳು ಪ್ರಮುಖ ಪಾತ್ರ ವಹಿಸಿದ್ದಾರೆ, ಮಾನ್ಯತೆ ಪಡೆದ ನವೋದ್ಯಮಗಳಲ್ಲಿ ಶೇಕಡಾ 45 ಕ್ಕೂ ಹೆಚ್ಚು ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕಿ ಅಥವಾ ಪಾಲುದಾರರನ್ನು ಹೊಂದಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಮಹಿಳಾ ನೇತೃತ್ವದ ನವೋದ್ಯಮ ಹಣಕಾಸು ಬೆಂಬಲದಲ್ಲಿ ಭಾರತವು ವಿಶ್ವದ ಎರಡನೇ ಅತಿದೊಡ್ಡ ಪರಿಸರ ವ್ಯವಸ್ಥೆಯಾಗುತ್ತಿದೆ ಎಂದು ಅವರು ಒತ್ತಿಹೇಳಿದರು, ಈ ಅಂತರ್ಗತ ವೇಗವು ಭಾರತದ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುತ್ತಿದೆ ಎಂದು ಹೇಳಿದರು.
ದೇಶವು ಇಂದು ನವೋದ್ಯಮ ಕ್ರಾಂತಿಯಲ್ಲಿ ತನ್ನ ಭವಿಷ್ಯವನ್ನು ಕಾಣುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ನವೋದ್ಯಮಗಳು ಏಕೆ ಅಷ್ಟು ಮುಖ್ಯ ಎಂದು ಕೇಳಿದರೆ ಹಲವು ಉತ್ತರಗಳಿರುತ್ತವೆ: ಭಾರತವು ವಿಶ್ವದ ಅತ್ಯಂತ ಕಿರಿಯ ದೇಶ, ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ, ಭಾರತವು ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ ಮತ್ತು ಹೊಸ ಕ್ಷೇತ್ರಗಳು ಹೊರಹೊಮ್ಮುತ್ತಿವೆ – ಈ ಪ್ರತಿಯೊಂದು ಸಂಗತಿಗಳೂ ನಿಜವಾಗಿವೆ. ಆದರೂ, ತಮ್ಮ ಹೃದಯವನ್ನು ಹೆಚ್ಚು ಸ್ಪರ್ಶಿಸುವುದು ನವೋದ್ಯಮ ಮನೋಭಾವ, ಅಲ್ಲಿ ಭಾರತದ ಯುವಜನರು ಕಂಫರ್ಟ್ ಜೋನ್ ಗಳಲ್ಲಿ (ಆರಾಮದಾಯಕ ವಲಯ) ಜೀವನ ಕಳೆಯಲು ಅಥವಾ ಸವಕಲು ಹಾದಿಗಳನ್ನು ಹಿಡಿಯಲು ಇಚ್ಛಿಸುತ್ತಿಲ್ಲ, ಬದಲಿಗೆ ತಮಗಾಗಿ ಹೊಸ ಮಾರ್ಗಗಳನ್ನು ರೂಪಿಸಿಕೊಳ್ಳಲು, ಹೊಸ ಗಮ್ಯಸ್ಥಾನಗಳನ್ನು ಮತ್ತು ಹೊಸ ಮೈಲಿಗಲ್ಲುಗಳನ್ನು ಹುಡುಕಲು ಬಯಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಅಂತಹ ಹೊಸ ಗಮ್ಯಸ್ಥಾನಗಳನ್ನು ಕೇವಲ ಕಠಿಣ ಪರಿಶ್ರಮದ ಮೂಲಕ ಮಾತ್ರ ಸಾಧಿಸಬಹುದು ಎಂದು ಅವರು ಹೇಳಿದರು. ಕಾರ್ಯಗಳು ಸಾಹಸದಿಂದ ಸಿದ್ಧಿಸುತ್ತವೆಯೇ ಹೊರತು ಕೇವಲ ಇಚ್ಛೆಯಿಂದಲ್ಲ ಎಂಬ ಮಾತನ್ನು ಸ್ಮರಿಸಿದರು. ಸಾಹಸಕ್ಕೆ ಧೈರ್ಯವು ಮೊದಲ ಷರತ್ತು ಎಂದು ಶ್ರೀ ಮೋದಿಯವರು ಒತ್ತಿಹೇಳಿದರು, ಯುವಕರು ಈ ಹಂತಕ್ಕೆ ತಲುಪಲು ತೆಗೆದುಕೊಂಡ ಅಪಾರ ಧೈರ್ಯ ಮತ್ತು ಅಪಾಯಗಳನ್ನು ಅವರು ಅಂಗೀಕರಿಸಿದರು. ಈ ಹಿಂದೆ ದೇಶದಲ್ಲಿ ರಿಸ್ಕ್ (ಅಪಾಯ) ತೆಗೆದುಕೊಳ್ಳುವುದನ್ನು ನಿರುತ್ಸಾಹಗೊಳಿಸಲಾಗುತ್ತಿತ್ತು, ಆದರೆ ಇಂದು ಅದು ಸಾಮಾನ್ಯವಾಗಿದೆ ಮತ್ತು ಮಾಸಿಕ ಸಂಬಳಕ್ಕಿಂತ ಮೀರಿ ಯೋಚಿಸುವವರನ್ನು ಕೇವಲ ಸ್ವೀಕರಿಸುವುದು ಮಾತ್ರವಲ್ಲದೆ ಗೌರವಿಸಲಾಗುತ್ತಿದೆ ಎಂದು ಅವರು ಹೇಳಿದರು. ಒಂದು ಕಾಲದಲ್ಲಿ ಅಪ್ರಸ್ತುತವೆಂದು ಪರಿಗಣಿಸಲಾಗಿದ್ದ ವಿಚಾರಗಳು ಈಗ ಫ್ಯಾಶನ್ ಆಗುತ್ತಿವೆ ಎಂದು ಹೇಳಿದರು.
ರಿಸ್ಕ್ ತೆಗೆದುಕೊಳ್ಳುವ ಬಗ್ಗೆ ತಮ್ಮ ಪ್ರಬಲ ಗಮನವನ್ನು ಒತ್ತಿಹೇಳುತ್ತಾ, ಇದು ದೀರ್ಘಕಾಲದಿಂದಲೂ ತಮ್ಮ ಅಭ್ಯಾಸವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಯಾರೂ ಮಾಡಲು ಮುಂದಾಗದ ಕೆಲಸಗಳು, ಚುನಾವಣೆ ಸೋಲುವ ಅಥವಾ ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ದಶಕಗಳ ಕಾಲ ಸರ್ಕಾರಗಳು ತಪ್ಪಿಸುತ್ತಿದ್ದ ವಿಷಯಗಳು ಮತ್ತು ಹೆಚ್ಚಿನ ರಾಜಕೀಯ ರಿಸ್ಕ್ ಎಂದು ಹೇಳಲಾದ ಕೆಲಸಗಳನ್ನು ಪೂರೈಸುವುದು ಯಾವಾಗಲೂ ತಮ್ಮ ಜವಾಬ್ದಾರಿ ಎಂದು ತಾವು ಪರಿಗಣಿಸಿದ್ದಾಗಿ ಅವರು ತಿಳಿಸಿದರು. ನಾವೀನ್ಯಕಾರರಂತೆಯೇ ತಾವು ಕೂಡ, ರಾಷ್ಟ್ರಕ್ಕೆ ಅಗತ್ಯವಿದ್ದರೆ ರಿಸ್ಕ್ ತೆಗೆದುಕೊಳ್ಳಲೇಬೇಕು ಮತ್ತು ಯಾವುದೇ ನಷ್ಟವು ತಮ್ಮದಾಗಿದ್ದರೂ, ಅದರ ಲಾಭವು ಲಕ್ಷಾಂತರ ಕುಟುಂಬಗಳನ್ನು ತಲುಪುತ್ತದೆ ಎಂದು ನಂಬುವುದಾಗಿ ಅವರು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ, ದೇಶವು ನಾವೀನ್ಯತೆಯನ್ನು ಉತ್ತೇಜಿಸುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮಕ್ಕಳಲ್ಲಿ ನಾವೀನ್ಯತೆಯ ಮನೋಭಾವವನ್ನು ಜಾಗೃತಗೊಳಿಸಲು ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಸ್ಥಾಪಿಸಲಾಗಿದೆ, ರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸಲು ಯುವಕರನ್ನು ಪ್ರೋತ್ಸಾಹಿಸಲು ಹ್ಯಾಕಥಾನ್ ಗಳನ್ನು ಪ್ರಾರಂಭಿಸಲಾಗಿದೆ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಆಲೋಚನೆಗಳು ಸಾಯದಂತೆ ಖಚಿತಪಡಿಸಿಕೊಳ್ಳಲು ಇನ್ಕ್ಯುಬೇಶನ್ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಜಟಿಲವಾದ ಅನುಸರಣೆಗಳು, ದೀರ್ಘ ಅನುಮೋದನೆ ಚಕ್ರಗಳು ಮತ್ತು ಇನ್ಸ್‌ಪೆಕ್ಟರ್ ರಾಜ್ ನ ಭಯವು ಒಂದು ಕಾಲದಲ್ಲಿ ನಾವೀನ್ಯತೆಗೆ ದೊಡ್ಡ ಅಡಚಣೆಗಳಾಗಿದ್ದವು ಎಂದು ಹೇಳಿದ ಶ್ರೀ ಮೋದಿ, ಅದಕ್ಕಾಗಿಯೇ ತಮ್ಮ ಸರ್ಕಾರವು ನಂಬಿಕೆ ಮತ್ತು ಪಾರದರ್ಶಕ ವಾತಾವರಣವನ್ನು ಸೃಷ್ಟಿಸಿದೆ ಎಂದರು. ಜನ ವಿಶ್ವಾಸ ಕಾಯ್ದೆಯಡಿಯಲ್ಲಿ, 180 ಕ್ಕೂ ಹೆಚ್ಚು ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಲಾಗಿದೆ, ಇದರಿಂದ ನಾವೀನ್ಯಕಾರರು ದಾವೆಗಳಿಗಿಂತ ಹೆಚ್ಚಾಗಿ ತಮ್ಮ ಕೆಲಸದ ಮೇಲೆ ಗಮನ ಹರಿಸಲು ಅಮೂಲ್ಯವಾದ ಸಮಯ ಉಳಿತಾಯವಾಗಿದೆ ಎಂದು ಅವರು ಹೇಳಿದರು. ನವೋದ್ಯಮಗಳು ಈಗ ಅನೇಕ ಕಾನೂನುಗಳಲ್ಲಿ ಸ್ವಯಂ-ಪ್ರಮಾಣೀಕರಣದ ಪ್ರಯೋಜನವನ್ನು ಪಡೆಯುತ್ತಿವೆ ಮತ್ತು ವಿಲೀನ ಹಾಗೂ ನಿರ್ಗಮನಗಳನ್ನು ಸುಲಭಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
“ಸ್ಟಾರ್ಟ್‌ಅಪ್ ಇಂಡಿಯಾ ಕೇವಲ ಒಂದು ಯೋಜನೆಯಲ್ಲ, ಇದು ವೈವಿಧ್ಯಮಯ ಕ್ಷೇತ್ರಗಳನ್ನು ಹೊಸ ಅವಕಾಶಗಳೊಂದಿಗೆ ಸಂಪರ್ಕಿಸುವ ಬಹುವ್ಯಾಪಿ ದೃಷ್ಟಿಕೋನವಾಗಿದೆ” ಎಂದು ಶ್ರೀ ಮೋದಿ ಒತ್ತಿ ಹೇಳಿದರು. ರಕ್ಷಣಾ ಉತ್ಪಾದನೆಯಲ್ಲಿ, ನವೋದ್ಯಮಗಳು ಈ ಹಿಂದೆ ಸ್ಥಾಪಿತ ಕಂಪನಿಗಳೊಂದಿಗೆ ಸ್ಪರ್ಧಿಸುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ, ಆದರೆ ಐಡೆಕ್ಸ್ (iDEX) ಮೂಲಕ ಆಯಕಟ್ಟಿನ ಕ್ಷೇತ್ರಗಳಲ್ಲಿ ಹೊಸ ಖರೀದಿ ಮಾರ್ಗಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದರು. ಈ ಹಿಂದೆ ಖಾಸಗಿ ಸಹಭಾಗಿತ್ವಕ್ಕೆ ಮುಚ್ಚಲ್ಪಟ್ಟಿದ್ದ ಬಾಹ್ಯಾಕಾಶ ಕ್ಷೇತ್ರವನ್ನು ಈಗ ಮುಕ್ತಗೊಳಿಸಲಾಗಿದೆ, ಸುಮಾರು 200 ನವೋದ್ಯಮಗಳು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಜಾಗತಿಕ ಮನ್ನಣೆ ಪಡೆಯುತ್ತಿವೆ ಎಂದು ಅವರು ಉಲ್ಲೇಖಿಸಿದರು. ಅದೇ ರೀತಿ, ಹಳೆಯ ನಿಯಮಗಳು ಭಾರತವನ್ನು ದೀರ್ಘಕಾಲದವರೆಗೆ ಹಿಡಿದಿಟ್ಟಿದ್ದ ಡ್ರೋನ್ ವಲಯವನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಸುಧಾರಣೆಗಳು ಮತ್ತು ನಾವೀನ್ಯಕಾರರ ಮೇಲಿನ ನಂಬಿಕೆಯು ಅದರ ಚಿತ್ರಣವನ್ನೇ ಬದಲಿಸಿದೆ. ಸಾರ್ವಜನಿಕ ಸಂಗ್ರಹಣೆಯಲ್ಲಿ, ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM) ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಿದೆ, ಸುಮಾರು 35,000 ನವೋದ್ಯಮಗಳು ಮತ್ತು ಸಣ್ಣ ಉದ್ಯಮಗಳನ್ನು ಅದರಲ್ಲಿ ಸೇರಿಸಲಾಗಿದೆ, ಸುಮಾರು ₹50,000 ಕೋಟಿ ಮೌಲ್ಯದ 5 ಲಕ್ಷ ಖರೀದಿ ಆದೇಶಗಳನ್ನು ಅವು ಸ್ವೀಕರಿಸಿವೆ ಎಂದು ಅವರು ತಿಳಿಸಿದರು. ನವೋದ್ಯಮಗಳು ತಮ್ಮ ಯಶಸ್ಸಿನ ಮೂಲಕ ಪ್ರತಿಯೊಂದು ವಲಯದಲ್ಲೂ ಹೊಸ ಬೆಳವಣಿಗೆಯ ಮಾರ್ಗಗಳನ್ನು ತೆರೆಯುತ್ತಿವೆ ಎಂದು ಅವರು ಹೇಳಿದರು.
ಬಂಡವಾಳವಿಲ್ಲದೆ ಉತ್ತಮ ಆಲೋಚನೆಗಳು ಮಾರುಕಟ್ಟೆಯನ್ನು ತಲುಪಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿಯವರು ಹೇಳಿದರು, ಅದಕ್ಕಾಗಿಯೇ ತಮ್ಮ ಸರ್ಕಾರವು ನಾವೀನ್ಯಕಾರರಿಗೆ ಹಣಕಾಸಿನ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಗಮನ ಹರಿಸಿದೆ. ನವೋದ್ಯಮಗಳಿಗಾಗಿ ಫಂಡ್ ಆಫ್ ಫಂಡ್ಸ್ ಮೂಲಕ ₹25,000 ಕೋಟಿಗೂ ಹೆಚ್ಚು ಹೂಡಿಕೆ ಮಾಡಲಾಗಿದೆ, ಹಾಗೆಯೇ ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್, IN-SPACe ಸೀಡ್ ಫಂಡ್ ಮತ್ತು ನಿಧಿ ಸೀಡ್ ಸಪೋರ್ಟ್ ಪ್ರೋಗ್ರಾಂನಂತಹ ಯೋಜನೆಗಳು ನವೋದ್ಯಮಗಳಿಗೆ ಬೀಜ ನಿಧಿಯನ್ನು ಒದಗಿಸುತ್ತಿವೆ ಎಂದು ಅವರು ಹೇಳಿದರು. ಸಾಲದ ಲಭ್ಯತೆಯನ್ನು ಸುಧಾರಿಸಲು, ಖಾತರಿ ಕೊರತೆಯು ಸೃಜನಶೀಲತೆಗೆ ಅಡ್ಡಿಯಗದಂತೆ ಮಾಡಲು ಸಾಲ ಖಾತರಿ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಶ್ರೀ ಮೋದಿ ತಿಳಿಸಿದರು.
ಇಂದಿನ ಸಂಶೋಧನೆಯು ನಾಳೆಯ ಬೌದ್ಧಿಕ ಆಸ್ತಿಯಾಗುತ್ತದೆ ಎಂದು ಒತ್ತಿಹೇಳಿದ ಶ್ರೀ ಮೋದಿ, ಇದನ್ನು ಉತ್ತೇಜಿಸಲು ₹₹1 ಲಕ್ಷ ಕೋಟಿ ವೆಚ್ಚದ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆಯನ್ನು ಪ್ರಾರಂಭಿಸಲಾಗಿದೆ, ಇದರ ಜೊತೆಗೆ ಉದಯೋನ್ಮುಖ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಹೂಡಿಕೆಯನ್ನು ಬೆಂಬಲಿಸಲು ಡೀಪ್ ಟೆಕ್ ಫಂಡ್ ಆಫ್ ಫಂಡ್ಸ್ ಅನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಆರ್ಥಿಕ ಭದ್ರತೆ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉದಯೋನ್ಮುಖ ಕ್ಷೇತ್ರಗಳಲ್ಲಿ ಹೊಸ ಆಲೋಚನೆಗಳ ಮೇಲೆ ಕೆಲಸ ಮಾಡುವ ಮೂಲಕ ಭವಿಷ್ಯಕ್ಕಾಗಿ ಸಿದ್ಧರಾಗುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿಹೇಳಿದರು, ಕೃತಕ ಬುದ್ಧಿಮತ್ತೆ (ಎಐ) ಯನ್ನು ಇದಕ್ಕೆ ಪ್ರಮುಖ ಉದಾಹರಣೆಯಾಗಿ ನೀಡಿದರು. ಎಐ ಕ್ರಾಂತಿಯಲ್ಲಿ ಮುನ್ನಡೆ ಸಾಧಿಸುವ ರಾಷ್ಟ್ರಗಳು ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತವೆ ಮತ್ತು ಭಾರತದ ಮಟ್ಟಿಗೆ ಈ ಜವಾಬ್ದಾರಿಯು ಅದರ ನವೋದ್ಯಮಗಳ ಮೇಲಿದೆ ಎಂದು ಅವರು ಹೇಳಿದರು. ಫೆಬ್ರವರಿ 2026 ರಲ್ಲಿ ಭಾರತವು ʼಎಐ ಇಂಪ್ಯಾಕ್ಟ್ ಸಮ್ಮಿಟ್ʼ ಅನ್ನು ಆಯೋಜಿಸಲಿದೆ ಎಂದು ಪ್ರಸ್ತಾಪಿಸಿದ ಶ್ರೀ ಮೋದಿ, ಇದು ಯುವಜನರಿಗೆ ಉತ್ತಮ ಅವಕಾಶ ಎಂದು ಹೇಳಿದರು. ಹೆಚ್ಚಿನ ಕಂಪ್ಯೂಟಿಂಗ್ ವೆಚ್ಚಗಳಂತಹ ಸವಾಲುಗಳನ್ನು ಅವರು ಒಪ್ಪಿಕೊಂಡರು, ಆದರೆ ಇಂಡಿಯಾ ಎಐ ಮಿಷನ್ ಮೂಲಕ ಪರಿಹಾರಗಳನ್ನು ಒದಗಿಸಲಾಗುತ್ತಿದೆ, ಸಣ್ಣ ನವೋದ್ಯಮಗಳಿಗೆ ದೊಡ್ಡ ತಂತ್ರಜ್ಞಾನ ಲಭ್ಯವಾಗುವಂತೆ ಮಾಡಲು 38,000 ಕ್ಕೂ ಹೆಚ್ಚು ಜಿಪಿಯುಗಳನ್ನು ಆನ್‌ಬೋರ್ಡ್ ಮಾಡಲಾಗಿದೆ, ಹಾಗೆಯೇ ಭಾರತೀಯ ಸರ್ವರ್ ಗಳಲ್ಲಿ ಭಾರತೀಯ ಪ್ರತಿಭೆಗಳಿಂದ ಸ್ಥಳೀಯ ಎಐ ಅನ್ನು ಅಭಿವೃದ್ಧಿಪಡಿಸುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಸೆಮಿಕಂಡಕ್ಟರ್ ಗಳು, ಡೇಟಾ ಕೇಂದ್ರಗಳು, ಹಸಿರು ಹೈಡ್ರೋಜನ್ ಮತ್ತು ಇತರ ಕ್ಷೇತ್ರಗಳಲ್ಲಿಯೂ ಇದೇ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
“ಭಾರತದ ಮಹತ್ವಾಕಾಂಕ್ಷೆಯು ಕೇವಲ ಭಾಗವಹಿಸುವಿಕೆಗೆ ಸೀಮಿತವಾಗಬಾರದು, ಬದಲಾಗಿ ಜಾಗತಿಕ ನಾಯಕತ್ವದ ಗುರಿಯನ್ನು ಹೊಂದಿರಬೇಕು, ನವೋದ್ಯಮಗಳು ಹೊಸ ಆಲೋಚನೆಗಳ ಮೇಲೆ ಕೆಲಸ ಮಾಡಲು, ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಬೇಕು” ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಕಳೆದ ದಶಕಗಳಲ್ಲಿ, ಭಾರತವು ಡಿಜಿಟಲ್ ನವೋದ್ಯಮಗಳು ಮತ್ತು ಸೇವಾ ಕ್ಷೇತ್ರಗಳಲ್ಲಿ ತನ್ನ ಸಾಧನೆಗಳನ್ನು ಮಾಡಿದೆ ಮತ್ತು ಈಗ ನವೋದ್ಯಮಗಳು ಉತ್ಪಾದನಾ ಕ್ಷೇತ್ರದ ಮೇಲೆ ಗಮನ ಹರಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು. ಭವಿಷ್ಯವನ್ನು ಮುನ್ನಡೆಸಲು ವಿಶ್ವದರ್ಜೆಯ ಗುಣಮಟ್ಟದ ಹೊಸ ಉತ್ಪನ್ನಗಳನ್ನು ಮತ್ತು ಅನನ್ಯ ತಾಂತ್ರಿಕ ಆಲೋಚನೆಗಳನ್ನು ಸೃಷ್ಟಿಸಲು ಅವರು ಕರೆ ನೀಡಿದರು. ಸರ್ಕಾರವು ಪ್ರತಿಯೊಂದು ಪ್ರಯತ್ನದಲ್ಲೂ ನವೋದ್ಯಮಗಳ ಪರವಾಗಿ ದೃಢವಾಗಿ ನಿಲ್ಲುತ್ತದೆ ಎಂದು ಶ್ರೀ ಮೋದಿಯವರು ಭರವಸೆ ನೀಡಿದರು, ಅವರ ಧೈರ್ಯ, ಆತ್ಮವಿಶ್ವಾಸ ಮತ್ತು ನಾವೀನ್ಯತೆಯ ಮೇಲೆ ತಮಗೆ ಆಳವಾದ ನಂಬಿಕೆ ಇದೆ, ಇದು ಭಾರತದ ಭವಿಷ್ಯವನ್ನು ರೂಪಿಸುತ್ತಿದೆ ಎಂದು ಅವರು ಹೇಳಿದರು. ಕಳೆದ ಹತ್ತು ವರ್ಷಗಳು ದೇಶದ ಸಾಮರ್ಥ್ಯವನ್ನು ಸಾಬೀತುಪಡಿಸಿವೆ ಮತ್ತು ಮುಂದಿನ ದಶಕದ ಗುರಿಯು ಭಾರತವು ಹೊಸ ನವೋದ್ಯಮ ಪ್ರವೃತ್ತಿಗಳು ಮತ್ತು ತಂತ್ರಜ್ಞಾನಗಳಲ್ಲಿ ವಿಶ್ವವನ್ನು ಮುನ್ನಡೆಸುವುದಾಗಿರಬೇಕು ಎಂದು ಹೇಳಿದ ಪ್ರಧಾನಮಂತ್ರಿಯವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ನಾವೀನ್ಯತೆಯನ್ನು ಪೋಷಿಸಲು, ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಹೂಡಿಕೆ-ಚಾಲಿತ ಬೆಳವಣಿಗೆಯನ್ನು ಸಕ್ರಿಯಗೊಳಿಸಲು, ಭಾರತವನ್ನು ಉದ್ಯೋಗಾಕಾಂಕ್ಷಿಗಳ ಬದಲಿಗೆ ಉದ್ಯೋಗ ಸೃಷ್ಟಿಕರ್ತರ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ ಪ್ರಧಾನಮಂತ್ರಿಯವರು 16 ಜನವರಿ 2016 ರಂದು ಸ್ಟಾರ್ಟ್‌ಅಪ್ ಇಂಡಿಯಾವನ್ನು ಪರಿವರ್ತಕ ರಾಷ್ಟ್ರೀಯ ಕಾರ್ಯಕ್ರಮವಾಗಿ ಪ್ರಾರಂಭಿಸಿದರು.
ಕಳೆದ ದಶಕದಲ್ಲಿ, ಸ್ಟಾರ್ಟ್‌ಅಪ್ ಇಂಡಿಯಾ ಭಾರತದ ಆರ್ಥಿಕ ಮತ್ತು ನಾವೀನ್ಯತೆ ಸಂರಚನೆಯ ಮೂಲಾಧಾರವಾಗಿ ಹೊರಹೊಮ್ಮಿದೆ. ಇದು ಸಾಂಸ್ಥಿಕ ಕಾರ್ಯವಿಧಾನಗಳನ್ನು ಬಲಪಡಿಸಿದೆ, ಬಂಡವಾಳ ಮತ್ತು ಮಾರ್ಗದರ್ಶನದ ಪ್ರವೇಶವನ್ನು ವಿಸ್ತರಿಸಿದೆ ಮತ್ತು ನವೋದ್ಯಮಗಳು ವಿವಿಧ ಕ್ಷೇತ್ರಗಳಲ್ಲಿ ಮತ್ತು ಭೌಗೋಳಿಕ ಪ್ರದೇಶಗಳಲ್ಲಿ ಬೆಳೆಯಲು ಹಾಗೂ ವಿಸ್ತರಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಭಾರತದ ನವೋದ್ಯಮ ಪರಿಸರ ವ್ಯವಸ್ಥೆಯು ಈ ಅವಧಿಯಲ್ಲಿ ಅಭೂತಪೂರ್ವ ವಿಸ್ತರಣೆಗೆ ಸಾಕ್ಷಿಯಾಗಿದೆ, ದೇಶದಾದ್ಯಂತ 2,00,000 ಕ್ಕೂ ಹೆಚ್ಚು ನವೋದ್ಯಮಗಳು ಗುರುತಿಸಲ್ಪಟ್ಟಿವೆ. ಈ ಉದ್ಯಮಗಳು ಉದ್ಯೋಗ ಸೃಷ್ಟಿ, ನಾವೀನ್ಯತೆ-ಚಾಲಿತ ಆರ್ಥಿಕ ಬೆಳವಣಿಗೆ ಮತ್ತು ವೈವಿಧ್ಯಮಯ ಕ್ಷೇತ್ರಗಳಲ್ಲಿ ದೇಶೀಯ ಮೌಲ್ಯ ಸರಪಳಿಗಳ ಬಲವರ್ಧನೆಯ ಗಮನಾರ್ಹ ಚಾಲಕ ಶಕ್ತಿಗಳಾಗಿವೆ.
*****
Driven by innovation and enterprise, India’s Startups are shaping a self-reliant and resilient economy. Addressing a programme in Delhi marking #10YearsOfStartupIndia.
— Narendra Modi (@narendramodi) January 16, 2026
https://t.co/SY8JUUCvT7
India's youth are focused on solving real problems. #10YearsOfStartupIndia pic.twitter.com/TLQpz4UTQD
— PMO India (@PMOIndia) January 16, 2026
In just 10 years, the Startup India Mission has become a revolution.
— PMO India (@PMOIndia) January 16, 2026
Today, India is the world's third-largest startup ecosystem. #10YearsOfStartupIndia pic.twitter.com/0apvkq7M0Z
Today, risk-taking has become mainstream. #10YearsOfStartupIndia pic.twitter.com/g9Ki88iQCc
— PMO India (@PMOIndia) January 16, 2026
Startup India is not just a scheme, it is a rainbow vision.
— PMO India (@PMOIndia) January 16, 2026
It connects diverse sectors with new opportunities. #10YearsOfStartupIndia pic.twitter.com/xVyUUxgzu6
Now is the time for our startups to focus more on manufacturing. #10YearsOfStartupIndia pic.twitter.com/QYDjsaWgeo
— PMO India (@PMOIndia) January 16, 2026
The courage, confidence and innovation of startups are shaping India's future. #10YearsOfStartupIndia pic.twitter.com/XPpmtLiDvN
— PMO India (@PMOIndia) January 16, 2026