ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳಿಂದ ಉದ್ಭವಿಸಿರುವ ಪರಿಸ್ಥಿತಿ ಮತ್ತು ಭಾರತದ ಮೇಲೆ ಅದರ ಸಂಭವನೀಯ ಪರಿಣಾಮಗಳ ಕುರಿತು ಸಿದ್ಧತೆಗಳನ್ನು ಪರಿಶೀಲಿಸಲು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದರು.
ಎಲ್ಲಾ ಮುಖ್ಯಮಂತ್ರಿಗಳು ಹಂಚಿಕೊಂಡ ಮೌಲ್ಯಯುತ ಸಲಹೆಗಳಿಗಾಗಿ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಈ ಸಲಹೆಗಳು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಸಹಕಾರಿಯಾಗಲಿವೆ ಎಂದು ತಿಳಿಸಿದರು. ಮುಂದಿರುವ ಸವಾಲುಗಳನ್ನು ಎದುರಿಸಲು ಜಾಗರೂಕತೆ, ಸಿದ್ಧತೆ ಮತ್ತು ಸಮನ್ವಯದ ಕ್ರಮಗಳ ಅಗತ್ಯವನ್ನು ಅವರು ಒತ್ತಿಹೇಳಿದರು.
ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಜಾಗತಿಕ ಅಡೆತಡೆಗಳನ್ನು ನಿಭಾಯಿಸುವಲ್ಲಿ ಭಾರತಕ್ಕೆ ಹಿಂದಿನ ಅನುಭವವಿದೆ ಎಂದು ಹೇಳಿದರು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯಗಳು “ಟೀಮ್ ಇಂಡಿಯಾ” ಆಗಿ ಒಟ್ಟಾಗಿ ಕೆಲಸ ಮಾಡಿ ಪೂರೈಕೆ ಸರಪಳಿಗಳು, ವ್ಯಾಪಾರ ಮತ್ತು ದೈನಂದಿನ ಜೀವನದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಿದ್ದನ್ನು ಅವರು ನೆನಪಿಸಿಕೊಂಡರು. ಇದೇ ರೀತಿಯ ಸಹಕಾರ ಮತ್ತು ಸಮನ್ವಯದ ಮನೋಭಾವವು ಪ್ರಸ್ತುತ ಸಂದರ್ಭಗಳನ್ನು ಎದುರಿಸುವಲ್ಲಿ ಭಾರತದ ದೊಡ್ಡ ಶಕ್ತಿಯಾಗಿದೆ ಎಂದು ಅವರು ಹೇಳಿದರು.
ಪರಿಸ್ಥಿತಿಯು ಬದಲಾಗುತ್ತಲೇ ಇರುವುದರಿಂದ ನಿರಂತರ ಮೇಲ್ವಿಚಾರಣೆ ಮತ್ತು ಹೊಂದಾಣಿಕೆಯ ಕಾರ್ಯತಂತ್ರಗಳ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮಾರ್ಚ್ 3 ರಿಂದ ಅಂತರ್-ಸಚಿವಾಲಯ ಸಮಿತಿಯು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಪರಿಸ್ಥಿತಿಯನ್ನು ಪರಾಮರ್ಶಿಸಿ ಸಕಾಲಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು. ಆರ್ಥಿಕ ಮತ್ತು ವ್ಯಾಪಾರ ಸ್ಥಿರತೆ ಕಾಪಾಡುವುದು, ಇಂಧನ ಭದ್ರತೆ ಖಚಿತಪಡಿಸುವುದು, ನಾಗರಿಕರ ಹಿತಾಸಕ್ತಿ ರಕ್ಷಿಸುವುದು ಮತ್ತು ಕೈಗಾರಿಕೆ ಹಾಗೂ ಪೂರೈಕೆ ಸರಪಳಿಗಳನ್ನು ಬಲಪಡಿಸುವುದು ಸರ್ಕಾರದ ಆದ್ಯತೆಗಳಾಗಿವೆ ಎಂದು ಅವರು ತಿಳಿಸಿದರು.
ರಾಜ್ಯಗಳ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ನಿರ್ಧಾರಗಳ ಪರಿಣಾಮಕಾರಿ ಅನುಷ್ಠಾನವು ರಾಜ್ಯ ಮಟ್ಟದಲ್ಲಿ ನಡೆಯುತ್ತದೆ ಎಂದು ಹೇಳಿದರು. ಕೇಂದ್ರ ಮತ್ತು ರಾಜ್ಯಗಳ ನಡುವೆ ನಿರಂತರ ಸಂವಹನ, ಸಮನ್ವಯ ಮತ್ತು ಮಾಹಿತಿಯ ಸಕಾಲಿಕ ಹಂಚಿಕೆ ಹಾಗೂ ಜಂಟಿ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ, ಇದರಿಂದ ಪ್ರತಿಕ್ರಿಯೆಗಳು ತ್ವರಿತವಾಗಿರುತ್ತವೆ ಮತ್ತು ಸುಸಂಬದ್ಧವಾಗಿರುತ್ತವೆ ಎಂದರು.
ಪೂರೈಕೆ ಸರಪಳಿಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಕ್ರಮ ದಾಸ್ತಾನು ಹಾಗೂ ಲಾಭಕೋರತನದ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಮಂತ್ರಿ ರಾಜ್ಯಗಳನ್ನು ಒತ್ತಾಯಿಸಿದರು. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸುವ ಮತ್ತು ಅಡಚಣೆಗಳನ್ನು ತಡೆಗಟ್ಟಲು ಆಡಳಿತಾತ್ಮಕ ಜಾಗರೂಕತೆಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಮುಂಬರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರ ಸಂಗ್ರಹಣೆ ಮತ್ತು ವಿತರಣೆಯನ್ನು ಮೇಲ್ವಿಚಾರಣೆ ಮಾಡುವ ಕೃಷಿ ವಲಯದ ಮುನ್ನೆಚ್ಚರಿಕೆ ಯೋಜನೆಯ ಅಗತ್ಯವನ್ನು ಅವರು ಒತ್ತಿಹೇಳಿದರು.
ತಪ್ಪು ಮಾಹಿತಿ ಮತ್ತು ವದಂತಿಗಳ ಹರಡುವಿಕೆಯ ವಿರುದ್ಧ ಪ್ರಧಾನಮಂತ್ರಿ ಎಚ್ಚರಿಕೆ ನೀಡಿದರು. ಜನರಲ್ಲಿ ಆತಂಕ ತಡೆಯಲು ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯ ಸಕಾಲಿಕ ಪ್ರಸಾರ ಅತ್ಯಗತ್ಯ ಎಂದು ಅವರು ಹೇಳಿದರು. ಆನ್‌ಲೈನ್ ವಂಚನೆಗಳು ಮತ್ತು ನಕಲಿ ಏಜೆಂಟ್ ಗಳ ಬಗ್ಗೆಯೂ ಜಾಗರೂಕರಾಗಿರಲು ಸಲಹೆ ನೀಡಿದರು. ಹಡಗು ಸಂಚಾರ, ಅಗತ್ಯ ವಸ್ತುಗಳ ಪೂರೈಕೆ ಮತ್ತು ಕಡಲ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಗಡಿ ಮತ್ತು ಕರಾವಳಿ ರಾಜ್ಯಗಳಲ್ಲಿ ವಿಶೇಷ ಗಮನ ಹರಿಸುವಂತೆ ಅವರು ಕರೆ ನೀಡಿದರು.
ಸಾರ್ವಜನಿಕ ವಿಶ್ವಾಸವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು. ಅಗತ್ಯ ವಸ್ತುಗಳ ಲಭ್ಯತೆಯ ಬಗ್ಗೆ ಭರವಸೆ ನೀಡುವುದರಿಂದ ನಾಗರಿಕರಲ್ಲಿ ಅನಗತ್ಯ ಆತಂಕವನ್ನು ತಡೆಯಬಹುದು ಎಂದು ಅವರು ತಿಳಿಸಿದರು. ಪಶ್ಚಿಮ ಏಷ್ಯಾದಲ್ಲಿ ತಮ್ಮ ನಾಗರಿಕರನ್ನು ಹೊಂದಿರುವ ರಾಜ್ಯಗಳು ಸಹಾಯವಾಣಿಗಳನ್ನು ಸಕ್ರಿಯಗೊಳಿಸಲು, ನೋಡಲ್ ಅಧಿಕಾರಿಗಳನ್ನು ನೇಮಿಸಲು ಮತ್ತು ಬಾಧಿತ ಕುಟುಂಬಗಳಿಗೆ ಸಹಾಯ ಮಾಡಲು ಹಾಗೂ ಮಾಹಿತಿಯ ಸಕಾಲಿಕ ಹರಿವನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಮಟ್ಟದ ಬೆಂಬಲ ವ್ಯವಸ್ಥೆಗಳನ್ನು ಸ್ಥಾಪಿಸಲು ಅವರು ಸಲಹೆ ನೀಡಿದರು.
ಇತ್ತೀಚಿನ ವರ್ಷಗಳಲ್ಲಿ ಭಾರತದ ಆರ್ಥಿಕ ಮತ್ತು ಪೂರೈಕೆ ವ್ಯವಸ್ಥೆಗಳನ್ನು ಬಲಪಡಿಸಲು ಕೈಗೊಂಡ ಪ್ರಯತ್ನಗಳು ಪ್ರಸ್ತುತ ಸಂದರ್ಭದಲ್ಲಿ ಪ್ರಯೋಜನಕಾರಿಯಾಗುತ್ತಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಕೈಗಾರಿಕೆ ಮತ್ತು ಎಂ ಎಸ್ ಎಂ ಇ ವಲಯದ ಕಳವಳಗಳನ್ನು ಪರಿಹರಿಸಲು ಮತ್ತು ಉತ್ಪಾದನೆ ಹಾಗೂ ಉದ್ಯೋಗದಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಕರೆ ನೀಡಿದರು. ಬದಲಾಗುತ್ತಿರುವ ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸಲು ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ನಿಯಮಿತ ಪರಾಮರ್ಶೆಗಳು ಮತ್ತು ಜಿಲ್ಲಾ ಮಟ್ಟದಲ್ಲಿ ನಿರಂತರ ಮೇಲ್ವಿಚಾರಣೆ ಸೇರಿದಂತೆ ಎಲ್ಲಾ ಹಂತಗಳಲ್ಲಿ ಬಲವಾದ ಸಮನ್ವಯ ವ್ಯವಸ್ಥೆಗಳ ಅಗತ್ಯವನ್ನು ಅವರು ಒತ್ತಿಹೇಳಿದರು.
ತಕ್ಷಣದ ಪ್ರತಿಕ್ರಿಯೆ ಮತ್ತು ದೀರ್ಘಕಾಲೀನ ಸಿದ್ಧತೆಗಳ ಮೇಲೆ ಸಮಾನಾಂತರವಾಗಿ ಗಮನ ಹರಿಸಲು ಪ್ರಧಾನಮಂತ್ರಿ ಕರೆ ನೀಡಿದರು. ಜೈವಿಕ ಇಂಧನಗಳು, ಸೌರಶಕ್ತಿ, ಗೋಬರ್ಧನ್ ಯೋಜನೆ, ಎಲೆಕ್ಟ್ರಿಕ್ ಮೊಬಿಲಿಟಿ ಹಾಗೂ ಪೈಪ್ ಮೂಲಕ ನೈಸರ್ಗಿಕ ಅನಿಲ ಸಂಪರ್ಕಗಳ ವಿಸ್ತರಣೆಯಂತಹ ಪರ್ಯಾಯ ಇಂಧನ ಮೂಲಗಳನ್ನು ಉತ್ತೇಜಿಸುವ ಪ್ರಯತ್ನಗಳನ್ನು ಚುರುಕುಗೊಳಿಸಲು ಅವರು ರಾಜ್ಯಗಳನ್ನು ಒತ್ತಾಯಿಸಿದರು. ರಾಜ್ಯಗಳ ಸಕ್ರಿಯ ಸಹಕಾರದೊಂದಿಗೆ ತೈಲ ಮತ್ತು ನೈಸರ್ಗಿಕ ಅನಿಲದ ದೇಶೀಯ ಅನ್ವೇಷಣೆಯನ್ನು ಹೆಚ್ಚಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.
ಸವಾಲನ್ನು ಎದುರಿಸುವುದು ಜಂಟಿ ಜವಾಬ್ದಾರಿಯಾಗಿದೆ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು ಮತ್ತು “ಟೀಮ್ ಇಂಡಿಯಾ” ಆಗಿ ಒಟ್ಟಾಗಿ ಕೆಲಸ ಮಾಡುವ ಮೂಲಕ ದೇಶವು ಈ ಪರಿಸ್ಥಿತಿಯನ್ನು ಯಶಸ್ವಿಯಾಗಿ ಜಯಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯ ಸಂದರ್ಭದಲ್ಲಿ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಮಾತನಾಡಿ, ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಸರ್ಕಾರವು ಈ ಬಿಕ್ಕಟ್ಟನ್ನು ಎದುರಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಎಲ್ ಪಿ ಜಿ ಲಭ್ಯತೆಯನ್ನು ಖಚಿತಪಡಿಸುವುದು ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವಂತಹ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು. ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ ಸಾಮೂಹಿಕ ಕ್ರಮದ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.
ಸಂಪುಟ ಕಾರ್ಯದರ್ಶಿ ಶ್ರೀ ಟಿ.ವಿ. ಸೋಮನಾಥನ್ ಅವರು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪ್ರಸ್ತುತಿಯನ್ನು ನೀಡಿದರು ಮತ್ತು ಪರಿಸ್ಥಿತಿಯನ್ನು ಎದುರಿಸಲು ರಾಜ್ಯಗಳಿಗೆ ಕ್ರಮಗಳು ಶಿಫಾರಸುಗಳನ್ನು ಪಟ್ಟಿ ಮಾಡಿದರು.
ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು. ಈ ಬಿಕ್ಕಟ್ಟಿನ ನಡುವೆ ವಿದೇಶದಲ್ಲಿರುವ ಭಾರತೀಯ ನಾಗರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿಯವರು ವಿವಿಧ ದೇಶಗಳೊಂದಿಗೆ ನಡೆಸಿದ ರಾಜತಾಂತ್ರಿಕ ಸಂಪರ್ಕವನ್ನು ಅವರು ಶ್ಲಾಘಿಸಿದರು.
ರಾಜ್ಯಗಳಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಲಭ್ಯತೆ ಸಮರ್ಪಕವಾಗಿದ್ದು, ಪರಿಸ್ಥಿತಿ ಸ್ಥಿರವಾಗಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು. ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ನಿರ್ಧಾರವನ್ನು ಅವರು ಸ್ವಾಗತಿಸಿದರು, ಇದು ಜಾಗತಿಕ ಅನಿಶ್ಚಿತತೆಯ ನಡುವೆ ನಾಗರಿಕರಿಗೆ ಗಮನಾರ್ಹ ಪರಿಹಾರ ನೀಡುತ್ತದೆ ಎಂದು ತಿಳಿಸಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಎಲ್ ಪಿ ಜಿ ಹಂಚಿಕೆಯನ್ನು ಶೇಕಡಾ 50 ರಿಂದ ಶೇಕಡಾ 70 ಕ್ಕೆ ಹೆಚ್ಚಿಸುವ ನಿರ್ಧಾರವನ್ನೂ ಮುಖ್ಯಮಂತ್ರಿಗಳು ಸ್ವಾಗತಿಸಿದರು. ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಕೇಂದ್ರದೊಂದಿಗೆ ನಿಕಟ ಸಮನ್ವಯದಲ್ಲಿ ಕೆಲಸ ಮಾಡುವ ಬದ್ಧತೆಯನ್ನು ಮುಖ್ಯಮಂತ್ರಿಗಳು ಪುನರುಚ್ಚರಿಸಿದರು.
*****
Chaired a meeting with Chief Ministers and Lieutenant Governors of states to review the situation in the wake of the ongoing conflict in West Asia.
— Narendra Modi (@narendramodi) March 27, 2026
Reaffirmed our Government’s commitment towards maintaining economic and trade stability, ensuring energy security, safeguarding the…