Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರು ಓಮನ್ ನ ದೊರೆ ಸುಲ್ತಾನ್ ಅವರನ್ನು ಭೇಟಿ ಮಾಡಿದರು

ಪ್ರಧಾನಮಂತ್ರಿ ಅವರು ಓಮನ್ ನ ದೊರೆ ಸುಲ್ತಾನ್ ಅವರನ್ನು ಭೇಟಿ ಮಾಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಸ್ಕತ್ ನಲ್ಲಿ ಮಹಾರಾಜ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ರಾಜಭವನಕ್ಕೆ ಆಗಮಿಸಿದ ಪ್ರಧಾನಮಂತ್ರಿ ಅವರನ್ನು ದೊರೆ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು ಮತ್ತು ಔಪಚಾರಿಕ ಸ್ವಾಗತ ನೀಡಿದರು.

ಇಬ್ಬರು ನಾಯಕರು ಮುಖಾಮುಖಿ ಮತ್ತು ನಿಯೋಗ ಮಟ್ಟದ ಹಂತ-ಸ್ವರೂಪಗಳಲ್ಲಿ  ಭೇಟಿಯಾದರು. ಭಾರತ-ಓಮನ್ ದೇಶಗಳ ಬಹುಮುಖಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಮಗ್ರವಾಗಿ ಪರಿಶೀಲಿಸಿದರು ಮತ್ತು ದ್ವಿಪಕ್ಷೀಯ ಸಂಬಂಧಗಳಲ್ಲಿನ ಸ್ಥಿರ ಬೆಳವಣಿಗೆಯನ್ನು ಪರಸ್ಪರ  ಪರಿಶೀಲನೆ ನಡೆಸಿ ಶ್ಲಾಘಿಸಿದರು. ಈ ವರ್ಷ ಎರಡೂ ದೇಶಗಳು ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ವರ್ಷಗಳನ್ನು ಆಚರಿಸುತ್ತಿರುವುದರಿಂದ ಈ ಭೇಟಿ ಭಾರತ-ಓಮನ್ ಸಂಬಂಧಗಳಿಗೆ ವಿಶೇಷ ಮಹತ್ವದ್ದಾಗಿದೆ ಎಂದು ಉಭಯ ನಾಯಕರು ಗಮನಿಸಿದರು.

ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಹೆಗ್ಗುರುತು ಅಭಿವೃದ್ಧಿಯಾಗಿ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ [ಸಿಇಪಿಎ] ಗೆ ಸಹಿ ಹಾಕುವುದನ್ನು ಉಭಯ ನಾಯಕರು ಸ್ವಾಗತಿಸಿದರು ಮತ್ತು ಇದು ಕಾರ್ಯತಂತ್ರದ ಪಾಲುದಾರಿಕೆಗೆ ಪ್ರಮುಖ ಉತ್ತೇಜನ ನೀಡುತ್ತದೆ ಎಂದು ಅವರುಗಳು ಹೇಳಿದರು. ದ್ವಿಪಕ್ಷೀಯ ವ್ಯಾಪಾರ ಮೌಲ್ಯವು 10 ಬಿಲಿಯನ್ ಯುಎಸ್ ಡಾಲರ್‌ ಗಳನ್ನು ದಾಟಿದೆ ಮತ್ತು ದ್ವಿಪಕ್ಷೀಯ ಹೂಡಿಕೆ ಹರಿವು ಮುಂದುವರಿಯುತ್ತಿದೆ ಎಂದು ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಸಿಇಪಿಎ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಗಮನಾರ್ಹವಾಗಿ ಉತ್ತೇಜಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಎರಡೂ ದೇಶಗಳಲ್ಲಿ ಹಲವಾರು ಅವಕಾಶಗಳನ್ನು ತೆರೆಯುತ್ತದೆ ಎಂದು ಹೇಳಿದರು.

ದೀರ್ಘಾವಧಿಯ ಇಂಧನ ವ್ಯವಸ್ಥೆಗಳು, ನವೀಕರಿಸಬಹುದಾದ ಇಂಧನ ಉದ್ಯಮಗಳು ಮತ್ತು ಹಸಿರು ಹೈಡ್ರೋಜನ್ ಮತ್ತು ಹಸಿರು ಅಮೋನಿಯಾ ಯೋಜನೆಗಳ ಮೂಲಕ ಇಂಧನ ಸಹಕಾರಕ್ಕೆ ಹೊಸ ಒತ್ತು ನೀಡುವ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು. ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಓಮನ್ ಸೇರ್ಪಡೆಗೊಂಡಿದ್ದನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು ಮತ್ತು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟ ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಸೇರಲು ದೊರೆ ಅವರನ್ನು ಆಹ್ವಾನಿಸಿದರು.

ಕೃಷಿ ವಿಜ್ಞಾನ, ಪಶುಸಂಗೋಪನೆ, ಜಲಚರ ಸಾಕಣೆ ಮತ್ತು ರಾಗಿ ಕೃಷಿ ಕ್ಷೇತ್ರಗಳಲ್ಲಿನ ಸಹಯೋಗ ಸೇರಿದಂತೆ ಕೃಷಿ ಸಹಕಾರದಿಂದ ಎರಡೂ ದೇಶಗಳು ಪ್ರಯೋಜನ ಪಡೆಯಬಹುದು ಎಂದು ಪ್ರಧಾನಮಂತ್ರಿ ಅವರು ಗಮನಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಸಹಕಾರದ ಮಹತ್ವವನ್ನು ಒಪ್ಪಿಕೊಂಡ ಇಬ್ಬರು ನಾಯಕರು, ಅಧ್ಯಾಪಕರು ಮತ್ತು ಸಂಶೋಧಕರ ವಿನಿಮಯವು ಪರಸ್ಪರ ಪ್ರಯೋಜನಕಾರಿಯಾಗಿದೆ ಎಂದು ಗಮನಿಸಿದರು.

ಆಹಾರ ಭದ್ರತೆ, ಉತ್ಪಾದನೆ, ಡಿಜಿಟಲ್ ತಂತ್ರಜ್ಞಾನಗಳು, ನಿರ್ಣಾಯಕ ಖನಿಜಗಳು, ಲಾಜಿಸ್ಟಿಕ್ಸ್, ಮಾನವ-ಬಂಡವಾಳ ಅಭಿವೃದ್ಧಿ ಮತ್ತು ಬಾಹ್ಯಾಕಾಶ ಸಹಕಾರ ಕ್ಷೇತ್ರಗಳಲ್ಲಿ ಸಹಕಾರದ ಬಗ್ಗೆಯೂ ಇಬ್ಬರು ನಾಯಕರು ಚರ್ಚಿಸಿದರು.

ಹಣಕಾಸು ಸೇವೆಗಳ ಕುರಿತು, ಯುಪಿಐ ಮತ್ತು ಒಮಾನಿ ಡಿಜಿಟಲ್ ಪಾವತಿ ವ್ಯವಸ್ಥೆ, ರುಪೇ ಕಾರ್ಡ್ ಅಳವಡಿಕೆ ಮತ್ತು ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರದ ನಡುವಿನ ಸಹಕಾರದ ಬಗ್ಗೆ ಅವರು ಚರ್ಚಿಸಿದರು.

ರಸಗೊಬ್ಬರ ಮತ್ತು ಕೃಷಿ ಸಂಶೋಧನೆ ಎರಡೂ ಕಡೆಯವರಿಗೆ ಗೆಲುವು-ಗೆಲುವಿನ ಮೌಲ್ಯದ ಕ್ಷೇತ್ರಗಳಾಗಿವೆ ಮತ್ತು ಜಂಟಿ ಹೂಡಿಕೆಯ ಮೂಲಕವೂ ಸೇರಿದಂತೆ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಯೋಗಕ್ಕಾಗಿ ಅವರು ಕೆಲಸ ಮಾಡಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಕಡಲ ಕ್ಷೇತ್ರ ಸೇರಿದಂತೆ ರಕ್ಷಣಾ ಮತ್ತು ಭದ್ರತಾ ಸಹಯೋಗವನ್ನು ಮತ್ತಷ್ಟು ಹೆಚ್ಚಿಸುವ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.

ಓಮನ್‌ ನಲ್ಲಿರುವ ಭಾರತೀಯ ಸಮುದಾಯದ ಕಲ್ಯಾಣಕ್ಕೆ ನೀಡಿದ ಬೆಂಬಲಕ್ಕಾಗಿ ಪ್ರಧಾನಮಂತ್ರಿಯವರು ಮಹಾರಾಜರಿಗೆ ಧನ್ಯವಾದ ಅರ್ಪಿಸಿದರು. ಕಡಲ ಪರಂಪರೆ, ಭಾಷಾ ಪ್ರಚಾರ, ಯುವ ವಿನಿಮಯ ಮತ್ತು ಕ್ರೀಡಾ ಸಂಬಂಧಗಳ ಕ್ಷೇತ್ರಗಳಲ್ಲಿ ಹಲವಾರು ಹೊಸ ದ್ವಿಪಕ್ಷೀಯ ಉಪಕ್ರಮಗಳು ಜನರಿಂದ ಜನರಿಗೆ ಬಾಂಧವ್ಯವನ್ನು ಪರಸ್ಪರ ಮತ್ತಷ್ಟು ಬಲಪಡಿಸುತ್ತವೆ ಎಂದು ಅವರು ತಿಳಿಸಿದರು. ಎರಡೂ ದೇಶಗಳು ಪರಸ್ಪರ ಹಂಚಿಕೊಂಡಿರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆಯೂ ಅವರು ಚರ್ಚಿಸಿದರು ಮತ್ತು ಕಡಲ ವಸ್ತುಸಂಗ್ರಹಾಲಯಗಳ ನಡುವಿನ ಸಹಯೋಗದ ಮಹತ್ವ ಮತ್ತು ಕಲಾಕೃತಿಗಳು ಮತ್ತು ಪರಿಣತಿಯ ವಿನಿಮಯವನ್ನು ಎತ್ತಿ ತೋರಿಸಿದರು.

ಓಮನ್ ವಿಷನ್ 2040 ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರ ಅಥವಾ ವಿಕಸಿತ ಭಾರತ ಆಗುವ ಭಾರತದ ಉದ್ದೇಶಿತ ಗುರಿಯ ನಡುವಿನ ಹೊಂದಾಣಿಕೆಯನ್ನು ಉಭಯ ನಾಯಕರು ಸ್ವಾಗತಿಸಿದರು ಮತ್ತು ತಮ್ಮ ಜನರ ಆಕಾಂಕ್ಷೆಗಳನ್ನು ಪೂರೈಸಲು ಪರಸ್ಪರ ಬೆಂಬಲವನ್ನು ತಿಳಿಸಿದರು.

ನಾಯಕರು ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆಯೂ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಭೇಟಿಯ ಸಂದರ್ಭದಲ್ಲಿ, ಸಿಇಪಿಎ ಜೊತೆಗೆ ಎರಡೂ ಕಡೆಯವರು ಕಡಲ ಪರಂಪರೆ, ಶಿಕ್ಷಣ, ಕೃಷಿ ಮತ್ತು ರಾಗಿ ಕೃಷಿ ಕ್ಷೇತ್ರಗಳಲ್ಲಿ ಒಪ್ಪಂದಗಳು/ದಾಖಲೆ ವ್ಯವಸ್ಥೆಗೆ ಸಹಿ ಹಾಕಿದರು.

 

*****