Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 29.11.2026 ರಂದು ಮಾಡಿದ ಮನ್ ಕಿ ಬಾತ್  – 140ನೇ ಸಂಚಿಕೆಯ ಕನ್ನಡ ಅವತರಣಿಕೆ


ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ!

‘ಮನದ ಮಾತು’ಗೆ ಮತ್ತೊಮ್ಮೆ ಸ್ವಾಗತ. ‘ಮನದ ಮಾತು’ ಸಮಾಜದ ಪ್ರತಿಯೊಂದು ವರ್ಗದ ಮತ್ತು ದೇಶದ ಮೂಲೆಮೂಲೆಯ ಸಾಧನೆಗಳನ್ನು ಬೆಳಕಿಗೆ ತರುವ ವೇದಿಕೆಯಾಗಿದೆ. ಇಲ್ಲಿ ನಾವು ಸಮಾಜ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸುತ್ತೇವೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿಯನ್ನೂ ಮೂಡಿಸುವ ಪ್ರಯತ್ನವನ್ನು ಮಾಡುತ್ತೇವೆ. ಇಂದು, ‘ಮನದ ಮಾತಿನಲ್ಲಿ’, ನಾನು ಅಂತಹ ಒಂದು ವಿಷಯದ ಬಗ್ಗೆ ಮಾತನಾಡುವ ಮೂಲಕ ಪ್ರಾರಂಭಿಸಲು ಬಯಸುತ್ತೇನೆ. ಅದೇ ಮಾದಕವಸ್ತುಗಳ ಸಮಸ್ಯೆ — ಅಥವಾ ನಿರ್ದಿಷ್ಟವಾಗಿ ಹೇಳುವುದಾದರೆ, ಮಾದಕವಸ್ತು ವ್ಯಸನ. ಸ್ನೇಹಿತರೇ, ಇಂದು ಭಾರತದ ಯುವಜನತೆಯ ಪ್ರತಿಭೆಯ ಬಗ್ಗೆ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ. ನಮ್ಮ ಯುವಕರು ದೊಡ್ಡ ಕನಸುಗಳನ್ನು ಕಾಣುತ್ತಿದ್ದಾರೆ ಮತ್ತು ಆ ಕನಸುಗಳನ್ನು ನನಸಾಗಿಸಲು ತನುಮನದಿಂದ ಸಂಪೂರ್ಣ ಶ್ರಮಿಸುತ್ತಿದ್ದಾರೆ. ಆದರೆ, ಮಾದಕವಸ್ತು ವ್ಯಸನವು ಈ ಆಕಾಂಕ್ಷೆಗಳಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಾದಕವಸ್ತು ದುರುಪಯೋಗದ ವಿರುದ್ಧ ಸಮಾಜದ ಸಕ್ರಿಯ ಪಾಲ್ಗೊಳ್ಳುವಿಕೆ ದೇಶಾದ್ಯಂತ ಹೆಚ್ಚುತ್ತಿರುವುದು ಸಂತೋಷದಾಯಕ ಸಂಗತಿಯಾಗಿದೆ. ‘ನಶಾ ಮುಕ್ತ ಯುವ ಅಭಿಯಾನ’ ಕೂಡ ಭರದಿಂದ ಸಾಗುತ್ತಿದೆ. ಯುವಕರು ತಮ್ಮ ದೃಢ ಸಂಕಲ್ಪಶಕ್ತಿಯ ಮೂಲಕ ಮಾದಕವಸ್ತು ವ್ಯಸನವನ್ನು ಜಯಿಸಿ, ಅತ್ಯಂತ ಕಠಿಣ ಸನ್ನಿವೇಶಗಳ ವಿರುದ್ಧ ಹೋರಾಡಿ ವಿಜಯಶಾಲಿಗಳಾಗಿ ಹೊರಹೊಮ್ಮಿರುವ ಅನೇಕ ಸ್ಫೂರ್ತಿದಾಯಕ ಉದಾಹರಣೆಗಳನ್ನು ನಾವು ಕಾಣುತ್ತಿದ್ದೇವೆ. ಅವರು ಸ್ವಯಂ ಪ್ರೇರಿತರಾಗಿ ಸಂಘರ್ಷಗಳ ವಿರುದ್ಧ ಹೋರಾಡಿ, ತಮ್ಮ ಜೀವನವನ್ನು ಹೊಸ ದಿಕ್ಕಿನತ್ತ ಕೊಂಡೊಯ್ದಿದ್ದಾರೆ. ಇಂದು, ‘ಮನದ ಮಾತಿನಲ್ಲಿ, ನಾನು ಅಂತಹ ಒಬ್ಬ ಯುವ ಸ್ನೇಹಿತನಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದೇನೆ. ಮಾದಕವಸ್ತುಗಳ ವಿರುದ್ಧದ ತಮ್ಮ ವೈಯಕ್ತಿಕ ಹೋರಾಟವನ್ನು ಅವರು ಹೇಗೆ ಗೆದ್ದರು ಮತ್ತು ಅವರು ಎದುರಿಸಿದ ಕಷ್ಟಗಳೇನು ಎಂಬುದನ್ನು ಅವರಿಂದಲೇ ಕೇಳೋಣ. ಬನ್ನಿ, ಅವರ ಮಾತುಗಳನ್ನು ಆಲಿಸೋಣ.

ಯುವಕ: ನಮಸ್ಕಾರ ಸರ್! ಹೇಗಿದ್ದೀರಿ?

ಪ್ರಧಾನ ಮಂತ್ರಿ: ನಮಸ್ತೆ! ಇಂದು ನನಗೆ ಒಬ್ಬ ಹೊಸ ಸ್ನೇಹಿತ ಸಿಕ್ಕಂತಾಗಿದೆ. ನಾವು ಹಿಂದೆಂದೂ ಭೇಟಿಯಾಗಿಲ್ಲ, ಆದರೆ ನಿಮ್ಮ ಬಗ್ಗೆ ನಾನು ಕೇಳಿದ್ದು…

ಯುವಕ: ಹೌದು ಸರ್.

ಪ್ರಧಾನಮಂತ್ರಿ: ನಿಮ್ಮೊಂದಿಗೆ ನಾನು ಮಾತನಾಡಲೇಬೇಕೆಂದು ಅನ್ನಿಸಿತು.

ಯುವಕ: ಹೌದು, ಖಂಡಿತವಾಗಿಯೂ ಸರ್!

ಪ್ರಧಾನಮಂತ್ರಿ: ಗೆಳೆಯನೇ, ಹೇಳಿ — ನೀವು ಹೇಗೆ ಮಾದಕವಸ್ತು ವ್ಯಸನದ ಸುಳಿಗೆ ಸಿಲುಕಿಕೊಂಡಿರಿ?

ಯುವಕ: ಸರ್, ನಾನು ದೆಹಲಿಯ ಸದರ್ ಬಾಜಾರ್‌ನಲ್ಲಿ ವಾಸಿಸುತ್ತಿದ್ದೆ. ಅಲ್ಲಿ ನನ್ನ ಅಜ್ಜಿಯ ಮನೆಯಿತ್ತು. ಅಲ್ಲಿನ ವಾತಾವರಣ ಹೇಗಿತ್ತೆಂದರೆ, ಬಹಳ ಚಿಕ್ಕ ವಯಸ್ಸಿನ ಮಕ್ಕಳು ಕೂಡ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿದ್ದರು. ಅವರ ಕಣ್ಣುಗಳು ಮಂದವಾಗಿ, ಕಳೆಗುಂದಿದಂತೆ ಕಾಣುತ್ತಿದ್ದವು; ಅವರು ಏನೋ ಮಾಡುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿತ್ತು. ಸರ್ ನಾನು ಶಾಲೆಯಲ್ಲಿ, ಹಿರಿಯ ತರಗತಿಗಳ ವಿದ್ಯಾರ್ಥಿಗಳನ್ನು ಕೂಡಾ ನೋಡುತ್ತಿದ್ದೆ. ಅವರು ಕೂಡಾ ಒಂದು ವಿಭಿನ್ನ ಜೀವನಶೈಲಿಯನ್ನು ಅನುಸರಿಸುತ್ತಿದ್ದರು. ಇವೆಲ್ಲದರ ಕಡೆಗೆ ನನ್ನ ಗಮನ ಹೆಚ್ಚು ಸೆಳೆಯಲ್ಪಟ್ಟಿತು. 10ನೇ ತರಗತಿಯಲ್ಲಿ ನಾನು ಸಣ್ಣ ಪುಟ್ಟ ಮಾದಕ ವಸ್ತುಗಳನ್ನು ಬಳಸಲು ಪ್ರಾರಂಭಿಸಿದೆ, ಆದರೆ ಕಾಲ ಕ್ರಮೇಣ ಅದರ ಬಳಕೆ ಹೆಚ್ಚಾಗುತ್ತಾ ಹೋಯಿತು. ಕೇವಲ ಖುಷಿಗಾಗಿ ಅಥವಾ ಕುತೂಹಲಕ್ಕಾಗಿ ಪ್ರಾರಂಭವಾದದ್ದು ಯಾವಾಗ ಗಂಭೀರವಾದ ಚಟವಾಗಿ ಬದಲಾಯಿತು ಎಂಬುದು ನನ್ನ ಅರಿವಿಗೇ ಬರಲಿಲ್ಲ. ವ್ಯಸನ ಎಷ್ಟು ಗಂಭೀರವಾಯಿತೆಂದರೆ ಅದು ಅನಿವಾರ್ಯವಾಯಿತು,  ಅದಿಲ್ಲದೆ ನನಗೆ ಏನನ್ನೂ ಮಾಡಲು ಸಾಧ್ಯವಾಗದ ಸ್ಥಿತಿ ತಲುಪಿತು. ಬಹಳ ಖುಷಿ ಎನಿಸುತ್ತಿತ್ತು. ಆರಂಭದಲ್ಲಿ ಮೋಜಿಗಾಗಿ ಇದನ್ನು ಬಳಸುತ್ತಿದ್ದೆ—ಅದರಿಂದ ನನಗೆ ಒಂದು ರೀತಿಯ ಹುರುಪು ಅಥವಾ ವಿಶಿಷ್ಟ ಅನುಭವ ಸಿಗುತ್ತಿತ್ತು, ಅದು ನನಗೆ ಇಷ್ಟವಾಗುತ್ತಿತ್ತು. ಎಲ್ಲವೂ ಒಳ್ಳೆ ರೀತಿಯಲ್ಲಿಯೇ ನಡೆಯುತ್ತಿದೆ ಎಂಬಂತೆ, ನಿಶ್ಚಿಂತೆಯ ಭಾವನೆ ಉಂಟಾಗುತ್ತಿತ್ತು. ಆದರೆ, ಇದಕ್ಕಾಗಿ ಮುಂದೆ ನಾನು ಎಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬ ಕಲ್ಪನೆಯೂ ನನಗಿರಲಿಲ್ಲ.

ಪ್ರಧಾನಮಂತ್ರಿ: ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಿ ಬಂದಿರಬಹುದು, ಅಲ್ಲದೆ ಇದು ಇತರ ಕೆಟ್ಟ ಚಟಗಳಿಗೂ ದಾರಿ ಮಾಡಿಕೊಟ್ಟಿರಬಹುದಲ್ಲವೇ?

ಯುವಕ: ಹೌದು ಸರ್. ನಾನು ನನ್ನ ಮನೆಯವರ ಬಳಿ ಪುಸ್ತಕ ಖರೀದಿಸಬೇಕು, ಶಾಲಾ ಶುಲ್ಕ ತೆರಬೇಕು ಅಥವಾ ಪ್ರವಾಸಕ್ಕೆ ಹಣ ಬೇಕೆಂದು ಕೇಳಿ ಪಡೆಯುತ್ತಿದ್ದೆ, ಆದರೆ ಆ ಹಣವನ್ನೆಲ್ಲಾ ಮಾದಕ ವಸ್ತುಗಳಿಗಾಗಿಯೇ ಖರ್ಚು ಮಾಡುತ್ತಿದ್ದೆ.

ಪ್ರಧಾನಮಂತ್ರಿ: ಸರಿ, ನಿಮ್ಮ ಜೀವನದ ಯಾವ ಹಂತದಲ್ಲಿ, ನೀವು ಈ ಮಾದಕ ವಸ್ತುಗಳ ಚಟದಿಂದ ಹೊರಬಂದು, ಜೀವನವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಬೇಕು ಎಂದು ನಿರ್ಧಾರ ಕೈಗೊಂಡಿರಿ?

ಯುವಕ: ಸರ್, ನಾನು ಮೊದಲಿನಿಂದಲೂ ನನ್ನ ಅಜ್ಜ-ಅಜ್ಜಿಯರೊಂದಿಗೆ ವಾಸಿಸುತ್ತಿದ್ದೆ. ನನ್ನ ಬಾಲ್ಯದಲ್ಲೇ ತಂದೆ ತೀರಿಕೊಂಡರು, ಹಾಗಾಗಿ ಅಜ್ಜಿ ನನ್ನ ತಾಯಿಯನ್ನು ಮತ್ತು ನನ್ನನ್ನೂ  ತಮ್ಮೊಂದಿಗೆ ಕರೆದುಕೊಂಡು ಹೋದರು. ಇನ್ನು ಮುಂದೆ ನೀವು ನನ್ನೊಂದಿಗೆ ಇರುವಿರೆಂದು ಹೇಳಿದರು. ನಾನು ಬೆಳೆಯುತ್ತಿದ್ದಂತೆ, ಅಜ್ಜಿ ಮತ್ತು ತಾಯಿ ನನ್ನ ಬಗ್ಗೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ನಮ್ಮ ಮಗು ಚೆನ್ನಾಗಿ ಬಾಳಬೇಕು ಎಂದು ಕನಸು ಕಂಡಿದ್ದರು. ಆದರೆ ಹಾಗಾಗಲಿಲ್ಲ. ಮೊದಲು ನನ್ನ ತಾಯಿ ತೀರಿಕೊಂಡರು, ಕೆಲ  ಸಮಯದ ನಂತರ ಅಜ್ಜಿಯೂ ತೀರಿಕೊಂಡರು. ಇದರಿಂದ ನನಗೆ ತೀವ್ರ ಆಘಾತವಾಯಿತು. ಆ ಸಮಯದಲ್ಲಿ ನನ್ನನ್ನು ನೋಡಿಕೊಳ್ಳಲು ಬೇರೆ ಯಾರೂ ಇರಲಿಲ್ಲ. ನಾನು ಅನಾಥನಾಗಿ ಬೀದಿಪಾಲಾದೆ. ನಾನು ರಸ್ತೆಗಳಲ್ಲೇ ಕಾಲ ಕಳೆಯಬೇಕಾಯಿತು. ಚಳಿಗಾಲದಲ್ಲಿ, ನಾನು ಆಲೂಗಡ್ಡೆ ಸುರಿದು ಆ ಖಾಲಿ ಚೀಲಗಳ ಮೇಲೆ ಮಲಗುತ್ತಿದ್ದೆ. ನಾನು ‘ಭಂಡಾರಾಗಳಲ್ಲಿ’ ಊಟ ಮಾಡುತ್ತಿದ್ದೆ ಮತ್ತು ‘ಲಂಗರ್’ ಗಳಲ್ಲಿ ಊಟ ಮಾಡುತ್ತಿದ್ದೆ. ಮಾದಕವಸ್ತು ವ್ಯಸನದಿಂದಾಗಿ ನಾನು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿದೆ. ಸಾವು ನನ್ನ ಎದುರಿಗೇ ನಿಂತು, ನನ್ನ ಬರಸೆಳೆಯಲು ಕಾಯುತ್ತಿರುವಂತೆ ಭಾಸವಾಗುತ್ತಿತ್ತು. ಕೈ ಹಿಡಿದರೆ ಸಾಕು ತನ್ನ ತೆಕ್ಕೆಗೆ ಎಳೆದುಕೊಳ್ಳುವಂತೆ ಕಾಯುತ್ತಿತ್ತು. ಆದರೆ, ನಾನು ನನ್ನ ಬೆರಳನ್ನೂ ಸ್ಪರ್ಶಿಸಲು ಅದಕ್ಕೆ ಅವಕಾಶ ಕೊಡಲಿಲ್ಲ. ಸರ್, ಇವೆಲ್ಲವನ್ನೂ ಅನುಭವಿಸುತ್ತಿದ್ದಾಗ, ನಾನು ಆಂತರಿಕವಾಗಿ ಸಂಪೂರ್ಣವಾಗಿ ಕುಸಿದುಹೋಗಿದ್ದೆ. ನನ್ನ ಗತಿ ಏನಾಗಬಹುದು ಎಂದು ನನಗೆ ಚಿಂತೆಯಾಯಿತು. ನನ್ನ ಕುಟುಂಬದವರು ನನ್ನನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದರು, ತಮ್ಮಿಂದ ದೂರವಿರಿಸಿದ್ದರು. ನಾನು ಚಿಕ್ಕವನಿದ್ದಾಗಲೇ ನನ್ನ ತಂದೆ ತೀರಿಕೊಂಡರು, ತಾಯಿ ನನ್ನನ್ನು ಅಜ್ಜಿಯ ಬಳಿ ಕರೆದೊಯ್ದರು. ಬೇರೆ ಯಾರೊಂದಿಗೂ ನನಗೆ ಸಂಪರ್ಕವಿರಲಿಲ್ಲ. ತಂದೆಯ ಕಡೆಯ ಅಜ್ಜ-ಅಜ್ಜಿಯರೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ. ನನ್ನ ಮಾಮ ಮತ್ತು ಅವನ ಕುಟುಂಬ ಕೂಡಾ ನನ್ನ ಕೈಬಿಟ್ಟಿದ್ದರು ಏಕೆಂದರೆ, ನನ್ನ ಉಪಸ್ಥಿತಿ ತಮ್ಮ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರಬಹುದು ಎಂದು ಹೆದರಿ ನನ್ನಿಂದ ದೂರ ಸರಿದರು. ಇನ್ನುಳಿದ ಸಂಬಂಧಿಕರ ವಿಷಯಕ್ಕೆ ಬಂದರೆ, ಯಾರಿಗೂ ನನ್ನ ಬಗ್ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ. ನಾನು ಸಂಪೂರ್ಣವಾಗಿ ತಪ್ಪು ದಾರಿ ತುಳಿದಿದ್ದೆ. ನನ್ನ ಸ್ನೇಹಿತರೆಲ್ಲರೂ ವ್ಯಸನಿಗಳೇ ಆಗಿದ್ದರು.  ಅಂದರೆ  ನಾನಾ ರೀತಿಯ ತಪ್ಪು ಕೆಲಸಗಳಲ್ಲಿ ತೊಡಗಿಸಿಕೊಂಡ ವ್ಯಸನಿಗಳು, ಅಂದರೆ ಮಾದಕ ಪದಾರ್ಥ ಸೇವಿಸುವುದು, ಮಾದಕ ವಸ್ತುಗಳನ್ನು ಹೇಗೆ ಪಡೆಯುವುದು? ಯಾವ ಕೆಲಸ ಮಾಡಬೇಕು ಮತ್ತು ಹೇಗೆ ಅಕ್ರಮ ಕೆಲಸಗಳನ್ನು ಮಾಡಬೇಕು? ಹೀಗೆ ನಾನು ಮಾದಕವಸ್ತುಗಳ ಸುಳಿಯಲ್ಲಿ ಸಿಲುಕಿಕೊಂಡಿದ್ಡೆ.

ಪ್ರಧಾನಮಂತ್ರಿ: ಹೇಳಿ, ಈ ಕೆಟ್ಟ ಚಟಗಳಿಂದ—ಈ ನರಕ ಸದೃಶ ಬದುಕಿನಿಂದ—ನಾನು ಹೊರಬರಬೇಕೆಂದು ಯಾವ ಹಂತದಲ್ಲಿ ನಿರ್ಧರಿಸಿದಿರಿ? ಆ ನಿರ್ಣಾಯಕ ಕ್ಷಣ ಯಾವಾಗ ಬಂತು?

ಯುವಕ: ಸರ್, ನನ್ನೊಂದಿಗೆ ಒಬ್ಬ ಸ್ನೇಹಿತ ಇದ್ದನು, ಅವನು ನನಗೆ ಸ್ವಲ್ಪ ಮಟ್ಟಿಗೆ ಬೆಂಬಲಿಸುತ್ತಿದ್ದ. ನಾನು ಅವನ ಬಳಿ, “ಈ ಮಾದಕವಸ್ತುಗಳ ವ್ಯಸನವನ್ನು ನಾನು ಬಿಡಲು ಬಯಸುತ್ತಿದ್ದೇನೆ, ದಯವಿಟ್ಟು ನನಗೆ ಸಹಾಯ ಮಾಡು” ಎಂದು ಕೇಳಿದೆ. ನಾನು ಅವನ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದೆ, ಆದರೆ ಕೊನೆಯ ಕ್ಷಣದಲ್ಲಿ ಅವನು ನನ್ನ ಕೈ ಬಿಟ್ಟ. “ಕ್ಷಮಿಸು, ನಾನೂ ಕೂಡ ನಿನಗೆ ಸಹಾಯ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ. ನಾನು ಸಂಪೂರ್ಣವಾಗಿ ಕುಸಿದುಹೋದೆ. ಅವನು ನನ್ನ ಕೊನೆಯ ಏಕೈಕ ನಿರೀಕ್ಷೆಯಾಗಿದ್ದ. ವ್ಯಸನದಿಂದಾಗಿ ನಾನು ಈಗಾಗಲೇ ನನ್ನ ತಾಯಿಯನ್ನು ಕಳೆದುಕೊಂಡಿದ್ದೆ, ಅಜ್ಜಿಯನ್ನು ಕಳೆದುಕೊಂಡಿದ್ದೆ ಮತ್ತು ಕುಟುಂಬವನ್ನು ಕಳೆದುಕೊಂಡಿದ್ದೆ. ಈತ, ಕೊನೆಯ ವ್ಯಕ್ತಿಯಾಗಿದ್ದ ಇವನನ್ನೂ ಕಳೆದುಕೊಂಡೆ. ಈಗ ನಾನು ಸುಧಾರಿಸಲೇ ಬೇಕಾಗಿತ್ತು.  ತದನಂತರ ನನಗೆ ಪುನರ್ವಸತಿ ಕೇಂದ್ರದ ಬಗ್ಗೆ ತಿಳಿಯಿತು – SPYM (ಸೊಸೈಟಿ ಫಾರ್ ದಿ ಪ್ರಮೋಷನ್ ಆಫ್ ಯೂತ್ ಅಂಡ್ ಮಾಸಸ್) ಎಂಬ ಕೇಂದ್ರವಿದೆ. ಇದರ ಪ್ರಧಾನ ಕಚೇರಿ ದೆಹಲಿಯ ವಸಂತ್ ಕುಂಜ್‌ನಲ್ಲಿದೆ, ಹಾಗಾಗಿ ನಾನು ಅಲ್ಲಿಗೆ ಹೋಗಿದ್ದೆ. ಅಲ್ಲಿ ಚಿಕಿತ್ಸೆ ಪಡೆದೆ, ಹೊರಬಂದೆ, ನಾನು ಒಬ್ಬಂಟಿಯಾಗಿದ್ದೆ, ಸರ್, ನಾನು ಅಲ್ಲಿಂದ ಚಿಕಿತ್ಸೆ ಪಡೆದು ಹೊರಬಂದೆ. ನಾನು ಮತ್ತೆ ಅದೇ ವ್ಯಸನಕ್ಕೆ ತುತ್ತಾದೆ, ತಪ್ಪಾಗಿ ಹೋಯಿತು. ಅವರು ನನಗೆ ಮತ್ತೆ ಬರುವಂತೆ ಕರೆದರು. ಇದೆ ರೀತಿ ಮೂರು ಬಾರಿ ಮುಂದುವರೆಯಿತು. ನಂತರ ನಾನು ನನ್ನ ಸಂಪೂರ್ಣ ಸಮಸ್ಯೆಯನ್ನು ಅವರಲ್ಲಿ ಹೇಳಿಕೊಂಡೆ. ಮತ್ತೆ ಮತ್ತೆ ಏಕೆ ವ್ಯಸನಕ್ಕೆ ಒಳಗಾಗುತ್ತಿದ್ದೇನೆ ಎಂದು ಅವರು ನನ್ನನ್ನು ಕೇಳಿದರು.  ನಾನು ಒಂಟಿಯಾಗಿದ್ದೇನೆ ಎಂದು ಅವರಿಗೆ ತಿಳಿಸಿದೆ. ಇಲ್ಲಿಂದ ಹೊರಬಂದ ಮೇಲೆ, ನಾನು ಎಲ್ಲಿಗೆ ಹೋಗುಬೇಕು, ನನ್ನ ಮನೆ ಎಲ್ಲಿದೆ, ನಾನು ಎಲ್ಲಿ ಉಳಿಯಬೇಕು, ಏನೊಂದೂ ನನಗೆ ತಿಳಿಯುತ್ತಿರಲಿಲ್ಲ ಸರ್. ಈ ಸಂದಿಗ್ಧದಲ್ಲಿ, ಹಿಂದೆ ನನ್ನ ಸ್ನೇಹಿತರಾಗಿದ್ದವರ  ಬಳಿಗೆ ನಾನು ಹೋಗುತ್ತಿದ್ದೆ. ನನಗೆ ಇರಲು ಯಾವುದೇ ಸ್ಥಳವಿರಲಿಲ್ಲ. ನಾನು ಎಲ್ಲಿಗೆ ಹೋಗಬೇಕು?

ಪ್ರಧಾನಮಂತ್ರಿ: ನೀವು ಬಹಳ ಕಠಿಣ ಸಮಯವನ್ನು ಎದುರಿಸಿದ್ದೀರಿ, ಮತ್ತು ವ್ಯಸನ ಮುಕ್ತರಾಗಲು ನೀವು ಮಾಡಿದ ಪ್ರಯತ್ನಗಳಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದೀರಿ. ಅಂದರೆ ಈ ಅವಧಿಯು ತುಂಬಾ ಸವಾಲಿನದ್ದಾಗಿರಬೇಕು, ಮತ್ತು ವ್ಯಸನ ಮುಕ್ತರಾಗುವ ಬಯಕೆಯೂ ಸಹ ಕಷ್ಟದಾಯಕವಾಗಿರಬೇಕು?

ಯುವ ಸ್ನೇಹಿತ: ಸರ್, ವ್ಯಸನವನ್ನು ಬಿಡುವ ಗಾಢ ಭಾವನೆ ಮನದಲ್ಲಿ ಮೂಡುತ್ತಿತ್ತು. ಆದರೆ ಇನ್ನೊಂದೆಡೆ ಅದೇ ಮನಸ್ಸು ಜೀವನ ಉಳಿದಿರುವುದೇ ಸ್ವಲ್ಪ, ನಶೆ ಮಾಡು ಮತ್ತು ಜೀವನವೆಂಬ ಅಧ್ಯಾಯವನ್ನು ಮುಗಿಸು ಎಂದು ಹೇಳುತ್ತಿತ್ತು. ಸರ್, ನಾನು ಅದನ್ನು ಕೇಳಲಿಲ್ಲ ಮತ್ತು ನನ್ನ ಇನ್ನೊಂದು ಆಲೋಚನೆಗೆ ಕಿವಿಗೊಟ್ಟು ಇಲ್ಲ ನನ್ನ ಜೀವನವನ್ನು ಸುಧಾರಿಸಬೇಕು, ನನಗಾಗಿ ನಾನು ಏನನ್ನಾದರೂ ಮಾಡಬೇಕು ಎಂದುಕೊಂಡೆ.  “ಇವನಿಂದ ಏನೂ ಆಗುವುದಿಲ್ಲಎಂದು ಎಲ್ಲರೂ ಹೇಳುತ್ತಿದ್ದರು. ನನ್ನ ಕುಟುಂಬ ನನ್ನನ್ನು ತ್ಯಜಿಸಿತು, ಎಲ್ಲರೂ ನನ್ನನ್ನು ದೂರ ಮಾಡಿದರು.”

ಪ್ರಧಾನಮಂತ್ರಿ: ನಿಮ್ಮ ಸ್ವಂತ ಅನುಭವದ ಮೇಲೆ, ಇನ್ನೂ ಮಾದಕ ವ್ಯಸನಕ್ಕೆ ಬಲಿಯಾಗಿರುವ ದೇಶದ ಯುವಕರಿಗೆ ನೀವು ಏನಾದರೂ ಹೇಳಬೇಕಾದರೆ, ಅಂತಹ ಮಕ್ಕಳಿಗೆ ಏನು ಹೇಳುತ್ತೀರಿ?

ಯುವ ಸ್ನೇಹಿತ: ಸರ್, ಅವರಿಗೆ ನಾನು ಇಷ್ಟೇ ಹೇಳಲು ಬಯಸುತ್ತೇನೆ, ಆರಂಭದಲ್ಲಿ, ಇದೆಲ್ಲವೂ ತುಂಬಾ ಆನಂದದಾಯಕವಾಗಿರುತ್ತದೆ.  ಆದರೆ ನಂತರ ಆಗುವ ನಷ್ಟವನ್ನು ನಮ್ಮ ಜೊತೆ ನಮ್ಮ ಕುಟುಂಬಗಳು ಸಹ ಅನುಭವಿಸುತ್ತವೆ. ಇದರಿಂದ ಯಾವುದೇ ಪ್ರಯೋಜನವಿಲ್ಲ – ಕೇವಲ ನಷ್ಟ, ನಷ್ಟ, ನಷ್ಟದ ಹೊರತಾಗಿ ಬೇರೇನೂ ಇಲ್ಲ. ಈ ವ್ಯಸನಕ್ಕೆ ತುತ್ತಾದವರಿಗೆ ನಾನು ಒಂದು ಸಣ್ಣ ಸಂದೇಶವನ್ನು ನೀಡಬಯಸುತ್ತೇನೆ.  ಸರ್, ನಮ್ಮ ಜೀವನ ತುಂಬಾ ಸುಂದರವಾಗಿದೆ, ತುಂಬಾ ಚೆನ್ನಾಗಿದೆ. ನಾವು ಅದನ್ನು ಆ ರೀತಿಯಲ್ಲಿ ಬದುಕಿದರೆ, ಎಲ್ಲವನ್ನೂ ಆನಂದಿಸಲು ಸಾಧ್ಯವಾಗುತ್ತದೆ.

ಪ್ರಧಾನಮಂತ್ರಿ: ಸರಿ, ನಿಮ್ಮೊಂದಿಗೆ ಮಾತನಾಡಿ ತುಂಬಾ ಸಂತೋಷವಾಯಿತು. ನೀವು ಜಯಿಸಿದ ಯುದ್ಧದಲ್ಲಿ ನೀವು ವಿಜಯಶಾಲಿಯಾಗಿ ಉಳಿಯಲಿ ಎಂದು ನಾನು ನಿಮಗೆ ಶುಭ ಹಾರೈಸುತ್ತೇನೆ. ನೀವು ಮತ್ತೆ ಎಂದಿಗೂ ಈ ವ್ಯಸನಕ್ಕೆ ತುತ್ತಾಗುವುದಿಲ್ಲ ಎಂಬ ಈ ಸಂಕಲ್ಪದೊಂದಿಗೆ ಬಾಳಿರಿ ಮತ್ತು ನೀವು ಭೇಟಿಯಾಗುವ ಪ್ರತಿಯೊಬ್ಬರಿಗೂ ಈ ಮಾರ್ಗ ತಪ್ಪು ಎಂದು ತಿಳಿ ಹೇಳಿ.

ಯುವ ಸ್ನೇಹಿತ: ಸರಿ ಸರ್. ಧನ್ಯವಾದಗಳು ಸರ್.

ಪ್ರಧಾನಮಂತ್ರಿ: ಅನಂತಾನಂತ ಶುಭಾಶಯಗಳು, ಸ್ನೇಹಿತ. ಅನಂತ ಶುಭಾಶಯಗಳು.

ಯುವ ಸ್ನೇಹಿತ: ಧನ್ಯವಾದಗಳು ಸರ್.

ಪ್ರಧಾನಮಂತ್ರಿ: ಗೆಳೆಯನೇ, ಮಾದಕಪದಾರ್ಥ ಸೇವನೆ ಎಂಬ ಈ ಭಯಾನಕ ವ್ಯಸನದಿಂದ ಹೊರಬಂದಿದ್ದಕ್ಕಾಗಿ ಮತ್ತೊಮ್ಮೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮನಸ್ಸಿನಲ್ಲಿ ದೃಢಸಂಕಲ್ಪವಿದ್ದರೆ ಯಾವುದೇ ಗುರಿಯೂ ಅಸಾಧ್ಯ ಎನಿಸುವುದಿಲ್ಲ ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ. ನಿಮ್ಮ ಮಾತುಗಳಿಂದ ಮಾದಕ ಪದಾರ್ಥ ಸೇವನೆ ಎಂಬ ವ್ಯಸನದಿಂದ ಹೊರಬರಲು ಬಯಸುತ್ತಿರುವ ಇಂತಹ ಅನೇಕ ಯುವಕರಿಗೆ ಶಕ್ತಿ ಮತ್ತು ಸ್ಫೂರ್ತಿ ದೊರೆಯಲಿದೆ. ಕುಟುಂಬದ ದೃಷ್ಟಿಯಿಂದಲೂ, ದೇಶದ ದೃಷ್ಟಿಯಿಂದಲೂ ಯುವ ಪೀಳಿಗೆಯು ಮಾದಕಪದಾರ್ಥ ಸೇವನೆ ಎಂಬ ವ್ಯಸನದಿಂದ ದೂರವಿರುವುದು ಬಹಳ ಮುಖ್ಯ. ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯಗಳು.

ನನ್ನ ಪ್ರೀತಿಯ ದೇಶವಾಸಿಗಳೇ,

ಜೀವನದಲ್ಲಿ ನಾವು ಹೊಸದನ್ನು ಕಲಿತಾಗಲೆಲ್ಲ ಒಂದು ವಿಶಿಷ್ಟವಾದ ಸಂತೋಷದ ಅನುಭವವಾಗುತ್ತದೆ. ಅಂತೆಯೇ ಕಲಿಕೆಗೆ ವಯಸ್ಸಿನ ಯಾವುದೇ ಮಿತಿ ಇಲ್ಲ. ಇಂದು ನಾನು ನಿಮ್ಮೊಂದಿಗೆ ದೇಶದ ಲಕ್ಷಾಂತರ ಸರ್ಕಾರಿ ನೌಕರರ ಬಗ್ಗೆ ಮಾತನಾಡಲು ಬಯಸುತ್ತೇನೆ. ಅವರಲ್ಲಿ ಹೊಸದನ್ನು ಕಲಿಯುವ ಉತ್ಸಾಹ ಕಂಡುಬರುತ್ತಿದೆ. ಅವರಲ್ಲಿ ಅನೇಕರು ಕಳೆದ 20-25 ವರ್ಷಗಳಿಂದ ಸರ್ಕಾರಿ ಸೇವೆಯಲ್ಲಿದ್ದಾರೆ. ಇಷ್ಟು ದೀರ್ಘ ಅನುಭವವಿದ್ದರೂ, ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ಹೊಸದನ್ನು ಕಲಿಯಲು ಸಮಯವನ್ನು ಮೀಸಲಿಡುತ್ತಿದ್ದಾರೆ. ಇದಕ್ಕಾಗಿ ಅವರು ಡಿಜಿಟಲ್ ವೇದಿಕೆಯೊಂದರ ಸಹಾಯ ಪಡೆಯುತ್ತಿದ್ದಾರೆ. ಅದರ ಹೆಸರೇ ‘iGOT ಕರ್ಮಯೋಗಿ’. ಈ ವೇದಿಕೆಯಲ್ಲಿ ಸರ್ಕಾರಿ ನೌಕರರಿಗಾಗಿ 17 ಭಾರತೀಯ ಭಾಷೆಗಳಲ್ಲಿ 7 ಸಾವಿರಕ್ಕೂ ಅಧಿಕ ಕೋರ್ಸ್‌ ಗಳು ಲಭ್ಯವಿದೆ. ಲಕ್ಷಾಂತರ ಸರ್ಕಾರಿ ನೌಕರರು ಹಲವಾರು ಕೋರ್ಸ್‌ ಗಳನ್ನು ಪೂರ್ಣಗೊಳಿಸಿದ್ದಾರೆ. ಕೆಲವರು ಕೃತಕ ಬುದ್ಧಿಮತ್ತೆ ಬಗ್ಗೆ ಅಧ್ಯಯನ ಮಾಡುತ್ತಿದ್ದರೆ, ಇನ್ನು ಕೆಲವರು ಭಾರತೀಯ ಸಂಕೇತ ಭಾಷೆಯನ್ನು ಕಲಿಯುತ್ತಿದ್ದಾರೆ.

ಕೃತಕ ಬುದ್ಧಿಮತ್ತೆ ಮತ್ತು ಹೊಸ ತಂತ್ರಜ್ಞಾನಗಳ ಅಧ್ಯಯನದ ಬಗ್ಗೆ ನಮ್ಮ ಕರ್ಮಯೋಗಿಗಳಲ್ಲಿ ವಿಶೇಷ ಉತ್ಸಾಹವನ್ನು ನಾನು ಗಮನಿಸುತ್ತಿದ್ದೇನೆ. ಇದಕ್ಕೆ ಸಂಬಂಧಿಸಿದ 200ಕ್ಕೂ ಹೆಚ್ಚು ಕೋರ್ಸ್‌ ಗಳಲ್ಲಿ ಮೂರೂಕಾಲು ಕೋಟಿಗೂ ಅಧಿಕ ಕೋರ್ಸ್ ಪೂರ್ಣಗೊಳಿಸಲಾಗಿದೆ. ಸ್ನೇಹಿತರೇ, ಕೇಂದ್ರ ಸರ್ಕಾರದ ಜೊತೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನೌಕರರೂ ಈ ವೇದಿಕೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ನಮ್ಮ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಮತ್ತು ಸ್ವಚ್ಛತಾ ಸಿಬ್ಬಂದಿ – ಇವರೆಲ್ಲರೂ ಸರ್ಕಾರಿ ವ್ಯವಸ್ಥೆಯ ಪ್ರಮುಖ ಸಹಭಾಗಿಗಳಾಗಿದ್ದಾರೆ. ದೇಶದ ಜನರು ಪ್ರತಿದಿನವೂ ಇವರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಈ ಸಹೋದ್ಯೋಗಿಗಳು ಹೊಸದನ್ನು ಕಲಿತಾಗ, ‘iGOT ಕರ್ಮಯೋಗಿ’ಯ ಕೋರ್ಸ್‌ ಗಳನ್ನು ಪೂರ್ಣಗೊಳಿಸಿ ಕರ್ಮಯೋಗಿಗಳಾದಾಗ, ಅದರ ಪ್ರಯೋಜನ ಅವರೊಂದಿಗೆ ಕೆಲಸ ಮಾಡುವವರಿಗೂ ದೊರೆಯುತ್ತದೆ. ಸ್ನೇಹಿತರೇ, ‘ನಾಗರಿಕ ದೇವೋ ಭವ’ ಎಂಬುದು ಮಿಷನ್ ಕರ್ಮಯೋಗಿಯ ಮೂಲ ಮಂತ್ರವಾಗಿದೆ. ದೇಶದ ಲಕ್ಷಾಂತರ ಸರ್ಕಾರಿ ನೌಕರರಲ್ಲಿ ಹೊಸದನ್ನು ಕಲಿಯುವ ಉತ್ಸಾಹವನ್ನು ಬೆಳೆಸುತ್ತಿರುವುದು, ವಿಕಸಿತ ಭಾರತದ ಪಯಣದಲ್ಲಿ ಬಹುದೊಡ್ಡ ಶಕ್ತಿಯಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಿಮ್ಮ ಮೊಬೈಲ್ ಫೋನ್ ಎಲ್ಲಾದರೂ ಕಳೆದುಹೋದರೆ ಎಷ್ಟು ತೊಂದರೆಯಾಗುತ್ತದೆ ಎಂದು ಸ್ವಲ್ಪ ಯೋಚಿಸಿ ನೋಡಿ! ನಿಮ್ಮ ಮೊಬೈಲ್‌ ಫೋನ್ ನಲ್ಲಿ ಸಂಪರ್ಕ ಸಂಖ್ಯೆಗಳಿವೆ, ಚಿತ್ರಗಳಿವೆ, ಅಗತ್ಯ ದಾಖಲೆಗಳಿವೆ ಮತ್ತು ಬಹಳಷ್ಟು ಅಗತ್ಯ ಮಾಹಿತಿಗಳಿವೆ. ಒಮ್ಮೆ ಫೋನ್ ಕಳೆದುಹೋಯಿತೆಂದರೆ, ಅದನ್ನು ಮರಳಿ ಪಡೆಯುವ ನಿರೀಕ್ಷೆಯೂ ಕ್ರಮೇಳವಾಗಿ  ಕಡಿಮೆಯಾಗತೊಡಗುತ್ತದೆ – ಆದರೆ ಈಗ ಹಾಗಿಲ್ಲ. ಕಳೆದುಹೋದ ನಿಮ್ಮ ಮೊಬೈಲ್ ಫೋನ್ ನಿಮಗೆ ಮತ್ತೆ ಸಿಗಬಹುದಾಗಿದ್ದು, ಇದರಲ್ಲಿ ಭಾರತ ಸರ್ಕಾರದ ಡಿಜಿಟಲ್ ವೇದಿಕೆ ನಿಮಗೆ ಬಹು ದೊಡ್ಡ ಸಹಾಯ ಮಾಡಬಲ್ಲದು. ಆ ವೇದಿಕೆಯ ಹೆಸರೇ ‘ಸಂಚಾರ ಸಾಥಿ’. ಇದುವರೆಗೂ ‘ಸಂಚಾರ ಸಾಥಿ’ ಪೋರ್ಟಲ್‌ ಗೆ 30 ಕೋಟಿಗೂ ಹೆಚ್ಚು ಭೇಟಿಗಳಾಗಿವೆ. ಇದರ ಆಪ್ ಅನ್ನು ಸುಮಾರು 3 ಕೋಟಿ ಬಾರಿ ಡೌನ್ಲೋಡ್ ಮಾಡಲಾಗಿದೆ.

ಸ್ನೇಹಿತರೇ,

ಹಾಗಾದರೆ ‘ಸಂಚಾರ ಸಾಥಿ’ ಯಾವರೀತಿ ಕೆಲಸ ಮಾಡುತ್ತದೆ ಎಂಬ ಪ್ರಶ್ನೆ ಎದುರಾಗಬಹುದು. ವಾಸ್ತವವಾಗಿ, ಪ್ರತಿಯೊಂದು ಮೊಬೈಲ್ ಫೋನಿಗೂ ತನ್ನದೇ ಆದ ವಿಶಿಷ್ಟ ಗುರುತಿದ್ದು,  ಇದನ್ನು I.M.E.I. ಸಂಖ್ಯೆ ಎಂದು ಕರೆಯಲಾಗುತ್ತದೆ. ‘ಸಂಚಾರ ಸಾಥಿ’ ಇದೇ ಗುರುತಿನ ನೆರವಿನಿಂದ ನಿಮ್ಮ ಕಳೆದುಹೋದ ಮೊಬೈಲ್ ಫೋನನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ನೀವು ಪೊಲೀಸರಿಗೆ ದೂರು ನೀಡುವುದರ ಜೊತೆಗೇ, ‘ಸಂಚಾರ ಸಾಥಿ’ಯಲ್ಲಿ ನಿಮ್ಮ ಮೊಬೈಲ್‌ ಫೋನಿನ I.M.E.I. ಸಂಖ್ಯೆ ಮತ್ತು ಕೆಲವು ಅಗತ್ಯ ಮಾಹಿತಿಗಳನ್ನು ನೀಡಿ ಅದನ್ನು ಇತರರು ಉಪಯೋಗಿಸದಂತೆ ತಡೆ ಉಂಟುಮಾಡಬಹುದು (ಬ್ಲಾಕ್ ಮಾಡಿಸಬಹುದು). ಇದಾದ ನಂತರ ಯಾರೇ ಆಗಲಿ, ಅದರಲ್ಲಿ ಹೊಸ ಸಿಮ್ ಹಾಕಿ ಉಪಯೋಗಿಸಲು ಆಗುವುದಿಲ್ಲ. ಆದರೆ ಇದರ ವಿಶೇಷತೆ ಕೇವಲ ಇಷ್ಟೇ ಅಲ್ಲ, ಬೇರೆ ಯಾರಾದರೂ ಆ ಮೊಬೈಲ್ ಫೋನ್ ನಲ್ಲಿ ಹೊಸದೊಂದು ಸಿಮ್ ಹಾಕಿ ನೆಟ್ವರ್ಕ್ ನೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನ ಪಡುತ್ತಿದ್ದಂತೆಯೇ, ಆ ವ್ಯಕ್ತಿಯನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಮತ್ತಷ್ಟು ಸುಲಭವಾಗುತ್ತದೆ. ಸ್ನೇಹಿತರೇ, ಈ ವ್ಯವಸ್ಥೆಯ ಸಹಾಯದಿಂದ ದೇಶಾದ್ಯಂತ 14 ಲಕ್ಷಕ್ಕಿಂತ ಅಧಿಕ ಕಳೆದುಹೋದ ಮೊಬೈಲ್ ಫೋನ್ ಮರಳಿ ವಶಪಡಿಸಿಕೊಳ್ಳಲಾಗಿದೆ, ಅದನ್ನು ಅದರ ಮಾಲೀಕರಿಗೆ ಹಿಂದಿರುಗಿಸಲಾಗಿದೆ. ಅಂದರೆ, ಒಮ್ಮೆ ಫೋನ್ ಕಳೆದುಹೋದರೆ ಮತ್ತೆ ಸಿಗುವುದಿಲ್ಲ ಎಂಬ ನಿರೀಕ್ಷೆಯೇ ಇಲ್ಲದ ಪರಿಸ್ಥಿತಿಯಲ್ಲಿ, ಇಂದು ತಂತ್ರಜ್ಞಾನವು ಅದನ್ನು ಮರಳಿ ಪಡೆಯುವ ಭರವಸೆಯನ್ನು ಮೂಡಿಸುತ್ತಿದೆ.

ಸ್ನೇಹಿತರೇ,

‘ಸಂಚಾರ ಸಾಥಿ’ ನಮಗೆ ಪರಸ್ಪರ ಸಹಾಯ ಮಾಡುವ ಅವಕಾಶವನ್ನೂ ಒದಗಿಸುತ್ತದೆ. ನಿಮಗೆ ಯಾರೋ ಒಬ್ಬರು ಫೋನ್ ಮಾಡಿ,  ವಂಚನೆ ಮಾಡುವ ಉದ್ದೇಶದಿಂದ ಅವರು ನಿಮ್ಮ ಬಳಿ OTP ಕೇಳಿದರು.. ಆ ಕರೆ ವಂಚಕರದೆಂದು ನಿಮಗೆ ತಿಳಿಯಿತು ಮತ್ತು ನೀವು ಕರೆಯನ್ನು ಅಲ್ಲಿಗೇ ಕಡಿತಗೊಳಿಸಿದಿರಿ ಎಂದಿಟ್ಟುಕೊಳ್ಳಿ. ಆದರೆ ನೀವು ತಪ್ಪಿಸಿಕೊಂಡ ಆ ವಂಚಕನ ಮುಂದಿನ ಕರೆ, ಅವರ ಮಾತಿನ ಬಲೆಗೆ ಬೀಳಬಹುದಾದ ಯಾವುದೋ ಓರ್ವ ವೃದ್ಧ ನಾಗರಿಕರಿಗೆ ಹೋಗಬಹುದು. ಇಂತಹ ಸಂದರ್ಭದಲ್ಲಿ, ಆ ಅನುಮಾನಾಸ್ಪದ ಕರೆಯ ಮಾಹಿತಿಯನ್ನು ನೀವು ಖಂಡಿತವಾಗಿಯೂ ‘ಸಂಚಾರ ಸಾಥಿ’ಯಲ್ಲಿ ವರದಿ ಮಾಡಬಹುದು. ಪುಣೆಯಲ್ಲಿ ನಿವಾಸಿ ಶ್ರೀ ಹಿಮಾಂಶು ಸಿಂಗ್ ಅವರು ಈ ರೀತಿಯ 300ಕ್ಕೂ ಹೆಚ್ಚು ಸಂಖ್ಯೆಗಳನ್ನು ‘ಸಂಚಾರ ಸಾಥಿ’ಯಲ್ಲಿ ವರದಿ ಮಾಡಿದ್ದಾರೆ. ಅವರ ಪ್ರಯತ್ನವು ಕಳೆದ ಒಂದು ವರ್ಷದಲ್ಲಿ ಸುಮಾರು 18 ಸಾವಿರ ಮೊಬೈಲ್ ಸಂಪರ್ಕಗಳನ್ನು ರದ್ದುಗೊಳಿಸಲು ಸಹಾಯ ಮಾಡಿದೆ. ಇದೇ ರೀತಿಯ ನೆರವು ನೀಡಿದ ಮತ್ತೊಬ್ಬರೆಂದರೆ ಆಂಧ್ರಪ್ರದೇಶದ ನೆಲ್ಲೂರಿನ ನಿವಾಸಿ ಶ್ರೀ ವಿವೇಕ್ ಅಲ್ಹರಿ. ಒಬ್ಬ ಜಾಗರೂಕ ನಾಗರಿಕನಾಗಿ ಅವರು ‘ಸಂಚಾರ ಸಾಥಿ’ಯಲ್ಲಿ 900ಕ್ಕೂ ಹೆಚ್ಚು ವಂಚನೆಯ ಸಂಖ್ಯೆಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಯತ್ನದಿಂದ ಸುಮಾರು 17 ಸಾವಿರ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಲು ನೆರವಾಗಿದೆ. ನೀವೂ ಇವರಿಂದ ಕಲಿಯಿರಿ. ನಿಮ್ಮ ಈ ಸಣ್ಣ ಪ್ರಯತ್ನವು ದೇಶದ ಮತ್ತೊಂದು ಮೂಲೆಯಲ್ಲಿರುವ ಯಾವುದೋ ಒಂದು ಕುಟುಂಬದ ಜೀವಮಾನದ ಸಂಪಾದನೆಯನ್ನು ಉಳಿಸಲು ನೆರವಾಗಬಹುದು.

ಸ್ನೇಹಿತರೇ,

‘ಸಂಚಾರ ಸಾಥಿ’ ವೇದಿಕೆಯು ನಮ್ಮ ಬ್ಯಾಂಕ್ ಗಳು, ಪಾವತಿ ಆಪ್ ಗಳು, ದೂರಸಂಪರ್ಕ ಕಂಪನಿಗಳು ಮತ್ತು ಪೊಲೀಸರು ಸೇರಿದಂತೆ 1600ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದೆ.  ಇದರಿಂದ ಸೈಬರ್ ವಂಚನೆಯ ಹಲವಾರು ಪ್ರಯತ್ನಗಳನ್ನು ಸಕಾಲದಲ್ಲಿ ವಿಫಲಗೊಳಿಸಲು ನೆರವು ದೊರೆಯುತ್ತಿದೆ. ಈ ವ್ಯವಸ್ಥೆಯ ಸಹಾಯದಿಂದ ಈವರೆಗೆ 5 ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತದ ಸಂಭಾವ್ಯ ನಷ್ಟವನ್ನು ತಡೆಯಲಾಗಿದೆ. ಈ ಆಪ್ 23 ಭಾಷೆಗಳಲ್ಲಿ ಲಭ್ಯವಿದೆ ಹಾಗೂ  ಇದನ್ನು ಉಪಯೋಗಿಸುವುದು ಬಹಳ ಸುಲಭ. ನೀವೂ ‘ಸಂಚಾರ ಸಾಥಿ’ಯ ಬಗ್ಗೆ ಸಾಧ್ಯವಾದಷ್ಟು ಹೆಚ್ಚು ಜನರಿಗೆ ತಿಳಿಯಪಡಿಸಿ. ನಾವು ಕೈಗೊಳ್ಳುವ ಸಣ್ಣ ಸಣ್ಣ ಮುನ್ನೆಚ್ಚರಿಕೆಗಳು ಕೂಡಾ ಡಿಜಿಟಲ್ ಜಗತ್ತನ್ನು ನಮ್ಮೆಲ್ಲರಿಗೂ ಮತ್ತಷ್ಟು ಸುರಕ್ಷಿತವಾಗಿ ಮಾಡಬಲ್ಲವು.

ನನ್ನ ಪ್ರೀತಿಯ ದೇಶವಾಸಿಗಳೇ,

ನಾವು ಯಾವುದಾದರೂ ಹೊಸದೊಂದು ಸ್ಥಳಕ್ಕೆ ಹೋದಾಗ, ಅಲ್ಲಿನ ಸುಪ್ರಸಿದ್ಧ ಸ್ಥಳಗಳನ್ನು ನೋಡಬೇಕು, ಅಲ್ಲಿನ ಆಹಾರ-ಪಾನೀಯ ಸವಿಯಬೇಕು ಎಂಬ ಆಸೆ ನಮಗಿರುತ್ತದೆ. ನೀವು ಪ್ರವಾಸಕ್ಕೆಂದು ಎಲ್ಲಿಗೇ ಹೋಗಲಿ,  ಅಲ್ಲಿನ ವಸ್ತುಸಂಗ್ರಹಾಲಯಗಳ ಬಗ್ಗೆಯೂ ಖಂಡಿತವಾಗಿಯೂ ತಿಳಿದುಕೊಳ್ಳಿ ಎಂಬುದು ನಿಮ್ಮೆಲ್ಲರಲ್ಲಿ ನನ್ನ ಮನವಿ. ಇತ್ತೀಚೆಗೆ ಭಾರತದ ವಸ್ತುಸಂಗ್ರಹಾಲಯಗಳಿಗೆ ಸಂಬಂಧಿಸಿದ ಉತ್ತೇಜನಕಾರಿಯಾದ ಕೆಲವು ಸುದ್ದಿಗಳು ಬಂದಿವೆ. ಸ್ನೇಹಿತರೇ, ಪಾಟ್ನಾದಲ್ಲಿರುವ ಬಿಹಾರ ವಸ್ತು ಸಂಗ್ರಹಾಲಯಕ್ಕೆ ವಿಶ್ವದ 100 ಅತ್ಯುತ್ತಮ ವಸ್ತುಸಂಗ್ರಹಾಲಯಗಳ ಪಟ್ಟಿಯಲ್ಲಿ 9ನೇ ಸ್ಥಾನ ದೊರೆತಿದೆ. ಈ ಪಟ್ಟಿಯಲ್ಲಿ ಇಡೀ ಏಷ್ಯಾದಲ್ಲಿಯೇ ಬಿಹಾರ ವಸ್ತು ಸಂಗ್ರಹಾಲಯ ಮೊದಲ ಸ್ಥಾನದಲ್ಲಿದೆ. ಪ್ಯಾರಿಸ್‌ ನ ‘‘Louvre ಸಂಗ್ರಹಾಲಯ’ ಹೆಸರನ್ನು ನೀವು ಕೇಳಿಯೇ ಇರಬಹುದು. ನ್ಯೂಯಾರ್ಕ್‌ ನ ‘The Met’ ವಸ್ತು ಸಂಗ್ರಹಾಲಯ ಕೂಡಾ ಜಗತ್ತಿನಾದ್ಯಂತ ಬಹಳ ಪ್ರಸಿದ್ಧವಾಗಿದೆ. ಈ ಪಟ್ಟಿಯಲ್ಲಿ ಬಿಹಾರ ಮ್ಯೂಸಿಯಂ ಈ ಎರಡೂ ಮ್ಯೂಸಿಯಂಗಳಿಗಿಂತ ಮುಂದಿದೆ.  ಸ್ನೇಹಿತರೇ, ಗುಜರಾತ್‌ ನ ವಡನಗರದಲ್ಲಿಯೂ ಒಂದು ವಿಶಿಷ್ಟವಾದ ವಸ್ತುಸಂಗ್ರಹಾಲಯವಿದೆ. ಇದರ ಹೆಸರು ‘ಅನಂತ ಅನಾದಿ ವಡನಗರ Archaeological Experimental ಮ್ಯೂಸಿಯಂ’ (‘अनंत अनादि वडनगर Archaeological Experimental म्यूजियम’). ವಡನಗರದಲ್ಲಿ ಪುರಾತತ್ವ ಇಲಾಖೆಯ ಉತ್ಖನನದ ಸಂದರ್ಭದಲ್ಲಿ ಇತಿಹಾಸದ ವಿವಿಧ ಕಾಲಘಟ್ಟಗಳಿಗೆ ಸಂಬಂಧಿಸಿದ ಅನೇಕ ವಸ್ತುಗಳು ದೊರೆತಿವೆ. ಯಾವ ಸ್ಥಳದಲ್ಲಿ ಈ ಉತ್ಖನನ ನಡೆದಿದೆಯೋ, ಅದೇ ಸ್ಥಳದಲ್ಲಿ ಈ ವಸ್ತುಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಒಂದು ವಿಶೇಷವಾದ ಮಾರ್ಗವನ್ನು ನಿರ್ಮಿಸಲಾಗಿದ್ದು,  ಅದರ ಮೇಲೆ ನೀವು ನಡೆದುಕೊಂಡು ಹೋಗುತ್ತಿರುವಾಗ, ಭೂಮಿಯ ಹಲವು ಮೀಟರ್ ಆಳದವರೆಗೆ ನಡೆಸಲಾದ ಉತ್ಖನನವನ್ನು ನೀವು ನೋಡಬಹುದು. ವಡನಗರ ಸಂಗ್ರಹಾಲಯದಲ್ಲಿ ಐದು ಸಾವಿರಕ್ಕೂ ಅಧಿಕ  ಪ್ರಾಚೀನ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ.  ಇದೇ ತಿಂಗಳು ಬರ್ಲಿನ್‌ ನಲ್ಲಿ ವಡನಗರ ವಸ್ತು ಸಂಗ್ರಹಾಲಯಕ್ಕೆ ವಿನ್ಯಾಸ ಕ್ಷೇತ್ರದ ದೊಡ್ಡ ಗೌರವ ಎನಿಸಿರುವ ‘ರೆಡ್ ಡಾಟ್: ಬೆಸ್ಟ್ ಆಫ್ ದಿ ಬೆಸ್ಟ್ ಅವಾರ್ಡ್’ ದೊರೆತಿದೆ. ಈ ಗೌರವ ಪಡೆದ ಭಾರತದ ಮೊಟ್ಟ ಮೊದಲ ವಸ್ತು ಸಂಗ್ರಹಾಲಯ ಇದಾಗಿದೆ. ಸ್ನೇಹಿತರೇ, ವಡನಗರವು ಕಾಶಿಯಂತೆಯೇ ಸಾವಿರಾರು ವರ್ಷಗಳಿಂದ ಜೀವಂತವಾಗಿರುವ ನಗರವಾಗಿದೆ, ಕಾಕತಾಳೀಯ ಹೇಗಿದೆ ನೋಡಿ, ನಾನು ವಡನಗರದಲ್ಲಿ ಜನಿಸಿ, ಕಾಶಿಯ ಸಂಸದನಾಗಿದ್ದೇನೆ. ಕೆಲವೇ ದಿನಗಳ ಹಿಂದೆ ಕಂಚಿ ಕಾಮಕೋಟಿ ಪೀಠದ ಪೂಜ್ಯ ಶಂಕರಾಚಾರ್ಯರೂ ವಡನಗರಕ್ಕೆ ಆಗಮಿಸಿದ್ದರು. ಅವರು ವಡನಗರವನ್ನು ‘ಗುಜರಾತಿನ ಕಾಶಿ’ ಎಂದು ಗುರುತಿಸಿದ್ದಾರೆ.

ಸ್ನೇಹಿತರೇ,

ಕಲೆಯ ಕ್ಷೇತ್ರದಲ್ಲಿ ಕೂಡಾ ಭಾರತ ಒಂದು ಬಹು ದೊಡ್ಡ ಸಾಧನೆ ಮಾಡಿದೆ. ಇಟಲಿಯ ವೆನಿಸ್‌ ನಲ್ಲಿ ‘Venice Art Biennale’ ಎಂಬ ಹೆಸರಿನ ಅತ್ಯಂತ ಪ್ರತಿಷ್ಠಿತ ಕಲಾ ಪ್ರದರ್ಶನ ನಡೆಯುತ್ತದೆ. ಇದನ್ನು ಕಲಾ ಜಗತ್ತಿನ ಒಲಿಂಪಿಕ್ಸ್ ಎಂದು ಕೂಡಾ ಕರೆಯಲಾಗುತ್ತದೆ. ಈ ಬಾರಿ ಅಲ್ಲಿಗೆ ಸರಿಸುಮಾರು ನಾಲ್ಕೂವರೆ ಲಕ್ಷ ಮಂದಿ  ಭಾರತದ ಪೆವಿಲಿಯನ್‌ ಗೆ ಭೇಟಿ ನೀಡಿದ್ದಾರೆ. ವಿಶೇಷವೆಂದರೆ, ಜಗತ್ತಿನಾದ್ಯಂತ ಆಗಮಿಸಿದ್ದ ಪ್ರೇಕ್ಷಕರು ಮತ ಚಲಾಯಿಸುವ ಮೂಲಕ ಭಾರತದ ಪೆವಿಲಿಯನ್ ಅನ್ನು ಅತ್ಯುತ್ತಮವೆಂದು ಆಯ್ಕೆ ಮಾಡಿದ್ದಾರೆ. ಭಾರತದ ಸಾಂಪ್ರದಾಯಿಕ ಕಲೆಗಳನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸಿದರೆ, ಅವು ಇಡೀ ಜಗತ್ತಿನ ಮನಸ್ಸನ್ನು ಗೆಲ್ಲಬಲ್ಲವು ಎಂಬುದನ್ನು ನಮ್ಮ ಕಲಾವಿದರು ತೋರಿಸಿಕೊಟ್ಟಿದ್ದಾರೆ.  ಸ್ನೇಹಿತರೇ, ಈಗ ಭಾರತದಲ್ಲಿಯೂ ಕಲೆ, ವಾಸ್ತುಶಿಲ್ಪ ಮತ್ತು ವಿನ್ಯಾಸದ ಒಂದು ಬೃಹತ್ ಉತ್ಸವ ನಡೆಯಲಿದೆ.  ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿಯೇ ದೆಹಲಿಯಲ್ಲಿ ‘India Biennale’ ಆರಂಭವಾಗಲಿದೆ. ಈ ಬಾರಿ 108 ದಿನಗಳ ಕಾಲ ದೇಶದ ಐತಿಹಾಸಿಕ ಸ್ಮಾರಕಗಳು, ವಸ್ತುಸಂಗ್ರಹಾಲಯಗಳು ಮತ್ತು ಕಲಾ ಗ್ಯಾಲರಿಗಳು ಈ ಉತ್ಸವದ ಭಾಗವಾಗಲಿವೆ. ಬಿಡುವು ಮಾಡಿಕೊಂಡು ನಿಮ್ಮ ಮಕ್ಕಳನ್ನೂ ಈ ಕಾರ್ಯಕ್ರಮಕ್ಕೆ ಖಂಡಿತ ಕರೆದುಕೊಂಡು ಹೋಗಿ ಎನ್ನುವುದು ನಿಮ್ಮೆಲ್ಲರಲ್ಲಿ ನನ್ನ ಮನವಿ. ನಮ್ಮ ಪರಂಪರೆಯ ಬಗ್ಗೆ ನಾವು ಎಷ್ಟು ಹೆಚ್ಚು ತಿಳಿದುಕೊಳ್ಳುತ್ತೇವೆಯೋ, ಭಾರತವನ್ನು ಅರಿಯುವ ನಮ್ಮ ಪ್ರಯಾಣ ಅಷ್ಟೇ ಶ್ರೀಮಂತವಾಗುತ್ತಾ ಹೋಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಚಳಿಗಾಲದ ಮಾತು ಬಂದಾಗ ಬೆಲ್ಲದ ಸಿಹಿಯ ಕುರಿತು ಪ್ರಸ್ತಾವಿಸದೇ ಇರಲು ಸಾಧ್ಯವೇ! ಶತಮಾನಗಳಿಂದ ನಮ್ಮ ಮನೆಗಳಲ್ಲಿ ರುಚಿ ಮತ್ತು ಆರೋಗ್ಯದ ನಿಧಿ ಎನಿಸಿರುವ ‘ಬೆಲ್ಲ’ ಇಂದು ಜಗತ್ತಿನಾದ್ಯಂತ ತಲುಪುತ್ತಿದೆ. ತಮಿಳುನಾಡಿನ ಈರೋಡ್‌ ನ ಸಾವಯವ ಪಾಮೈರಾ ಬೆಲ್ಲ ಮೊದಲ ಬಾರಿಗೆ ಯುರೋಪ್‌ ತಲುಪಿದೆ. ಇದರಲ್ಲಿ ಬೆಲ್ಲದ ಸಾಂಪ್ರದಾಯಿಕ ರುಚಿಯ ಜೊತೆಗೆ ಉತ್ತಮ ಗುಣಮಟ್ಟವೂ ಇದೆ. ‘ಮನದ  ಮಾತಿನಲ್ಲಿ’ ನಾವು ಈ ಹಿಂದೆಯೂ ಜೇನಿನ ಸಿಹಿ ಮತ್ತು ಸಿಹಿ ಕ್ರಾಂತಿಯ ಬಗ್ಗೆ ಚರ್ಚಿಸಿದ್ದೇವೆ. ಈಗ ನಮ್ಮ ಬೆಲ್ಲದ ಸಿಹಿಯೂ ಹೊಸ ಹೊಸ ಮಾರುಕಟ್ಟೆಗಳನ್ನು ತಲುಪುತ್ತಿದೆ.

ಸ್ನೇಹಿತರೇ,

ಭಾರತದ ಚಾಕೊಲೇಟ್ ಕೂಡ ಜಗತ್ತಿನಲ್ಲಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸುತ್ತಿದೆ. ಕಳೆದ ವರ್ಷವೊಂದರಲ್ಲೇ ಚಾಕೊಲೇಟ್ ಮತ್ತು ಕೋಕೋದಿಂದ ತಯಾರಿಸಲಾದ ಉತ್ಪನ್ನಗಳ ರಫ್ತು ಸುಮಾರು ಶೇಕಡಾ 25ರಷ್ಟು ಹೆಚ್ಚಳವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಚಾಕೊಲೇಟ್ ತಯಾರಿಸುವ ಉದ್ಯಮಿಗಳೂ ಹೊಸ ಆಲೋಚನೆಗಳೊಂದಿಗೆ ಮುಂದೆ ಬರುತ್ತಿದ್ದಾರೆ. ಇಂದು ಈ ಕ್ಷೇತ್ರದಲ್ಲಿ ನಮ್ಮ ಅನೇಕ ನವೋದ್ಯಮಗಳು ಹೊಸ ಆವಿಷ್ಕಾರಗಳನ್ನು ಮಾಡುತ್ತಿವೆ. ಹಲವಾರು ನವೋದ್ಯಮಗಳು ಸ್ಥಳೀಯ ಪದಾರ್ಥಗಳನ್ನು ಬಳಸಿ ಹೊಸ ಹೊಸ ಸ್ವಾದಗಳನ್ನು ಸಿದ್ಧಪಡಿಸಿವೆ. ಇದರಿಂದ ನಮ್ಮ ರೈತರು, ತಾಯಂದಿರು, ಸೋದರಿಯರು ಮತ್ತು ಯುವ ಉದ್ಯಮಿಗಳೆಲ್ಲರಿಗೂ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ.ಸ್ನೇಹಿತರೇ, ಚಾಕೊಲೇಟ್ ಮತ್ತು ಗುಜರಾತ್‌ ನ ಕಚ್ ನಡುವೆ ಒಂದು ಅದ್ಭುತ ಸಂಬಂಧವಿದೆ ಎಂಬುದು ನಿಮಗೆ ತಿಳಿದಿದೆಯೇ? ಅದೆಂದರೆ ಒಂಟೆಯ ಹಾಲಿನಿಂದ ತಯಾರಿಸುವ ಚಾಕೊಲೇಟ್‌ ನ ಸಂಬಂಧ. ಇಲ್ಲಿನ ಒಂಟೆ ಸಾಕಣೆದಾರರು ಒದಗಿಸುವ ಹಾಲನ್ನು ಅಮೂಲ್ ಸಂಸ್ಥೆಯು ಚಾಕೊಲೇಟ್, ಕೇಸರಿ ಸುವಾಸನೆಯ ಹಾಲು ಮತ್ತು ರಾಜಭೋಗ್ ಐಸ್‌ ಕ್ರೀಮ್ ತಯಾರಿಕೆಯಲ್ಲಿಯೂ ಬಳಸುತ್ತಿದೆ. ಒಂಟೆ ಹಾಲಿಗೆ ಸಂಬಂಧಿಸಿದ ಅಂಕಿಅಂಶಗಳು ಬಹಳ ಉತ್ತೇಜನಕಾರಿಯಾಗಿವೆ. ಸರಹದ್ ಡೈರಿಯಲ್ಲಿ ಒಂಟೆ ಹಾಲಿನ ದೈನಂದಿನ ಸಂಗ್ರಹಣೆ 1300 ಲೀಟರ್‌ ನಿಂದ ಹೆಚ್ಚಳವಾಗಿ ಐದೂವರೆ ಸಾವಿರ ಲೀಟರ್‌ ನಷ್ಟಾಗಿದೆ.  2017-18ಕ್ಕೆ ಹೋಲಿಸಿದರೆ ಇದು ಸುಮಾರು ನಾಲ್ಕು ಪಟ್ಟು ಹೆಚ್ಚಳವಾಗಿದೆ. ಈಗ ದೀರ್ಘಕಾಲ ಕೆಡದಂತೆ ಸಂರಕ್ಷಿಸಬಹುದಾದ ಪ್ಯಾಕ್‌ ಗಳಲ್ಲಿಯೂ ಒಂಟೆ ಹಾಲು ಲಭ್ಯವಿದೆ. ಇದರ ಪುಡಿಯನ್ನೂ ತಯಾರಿಸಲಾಗುತ್ತಿದೆ. ಇದರಿಂದಾಗಿ ಕಚ್‌ ನಿಂದ ದೂರ ವಾಸಿಸುವ ಗ್ರಾಹಕರಿಗೂ ಇದು ಸುಲಭವಾಗಿ ತಲುಪುವಂತಾಗಿದೆ. ಸ್ನೇಹಿತರೇ, ಒಂಟೆ ಹಾಲಿನಿಂದ ಹಲವಾರು ಆರೋಗ್ಯ ಪ್ರಯೋಜನಗಳೂ ಇವೆ ಎಂದು ತಜ್ಞರು ಹೇಳುತ್ತಾರೆ. ಮಧುಮೇಹ ಕಾಯಿಲೆಯ ಸಮಸ್ಯೆ ಇರುವವರಿಗೆ ಇದು ಉತ್ತಮವೆಂದು ಹೇಳಲಾಗುತ್ತಿದೆ. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರಿಗೂ ಇದು ಅತ್ಯುತ್ತಮ ಪರ್ಯಾಯ ಆಯ್ಕೆಯಾಗಬಹುದು. ಇದರಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಪ್ರಮಾಣವೂ ಕಡಿಮೆಯಿರುತ್ತದೆ.

ಸ್ನೇಹಿತರೇ,

ಸೂರತ್‌ ನ ‘ಶ್ಮಿಟ್ಟನ್’ ಚಾಕೊಲೇಟ್ ಕೂಡ ಇಂದು ‘ಮೇಡ್ ಇನ್ ಇಂಡಿಯಾ ಫೈನ್ ಚಾಕೊಲೇಟ್’ ಎಂಬ ಹೆಸರಿನಲ್ಲಿ ಜಗತ್ತಿನಾದ್ಯಂತ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸುತ್ತಿದೆ. ನಮ್ಮ ದೇಶದಲ್ಲಿ ಇಂದು ಸ್ಟೈಲಿಷ್ ಚಾಕೊಲೇಟ್ ಬೂಟಿಕ್‌ ಗಳ ಹೊಸ ಪ್ರವೃತ್ತಿಯೂ ಕಂಡುಬರುತ್ತಿದೆ. ಇಲ್ಲಿ  ನಿಮಗೆ ಚಾಕೊಲೇಟ್ ಜೊತೆಗೆ ಭಾರತೀಯತೆಯ ಛಾಯೆ ಎದ್ದು ಕಾಣುವ ಐಷಾರಾಮಿ ಅನುಭವವೂ ದೊರೆಯುತ್ತದೆ. ಸಿಹಿಯ ನಮ್ಮ ಶತಮಾನಗಳಷ್ಟು ಹಳೆಯ ಪರಂಪರೆ ಇಂದು ಹೊಸ ಹೊಸ ಆವಿಷ್ಕಾರಗಳೊಂದಿಗೆ ಮುಂದೆ ಸಾಗುತ್ತಿದೆ. ಈ ಸಿಹಿ ನಮ್ಮ ರೈತರು ಮತ್ತು ಯುವ ಉದ್ಯಮಿಗಳ ಜೀವನದಲ್ಲಿಯೂ ಹೊಸ ಸಂತೋಷವನ್ನು ತುಂಬುತ್ತಿದೆ.

ಸ್ನೇಹಿತರೇ,

ಚಾಕೊಲೇಟ್ ಬಗ್ಗೆ ಸಾಕಷ್ಟು ಮಾತನಾಡಿಯಾಯಿತು, ಈಗ ಸ್ವಲ್ಪ ವ್ಯಾಯಾಮದ ಬಗ್ಗೆಯೂ ಮಾತನಾಡಬೇಕಲ್ಲವೇ! ಸೈಕಲ್ ತುಳಿಯುವುದು ಇದಕ್ಕೆ ಅತ್ಯುತ್ತಮ ವಿಧಾನವಾಗಿದೆ. ಫಿಟ್ ಇಂಡಿಯಾದ ‘ಸಂಡೇಸ್ ಆನ್ ಸೈಕಲ್’ ಕಾರ್ಯಕ್ರಮವು 100 ಆವೃತ್ತಿಗಳನ್ನು ಪೂರ್ಣಗೊಳಿಸಿರುವುದು ನನಗೆ ಸಂತೋಷ ತಂದಿದೆ. 2024ರ ಡಿಸೆಂಬರ್‌ ತಿಂಗಳಿನಲ್ಲಿ ಈ ಕಾರ್ಯಕ್ರಮ ಆರಂಭವಾದಾಗಿನಿಂದ ಇಲ್ಲಿಯವರೆಗೆ, ಇದರ ಆಯೋಜನೆ ನಡೆಯದ ಒಂದೇ ಒಂದು ಭಾನುವಾರವೂ ಇಲ್ಲ. 30 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಸುಮಾರು 37 ಲಕ್ಷ ಜನರು ಇದರಲ್ಲಿ ಭಾಗವಹಿಸಿದ್ದಾರೆ. ಇನ್ನೊಂದು ಸಂತೋಷದ ಸುದ್ದಿ ಪುಣೆಯಿಂದ ಬಂದಿದೆ. ಇಲ್ಲಿ 2032ರ UCI ರೋಡ್ ವರ್ಲ್ಡ್ ಚಾಂಪಿಯನ್ ಶಿಪ್ ಆಯೋಜನೆಯಾಗಲಿದೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ ನಿರಂತರವಾಗಿ ಹೊಸ ಸಾಧನೆಗಳನ್ನು ಮಾಡುತ್ತಿದೆ. ನಮ್ಮ ಫುಟ್ಬಾಲ್ ತಂಡವು ದಾಖಲೆಯ 10ನೇ ಬಾರಿಗೆ SAFF ಚಾಂಪಿಯನ್‌ ಶಿಪ್ ತನ್ನದಾಗಿಸಿಕೊಂಡಿದೆ. ಬ್ಯಾಡ್ಮಿಂಟನ್‌ ನಲ್ಲಿ ಲಕ್ಷ್ಯ ಸೇನ್ ಅವರು ಜರ್ಮನಿ ಮತ್ತು ಜಪಾನ್‌ ನಲ್ಲಿ ಸತತವಾಗಿ ಎರಡು ಸೂಪರ್ 500 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕುಮಾಮೊಟೊ ಮಾಸ್ಟರ್ಸ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಅದೇ ರೀತಿ, ಪಿ.ವಿ. ಸಿಂಧು ಅವರು ಹೈಲೋ ಓಪನ್ ಗೆದ್ದು ಮತ್ತೊಂದು ಪ್ರಶಸ್ತಿಯನ್ನು ಭಾರತದ ಹೆಸರಿಗೆ ತಂದಿದ್ದಾರೆ. ನಮ್ಮ ಯುವ ಚಾಂಪಿಯನ್‌ ಗಳಿಗೆ ಮತ್ತೊಂದು ದೊಡ್ಡ ಅವಕಾಶ ದೊರೆಯಲಿದೆ. ತೆಲಂಗಾಣದ ಆರು ನಗರಗಳಲ್ಲಿ ಡಿಸೆಂಬರ್ 11ರಿಂದ 22ರವರೆಗೆ 8ನೇ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ನಡೆಯಲಿದೆ. ಎಲ್ಲ ಕ್ರೀಡಾಪಟುಗಳಿಗೂ  ಆಡುತ್ತಿರಿ – ಅರಳುತ್ತಿರಿ ಎಂಬ ಶುಭ ಹಾರೈಕೆಗಳು.!

ಸ್ನೇಹಿತರೇ,

ದೇಶದ ಹಲವು ಭಾಗಗಳಲ್ಲಿ ಚಳಿಗಾಲ ಆರಂಭವಾಗಿದೆ. ಬದಲಾಗುತ್ತಿರುವ ಹವಾಮಾನದಲ್ಲಿ ನಮ್ಮ ದೈಹಿಕ ಕ್ಷಮತೆಯ ಬಗ್ಗೆ ಇನ್ನಷ್ಟು ಗಮನ ಹರಿಸಬೇಕಾಗಿದೆ. ಫಿಟ್ ಇಂಡಿಯಾ ಅಭಿಯಾನವನ್ನು ನಾವು ಸಂಪೂರ್ಣ ಉತ್ಸಾಹದಿಂದ ಮುಂದುವರಿಸುತ್ತಿರಬೇಕು. ಆಹಾರದಲ್ಲಿ ಎಣ್ಣೆಯ ಬಳಕೆಯನ್ನು ಶೇಕಡಾ 10ರಷ್ಟು ಕಡಿಮೆ ಮಾಡುವಂತೆ ನಾನು ನಿಮ್ಮಲ್ಲಿ ಮಾಡಿದ್ದ ಮನವಿಯನ್ನೂ ನೆನಪಿನಲ್ಲಿಟ್ಟುಕೊಳ್ಳಿ. ಸ್ಥೂಲಕಾಯ ನಮ್ಮ ದೇಶದ ಪಾಲಿಗೆ ಬಹುದೊಡ್ಡ ಸವಾಲಾಗಿದೆ. ನಾವು ಇದನ್ನು ಎಂದಿಗೂ ನಿರ್ಲಕ್ಷಿಸಬಾರದು. ಹೆಚ್ಚುತ್ತಿರುವ ಸ್ಥೂಲಕಾಯ ಹಲವು ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ನಮ್ಮ ಆಹಾರ ಪದ್ಧತಿ ಮತ್ತು ವ್ಯಾಯಾಮದ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು.

ಸ್ನೇಹಿತರೇ,

ನಮ್ಮ ಭಾರತ ಭೂಮಿಯಲ್ಲಿ ಹರಿಯುತ್ತಿರುವ ಸೇವಾ ಮನೋಭಾವ ಇಂದು ಜಗತ್ತಿನಾದ್ಯಂತ ತಲುಪುತ್ತಿದೆ. ವಿವಿಧ ದೇಶಗಳಲ್ಲಿ ನೆಲೆಸಿರುವ ನಮ್ಮ ಭಾರತೀಯ ಸಮುದಾಯದವರೂ ಇಂತಹ ಅನೇಕ ಸೇವಾ ಕಾರ್ಯಗಳಲ್ಲಿ ಮುಂದೆ ಬಂದು ಕೊಡುಗೆ ನೀಡುತ್ತಲೇ ಇದ್ದಾರೆ. ನಾನು ಕಾಲಕಾಲಕ್ಕೆ ‘ಮನದ ಮಾತಿನಲ್ಲಿ’ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಇಂತಹ ಸೇವಾ ಕಾರ್ಯಗಳ ಬಗ್ಗೆ ನಿಮಗೆ ತಿಳಿಸುತ್ತಿರುತ್ತೇನೆ. ಇತ್ತೀಚೆಗೆ ಕೆನಡಾದಲ್ಲಿ ನಡೆಯುತ್ತಿರುವ ಇಂತಹ ಕೆಲವು ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ನನಗೆ ದೊರೆಯಿತು. ಅವುಗಳಲ್ಲಿ ಒಂದು ‘ಸಾಯಿ ಧಾಮ್ ಫುಡ್ ಬ್ಯಾಂಕ್’. ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎನ್ನುವುದು ಇದರ ಉದ್ದೇಶವಾಗಿದೆ. ಈ ಉಪಕ್ರಮದ ಅಡಿಯಲ್ಲಿ ಇಂದು ಪ್ರತಿತಿಂಗಳು ಗ್ರೇಟರ್ ಟೊರೊಂಟೊ ಮತ್ತು ಹ್ಯಾಮಿಲ್ಟನ್ ಪ್ರದೇಶಗಳಲ್ಲಿ ಸುಮಾರು 60 ಸಾವಿರ ಜನರಿಗೆ ನೆರವು ನೀಡಲಾಗುತ್ತಿದೆ. ಈ ಫುಡ್ ಬ್ಯಾಂಕ್ ಮೂಲಕ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೂ ಆಹಾರವನ್ನು ತಲುಪಿಸಲಾಗುತ್ತಿದೆ. ಕೆನಡಾದ ರೆಡ್ ಎಫ್‌ ಎಂನೊಂದಿಗೆ ಸಂಬಂಧ ಹೊಂದಿರುವ ಕುಲ್ವಿಂದರ್ ಸಂಘೇರಾ ಅವರು ಕೂಡ ಇಂತಹ ಒಂದು ಶ್ಲಾಘನೀಯ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸಮುದಾಯ ರೇಡಿಯೋವನ್ನು ಜನರನ್ನು ಒಗ್ಗೂಡಿಸುವ ಮತ್ತು ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಅವರ ಈ ಪ್ರಯತ್ನಗಳಿಗೆ ಶ್ರೀ ಗುರು ನಾನಕ್ ದೇವ್ ಅವರ ಬೋಧನೆಗಳು ಮತ್ತು ಸಿಖ್ ಧರ್ಮದ ಸೇವಾ ಮನೋಭಾವವೇ ಪ್ರೇರಣೆಯಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಕೆಲವೇ ದಿನಗಳ ಹಿಂದೆ ನಾವು ‘ಪ್ರಕಾಶ ಪರ್ವ’ ಆಚರಿಸಿದ್ದೇವೆ. ದೆಹಲಿಯಲ್ಲಿ ನಡೆದ ‘ಶಬದ್ ಕೀರ್ತನ್’ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯವೂ ನನಗೆ ದೊರೆಯಿತು. ಆ ಪವಿತ್ರ ಅನುಭವ ಸದಾ ನನ್ನೊಂದಿಗೆ ಇರುತ್ತದೆ. ಸ್ನೇಹಿತರೇ, ನಮ್ಮ ಸಿಖ್ ಗುರುಗಳ ಚಿತ್ರಗಳನ್ನು ನೋಡಿದಾಗ ಮನಸ್ಸು ಭಕ್ತಿಭಾವದಿಂದ ತುಂಬಿಹೋಗುತ್ತದೆ. ಈ ಪವಿತ್ರ ಚಿತ್ರಗಳನ್ನು ರಚಿಸಿದವರು ಯಾರು ಎಂದು ಕೆಲವರು ಯೋಚಿಸಬಹುದು. ಸಿಖ್ ಗುರುಗಳ ಇಂತಹ ಅದ್ಭುತ ಚಿತ್ರಗಳನ್ನು ರಚಿಸಿದ ಮಹಾನ್ ಕಲಾವಿದರ ಹೆಸರು ಶೋಭಾ ಸಿಂಗ್. ಇಂದು, ನವೆಂಬರ್ 29ರಂದು ಅವರ 125ನೇ ಜನ್ಮಜಯಂತಿಯ. ಶೋಭಾ ಸಿಂಗ್ ಅವರು ಕೆಲವು ವರ್ಷಗಳ ಕಾಲ ಸೇನೆಯಲ್ಲಿ ಡ್ರಾಫ್ಟ್ಸ್‌ಮನ್ ಆಗಿಯೂ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಅವರು ಬಾಗ್ದಾದ್‌ ನಲ್ಲಿಯೂ ತಮ್ಮ ಸೇವೆ ಸಲ್ಲಿಸಿದ್ದರು. ಶೋಭಾ ಸಿಂಗ್ ಅವರ 125ನೇ ಜನ್ಮಜಯಂತಿಯ ಅಂಗವಾಗಿ ಅವರ ಗೌರವಾರ್ಥ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡುತ್ತಿರುವುದು ಸಿಖ್ ಸಮುದಾಯದಲ್ಲಿಯೂ ಬಹಳ ಸಂತೋಷ ಮೂಡಿಸಿದೆ. ಸ್ನೇಹಿತರೇ, ಇನ್ನೊಬ್ಬ ಮಹಾನ್ ವ್ಯಕ್ತಿಯ ಬಗ್ಗೆ ‘ಮನದ ಮಾತಿನ’ ಕೇಳುಗರಿಗೆ ತಿಳಿಸಲು ನಾನು ಬಯಸುತ್ತೇನೆ. ಅವರೇ ಬಿ.ಎನ್. ರಾವ್. ನಮ್ಮ ಸಂವಿಧಾನದ ರಚನೆಯಲ್ಲಿ ಶ್ರೀ ಬಿ.ಎನ್. ರಾವ್ ಅವರ ಪಾತ್ರ ಬಹಳ ಮಹತ್ವದ್ದಾಗಿದೆ. ಕೇವಲ ಎರಡು ದಿನಗಳ ಹಿಂದೆಯಷ್ಟೇ ನಾವು ಸಂವಿಧಾನ ದಿನವನ್ನೂ ಆಚರಿಸಿದ್ದೇವೆ. ನಾಳೆ, ಅಂದರೆ ನವೆಂಬರ್ 30ರಂದು ಬಿ.ಎನ್. ರಾವ್ ಅವರ ಪುಣ್ಯತಿಥಿಯಾಗಿದೆ. ಭಾರತೀಯ ಸಂವಿಧಾನದ ಕರಡು ರೂಪುರೇಷೆಗಳನ್ನು ಸಿದ್ಧಪಡಿಸುವಲ್ಲಿ ಅವರು ನೀಡಿದ ಐತಿಹಾಸಿಕ ಕೊಡುಗೆಯನ್ನು ದೇಶ ಸದಾ ಸ್ಮರಿಸುತ್ತದೆ. ಅವರಿಗೂ ನಾನು ಹೃತ್ಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಪ್ರತಿ ತಿಂಗಳು ‘ಮನ್ ಕಿ ಬಾತ್’ ಕಾರ್ಯಕ್ರಮಕ್ಕಾಗಿ ನೀವು ಕಳುಹಿಸುವ ಸಂದೇಶಗಳಿಂದ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅದ್ಭುತ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ನನಗೆ ದೊರೆಯುತ್ತದೆ. ಎಷ್ಟೋ ಜನರ ಉತ್ತಮ ಕಾರ್ಯಗಳು ನಿಮ್ಮಿಂದಾಗಿ ಇಡೀ ದೇಶದ ಮುಂದೆ ಬರುತ್ತಿವೆ. ಇದೇ ರೀತಿ ನಿಮ್ಮ ಅನುಭವಗಳು, ಆಲೋಚನೆಗಳು ಮತ್ತು ಸಲಹೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿರಿ.ಮುಂದಿನ ತಿಂಗಳು ನಾವು ಮತ್ತೆ ಭೇಟಿಯಾದಾಗ, ದೇಶವಾಸಿಗಳ ಇಂತಹ ಕೆಲವು ಪ್ರೇರಣಾದಾಯಕ ಕಥೆಗಳ ಬಗ್ಗೆ ಚರ್ಚಿಸೋಣ. ನಿಮ್ಮ ಮತ್ತು ನಿಮ್ಮ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೌದು, ಫಿಟ್ ಇಂಡಿಯಾ ಅಭಿಯಾನವನ್ನು ಮರೆಯಬೇಡಿ. ಹವಾಮಾನ ತುಂಬಾ ಚೆನ್ನಾಗಿದೆ. ಖಂಡಿತವಾಗಿಯೂ ಸ್ವಲ್ಪಸ್ವಲ್ಪ ವ್ಯಾಯಾಮ ಮಾಡಿ. ಹೃತ್ಪೂರ್ವಕ ಶುಭಾಶಯಗಳು. ಅನೇಕಾನೇಕ ಧನ್ಯವಾದಗಳು.

 

*****