ಪಿಎಂಇಂಡಿಯಾ
2030ರ ಕಾಮನ್ ವೆಲ್ತ್ ಕ್ರೀಡಾಕೂಟ (ಸಿ.ಡಬ್ಲ್ಯೂ.ಜಿ.) ಗಾಗಿ ಬಿಡ್ ಸಲ್ಲಿಕೆಗೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಮಾಡಿರುವ ಪ್ರಸ್ತಾವನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಯಿತು. ಸರ್ಕಾರದ ಸಂಬಂಧಿತ ಸಚಿವಾಲಯಗಳಿಂದ ಅಗತ್ಯವಿರುವ ಖಾತರಿಗಳೊಂದಿಗೆ ಆತಿಥೇಯ ಸಹಯೋಗ ಒಪ್ಪಂದ (ಹೆಚ್.ಸಿ.ಎ.) ಗೆ ಸಹಿ ಹಾಕಲು ಸಹ ಇದು ಸಂಪುಟ ಸಭೆಯು ಅನುಮೋದನೆ ನೀಡಿತು. ಬಿಡ್ ಅಂಗೀಕಾರವಾದರೆ, ಇಲಾಖೆಗಳು ಮತ್ತು ಪ್ರಾಧಿಕಾರಗಳು ಮತ್ತು ಗುಜರಾತ್ ಸರ್ಕಾರಕ್ಕೆ ಅಗತ್ಯವಿರುವ ಅನುದಾನಗಳ ಅನುಮೋದನೆ ತ್ವರಿತವಾಗಿ ಲಭ್ಯವಾಗಲಿದೆ.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 72 ದೇಶಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕ್ರೀಡಾಕೂಟದ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು, ತರಬೇತುದಾರರು, ತಾಂತ್ರಿಕ ಅಧಿಕಾರಿಗಳು, ಪ್ರವಾಸಿಗರು, ಮಾಧ್ಯಮ ವ್ಯಕ್ತಿಗಳು ಸೇರಿದಂತೆ ಇತರರು ಭಾಗವಹಿಸುವುದನ್ನು ಇದು ಒಳಗೊಂಡಿರುತ್ತದೆ, ಇದು ಸ್ಥಳೀಯ ವ್ಯವಹಾರಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಆದಾಯವನ್ನು ಗಳಿಸುವ ಅವಕಾಶ ಲಭಿಸುತ್ತದೆ.
ಅಹಮದಾಬಾದ್ ವಿಶ್ವ ದರ್ಜೆಯ ಕ್ರೀಡಾಂಗಣಗಳು, ಅತ್ಯಾಧುನಿಕ ತರಬೇತಿ ಸೌಲಭ್ಯಗಳು ಮತ್ತು ಉತ್ಸಾಹಭರಿತ ಕ್ರೀಡಾ ಸಂಸ್ಕೃತಿಯನ್ನು ನೀಡುವ ಆದರ್ಶ ಆತಿಥೇಯ ನಗರವಾಗಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣವು 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಅನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಈಗಾಗಲೇ ತನ್ನ ಸಾಮರ್ಥ್ಯವನ್ನು ಈಗಾಗಲೇ ಪ್ರದರ್ಶಿಸಿದೆ.
ಕ್ರೀಡೆಗಳನ್ನು ಮೀರಿ, ಭಾರತದಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟ (ಸಿ.ಡಬ್ಲ್ಯೂ.ಜಿ.) ವನ್ನು ಆಯೋಜಿಸುವುದರಿಂದ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಸಾಧ್ಯವಾಗುತ್ತದೆ, ಇದರ ಜೊತೆಗೆ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಲಕ್ಷಾಂತರ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವುದು ಶಾಶ್ವತ ಪರಿಣಾಮ ಕೂಡ ಬೀರುತ್ತದೆ. ಇದಲ್ಲದೆ, ಕ್ರೀಡಾ ವಿಜ್ಞಾನ, ಕಾರ್ಯಕ್ರಮ, ಸ್ಪರ್ಧೆ, ಸಮಾರಂಭ, ಸಭೆ, ಸಮಾವೇಶ ಕಾರ್ಯಾಚರಣೆಗಳು ಮತ್ತು ನಿರ್ವಹಣೆ, ಸಾಗಣೆ (ಲಾಜಿಸ್ಟಿಕ್ಸ್) ಮತ್ತು ಸಾರಿಗೆ ಸಂಯೋಜಕರು, ಪ್ರಸಾರ ಮತ್ತು ಮಾಧ್ಯಮ, ಐಟಿ ಮತ್ತು ಸಂವಹನ, ಸಾರ್ವಜನಿಕ ಸಂಪರ್ಕ ಮತ್ತು ಸಂವಹನ ಮತ್ತು ಇತರ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ವೃತ್ತಿಪರರು ಉತ್ತಮ ಅವಕಾಶಗಳನ್ನು ಪಡೆಯಲಿದ್ದಾರೆ.
ಜಾಗತಿಕವಾಗಿ ಇಂತಹ ಪ್ರತಿಷ್ಠಿತ ಕಾರ್ಯಕ್ರಮವನ್ನು ಆಯೋಜಿಸುವುದು ಬಲವಾದ ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯ ಪ್ರಜ್ಞೆಯನ್ನು ಬೆಳೆಸುತ್ತದೆ. ಇದು ಸಮಾನ ಅವಕಾಶ ಹಂಚಿಕೆಯ ರಾಷ್ಟ್ರೀಯ ಅನುಭವವನ್ನು ಒದಗಿಸುತ್ತದೆ ಮತ್ತು ನಮ್ಮ ರಾಷ್ಟ್ರದ ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇದು ಹೊಸ ಪೀಳಿಗೆಯ ಕ್ರೀಡಾಪಟುಗಳು ಕ್ರೀಡೆಯನ್ನು ವೃತ್ತಿ ಆಯ್ಕೆಯಾಗಿ ಪ್ರವೇಶಿಸಲು ಸ್ಫೂರ್ತಿ ನೀಡುತ್ತದೆ ಮತ್ತು ಎಲ್ಲಾ ಹಂತಗಳಲ್ಲಿ ಕ್ರೀಡೆಗಳಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ.
*****