Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯ ಪರಾಕ್ರಮ್ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯ ಪರಾಕ್ರಮ್ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಡೆದ ಪರಾಕ್ರಮ್ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮೋದಿ, ಜನವರಿ 23 ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವದ ಮಹಿಮಾನ್ವಿತ  ದಿನಾಂಕವಾಗಿದೆ ಎಂದು ಹೇಳಿದರು. ನೇತಾಜಿ ಅವರ ಶೌರ್ಯ ಮತ್ತು ಧೈರ್ಯ ನಮಗೆ ಸ್ಫೂರ್ತಿ ನೀಡುತ್ತದೆ ಮತ್ತು ಅವರ ಬಗ್ಗೆ ನಮಗೆ ಭಕ್ತಿ ತುಂಬುತ್ತದೆ ಎಂದು ಅವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ, ಪರಾಕ್ರಮ್ ದಿವಸ್ ರಾಷ್ಟ್ರದ ಚೈತನ್ಯದ ಅವಿಭಾಜ್ಯ ಉತ್ಸವವಾಗಿದೆ ಎಂಬುದನ್ನು ಅವರು ಎತ್ತಿ ತೋರಿಸಿದರು. ಜನವರಿ 23 ಪರಾಕ್ರಮ್ ದಿವಸ್, ಜನವರಿ 25 ರಾಷ್ಟ್ರೀಯ ಮತದಾರರ ದಿನ, ಜನವರಿ 26 ಗಣರಾಜ್ಯೋತ್ಸವ, ಜನವರಿ 29 ಬೀಟಿಂಗ್ ರಿಟ್ರೀಟ್ ಮತ್ತು ಜನವರಿ 30 ಪೂಜ್ಯ ಬಾಪು ಅವರ ಪುಣ್ಯತಿಥಿಯಾಗಿರುವುದು ಸಂತೋಷದ ಕಾಕತಾಳೀಯ ಸಂಗತಿ ಎಂದು ಶ್ರೀ ಮೋದಿ ಹೇಳಿದರು. ಇದು ಗಣರಾಜ್ಯದ ಭವ್ಯ ಉತ್ಸವವನ್ನು ಆಚರಿಸುವ ಹೊಸ ಸಂಪ್ರದಾಯವನ್ನು ಸೃಷ್ಟಿಸಿದೆ ಎಂದ ಅವರು ಪರಾಕ್ರಮ್ ದಿವಸ್‌ನಂದು ಎಲ್ಲಾ ನಾಗರಿಕರಿಗೆ ಶುಭಾಶಯಗಳನ್ನು ಕೋರಿದರು.

2026 ರಲ್ಲಿ ಪರಾಕ್ರಮ್ ದಿವಸ್ ಪ್ರಮುಖ ಆಚರಣೆಯನ್ನು ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಶೌರ್ಯ, ತ್ಯಾಗ ಮತ್ತು ಧೈರ್ಯದಿಂದ ತುಂಬಿದ ಅಂಡಮಾನ್ ಮತ್ತು ನಿಕೋಬಾರ್ ಇತಿಹಾಸ, ಸೆಲ್ಯುಲಾರ್ ಜೈಲಿನಲ್ಲಿ ವೀರ್ ಸಾವರ್ಕರ್ ರಂತಹ ದೇಶಭಕ್ತರ ಕಥೆಗಳು ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೊಂದಿಗಿನ ಸಂಪರ್ಕವು ಆಚರಣೆಯನ್ನು ಇನ್ನಷ್ಟು ವಿಶೇಷವಾಗಿಸುತ್ತದೆ ಎಂದು ಒತ್ತಿ ಹೇಳಿದರು. ಅಂಡಮಾನ್  ಭೂಮಿ ಸ್ವಾತಂತ್ರ್ಯದ ಕಲ್ಪನೆ, ಚಿಂತನೆ ಎಂದಿಗೂ ಚಿರಾಯು ಎಂಬ ನಂಬಿಕೆಯನ್ನು ಸಂಕೇತಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಲ್ಲಿ ಅನೇಕ ಕ್ರಾಂತಿಕಾರಿಗಳನ್ನು ಹಿಂಸಿಸಲಾಯಿತು ಮತ್ತು ಅನೇಕ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು, ಆದರೆ ಸ್ವಾತಂತ್ರ್ಯ ಹೋರಾಟದ ಕಿಡಿ ನಂದಿಸುವ ಬದಲು ಬಲವಾಯಿತು ಎಂದು ಅವರು ಹೇಳಿದರು. ಇದರ ಪರಿಣಾಮವಾಗಿ, ಅಂಡಮಾನ್ ಮತ್ತು ನಿಕೋಬಾರ್ ಭೂಮಿ ಸ್ವತಂತ್ರ ಭಾರತದ ಮೊದಲ ಸೂರ್ಯೋದಯಕ್ಕೆ ಸಾಕ್ಷಿಯಾಯಿತು ಎಂದೂ ಶ್ರೀ ಮೋದಿ ಹೇಳಿದರು. 1947 ಕ್ಕೂ ಮೊದಲು, ಡಿಸೆಂಬರ್ 30, 1943 ರಂದು, ಸಮುದ್ರದ ಅಲೆಗಳ ಸಾಕ್ಷಿಯಾಗಿ ತ್ರಿವರ್ಣ ಧ್ವಜವನ್ನು ಇಲ್ಲಿ ಹಾರಿಸಲಾಗಿತ್ತು ಎಂದು ಅವರು ನೆನಪಿಸಿಕೊಂಡರು. 2018 ರಲ್ಲಿ, ಈ ಮಹಾನ್ ಕಾರ್ಯಕ್ರಮದ 75 ನೇ ವಾರ್ಷಿಕೋತ್ಸವವನ್ನು ಆಚರಿಸಿದಾಗ, ಡಿಸೆಂಬರ್ 30 ರಂದು ಅದೇ ಸ್ಥಳದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಸೌಭಾಗ್ಯ ತಮಗೆ ಸಿಕ್ಕಿತು ಎಂದು ಪ್ರಧಾನಮಂತ್ರಿ ಸ್ಮರಿಸಿದರು. ಸಾಗರ ತೀರದಲ್ಲಿ ರಾಷ್ಟ್ರಗೀತೆ ನುಡಿಸುತ್ತಿದ್ದಂತೆ, ಬಲವಾದ ಗಾಳಿಯಲ್ಲಿ ಹಾರುತ್ತಿದ್ದ ತ್ರಿವರ್ಣ ಧ್ವಜವು ಸ್ವಾತಂತ್ರ್ಯ ಹೋರಾಟಗಾರರ ಅಸಂಖ್ಯಾತ ಕನಸುಗಳು ನನಸಾಗಿವೆ ಎಂಬುದನ್ನು ಸಾರಿತು ಎಂದು ಶ್ರೀ ಮೋದಿ ಹೇಳಿದರು.

ಸ್ವಾತಂತ್ರ್ಯದ ನಂತರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಭವ್ಯ ಇತಿಹಾಸವನ್ನು ಸಂರಕ್ಷಿಸಬೇಕಾಗಿತ್ತು, ಆದರೆ ಸಮಯದಲ್ಲಿ ಅಧಿಕಾರಕ್ಕೆ ಬಂದವರು ಅಭದ್ರತೆಯ ಭಾವನೆಯನ್ನು ಹೊಂದಿದ್ದರು ಎಂದು ಶ್ರೀ ಮೋದಿ ಹೇಳಿದರು. ಸ್ವಾತಂತ್ರ್ಯದ ಕೀರ್ತಿಯನ್ನು ಕೇವಲ ಒಂದು ಕುಟುಂಬಕ್ಕೆ ಸೀಮಿತಗೊಳಿಸಲು ಅವರು ಬಯಸಿದ್ದರು ಮತ್ತು ರಾಜಕೀಯ ಸ್ವಾರ್ಥಕ್ಕಾಗಿ, ರಾಷ್ಟ್ರದ ಇತಿಹಾಸವನ್ನು ನಿರ್ಲಕ್ಷಿಸಲಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. ಅಂಡಮಾನ್ ಮತ್ತು ನಿಕೋಬಾರ್ ಕೂಡ ವಸಾಹತುಶಾಹಿ ಆಡಳಿತದ ಗುರುತಿಗೆ ಬದ್ಧವಾಗಿದ್ದವು, ಸ್ವಾತಂತ್ರ್ಯದ ಎಪ್ಪತ್ತು ವರ್ಷಗಳ ನಂತರವೂ ಅದರ ದ್ವೀಪಗಳು ಬ್ರಿಟಿಷ್ ಅಧಿಕಾರಿಗಳ ಹೆಸರಿನಿಂದಲೇ ಕರೆಯಲ್ಪಡುತ್ತಿದ್ದವು ಎಂಬುದನ್ನು ಶ್ರೀ ಮೋದಿ ಎತ್ತಿ ತೋರಿಸಿದರು. ತಮ್ಮ ಸರ್ಕಾರವು ಇತಿಹಾಸದ ಅನ್ಯಾಯವನ್ನು ಕೊನೆಗೊಳಿಸಿತು ಮತ್ತು ಆದ್ದರಿಂದ ಪೋರ್ಟ್ ಬ್ಲೇರ್ ಈಗ ‘ಶ್ರೀ ವಿಜಯಪುರಂ’ ಆಗಿ ಮಾರ್ಪಟ್ಟಿದೆ, ಇದು ನೇತಾಜಿಯ ವಿಜಯವನ್ನು ನೆನಪಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅದೇ ರೀತಿ, ಇತರ ದ್ವೀಪಗಳನ್ನು ಸ್ವರಾಜ್ ದ್ವೀಪ, ಶಹೀದ್ ದ್ವೀಪ ಮತ್ತು ಸುಭಾಷ್ ದ್ವೀಪ ಎಂದು ಮರುನಾಮಕರಣ ಮಾಡಲಾಯಿತು ಎಂದು ಅವರು ಹೇಳಿದರು. 2023 ರಲ್ಲಿ, ಅಂಡಮಾನ್‌ನ 21 ದ್ವೀಪಗಳಿಗೆ 21 ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿಡಲಾಗಿದೆ ಎಂದು ಶ್ರೀ ಮೋದಿ ನೆನಪಿಸಿಕೊಂಡರು. ಇಂದು, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಗುಲಾಮಗಿರಿಗೆ ಸಂಬಂಧಿಸಿದ ಹೆಸರುಗಳನ್ನು ಅಳಿಸಲಾಗುತ್ತಿದೆ ಮತ್ತು ಮುಕ್ತ ಭಾರತದ ಹೊಸ ಹೆಸರುಗಳು ತಮ್ಮ ಗುರುತನ್ನು ಸ್ಥಾಪಿಸುತ್ತಿವೆ ಎಂದು ಅವರು ಒತ್ತಿ ಹೇಳಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಮಾತ್ರವಲ್ಲದೆ ಸ್ವತಂತ್ರ ಭಾರತದ ದಾರ್ಶನಿಕರೂ ಆಗಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಪ್ರಾಚೀನ ಪ್ರಜ್ಞೆಯಲ್ಲಿ ಬೇರೂರಿರುವ ಆಧುನಿಕ ರೂಪದ ರಾಷ್ಟ್ರವನ್ನು ಅವರು ಕಲ್ಪಿಸಿಕೊಂಡರು. ಇಂದಿನ ಪೀಳಿಗೆಗೆ ನೇತಾಜಿಯವರ ದೃಷ್ಟಿಕೋನವನ್ನು ಪರಿಚಯಿಸುವುದು ನಮ್ಮ ಜವಾಬ್ದಾರಿ ಎಂದು ಶ್ರೀ ಮೋದಿ ಹೇಳಿದರು ಮತ್ತು ತಮ್ಮ ಸರ್ಕಾರ ಜವಾಬ್ದಾರಿಯನ್ನು ಪೂರೈಸುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ದಿಲ್ಲಿಯ ಕೆಂಪು ಕೋಟೆಯಲ್ಲಿ ನೇತಾಜಿಗೆ ಮೀಸಲಾಗಿರುವ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗಿದೆ, ಇಂಡಿಯಾ ಗೇಟ್ ಬಳಿ ನೇತಾಜಿಯವರ ಭವ್ಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಮತ್ತು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಐಎನ್‌ಎಯ ಕೊಡುಗೆಯನ್ನು ಸ್ಮರಿಸಲಾಗಿದೆ ಎಂದು ಅವರು ಎತ್ತಿ ತೋರಿಸಿದರು. ಸುಭಾಷ್ ಚಂದ್ರ ಬೋಸ್ ವಿಪತ್ತು ನಿರ್ವಹಣಾ ಪ್ರಶಸ್ತಿಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಉಪಕ್ರಮಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವದ ಸಂಕೇತ ಮಾತ್ರವಲ್ಲದೆ ನಮ್ಮ ಯುವಜನರು ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ಅಮರ ಮೂಲಗಳಾಗಿವೆ ಎಂದು ಅವರು ಹೇಳಿದರು. ಈ ಆದರ್ಶಗಳನ್ನು ಗೌರವಿಸುವುದು ಮತ್ತು ಅವುಗಳಿಂದ ಸ್ಫೂರ್ತಿ ಪಡೆಯುವ ಮೂಲಕ  ಅಭಿವೃದ್ಧಿ ಹೊಂದಿದ ಭಾರತಕ್ಕಾಗಿರುವ  ನಮ್ಮ ಸಂಕಲ್ಪಕ್ಕೆ  ಶಕ್ತಿ ಮತ್ತು ಆತ್ಮವಿಶ್ವಾಸ ಲಭಿಸುತ್ತದೆ ಎಂದೂ ಶ್ರೀ ಮೋದಿ ಹೇಳಿದರು.

ದುರ್ಬಲ ರಾಷ್ಟ್ರಕ್ಕೆ  ತನ್ನ ಗುರಿಗಳನ್ನು ಸಾಧಿಸುವುದು ಕಷ್ಟಸಾಧ್ಯ ಎಂದೂ  ಶ್ರೀ ಮೋದಿ ಹೇಳಿದರು, ಆದ್ದರಿಂದ ನೇತಾಜಿ ಸುಭಾಷರು ಸದಾ ಬಲಿಷ್ಠ ರಾಷ್ಟ್ರದ ಕನಸು ಕಾಣುತ್ತಿದ್ದರು. 21 ನೇ ಶತಮಾನದಲ್ಲಿ ಭಾರತವೂ ಸಹ ತನ್ನನ್ನು ತಾನು ಬಲಿಷ್ಠ ಮತ್ತು ದೃಢನಿಶ್ಚಯದ ರಾಷ್ಟ್ರವಾಗಿ ಸ್ಥಾಪಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರ್ ಸಮಯದಲ್ಲಿ, ದೇಶಕ್ಕೆ ಗಾಯಗಳನ್ನುಂಟುಮಾಡಿ ಅವರನ್ನು ನಾಶಪಡಿಸಿದವರ ಮನೆಗಳಿಗೆ ಭಾರತ ನುಗ್ಗಿ ಪ್ರತಿದಾಳಿ ನಡೆಸಿತು ಎಂಬುದನ್ನು ಅವರು ಎತ್ತಿ ತೋರಿಸಿದರು. ಭಾರತ ಇಂದು ಶಕ್ತಿಯನ್ನು ಹೇಗೆ ನಿರ್ಮಿಸಬೇಕು, ಅದನ್ನು ಹೇಗೆ ನಿರ್ವಹಿಸಬೇಕು ಮತ್ತು ಶಕ್ತಿಯನ್ನು ಹೇಗೆ ಬಳಸಬೇಕು ಎಂಬುದನ್ನು ಅರಿತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ನೇತಾಜಿ ಸುಭಾಷರ ಬಲಿಷ್ಠ ಭಾರತದ ದೃಷ್ಟಿಕೋನವನ್ನು ಅನುಸರಿಸಿ, ದೇಶವು ರಕ್ಷಣಾ ವಲಯವನ್ನು ಸ್ವಾವಲಂಬಿಯನ್ನಾಗಿ ಮಾಡಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಹಿಂದೆ ಭಾರತವು ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ಅವಲಂಬಿತವಾಗಿತ್ತು, ಆದರೆ ಇಂದು ಭಾರತದ ರಕ್ಷಣಾ ರಫ್ತು ₹23,000 ಕೋಟಿಯನ್ನು ದಾಟಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ಥಳೀಯವಾಗಿ ನಿರ್ಮಿಸಲಾದ ಬ್ರಹ್ಮೋಸ್ ಮತ್ತು ಇತರ ಕ್ಷಿಪಣಿಗಳು ಜಾಗತಿಕ ಗಮನ ಸೆಳೆಯುತ್ತಿವೆ ಎಂದೂ ಅವರು ಹೇಳಿದರು. ಭಾರತವು ಸ್ವಾವಲಂಬನೆಯ ಶಕ್ತಿಯೊಂದಿಗೆ ತನ್ನ ಸಶಸ್ತ್ರ ಪಡೆಗಳನ್ನು ಆಧುನೀಕರಿಸುತ್ತಿದೆ ಎಂದು ಶ್ರೀ ಮೋದಿ ನುಡಿದರು.

ಆತ್ಮನಿರ್ಭರ ಭಾರತ ಅಭಿಯಾನದಿಂದ ಬಲಗೊಂಡ ಮತ್ತು ಸ್ವದೇಶಿ ಮಂತ್ರದಿಂದ ಪ್ರೇರಿತವಾದ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದತ್ತ ಇಂದು 1.4 ಶತಕೋಟಿ ನಾಗರಿಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಪರಾಕ್ರಮ್ ದಿವಸ್‌ನ ಸ್ಫೂರ್ತಿ ಅಭಿವೃದ್ಧಿ ಹೊಂದಿದ ಭಾರತದ ಈ ಪ್ರಯಾಣಕ್ಕೆ ಬಲ ನೀಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಮಾತುಗಳನ್ನು ಮುಕ್ತಾಯಗೊಳಿಸಿದರು.

ಅಂಡಮಾನ್ ಮತ್ತು ನಿಕೋಬಾರ್‌ನ ಲೆಫ್ಟಿನೆಂಟ್ ಗವರ್ನರ್, ಅಡ್ಮಿರಲ್ (ನಿವೃತ್ತ), ಡಿ.ಕೆ. ಜೋಶಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಐ ಎನ್‌ಎ ಟ್ರಸ್ಟ್‌ನ ಅಧ್ಯಕ್ಷರಾದ, ಬ್ರಿಗೇಡಿಯರ್ (ನಿವೃತ್ತ) ಆರ್.ಎಸ್. ಚಿಕಾರ, ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಹಾಗು ಐಎನ್‌ಎಯ  ಲೆಫ್ಟಿನೆಂಟ್ ಆರ್. ಮಾಧವನ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

*****