ಪಿಎಂಇಂಡಿಯಾ
ಗಣ್ಯರೇ,
ಮಹಿಳೆಯರೇ ಮತ್ತು ಮಹನೀಯರೇ,
ಟೆನಾ ಯಿಸ್ಟಿಲಿನ್ (ನಮಸ್ಕಾರಗಳು),
ಇಂದು ಇಥಿಯೋಪಿಯಾದ ಈ ಭವ್ಯ ನಾಡಿನಲ್ಲಿ, ನಿಮ್ಮೆಲ್ಲರ ನಡುವೆ ಇರುವುದು ನನಗೆ ದೊರೆತ ಸೌಭಾಗ್ಯವಾಗಿದೆ. ನಾನು ಇಂದು ಮಧ್ಯಾಹ್ನವಷ್ಟೇ ಇಥಿಯೋಪಿಯಾಗೆ ಆಗಮಿಸಿದೆ. ಇಲ್ಲಿಗೆ ಕಾಲಿಟ್ಟ ಕ್ಷಣದಿಂದಲೇ, ಇಲ್ಲಿನ ಜನರಿಂದ ಅಪಾರವಾದ ಪ್ರೀತಿ ಮತ್ತು ಅನ್ಯೋನ್ಯತೆಯನ್ನು ನಾನು ಅನುಭವಿಸಿದ್ದೇನೆ. ಸ್ವತಃ ಪ್ರಧಾನ ಮಂತ್ರಿಗಳೇ ವಿಮಾನ ನಿಲ್ದಾಣಕ್ಕೆ ಬಂದು ನನ್ನನ್ನು ಬರಮಾಡಿಕೊಂಡರು ಹಾಗೂ ನನ್ನನ್ನು ‘ಫ್ರೆಂಡ್ಶಿಪ್ ಪಾರ್ಕ್’ ಮತ್ತು ‘ವಿಜ್ಞಾನ ವಸ್ತುಸಂಗ್ರಹಾಲಯ’ಕ್ಕೆ ಕರೆದೊಯ್ದರು.
ಇಂದು ಸಂಜೆ, ನಾನಿಲ್ಲಿನ ನಾಯಕರೊಂದಿಗೆ ಹಲವು ಪ್ರಮುಖ ವಿಷಯಗಳ ಕುರಿತು ಮಹತ್ವದ ಚರ್ಚೆಗಳನ್ನು ನಡೆಸಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಇದೊಂದು ನನಗೆ ಮರೆಯಲಾಗದ ಅನುಭವವಾಗಿದೆ.
ಸ್ನೇಹಿತರೇ,
ನನಗೆ ಈಗಷ್ಟೇ ಇಥಿಯೋಪಿಯಾದ ಅತ್ಯುನ್ನತ ನಾಗರಿಕ ಗೌರವವಾದ ‘ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’ (Great Honour Nishan of Ethiopia) ನೀಡಿ ಗೌರವಿಸಲಾಗಿದೆ. ಜಗತ್ತಿನ ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ನಾಗರಿಕತೆಗಳಲ್ಲಿ ಒಂದಾದ ಈ ನಾಡಿನಿಂದ ಇಂತಹ ಗೌರವವನ್ನು ಪಡೆದಿರುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಸಮಸ್ತ ಭಾರತೀಯರ ಪರವಾಗಿ, ನಾನು ಈ ಗೌರವವನ್ನು ಅತ್ಯಂತ ವಿನಮ್ರತೆ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ.
ಈ ಗೌರವವು ನಮ್ಮ ಬಾಂಧವ್ಯವನ್ನು ರೂಪಿಸಿದ ಅಸಂಖ್ಯಾತ ಭಾರತೀಯರಿಗೆ ಸಲ್ಲುತ್ತದೆ – 1896ರ ಹೋರಾಟದ ಸಮಯದಲ್ಲಿ ಬೆಂಬಲ ನೀಡಿದ ಗುಜರಾತಿ ವ್ಯಾಪಾರಿಗಳಾಗಿರಲಿ, ಇಥಿಯೋಪಿಯಾದ ವಿಮೋಚನೆಗಾಗಿ ಹೋರಾಡಿದ ಭಾರತೀಯ ಸೈನಿಕರಾಗಿರಲಿ ಅಥವಾ ಶಿಕ್ಷಣ ಮತ್ತು ಹೂಡಿಕೆಯ ಮೂಲಕ ಇಲ್ಲಿನ ಭವಿಷ್ಯವನ್ನು ಕಟ್ಟಲು ನೆರವಾದ ಭಾರತೀಯ ಶಿಕ್ಷಕರು ಮತ್ತು ಉದ್ಯಮಿಗಳಾಗಿರಲಿ, ಇದು ಅವರೆಲ್ಲರಿಗೂ ಸಲ್ಲುತ್ತದೆ. ಹಾಗೆಯೇ, ಭಾರತದ ಮೇಲೆ ನಂಬಿಕೆ ಇಟ್ಟು, ಈ ಸಂಬಂಧವನ್ನು ಮನಸಾರೆ ಶ್ರೀಮಂತಗೊಳಿಸಿದ ಪ್ರತಿಯೊಬ್ಬ ಇಥಿಯೋಪಿಯನ್ ಪ್ರಜೆಗೂ ಈ ಗೌರವ ಸಮಾನವಾಗಿ ಸಲ್ಲುತ್ತದೆ.
ಸ್ನೇಹಿತರೇ,
ಈ ಸಂದರ್ಭದಲ್ಲಿ, ನಾನು ನನ್ನ ಸ್ನೇಹಿತರಾದ ಪ್ರಧಾನ ಮಂತ್ರಿ ಡಾ. ಅಬಿಯ್ ಅಹ್ಮದ್ ಅಲಿ ಅವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಮಾನ್ಯರೇ,
ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದ ಜಿ-20 ಶೃಂಗಸಭೆಯ ವೇಳೆ ನಾವು ಭೇಟಿಯಾದಾಗ, ನೀವು ಅತ್ಯಂತ ಪ್ರೀತಿ ಮತ್ತು ಆತ್ಮೀಯತೆಯಿಂದ ಇಥಿಯೋಪಿಯಾಗೆ ಭೇಟಿ ನೀಡುವಂತೆ ನನ್ನನ್ನು ಕೋರಿದ್ದಿರಿ. ನನ್ನ ಸ್ನೇಹಿತ ಮತ್ತು ಸಹೋದರನಿಂದ ಬಂದ ಇಂತಹ ಪ್ರೀತಿಯ ಆಹ್ವಾನವನ್ನು ನಿರಾಕರಿಸಲು ನನಗೆ ಹೇಗೆ ತಾನೇ ಸಾಧ್ಯ? ಅದಕ್ಕಾಗಿಯೇ, ಮೊದಲ ಅವಕಾಶ ಸಿಕ್ಕಿದ ತಕ್ಷಣವೇ ನಾನು ಇಥಿಯೋಪಿಯಾಗೆ ಬರಲು ನಿರ್ಧರಿಸಿದೆ.
ಸ್ನೇಹಿತರೇ,
ಒಂದು ವೇಳೆ ಈ ಭೇಟಿಯು ಸಾಮಾನ್ಯ ರಾಜತಾಂತ್ರಿಕ ಶಿಷ್ಟಾಚಾರಗಳ ಹಾದಿಯಲ್ಲಿ ನಡೆದಿದ್ದರೆ, ಇದಕ್ಕೆ ಬಹುಶಃ ಬಹಳ ಸಮಯ ಹಿಡಿಯುತ್ತಿತ್ತು. ಆದರೆ ನಿಮ್ಮ ಪ್ರೀತಿ ಮತ್ತು ವಿಶ್ವಾಸವೇ ನನ್ನನ್ನು ಕೇವಲ 24 ದಿನಗಳಲ್ಲಿ ಇಲ್ಲಿಗೆ ಕರೆತಂದಿದೆ.
ಸ್ನೇಹಿತರೇ,
ಇಡೀ ಜಗತ್ತಿನ ಕಣ್ಣು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ಮೇಲೆ ನೆಟ್ಟಿರುವ ಈ ಸಮಯದಲ್ಲಿ, ಇಥಿಯೋಪಿಯಾದ ಘನತೆ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಪರಂಪರೆಯು ನಮ್ಮೆಲ್ಲರಿಗೂ ಒಂದು ದೊಡ್ಡ ಸ್ಫೂರ್ತಿಯ ಸೆಲೆಯಾಗಿದೆ. ಇಂತಹ ಪ್ರಮುಖ ಕಾಲಘಟ್ಟದಲ್ಲಿ, ಇಥಿಯೋಪಿಯಾದ ಚುಕ್ಕಾಣಿಯು ಡಾ. ಅಬಿಯ್ ಅವರಂತಹ ಸಮರ್ಥರ ಕೈಯಲ್ಲಿರುವುದು ಅತ್ಯಂತ ಅದೃಷ್ಟದ ಸಂಗತಿಯಾಗಿದೆ.
ಅವರ “ಮೆಡೆಮರ್” ತತ್ವ ಮತ್ತು ಅಭಿವೃದ್ಧಿಯ ಬಗೆಗಿನ ದೃಢ ಬದ್ಧತೆಯೊಂದಿಗೆ, ಅವರು ಇಥಿಯೋಪಿಯಾವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುತ್ತಿರುವ ರೀತಿ ಇಡೀ ಜಗತ್ತಿಗೆ ಒಂದು ಉತ್ತಮ ಮಾದರಿಯಾಗಿದೆ. ಪರಿಸರ ಸಂರಕ್ಷಣೆಯಾಗಲಿ, ಸರ್ವರನ್ನೊಳಗೊಂಡ ಅಭಿವೃದ್ಧಿಯಾಗಲಿ ಅಥವಾ ವೈವಿಧ್ಯಮಯ ಸಮಾಜದಲ್ಲಿ ಏಕತೆಯನ್ನು ಬಲಪಡಿಸುವುದಾಗಲಿ, ಈ ನಿಟ್ಟಿನಲ್ಲಿ ಅವರ ಪ್ರಯತ್ನಗಳು, ಉಪಕ್ರಮಗಳು ಮತ್ತು ಸಮರ್ಪಣಾ ಮನೋಭಾವವನ್ನು ನಾನು ಮನಸಾರೆ ಮೆಚ್ಚುತ್ತೇನೆ.
ಸ್ನೇಹಿತರೇ,
ಭಾರತದಲ್ಲಿ ನಾವು ಅನಾದಿ ಕಾಲದಿಂದಲೂ “ಸಾ ವಿದ್ಯಾ, ಯಾ ವಿಮುಕ್ತಯೇ” ಎಂದು ನಂಬಿಕೊಂಡು ಬಂದಿದ್ದೇವೆ. ಅಂದರೆ “ಯಾವುದು ನಮ್ಮನ್ನು ಬಂಧಮುಕ್ತರನ್ನಾಗಿಸುತ್ತದೆಯೋ ಅದೇ ನಿಜವಾದ ವಿದ್ಯೆ”.
ಶಿಕ್ಷಣವು ಯಾವುದೇ ರಾಷ್ಟ್ರದ ಬುನಾದಿಯಾಗಿದೆ. ಭಾರತ ಮತ್ತು ಇಥಿಯೋಪಿಯಾ ನಡುವಿನ ಸಂಬಂಧಕ್ಕೆ ಅತಿದೊಡ್ಡ ಕೊಡುಗೆಯನ್ನು ನಮ್ಮ ಶಿಕ್ಷಕರು ನೀಡಿದ್ದಾರೆ ಎಂಬುದು ನನಗೆ ಹೆಮ್ಮೆಯ ವಿಷಯವಾಗಿದೆ. ಇಥಿಯೋಪಿಯಾದ ಶ್ರೇಷ್ಠ ಸಂಸ್ಕೃತಿಯು ಅವರನ್ನು ಇಲ್ಲಿಗೆ ಆಕರ್ಷಿಸಿತು ಮತ್ತು ಇಲ್ಲಿನ ಹಲವು ತಲೆಮಾರುಗಳನ್ನು ರೂಪಿಸುವ ಸೌಭಾಗ್ಯ ಅವರಿಗೆ ದೊರೆಯಿತು. ಇಂದಿಗೂ ಸಹ, ಅನೇಕ ಭಾರತೀಯ ಅಧ್ಯಾಪಕರು ಇಥಿಯೋಪಿಯಾದ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.
ಸ್ನೇಹಿತರೇ,
ದೂರದೃಷ್ಟಿ ಮತ್ತು ನಂಬಿಕೆಯ ತಳಹದಿಯ ಮೇಲೆ ನಿರ್ಮಿಸಲಾದ ಪಾಲುದಾರಿಕೆಗಳಿಗೆ ಭವಿಷ್ಯವಿದೆ. ಇಥಿಯೋಪಿಯಾದೊಂದಿಗೆ ಸೇರಿ, ಕೇವಲ ಬದಲಾಗುತ್ತಿರುವ ಜಾಗತಿಕ ಸವಾಲುಗಳನ್ನು ಎದುರಿಸುವುದಷ್ಟೇ ಅಲ್ಲದೆ, ಹೊಸ ಅವಕಾಶಗಳನ್ನು ಸೃಷ್ಟಿಸುವಂತಹ ಸಹಕಾರವನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ.
ಮತ್ತೊಮ್ಮೆ, 140 ಕೋಟಿ ಭಾರತೀಯ ಪೌರರ ಪರವಾಗಿ, ಇಥಿಯೋಪಿಯಾದ ಸಮಸ್ತ ಗೌರವಾನ್ವಿತ ಜನತೆಗೆ ನಾನು ನನ್ನ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಧನ್ಯವಾದಗಳು.
ಸೂಚನೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿತ್ತು.
*****
I’m honoured to be conferred with the ‘Great Honour Nishan of Ethiopia.’ I dedicate it to the 140 crore people of India. https://t.co/qVFdWQgU9r
— Narendra Modi (@narendramodi) December 16, 2025
मुझे ‘Great Honour Nishan of Ethiopia’ के रूप में, इस देश का सर्वोच्च सम्मान प्रदान किया गया है।
— PMO India (@PMOIndia) December 16, 2025
विश्व की अति-प्राचीन और समृद्ध सभ्यता द्वारा सम्मानित किया जाना, मेरे लिए बहुत गौरव की बात है: PM @narendramodi
मैं सभी भारतवासियों की ओर से इस सम्मान को पूरी विनम्रता और कृतज्ञता से ग्रहण करता हूँ ।
— PMO India (@PMOIndia) December 16, 2025
यह सम्मान उन अनगिनत भारतीयों का है जिन्होंने हमारी साझेदारी को आकार दिया: PM @narendramodi
आज जब पूरे विश्व की नजर ग्लोबल साउथ पर है, ऐसे में इथियोपिया की स्वाभिमान, स्वतंत्रता और आत्मगौरव की चिरकालीन परंपरा हम सभी के लिए सशक्त प्रेरणा है: PM @narendramodi
— PMO India (@PMOIndia) December 16, 2025
भविष्य उन्हीं partnerships का होता है जो विज़न और भरोसे पर आधारित हों।
— PMO India (@PMOIndia) December 16, 2025
हम इथियोपिया के साथ मिलकर ऐसे सहयोग को आगे बढ़ाने के लिए प्रतिबद्ध हैं जो बदलती वैश्विक चुनौतियों का समाधान भी करे और नई संभावनाओं का निर्माण भी करे: PM @narendramodi