Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೆಹಲಿಯಲ್ಲಿ ಡಿಸೆಂಬರ್ 27 ಮತ್ತು 28 ರಂದು ನಡೆಯಲಿರುವ ಐದನೇ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಡಿಸೆಂಬರ್ 27 ಮತ್ತು 28 ರಂದು ದೆಹಲಿಯಲ್ಲಿ ನಡೆಯಲಿರುವ ಐದನೇ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಅಭಿವೃದ್ಧಿ ಆದ್ಯತೆಗಳ ಕುರಿತು ವ್ಯವಸ್ಥಿತ ಮತ್ತು ನಿರಂತರ ಸಂವಾದದ ಮೂಲಕ ಕೇಂದ್ರ-ರಾಜ್ಯ ಪಾಲುದಾರಿಕೆಯನ್ನು ಬಲವರ್ಧನೆಗೊಳಿಸುವಲ್ಲಿ ಈ ಸಮ್ಮೇಳನವು ಮತ್ತೊಂದು ಪ್ರಮುಖ ಮೈಲಿಗಲ್ಲೆಂದು ಗುರುತಿಸಿಕೊಳ್ಳುತ್ತದೆ.

ಪ್ರಧಾನಮಂತ್ರಿಯವರ ಸಹಕಾರಿ ಒಕ್ಕೂಟ ವ್ಯವಸ್ಥೆಯ ದೂರದೃಷ್ಟಿಯಲ್ಲಿ ನೆಲೆಗೊಂಡಿರುವ ಈ ಸಮ್ಮೇಳನವು, ಕೇಂದ್ರ ಮತ್ತು ರಾಜ್ಯಗಳು ಸಹಕರಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಭಾರತದ ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ಸಮಗ್ರ, ಭವಿಷ್ಯಕ್ಕೆ ಸಿದ್ಧವಾಗಿರುವ ಬೆಳವಣಿಗೆಗೆ ವೇಗ ನೀಡಲು ಏಕೀಕೃತ ನೀಲನಕ್ಷೆಯನ್ನು ರೂಪಿಸುತ್ತದೆ.

2025ರ ಡಿಸೆಂಬರ್ 26 ರಿಂದ 28 ರವರೆಗೆ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನವು ಸಾಮಾನ್ಯ ಅಭಿವೃದ್ಧಿ ಕಾರ್ಯಸೂಚಿಯನ್ನು ಅಂತಿಮಗೊಳಿಸುವ ಗುರಿಯನ್ನು ಹೊಂದಿರುವ ವಿಸ್ತೃತ ಚರ್ಚೆಗಳಿಗೆ ಮೀಸಲಾಗಿರುತ್ತದೆ. ಭಾರತದ ಜನಸಂಖ್ಯೆಯನ್ನು ಕೇವಲ ಜನಸಂಖ್ಯಾ ಲಾಭಾಂಶವಾಗಿ ನೋಡುವುದನ್ನು ಮೀರಿ, ಶಿಕ್ಷಣ ವ್ಯವಸ್ಥೆಗಳನ್ನು ಬಲವರ್ಧನೆಗೊಳಿಸಲು ಕೌಶಲ್ಯ ಉಪಕ್ರಮಗಳನ್ನು ಮುನ್ನಡೆಸಲು ಮತ್ತು ದೇಶಾದ್ಯಂತ ಭವಿಷ್ಯಕ್ಕೆ ಸಿದ್ಧವಾಗಿರುವ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಮಗ್ರ ತಂತ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಾಗರಿಕರನ್ನು ಮಾನವ ಸಂಪನ್ಮೂಲವನ್ನಾಗಿರಿಸಲು ಇದು ಭದ್ರ ಬುನಾದಿ ಹಾಕಲಿದೆ.

ಕೇಂದ್ರ ಸಚಿವಾಲಯಗಳು/ಇಲಾಖೆಗಳು, ನೀತಿ ಆಯೋಗ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ವಿಷಯ ತಜ್ಞರ ನಡುವಿನ ವ್ಯಾಪಕ ಚರ್ಚೆಗಳ ಆಧಾರದ ಮೇಲೆ, ಐದನೇ ರಾಷ್ಟ್ರೀಯ ಸಮ್ಮೇಳನವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅನುಸರಿಸಬೇಕಾದ ಅತ್ಯುತ್ತಮ ಪದ್ಧತಿಗಳು ಮತ್ತು ತಂತ್ರಗಳನ್ನು ಒಳಗೊಂಡ ‘ವಿಕಸಿತ ಭಾರತಕ್ಕಾಗಿ ಮಾನವ ಸಂಪನ್ಮೂಲ’ ಎಂಬ ವಿಷಯದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತದೆ.

ಈ ಪ್ರಮುಖ ವಿಷಯದಡಿಯಲ್ಲಿ, ಐದು ಪ್ರಮುಖ ಕ್ಷೇತ್ರಗಳ ಮೇಲೆ ವಿಶೇಷ ಒತ್ತು ನೀಡಲಾಗುವುದು: ಆರಂಭಿಕ ಬಾಲ್ಯ ಶಿಕ್ಷಣ, ಶಾಲಾ ಶಿಕ್ಷಣ, ಕೌಶಲ್ಯ, ಉನ್ನತ ಶಿಕ್ಷಣ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳು, ಅವುಗಳನ್ನು ವಿವರವಾದ ಚರ್ಚೆಗಾಗಿ ಗುರುತಿಸಲಾಗಿದೆ.

ರಾಜ್ಯಗಳಲ್ಲಿ ಮೇಲಿನ ನಿಯಂತ್ರಣಗಳನ್ನು ತೆಗೆದುಹಾಕುವುದು; ಆಡಳಿತದಲ್ಲಿ ತಂತ್ರಜ್ಞಾನ: ಅವಕಾಶಗಳು, ಅಪಾಯಗಳು ಮತ್ತು ತಗ್ಗಿಸುವಿಕೆ; ಸ್ಮಾರ್ಟ್ ಸರಬರಾಜು ಸರಣಿ ಮತ್ತು ಮಾರುಕಟ್ಟೆ ಸಂಪರ್ಕಗಳಿಗಾಗಿ ಅಗ್ರಿಸ್ಟ್ಯಾಕ್; ಒಂದು ರಾಜ್ಯ, ಒಂದು ವಿಶ್ವ ದರ್ಜೆಯ ಪ್ರವಾಸಿ ತಾಣ; ಆತ್ಮನಿರ್ಭರ ಭಾರತ ಮತ್ತು ಸ್ವದೇಶಿ ಮತ್ತು ಎಂಡಪಂಥೀಯ ಬಂಡುಕೋರರ ನಿರ್ಮೂಲನೆ  ನಂತರದ ಭವಿಷ್ಯಕ್ಕಾಗಿ ಯೋಜನೆಗಳು ಎಂಬ ವಿಷಯಗಳ ಕುರಿತು ಆರು ವಿಶೇಷ ಗೋಷ್ಠಿಗಳು ನಡೆಯಲಿವೆ.

ಅಲ್ಲದೆ ಭೋಜನದ ಜೊತೆಗೆ ಪರಂಪರೆ ಮತ್ತು ಹಸ್ತಪ್ರತಿ ಸಂರಕ್ಷಣೆ ಕುರಿತು ಕೇಂದ್ರೀಕೃತ ಚರ್ಚೆಗಳು ಮತ್ತು ಡಿಜಿಟಲೀಕರಣ ಮತ್ತು ಸರ್ವರಿಗೂ ಆಯುಷ್ – ಪ್ರಾಥಮಿಕ ಆರೋಗ್ಯ ವಿತರಣೆಯಲ್ಲಿ ಜ್ಞಾನವನ್ನು ಸಂಯೋಜಿಸುವುದು ಎಂಬ ವಿಷಯಗಳ ಕುರಿತು ಚರ್ಚೆ ನಡೆಯಲಿವೆ.

ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನವನ್ನು ಕಳೆದ ನಾಲ್ಕು ವರ್ಷಗಳಿಂದ ವಾರ್ಷಿಕವಾಗಿ ಆಯೋಜಿಸಲಾಗುತ್ತಿದೆ. ಮೊದಲ ಸಮ್ಮೇಳನವನ್ನು ಜೂನ್ 2022 ರಲ್ಲಿ ಧರ್ಮಶಾಲಾದಲ್ಲಿ ಆಯೋಜಿಸಲಾಗಿತ್ತು, ನಂತರ ಜನವರಿ 2023, ಡಿಸೆಂಬರ್ 2023 ಮತ್ತು ಡಿಸೆಂಬರ್ 2024 ರಲ್ಲಿ ನವದೆಹಲಿಯಲ್ಲಿ ನಡೆಸಲಾಯಿತು.

ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು, ವಿಷಯ ತಜ್ಞರು ಸೇರಿದಂತೆ ಮತರರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

 

*****