Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದೆಹಲಿಯಲ್ಲಿ ನಡೆದ ವಾರ್ಷಿಕ ಎನ್‌ಸಿಸಿ ಪ್ರಧಾನಮಂತ್ರಿ ಪರೇಡ್ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ದೆಹಲಿಯಲ್ಲಿ ನಡೆದ ವಾರ್ಷಿಕ ಎನ್‌ಸಿಸಿ ಪ್ರಧಾನಮಂತ್ರಿ ಪರೇಡ್ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ದೆಹಲಿಯಲ್ಲಿ ಕಾರಿಯಪ್ಪ ಪರೇಡ್ ಮೈದಾನದಲ್ಲಿ ಇಂದು ನಡೆದ ವಾರ್ಷಿಕ ಎನ್‌ಸಿಸಿ ಪ್ರಧಾನಮಂತ್ರಿ ಪರೇಡನ್ನು (ರ‍್ಯಾಲಿಯನ್ನು)  ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಎನ್‌ಸಿಸಿ ದಿನದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಎನ್‌ಸಿಸಿ, ಎನ್‌ಎಸ್‌ಎಸ್ ಕೆಡೆಟ್‌ಗಳು, ಟ್ಯಾಬ್ಲೋ ಕಲಾವಿದರು, ರಾಷ್ಟ್ರೀಯ ರಂಗಶಾಲೆಯ ಸಹಚರರು ಮತ್ತು ದೇಶಾದ್ಯಂತದ ಯುವ ಪಾಲ್ಗೊಳ್ಳುವಿಕೆಯ ಪ್ರಯತ್ನಗಳು ಅವರ ಸಂಘಟಿತ ಪ್ರದರ್ಶನಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಹೇಳಿದರು. ಇಂದು ಬೆಳಿಗ್ಗೆ ಮಹಾರಾಷ್ಟ್ರದಲ್ಲಿ ಸಂಭವಿಸಿದ ವಿಮಾನ ಅಪಘಾತದಿಂದಾಗಿ ದಿನವು ತೀವ್ರ ದುಃಖವನ್ನುಂಟುಮಾಡಿದೆ ಎಂದು ಶ್ರೀ ಮೋದಿ ದುಃಖದಿಂದ ನುಡಿದರು, ಇದರಲ್ಲಿ ಉಪಮುಖ್ಯಮಂತ್ರಿ ಶ್ರೀ ಅಜಿತ್ ಪವಾರ್  ಅವರು ಮತ್ತು ಕೆಲವು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆ. ಅಜಿತ್ ದಾದಾ ಅವರು ಮಹಾರಾಷ್ಟ್ರ ಮತ್ತು ರಾಷ್ಟ್ರದ ಅಭಿವೃದ್ಧಿಗೆ, ವಿಶೇಷವಾಗಿ ಗ್ರಾಮೀಣ ಜೀವನವನ್ನು ಸುಧಾರಿಸಲು ಕೆಲಸ ಮಾಡುವ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ಎತ್ತಿ ತೋರಿಸಿದರು ಮತ್ತು ಶ್ರೀ ಅಜಿತ್ ಪವಾರ್ ಜೀ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದರು. ಈ ನೋವಿನ ಕ್ಷಣದಲ್ಲಿ, ಅಪಘಾತದಲ್ಲಿ ಮಡಿದವರ ಕುಟುಂಬಗಳೊಂದಿಗೆ ರಾಷ್ಟ್ರವು ನಿಂತಿದೆ ಎಂದು ಅವರು ಹೇಳಿದರು. ದುಃಖ ಮತ್ತು ಸಂತಾಪದ ಕ್ಷಣಗಳ ನಡುವೆ ಪ್ರಧಾನಿ, ಸ್ನೇಹಪರ ರಾಷ್ಟ್ರಗಳವರು ಸೇರಿದಂತೆ ಹಾಜರಿದ್ದ ಎಲ್ಲಾ ಕೆಡೆಟ್‌ಗಳಿಗೆ ಶುಭಾಶಯಗಳನ್ನು ತಿಳಿಸಿದರು ಮತ್ತು ವರ್ಷ ಬಾಲಕಿಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಗುರುತಿಸಿದರು.

“ಎನ್‌ಸಿಸಿ ಭಾರತದ ಯುವಜನರನ್ನು ಆತ್ಮವಿಶ್ವಾಸ, ಶಿಸ್ತುಬದ್ಧ, ಸೂಕ್ಷ್ಮ ಮತ್ತು ಸಮರ್ಪಿತ ನಾಗರಿಕರನ್ನಾಗಿ ಮಾಡುವ ಒಂದು ಆಂದೋಲನವಾಗಿದೆ” ಎಂದು ಶ್ರೀ ಮೋದಿ ಅವರು ಹೇಳಿದರು, ಪ್ರತಿ ವರ್ಷ ಕೆಡೆಟ್‌ಗಳು ತಮ್ಮ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತಿದ್ದಾರೆ ಎಂದೂ ಅವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಗಡಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಗಮನಾರ್ಹ ಬೆಳವಣಿಗೆಯೊಂದಿಗೆ ಎನ್‌ಸಿಸಿ ಕೆಡೆಟ್‌ಗಳ ಸಂಖ್ಯೆ 14 ಲಕ್ಷದಿಂದ 20 ಲಕ್ಷಕ್ಕೆ ಏರಿದೆ ಎಂದು ಅವರು ಉಲ್ಲೇಖಿಸಿದರು.

ದೇಶಾದ್ಯಂತ 150 ವರ್ಷಗಳ ವಂದೇ ಮಾತರಂ ಆಚರಣೆಯನ್ನು ಉತ್ಸಾಹದಿಂದ ಉಲ್ಲೇಖಿಸುತ್ತಾ ಪ್ರಧಾನಿಯವರು, ಯುವಜನರು ತಮ್ಮ ಪರಂಪರೆಯನ್ನು ಹೆಮ್ಮೆಯಿಂದ ಬದುಕುವ ವೇದಿಕೆ ಎನ್‌ಸಿಸಿ ಎಂದು ಹೇಳಿದರು. ಪರಮವೀರ ಸಾಗರ್ ಯಾತ್ರೆಯನ್ನು ಅವರು ಅತ್ಯುತ್ತಮ ಉದಾಹರಣೆ ಎಂದು ಉಲ್ಲೇಖಿಸಿದರು, ಕೆಲವು ವರ್ಷಗಳ ಹಿಂದೆ ಸರ್ಕಾರವು ಅಂಡಮಾನ್ ಮತ್ತು ನಿಕೋಬಾರ್‌ನ 21 ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಟ್ಟಿತ್ತು ಮತ್ತು ಕೆಡೆಟ್‌ಗಳು ತಮ್ಮ ನೌಕಾಯಾನ ಯಾತ್ರೆಯ ಮೂಲಕ ರಾಷ್ಟ್ರೀಯ ವೀರರನ್ನು ಗೌರವಿಸುವ ಮನೋಭಾವವನ್ನು ಮುಂದುವರಿಸಿಕೊಂಡು ಹೋದರು ಎಂದು ನೆನಪಿಸಿಕೊಂಡರು. ಲಕ್ಷದ್ವೀಪದಲ್ಲಿ, ದ್ವೀಪ ಉತ್ಸವದ ಮೂಲಕ, ಕೆಡೆಟ್‌ಗಳು ಸಾಗರ, ಸಂಸ್ಕೃತಿ ಮತ್ತು ಪ್ರಕೃತಿಯನ್ನು ಒಟ್ಟಿಗೆ ಸಂಭ್ರಮಿಸಿದರು ಎಂಬುದನ್ನೂ ಶ್ರೀ ಮೋದಿ ಅವರು ಹೇಳಿದರು.

ಎನ್‌ಸಿಸಿಯು  ಸ್ಮಾರಕಗಳಿಂದ ಹಿಡಿದು ಬೀದಿಗಳವರೆಗೆ ಇತಿಹಾಸವನ್ನು ಜೀವಂತಗೊಳಿಸಿದೆ ಎಂದು ಶ್ರೀ ಮೋದಿ ಹೇಳಿದರು, ಬಾಜಿರಾವ್ ಪೇಶ್ವೆ ಅವರ ಶೌರ್ಯ, ಮಹಾನ್ ಯೋಧ ಲಚಿತ್ ಬೋರ್ಫುಕನ್ ಅವರ ಕೌಶಲ್ಯ ಮತ್ತು ಭಗವಾನ್ ಬಿರ್ಸಾ ಮುಂಡಾ ಅವರ ನಾಯಕತ್ವವನ್ನು ತನ್ನ ಸೈಕಲ್ ಯಾತ್ರೆಯ ಮೂಲಕ ತೋರಿಸಿದೆ, ಇದು ಸಾರ್ವಜನಿಕ ಜಾಗೃತಿ ಮೂಡಿಸಿದೆ ಎಂದ ಅವರು ಎಲ್ಲಾ ಕೆಡೆಟ್‌ಗಳ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಇಂದು ಗೌರವಗಳನ್ನು ಪಡೆದವರಿಗೆ ಶುಭಾಶಯಗಳನ್ನು ತಿಳಿಸಿದರು.

ಕೆಂಪು ಕೋಟೆಯಿಂದ ತಾವು ಹೇಳಿದ ಮಾತುಗಳನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಇದು ಸರಿಯಾದ ಸಮಯ, ಅತ್ಯುತ್ತಮ ಸಮಯ ಎಂದು ಹೇಳಿದರು. ಇಂದಿನ ಯುಗವು ಭಾರತದ ಯುವಜನರಿಗೆ ಗರಿಷ್ಠ ಅವಕಾಶಗಳ ಯುಗವಾಗಿದೆ ಎಂದು ಹೇಳಿದರು. ಈ ಕಾಲಾವಧಿಯಿಂದ ಯುವಜನರು ಹೆಚ್ಚಿನ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು, ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ನಡೆದ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದವನ್ನು ಉದಾಹರಣೆಯಾಗಿ ಉಲ್ಲೇಖಿಸಿದರು. ಇದಕ್ಕೂ ಮೊದಲು, ಭಾರತವು ಓಮನ್, ನ್ಯೂಜಿಲೆಂಡ್, ಬ್ರಿಟನ್, ಯುಎಇ, ಆಸ್ಟ್ರೇಲಿಯಾ ಮತ್ತು ಮಾರಿಷಸ್‌ನೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿತ್ತು, ಇವೆಲ್ಲವೂ ಲಕ್ಷಾಂತರ ಯುವಜನರಿಗೆ ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು.

ಇಡೀ ಜಗತ್ತು ಭಾರತದ ಯುವಜನರನ್ನು ಹೆಚ್ಚಿನ ನಂಬಿಕೆಯಿಂದ ನೋಡುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಈ ನಂಬಿಕೆಗೆ ಕಾರಣ ಅವರ ಕೌಶಲ್ಯ ಮತ್ತು ಮೌಲ್ಯಗಳಲ್ಲಿದೆ ಎಂದು ಹೇಳಿದರು. ಭಾರತೀಯ ಯುವಜನರು ಮೌಲ್ಯಗಳು, ವೈವಿಧ್ಯತೆಯ ಗೌರವ ಮತ್ತು ಪ್ರಪಂಚದ ಮೇಲಿನ ನಂಬಿಕೆಯನ್ನು ಒಂದೇ ಕುಟುಂಬದ ರೀತಿಯಲ್ಲಿ ಹೊಂದಿದ್ದಾರೆ ಎಂದು ಅವರು ಹೇಳಿದರು, ಇದು ಅವರು ಎಲ್ಲಿಗೆ ಹೋದರೂ ಜನರೊಂದಿಗೆ ಸುಲಭವಾಗಿ ಮಿಳಿತಗೊಳ್ಳಲು ಮತ್ತು ರಾಷ್ಟ್ರಗಳ ಅಭಿವೃದ್ಧಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ. ಈ ಮೌಲ್ಯಗಳು ಭಾರತದ ಸಂಸ್ಕೃತಿ ಮತ್ತು ಪ್ರಕೃತಿ ಎಂದು ಪ್ರಧಾನಮಂತ್ರಿ ಗಮನಿಸಿದರು.

ಜಾಗತಿಕ ನಾಯಕರೊಂದಿಗಿನ ತಮ್ಮ ಸಂಭಾಷಣೆಗಳ ಆಧಾರದ ಮೇಲೆ ಹೇಳುವುದಾದರೆ, ಭಾರತೀಯ ಯುವಜನರು ಶ್ರಮಶೀಲರು ಮಾತ್ರವಲ್ಲ, ಅತ್ಯುತ್ತಮ ವೃತ್ತಿಪರರು ಕೂಡ ಎಂದು ಶ್ರೀ ಮೋದಿ ಪ್ರತಿಪಾದಿಸಿದರು, ಅದಕ್ಕಾಗಿಯೇ ಅವರಿಗೆ ವಿಶ್ವಾದ್ಯಂತ ಹೆಚ್ಚಿನ ಬೇಡಿಕೆಯಿದೆ. ಗಲ್ಫ್ ದೇಶಗಳಲ್ಲಿ ಲಕ್ಷಾಂತರ ಭಾರತೀಯರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ಮತ್ತು ಭಾರತೀಯ ವೈದ್ಯರು ಮತ್ತು ಎಂಜಿನಿಯರ್‌ಗಳು ಅನೇಕ ರಾಷ್ಟ್ರಗಳಲ್ಲಿ ಅತ್ಯುತ್ತಮ ಆರೋಗ್ಯ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಅವರು ಗಮನಸೆಳೆದರು. ಹಿಂದಿನ ಕಾಲದಲ್ಲಿ ವಿದೇಶಗಳಿಗೆ ಹೋದ ಭಾರತದ ಶಿಕ್ಷಕರು ಪ್ರಪಂಚದಾದ್ಯಂತದ ಸಮಾಜಗಳಿಗೆ ಹೊಸ ಮೌಲ್ಯಗಳನ್ನು ಸೇರಿಸಿದ್ದಾರೆ ಎಂದು ಅವರು ನೆನಪಿಸಿಕೊಂಡರು.

ಭಾರತೀಯ ಯುವಜನರು ಜಗತ್ತಿಗೆ ನೀಡಿದ ಕೊಡುಗೆಗಳ ಜೊತೆಗೆ, ದೇಶದೊಳಗಿನ ಅವರ ಸಾಧನೆಗಳನ್ನು ಜಾಗತಿಕವಾಗಿ ವ್ಯಾಪಕವಾಗಿ ಪ್ರಶಂಸಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ಯುವಜನರಿಂದಾಗಿ ಭಾರತವು ವಿಶ್ವಾದ್ಯಂತ ಮಾಹಿತಿ ತಂತ್ರಜ್ಞಾನದ ಬೆನ್ನೆಲುಬಾಗಿದೆ ಮತ್ತು ಈಗ ಅವರ ಸಾಮರ್ಥ್ಯವು ನವೋದ್ಯಮಗಳು, ಬಾಹ್ಯಾಕಾಶ, ಡಿಜಿಟಲ್ ತಂತ್ರಜ್ಞಾನ ಮತ್ತು ಪ್ರತಿಯೊಂದು ಕ್ಷೇತ್ರದಲ್ಲಿ ಕ್ರಾಂತಿಗಳನ್ನು ನಡೆಸುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಯುರೋಪಿಯನ್ ಒಕ್ಕೂಟದೊಂದಿಗೆ ಇತ್ತೀಚೆಗೆ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದವನ್ನು “ಎಲ್ಲಾ ಒಪ್ಪಂದಗಳ ತಾಯಿ” ಎಂದು ಹೊಗಳಲಾಗುತ್ತಿದೆ ಮತ್ತು ಜಾಗತಿಕವಾಗಿ ಒಂದು ಮಹತ್ವದ ಬದಲಾವಣೆಯನ್ನು ಅದು ತರಲಿದೆ ಎಂದು ಶ್ರೀ ಮೋದಿ ಹೇಳಿದರು. ಈ ಎಫ್.ಟಿ.ಎ.ವಿಶ್ವದ ಜಿ.ಡಿ.ಪಿ.ಯ  ನಾಲ್ಕನೇ ಒಂದು ಭಾಗ ಮತ್ತು ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ ಮತ್ತು ಇದು ಭಾರತದ ಯುವಜನರಿಗೆ ಅವರು ನಿಜವಾಗಿಯೂ “ಅಪೇಕ್ಷಿಸುವ ಸ್ವಾತಂತ್ರ್ಯ”ವಾಗಿದೆ ಎಂದು ಅವರು ಹೇಳಿದರು.

27 ದೇಶಗಳೊಂದಿಗಿನ ಒಪ್ಪಂದವು ಭಾರತೀಯ ನವೋದ್ಯಮಗಳಿಗೆ ಹಣಕಾಸು ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳಿಗೆ ಪ್ರವೇಶವನ್ನು ಸರಾಗಗೊಳಿಸುವ ಮೂಲಕ ಪ್ರಯೋಜನವನ್ನು ನೀಡುತ್ತದೆ ಮತ್ತು ಚಲನಚಿತ್ರ, ಗೇಮಿಂಗ್, ಫ್ಯಾಷನ್, ಡಿಜಿಟಲ್ ವಿಷಯ ಸಾಮಗ್ರಿ, ಸಂಗೀತ ಮತ್ತು ವಿನ್ಯಾಸದಲ್ಲಿ ಭಾರತದ ಸೃಜನಶೀಲ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಒಪ್ಪಂದವು ಭಾರತೀಯ ಯುವಜನರಿಗೆ ಸಂಶೋಧನೆ, ಶಿಕ್ಷಣ, ಐಟಿ ಮತ್ತು ವೃತ್ತಿಪರ ಸೇವೆಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದೂ ಅವರು ಹೇಳಿದರು.

ಒಪ್ಪಂದವು ತನ್ನ ಅಪಾರ ಪ್ರಯೋಜನಗಳ ಕಾರಣದಿಂದಾಗಿ “ಎಲ್ಲಾ ಒಪ್ಪಂದಗಳ ತಾಯಿ” ಎಂದು ಕರೆಯಲ್ಪಡುತ್ತದೆ ಎಂದು ತಿಳಿಸಿದ ಶ್ರೀ ಮೋದಿ, ಇದು ಆತ್ಮನಿರ್ಭರ ಭಾರತ ಅಭಿಯಾನವನ್ನು ವೇಗಗೊಳಿಸುತ್ತದೆ ಮತ್ತು “ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್” ನ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಒತ್ತಿ ಹೇಳಿದರು. ಈ ಒಪ್ಪಂದದ ಅಡಿಯಲ್ಲಿ, ಭಾರತದ ರಫ್ತಿನ 99 ಪ್ರತಿಶತಕ್ಕೂ ಹೆಚ್ಚು ಸಾಮಗ್ರಿಗಳಿಗೆ ಸುಂಕಗಳು ಶೂನ್ಯ ಅಥವಾ ತುಂಬಾ ಕಡಿಮೆ ಇರುತ್ತವೆ, ಇದು ಜವಳಿ, ಚರ್ಮ, ರತ್ನಗಳು ಮತ್ತು ಆಭರಣಗಳು, ಪಾದರಕ್ಷೆಗಳು, ಎಂಜಿನಿಯರಿಂಗ್ ಸರಕುಗಳು ಮತ್ತು ಎಂ.ಎಸ್.ಎಂ.ಇ. ಗಳಂತಹ ಕೈಗಾರಿಕೆಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ವಿವರಿಸಿದರು. ನೇಕಾರರು, ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಿಗಳು 27 ಯುರೋಪಿಯನ್ ದೇಶಗಳ ವಿಶಾಲ ಮಾರುಕಟ್ಟೆಗಳಿಗೆ ನೇರ ಪ್ರವೇಶವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.

ಒಪ್ಪಂದವು ಭಾರತಕ್ಕೆ ಹೆಚ್ಚಿನ ಹೂಡಿಕೆಯನ್ನು ತರುತ್ತದೆ, ಇದು ಹೊಸ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್, ರಾಸಾಯನಿಕ, ಔಷಧ ಮತ್ತು ಇತರ ಉತ್ಪಾದನಾ ಘಟಕಗಳಿಗೆ ಕಾರಣವಾಗುತ್ತದೆ ಮತ್ತು ಕೃಷಿ, ಆಹಾರ ಸಂಸ್ಕರಣೆ ಹಾಗು ಮೀನುಗಾರಿಕೆಗೆ ಖಚಿತವಾದ ಮಾರುಕಟ್ಟೆಗಳನ್ನು ಸೃಷ್ಟಿಸುತ್ತದೆ, ಇದು ರೈತರು, ಮೀನುಗಾರರು ಮತ್ತು ಗ್ರಾಮೀಣ ಯುವಜನರಿಗೆ ಪ್ರಮುಖ ಅವಕಾಶವಾಗಿದೆ ಎಂದು ಪ್ರಧಾನಿ ಹೇಳಿದರು. ಈ ಎಫ್.ಟಿ.ಎ. ಭಾರತದ ಯುವಜನರನ್ನು ಯುರೋಪಿನ ಉದ್ಯೋಗ ಮಾರುಕಟ್ಟೆಗೆ ನೇರವಾಗಿ ಸಂಪರ್ಕಿಸುತ್ತದೆ, ವಿಶೇಷವಾಗಿ ಎಂಜಿನಿಯರಿಂಗ್, ಹಸಿರು ತಂತ್ರಜ್ಞಾನ, ವಿನ್ಯಾಸ, ಲಾಜಿಸ್ಟಿಕ್ಸ್ ಮತ್ತು ಆಧುನಿಕ ಉತ್ಪಾದನೆಯಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು, ಅಂದರೆ 27 ದೇಶಗಳಲ್ಲಿ ಭಾರತೀಯ ಯುವಜನರಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತಿವೆ.

ಸರ್ಕಾರವು ಸಮಗ್ರ ಸುಧಾರಣೆಗಳ ಮೂಲಕ ಜಾಗತಿಕ ಅವಕಾಶಗಳನ್ನು ವಿಸ್ತರಿಸುತ್ತಿದೆ ಮತ್ತು ಇಂದು ರಾಷ್ಟ್ರವು ಸಾಗುತ್ತಿರುವ ಸುಧಾರಣೆಯ ಹಾದಿಯು ಯುವಜನರ ಮುಂದಿರುವ ಪ್ರತಿಯೊಂದು ಅಡೆತಡೆಗಳನ್ನು ತೆಗೆದುಹಾಕುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ದೇಶದ ಮುಂದೆ ಬೆಳೆಯುತ್ತಿರುವ ಅವಕಾಶಗಳು, ಎನ್‌ಸಿಸಿ ಕೆಡೆಟ್‌ಗಳಲ್ಲಿ ಇರುವ ಶಿಸ್ತು ಮತ್ತು ಮೌಲ್ಯಗಳೊಂದಿಗೆ ಸೇರಿ, ಅವರಿಗೆ ಹೆಚ್ಚುವರಿ ಪ್ರಯೋಜನವಾಗಲಿದೆ ಎಂದು ಅವರು ನುಡಿದರು.

ಆಪರೇಷನ್ ಸಿಂಧೂರ್ ಕುರಿತಾದ ಪ್ರಭಾವಶಾಲಿ ಟ್ಯಾಬ್ಲೋವನ್ನು ಶ್ಲಾಘಿಸಿದ ಶ್ರೀ ಮೋದಿ, ರಾಷ್ಟ್ರೀಯ ಭದ್ರತೆಗಾಗಿ ನಿರ್ಣಾಯಕ ಕ್ಷಣದಲ್ಲಿ ಎನ್‌ಸಿಸಿ ಕೆಡೆಟ್‌ಗಳ ಪ್ರಯತ್ನಗಳನ್ನು ವಿಶೇಷವಾಗಿ ಶ್ಲಾಘಿಸಿದರು. ಸಶಸ್ತ್ರ ಪಡೆಗಳನ್ನು ಬೆಂಬಲಿಸುವಲ್ಲಿ, ರಕ್ತದಾನ ಶಿಬಿರಗಳನ್ನು ಆಯೋಜಿಸುವಲ್ಲಿ ಮತ್ತು ಪ್ರಥಮ ಚಿಕಿತ್ಸಾ ಸೇವೆಗಳನ್ನು ಒದಗಿಸುವಲ್ಲಿ ಅವರು ನೀಡಿದ ಕೊಡುಗೆಗಳನ್ನು ಅವರು ಗಮನಿಸಿದರು. ಎನ್‌ಸಿಸಿ ತರಬೇತಿಯು ಪರೇಡ್ ಮೈದಾನಕ್ಕೆ ಸೀಮಿತವಾಗಿಲ್ಲ, ಜೊತೆಗೆ  ಕಷ್ಟದ ಸಮಯದಲ್ಲಿ ದೇಶಕ್ಕಾಗಿ ಪೂರ್ಣ ಶಕ್ತಿಯಿಂದ ಕೆಲಸ ಮಾಡಲು ಕೆಡೆಟ್‌ಗಳನ್ನು ಪ್ರೇರೇಪಿಸುವ “ರಾಷ್ಟ್ರ ಮೊದಲು” ಎಂಬ ಮನೋಭಾವವನ್ನು ಹುಟ್ಟುಹಾಕುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಎನ್‌ಸಿಸಿಯಲ್ಲಿದ್ದಾಗ “ರಾಷ್ಟ್ರ ಮೊದಲು” ಎಂಬ ತಮ್ಮ ಸ್ವಂತ ಭಾವನೆಯನ್ನು ಬಲಪಡಿಸಲಾಯಿತು ಎಂಬುದನ್ನು ಅವರು ನೆನಪಿಸಿಕೊಂಡರು ಮತ್ತು ಇಂದು ಕೆಡೆಟ್‌ಗಳು ಕಲಿಯುತ್ತಿರುವ ಅದೇ ಮೌಲ್ಯಗಳನ್ನು ನೋಡಿ ಅವರು ತೃಪ್ತಿ ವ್ಯಕ್ತಪಡಿಸಿದರು .

ಆಪರೇಷನ್ ಸಿಂಧೂರ್ ಭಾರತದ ಶಕ್ತಿ ಮತ್ತು ಅದರ ಸಶಸ್ತ್ರ ಪಡೆಗಳ ಶೌರ್ಯವನ್ನು ಪುನರುಚ್ಚರಿಸಿತು ಎಂದು ಹೇಳಿದ ಶ್ರೀ ಮೋದಿ, ಇದು ಸ್ಥಳೀಯ ಶಸ್ತ್ರಾಸ್ತ್ರಗಳ ಪ್ರಗತಿಯನ್ನು ಸಹ ಪ್ರದರ್ಶಿಸಿದೆ ಎಂದು ಹೇಳಿದರು. ಆಧುನಿಕ ಯುದ್ಧದಲ್ಲಿ, ಯುವ ಕೌಶಲ್ಯಗಳ ಪಾತ್ರ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದರು, ಏಕೆಂದರೆ ಯುದ್ಧಗಳು ಈಗ ಟ್ಯಾಂಕ್‌ಗಳು ಮತ್ತು ಬಂದೂಕುಗಳಿಂದ ಮಾತ್ರವಲ್ಲದೆ ಕೋಡ್ ಮತ್ತು ಕ್ಲೌಡ್‌ನಲ್ಲಿಯೂ ನಡೆಯುತ್ತವೆ. ತಂತ್ರಜ್ಞಾನದಲ್ಲಿ ಹಿಂದುಳಿದಿರುವ ರಾಷ್ಟ್ರಗಳು ಆರ್ಥಿಕತೆಯಲ್ಲಿ ಮಾತ್ರವಲ್ಲದೆ ಭದ್ರತೆಯಲ್ಲೂ ದುರ್ಬಲವಾಗುತ್ತವೆ ಎಂದು ಅವರು ಎಚ್ಚರಿಸಿದರು ಮತ್ತು ಯುವಜನರ ನಾವೀನ್ಯತೆ/ಅನ್ವೇಷಣೆಯು  ದೇಶಭಕ್ತಿಯನ್ನು ಬಲಪಡಿಸುತ್ತದೆ ಹಾಗು ರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುತ್ತದೆ ಎಂದೂ ಹೇಳಿದರು. ಸಶಸ್ತ್ರ ಪಡೆಗಳಲ್ಲಿ ತಂತ್ರಜ್ಞಾನ-ಪ್ರಣೀತ ನಾವೀನ್ಯತೆ ಶೋಧಿಸುವ ಯುವಜನರಿಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದು ಅವರು ಹೇಳಿದರು. ರಕ್ಷಣಾ ನವೋದ್ಯಮಗಳು ಉತ್ತಮ ಸಾಧನೆ ಮಾಡುತ್ತಿವೆ, ಭಾರತದಲ್ಲಿ ತಯಾರಿಸಿದ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಕೃತಕ ಬುದ್ಧಿಮತ್ತೆ ಹಾಗು ರಕ್ಷಣಾ ನಾವೀನ್ಯತೆಗಳು ಪಡೆಗಳನ್ನು ಆಧುನೀಕರಿಸುತ್ತಿವೆ, ಎಂದ ಅವರು ಯುವಜನರು ಸಾಧ್ಯತೆಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ಆಗ್ರಹಿಸಿದರು.

ಇತ್ತೀಚೆಗೆ ಜನವರಿ 25 ರಂದು ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗಿದೆ ಎಂಬುದನ್ನು ಪ್ರಧಾನಿ ಉಲ್ಲೇಖಿಸಿದರು, ಮತ್ತು ಸಂದರ್ಭದಲ್ಲಿ ನಾಗರಿಕರಿಗೆ ಪತ್ರ ಬರೆದುದನ್ನೂ ಪ್ರಸ್ತಾಪಿಸಿದರು. ರಾಷ್ಟ್ರೀಯ ಮತದಾರರ ದಿನವು ಸಂವಿಧಾನವು ನೀಡಿರುವ ಜವಾಬ್ದಾರಿ ಮತ್ತು ಹಕ್ಕುಗಳ ಆಚರಣೆಯಾಗಿದೆ ಎಂದು ಅವರು ಹೇಳಿದರು ಮತ್ತು ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವ ಮತದಾರರನ್ನು ಹೊಂದಿದೆ ಎಂಬುದನ್ನೂ ಅವರು ಎತ್ತಿ ತೋರಿಸಿದರು. ಯುವ ನಾಗರಿಕರು 18 ವರ್ಷ ತುಂಬಿದಾಗ ಮತ್ತು ಮತದಾನ ಮಾಡಲು ಅರ್ಹರಾದಾಗ, ಅವರು ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿಯನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು. ದೇಶದಲ್ಲಿ ಹೊಸ ಸಂಪ್ರದಾಯ ರೂಪಿಸುವುದಕ್ಕೆ ಕರೆ ನೀಡಿದ ಶ್ರೀ ಮೋದಿ, ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ಮೈ ಯಂಗ್ ಇಂಡಿಯಾ ಸಂಘಟನೆಯು ಪ್ರತಿ ಜನವರಿ 25 ರಂದು ಮೊದಲ ಬಾರಿಗೆ ಮತದಾರರನ್ನು ಗೌರವಿಸಲು ಒಂದು ಭವ್ಯ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ಪ್ರಸ್ತಾಪಿಸಿದರು, ಈ ಪ್ರಯತ್ನವು ಯುವಜನರಲ್ಲಿ ಜವಾಬ್ದಾರಿಯ ಪ್ರಜ್ಞೆಯನ್ನು ಬಲಪಡಿಸುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

“ಅಭಿವೃದ್ಧಿ ಹೊಂದಿದ ಭಾರತವು ಆರ್ಥಿಕ ಸಮೃದ್ಧಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ನಾಗರಿಕರ ನಡವಳಿಕೆಯ ಮೇಲೆಯೂ ಅವಲಂಬಿತವಾಗಿದೆ, ಅವರು ತಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡಬೇಕು” ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಸ್ವಚ್ಛ ಭಾರತ ಅಭಿಯಾನವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಸರ್ಕಾರವು ಇದನ್ನು ಪ್ರಾರಂಭಿಸಿದರೂ, ನಾಗರಿಕರು, ಯುವಜನರು ಮತ್ತು ಮಕ್ಕಳು ಇದನ್ನು ಮುಂದಕ್ಕೆ ಸಾಗಿಸಿದರು ಮತ್ತು ಸ್ವಚ್ಛತೆಯು ಒಂದು ಅಭ್ಯಾಸ, ಜೀವನಶೈಲಿ ಮತ್ತು ಮೌಲ್ಯವಾಗಿದೆ ಎಂದು ಹೇಳಿದರು. ನಾಗರಿಕ ಕರ್ತವ್ಯದ ಮನೋಭಾವವು ದೈನಂದಿನ ಜೀವನದ ಭಾಗವಾಗಬೇಕು ಮತ್ತು ಜನರು ತಮ್ಮ ಸ್ವಂತ ಅಂಗಳದಲ್ಲಿ ಸೌಂದರ್ಯವನ್ನು ಬಯಸುವಂತೆಯೇ, ಅವರು ತಮ್ಮ ನಗರಗಳನ್ನು ಸಹ ಅದೇ ಮನೋಭಾವದಿಂದ ಸುಂದರಗೊಳಿಸಬೇಕು ಎಂದು ಶ್ರೀ ಮೋದಿ ಒತ್ತಾಯಿಸಿದರು. ಸ್ವಚ್ಛತೆಗೆ ಸಂಬಂಧಿಸಿದ ಅಭಿಯಾನಕ್ಕಾಗಿ ಪ್ರತಿ ವಾರ ಕನಿಷ್ಠ ಒಂದು ಗಂಟೆಯನ್ನು ಮೀಸಲಿಡಲು ಮತ್ತು ಆಯ್ಕೆಮಾಡಿದ ಸ್ಥಳದಲ್ಲಿ ಕೆಲವು ಚಟುವಟಿಕೆಗಳನ್ನು ಯೋಜಿಸಲು ಹಾಜರಿರುವ ಪ್ರತಿಯೊಬ್ಬ ಯುವಜನರಿಗೂ ಅವರು ಮನವಿ ಮಾಡಿದರು.

“ಏಕ್ ಪೆಡ್ ಮಾ ಕೆ ನಾಮ್” ಅಭಿಯಾನದಡಿಯಲ್ಲಿ ಎನ್‌ಸಿಸಿ ಸುಮಾರು 8 ಲಕ್ಷ ಗಿಡಗಳನ್ನು ನೆಟ್ಟಿದೆ ಎಂದು ತಿಳಿದು ಸಂತೋಷವಾಯಿತು ಎಂದು ಪ್ರಧಾನಿ ಮೋದಿ ಹೇಳಿದರು ಮತ್ತು ಗಿಡಗಳು ಚೆನ್ನಾಗಿ ಬೆಳೆಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯವೂ ಆಗಿದೆ ಎಂದರು.

ಮುಂಬರುವ ದಿನಗಳಲ್ಲಿ ನಾವು ಎಷ್ಟು ಸದೃಢರಾಗುತ್ತೇವೆ ಎಂಬುದು ಯುವ ಶಕ್ತಿಯ ಎದುರಿರುವ ದೊಡ್ಡ ಪರೀಕ್ಷೆ ಎಂದು ಒತ್ತಿ ಹೇಳಿದ ಪ್ರಧಾನಿ, ಫಿಟ್ನೆಸ್ ಕೆಲವು ನಿಮಿಷಗಳ ವ್ಯಾಯಾಮಕ್ಕೆ ಸೀಮಿತವಾಗಿರಬಾರದು, ಬದಲಿಗೆ ಆಹಾರ ಪದ್ಧತಿಯಿಂದ ಹಿಡಿದು ದೈನಂದಿನ ದಿನಚರಿಯವರೆಗೆ ಶಿಸ್ತುಬದ್ಧ ಜೀವನಶೈಲಿಯೊಂದಿಗೆ ನಮ್ಮ ಸ್ವಭಾವದ ಭಾಗವಾಗಬೇಕು ಎಂದು ಹೇಳಿದರು. ಎನ್‌ಸಿಸಿ ಕೆಡೆಟ್‌ಗಳು ಫಿಟ್ ಇಂಡಿಯಾ ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಶ್ರೀ ಮೋದಿ ಸಂತೋಷ ವ್ಯಕ್ತಪಡಿಸಿದರು.

ಯುವಜನರಲ್ಲಿ ಬೊಜ್ಜಿನ ಸಮಸ್ಯೆಯನ್ನು ಪ್ರಸ್ತಾಪಿಸಿದ ಪ್ರಧಾನಿ, ಭವಿಷ್ಯದ ಭಾರತದಲ್ಲಿ ಪ್ರತಿ ಮೂರು ಜನರಲ್ಲಿ ಒಬ್ಬರು ಬೊಜ್ಜಿನಿಂದ ಬಳಲಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ ಎಂಬುದನ್ನು ಉಲ್ಲೇಖಿಸಿದರು.  ಇದು ಮಧುಮೇಹ, ರಕ್ತದೊತ್ತಡ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಇದರಲ್ಲಿ ಯುವಜನರು ಹೆಚ್ಚು ಬಾಧಿತ ಗುಂಪು ಆಗಿರುತ್ತಾರೆ ಎಂದೆಚ್ಚರಿಸಿದ ಪ್ರಧಾನಿ . ಅವರು ಜಾಗರೂಕತೆ ವಹಿಸಬೇಕಾದ  ಅಗತ್ಯವನ್ನು ಒತ್ತಿ ಹೇಳಿದರು ಮತ್ತು ತೈಲ ಸೇವನೆಯನ್ನು ಕಡಿಮೆ ಮಾಡಲು ಒತ್ತಾಯಿಸಿದರು, ಆಹಾರದಲ್ಲಿ ತೈಲ ಸೇವನೆಯನ್ನು ಶೇಕಡಾ 10 ರಷ್ಟು ಕಡಿತಗೊಳಿಸುವ ತಮ್ಮ ಹಿಂದಿನ ಮನವಿಯನ್ನು ಪುನರುಚ್ಚರಿಸಿದರು.

ಎನ್‌ಸಿಸಿ ಮೆರವಣಿಗೆಯನ್ನು/ಪರೇಡನ್ನು ಕಲಿಸುವುದಲ್ಲದೆ ನಾಗರಿಕರಾಗುವ ಜವಾಬ್ದಾರಿಯನ್ನು ಹುಟ್ಟುಹಾಕುತ್ತದೆ, ಕೆಡೆಟ್‌ಗಳು ಉತ್ತಮ ನಾಗರಿಕರಾಗಲು ಸಹಾಯ ಮಾಡುವ ಕೌಶಲ್ಯ ಮತ್ತು ಮೌಲ್ಯಗಳನ್ನು ನೀಡುತ್ತದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಗಣರಾಜ್ಯೋತ್ಸವದ ಸಮಯದಲ್ಲಿ ಪಡೆದ ಅನುಭವಗಳು ಅವರ ವ್ಯಕ್ತಿತ್ವವನ್ನು ಮತ್ತಷ್ಟು ಪರಿಷ್ಕರಿಸುತ್ತವೆ ಎಂದು ಗಮನಿಸಿದರು. ಪ್ರಧಾನಿಯವರು ತಮ್ಮ ಶುಭಾಶಯಗಳನ್ನು ತಿಳಿಸುವ ಮೂಲಕ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು, ಅವರು ಜೀವನದ ಪ್ರತಿಯೊಂದು ಪರೀಕ್ಷೆಯಲ್ಲಿಯೂ ಯಶಸ್ವಿಯಾಗುತ್ತಾರೆ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೊಡುಗೆ ನೀಡುತ್ತಲೇ ಇರುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕೇಂದ್ರ ಸಚಿವರುಗಳಾದ ಶ್ರೀ ರಾಜನಾಥ್ ಸಿಂಗ್, ಡಾ. ಮನ್ಸುಖ್ ಮಾಂಡವಿಯಾ, ಶ್ರೀ ಸಂಜಯ್ ಸೇಠ್, ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ವರ್ಷದ ವಾರ್ಷಿಕ ಎನ್‌ಸಿಸಿ ಪ್ರಧಾನಮಂತ್ರಿ ಪರೇಡ್ ವಿಷಯ ಶೀರ್ಷಿಕೆ  ‘ರಾಷ್ಟ್ರ ಪ್ರಥಮ – ಕರ್ತವ್ಯ ನಿಷ್ಠ ಯುವ’, ಇದು ಭಾರತದ ಯುವಜನರಲ್ಲಿ ಕರ್ತವ್ಯ, ಶಿಸ್ತು ಮತ್ತು ರಾಷ್ಟ್ರೀಯ ಬದ್ಧತೆಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.

ಎನ್‌ಸಿಸಿ ಪ್ರಧಾನಮಂತ್ರಿ  ಪರೇಡ್  ಒಂದು ತಿಂಗಳ ಕಾಲ ನಡೆದ ಎನ್‌ಸಿಸಿ ಗಣರಾಜ್ಯೋತ್ಸವ ಶಿಬಿರ 2026 ರ ಭವ್ಯ ಸಮಾರೋಪ ಸಮಾರಂಭವಾಗಿದ್ದು, ಇದರಲ್ಲಿ 898 ಬಾಲಕಿಯರು ಸೇರಿದಂತೆ ದೇಶಾದ್ಯಂತ 2,406 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ 21 ವಿದೇಶಗಳಿಂದ 207 ಯುವಜನರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಂದರ್ಭದಲ್ಲಿ, ಎನ್‌ಸಿಸಿ ಕೆಡೆಟ್‌ಗಳು, ರಾಷ್ಟ್ರೀಯ ರಂಗಶಾಲೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸದಸ್ಯರು ರಾಷ್ಟ್ರ ನಿರ್ಮಾಣ, ಸಾಮಾಜಿಕ ಸೇವೆ ಮತ್ತು ವ್ಯಕ್ತಿತ್ವ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವನ್ನು ಪ್ರದರ್ಶಿಸುವ ರೋಮಾಂಚಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಾರೆ.

 

******