ಪಿಎಂಇಂಡಿಯಾ
ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ವಿಂಗ್ಸ್ ಇಂಡಿಯಾ 2026 ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಉದ್ಯಮದ ಮುಖಂಡರು, ತಜ್ಞರು ಮತ್ತು ಹೂಡಿಕೆದಾರರನ್ನು ಸ್ವಾಗತಿಸಿದರು, ಮುಂದಿನ ವಾಯುಯಾನ ಉದ್ಯಮದ ಯುಗವು ಆಕಾಂಕ್ಷೆಗಳಿಂದ ತುಂಬಿದೆ ಮತ್ತು ಭಾರತವು ಪ್ರಮುಖ ಆಟಗಾರನಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು. ವಿಮಾನ ತಯಾರಿಕೆ, ಪೈಲಟ್ ತರಬೇತಿ, ಸುಧಾರಿತ ವಾಯು ಚಲನಶೀಲತೆ ಮತ್ತು ವಿಮಾನ ಗುತ್ತಿಗೆಯಲ್ಲಿ ಭಾರತವು ಒದಗಿಸುವ ವಿಶಾಲ ಅವಕಾಶಗಳನ್ನು ಅವರು ಉಲ್ಲೇಖಿಸಿದರು, ಎಲ್ಲಾ ಪಾಲುದಾರರಿಗೆ ವಿಂಗ್ಸ್ ಇಂಡಿಯಾ ಶೃಂಗಸಭೆಯ ಮಹತ್ವವನ್ನು ಹೇಳಿದರು.
ಕಳೆದ ದಶಕದಲ್ಲಿ, ಭಾರತದ ವಾಯುಯಾನ ವಲಯವು ಐತಿಹಾಸಿಕ ಪರಿವರ್ತನೆಗೆ ಒಳಗಾಗಿದೆ ಎಂದು ಶ್ರೀ ಮೋದಿ ಹೇಳಿದರು, ಒಂದು ಕಾಲದಲ್ಲಿ ವಿಮಾನ ಪ್ರಯಾಣವು ವಿಶೇಷ ಕ್ಲಬ್‌ಗೆ ಸೀಮಿತವಾಗಿತ್ತು ಆದರೆ ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಾಯುಯಾನ ಮಾರುಕಟ್ಟೆಯಾಗಿದೆ ಎಂದು ನೆನಪಿಸಿಕೊಂಡರು. ಪ್ರಯಾಣಿಕರ ದಟ್ಟಣೆ ವೇಗವಾಗಿ ಬೆಳೆದಿದೆ ಮತ್ತು ಭಾರತೀಯ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನ ಹಾರಾಟಗಳನ್ನು (ಫ್ಲೀಟ್‌ಗಳನ್ನು) ವಿಸ್ತರಿಸುತ್ತಿವೆ, ಇತ್ತೀಚಿನ ವರ್ಷಗಳಲ್ಲಿ 1,500 ಕ್ಕೂ ಹೆಚ್ಚು ವಿಮಾನಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂಬುದರತ್ತ ಅವರು ಗಮನಸೆಳೆದರು.
ಪ್ರತಿಯೊಬ್ಬ ನಾಗರಿಕನು ವಿಮಾನದ ಮೂಲಕ ಸುಲಭವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವ ಧ್ಯೇಯದೊಂದಿಗೆ, ಸರ್ಕಾರದ ದೀರ್ಘಕಾಲೀನ ದೃಷ್ಟಿಕೋನದಿಂದಾಗಿ, ವಿಮಾನ ಯಾನ ಕೆಲವರಿಗಷ್ಟೇ ಸೀಮಿತವಾಗಿರುವುದಕ್ಕಿಂತ ಹೆಚ್ಚಾಗಿ ವಿಮಾನ ಪ್ರಯಾಣವನ್ನು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿರುವುದರಿಂದ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 2014 ರಲ್ಲಿ ಭಾರತದಲ್ಲಿ 70 ವಿಮಾನ ನಿಲ್ದಾಣಗಳಿದ್ದವು, ಆದರೆ ಇಂದು ಈ ಸಂಖ್ಯೆ 160 ಕ್ಕಿಂತ ಹೆಚ್ಚಾಗಿದೆ. ಅಂದರೆ ದೇಶವು ಕೇವಲ ಒಂದು ದಶಕದಲ್ಲಿ ಎರಡು ಪಟ್ಟು ಹೆಚ್ಚು ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ ಎಂದು ಅವರು ಹೇಳಿದರು. 100 ಕ್ಕೂ ಹೆಚ್ಚು ಏರೋಡ್ರೋಮ್ ಸಕ್ರಿಯಗೊಳಿಸಲಾಗಿದೆ ಮತ್ತು ಇದರೊಂದಿಗೆ, ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣವನ್ನು ಸಾಧ್ಯಮಾಡಲು ಸರ್ಕಾರವು ಉಡಾನ್ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಶ್ರೀ ಮೋದಿ ಹೇಳಿದರು. ಉಡಾನ್‌ನ ಪರಿಣಾಮವಾಗಿ, 15 ಮಿಲಿಯನ್ ಪ್ರಯಾಣಿಕರು – ಅಂದರೆ ಸುಮಾರು ಒಂದೂವರೆ ಕೋಟಿ ಜನರು- ವಿಮಾನ ಮಾರ್ಗದಲ್ಲಿ ಪ್ರಯಾಣಿಸಿದ್ದಾರೆ, ಅವುಗಳಲ್ಲಿ ಹಲವು ಮಾರ್ಗಗಳು ಹಿಂದೆ ಅಸ್ತಿತ್ವದಲ್ಲಿರಲಿಲ್ಲ ಎಂದು ಅವರು ಹೇಳಿದರು.
ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ಸಾಗುತ್ತಿದ್ದಂತೆ, ವಾಯು ಸಂಪರ್ಕದ ವಿಸ್ತರಣೆಯು ಹಲವು ಪಟ್ಟು ಹೆಚ್ಚಾಗುವುದು ಖಚಿತ ಎಂದು ಪ್ರಧಾನಿ ಮೋದಿ ಹೇಳಿದರು. 2047 ರ ವೇಳೆಗೆ, ಭಾರತವು 400 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದುವ ನಿರೀಕ್ಷೆಯಿದೆ, ಇದು ವಿಶಾಲವಾದ ಜಾಲವನ್ನು ಸೃಷ್ಟಿಸುತ್ತದೆ ಎಂದು ಅವರು ಎತ್ತಿ ತೋರಿಸಿದರು. ದೇಶದ ಮೂಲೆ ಮೂಲೆಗಳಲ್ಲಿ ಸಂಪರ್ಕವನ್ನು ಸುಧಾರಿಸುವ ಗುರಿಯೊಂದಿಗೆ ಸಮುದ್ರ-ವಿಮಾನ ಕಾರ್ಯಾಚರಣೆಗಳ ವಿಸ್ತರಣೆಯ ಜೊತೆಗೆ ಪ್ರಾದೇಶಿಕ ಮತ್ತು ಕೈಗೆಟುಕುವ ವಾಯು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉಡಾನ್ ಯೋಜನೆಯ ಮುಂದಿನ ಹಂತದಲ್ಲಿ ಸರ್ಕಾರ ಕಾರ್ಯನಿರತವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದರು.
ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸುವತ್ತ ಸರ್ಕಾರವು ಗಮನಹರಿಸುತ್ತಿದೆ ಎಂದು ಹೇಳಿದ ಶ್ರೀ ಮೋದಿ, ದೇಶಾದ್ಯಂತ ಪ್ರವಾಸಿ ತಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಮತ್ತು ಹೆಚ್ಚಿನ ಸಂಖ್ಯೆಯ ಜನರಿಗೆ ವಾಯುಯಾನವು ಆದ್ಯತೆಯ ಆಯ್ಕೆಯಾಗುತ್ತಿದೆ ಎಂದು ಹೇಳಿದರು. ಮುಂಬರುವ ವರ್ಷಗಳಲ್ಲಿ ವಾಯುಯಾನದ ಬೇಡಿಕೆ ಅಭೂತಪೂರ್ವ ಬೆಳವಣಿಗೆಯನ್ನು ಕಾಣಲಿದೆ, ಇದು ಹೂಡಿಕೆಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.
ಭಾರತವು ಪ್ರಮುಖ ಜಾಗತಿಕ ವಾಯುಯಾನ ಕೇಂದ್ರವಾಗಿ ಹೊರಹೊಮ್ಮುತ್ತಿದ್ದಂತೆ, ವಾಯುಯಾನ ಅಗತ್ಯಗಳಿಗಾಗಿ ಇತರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಸ್ವಾವಲಂಬನೆಯ ಹಾದಿಯನ್ನು ಬಲಪಡಿಸುವುದು ಅತ್ಯಗತ್ಯ ಎಂದು ಪ್ರಧಾನಿ ಪ್ರತಿಪಾದಿಸಿದರು, ಇದು ಭಾರತದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೂ ಪ್ರಯೋಜನವನ್ನು ನೀಡುತ್ತದೆ. ವಿಮಾನ ವಿನ್ಯಾಸ, ಉತ್ಪಾದನೆ ಮತ್ತು ವಿಮಾನ ಎಂ.ಆರ್.ಒ. (ವಿಮಾನ ಸುರಕ್ಷತೆಗೆ ಸಂಬಂಧಿಸಿದ ವಿಮಾನ ನಿರ್ವಹಣೆ, ದುರಸ್ತಿ ಮತ್ತು ಅವಶ್ಯ ಸಲಕರಣೆಗಳ ಸಹಿತ ಸಮಗ್ರ ದುರಸ್ತಿ) ಪರಿಸರ ವ್ಯವಸ್ಥೆ ನಿರ್ಮಾಣದ ಮೇಲೆ ಭಾರತ ಬಲವಾದ ಒತ್ತು ನೀಡುತ್ತಿದೆ ಎಂದು ಶ್ರೀ ಮೋದಿ ಅವರು ಉಲ್ಲೇಖಿಸಿದರು. ಭಾರತವು ಈಗಾಗಲೇ ವಿಮಾನ ಭಾಗಗಳ ಪ್ರಮುಖ ತಯಾರಕ ಮತ್ತು ಪೂರೈಕೆದಾರ ಎಂದು ಅವರು ಹೇಳಿದರು. ಭಾರತವು ದೇಶೀಯವಾಗಿ ಮಿಲಿಟರಿ ಮತ್ತು ಸಾರಿಗೆ ವಿಮಾನಗಳನ್ನು ಉತ್ಪಾದಿಸಲು ಪ್ರಾರಂಭಿಸಿದೆ ಮತ್ತು ನಾಗರಿಕ ವಿಮಾನ ತಯಾರಿಕೆಯಲ್ಲಿಯೂ ಮುಂದುವರಿಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜಾಗತಿಕ ವಾಯು ಕಾರಿಡಾರ್‌ಗಳಲ್ಲಿ ಅದರ ಭೌಗೋಳಿಕ ಸ್ಥಾನ, ಹೋಲಿಕೆಯಿಲ್ಲದ ದೇಶೀಯ ಫೀಡರ್ ನೆಟ್‌ವರ್ಕ್ ಮತ್ತು ಭವಿಷ್ಯದಲ್ಲಿ ದೀರ್ಘ-ಪ್ರಯಾಣದ ಫ್ಲೀಟ್‌ಗಳ ವಿಸ್ತರಣೆ ಸೇರಿದಂತೆ ಭಾರತದ ಅನುಕೂಲತೆಗಳತ್ತ ಅವರು ಗಮನಸೆಳೆದರು, ಇವು ಒಟ್ಟಾಗಿ ಒಂದು ದೊಡ್ಡ ಶಕ್ತಿಯನ್ನು ರೂಪಿಸುತ್ತವೆ ಎಂದರು..
ರನ್ ವೇ ಗಳ ಅಗತ್ಯವಿಲ್ಲದೆ ವಿದ್ಯುತ್ ಶಕ್ತಿಯಿಂದ ಆಗಸಕ್ಕೆ ಏರುವ ಮತ್ತು ಭೂಮಿಗೆ ಇಳಿಯುವ ಮತ್ತು ಭಾರತದಲ್ಲಿ ವಿನ್ಯಾಸಗೊಳಿಸಿ ತಯಾರಿಸಲಾದ ವಿಮಾನಗಳು ವಾಯುಯಾನ ವಲಯಕ್ಕೆ ಹೊಸ ದಿಕ್ಕನ್ನು ನೀಡುವ ದಿನ ದೂರವಿಲ್ಲ ಎಂದು ಪ್ರಧಾನಮಂತ್ರಿ ಅವರು ಹೇಳಿದರು, ಇದು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಭಾರತವು ಸುಸ್ಥಿರ ವಾಯುಯಾನ ಇಂಧನದ ಮೇಲೆ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಮುಂಬರುವ ವರ್ಷಗಳಲ್ಲಿ ಹಸಿರು ವಾಯುಯಾನ ಇಂಧನದ ಪ್ರಮುಖ ಉತ್ಪಾದಕ ಮತ್ತು ರಫ್ತುದಾರನಾಗಲು ಸಜ್ಜಾಗಿದೆ ಎಂದು ಅವರು ಹೇಳಿದರು.
ಭಾರತವು ವಾಯುಯಾನ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಇದರ ಪರಿಣಾಮವಾಗಿ, ದೇಶವು ಜಾಗತಿಕ ದಕ್ಷಿಣ ಮತ್ತು ಪ್ರಪಂಚದ ನಡುವಿನ ಪ್ರಮುಖ ವಾಯುಯಾನ ಹೆಬ್ಬಾಗಿಲಾಗಿ ಹೊರಹೊಮ್ಮುತ್ತಿದೆ ಎಂದೂ ಹೇಳಿದರು. ಇದು ವಾಯುಯಾನ ಉದ್ಯಮಕ್ಕೆ ಸಂಬಂಧಿಸಿದ ಹೂಡಿಕೆದಾರರು ಮತ್ತು ತಯಾರಕರಿಗೆ ಗಮನಾರ್ಹ ಅವಕಾಶಗಳನ್ನು ಒದಗಿಸುತ್ತದೆ ಎಂದರು.
ಭಾರತವು ವಿವಿಧ ಪ್ರದೇಶಗಳು ಮತ್ತು ಮಾರುಕಟ್ಟೆಗಳನ್ನು ಸಂಪರ್ಕಿಸುತ್ತಿದೆ, ನಗರಗಳನ್ನು ಬಂದರುಗಳಿಗೆ ಬಹು ಸಾರಿಗೆ ವಿಧಾನಗಳ ಮೂಲಕ ಸಂಪರ್ಕಿಸಲಾಗುತ್ತಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ಭಾರತದ ವಾಯುಯಾನ ದೃಷ್ಟಿಕೋನವು ವಾಯು ಸರಕು ಸಾಗಣೆಯ ಮೇಲೆ ಸಮಾನವಾಗಿ ಕೇಂದ್ರೀಕೃತವಾಗಿದೆ ಮತ್ತು ಸರಕು ಸಾಗಣೆಯನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸರ್ಕಾರವು ಅಗತ್ಯವಿರುವ ಎಲ್ಲಾ ನಿಯಂತ್ರಕ ಸುಧಾರಣೆಗಳ ಮೇಲೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಡಿಜಿಟಲ್ ಸರಕು ವೇದಿಕೆಗಳು ಸಂಪೂರ್ಣ ಪ್ರಕ್ರಿಯೆಯನ್ನು ಸರಳಗೊಳಿಸುತ್ತಿವೆ ಮತ್ತು ಹೆಚ್ಚು ಪಾರದರ್ಶಕಗೊಳಿಸುತ್ತಿವೆ, ಜೊತೆಗೆ ವಿಮಾನ ನಿಲ್ದಾಣದ ಹೊರಗೆ ಸಂಸ್ಕರಣಾ ವ್ಯವಸ್ಥೆಗಳು ವಿಮಾನ ನಿಲ್ದಾಣಗಳ ಮೇಲಿನ ಹೊರೆ ಕಡಿಮೆ ಮಾಡುತ್ತಿವೆ ಎಂದು ಅವರು ಹೇಳಿದರು. ಸರಕು ನಿರ್ವಹಣೆಯನ್ನು ಸುಧಾರಿಸಲು ಮತ್ತು ವೇಗಗೊಳಿಸಲು ಆಧುನಿಕ ಗೋದಾಮುಗಳನ್ನು ನಿರ್ಮಿಸಲಾಗುತ್ತಿದೆ, ಇದು ಭವಿಷ್ಯದಲ್ಲಿ ವಿತರಣಾ ಸಮಯ ಮತ್ತು ಲಾಜಿಸ್ಟಿಕ್ಸ್ ವೆಚ್ಚ ಎರಡನ್ನೂ ಕಡಿಮೆ ಮಾಡುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಭಾರತವು ಪ್ರಮುಖ ಮತ್ತು ಸ್ಪರ್ಧಾತ್ಮಕ ಟ್ರಾನ್ಸ್‌ಶಿಪ್‌ಮೆಂಟ್ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದ ಶ್ರೀ ಮೋದಿ, ಗೋದಾಮು, ಸರಕು ಸಾಗಣೆ, ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ ಮತ್ತು ಇ-ಕಾಮರ್ಸ್ ವಲಯಗಳಲ್ಲಿನ ಅವಕಾಶಗಳನ್ನು ಅನ್ವೇಷಿಸಲು ಹೂಡಿಕೆದಾರರನ್ನು ಆಗ್ರಹಿಸಿದರು.
ಇಂದು ವಿಶ್ವದ ಕೆಲವೇ ದೇಶಗಳು ಭಾರತದಂತಹ ದೊಡ್ಡ ಪ್ರಮಾಣದ, ನೀತಿ ಸ್ಥಿರತೆ ಮತ್ತು ತಾಂತ್ರಿಕ ಮಹತ್ವಾಕಾಂಕ್ಷೆಯನ್ನು ಹೊಂದಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರತಿಯೊಂದು ರಾಷ್ಟ್ರ, ಪ್ರತಿಯೊಂದು ಉದ್ಯಮದ ನಾಯಕ ಮತ್ತು ಪ್ರತಿಯೊಬ್ಬ ನಾವೀನ್ಯಕಾರರು ಈ ಸುವರ್ಣ ಅವಕಾಶದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು. ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ದೀರ್ಘಾವಧಿಯ ಪಾಲುದಾರರಾಗಲು ಮತ್ತು ಜಾಗತಿಕ ವಾಯುಯಾನ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡುವಂತೆ ಅವರನ್ನು ಶ್ರೀ ಮೋದಿ ಅವರು ಒತ್ತಾಯಿಸಿದರು. ಭಾರತದ ವಾಯುಯಾನದಲ್ಲಿ ಜೊತೆಗಾರರಾಗಿ ಸೇರಲು ವಿಶ್ವಾದ್ಯಂತ ಹೂಡಿಕೆದಾರರನ್ನು ಆಹ್ವಾನಿಸುವ ಮೂಲಕ ಅವರು ಮಾತುಗಳನ್ನು ಮುಕ್ತಾಯಗೊಳಿಸಿದರು ಮತ್ತು ವಿಂಗ್ಸ್ ಇಂಡಿಯಾದ ಯಶಸ್ವಿ ಸಂಘಟನೆಗೆ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸಿದರು.
*******
LIVE. PM @narendramodi’s remarks during the Wings India 2026 programme. https://t.co/wv7aWgN1JM
— PMO India (@PMOIndia) January 28, 2026