Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ಗುವಾಹಟಿಯಲ್ಲಿ ₹19,4800 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು; ದೇಶಾದ್ಯಂತದ ಕೋಟ್ಯಂತರ ರೈತರಿಗೆ ₹18,000 ಕೋಟಿಗೂ ಹೆಚ್ಚಿನ ಮೊತ್ತದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಬಿಡುಗಡೆ ಮಾಡಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಸ್ಸಾಂನ ಗುವಾಹಟಿಯಲ್ಲಿ ₹19,4800 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು; ದೇಶಾದ್ಯಂತದ ಕೋಟ್ಯಂತರ ರೈತರಿಗೆ ₹18,000 ಕೋಟಿಗೂ ಹೆಚ್ಚಿನ ಮೊತ್ತದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಬಿಡುಗಡೆ ಮಾಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಗುವಾಹಟಿಯಲ್ಲಿ ಸುಮಾರು ₹19,4800 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಪ್ರಧಾನಮಂತ್ರಿಯವರು ಗುವಾಹಟಿಯಲ್ಲಿ ನಡೆದ ಭವ್ಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ನಗರದ ಜನರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ದೇಶಾದ್ಯಂತದಿಂದ ಕಾರ್ಯಕ್ರಮದಲ್ಲಿ ಸೇರಿದ್ದ  ರೈತರು ಹಾಗೂ ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಸಹೋದರ,  ಸಹೋದರಿಯರನ್ನು ಅವರು ಸ್ವಾಗತಿಸಿದರು. ನವರಾತ್ರಿಯ ಮುನ್ನಾದಿನದಂದು ಮಾ ಕಾಮಾಖ್ಯ ಅವರ ಪವಿತ್ರ ಭೂಮಿಯಲ್ಲಿ ಇರುವ ಸೌಭಾಗ್ಯಕ್ಕಾಗಿ ಪ್ರಧಾನಮಂತ್ರಿಯವರು ಕೃತಜ್ಞತೆ ಸಲ್ಲಿಸಿದರು. “ನವರಾತ್ರಿ ಪ್ರಾರಂಭವಾಗುವ ಸ್ವಲ್ಪ ಮೊದಲು ಮಾ ಕಾಮಾಖ್ಯ ಅವರ ಪವಿತ್ರ ಭೂಮಿಯಲ್ಲಿ ನಿಮ್ಮ ದರ್ಶನ ಪಡೆಯುವ ಭಾಗ್ಯ ನನಗೆ ದೊರೆತಿದೆ” ಎಂದು ಶ್ರೀ ಮೋದಿ ಅವರು ಹೇಳಿದರು.

ಮಾತೆ ಕಾಮಾಖ್ಯಾ ಅವರ ಆಶೀರ್ವಾದದಿಂದ ₹19,500 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗಳು ಬಹಳ ವೇಗವಾಗಿ ನಡೆದವು ಎಂದು ಪ್ರಧಾನಮಂತ್ರಿ ಹೇಳಿದರು. ಅಸ್ಸಾಂನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಗುರಿಯನ್ನು ಹೊಂದಿರುವ ಯೋಜನೆಗಳಿಂದ ಹಿಡಿದು ಅಸ್ಸಾಂಗೆ ಪ್ರಯಾಣಿಸುವ ಜನರ ಅನುಕೂಲವನ್ನು ಹೆಚ್ಚಿಸುವ ಕೆಲಸಗಳವರೆಗೆ ಅಸ್ಸಾಂ ಹಲವಾರು ಯೋಜನೆಗಳನ್ನು ಪಡೆದಿದೆ ಎಂದು ಪ್ರಧಾನಮಂತ್ರಿ ಮೋದಿ ಗಮನಿಸಿದರು. ದೇಶದ ರೈತರು ಮತ್ತು ಅಸ್ಸಾಂನ ಚಹಾ ತೋಟಗಳ ಕಾರ್ಮಿಕರಿಗೆ ಇದು ಸ್ಮರಣೀಯ ದಿನವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ₹18,000 ಕೋಟಿಗೂ ಹೆಚ್ಚು ಹಣವನ್ನು ದೇಶಾದ್ಯಂತದ ಕೋಟ್ಯಂತರ ಅನ್ನದಾತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ ಎಂದು ಶ್ರೀ ಮೋದಿ ಸಭೆಗೆ ತಿಳಿಸಿದರು. ಅಸ್ಸಾಂನ ಚಹಾ ತೋಟಗಳಿಗೆ ಸಂಬಂಧಿಸಿದ ಹಲವಾರು ಕುಟುಂಬಗಳಿಗೆ ಭೂ ಪಟ್ಟಾಗಳನ್ನು ವಿತರಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. “ಅಸ್ಸಾಂನ ಜನರಿಗೆ, ಇಲ್ಲಿನ ಎಲ್ಲಾ ಕುಟುಂಬಗಳಿಗೆ ಮತ್ತು ದೇಶಾದ್ಯಂತದ ರೈತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಶ್ರೀ ಮೋದಿ ನುಡಿದರು.

ದೇಶಾದ್ಯಂತದ ರೈತರು ಮಾ ಕಾಮಾಖ್ಯ ಅವರ ಪವಿತ್ರ ಭೂಮಿಯಿಂದ ಕಾರ್ಯಕ್ರಮದ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಕೋಟ್ಯಂತರ ರೈತರು ಈಗಾಗಲೇ ತಮ್ಮ ಖಾತೆಗಳಿಗೆ ಪಿಎಂ ಕಿಸಾನ್ ನಿಧಿಯ ಠೇವಣಿ ದೃಢೀಕರಿಸುವ ಸಂದೇಶಗಳನ್ನು ಸ್ವೀಕರಿಸಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಅವರು ಹೇಳಿದರು. ಈ ಯೋಜನೆಯನ್ನು ನಿಜವಾಗಿಯೂ ಅಸಾಧಾರಣ ಎಂದು ಪ್ರಧಾನಮಂತ್ರಿ ಬಣ್ಣಿಸಿದರು. ಇವರು ರೈತ ಸಹೋದರ ಸಹೋದರಿಯರು ಎಂದು ಶ್ರೀ ಮೋದಿ ನೆನಪಿಸಿಕೊಂಡರು, ಅವರಲ್ಲಿ ಹೆಚ್ಚಿನವರಿಗೆ 2014 ಕ್ಕಿಂತ ಮೊದಲು ಮೊಬೈಲ್ ಫೋನ್ ಅಥವಾ ಬ್ಯಾಂಕ್ ಖಾತೆ ಇರಲಿಲ್ಲ. ಇಲ್ಲಿಯವರೆಗೆ, ಅಂತಹ ಕೋಟ್ಯಂತರ ರೈತರ ಖಾತೆಗಳಿಗೆ ₹4.25 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಜಮಾ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಸಭೆಗೆ ತಿಳಿಸಿದರು. ಅಸ್ಸಾಂನಲ್ಲಿಯೇ ಸುಮಾರು 19 ಲಕ್ಷ ರೈತರು ಇಲ್ಲಿಯವರೆಗೆ ಸುಮಾರು ₹8,000 ಕೋಟಿ ಪಡೆದಿದ್ದಾರೆ ಎಂದು ಪ್ರಧಾನಮಂತ್ರಿ ಮೋದಿ ನಿರ್ದಿಷ್ಟವಾಗಿ ತಿಳಿಸಿದರು. “ಇದು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಹ ಸಾಧಿಸಲು ಸಾಧ್ಯವಾಗದ ವಿಷಯ, ಒಂದು ಕ್ಲಿಕ್‌ನಲ್ಲಿ ಹಣವು ನೇರವಾಗಿ ಕೋಟ್ಯಂತರ ರೈತರನ್ನು ತಲುಪುತ್ತದೆ” ಎಂದೂ ಶ್ರೀ ಮೋದಿ ಉಲ್ಲೇಖಿಸಿದರು.

“ಇಂದು, ಸಮ್ಮಾನ್ ನಿಧಿ ಯೋಜನೆ ದೇಶದ ಸಣ್ಣ ರೈತರಿಗೆ ಸಾಮಾಜಿಕ ಭದ್ರತೆಯ ಮಾಧ್ಯಮವಾಗಿದೆ” ಎಂದು ಶ್ರೀ ಮೋದಿ ಅವರು ಹೇಳಿದರು. ಪ್ರಸ್ತುತ ಸರ್ಕಾರಕ್ಕೆ ರೈತರ ಕಲ್ಯಾಣಕ್ಕಿಂತ ಬೇರೇನೂ ಮುಖ್ಯವಲ್ಲ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಕಳೆದ 10 ವರ್ಷಗಳಲ್ಲಿ ರೈತರು 20 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಕನಿಷ್ಠ ಬೆಂಬಲ ಬೆಲೆಯನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.

ಕಳೆದ 11 ವರ್ಷಗಳಲ್ಲಿ, ಪ್ರಸ್ತುತ ಸರ್ಕಾರವು ದೇಶದ ರೈತರ ಸುತ್ತಲೂ ಬಲವಾದ ರಕ್ಷಣಾ ಕವಚವನ್ನು ಹೆಣೆದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಎಂಎಸ್‌ಪಿ, ಕೈಗೆಟುಕುವ ಸಾಲಗಳು, ಬೆಳೆ ವಿಮೆ ಅಥವಾ ಪಿಎಂ ಕಿಸಾನ್ ಸಮ್ಮಾನ್ ನಿಧಿ –ಈ ಯೋಜನೆಗಳು ರೈತರಿಗೆ ಬೃಹತ್ ಬೆಂಬಲ ವ್ಯವಸ್ಥೆಯಾಗಿ ಮಾರ್ಪಟ್ಟಿವೆ ಎಂದು ಪ್ರಧಾನಮಂತ್ರಿ ಮೋದಿ ಉಲ್ಲೇಖಿಸಿದರು. ಅಂತಾರಾಷ್ಟ್ರೀಯ ಬಿಕ್ಕಟ್ಟುಗಳು ಕೃಷಿ ಮತ್ತು ಬೆಳೆಯ ಮೇಲೆ ಪರಿಣಾಮ ಬೀರದಂತೆ ಸರ್ಕಾರ ಜಾಗರೂಕವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೋವಿಡ್ ಸಾಂಕ್ರಾಮಿಕ ಮತ್ತು ನಂತರದ ಯುದ್ಧಗಳಿಂದಾಗಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ಬೆಲೆಗಳು ಹಲವಾರು ಪಟ್ಟು ಹೆಚ್ಚಾಗಿವೆ ಮತ್ತು ವಿದೇಶಿ ಮಾರುಕಟ್ಟೆಗಳಿಂದ ರಸಗೊಬ್ಬರಗಳನ್ನು ಖರೀದಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಶ್ರೀ ಮೋದಿ ನೆನಪಿಸಿಕೊಂಡರು. ಈ ಬಿಕ್ಕಟ್ಟಿನಿಂದ ರೈತರನ್ನು ರಕ್ಷಿಸಲು ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹3,000 ಬೆಲೆಯ ಯೂರಿಯಾ ಚೀಲವನ್ನು ಸರ್ಕಾರವು ಭಾರತೀಯ ರೈತರಿಗೆ ಕೇವಲ ₹300 ಗೆ ಒದಗಿಸಿದೆ ಎಂದು ಅವರು ಗಮನಸೆಳೆದರು. “ಜಾಗತಿಕ ರಸಗೊಬ್ಬರ ಬೆಲೆ ಏರಿಕೆಯ ಹೊರೆ ನಮ್ಮ ರೈತರ ಮೇಲೆ ಬೀಳದಂತೆ ನೋಡಿಕೊಳ್ಳಲು ಸರ್ಕಾರ ತನ್ನದೇ ಆದ ಖಜಾನೆಯಿಂದ ₹12 ಲಕ್ಷ ಕೋಟಿಗೂ ಹೆಚ್ಚು ಖರ್ಚು ಮಾಡಿದೆ” ಎಂದು ಶ್ರೀ ಮೋದಿ ಅವರು ತಿಳಿಸಿದರು.

ಕಳೆದ ದಶಕದಲ್ಲಿ, ಪ್ರಸ್ತುತ ಸರ್ಕಾರವು ಸ್ವಾವಲಂಬನೆಯತ್ತ ಒಂದು ಮಹತ್ವದ ಉಪಕ್ರಮವನ್ನು ಕೈಗೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬಾಹ್ಯ ಬಿಕ್ಕಟ್ಟುಗಳಿಂದ ಕೃಷಿಯನ್ನು ರಕ್ಷಿಸಲು ಸ್ವಾವಲಂಬನೆಯನ್ನು ಉತ್ತೇಜಿಸಲಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. ಸ್ವತಂತ್ರ ಭಾರತದಲ್ಲಿ, ಪ್ರಪಂಚದ ಇತರ ಭಾಗಗಳಲ್ಲಿ ಯುದ್ಧಗಳು ಅಥವಾ ಪೂರೈಕೆ ಸರಪಳಿಗಳಲ್ಲಿನ ಅಡಚಣೆಗಳು ಭಾರತೀಯ ರೈತರಿಗೆ ತೊಂದರೆ ಉಂಟುಮಾಡುತ್ತವೆ, ಕೆಲವೊಮ್ಮೆ ರಸಗೊಬ್ಬರಗಳು ದುಬಾರಿಯಾಗುತ್ತವೆ, ಕೆಲವೊಮ್ಮೆ ಡೀಸೆಲ್ ಮತ್ತು ಇಂಧನದ ಬೆಲೆಗಳು ಗಗನಕ್ಕೇರುತ್ತವೆ ಎಂಬುದರತ್ತ  ಪ್ರಧಾನಮಂತ್ರಿ ಅವರು ಗಮನ ಸೆಳೆದರು.

ಕೃಷಿಯನ್ನು ಹೊಸ ತಂತ್ರಜ್ಞಾನದೊಂದಿಗೆ ಸಂಪರ್ಕಿಸುವುದು, ರೈತರಿಗೆ ಹೊಸ ನೀರಾವರಿ ವಿಧಾನಗಳೊಂದಿಗೆ ಸಂಪರ್ಕಿಸುವುದು ಮತ್ತು ಬೆಳೆಗಳು ಸಹ ಪ್ರಯೋಜನ ಪಡೆಯುವಂತೆ ಮಾಡುವುದು ಸರ್ಕಾರದ ದೂರದೃಷ್ಟಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಉದ್ದೇಶದಿಂದ ಸರ್ಕಾರವು ‘ಪ್ರತಿ ಹನಿಗೂ ಹೆಚ್ಚಿನ ಬೆಳೆ’ ನೀತಿಯನ್ನು ಅಳವಡಿಸಿಕೊಂಡಿದೆ ಹಾಗು ಹನಿ ಮತ್ತು ಸ್ಪ್ರಿಂಕ್ಲರ್ ವ್ಯವಸ್ಥೆಗಳಂತಹ ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳನ್ನು ರೈತರಿಗೆ ತಂದಿದೆ ಎಂದು ಪ್ರಧಾನಮಂತ್ರಿ ಮೋದಿ ಗಮನಿಸಿದರು. ಇದು ನೀರಾವರಿಯನ್ನು ಸುಧಾರಿಸಿದೆ ಮತ್ತು ವೆಚ್ಚವನ್ನು ಕಡಿಮೆ ಮಾಡಿದೆ ಎಂದು ಪ್ರಧಾನಮಂತ್ರಿ ಎತ್ತಿ ತೋರಿಸಿದರು. ಡೀಸೆಲ್ ಮೇಲಿನ ರೈತರ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರವು ಈಗ ಜಮೀನುಗಳನ್ನು ಸೌರ ಪಂಪ್‌ಗಳೊಂದಿಗೆ ಸಂಪರ್ಕಿಸಲು ಕೆಲಸ ಮಾಡುತ್ತಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಕೇಂದ್ರವು ಪ್ರಾರಂಭಿಸಿರುವ ಕುಸುಮ್ ಯೋಜನೆಯನ್ನು ನಿಖರವಾಗಿ ಉದ್ದೇಶಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. “ಇಂದು ಅನೇಕ ರೈತರು ಸೌರ ಪಂಪ್‌ಗಳ ಮೂಲಕ ನೀರಾವರಿ ಮಾಡುವುದಲ್ಲದೆ, ವಿದ್ಯುತ್ ಉತ್ಪಾದಿಸುತ್ತಿದ್ದಾರೆ ಮತ್ತು ಅದರಿಂದ ಹಣ ಗಳಿಸುತ್ತಿದ್ದಾರೆ” ಎಂದು ಶ್ರೀ ಮೋದಿ ಅವರು ನುಡಿದರು.

ರೈತರು ರಸಗೊಬ್ಬರ ಮತ್ತು ಕೀಟನಾಶಕಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಸ್ತುತ ಸರ್ಕಾರವು ರಸಗೊಬ್ಬರ ಕಾರ್ಖಾನೆಗಳನ್ನು ಪುನರುಜ್ಜೀವನಗೊಳಿಸಿದೆ ಮತ್ತು ರೈತರನ್ನು ನ್ಯಾನೋ ಯೂರಿಯಾದೊಂದಿಗೆ ಸಂಪರ್ಕಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು ಮತ್ತು ಇಂದು ದೇಶದ ರೈತರು ಅದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಪ್ರಸ್ತುತ ಸರ್ಕಾರವು ರೈತರನ್ನು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ ಎಂದೂ ಶ್ರೀ ಮೋದಿ ಹೇಳಿದರು. “ರೈತರು ಬೃಹತ್ ಪ್ರಮಾಣದಲ್ಲಿ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಾಗ, ಮಣ್ಣು ಸುರಕ್ಷಿತವಾಗಿ ಉಳಿಯುತ್ತದೆ ಮತ್ತು ನಮ್ಮ ಅನ್ನದಾತರು ಜಾಗತಿಕ ಬಿಕ್ಕಟ್ಟುಗಳಿಂದ ರಕ್ಷಿಸಲ್ಪಡುತ್ತಾರೆ” ಎಂದು ಶ್ರೀ ಮೋದಿ ಅವರು ಹೇಳಿದರು.

ಪ್ರಸ್ತುತ ಸರ್ಕಾರ ರೈತರಿಗಾಗಿ ಅವಿಶ್ರಾಂತವಾಗಿ ಶ್ರಮಿಸುತ್ತಿದೆ ಮತ್ತು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಸ್ತುತ ಸರ್ಕಾರ ಭಾರತದ ಸಂಸ್ಕರಣಾಗಾರಗಳ ಅಭಿವೃದ್ಧಿ ಮತ್ತು ಸಂಸ್ಕರಣಾ ಸಾಮರ್ಥ್ಯದ ವಿಸ್ತರಣೆಗೆ ಶ್ರಮಿಸಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಇಂದು ಭಾರತವು ತನ್ನದೇ ಆದ ಇಂಧನ ಅಗತ್ಯಗಳನ್ನು ಮಾತ್ರವಲ್ಲದೆ ವಿಶ್ವದ ಇಂಧನ ಅಗತ್ಯಗಳನ್ನು ಸಹ ನೋಡಿಕೊಳ್ಳಬಲ್ಲ ದೇಶವಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. ಕಳೆದ ವರ್ಷಗಳಲ್ಲಿ ಅಸ್ಸಾಂನಲ್ಲಿನ ಸಂಸ್ಕರಣಾಗಾರಗಳನ್ನು ವಿಸ್ತರಿಸಲಾಗಿದೆ ಎಂದು ಪ್ರಧಾನಮಂತ್ರಿ ಗಮನಿಸಿದರು. ಅಸ್ಸಾಂ ಮತ್ತು ಇಡೀ ಈಶಾನ್ಯದಲ್ಲಿ ಅನಿಲ ಪೈಪ್‌ಲೈನ್ ಮೂಲಸೌಕರ್ಯದಲ್ಲಿ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ ಎಂಬುದರತ್ತ ಶ್ರೀ ಮೋದಿ ಅವರು ಗಮನಸೆಳೆದರು. ನುಮಲಿಗಢ-ಸಿಲಿಗುರಿ ಪೈಪ್‌ಲೈನ್‌ನ ಮೇಲ್ದರ್ಜೆಗೇರಿಸುವಿಕೆ ಪೂರ್ಣಗೊಂಡಿದೆ ಮತ್ತು ವಿಶ್ವದ ಮೊದಲ ಎರಡನೇ ತಲೆಮಾರಿನ ಜೈವಿಕ-ಎಥೆನಾಲ್ ಸ್ಥಾವರವನ್ನು ಅಸ್ಸಾಂನ ಗೋಲಾಘಾಟ್‌ನಲ್ಲಿ ಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. “ಈ ಎಲ್ಲಾ ಯೋಜನೆಗಳು ಇಡೀ ಪ್ರದೇಶಕ್ಕೆ ಅಪಾರ ಪ್ರಯೋಜನಗಳನ್ನು ತರುತ್ತವೆ” ಎಂದು ಶ್ರೀ ಮೋದಿ ಅವರು ತಿಳಿದರು.

ವಿದೇಶಿ ಸಂಪನ್ಮೂಲಗಳ ಮೇಲಿನ ರೈಲ್ವೆಯ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ತೈಲ ಆಮದನ್ನು ಕಡಿಮೆ ಮಾಡಲು ಕಳೆದ ದಶಕದಲ್ಲಿ ಗಣನೀಯ ಕೆಲಸ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ದೇಶದ ಬಹುತೇಕ ಇಡೀ ರೈಲು ಜಾಲವು ವಿದ್ಯುತ್ ಮಾರ್ಗಗಳ ಮೂಲಕ ಸಂಪರ್ಕಗೊಂಡಿದೆ ಮತ್ತು ಶೇ. 100 ರಷ್ಟು ವಿದ್ಯುದ್ದೀಕರಣದ ಗುರಿಯನ್ನು ಶೀಘ್ರದಲ್ಲೇ ಸಾಧಿಸಲಾಗುವುದು ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. “ರೈಲ್ವೆ ವಿದ್ಯುದ್ದೀಕರಣದಿಂದಾಗಿ, ದೇಶವು ಸುಮಾರು 1.75 ಶತಕೋಟಿ ಲೀಟರ್ ಡೀಸೆಲ್ ಉಳಿಸುತ್ತಿದೆ ಮತ್ತು ಅಸ್ಸಾಂನ ರೈಲ್ವೆ ಜಾಲವನ್ನು ಸಹ ವೇಗವಾಗಿ ವಿದ್ಯುದ್ದೀಕರಿಸಲಾಗುತ್ತಿದೆ” ಎಂದು ಶ್ರೀ ಮೋದಿ ಅವರು ಹೇಳಿದರು.

ದೇಶದ ನವೀಕರಿಸಬಹುದಾದ ಇಂಧನ ಬದ್ಧತೆಗಳನ್ನು ಪೂರೈಸುವಲ್ಲಿ ಅಸ್ಸಾಂ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಲೋವರ್ ಕೊಪಿಲಿ ಜಲವಿದ್ಯುತ್ ಯೋಜನೆಯು ಅಸ್ಸಾಂ ಮಾತ್ರವಲ್ಲದೆ ಇಡೀ ಈಶಾನ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಮೋದಿ ಗಮನಿಸಿದರು. “ಸಾವಿರಾರು ಕೋಟಿ  ಮೌಲ್ಯದ ಯೋಜನೆಗಳು ಅಸ್ಸಾಂನ ಯುವಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ ಮತ್ತು ರಾಜ್ಯದ ಸಮೃದ್ಧಿಯನ್ನು ಹೆಚ್ಚಿಸುತ್ತಿವೆ” ಎಂದು ಶ್ರೀ ಮೋದಿ ಅವರು ಪ್ರತಿಪಾದಿಸಿದರು.

ಪ್ರಸ್ತುತ ಡಬಲ್ ಎಂಜಿನ್ ಸರ್ಕಾರದ ಗುರುತು ಅದರ ಸೂಕ್ಷ್ಮತೆ ಮತ್ತು ಉತ್ತಮ ಆಡಳಿತದಲ್ಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರತಿಯೊಂದು ಪ್ರದೇಶ ಮತ್ತು ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಯು ಸರ್ಕಾರದ ಆದ್ಯತೆಯಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. ಈ ಮನೋಭಾವದಿಂದ, ಅಸ್ಸಾಂನ ಚಹಾ ತೋಟಗಳಲ್ಲಿನ ಕಾರ್ಮಿಕರಿಗಾಗಿ ಇಂದು ಒಂದು ಪ್ರಮುಖ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂಬುದರತ್ತ ಪ್ರಧಾನಮಂತ್ರಿ ಗಮನ ಸೆಳೆದರು. ಅವರ ಕಠಿಣ ಪರಿಶ್ರಮ ಅಸ್ಸಾಂನ ಜಾಗತಿಕ ಗುರುತನ್ನು ಬಲಪಡಿಸಿದೆ ಮತ್ತು ಅವರು ಬೆಳೆದ ಚಹಾದ ಪರಿಮಳವು ವಿಶ್ವಾದ್ಯಂತ ಭಾರತದ ಗುರುತಾಗಿದೆ ಎಂದು ಶ್ರೀ ಮೋದಿ ನುಡಿದರು. ಇಂದು, ಪ್ರಸ್ತುತ ಸರ್ಕಾರ ಕಾರ್ಮಿಕರಿಗೆ ಗೌರವ ಮತ್ತು ಸಹಾಯ ಎರಡನ್ನೂ ನೀಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಚಹಾ ತೋಟಗಳೊಂದಿಗೆ ಸಂಬಂಧ ಹೊಂದಿರುವ ಕುಟುಂಬಗಳಿಗೆ ಶ್ಲಾಘನೀಯ ಕೆಲಸ ಮಾಡಿದ್ದಕ್ಕಾಗಿ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಇಡೀ ತಂಡವನ್ನು ಪ್ರಧಾನಮಂತ್ರಿ ಅಭಿನಂದಿಸಿದರು. ಈ ಐತಿಹಾಸಿಕ ಅನ್ಯಾಯವನ್ನು ಕೊನೆಗೊಳಿಸಲು ಅಸ್ಸಾಂ ಸರ್ಕಾರ ಈಗ ಕೆಲಸ ಮಾಡುತ್ತಿದೆ, ಈ ಕುಟುಂಬಗಳು ಈಗ ತಮ್ಮದೇ ಆದ ಭೂಮಿಯನ್ನು ಪಡೆಯುತ್ತಿವೆ ಮತ್ತು ಅವರಿಗೆ ಪಕ್ಕಾ ಮನೆಗಳನ್ನು ಪಡೆಯುವ ಹಾದಿಯನ್ನು ಸುಗಮಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. ಚಹಾ ತೋಟಗಳಲ್ಲಿ ವಾಸಿಸುವ ಮಹಿಳೆಯರು ಉಪಕ್ರಮದಿಂದ ವಿಶೇಷವಾಗಿ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ ಎಂದು ಪ್ರಧಾನಮಂತ್ರಿ ಗಮನಿಸಿದರು. ಚಹಾ ತೋಟದ ಕಾರ್ಮಿಕರ ಕುಟುಂಬಗಳ ಮಕ್ಕಳು ಚೆನ್ನಾಗಿ ಓದಿ ಜೀವನದಲ್ಲಿ ಪ್ರಗತಿ ಸಾಧಿಸಬೇಕು ಎಂಬ ಆಶಯವನ್ನು ಪ್ರಧಾನಮಂತ್ರಿ  ಶ್ರೀ ಮೋದಿ ಅವರು ವ್ಯಕ್ತಪಡಿಸಿದರು, ಪ್ರಸ್ತುತ ಸರ್ಕಾರ ಇದಕ್ಕಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸೃಷ್ಟಿಸಿದೆ ಎಂದು ಹೇಳಿದರು.

ಪ್ರಸಿದ್ಧ ನಿಮತಿ ಘಾಟ್ ಮತ್ತು ಬಿಶ್ವನಾಥ್ ಘಾಟ್‌ನಲ್ಲಿ ಆಧುನಿಕ ಕ್ರೂಸ್ ಟರ್ಮಿನಲ್‌ಗಳನ್ನು ನಿರ್ಮಿಸುವ ಕೆಲಸ ಇಂದಿನಿಂದ ಪ್ರಾರಂಭವಾಗಿದೆ ಎಂದು ಪ್ರಧಾನಮಂತ್ರಿ ಘೋಷಿಸಿದರು. ಇದು ಕೇವಲ ಮೂಲಸೌಕರ್ಯ ಯೋಜನೆಯಲ್ಲ, ಪ್ರವಾಸೋದ್ಯಮ ಮತ್ತು ಅಸ್ಸಾಂನ ಸ್ಥಳೀಯ ಆರ್ಥಿಕತೆಗೆ ಹೊಸ ದಿಕ್ಕನ್ನು ನೀಡುವ ಒಂದು ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಒತ್ತಿ ಹೇಳಿದರು. ಪ್ರಸ್ತುತ ಸರ್ಕಾರವು ಪ್ರವಾಸೋದ್ಯಮವನ್ನು ಕೇವಲ ದೃಶ್ಯವೀಕ್ಷಣೆಗೆ ಸೀಮಿತಗೊಳಿಸಿಲ್ಲ, ಜೊತೆಗೆ ಉದ್ಯೋಗ ಮತ್ತು ಅಭಿವೃದ್ಧಿಗೆ ಇದು ಒಂದು ಪ್ರಮುಖ ಅವಕಾಶವೆಂದು ಪರಿಗಣಿಸಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ದೃಷ್ಟಿಕೋನದಿಂದಲೇ ಬ್ರಹ್ಮಪುತ್ರ ನದಿಯಲ್ಲಿ ಜಲ ಪ್ರವಾಸೋದ್ಯಮದ ಸಾಧ್ಯತೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಮೋದಿ ಗಮನಿಸಿದರು. ಕ್ರೂಸ್ ಟರ್ಮಿನಲ್‌ಗಳನ್ನು ನಿರ್ಮಿಸಿದ ನಂತರ, ಬ್ರಹ್ಮಪುತ್ರದಲ್ಲಿ ಕ್ರೂಸ್ ಕಾರ್ಯಾಚರಣೆಗಳು ಮತ್ತಷ್ಟು ಮುಂದುವರಿಯುತ್ತವೆ ಮತ್ತು ಭಾರತ ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರು ಅಸ್ಸಾಂ ತಲುಪುವುದು ಇನ್ನಷ್ಟು ಸುಲಭವಾಗುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಕ್ರೂಸ್ ಪ್ರವಾಸೋದ್ಯಮ ಬೆಳೆದಂತೆ, ಸ್ಥಳೀಯ ಯುವಜನರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ, ಕುಶಲಕರ್ಮಿಗಳು ಮತ್ತು ಕರಕುಶಲ ಕೆಲಸಗಾರರು ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳುತ್ತಾರೆ ಮತ್ತು ಸಣ್ಣ ಅಂಗಡಿಯವರು, ದೋಣಿ ಮಾಲೀಕರು ಮತ್ತು ಹೋಟೆಲ್‌ಗಳು ಹಾಗು ಸಾರಿಗೆಗೆ ಸಂಬಂಧಿಸಿದ ಜನರ ಆದಾಯವೂ ಹೆಚ್ಚಾಗುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದರು. “ಅಸ್ಸಾಂನಲ್ಲಿ ಪ್ರವಾಸೋದ್ಯಮವು ಕೇವಲ ಪ್ರಯಾಣ ಮತ್ತು ದೃಶ್ಯವೀಕ್ಷಣೆಗೆ ಸೀಮಿತವಾಗಿಲ್ಲ, ಇದು ಸ್ಥಳೀಯ ಅಭಿವೃದ್ಧಿ ಮತ್ತು ಸಾರ್ವಜನಿಕ ಸಮೃದ್ಧಿಯ ಹೊಸ ಎಂಜಿನ್ ಆಗುತ್ತಿದೆ” ಎಂದು ಪ್ರಧಾನಮಂತ್ರಿ  ಶ್ರೀ ಮೋದಿ ಪ್ರತಿಪಾದಿಸಿದರು.

ಭಾರತದ ಈಶಾನ್ಯ ಭಾಗದ ಹೊಸ ಭವಿಷ್ಯವಾದ ಅಷ್ಟಲಕ್ಷ್ಮಿಗೆ ಇಂದು ಅಸ್ಸಾಂ ಮಾದರಿಯಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಸ್ಸಾಂನ ಪ್ರಗತಿಯು ಇಡೀ ಈಶಾನ್ಯಕ್ಕೆ ಹೊಸ ವೇಗವನ್ನು ನೀಡುತ್ತಿದೆ ಎಂದು ಪ್ರಧಾನಮಂತ್ರಿ ಮೋದಿ ಗಮನಿಸಿದರು. “ವಿಕಸಿತ ಅಸ್ಸಾಂಗಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕು, ಇದರಿಂದ ಅಸ್ಸಾಂ ರಾಷ್ಟ್ರದಲ್ಲಿ ಮಾದರಿ ರಾಜ್ಯವಾಗಿ ಹೊರಹೊಮ್ಮುತ್ತದೆ” ಎಂದು ಪ್ರತಿಯೊಬ್ಬ ಯುವಜನರು ಮತ್ತು ಪ್ರತಿಯೊಂದು ಕುಟುಂಬವನ್ನು ಶ್ರೀ ಮೋದಿ ಅವರು ಆಗ್ರಹಿಸಿದರು.

******